Tag: Rishabh Shetty

  • ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ: ರಿಷಬ್ ಶೆಟ್ಟಿ

    ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ: ರಿಷಬ್ ಶೆಟ್ಟಿ

    ಬೆಂಗಳೂರು: ವರ್ಷದ ಹಿಂದೆ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ ಎಂದು ಹೇಳುವ ಮೂಲಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತನ್ನ ಮುದ್ದು ಮಗನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.

    ಚಂದನವನದ ಕಿಲಾಡಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಹುಟ್ಟಿ ಇಂದಿಗೆ ಒಂದು ವರ್ಷವಾಗಿದೆ. ಲಾಕ್‍ಡೌನ್ ಮಧ್ಯೆಯೂ ಮಗನ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ವಿಡಿಯೋ ಸಾಂಗ್‍ವೊಂದನ್ನು ತಯಾರಿ ಮಾಡಿರುವ ರಿಷಬ್, ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರಿಷಬ್, ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶೀರ್ವಾದ ಇವನಿಗಿರಲಿ ಎಂದು ಬರೆದುಕೊಂಡಿದ್ದಾರೆ.

    ಸಿಂಪಲ್ ಸ್ಟಾರ್ ರಕ್ಷಿತ್ ಅವರು ಕೂಡ ಸ್ನೇಹಿತ ರಿಷಬ್ ಶೆಟ್ಟಿ ಮಗನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ರಣ್ವಿತ್ ಜೊತೆ ಇರುವ ಎರಡು ಮುದ್ದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತ್ ಡೇ ಎಂದು ಬರೆದು ಮೂರು ಮುತ್ತು ಕೊಡುವ ಇಮೋಜಿಗಳನ್ನು ಹಾಕಿದ್ದಾರೆ. ಇದರ ಜೊತೆಗೆ ರಿಷಬ್ ಅವರ ಸಾವಿರಾರು ಅಭಿಮಾನಿಗಳು ರಣ್ವಿತ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭ ಕೋರಿ ಆಶೀರ್ವಾದಿಸಿದ್ದಾರೆ.

    https://twitter.com/shetty_rishab/status/1240672139495108613

    ಸದ್ಯ ಲಾಕ್‍ಡೌನ್ ಸಮಯವನ್ನು ತಮ್ಮ ಮಗ ಹಾಗೂ ಮಡದಿಯ ಜೊತೆ ಕಳೆಯುತ್ತಿರುವ ರಿಷಬ್ ಇತ್ತೀಚೆಗಷ್ಟೇ ತನ್ನ ಮಗನಿಗೆ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ ಎಂದು ಬರೆದುಕೊಂಡಿದ್ದರು.

    ರಿಷಬ್ ಶೆಟ್ಟಿ ಅವರು 2017 ಫೆಬ್ರವರಿ 9 ರಂದು ಪ್ರಗತಿ ಅವರನ್ನು ಮದುವೆಯಾಗಿದ್ದರು. ರಿಕ್ಕಿ ಚಿತ್ರದ ಸಮಯದಲ್ಲಿ ಭೇಟಿಯಾಗಿದ್ದ ಇಬ್ಬರಿಗೆ ನಂತರ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ, ಬಳಿಕ ಇಬ್ಬರು ಪ್ರೇಮ ಬಲೆಯಲ್ಲಿ ಸಿಲುಕಿ ಇಬ್ಬರ ಮನೆಯವರಿಗೂ ತಿಳಿಸಿ ಪರಸ್ಪರ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಈ ಜೋಡಿಗೆ 2019 ಏಪ್ರಿಲ್ 7ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ರಣ್ವಿತ್ ಶೆಟ್ಟಿ ಎಂದು ಹೆಸರಿಟ್ಟಿದ್ದರು.