Tag: road block

  • ಮಂಗಳವಾರದವರೆಗೂ ಕರ್ನಾಟಕ-ಕೇರಳ ಗಡಿ ಬಂದ್ ತೆರವಿಲ್ಲ: ಸುಪ್ರೀಂ

    ಮಂಗಳವಾರದವರೆಗೂ ಕರ್ನಾಟಕ-ಕೇರಳ ಗಡಿ ಬಂದ್ ತೆರವಿಲ್ಲ: ಸುಪ್ರೀಂ

    – ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥವಾಗಲಿ

    ನವದೆಹಲಿ: ಕರ್ನಾಟಕ- ಕೇರಳ ಗಡಿ ಬಂದ್ ವಿವಾದವನ್ನು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೊತೆಗೆ ಎರಡು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಎರಡು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

    ಲಾಕ್‍ಡೌನ್ ಹಿನ್ನೆಲೆ ಹಾಗೂ ಕೊರೊನಾ ಸೋಂಕು ಹರಡಂತೆ ತಡೆಯುವ ನಿಟ್ಟಿನಲ್ಲಿ ಮುಚ್ಚಲ್ಪಟ್ಟಿರುವ ಕೇರಳ -ಕರ್ನಾಟಕ ಗಡಿಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಇದನ್ನೂ ಓದಿ: ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಉದಯ್ ಹೊಳ್ಳ, ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕವು ಕೇರಳ ಗಡಿ ಬಂದ್ ಮಾಡಿದೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಗಡಿ ಬಂದ್ ಮಾಡಲಾಗಿದೆ. ಗಡಿ ತೆರವುಗೊಳಿಸುವುದರಿಂದ ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಸೋಂಕಿತರ ಸಂಚರಿಸಲು ಆರಂಭಿಸಿದರೆ ವೈರಸ್ ಹರಡುವ ಭೀತಿ ಇದೆ. ಹೀಗಾಗಿ ಗಡಿ ತೆರವು ಸಾಧ್ಯವಿಲ್ಲ ಎಂದರು.

    ಆದರೆ ಗಡಿ ಬಂದ್ ನಿಂದ ಕೇರಳಕ್ಕೆ ಸಂಕಷ್ಟ ಎದುರಾಗಲಿದೆ. ತುರ್ತು ಆರೋಗ್ಯ ಸೇವೆಗಳಿಗೆ ತೊಂದರೆ ಆಗಲಿದೆ. ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ಬರುವ ಟ್ರಕ್‍ಗಳ ಸಂಚಾರಕ್ಕೆ ಗಡಿಯಲ್ಲಿ ತೊಂದರೆಯಾಗಲಿದ್ದು, ಆಂಬುಲೆನ್ಸ್ ಮತ್ತು ಮೂಲ ಅವಶ್ಯಕತೆ ವಸ್ತುಗಳನ್ನು ಸಾಗಿರುವ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ಕೇರಳ ವಾದ ಮಂಡಿಸಿತು.

    ಎರಡು ಬದಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ನೀಡಿ ಎಪ್ರೀಲ್ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಈ ವೇಳೆ ಏಪ್ರಿಲ್ 7ರವರೆಗೂ ಗಡಿ ತೆರವು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

    ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿದ್ದರೇ ಎರಡು ಸರ್ಕಾರದ ಕಾರ್ಯದರ್ಶಿಗಳ ಮಾತುಕತೆ ಮೇಲೆ ಕ್ರಮ ತೆಗೆದುಕೊಳ್ಳಬಹುದು ಮತ್ತು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೊತೆಗೆ ಮಾತುಕತೆ ಮೂಲಕವೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

  • ಸಂಪೂರ್ಣ ಮುಳುಗಿದ ದುಬಾರೆ – ಪಾಲಿಬೆಟ್ಟ, ಗೋಣಿಕೊಪ್ಪ ರಸ್ತೆ ಬಂದ್

    ಸಂಪೂರ್ಣ ಮುಳುಗಿದ ದುಬಾರೆ – ಪಾಲಿಬೆಟ್ಟ, ಗೋಣಿಕೊಪ್ಪ ರಸ್ತೆ ಬಂದ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ದುಬಾರೆ ಆನೆ ಕ್ಯಾಂಪ್ ಸಂಪೂರ್ಣ ಮುಳುಗಡೆಯಾಗಿದೆ.

    ಕೊಡಗಿನಲ್ಲಿ ದಾಖಲೆಯ ಮಳೆ ಸುರಿದಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಕ್ಯಾಂಪ್ ಸಂಪರ್ಕ ಕಡಿತಗೊಂಡಿದ್ದು, ಆನೆಗಳಿಗೆ ಆಹಾರ ಸಾಗಿಸಲು ಆಗುತ್ತಿಲ್ಲ. ಪ್ರತಿನಿತ್ಯ ಆನೆಗಳಿಗೆ ಐದು ಲಾರಿಗಳು ಆಹಾರ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಈಗ ದುಬಾರೆ ಸಂಪೂರ್ಣ ಜಲಾವೃತವಾಗಿರುವ ಕಾರಣ ಲಾರಿ ಹೋಗಲು ಸಾಧ್ಯವಾಗುತ್ತಿಲ್ಲ.

