Tag: RML Hospital

  • ಡಿಕೆಶಿ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯಗೆ ಕೊನೆ ಕ್ಷಣದಲ್ಲಿ ಇಡಿಯಿಂದ ಅನುಮತಿ ನಿರಾಕರಣೆ

    ಡಿಕೆಶಿ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯಗೆ ಕೊನೆ ಕ್ಷಣದಲ್ಲಿ ಇಡಿಯಿಂದ ಅನುಮತಿ ನಿರಾಕರಣೆ

    ನವದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.

    ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೀಗಾಗಿ ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಇಡಿ ಅಧಿಕಾರಿಗಳ ಅನುಮತಿ ಪಡೆದು ಆಸ್ಪತ್ರೆಗೆ ತೆರಳಿದ್ದರು. ಬೆಂಬಲಿಗರ ಜೊತೆಗೆ ಆಸ್ಪತ್ರೆಯಲ್ಲಿ ಡಿಕೆಶಿ ಭೇಟಿಗೆ ಕಾಯುತ್ತಾ ಕುಳಿತಿದ್ದರು. ಆದರೆ ವಾರ್ಡ್ ಪ್ರವೇಶಿಸಿದ್ದ ಸಿದ್ದರಾಮಯ್ಯ ಅವರನ್ನು ಕೊನೆಯ ಕ್ಷಣದಲ್ಲಿ ತಡೆದ ಇಡಿ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.

    ಸಂಸದ ಡಿ.ಕೆ.ಸುರೇಶ್ ಅವರನ್ನು ಕೂಡ ವಾರ್ಡ್ ಗೇಟ್ ಒಳಗೆ ಬಿಡದೆ ದೆಹಲಿ ಪೊಲೀಸರು ದಿಗ್ಬಂಧನ ಹಾಕಿದರು. ಹೀಗಾಗಿ ಪೊಲೀಸರು ಹಾಗೂ ಡಿ.ಕೆ.ಸುರೇಶ್ ಅವರ ಮಧ್ಯೆ ವಾಗ್ವಾದ
    ನಡೆಯಿತು. ಭೇಟಿಗೆ ಅವಕಾಶ ಸಿಗದೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಆಸ್ಪತ್ರೆ ಹೊರ ಬಂದರು. ಈ ವೇಳೆ ಆಸ್ಪತ್ರೆ ಗೇಟ್ ಬಳಿ ಡಿಕೆ.ಸುರೇಶ್ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ಹೊರಟು ಹೋದರು.

    ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಆಗಮಿಸಿ ಡಿ.ಕೆ ಶಿವಕುಮಾರ್ ಆರೋಗ್ಯ ವಿಚಾರಿಸಿದ್ದರು. ಬಳಿಕ ಪರಿಷತ್ ಸದಸ್ಯ ಐವಾನ್ ಡಿಸೋಜಾ, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಬೈರತಿ ಸುರೇಶ್ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಆಸ್ಪತ್ರೆ ಒಳಗೆ ಬಿಡಲು ದೆಹಲಿ ಪೋಲಿಸರು ನಿರಾಕರಿಸಿದ್ದರು.

    ಸಮನ್ಸ್ ನೀಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ನಾಲ್ಕು ದಿನ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳು ವಶಕ್ಕೆ ಪಡೆದ ಮೇಲೆ 10 ದಿನ ವಿಚಾರಣೆ ನಡೆಸಿದ್ದಾರೆ. ಒಟ್ಟು 14 ದಿನ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗಿದ್ದು, ಜಾಮೀನು ನೀಡಬೇಕೆಂದು ಡಿಕೆಶಿ ಪರ ವಕೀಲರು ಶುಕ್ರವಾರ ನ್ಯಾಯಾಲಯದ ಮುಂದೆ ಮನವಿ ಮಾಡುವ ಸಾಧ್ಯತೆಗಳಿವೆ. ಇತ್ತ ಇಡಿ ಪರ ವಕೀಲರು ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕಬೇಕಿದೆ. ಹೆಚ್ಚುವರಿ ನಾಲ್ಕು ದಿನ ಕಸ್ಟಡಿ ವಿಸ್ತರಿವಂತೆ ಇಡಿ ಮನವಿ ಮಾಡುವ ಸಾಧ್ಯತೆಗಳಿವೆ.

    ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಗುರುವಾರ ಇ.ಡಿ. ಮುಂದೆ ಹಾಜರಾಗಿದ್ದರು. ದೆಹಲಿಯ ಲೋಕಭವನದಲ್ಲಿರೋ ಇಡಿ ಕಚೇರಿಗೆ ಬೆಳಗ್ಗೆ  ಹಾಜರಾದ ಐಶ್ವರ್ಯಗೆ ಇಡಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ. ಐಶ್ವರ್ಯ ಹೆಸರಲ್ಲಿರುವ ಆಸ್ತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಡಿ ಅಧಿಕಾರಿಗಳ ಪ್ರಶ್ನೆಯನ್ನು ಡಿಕೆಶಿ ಪುತ್ರಿ ಸಮರ್ಥವಾಗಿಯೇ ಎದುರಿಸಿದ್ದಾರೆ. ವಿಚಾರಣೆಗೆ ಮುನ್ನ ತಂದೆ ಡಿಕೆಶಿಯನ್ನು ಐಶ್ವರ್ಯ ಭೇಟಿಯಾಗಿದ್ದಾಗಿ ತಿಳಿದು ಬಂದಿದೆ.

  • ಬಿಜೆಪಿ ವಿರುದ್ಧ ಹೋರಾಟ – ಕೊನೆ ಗಳಿಗೆಯಲ್ಲಿ ವಿಫಲವಾಯ್ತು ರಾಹುಲ್ ತಂತ್ರ

    ಬಿಜೆಪಿ ವಿರುದ್ಧ ಹೋರಾಟ – ಕೊನೆ ಗಳಿಗೆಯಲ್ಲಿ ವಿಫಲವಾಯ್ತು ರಾಹುಲ್ ತಂತ್ರ

    ನವದೆಹಲಿ: ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಆಸ್ಪತ್ರೆಯಿಂದಲೇ ಹೋರಾಟ ಆರಂಭಿಸಬೇಕಿದ್ದ ರಾಹುಲ್ ಗಾಂಧಿಯ ಪ್ಲ್ಯಾನ್ ಕೊನೆ ಕ್ಷಣದಲ್ಲಿ ವಿಫಲವಾದ ವಿಚಾರ ಈಗ ಬೆಳಕಿಗೆ ಬಂದಿದೆ.

    ಸಿಬಿಐನಿಂದ ಚಿದಂಬರಂ, ಇಡಿಯಿಂದ ಶಿವಕುಮಾರ್ ಅವರನ್ನು ಬಿಜೆಪಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದೆ. ದೇಶದ ಆರ್ಥಿಕತೆ ಕುಸಿಯುತ್ತಿದ್ದು ಈ ವಿಚಾರ ಮರೆಮಾಚಲು ಕೇಂದ್ರ ಸರ್ಕಾರ ನಮ್ಮ ನಾಯಕರನ್ನು ಬಂಧಿಸುತ್ತಿದೆ ಎನ್ನುವುದನ್ನು ತಿಳಿಸಿ ರಾಹುಲ್ ಗಾಂಧಿ ಆರ್‌ಎಂಎಲ್‌ ಆಸ್ಪತ್ರೆಯಿಂದಲೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದರು. ಆದರೆ ಕೊನೆಯ 45 ನಿಮಿಷದಲ್ಲಿ ಇಡಿ ಅಧಿಕಾರಿಗಳು ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪರಿಣಾಮ ರಾಹುಲ್ ಗಾಂಧಿ ಅವರ ತಂತ್ರ ವಿಫಲಗೊಂಡಿತು ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ರಾಹುಲ್ ಪ್ಲಾನ್ ಏನಿತ್ತು?
    ಬುಧವಾರ ರಾಹುಲ್ ಗಾಂಧಿ ಆರ್‌ಎಂಎಲ್‌ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಬಂಧಿಸಿದ 24 ಗಂಟೆಯ ಒಳಗಡೆ ನ್ಯಾಯಾಲಯಕ್ಕೆ ಡಿಕೆ ಶಿವಕುಮಾರ್ ಅವರನ್ನು ಹಾಜರುಪಡಿಸಬೇಕಿತ್ತು. ಮಂಗಳವಾರ ರಾತ್ರಿ 8.20ರ ವೇಳೆಗೆ ಡಿಕೆಶಿಯನ್ನು ಬಂಧಿಸಿದ್ದರೂ ಬುಧವಾರ ಮಧ್ಯಾಹ್ನದವರೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿಲ್ಲ. ಡಿಕೆ ಶಿವಕುಮಾರ್ ಆರೋಗ್ಯ ಸರಿ ಇಲ್ಲದ ಕಾರಣ 48 ಗಂಟೆಗಳ ಕಾಲ ನಿಗಾದಲ್ಲಿ ಇಡಬೇಕು ಎಂದು ವೈದ್ಯರೊಬ್ಬರು ಹೇಳಿದ್ದಾರೆ ಎನ್ನಲಾದ ಸುದ್ದಿ ಹರಿದಾಡಲು ಆರಂಭಗೊಂಡ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯ ವೇಳೆಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಡಿಕೆಶಿಯನ್ನು ಭೇಟಿ ಮಾಡಲು ರಾಹುಲ್ ಗಾಂಧಿ ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಭೇಟಿಗೆ ಅವಕಾಶ ನೀಡದೇ ಇದ್ದಲ್ಲಿ ಆಸ್ಪತ್ರೆಯ ಮುಂಭಾಗವೇ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಆರೋಪ ಮಾಡಿ ಹೋರಾಟ ಆರಂಭಿಸಲು ರಾಹುಲ್ ಗಾಂಧಿ ಮುಂದಾಗಿದ್ದರು.

