Tag: Rivers

  • ಶರಾವತಿ ನದಿ ಭರ್ತಿ – ಮನೆಗಳಿಗೆ ನುಗ್ಗಿದ ನೀರು, ಜಮೀನುಗಳು ಜಲಾವೃತ

    ಶರಾವತಿ ನದಿ ಭರ್ತಿ – ಮನೆಗಳಿಗೆ ನುಗ್ಗಿದ ನೀರು, ಜಮೀನುಗಳು ಜಲಾವೃತ

    – ಲಿಂಗನಮಕ್ಕಿ ಜಲಾಶಯ ಭರ್ತಿಗೆ 7 ಅಡಿ ಬಾಕಿ

    ಕಾರವಾರ: ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶರಾವತಿ ನದಿ ತುಂಬಿ ಹರಿಯುತ್ತಿದ್ದು, ಹೊನ್ನಾವರ ಭಾಗದ ತಗ್ಗು ವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿದೆ.

    ಇಂದು ಲಿಂಗನಮಕ್ಕಿ ಜಲಾಶಯದ ಗರಿಷ್ಟ ನೀರಿನ ಮಟ್ಟ 1,819 ಅಡಿ ಇದ್ದು, ಜಲಾಶಯದ ಇಂದಿನ ನೀರಿನ ಮಟ್ಟ 1,812.30 ಅಡಿಯಾಗಿದೆ. ಜಲಾಶಯದ ಒಳ ಹರಿವು 44,367 ಕ್ಯೂಸೆಕ್ ಇದ್ದು, ಜಲಾಶಯ ಯಾವುದೇ ಸಂದರ್ಭದಲ್ಲಿ ಭರ್ತಿಯಾಗುವ ಹಿನ್ನೆಲೆಯಲ್ಲಿ ಜಲಾಶಯದ ನದಿಪಾತ್ರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಲಕ್ಷ್ಮಿ ವಿ. ಶಂಕರ್ ಸೂಚನೆ ನೀಡಿದ್ದಾರೆ.

    ಇದಲ್ಲದೇ ಜಲಾಶಯ ಭರ್ತಿಯಾಗಿ ನೀರು ಬಿಟ್ಟಲ್ಲಿ ಹೊನ್ನಾವರ ಭಾಗದ ಗೇರುಸೊಪ್ಪ, ಗುಂಡ್ಲಬಾಳ, ಭಾಸ್ಕೇರಿ ಭಾಗದಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ. ಈಗಾಗಲೇ ಶರಾವತಿ ನದಿ ನೀರು ತುಂಬುತ್ತಿದ್ದು, ಹೊನ್ನಾವರ ಭಾಗದಲ್ಲಿ ಸಹ ಶರಾವತಿಗೆ ಸೇರುವ ಚಿಕ್ಕ ಪುಟ್ಟ ಹಳ್ಳಗಳು ತುಂಬಿವೆ. ಜೊತೆಗೆ ಹೊನ್ನಾವರ ಭಾಗದ ಗುಂಡ್ಲಬಾಳ, ಭಾಸ್ಕೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನೂರು ಎಕರೆಗೂ ಹೆಚ್ಚು ಕೃಷಿ ಜಮೀನುಗಳು ಜಲಾವೃತವಾಗಿದೆ.

    ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಇನ್ನೆರೆಡು ದಿನದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆಗಳಿವೆ. ಹೀಗಾಗಿ ಹೊನ್ನಾವರ ಭಾಗದ ಶರಾವತಿ ನದಿ ಭಾಗದ ವಸತಿ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಇದೇ ಭಾಗದಲ್ಲಿ ಪ್ರವಾಹ ಉಕ್ಕಿ 300ಕ್ಕೂ ಹೆಚ್ಚು ಜನರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಆದರೆ ಈಗ ಮತ್ತೆ ಇದೇ ಪ್ರದೇಶದ ಜನರಿಗೆ ಪ್ರವಾಹದ ಭೀತಿ ಎದುರಾಗಿದ್ದು, ಜನ ತೊಂದರೆ ಅನುಭವಿಸುವಂತಾಗಿದೆ.

  • ಉಡುಪಿಯಲ್ಲಿ ವರ್ಷಧಾರೆ- ಪದವಿ ಪರೀಕ್ಷೆ ಮುಂದೂಡಿಕೆ, ಮಾಳ ಘಾಟ್ ಬಂದ್

    ಉಡುಪಿಯಲ್ಲಿ ವರ್ಷಧಾರೆ- ಪದವಿ ಪರೀಕ್ಷೆ ಮುಂದೂಡಿಕೆ, ಮಾಳ ಘಾಟ್ ಬಂದ್

    – ಪುತ್ತಿಗೆ ವಿದ್ಯಾಪೀಠಕ್ಕೆ ನುಗ್ಗಿದ ನೀರು, ಗೋಶಾಲೆ ಜಲಾವೃತ

    ಉಡುಪಿ: ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ಹೊಳೆಗಳು, ನದಿಗಳು ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಲ್ಲಿ ಜಲದಿಗ್ಬಂಧನವಾಗಿದೆ. ಹೀಗಾಗಿ ನಾಳೆ ಅಂದರೆ ಸೋಮವಾರ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇತ್ತ ಮಾಳ ಫಾಟ್ ಬಂದ್ ಆಗಿದೆ.

    ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾರ್ಕಳ ತಾಲೂಕಿನ ಮಾಳಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಕಾರ್ಕಳ ಎಸ್‍ಕೆ ಬಾರ್ಡರ್ ತಿರುವಿನಲ್ಲಿ ಕುಡ್ಡ ಗುಸಿತವಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮರಗಳು ಉರುಳಿ ಬಿದ್ದಿದ್ದವು. ನಂತರ ಸಿಬ್ಬಂದಿ ಮರಗಳನ್ನು ಕಡಿದು ತೆರವು ಮಾಡಿದ್ದಾರೆ. ಆದರೆ ಮರಗಳನ್ನು ತೆರವುಗೊಳಿಸಿದ ಕೆಲವೇ ಹೊತ್ತಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಸ್ಥಳೀಯರು ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಸುಮಾರು ಮೂರು ಗಂಟೆಯಿಂದ ಮಾಳ ಘಾಟಿ ಸಂಪೂರ್ಣ ಸ್ತಬ್ಧವಾಗಿದೆ.

    ಜಿಲ್ಲೆಯ ಹಲವು ಭಾಗಗಳು ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ಮುಂದೂಡಿದೆ. ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈಗಾಗಲೇ ಕೊರೊನಾ ಕಾರಣದಿಂದಾಗಿ ಪರೀಕ್ಷೆಗೆ ಆರು ತಿಂಗಳು ವಿಳಂಬವಾಗಿತ್ತು. ಇದೀಗ ಮಳೆಯಿಂದಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರಲು ಅಡಚಣೆ ಆಗಬಹುದು ಎಂಬ ಕಾರಣದಿಂದ ಮುಂದೂಡಿಕೆ ಮಾಡಲಾಗಿದೆ.

    ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಗಡಿಭಾಗದಲ್ಲಿರುವ ಶಾಂಭವಿ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆ ವಿಪರೀತ ಮಳೆ ಬೀಳುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳ ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಳ್ಳಲಾತ್ತಿದೆ.

    ಹಿರಿಯಡ್ಕ ಸಮೀಪ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿ ನಿರ್ಮಿಸಲಾದ ವಿದ್ಯುತ್ ಉತ್ಪಾದನಾ ಘಟಕದ ಸುತ್ತಮುತ್ತ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿದೆ. ಉಡುಪಿ ಕುಡಿಯುವ ನೀರಿನ ಯೋಜನೆ ಸ್ವರ್ಣ ನದಿಯ ಬಜೆ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ರಾತ್ರೋರಾತ್ರಿ ಸುರಿದ ಭಾರೀ ಮಳೆಗೆ ಉದ್ಯಾವರ ಗ್ರಾಮದ ಪಿತ್ರೋಡಿಯ ಕೆಲ ಪ್ರದೇಶ ಜಲಾವೃತವಾಗಿದೆ. ಗಜನೆ, ಪಟ್ನಾ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದ್ದು, ಅಪಾಯದ ಅಂಚಿನಲ್ಲಿದ್ದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲಾ ಅಗತ್ಯ ಪೂರೈಕೆಗಳನ್ನು ಉಡುಪಿ ಜಿಲ್ಲೆಗೆ ಮಾಡುವಂತೆ ಮನವಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡ ಉಡುಪಿಗೆ ಹೊರಟು ಕಾರ್ಯಾಚರಣೆ ನಡೆಸುತ್ತಿದೆ. ಹೆಲ್ಪ್ ಲೈನ್ ನಂಬರ್‌ಗಳನ್ನು ಸಹ ತೆರೆಯಲಾಗಿದ್ದು, ಜಿಲ್ಲಾಡಳಿತ ಜನರ ರಕ್ಷಣೆಗೆ ಬದ್ಧವಾಗಿದೆ ಎಂದರು.

    ಹಿರಿಯಡ್ಕ ಸಮೀಪದ ಪುತ್ತಿಗೆ ವಿದ್ಯಾಪೀಠಕ್ಕೆ ನೀರು ನುಗ್ಗಿದ್ದು, ಮಠದ ಗೋಶಾಲೆ ಜಲಾವೃತವಾಗಿದೆ. ತಕ್ಷಣ ಸ್ಥಳೀಯರ ನೆರವಿನೊಂದಿಗೆ ಗೋವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

  • ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

    ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

    ಉಡುಪಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಹಾ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಇತ್ತ ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಪಾತ್ರದ ಊರುಗಳಿಗೆ ನೀರು ನುಗ್ಗಿದೆ.

    ಉಡುಪಿ ನಗರದ ಕೆಲಭಾಗ ಕೂಡ ಮುಳುಗಡೆಯಾಗಿದೆ. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಾರಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿದೆ. ಹಿರಿಯಡ್ಕದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.

    ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉಡುಪಿ ಶ್ರೀಕೃಷ್ಣ ಮಠದ ಸಮೀಪ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವು ಮುಳುಗಡೆಯಾಗಿದೆ. ಇಂದ್ರಾಣಿ ನದಿಯ ಅಕ್ಕ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬೈಲಕೆರೆ ಪರಿಸರದಲ್ಲಿ ನೀರಿನ ಮಟ್ಟ ಏರಿದ್ದು, ಹಲವಾರು ಮನೆಗಳಿಗೆ ನೀರು ಹೊಕ್ಕಿರುವ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ನಿಲುಗಡೆಗೊಳಿಸಿರುವ ವಾಹನಗಳು ಮುಳುಗಡೆಯಾಗಿದೆ.

    ಮಲ್ಪೆ ಕಡಲತೀರದಲ್ಲಿ ಇಂದ್ರಾಣಿ ನದಿ ಉಕ್ಕಿ ಹರಿದಿದ್ದು, ಆಸುಪಾಸಿನಲ್ಲಿ ಜಲ ದಿಗ್ಭಬಂಧನವಾಗಿದೆ. ಗದ್ದೆಗಳು ಜಲಾವೃತಗೊಂಡಿದೆ. ಇನ್ನೂ ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಜನಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ನೆರೆಯ ಮಟ್ಟ ಕಡಿಮೆಯಾಗುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ವಿಪರೀತವಾಗಿ ಗಾಳಿ ಇರುವುದರಿಂದ ನದಿಯ ನೀರು ಸರಾಗವಾಗಿ ಸಾಗರಕ್ಕೆ ಹರಿಯುತ್ತಿಲ್ಲ.

    ಇಂದು ಮತ್ತು ನಾಳೆ ಕರಾವಳಿ ಭಾಗ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಧಾರವಾಡ ಭಾಗದಲ್ಲಿ ಭಾರೀ ವರ್ಷಧಾರೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಅತ್ತ ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ರಾಯಚೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

    ಜೆಸ್ಕಾಂ ಉಗ್ರಾಣ, ಕಚೇರಿಗೆ ರಾಜಕಾಲುವೆ ನೀರು ನುಗ್ಗಿದೆ. ರಾಯಚೂರಿನ ಸೀಯತಲಾಬ್, ಸುಖಾಣಿ ಕಾಲೋನಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ದೇವಸ್ಥಾನದ ಮೇಲೆ ಐದಡಿ ನೀರು ಹರಿಯುತ್ತಿದೆ.

    ಯಾದಗಿರಿ ನಗರದತ್ತಲೂ ನೀರು ಆವರಿಸುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಉಡುಪಿ-ಕೊಡಗಿನಲ್ಲಿ ಸೆಪ್ಟೆಂಬರ್ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

  • ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹ – ರಸ್ತೆ, ಸೇತುವೆ, ಮನೆ, ದೇವಸ್ಥಾನ ಮುಳುಗಡೆ

    ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹ – ರಸ್ತೆ, ಸೇತುವೆ, ಮನೆ, ದೇವಸ್ಥಾನ ಮುಳುಗಡೆ

    ಕಾರವಾರ/ಬಾಗಲಕೋಟೆ: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಒಂದೆಡೆಯಾದರೆ, ಮಹಾರಾಷ್ಟ್ರದಲ್ಲಾಗುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಕರ್ನಾಟಕಕ್ಕೆ ಹರಿದುಬರುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ.

    ಕೃಷ್ಣೆ, ಮಲಪ್ರಭಾ, ಘಟಪ್ರಭಾ ನದಿಗಳ ಅಬ್ಬರ ಏರಿದೆ. ಕೊಯ್ನಾ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಪುಣೆ, ರತ್ನಗಿರಿ, ಸತಾರಾ, ಕೊಲ್ಹಾಪುರದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದ್ದು, ಆಗಸ್ಟ್ 22ರವರೆಗೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದಲ್ಲಿರುವ ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಡ್ಯಾಂನಿಂದಲೂ ಅಪಾರ ಪ್ರಮಾಣದಲ್ಲಿ ನೀರನ್ನ ಹೊರಬಿಡಲಾಗುತ್ತಿದೆ.

    ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಗದಗ, ಧಾರವಾಡ, ಬಳ್ಳಾರಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಆಗಿದೆ. ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ. ಮನೆ, ಜಮೀನುಗಳಿಗೆ ನೀರು ನುಗ್ಗಿದೆ. ಪ್ರವಾಹದಲ್ಲಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇವತ್ತು ಸಾಧಾರಣ ಮಳೆ ಆಗಲಿದೆ.

    ಕೃಷ್ಣೆಯ ರುದ್ರನರ್ತನಕ್ಕೆ ಕುಂದಾನಗರಿ ಬೆಳಗಾವಿ ನಲುಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಘಟಪ್ರಭೆ, ಮಲಪ್ರಭೆಯ ಅಬ್ಬರ ಜೋರಾಗಿದೆ. ಮಾರ್ಕಂಡೇಯ, ಹಿರಣ್ಯಕೇಶಿ ನದಿಯಲ್ಲಿ ಪ್ರವಾಹದಿಂದ ಗೋಕಾಕ್ ನಗರ ಮುಳುಗಿದೆ. ಹೊಲ ಗದ್ದೆಗಳು, ರಸ್ತೆ-ಸೇತುವೆಗಳು ಜಲಮಯವಾಗಿವೆ. ಗೋಕಾಕ್‍ನ ಹಳೆಯ ದನದ ಪೇಟೆ ಬಳಿ ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಘಟಪ್ರಭಾ ನದಿಗೆ 79,967 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗೋಕಾಕ್‍ನ ಮಹಾಲಿಂಗೇಶ್ವರ ನಗರಕ್ಕೆ ನದಿ ನೀರು ನುಗ್ಗಿದ್ದು, ಮನೆಗಳು, ಅಂಗಡಿ ಮುಂಗಟ್ಟು ಮುಳುಗಡೆಯಾಗಿದೆ.

    ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ವೀರಶೈವ ಲಿಂಗಾಯತ ಶಕ್ತಿಪೀಠ ಎಂದು ಕರೆಯಲಾಗಿರುವ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರ ಸೇತುವೆ ಜಲಾವೃತವಾಗಿದೆ. ಗೋವಿನಕೊಪ್ಪ, ನೆಲ್ಲಿಗೆ ಸಂಕೇಶ್ವರ, ಬಾಚಿನಗುಡ್ಡ ಮಂಗಳೂರು, ಶಿರಬಡಗಿ ಗೋನಾಳ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಘಟಪ್ರಭೆ ಅಬ್ಬರಕ್ಕೆ ಮುಧೋಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಆತಂಕ ಎದುರಾಗಿದೆ. 80 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿರುವುದರಿಂದ ಘಟಪ್ರಭೆಗೆ ಅಡ್ಡಲಾಗಿ ಕಟ್ಟಿರುವ ಮುಧೋಳ ನಗರದ ಯಾದವಾಡ ಸೇತುವೆ ಮುಳುಗಡೆ ಆಗಿದೆ. ರೂಗಿ, ಒಂಟಗೋಡಿ, ಚನಾಳ್, ರಂಜನಗಿ ಮತ್ತು ಯಾದವಾಡ್ ಸೇರಿದಂತೆ 15 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಾದಾಮಿ-ಗದಗ ನಡುವಿನ ಚೊಳಚಗುಡ್ಡ ರಸ್ತೆಯನ್ನ ಪೊಲೀಸರು ಮುಳ್ಳಿನ ರಾಶಿಯನ್ನ ಹಾಕಿ ಬಂದ್ ಮಾಡಿದ್ದಾರೆ.

    ಇತ್ತ ಗದಗ ಜಿಲ್ಲೆ ನರಗುಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿ ಆಗಿದೆ. ಲಖಮಾಪುರ, ಕೊಣ್ಣೂರ, ಕುವಿನಕೊಪ್ಪ, ಮೆಣಸಗಿ ಗ್ರಾಮಗಳಿಗೆ ನೀರು ನುಗ್ಗಿದೆ. ಗದಗ ಜಿಲ್ಲೆಯ 16 ಗ್ರಾಮಗಳ ಜನರು ಕಂಗಾಲಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಆದರೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ 20 ಕ್ರಸ್ಟ್ ಗೇಟ್‍ಗಳ ಮೂಲಕ 50 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ನಾಳೆ ಸಂಜೆ ಹೊತ್ತಿಗೆ 1 ಲಕ್ಷ ಕ್ಯೂಸೆಕ್ ಬಿಡುವ ಸಾಧ್ಯತೆ ಇದ್ದು, ಹಂಪಿ ಸ್ಮಾರಕ ಮತ್ತು ಕಂಪ್ಲಿ ಸೇತುವೆ ಮುಳುಗಡೆಯಾಗುವ ಭೀತಿ ಇದೆ. ಹೀಗಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

  • ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆಯ ಪ್ರಮಾಣ

    ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆಯ ಪ್ರಮಾಣ

    ಶಿವಮೊಗ್ಗ: ಕಳೆದೊಂದು ವಾರದಿಂದ ಸುರಿದಿದ್ದ ಮಳೆರಾಯ ಬಿಡುವು ನೀಡಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಗಳ ಒಳ ಹರಿವು ಹಾಗೂ ಹೊರ ಹರಿವಿನ ಪ್ರಮಾಣ ತಗ್ಗಿದೆ.

    ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ ಗಳಲ್ಲಿ ಈ ಕೆಳಗಿನಂತಿದೆ.

    1. ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ : 1,819 ಅಡಿ
    ಇಂದಿನ ಮಟ್ಟ : 1,795.10 ಅಡಿ
    ಒಳಹರಿವು : 29,142.00 ಕ್ಯೂಸೆಕ್
    ಹೊರಹರಿವು : 0000

    2. ಭದ್ರಾ ಜಲಾಶಯ
    ಗರಿಷ್ಠ ಮಟ್ಟ : 186 ಅಡಿ
    ಇಂದಿನ ಮಟ್ಟ : 176.50 ಅಡಿ
    ಒಳಹರಿವು : 17,300.00 ಕ್ಯೂಸೆಕ್
    ಹೊರಹರಿವು : 3,006.00 ಕ್ಯೂಸೆಕ್

    3. ತುಂಗಾ ಜಲಾಶಯ
    ಗರಿಷ್ಠ ಮಟ್ಟ : 588.24 ಅಡಿ
    ಇಂದಿನ ಮಟ್ಟ : 587.99 ಅಡಿ
    ಒಳಹರಿವು : 33,608.00 ಕ್ಯೂಸೆಕ್
    ಹೊರಹರಿವು : 31,698.00 ಕ್ಯೂಸೆಕ್

    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಆಗಲಿದೆ.

  • ಕೊಡಗಿನಲ್ಲಿ ಮುಂದುವರಿದ ಮಳೆ ಅಬ್ಬರ – ತುಂಬಿ ಹರಿಯುತ್ತಿರೋ ನದಿಗಳು

    ಕೊಡಗಿನಲ್ಲಿ ಮುಂದುವರಿದ ಮಳೆ ಅಬ್ಬರ – ತುಂಬಿ ಹರಿಯುತ್ತಿರೋ ನದಿಗಳು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಬಿರುಸು ಪಡೆದಿದೆ. ಅದರಲ್ಲೂ ಕಳೆದ 24 ಗಂಟೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ.

    ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ಬಿರುನಾಣಿ-ನಾಟ್ ಕುಂದ್ ರಸ್ತೆ ಮೇಲೆ ನದಿ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಮಾಡುವ ಸೇತುವೆ ಮೇಲೆ 3 ಅಡಿ ಎತ್ತರ ನೀರು ಹರಿಯುತ್ತಿದೆ. ಇದರಿಂದ ಗ್ರಾಮಕ್ಕೆ ಸಂಪರ್ಕ ಕಟ್ ಆಗಿದೆ.

    ನಾಟ್ ಕುಂದ್ ಸುತ್ತ ಬ್ರಹ್ಮಗಿರಿ ಅರಣ್ಯ ಸುತ್ತುವರಿದಿದ್ದು, ಈಗ ಏಕೈಕ ರಸ್ತೆ ಮಾರ್ಗ ಕಡಿತವಾಗಿದೆ. ಕಳೆದ ವರ್ಷ ಇದೇ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಿದ್ದ ಕಬ್ಬಿಣದ ತೂಗು ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಈ ಪ್ರದೇಶದಲ್ಲಿ ಸುಮಾರು 12 ಕುಟುಂಬವಿದ್ದು, ಸಂಪರ್ಕ ಕಡಿತದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈಗ ಇರುವ ಸೇತುವೆಯನ್ನು 10 ಅಡಿ ಎತ್ತರವಾಗಿ ನಿರ್ಮಿಸಿದರೆ, ಮಳೆಗೆ ಸೇತುವೆ ಮುಳುಗುವುದನ್ನು ತಡೆಯಬಹುದಾಗಿದೆ.

    ನಿರಂತರ ಮಳೆಯಿಂದ ಸಂಪರ್ಕ ಕಡಿತ ಹಲವು ದಿನ ಮುಂದುವರಿದರೆ, ಈ ಪ್ರದೇಶದ ವಾಸಿಸುವ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಬೇಕಾಗಿ ಗ್ರಾಮದ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತವಾಗಿ ಭಾರಿ ಮಳೆಯಾಗುತ್ತಿರುವುದರಿಂದ ಈ ವ್ಯಾಪ್ತಿಯ ಕಕ್ಕಟ್ ಪೆÇಳೆ ನದಿ ತುಂಬಿ ಹರಿಯುತ್ತಿದೆ. ಅಲ್ಲದೇ ಲಕ್ಷ್ಮಣ ತೀರ್ಥ, ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.

    ಇತ್ತ ಮಡಿಕೇರಿಯಲ್ಲಿ ಕಳೆದ ರಾತ್ರಿಯಿಂದ ಮಳೆಯ ಅರ್ಭಟ ಕೊಂಚ ಕಡಿಮೆಯಾಗಿದ್ದು, ಗುಡ್ಡಗಾಡು ಪ್ರದೇಶದ ಜನರು ನಿಟ್ಟುಸಿರು ಬೀಡುವಂತೆ ಅಗಿದೆ. ಕಾವೇರಿ ನದಿ ಪಾತ್ರದ ಜನರಲ್ಲಿ ನೀರಿನ ಪ್ರಮಾಣದ ಏರಿಕೆ ಅಗುತ್ತಿರುವುದರಿಂದ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಅತಂಕ ಹೆಚ್ಚುವಂತೆ ಅಗಿದೆ.

    ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು ಅಗಿದ್ದು, ಇಂದಿನ ನೀರಿನ ಮಟ್ಟ 2853.53 ಅಡಿಗಳು ಇದೆ. ಇಂದಿನ ನೀರಿನ ಒಳಹರಿವು 5,056 ಕ್ಯೂಸೆಕ್ ಹಾಗೂ ಹೊರ ಹರಿವು ನದಿಗೆ 4,104 ಕ್ಯೂಸೆಕ್ ಬೀಡಲಾಗುತ್ತಿದೆ. ಪಕ್ಕದ ಮೈಸೂರಿನ ಕೆಆರ್‍ಎಸ್‍ಗೆ ಇದು ವರದಾನವಾಗಲಿದೆ.

