Tag: RMP Doctor

  • ಆರ್‌ಎಂಪಿ ವೈದ್ಯ ಕೊಟ್ಟ ಮಾತ್ರೆ ಸೇವಿಸಿ ಬಾಲಕಿ ಸಾವು

    ಆರ್‌ಎಂಪಿ ವೈದ್ಯ ಕೊಟ್ಟ ಮಾತ್ರೆ ಸೇವಿಸಿ ಬಾಲಕಿ ಸಾವು

    – ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ಯಾದಗಿರಿ: ಆರ್‌ಎಂಪಿ ವೈದ್ಯ ನೀಡಿದ ಮಾತ್ರೆ ಸೇವಿಸಿ 13 ವರ್ಷದ ಬಾಲಕಿ ಮೃತಪಟ್ಟ ಘಟನೆ ಹುಣಸಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ನಡೆದಿದೆ.

    ಹುಣಸಗಿ ತಾಲೂಕಿನ ಕೋಳಿಹಾಳ ದೊಡ್ಡ ತಾಂಡಾದ ನಿವಾಸಿ ಸಂತೋಷ್ ಚವಾಣ್ ಅವರ ಪುತ್ರಿ ವಸಂತಾ ಮೃತ ದುರ್ದೈವಿ. ಎಂ.ಪಿ.ಅಜಿತ್ ಬಾಲಕಿಗೆ ಮಾತ್ರೆ ನೀಡಿದ್ದ ವೈದ್ಯ.

    ಬಾಲಕಿ ವಸಂತಾ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಆಕೆಯ ಪೋಷಕರು ಗ್ರಾಮದಲ್ಲಿದ್ದ ವೈದ್ಯ ಎಂ.ಪಿ.ಅಜಿತ್ ಬಳಿಗೆ ಚಿಕಿತ್ಸೆಗೆಂದು ತೆರಳಿದ್ದರು. ಅಜಿತ್ ಬಾಲಕಿಗೆ 2 ಇಂಜೆಕ್ಷನ್ ಮಾಡಿ, ಮಾತ್ರೆಗಳನ್ನು ನೀಡಿದ್ದ. ಏಪ್ರಿಲ್ 22ರಂದು ಮಾತ್ರೆ ತೆಗೆದುಕೊಂಡಿದ್ದ ಬಾಲಕಿ ಬೆಳಗ್ಗೆ 5:30ಕ್ಕೆ ಮನೆಯಲ್ಲಿ ಮೃತಪಟ್ಟಿದ್ದಾಳೆ. ಈ ಸಂಬಂಧ ಬಾಲಕಿಯ ಪೋಷಕರು ಹುಣಸಗಿ ಠಾಣೆಯಲ್ಲಿ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಎಂ.ಪಿ.ಅಜಿತ್ ಆರ್‌ಎಂಪಿ ವೈದ್ಯನಾಗಿದ್ದು, ವೈದ್ಯೋಪಚಾರ ಮಾಡಿರುವುದೇ ನಿಯಮ ಬಾಹಿರವಾಗಿದೆ. ಜೊತೆಗೆ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಜ್ವರದ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿತ್ತು. ಆದರೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವೈದ್ಯ ಸದ್ಯ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.