    ವಿಫಲವಾಗಿದ್ದು ಹೇಗೆ?
    ಡಿಕೆಶಿಯನ್ನು ಪರಿಶೀಲಿಸಿದ ವೈದ್ಯರ ಪೈಕಿ ಒಬ್ಬರು ಈಗ ನ್ಯಾಯಾಲಯಕ್ಕೆ ಹಾಜರು ಪಡಿಸುವುದು ಬೇಡ ಎಂದಿದ್ದರೆ ಮತ್ತೊಬ್ಬ ವೈದ್ಯರು ಮಧ್ಯಾಹ್ನದ ವೇಳೆಗೆ ಆರೋಗ್ಯ ಸುಧಾರಣೆಯಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಬಹುದು ಎಂದು ಇಡಿ ಅಧಿಕಾರಿಗಳಿಗೆ ಹೇಳಿದ್ದರಂತೆ. ವೈದ್ಯರು ಅನುಮತಿ ನೀಡಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ಮಧ್ಯಾಹ್ನ 3.20ಕ್ಕೆ ನ್ಯಾಯಾಲಯಕ್ಕೆ ಡಿಕೆಶಿಯನ್ನು ಹಾಜರು ಪಡಿಸಿದ್ದಾರೆ. ಒಂದು ವೇಳೆ 45 ನಿಮಿಷ ತಡವಾಗಿದ್ದರೆ ಆಸ್ಪತ್ರೆಯಲ್ಲೇ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಹೈಡ್ರಾಮಾವೇ ಸೃಷ್ಟಿಯಾಗುವ ಸಾಧ್ಯತೆ ಇತ್ತು.

    ಕೋರ್ಟಿನಲ್ಲೂ ಪ್ರಸ್ತಾಪ:
    ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವಿಚಾರದಲ್ಲಿ ಗೊಂದಲವಾಗಿದ್ದನ್ನು ವಕೀಲ ಅಭಿಷೇಕ್ ಮನು ಸಿಂಘ್ವಿ ವಿಚಾರಣೆ ವೇಳೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಒಮ್ಮೆ ಮಧ್ಯಾಹ್ನ 12 ಗಂಟೆಗೆ ಹಾಜರು ಪಡಿಸುವುದಾಗಿ ಹೇಳಿ ನಂತರ 2 ಗಂಟೆ ಈಗ ಸಂಜೆ 4 ಗಂಟೆಗೆ ಹಾಜರು ಪಡಿಸಲಾಗಿದೆ ಎಂದು ಆರೋಪ ವ್ಯಕ್ತಪಡಿಸಿದ್ದರು.

    ನ್ಯಾಯಾಲಯಕ್ಕೆ ಯಾವುದೇ ಕ್ಷಣದಲ್ಲಿ ಕರೆ ತರಬಹುದು ಎನ್ನುವ ಕಾರಣಕ್ಕೆ ಡಿಕೆಶಿ ಪರ ವಕೀಲರು ಬೆಳಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ಕಾದು ಕುಳಿತಿದ್ದರು. ಆದರೆ ರೋಸ್ ಅವೆನ್ಯೂ ನ್ಯಾಯಾಲಯದ ಕೊಠಡಿ ಸಂಖ್ಯೆ 502ರಲ್ಲಿ ಮಧ್ಯಾಹ್ನದವರೆಗೆ ವಿಚಾರಣೆ ನಡೆಯಲಿಲ್ಲ. ಮಧ್ಯಾಹ್ನ 2 ಗಂಟೆಯ ವೇಳೆಗೆ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ಆಗಮಿಸಿದ್ದರು.

  • ಡಿಕೆಶಿಗೆ ಏನೇ ಆದ್ರೂ ಇಡಿ, ಕೇಂದ್ರ ಸರ್ಕಾರ ಕಾರಣ: ಮಿಥುನ್ ರೈ

    ಡಿಕೆಶಿಗೆ ಏನೇ ಆದ್ರೂ ಇಡಿ, ಕೇಂದ್ರ ಸರ್ಕಾರ ಕಾರಣ: ಮಿಥುನ್ ರೈ

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಏನಾದ್ರು ಆದರೆ ಇಡಿ ಮತ್ತು ಕೇಂದ್ರ ಸರ್ಕಾರಕ್ಕೆ ಕಾರಣ ಎಂದು ಮಂಗಳೂರಿನ ಕಾಂಗ್ರೆಸ್ ನಾಯಕ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.

    ಆರ್‍ಎಂಎಲ್ ಆಸ್ಪತ್ರೆಯ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಥುನ್ ರೈ, ನಮ್ಮ ನಾಯಕರನ್ನು ಭೇಟಿಯಾಗಲು ದೆಹಲಿಯ ಪೊಲೀಸರು ಅನುಮತಿ ನೀಡುತ್ತಿಲ್ಲ. ಆಸ್ಪತ್ರೆಯೊಳಗೆ ಸಹ ಬಿಡುತ್ತಿಲ್ಲ. ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಧೃವ ನಾರಾಯಣ್, ಉಗ್ರಪ್ಪ ರಸ್ತೆಯಲ್ಲಿ ಕಾಯುವಂತಾಗಿದೆ. ಇದು ಕರ್ನಾಟಕ ಅಲ್ಲ, ದೆಹಲಿ ಎಂದು ಪೊಲೀಸರು ಹೇಳುತ್ತಿದ್ದು, ಇಡಿ ಅನುಮತಿ ತಂದರೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಇಡಿ ಅಧಿಕಾರಿಗಳು ಆರ್‍ಎಂಎಲ್ ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಆರೋಪಿಸಿದರು.

    ಡಿ.ಕೆ.ಶಿವಕುಮಾರ್ ಬಿಪಿ ನಿಯಂತ್ರಣಕ್ಕೆ ಬರಬೇಕಿದೆ. ಸಣ್ಣದಾಗಿ ಎದೆ ನೋವು ಸಹ ಕಾಣಿಸಿಕೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇಡಿ ಅಧಿಕಾರಿಗಳು ನಾರ್ಮಲ್ ರಿಪೋರ್ಟ್ ನೀಡಿ ಡಿಸ್ಚಾರ್ಜ್ ಮಾಡಬೇಕೆಂದು ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸೋದರ ಡಿ.ಕೆ.ಸುರೇಶ್ ಮತ್ತು ಬಾಮೈದ ಡಾ.ರಂಗನಾಥ್ ಅವರನ್ನು ಸಹ ಭೇಟಿಯಾಗಲು ಬಿಡುತ್ತಿಲ್ಲ. ರಂಗನಾಥ್ ಸಹ ಓರ್ವ ವೈದ್ಯರಾಗಿದ್ದು, ಡಿಕೆಶಿಯವರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಮಿಥುನ್ ರೈ ಕಿಡಿಕಾರಿದರು.

    ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿದ್ದಾರೆ. ಆದ್ರೆ ಅಧಿಕಾರಿಗಳು ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ಅವರ ಕೈಗೊಂಬೆ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದರು.