Tag: Riyadh

  • ಬುರ್ಜ್‌ ಖಲೀಫಾಗೆ ಸೆಡ್ಡು – ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿದೊಡ್ಡ ಕಟ್ಟಡ ‘ಮುಕಾಬ್ ‘ ನಿರ್ಮಾಣ ಆರಂಭ; ವಿಶೇಷತೆ ಏನು?

    ಬುರ್ಜ್‌ ಖಲೀಫಾಗೆ ಸೆಡ್ಡು – ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿದೊಡ್ಡ ಕಟ್ಟಡ ‘ಮುಕಾಬ್ ‘ ನಿರ್ಮಾಣ ಆರಂಭ; ವಿಶೇಷತೆ ಏನು?

    ತೈಲ ಸಂಪತ್ತಿನ ಮೇಲೆಯೇ ಅವಲಂಬಿತವಾಗಿರುವ ತನ್ನ ಆರ್ಥಿಕತೆಯನ್ನು ನವೀನ ಮೂಲಸೌಕರ್ಯ ಯೋಜನೆಗಳತ್ತ ವಿಸ್ತರಿಸಲು ಮುಂದಾಗಿರುವ ಸೌದಿ ಅರೇಬಿಯಾ (Saudi Arabia), ವಿಶ್ವದ ಅತಿದೊಡ್ಡ ಕಟ್ಟಡ ಯೋಜನೆ ‘ಮುಕಾಬ್’ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ (Riyadh) ಸದ್ಯದಲ್ಲಿಯೇ ತಲೆ ಎತ್ತಲಿರುವ ಅತ್ಯಂತ ದೊಡ್ಡ ಕಟ್ಟಡದಲ್ಲಿ ಸುಮಾರು 20 ನ್ಯೂಯಾರ್ಕ್​ನಂತಹ ನಗರಗಳನ್ನು ಕೂರಿಸಬಹುದು ಎಂದೇ ಹೇಳಲಾಗುತ್ತಿದೆ. ಹಾಗಿದ್ರೆ ಈ ಕಟ್ಟಡದ ವಿಶೇಷತೆ ಏನು? ಹೇಗಿರಲಿದೆ ಈ ಕಟ್ಟಡ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಹೇಗಿರಲಿದೆ ಮುಕಾಬ್?
    ಮುಕಾಬ್ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಘೋಷಿಸಿದ ಹೊಸ ಅಭಿವೃದ್ಧಿ ಯೋಜನೆಯಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಯು ದೇಶದ ರಾಜಧಾನಿ ರಿಯಾದ್‌ನಲ್ಲಿ ‘ದಿ ಮುಕಾಬ್’ (The Mukab) ಎಂಬ ಹೆಸರಿನ ವಿಶ್ವದ ಅತಿದೊಡ್ಡ ಒಳ-ನಗರದ ಕಟ್ಟಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಸೌದಿ ವಿಷನ್ 2030 ಗೆ ಅನುಗುಣವಾಗಿ ರಿಯಾದ್‌ನಲ್ಲಿ ವಿಶ್ವದ ಅತಿದೊಡ್ಡ ಆಧುನಿಕ ಡೌನ್‌ಟೌನ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

    ಚೌಕಾಕಾರದಲ್ಲಿರುವ ಈ ಕಟ್ಟಡ 400 ಮೀಟರ್ ಎತ್ತರವಿರಲಿದೆ. ಕಾಮಗಾರಿ ಮುಗಿದ ಬಳಿಕ, ಇದು ಜಗತ್ತಿನ ಅತಿದೊಡ್ಡ ಕಟ್ಟಡ ಎನಿಸಿಕೊಳ್ಳಲಿದೆ. ರಾಜಧಾನಿ ರಿಯಾದ್ ಬಳಿ ಇರುವ ಈ 3 ಕಟ್ಟಡದಲ್ಲಿ 20 ಲಕ್ಷ ಚದರ ಮೀಟರ್‌ ಸ್ಥಳಾವಕಾಶ ಸಿಗಲಿದೆ. ವಿಸ್ತೀರ್ಣದಲ್ಲಿ ಇದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹೆಗ್ಗುರುತಿನ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗಿಂತ 20 ಪಟ್ಟು ದೊಡ್ಡದಾಗಿರಲಿದೆ.

    ‘ನ್ಯೂ ಮುರಾಬ್ಬ’ ಎಂಬ ಹೊಸ ನಗರ ಜಿಲ್ಲೆಯೊಂದನ್ನು ಸೌದಿ ಅರೇಬಿಯಾ ಸೃಷ್ಟಿಸುತ್ತಿದ್ದು, ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಸೌದಿ ಅರೇಬಿಯಾ ಹೊಂದಿದೆ. ಮುರಾಬ್ಬ ನಗರ ಜಿಲ್ಲೆಗೆ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮುಕಾಬ್ ಇರಲಿದೆ ಎಂದು ವರದಿಗಳು ತಿಳಿಸಿವೆ. ಮುಕಾಬ್‌ನಲ್ಲಿ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ, ಸಾಂಸ್ಕೃತಿಕ ಪ್ರದೇಶಗಳನ್ನು ಒಳಗೊಂಡಿರಲಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಈ ಕಟ್ಟಡ ಹೇಗಿರಲಿದೆ ಎಂಬ ವೀಡಿಯೋವನ್ನು ಸೌದಿ ಬಿಡುಗಡೆಗೊಳಿಸಿತ್ತು.

    ಮುಕಾಬ್ ಕಟ್ಟಡ ಕ್ಯೂಬ್ ಆಕಾರದಲ್ಲಿದ್ದರೂ, ಒಳಗಡೆ ತ್ರಿಕೋನದ ರೀತಿಯ ವಿನ್ಯಾಸವಿರಲಿದೆ. ಮುಕಾಬ್, ಹೊಸ ಮುರಬ್ಬಾ ಯೋಜನೆಯು 1,04,000 ವಸತಿ ಘಟಕಗಳು, 9000 ಹೋಟೆಲ್ ಕೊಠಡಿಗಳು, 9,80,000 ಚದರ ಮೀಟರ್ ಕಮರ್ಷಿಯಲ್ ಪ್ಲೇಸ್ ಮತ್ತು 1.4 ಮಿಲಿಯನ್ ಚದರ ಮೀಟರ್ ಕಚೇರಿ ಸ್ಥಳವನ್ನು ಒಳಗೊಂಡಿರುತ್ತದೆ . ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಇದು ಹಸಿರು ಪ್ರದೇಶ ಮತ್ತು ವಾಕಿಂಗ್ ಟ್ರ್ಯಾಕ್ ಗಳನ್ನು ಸಹ ಒಳಗೊಂಡಿರುತ್ತದೆ. 50 ಶತಕೋಟಿ ಯುಎಸ್‌ ಡಾಲರ್ ಸುಮಾರು (42,03,95,75,00,000) ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.

    ಇಲ್ಲಿಯವರೆಗೂ ದುಬೈನಲ್ಲಿ ನಿರ್ಮಾಣವಾಗಿರುವ ಬುರ್ಜ್ ಖಲೀಫಾವೇ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿಯನ್ನು ಪಡೆದಿತ್ತು. ವಿಶ್ವದಲ್ಲಿ ಅತ್ಯಂತ ಎತ್ತರವಾದ ಬುರ್ಜ್​ ಖಲೀಫಾ ಕಟ್ಟಡದ ಎತ್ತರ 2,722 ಫೀಟ್ ಇದೆ. ಅದನ್ನು ಹಿಂದೆ ಹಾಕುವ ನಿಟ್ಟಿನಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಇದು ರಿಯಾದ್‌ ಸಿಟಿಯಲ್ಲಿ 11 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ.

    ನ್ಯೂ ಮುರಬ್ಬಾ ಹೇಗಿರಲಿದೆ?
    66 ಲಕ್ಷ ಕೋಟಿ ರೂ. ವೆಚ್ಚದಲ್ಲಿ 19 ಚದರ ಕಿ.ಮೀ. ವಿಸ್ತಾರದಲ್ಲಿ ‘ನ್ಯೂ ಮುರಬ್ಬಾ’ ಸಿಟಿ ಎದ್ದು ನಿಲ್ಲಲಿದೆ. ಮುಂದಿನ ಪೀಳಿಗೆ ಸಂಪೂರ್ಣವಾಗಿ ವರ್ಚುವಲ್‌ ಜಗತ್ತನ್ನೇ ಅವಲಂಬಿಸುವ ಕಾರಣ, ಅವರ ಬೇಡಿಕೆ ಪೂರೈಸಲು ಎಲ್ಲ ರೀತಿಯ ಡಿಜಿಟಲ್‌ ಸೌಲಭ್ಯ ಹೊಂದಿರಲಿದೆ. ನ್ಯೂ ಮುರಬ್ಬಾ ಡೆವಲಪ್‌ಮೆಂಟ್‌ ಕಂಪನಿ ನಗರ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, 2030ರ ವೇಳೆಗೆ ನಗರ ನಿರ್ಮಾಣ ಪೂರ್ಣಗೊಳ್ಳಲಿದೆ. 7 ವರ್ಷದ ಈ ಕಾಮಗಾರಿ ಸಮಯದಲ್ಲಿ ಬರೋಬ್ಬರಿ 3,34,000 ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಲಭಿಸಲಿದೆ. ಅಲ್ಲದೆ ಇದರಿಂದ ಸೌದಿ ಅರೇಬಿಯಾದ ಜಿಡಿಪಿಗೆ 4 ಲಕ್ಷ ಕೋಟಿ ರೂ. ಸಂದಾಯವಾಗಲಿದೆ. ವಸ್ತುಸಂಗ್ರಹಾಲಯ, ತಾಂತ್ರಿಕ ಮತ್ತು ವಾಸ್ತುಶಿಲ್ಪ ವಿವಿಗಳಿರಲಿವೆ. ರಂಗಭೂಮಿ ಮತ್ತು ಇತರ ಮನರಂಜನಾ ತಾಣಗಳು, ಹಸಿರೀಕರಣಕ್ಕೆ ಆದ್ಯತೆ ಇರುತ್ತದೆ.

    ಅಂಬಾನಿ ಮನೆಗಿಂತ ದುಪ್ಪಟ್ಟು ಎತ್ತರದ ‘ಮುಕಾಬ್’:
    ನಗರದ ಮಧ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಾದಿತ ‘ಮುಕಾಬ್ಲ’ ಸೌಧವು, ಮುಕೇಶ್‌ ಅಂಬಾನಿ ಅವರ ಆಂಟಿಲಿಯಾ ಕಟ್ಟಡಕ್ಕಿಂತ 2 ಪಟ್ಟು ಹೆಚ್ಚು, ಅಂದರೆ 400 ಮೀಟರ್‌ ಎತ್ತರದಲ್ಲಿದೆ. ಆಂಟಿಲಿಯಾ ಎತ್ತರ ‘ಕೇವಲ’ 173 ಮೀಟರ್‌. ಅಲ್ಲದೆ, ಸೌದಿಯ ಈ ಕಟ್ಟಡವು ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಎಂಪೈರ್‌ ಸ್ಟೇಟ್‌ಗಿಂತ 20 ಮೀಟರ್‌ ಹೆಚ್ಚಿನ ಎತ್ತರ ಹೊಂದಿರಲಿದೆ. ಅಲ್-ಸೌದ್‌ ರಾಜವಂಶದ ‘ನಜ್ದಿ ವಾಸ್ತುಶಿಲ್ಪ’ ಶೈಲಿಯಲ್ಲಿ ನಿರ್ಮಾಣಗೊಳ್ಳಲಿದೆ. ಇದರ ಮಧ್ಯದಲ್ಲಿ ಬೃಹತ್‌ ಸುರುಳಿಯಾಕಾರದ ಗೋಪುರವಿರಲಿದೆ. ಇದು ಕೂಡ ಕಾಬಾದ ರಚನೆಗೆ ಹೋಲುತ್ತಿರುವುದರಿಂದ ವಿವಾದಕ್ಕೆ ಗುರಿಯಾಗಿದೆ.

    ಇಸ್ಲಾಮಿಕ್‌ ಸಂಘಟನೆಗಳ ಆಕ್ಷೇಪವೇಕೆ?
    ಪವಿತ್ರ ನಗರವಾದ ಮೆಕ್ಕಾವನ್ನು ಇಸ್ಲಾಂ ಧರ್ಮದ ಅತ್ಯಂತ ಶುದ್ಧ ನಗರ ಎಂದೇ ಬಣ್ಣಿಸಲಾಗುತ್ತದೆ. ಅಂಥದ್ದೇ ಪರಿಶುದ್ಧ ನಗರ ನ್ಯೂ ಮುರಬ್ಬಾ ಆಗಲಿದೆ. ಅಲ್ಲದೆ, ಮೆಕ್ಕಾದಲ್ಲಿರುವಂತೆ ಕಪ್ಪುಶಿಲೆಗಳ ಕಾಬಾದ ಪ್ರತಿರೂಪವನ್ನು ನ್ಯೂ ಮುರಬ್ಬಾದಲ್ಲಿ ಸ್ಥಾಪಿಸುತ್ತಿರುವುದನ್ನು ಕೆಲವು ಇಸ್ಲಾಮಿಕ್‌ ಸಂಘಟನೆಗಳು ವಿರೋಧಿಸಿವೆ. ಇದರಿಂದ ಮೆಕ್ಕಾದ ಧಾರ್ಮಿಕ ಮಹತ್ವ ತಗ್ಗಬಹುದು ಎಂಬುದು ಆಕ್ಷೇಪ.

    ಜಗತ್ತಿನ ಮೊದಲ ವರ್ಚುವಲ್‌ ಸಿಟಿ:
    ನ್ಯೂ ಮುರಬ್ಬಾದಲ್ಲಿ ಕಟ್ಟಲಾಗುವ ಮನೆಗಳಿಗೆ ಡಿಜಿಟಲ್- ವರ್ಚುವಲ್‌ ವಿನ್ಯಾಸ ನೀಡಲಾಗುತ್ತದೆ. ಈ ಮನೆಗಳಲ್ಲಿ ಎಲ್ಲೇ ನಿಂತರೂ, ಬಯಸಿದ ಕೂಡಲೇ ಕಣ್ಣೆದುರು ಜಲಪಾತ, ನದಿ, ಆಕಾಶದಲ್ಲಿನ ನಕ್ಷತ್ರರಾಶಿ, ಹಿಮಪರ್ವತ, ಸಮುದ್ರದ ದೃಶ್ಯಗಳು ಪ್ರತ್ಯಕ್ಷಗೊಳ್ಳುವಂತೆ ಕೃತ ಪ್ರಾಕೃತಿಕ ಅದ್ಭುತಗಳ ವರ್ಚುವಲ್‌ ಪ್ರಪಂಚ ಸೃಷ್ಟಿಯಾಗುವ ವ್ಯವಸ್ಥೆ ಇರಲಿದೆ. ಮನೆಗಳ ಒಳಗೇ ಸಮುದ್ರ ಇರುವಂತೆ, ಅನ್ಯಗ್ರಹದ ಅನುಭವ ಹುಟ್ಟುವಂಥ ಯೋಜನೆಗಳು ಇರಲಿವೆ ಎಂದು ಅರಬ್‌ ಮಾಧ್ಯಮಗಳು ವರ್ಣಿಸಿವೆ.

    ದುಬಾರಿ ಸಿಟಿ ಸೌದಿಗೆ ಅಗತ್ಯವೇಕೆ?
    ಸೌದಿ ಅರೇಬಿಯಾವು ತೈಲ ಉತ್ಪಾದನಾ ದೇಶದಲ್ಲಿ ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ಸೌದಿಯ ಶೇ 80 ಆದಾಯ ತೈಲ ಇಂಧನದಿಂದ ಬರುತ್ತದೆ. ಬ್ರೂಕಿಂಗ್‌ ಇನ್‌ಸ್ಟಿಟ್ಯೂಟ್‌ನ ವರದಿ ಪ್ರಕಾರ, ಮುಂದಿನ 60 ವರ್ಷಗಳಲ್ಲಿ ಸೌದಿ ಒಡಲಿನ ತೈಲ ಬರಿದಾಗಲಿದೆ. ಪೆಟ್ರೋಲ್‌- ಡೀಸೆಲ್‌ ಉತ್ಪಾದನೆ ನಿಂತರೆ ಸೌದಿಗೆ ಉಳಿಯುವುದು ಬರೀ ಮರಳುಗಾಡು ಮಾತ್ರ. ಈ ಕಾರಣದಿಂದ ಭವಿಷ್ಯದ ಆದಾಯಕ್ಕಾಗಿ ಸೌದಿ ರಾಜಕುಮಾರ ನಿಯೋಮ್‌ (NEOM) ಪ್ರಾಜೆಕ್ಟ್ ಆರಂಭಿಸಿದ್ದಾರೆ. ದೇಶದ ಆರ್ಥಿಕತೆಗೆ ಮರುವಿನ್ಯಾಸ ನೀಡಬಲ್ಲಂಥ ಈ ನಿಯೋಮ್‌ನ ಒಂದು ಭಾಗವೇ ನ್ಯೂ ಮುರಬ್ಬಾ ಸಿಟಿ ನಿರ್ಮಾಣ. ಅಲ್ಲದೆ, ಅತ್ಯಂತ ಕಠಿಣ ಷರಿಯಾ ಕಾನೂನುಗಳಿಗೆ ಹೆಸರಾದಂಥ ಸೌದಿ ಇತ್ತೀಚೆಗೆ ಹಲವು ನಿಯಮಗಳನ್ನು ಕೈಬಿಡುತ್ತಿದೆ. ವೀಸಾ ನೀತಿಯನ್ನು ಸಡಿಲಗೊಳಿಸಿ, ಟೂರಿಸಂಗೆ ಒತ್ತುಕೊಡುತ್ತಿರುವ ಸೌದಿಯು ಹೆಚ್ಚೆಚ್ಚು ವಿದೇಶಿಗರನ್ನು ಸ್ವಾಗತಿಸುತ್ತಿರುವುದೂ ಇದೇ ಕಾರಣಕ್ಕೆ.