    ಇತ್ತ ಮಡಿಕೇರಿ ತಾಲೂಕಿನ ಬಲಮುರಿಯಲ್ಲಿ ಮನೆ ಸಂಪೂರ್ಣ ಜಲಾವೃತವಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಹತ್ತು ಜನರ ರಕ್ಷಣೆ ಮಾಡಲಾಗಿದೆ. ಇಬ್ಬರು ವೃದ್ಧರು, ಮೂವರು ಮಹಿಳೆಯರು, ಮೂವರು ಬಾಲಕಿಯರು ಸೇರಿದಂತೆ ಹತ್ತು ಜನರನ್ನು ರಕ್ಷಿಸಲಾಗಿದೆ. ಜಿಲ್ಲಾಡಳಿತ ಎನ್‌ಡಿಆರ್‌ಎಫ್ ತಂಡ ಮತ್ತು ಸ್ಥಳೀಯ ಪೊಲೀಸರ ಜೊತೆ ಬೋಟ್ ಮೂಲಕ ತೆರಳಿ ಜನರ ರಕ್ಷಣೆ ಮಾಡಿದೆ.

    ಮಡಿಕೇರಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಗೋಣಿಕೊಪ್ಪ ಪಟ್ಟಣ ಅರ್ಧ ಮುಳುಗಡೆ ಆಗಿದೆ. ಪಾಲಿಬೆಟ್ಟ – ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗೋಣಿಕೊಪ್ಪೆಯೂ ರಸ್ತೆ ಬಂದ್ ಮಾಡಲಾಗಿದೆ. ಸೆಕೆಂಡ್ ಬ್ಲಾಕ್ ಬಡಾವಣೆಯಲ್ಲಿ ಮನೆಗಳ ಮುಳುಗಡೆಯಾಗಿದ್ದು, ಕೊಡಗು ಜಿಲ್ಲಾಡಳಿತ ಗೋಣಿಕೊಪ್ಪ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆದಿದಾರೆ. ಕ್ಷಣ ಕ್ಷಣಕ್ಕೂ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ರಸ್ತೆ ದಾಟಲು ಸಾರ್ವಜನಿಕರು ಪರದಾಡುತ್ತಿದ್ದಾರೆ.

  • ನಿಲ್ದಾಣವಿದ್ರು ಬಸ್ ನಿಲ್ಲಿಸಲ್ಲ ಎಂದು ವಿದ್ಯಾರ್ಥಿಗಳು ಗರಂ- ಬಸ್‍ಗಳನ್ನು ತಡೆದು ಪ್ರತಿಭಟನೆ

    ನಿಲ್ದಾಣವಿದ್ರು ಬಸ್ ನಿಲ್ಲಿಸಲ್ಲ ಎಂದು ವಿದ್ಯಾರ್ಥಿಗಳು ಗರಂ- ಬಸ್‍ಗಳನ್ನು ತಡೆದು ಪ್ರತಿಭಟನೆ

    ಬಾಗಲಕೋಟೆ: ಗ್ರಾಮದಲ್ಲಿ ನಿಲ್ದಾಣವಿದ್ದರೂ ಬಸ್‍ಗಳನ್ನು ನಿಲ್ಲಿಸೊಲ್ಲ ಅಂತ ವಿದ್ಯಾರ್ಥಿಗಳು ಸಾರಿಗೆ ಬಸ್‍ಗಳನ್ನು ತಡೆದು, ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರನ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

    ಹೊಸೂರು ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ- ಕಾಲೇಜುಗಳಿಗೆ ಹೋಗಲು ಸಾರಿಗೆ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಅಲ್ಲದೆ ಈ ಗ್ರಾಮದಲ್ಲಿ ಬಸ್ ನಿಲ್ದಾಣದ ವ್ಯವಸ್ಥೆ ಕೂಡ ಇದೆ. ಆದ್ರೆ ಸಾರಿಗೆ ಚಾಲಕರು ಮಾತ್ರ ಇಲ್ಲಿ ಬಸ್ ನಿಲ್ಲಿಸದೇ ಹಾಗೆಯೇ ಹೋಗುವುದು ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿದೆ. ನಿಲ್ದಾಣವಿದ್ದರು ಬಸ್ ನಿಲ್ಲಿಸಲ್ಲ, ಇದರಿಂದ ನಮಗೆಲ್ಲ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಒಂದಲ್ಲ ಎರಡಲ್ಲ ದಿನನಿತ್ಯ ಇದೇ ರಗಳೆ. ಬಸ್ ನಿಲ್ಲಿಸದೇ ಹಾಗೆಯೇ ಹೋದರೆ ಸಾರ್ವಜನಿಕರು ಏನು ಮಾಡಬೇಕು? ಹೇಗೆ ಪ್ರಯಾಣಿಸಬೇಕು? ನಿಲ್ದಾಣವಿದ್ದರು ಏಕೆ ಬಸ್ ನಿಲ್ಲಿಸಲ್ಲ ಅಂತ ಪ್ರಶ್ನಿಸಿ ಜಮಖಂಡಿ-ಕಾಗವಾಡ ರಾಜ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸಾರಿಗೆ ಬಸ್‍ಗಳ ಸಂಚಾರಕ್ಕೆ ತಡೆ ಮಾಡಿದ್ದಾರೆ. ಅಲ್ಲದೆ ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv