Tag: RLP

  • ಅಕಾಲಿದಳದ ಬಳಿಕ ಎನ್‍ಡಿಎ ಮೈತ್ರಿ ಕೂಟದಿಂದ ಹೊರ ಬಂದ ಆರ್‌ಎಲ್‌ಪಿ

    ಅಕಾಲಿದಳದ ಬಳಿಕ ಎನ್‍ಡಿಎ ಮೈತ್ರಿ ಕೂಟದಿಂದ ಹೊರ ಬಂದ ಆರ್‌ಎಲ್‌ಪಿ

    – ರೈತರ ಹೋರಾಟಕ್ಕೆ ಬೆಂಬಲ ನೀಡಿ ಎನ್‍ಡಿಎಗೆ ಗುಡ್ ಬೈ

    ನವದೆಹಲಿ: ರೈತರ ಹೋರಾಟದ ಕಾವು ಹೆಚ್ಚುತ್ತಿದ್ದು, ಒಂದು ತಿಂಗಳಾದರೂ ಶಾಂತವಾಗುತ್ತಿಲ್ಲ. ಇತ್ತ ಅಕಾಲಿದಳದ ಬಳಿಕ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ(ಆರ್‌ಎಲ್‌ಪಿ) ಎನ್‍ಡಿಎ ಮೈತ್ರಿಕೂಟದಿಂದ ಹೊರಗೆ ಬರುವ ಮೂಲಕ ಬಿಜೆಪಿಗೆ ಶಾಕ್ ನೀಡಿದೆ.

    ಪಕ್ಷದ ಮುಖ್ಯಸ್ಥ ಹನುಮಾನ್ ಬೆನಿವಾಲ್ ಈ ಕುರಿತು ಘೋಷಿಸಿದ್ದು, ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ಆರ್‍ಎಲ್‍ಪಿ ಈ ಹಿಂದೆ ರೈತರ ಹೋರಾಟಕ್ಕ ಬೆಂಬಲ ನೀಡಿತ್ತು. ಇದೀಗ ಮೈತ್ರಿ ಕೂಟದಿಂದಲೇ ಹೊರ ನಡೆಯುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದೆ.

    ನಾನು ಎನ್‍ಡಿಎ ಜೊತೆ ಫೆವಿಕಾಲ್ ಅಂಟಿಸಿಕೊಂಡು ಕೂತಿಲ್ಲ. ಇಂದು ನನ್ನ ಸ್ವ ಇಚ್ಛೆಯಿಂದ ಎನ್‍ಡಿಎಯಿಂದ ಹೊರ ಬಂದಿದ್ದೇನೆ. ರೈತರ ವಿರುದ್ಧ ಇರುವ ಯಾರ ಜೊತೆಗೂ ನಾವು ನಿಲ್ಲುವುದಿಲ್ಲ ಎಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಶಹಜಾನ್‍ಪು-ಖೇಡಾ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಉದ್ದೇಶಿಸಿ ಮಾತನಾಡುವಾಗ ಬೆನಿವಾಲ್ ತಿಳಿಸಿದ್ದಾರೆ.

    ಕೋವಿಡ್ ವರದಿ ಹಿನ್ನೆಲೆ ನನ್ನನ್ನು ಲೋಕಸಭೆಗೆ ಪ್ರವೇಶಿಸುವುದನ್ನು ನಿಲ್ಲಿಸಲಾಯಿತು. ನಾನು ಅಲ್ಲಿ ಇದ್ದಿದ್ದರೆ ಕೃಷಿ ಮಸೂದೆಗಳ ಪ್ರತಿಯನ್ನು ಎಸೆಯುತ್ತಿದ್ದೆ. ಕಪ್ಪು ಕಾನೂನುಗಳನ್ನು ಹಿಂಪಡೆಯದಿದ್ದರೆ ಎನ್‍ಡಿಎ ಜೊತೆಗೆ ಮುಂದುವರಿಯುವ ಕುರಿತು ಚರ್ಚಿಸಬೇಕಾಗುತ್ತದೆ ಎಂದು ಈ ಹಿಂದೆ ಬೆನಿವಾಲ್ ಎಚ್ಚರಿಸಿದ್ದರು. ಅದರಂತೆ ಇದೀಗ ಮೈತ್ರಿ ಕೂಟದಿಂದ ಹೊರ ಬಂದಿದ್ದಾರೆ.