  • ಮತ್ತೊಮ್ಮೆ ಭಾರತದಿಂದಾಚೆ ಐಪಿಎಲ್‌ ಮೆಗಾ ಹರಾಜು – ಎಲ್ಲಿ, ಯಾವಾಗ? ಇಲ್ಲಿದೆ ವಿವರ

    ಮತ್ತೊಮ್ಮೆ ಭಾರತದಿಂದಾಚೆ ಐಪಿಎಲ್‌ ಮೆಗಾ ಹರಾಜು – ಎಲ್ಲಿ, ಯಾವಾಗ? ಇಲ್ಲಿದೆ ವಿವರ

    ಮುಂಬೈ: ಈಗಾಗಲೇ ಭಾರಿ ಕುತೂಲ ಹೆಚ್ಚಿಸಿರುವ 2025ರ ಐಪಿಎಲ್‌ ಮೆಗಾ ಹರಾಜು (IPL Mega Auction) ಪ್ರಕ್ರಿಯೆಯನ್ನು ಭಾರತದಿಂದ ಆಚೆ ನಡೆಸಲು ಬಿಸಿಸಿಐ (BCCI) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

    ವರದಿಗಳ ಪ್ರಕಾರ, 2025ರ ಐಪಿಎಲ್‌ಗೆ (IPL 2025) ನಡೆಯಲಿರುವ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್‌ನಲ್ಲಿ (Saudi Arabia’s Riyadh) ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಬಿಸಿಸಿಐ ಪಟ್ಟಿಯಲ್ಲಿ ದುಬೈ, ಸಿಂಗಾಪುರ, ಲಂಡನ್ ಮತ್ತು ವಿಯೆನ್ನಾದಂತಹ ಹಲವು ನಗರಗಳು ಆಯ್ಕೆಯಲ್ಲಿದ್ದವು. ವ್ಯಾಪಕ ಹುಡುಕಾಟದ ನಂತರ ಎರಡು ದಿನಗಳ ಮೆಗಾ ಹರಾಜನ್ನು ಸೌದಿ ಅರೇಬಿಯಾ ರಿಯಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ನವೆಂಬರ್‌ ನವೆಂಬರ್ 24 ಮತ್ತು 25 ರಂದು ರಿಯಾದ್‌ನಲ್ಲಿ ಮೆಗಾ ಹರಾಜು ನಡೆಯಲಿದೆ.

    ಈಗಾಗಲೇ 2025-2027ರ ಆವೃತ್ತಿಗಳಿಗೆ ಹೊಸ ನಿಯಮ ಜಾರಿಗೊಳಿಸಿರುವ ಬಿಸಿಸಿಐ, ಇದೇ ಅಕ್ಟೋಬರ್‌ 31ರ ಸಂಜೆ 5 ಗಂಟೆಯ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡುವಂತೆ ಸೂಚಿಸಿದೆ. ಇದನ್ನೂ ಓದಿ: ಚಾಂಪಿಯನ್‌ ಕಿವೀಸ್‌ ಮಹಿಳಾ ತಂಡಕ್ಕೆ 19.6 ಕೋಟಿ ಬಹುಮಾನ – ಟೀಂ ಇಂಡಿಯಾಕ್ಕೆ ಸಿಕ್ಕಿದ್ದೆಷ್ಟು?

    ಐಪಿಎಲ್‌ ಹರಾಜು ಯಾವಾಗ?
    ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂಬ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಸಹ ನಿಗದಿಯಾಗಿದೆ. ನವೆಂಬರ್ 22ರಿಂದ 26ರ ವರೆಗೆ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಮಿಲಿಯನ್‌ ಡಾಲರ್‌ ಟೂರ್ನಿಯ ಮೆಗಾ ಹರಾಜು ಮತ್ತು ಪರ್ತ್ ಟೆಸ್ಟ್ ನಡುವೆ ಯಾವುದೇ ರೀತಿಯ ಸಂಭಾವ್ಯ ಘರ್ಷಣೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಭಾರತದಲ್ಲಿಯೇ ಹರಾಜು ಪ್ರಕ್ರಿಯೆ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದವು.‌ ಆದರೆ ಬಿಸಿಸಿಐ ಈ ಆಯ್ಕೆಯನ್ನು ತಳ್ಳಿಹಾಕಿತು. ಹೀಗಾಗಿ ಸೂಕ್ತ ಪ್ರಯಾಣದ ವ್ಯವಸ್ಥೆ ಮಾಡಲು ಮೆಗಾ ಹರಾಜಿನ ಸ್ಥಳ ಮತ್ತು ದಿನಾಂಕಗಳ ಕುರಿತು ಕ್ರಿಕೆಟ್‌ ಮಂಡಳಿಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್‌ – ಹಿಟ್‌ಮ್ಯಾನ್‌ಗೆ ಆಫರ್‌ ಕೊಟ್ಟಿದ್ಯಾರು?

  • ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಹೈದರಾಬಾದ್: ರಿಯಾದ್‌ನಿಂದ (Riyadh) ಹೈದರಾಬಾದ್‌ಗೆ (Hyderabad) ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಿ ಸುಮಾರು 67 ಲಕ್ಷ ರೂ. ಮೌಲ್ಯದ 14 ಚಿನ್ನದ ಬಾರ್‌ಗಳನ್ನು (Gold Bar) ವಶಪಡಿಸಿಕೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಿಯಾದ್‌ನಿಂದ ಬಹ್ರೇನ್ ಮೂಲಕ ಹೈದರಾಬಾದ್‌ಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಹೈದರಬಾದ್ ಕಸ್ಟಮ್ಸ್ ಮತ್ತು ಆರ್‌ಜಿಐನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ತಂಡವು ವಿಮಾನದಲ್ಲಿ ಬಂದಿಳಿದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿ

    ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ತಡೆದು ಅವರ ಬ್ಯಾಗ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಆರೋಪಿ ತಂದಿದ್ದ ಲೈಟ್‌ನ ಬ್ಯಾಟರಿಯೊಳಗೆ 24 ಕ್ಯಾರೆಟ್‌ನ 14 ಚಿನ್ನದ ಬಾರ್‌ಗಳು ಪತ್ತೆಯಾಗಿದೆ. ಚಿನ್ನದ ಬಾರ್‌ಗಳನ್ನು ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಬಾರ್‌ಗಳು ಸುಮಾರು 1287.6 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ 67,96,133 ರೂ.ಗಳಾಗಿವೆ. ಇದನ್ನೂ ಓದಿ: 12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

    ಭಾರತೀಯ ಕಸ್ಟಮ್ಸ್ ಆ್ಯಕ್ಟ್ (Indian Customs Act) 1962ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೆಲಸದ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಕಿರುಕುಳ- ಬೈಕಲ್ಲಿ ಬಂದವ್ರಿಂದ ಮಹಿಳೆ ರಕ್ಷಣೆ

  • ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

    ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

    ರಿಯಾದ್: ಡ್ರೋನ್ ದಾಳಿಯಿಂದ 10 ಜನರು ತೀವ್ರ ಗಾಯಗೊಂಡ ಘಟನೆ ಸೌದಿ ದಕ್ಷಿಣ ನಗರದ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಸೌದಿ ದಕ್ಷಿಣ ನಗರ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ 10 ಜನರಿಗೆ ತೀವ್ರ ಗಾಯವಾಗಿದೆ. ಅದರಲ್ಲಿ 6 ಸೌದಿಗಳು, ಮೂವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಓರ್ವ ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ. ಈ ದಾಳಿಯ ವೇಳೆ ವಿಮಾನ ನಿಲ್ದಾಣದ ಕೆಲವು ಮುಂಭಾಗದ ಕಿಟಕಿಗಳು ಸಹ ಛಿದ್ರಗೊಂಡಿವೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳರು ಅರೆಸ್ಟ್

    ಸೌದಿ ನೇತೃತ್ವದ ಸೇನಾ ಒಕ್ಕೂಟವು 2015 ರಲ್ಲಿ ಯೆಮೆನ್‍ನಲ್ಲಿ ಮಧ್ಯಪ್ರವೇಶಿಸಿತು. ಈ ಪರಿಣಾಮ ಅಧ್ಯಕ್ಷ ಅಬ್ದ್ರಬ್ಬು ಮನ್ಸೂರ್ ಹಾದಿ ಅವರ ಉಚ್ಚಾಟಿತ ಸರ್ಕಾರದ ಬೆಂಬಲ ಪಡೆಗಳು ಮತ್ತು ಇರಾನ್-ಹೊಂದಿಕೊಂಡ ಹೌತಿ ಗುಂಪಿನ ವಿರುದ್ಧ ಹೋರಾಡುವುದು. ಈ ಕೃತ್ಯ ಯಾರು ಮಾಡಿದ್ದು ಎಂದು ತಕ್ಷಣಕ್ಕೆ ಹೇಳಲು ಆಗುತ್ತಿಲ್ಲ. ಆದರೆ ದಾಳಿ ಮಾಡಿದ ಗುಂಪು ನಿಯಮಿತವಾಗಿ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

     

  • ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

    ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

    ರಿಯಾದ್: ಸೌದಿ ಅರೇಬಿಯಾದ ರಿಯಾದ್ ಹೋಟೆಲ್‍ವೊಂದರಲ್ಲಿ ಏರ್ ಇಂಡಿಯಾ ಪೈಲಟ್‍ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ರಿತ್ವಿಕ್ ತಿವಾರಿ(27) ಮೃತಪಟ್ಟ ಪೈಲೆಟ್. ರಿತ್ವಿಕ್ ಹೋಟೆಲ್‍ನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ರಿತ್ವಿಕ್ ಹೋಟೆಲ್‍ನಲ್ಲಿರುವ ಜಿಮ್‍ನ ಶೌಚಾಲಯದಲ್ಲಿ ಬುಧವಾರ ಬೆಳಗ್ಗೆ ಕುಸಿದು ಬಿದ್ದಿದ್ದರು. ಕೂಡಲೇ ರಿತ್ವಿಕ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ರಿತ್ವಿಕ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆಂದು ಕೌನ್ಸಿಲರ್ ಅನಿಲ್ ನೌಟಿಯಾಲ್ ತಿಳಿಸಿದ್ದಾರೆ.

    ಆಸ್ಪತ್ರೆಯ ಎಲ್ಲ ರಿಪೋರ್ಟ್‍ಗಳು ಪರಿಶೀಲಿಸಿದ್ದಾಗ ರಿತ್ವಿಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಸದ್ಯ ಭಾರತದ ರಾಯಭಾರಿ ಸಿಬ್ಬಂದಿ ರಿತ್ವಿಕ್ ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅನಿಲ್ ಹೇಳಿದ್ದಾರೆ.

    ನಾವು ರಿತ್ವಿಕ್ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದೇವೆ. ರಿತ್ವಿಕ್ ಮೃತದೇಹ ಭಾರತಕ್ಕೆ ಕಳುಹಿಸುವ ಮೊದಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಅನಿಲ್ ನೌಟಿಯಾಲ್ ತಿಳಿಸಿದ್ದಾರೆ.

  • ತಾಯಿಗಿಂತಲೂ ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ಪತ್ನಿಯಿಂದ ವಿಚ್ಛೇದನ!

    ತಾಯಿಗಿಂತಲೂ ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ಪತ್ನಿಯಿಂದ ವಿಚ್ಛೇದನ!

    ರಿಯಾದ್: ಪತಿ ನನ್ನನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ವಿವಾಹ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ತಾಯಿಗಿಂತಲೂ ನನ್ನನ್ನು ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾರೆ.

    ಹೌದು, ಕೋರ್ಟ್ ನಲ್ಲಿ ನ್ಯಾಯಾಧೀಶರು ವಿಚ್ಛೇದನ ಪಡೆಯಲು ಕಾರಣ ಕೇಳಿದ ಸಂದರ್ಭದಲ್ಲಿ ಮಹಿಳೆ, ತನ್ನ ಪತ್ನಿಗಾಗಿ ಎಲ್ಲವನ್ನೂ ಮಾಡುವ ಮನುಷ್ಯನನ್ನು ನಾನು ಎಂದಿಗೂ ನಂಬುವುದಿಲ್ಲ. ಏಕೆಂದರೆ ತನ್ನ ಸ್ವಂತ ತಾಯಿಗಾಗಿ ಸಣ್ಣ ಸಹಾಯವನ್ನು ಮಾಡುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಂತ ತಾಯಿಗೆ ಉತ್ತಮ ಮಗನಾಗಿರದೇ ಇದ್ದಲ್ಲಿ ಆತನನ್ನು ನಂಬಲು ಸಾಧ್ಯವಿಲ್ಲ. ಆತ ಭವಿಷ್ಯದಲ್ಲಿ ತನಗೂ ಇದೇ ಸ್ಥಿತಿ ಉಂಟುಮಾಡಬಹುದು ಎಂದು ತಿಳಿಸಿರುವುದಾಗಿ ಸೌದಿ ಮಾಧ್ಯಮ ವರದಿ ಮಾಡಿದೆ.

    ತನ್ನ ತಾಯಿಯನ್ನು ಕೈಬಿಟ್ಟ ರೀತಿಯಲ್ಲಿ ತನ್ನನ್ನು ಭವಿಷ್ಯದಲ್ಲಿ ಬಿಟ್ಟು ಬಿಡುವ ದಿನಕ್ಕಾಗಿ ನಾನು ಕಾಯಲು ಸಿದ್ಧವಿಲ್ಲ ಎಂದು ತಿಳಿಸಿದ್ದಾರೆ. ವಿಚಾರಣೆ ವೇಳೆ ಪತಿ, ನಿನಗಾಗಿ ನನ್ನ ಕುಟುಂಬವನ್ನು ತ್ಯಜಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪತ್ನಿ, ಈ ಕಾರಣಕ್ಕೆ ನಾನು ನಿನಗೆ ವಿಚ್ಛೇದನ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

    ಪತ್ನಿ ಮಾತು ಕೇಳಿ ಶಾಕ್ ಒಳಗಾದ ಪತಿ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದು, ಆಕೆಗಾಗಿ ಏನು ಬೇಕಾದರು ಮಾಡಲು ಸಿದ್ಧ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ ಮಹಿಳೆ ಪತಿಯ ಮನವಿಯನ್ನು ತಿರಸ್ಕರಿಸಿದ್ದಾರೆ.

    ಪತಿ ತಾನು ಬಯಸಿದ ವಿದೇಶಿ ಪ್ರವಾಸ ಸೇರಿದಂತೆ, ಎಲ್ಲವನ್ನೂ ಖರೀದಿಸಲು ಹಣ ಖರ್ಚು ಮಾಡಿದ್ದು, ತನ್ನನ್ನು ಸಂತೋಷದಿಂದ ನೋಡಿಕೊಂಡಿದ್ದಾರೆ. ಆದರೆ ನನ್ನ ವಿಚ್ಛೇದನ ನಿರ್ಧಾರ ಮಾತ್ರ ಬದಲಾಗುವುದಿಲ್ಲ ಎಂದು ಪತ್ನಿ ಹೇಳಿದ್ದಾರೆ.

    ಮಾಧ್ಯಮ ವರದಿಯ ಪ್ರಕಾರ ಮಹಿಳೆಯೂ ಪತಿ ನೀಡಿದ ವರದಕ್ಷಿಣೆಯನ್ನು ಹಿಂದಿರುಗಿಸಿದ್ದು, ಮಹಿಳೆ ವಾದ ಕೇಳಿದ ನ್ಯಾಯಾಧೀಶರು ವಿಚ್ಛೇದನವಕ್ಕೆ ಒಪ್ಪಿಗೆ ನೀಡಿದ್ದಾರೆ.