Tag: River Krishna

  • ಬಸವಸಾಗರ ಜಲಾಶಯದಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗ್ರಾಮಸ್ಥರಿಗೆ ಎಚ್ಚರಿಕೆ

    ಬಸವಸಾಗರ ಜಲಾಶಯದಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗ್ರಾಮಸ್ಥರಿಗೆ ಎಚ್ಚರಿಕೆ

    ಯಾದಗಿರಿ: ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬರೋಬ್ಬರಿ 1,75,916 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನಾಳೆ ಬೆಳಗ್ಗೆ ವೇಳೆಗೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡಿದೆ.

    ನೀರಿನ ಪ್ರಮಾಣ 2 ಲಕ್ಷ ಕ್ಯೂಸೆಕ್ ತಲುಪಿದರೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ. ಜಿಲ್ಲೆಯ ಶಳಗ್ಗಿ, ದೇವಾಪುರ, ಯಕ್ಷಚಿಂತಿ, ಗೌಡೂರು ಮತ್ತು ಕೊಳ್ಳೂರು ಗ್ರಾಮಗಳು ಮತ್ತೆ ಜಲಾವೃತವಾಗುವ ಭೀತಿ ನಿರ್ಮಾಣವಾಗಿದೆ. ಕೊಳ್ಳೂರು ಬ್ರಿಡ್ಜ್ ಮುಳುಗಡೆಯ ಮಟ್ಟ ತಲುಪಿದ್ದು, ದೇವದುರ್ಗ ಮತ್ತು ಯಾದಗಿರಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಕಳೆದ ಬಾರಿಯ ಪ್ರವಾಹಕ್ಕೆ ನೀಲಕಂಠರಾಯನ ಗಡ್ಡಿ ಸೇತುವೆ ಕೊಚ್ಚಿಹೋಗಿದ್ದು, ಗ್ರಾಮಕ್ಕೆ ವಿದ್ಯುತ್ ಮತ್ತು ಬಾಹ್ಯ ಸಂಪರ್ಕ ಕಡಿತಗೊಂಡು ನಡುಗಡ್ಡೆಯಾಗಿದೆ.

    ನದಿಪಾತ್ರದ ಜಮೀನುಗಳಲ್ಲಿ ನದಿ ನೀರು ಹೊಕ್ಕು ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಈಗಾಗಲೇ ಅಧಿಕಾರಿಗಳು ನದಿಪಾತ್ರದ ಗ್ರಾಮಗಳಲ್ಲಿ ಬಿಡು ಬಿಟ್ಟಿದ್ದು, ಜನರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದಷ್ಟು ಬೇಗ ಮತ್ತೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯುವ ಚಿಂತನೆಯನ್ನು ಜಿಲ್ಲಾಡಳಿತ ನಡೆಸಿದೆ.

    ನಾರಾಯಣಪುರ ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಯ ಮಾಹಿತಿ ಪ್ರಕಾರ 17 ಗೇಟ್‍ಗಳಿಂದ 1,75,916 ಕ್ಯೂಸೆಕ್ ಹೊರಕ್ಕೆ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯ ಒಳಹರಿವು 1,40,000 ಕ್ಯೂಸೆಕ್ ಇದ್ದು, ನೀರಿನ ಮಟ್ಟ 491.77 ಮೀ. ಇದೆ. ಜಲಾಶಯದ ಗರಿಷ್ಟ ಮಟ್ಟ 492.25 ಮೀ. ಆಗಿದೆ. ಗರಿಷ್ಟ ಸಂಗ್ರಹ ಸಾಮಥ್ರ್ಯ 33.315 ಟಿಎಂಸಿ ಆಗಿದ್ದು ಪ್ರಸ್ತುತ 31.28 ಟಿಎಂಸಿ ನೀರು ಸಂಗ್ರಹವಾಗಿದೆ.

  • ನಾರಾಯಣಪುರ ಡ್ಯಾಂ ಭರ್ತಿ – ಪ್ರವಾಹ ಭೀತಿಯಲ್ಲಿ ಗ್ರಾಮಗಳು

    ನಾರಾಯಣಪುರ ಡ್ಯಾಂ ಭರ್ತಿ – ಪ್ರವಾಹ ಭೀತಿಯಲ್ಲಿ ಗ್ರಾಮಗಳು

    ರಾಯಚೂರು: ಮಳೆಯಿಂದ ಜಿಲ್ಲೆಯ ನಾರಾಯಣಪುರ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಕೃಷ್ಣನದಿಯ ಅಕ್ಕಪಕ್ಕದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಕಾಡುತ್ತಿದೆ.

    ನಾರಾಯಣಪುರ ಡ್ಯಾಂ ಸಂಪೂರ್ಣ ಭರ್ತಿಯಾದ ಕಾರಣ ಕೃಷ್ಣನದಿಗೆ 50 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಸಂಜೆ 4 ಗಂಟೆ ವೇಳೆಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

    ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕೃಷ್ಣಾ ನದಿಗೆ ಇಳಿಯದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.