  • ಕರಾವಳಿಯಲ್ಲಿ ಭಾರೀ ಮಳೆ- ತುಂಬುತ್ತಿರುವ ಜಿಲ್ಲೆಯ ಜೀವನದಿಗಳು

    ಕರಾವಳಿಯಲ್ಲಿ ಭಾರೀ ಮಳೆ- ತುಂಬುತ್ತಿರುವ ಜಿಲ್ಲೆಯ ಜೀವನದಿಗಳು

    ಮಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದ ಬಳಿಕ ಮಳೆ ಆರಂಭವಾಗಿದೆ.

    ಜುಲೈ 1ರಿಂದ 5ರವರೆಗೂ ಹೆಚ್ಚಿನ ಮಳೆಯಾಗುತ್ತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಶನಿವಾರ ಮತ್ತು ಭಾನುವಾರ ಆರೆಂಜ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಸೂಚನೆಯಂತೆ ಇಂದು ಮಧ್ಯಾಹ್ನದಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಾಧಾರಣ ಮಳೆಯಾಗಿದೆ.

    ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾಗೂ ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದು ಜೀವನದಿಗಳಾದ ನೇತ್ರಾವತಿ, ಕುಮಾರಧಾರಾ ಫಲ್ಗುಣಿ ನದಿಗಳು ತುಂಬಲಾರಂಭಿಸಿದೆ. ಮಳೆ ಇದೇ ರೀತಿ ನಿರಂತರವಾಗಿ ಸುರಿದರೆ ತಗ್ಗು ಪ್ರದೇಶಗಳಿಗೆ ನದಿ ನೀರು ನುಗ್ಗುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಎಲ್ಲ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ತಯಾರಿಗಳನ್ನು ಮಾಡಿಕೊಂಡಿದೆ.

  • ವರುಣನ ಅಬ್ಬರಕ್ಕೆ ಉಕ್ಕಿ ಹರಿದ ಚಾರ್ಮಾಡಿ ನದಿಗಳು

    ವರುಣನ ಅಬ್ಬರಕ್ಕೆ ಉಕ್ಕಿ ಹರಿದ ಚಾರ್ಮಾಡಿ ನದಿಗಳು

    ಬೆಂಗಳೂರು: ಹಿಕಾ ಚಂಡಮಾರುತ ಅಬ್ಬರಕ್ಕೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

    ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ರಾಜ್ಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಇನ್ನೆರಡು ದಿನ ಮಳೆಯಾಗುವುದಾಗಿ ಹೇಳಿದೆ. ಇದೇ ವೇಳೆ ಪಶ್ಚಿಮ ಘಟ್ಟದ ಭಾಗದಲ್ಲಿ ಈಗಲೇ ಭಾರೀ ಮಳೆ ಸುರಿಯಲಾರಂಭಿಸಿದೆ. ಚಾರ್ಮಾಡಿ ಘಾಟಿ ಆಸುಪಾಸಿನಲ್ಲಿ ಮಳೆಯಿಂದಾಗಿ ಜನ ಮತ್ತೆ ಭೀತಿಗೆ ಒಳಗಾಗಿದ್ದಾರೆ. ಘಟ್ಟದಿಂದ ಹರಿದು ಬರುವ ಹೊಳೆಗಳು ಏಕಾಏಕಿ ತುಂಬಿ ಹರಿಯುತ್ತಿದ್ದು, ಸ್ಥಳೀಯರು ಮತ್ತೆ ಜಲಸ್ಫೋಟ ಆಗುವ ಆತಂಕದಲ್ಲಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ ಗ್ರಾಮದ ಪ್ರದೇಶಗಳ ಜನ ನೀರಿನ ಹರಿವನ್ನು ನೋಡಿ ಭಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಭಾರೀ ಮಳೆಯಿಂದ ಜಲಸ್ಫೋಟಗೊಂಡು ಮನೆ, ಕೃಷಿ ಭೂಮಿ ನೀರುಪಾಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಹೊಳೆಗಳು ಭೋರ್ಗರೆಯುತ್ತಿದ್ದು, ಪೋಷಕರು ಶಾಲೆಗೆ ಹೋಗುವ ಮಕ್ಕಳನ್ನು ಒಡೆದು ಹೋದ ಸೇತುವೆಗಳ ಮೂಲಕ ದಾಟಿಸುತ್ತಿದ್ದಾರೆ.

    ಚಾರ್ಮಾಡಿ, ದಿಡುಪೆ, ಪರ್ಲಾಣಿ, ಕೊಳಂಬೆ ಗ್ರಾಮದಲ್ಲಿ ನೆರೆ ಭೀತಿ ಉಂಟಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬೆಟ್ಟಗಳ ಕಡೆಯಿಂದ ಕೆಸರು ನೀರನ್ನು ಹೊತ್ತು ಬರುವ ಹೊಳೆಗಳು ಅಡಿಕೆ ತೋಟಗಳಿಗೆ ನುಗ್ಗಿದ್ದು ಸ್ಥಳೀಯರು ಮಳೆಯ ಪ್ರಕೋಪದಿಂದ ನಲುಗಿ ಹೋಗಿದ್ದಾರೆ. ಪರಿಹಾರ ಕಾರ್ಯಗಳು ಇನ್ನೂ ತಲುಪದ ಕಾರಣ ಅಲ್ಲಿಯ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

    ಕಳೆದೆರಡು ದಿನಗಳಿಂದ ಸುರಿತ್ತಿರುವ ಮಳೆಗೆ ರಾಯಚೂರಿನ ಸಿರವಾರ ತಾಲೂಕಿನ ಶಾಖಾಪೂರ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಗಣದಿನ್ನಿ-ಭಾಗ್ಯನಗರ ಕ್ಯಾಂಪಿನ ಮೂಲಕ ಲಕ್ಕಂದಿನ್ನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಿಂಧನೂರು, ಸಿರವಾರ, ಮಾನ್ವಿ, ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ಭಾರೀ ಮಳೆಯಾಗಿದೆ.

    ರಾಯಚೂರು ತಾಲೂಕಿನ ಜೇಗರಕಲ್ ಹಳ್ಳ ತುಂಬಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿದೆ. ಹಳ್ಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಸಿಂಧನೂರು ತಾಲೂಕಿನ ಬಂಗಾರ ಕ್ಯಾಂಪ್‍ನಲ್ಲಿ ಶಾಲೆಗೆ ನೀರು ನುಗ್ಗಿದ್ದು ಮಕ್ಕಳು ಪರದಾಡುವಂತಾಗಿದೆ. ನೀರು ತುಂಬಿದ ಕೊಠಡಿಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಸಿರವಾರ ತಾಲೂಕಿನ ಅತ್ತನೂರು, ಚಾಗಭಾವಿಯಲ್ಲಿ ಹಳ್ಳ ತುಂಬಿಹರಿಯುತ್ತಿದ್ದು ಜಮೀನುಗಳಿಗೆ ನೀರು ನುಗ್ಗಿದೆ ಅವಾಂತರ ಸೃಷ್ಠಿಸಿದೆ.

    ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರಿಸುವ ಮುನ್ಸೂಚನೆ ಇದ್ದು, ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ವರದಿಯು ಜಿಲ್ಲೆಯಲ್ಲಿ 115.6 ಮಿಲಿ ಮೀಟರ್ ನಿಂದ 204.4 ಮಿಲಿ ಮೀಟರ್ ಮಳೆ ಬೀಳುವ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

  • ಮಲೆನಾಡಲ್ಲಿ ಮತ್ತೆ ವರುಣನ ಆರ್ಭಟ – ಮೈದುಂಬಿ ಹರೀತಿವೆ ನದಿಗಳು

    ಮಲೆನಾಡಲ್ಲಿ ಮತ್ತೆ ವರುಣನ ಆರ್ಭಟ – ಮೈದುಂಬಿ ಹರೀತಿವೆ ನದಿಗಳು

    ಚಿಕ್ಕಮಗಳೂರು: ಮಲೆನಾಡಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದ ಜನ ಜೀವನ ತತ್ತರವಾಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆಯ ದಾರದಹಳ್ಳಿ, ಬೈರಾಪುರ, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಸುತ್ತಾಮುತ್ತ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಹನುಮನಹಳ್ಳಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಭೂಮಿ ಕುಸಿದಿದೆ. ಪರಿಣಾಮ 2 ಎಕರೆ ಕಾಫಿ ಸಂಪೂರ್ಣ ನಾಶವಾಗಿದೆ. ತಾರಾನಾಥ್ ಎಂಬವರಿಗೆ ಈ ತೋಟ ಸೇರಿದ್ದು, ಕಾಫಿ, ಮೆಣಸು, ಅಡಿಕೆ ಸಂಪೂರ್ಣ ಹಾನಿಯಾಗಿದೆ.

    ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆಯಾಗುತ್ತಿದ್ದು, ಪರಿಣಾಮ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ. ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದೆ. ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹೆಬ್ಬಾಳೆ ಸೇತುವೆ ಮುಳುಗಡೆಗೆ ಇನ್ನೂ ಒಂದೇ ಅಡಿ ಬಾಕಿ ಇದೆ.

    ಕಳಸ ಹೊರನಾಡಿನ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಒಂದು ವೇಳೆ ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಹೊರನಾಡು ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಕಳೆದ ವರ್ಷ 17 ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಪ್ರವಾಹದ ಭೀತಿಯಲ್ಲಿ ಜನರು ಜೀವಿಸುತ್ತಿದ್ದಾರೆ.

    ಇತ್ತ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ನೀರಿ ಮಲಪ್ರಭಾ ನದಿ ಹರಿಯುತ್ತಿದೆ. ಇದರಿಂದ ಮತ್ತೆ ರಾಮದುರ್ಗ ತಾಲೂಕಿನ ಹಲವು ಗ್ರಾಮಗಳು ಮುಳುಗಡೆ ಭೀತಿಯಿಂದ ಇದ್ದಾವೆ. ಈಗಾಗಲೇ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಒಳಗೆ ನೀರು ಬಂದಿದೆ. ಇದರಿಂದ ಮತ್ತೊಮ್ಮೆ ಗ್ರಾಮ ಮುಳುಗುವ ಆತಂಕದಲ್ಲಿ ಗ್ರಾಮಸ್ಥರು ತಾವಾಗಿಯೇ ಊರು ತೊರೆಯುತ್ತಿದ್ದಾರೆ.

  • ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು – ಪ್ರಾಣದ ಹಂಗು ತೊರೆದು ವಾಹನ ಸವಾರರ ದುಸ್ಸಾಹಸ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು – ಪ್ರಾಣದ ಹಂಗು ತೊರೆದು ವಾಹನ ಸವಾರರ ದುಸ್ಸಾಹಸ

    ಬೆಳಗಾವಿ/ರಾಯಚೂರು: ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ.

    ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಪೋಲಿಸರು ಇಲ್ಲದೆ ವಾಹನಸಾವರರು ಈ ರೀತಿ ಮಾಡುತ್ತಿದ್ದಾರೆ. ಕೂಡಲೇ ಅಪಾಯದ ಮಟ್ಟ ಮೀರಿ ನೀರು ಹರಿಯುವ ಸ್ಥಳಗಳಲ್ಲಿ ಪೋಲಿಸರನ್ನು ನಿಯೋಜಿಸುವಂತೆ ಜನರು ಒತ್ತಾಯಿಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮ ವಹಿಸಬೇಕಾಗಿದೆ.

    ಇತ್ತ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರಿದಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ವೇದಗಂಗಾ, ಧೂಧಗಂಗಾ ಮತ್ತು ಕೃಷ್ಣಾ ನದಿ ನೀರಿನಲ್ಲಿ ಭಾರೀ ಏರಿಕೆಯಾಗಿದೆ. ಕೃಷ್ಣಾ ನದಿ ನೀರಿನ ಒಳಹರಿವು ಸುಮಾರು 1,09,211 ಲಕ್ಷ ಕ್ಯೂಸೆಕ್ ಆಗಿದ್ದು, ಹಿಪ್ಪರಗಿ ಜಲಾಶಯದಿಂದ 97,300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆಯಿಂದ 6 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.

    ಕೃಷ್ಣಾ ನದಿಯ ಕಲ್ಲೋಳ-ಯಡೂರು, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ವೇದಗಂಗಾ ನದಿಯ ಭೋಜವಾಡಿ-ಕುನ್ನೂರು, ಜತ್ರಾಟ-ಭಿವಶಿ, ಅಕ್ಕೋಳ -ಸಿದ್ನಾಳ ಸೇತುವೆಗಳು ಮುಳುಗಡೆಯಾಗಿವೆ. ಅಪಾಯದ ಮಟ್ಟ ಮೀರಿ ನದಿ ನೀರು ಹರಿಯುತ್ತಿದ್ದರೂ ಸೇತುವೆಗಳ ಮೇಲೆ ಜನರು ಸಂಚರಿಸುತ್ತಿದ್ದಾರೆ. ಅಧಿಕಾರಿಗಳ ಎಚ್ಚರಿಕೆಯ ಸಂದೇಶಕ್ಕೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

    ಮಹಾರಾಷ್ಟ್ರ ದಲ್ಲಿ ಮಳೆಯಾದ ಹಿನ್ನೆಲೆ ನಾರಾಯಣಪುರ ಜಲಾಶಯ ಕೂಡ ಭರ್ತಿಯಾಗಿದೆ. ಜಲಾಶಯದ ಒಳಹರಿವು 1.16 ಲಕ್ಷ ಕ್ಯೂಸೆಕ್ ಆಗಿದ್ದರೆ, ಜಲಾಶಯದಿಂದ ಸುಮಾರು 1.23 ಕ್ಯೂಸೆಕ್ ನೀರನ್ನು 20 ಗೇಟುಗಳಿಂದ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಜಲಾಶಯದ ಕೆಳಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೆಲವು ಗ್ರಾಮಗಳ ಸೇತುವೆ ಸಂಪರ್ಕ ಕಡಿತವಾಗುವ ಸಾಧ್ಯತೆ ಹೆಚ್ಚಾಗಿದೆ.

    ಅಲ್ಲದೆ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ಹಂತದಲ್ಲಿದ್ದು, ದೇವದುರ್ಗಾ ತಾಲೂಕಿನ ಹೂವಿನಹಡಗಲಿ ಸೇತುವೆ ಮುಳುಗುವ ಸಾಧ್ಯತೆಯಿದೆ. ಸೇತುವೆ ಮುಳುಗಿದರೆ ಕಲಬುರಗಿ-ದೇವದುರ್ಗ ಮಧ್ಯೆ ವಾಹನ ಸಂಚಾರ ಸ್ಥಗಿತವಾಗಲಿದೆ. ಕೃಷ್ಣಾ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ, ನದಿಯಲ್ಲಿ ತೆಪ್ಪ ಹಾಕದಂತೆ ಸ್ಥಳೀಯರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.