Tag: Rishabh Pant

  • ಧೋನಿ ಜಪ ಬಿಟ್ಟು, ಪಂತ್‍ಗೆ ದಯೆ ತೋರಿ ಎಂದ ಕೊಹ್ಲಿ

    ಧೋನಿ ಜಪ ಬಿಟ್ಟು, ಪಂತ್‍ಗೆ ದಯೆ ತೋರಿ ಎಂದ ಕೊಹ್ಲಿ

    ಹೈದರಾಬಾದ್: ಕಳಪೆ ಫಾರ್ಮ್ ನಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಬೆಂಬಲಕ್ಕೆ ನಾಯಕ ಕೊಹ್ಲಿ ಆಗಮಿಸಿದ್ದು, ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ಭರವಸೆಯಿಟ್ಟು, ವಿಶ್ವಾಸದಿಂದ ಅವಕಾಶ ನೀಡಿದೆ. ಅಭಿಮಾನಿಗಳು ಕೂಡ ಪಂತ್ ಕುರಿತು ದಯೆ ತೋರಬೇಕಿದೆ ಎಂದಿದ್ದಾರೆ.

    ನಾಳೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಪಂತ್ ವೈಫಲ್ಯಗಳ ಕುರಿತು ಪ್ರಸ್ತಾಪಿಸಿದರು. ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ವಿಶ್ವಾಸ ಹೊಂದಿದೆ. ಅಭಿಮಾನಿಗಳು ಕೂಡ ಪಂತ್ ವಿಫಲರಾದ ಸಂದರ್ಭದಲ್ಲಿ ಧೋನಿ ಎಂದು ಘೋಷಣೆ ಕೂಗದೆ ಅವರಿಗೆ ಬೆಂಬಲ ನೀಡಬೇಕು ಎಂದರು.

    ಪಂತ್ ಸಾಮರ್ಥ್ಯದ ಕುರಿತು ತಮಗೆ ಪೂರ್ತಿ ವಿಶ್ವಾಸವಿದೆ. ಆತ ಮ್ಯಾಚ್ ವಿನ್ನರ್ ಆಟಗಾರನಾಗಿದ್ದು, ಆದರೆ ಕೆಲ ಸಂದರ್ಭದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಧೋನಿ ಎಂದು ಜಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶಕ್ಕಾಗಿ ಆಡುವ ಪ್ರತಿಯೊಬ್ಬ ಆಟಗಾರನೂ ಕೂಡ ಜವಾಬ್ದಾರಿಯಿಂದ ಆಡುತ್ತಾನೆ. ದೇಶಕ್ಕಾಗಿ ಗೆಲುವು ಸಾಧಿಸಿಬೇಕು ಎಂಬ ಯೋಚನೆ ಇರುತ್ತದೆ. ಯಾವುದೇ ಆಟಗಾರ ಕೂಡ ಬೇಕು ಎಂದು ಅಂತಹ ಪರಿಸ್ಥಿತಿಯನ್ನು ಎದುರಿಸುವುದಿಲ್ಲ. ಈ ವೇಳೆ ಆಟಗಾರರಿಗೆ ಅಭಿಮಾನಿಗಳು ಬೆಂಬಲವಾಗಿ ನಿಲ್ಲಬೇಕು ಎಂದರು.

    ಇದೇ ವೇಳೆ ರಿಷಬ್ ಪಂತ್ ಅವರು ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನನ್ನ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ ಎಂದರು. ಏಕೆಂದರೆ ತಂಡದಲ್ಲಿರುವ ಆರಂಭಿಕ 4 ಬ್ಯಾಟ್ಸ್ ಮನ್‍ಗಳು ಯಾವ ಕ್ರಮಾಂಕದಲ್ಲಿಯಾದರೂ ಆಡಲು ಶಕ್ತರಾಗಿದ್ದಾರೆ. ಉದಾಹರಣೆಗೆ ವೃದ್ಧಿಮಾನ್ ಸಹಾ ಐಪಿಎಲ್ ನಲ್ಲಿ ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅಲ್ಲದೇ ಆಯ್ಕೆ ಸಂದರ್ಭದಲ್ಲಿ ಎಲ್ಲಾ ಕ್ರಮಾಂಕದಲ್ಲಿಯೂ ಆಡಲು ಸಿದ್ಧರಾಗಲು ಸೂಚಿಸಿದ್ದೇವೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸಿದ್ಧವಾಗಿದ್ದು, ಟಿ20 ಮಾದರಿಯಲ್ಲಿ ಯಾವುದೇ ತಂಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದರು.

    ವಿಶ್ವಕಪ್ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಯಾವುದೇ ಸರಣಿಯಲ್ಲಿ ಆಡಿಲ್ಲ. ಪರಿಣಾಮ ಪಂತ್ ಹೆಚ್ಚಿನ ಅವಕಾಶ ಪಡೆದರೂ ಕಳಪೆ ಫಾರ್ಮ್ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೇ ಹಲವು ಮಾಜಿ ಆಟಗಾರರು ಪಂತ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡುವಂತೆ ಬಹಿರಂಗ ಹೇಳಿಕೆ ನೀಡಿದ್ದಾರೆ. 2020ರ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿ ಬಲಿಷ್ಠ ತಂಡದ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದು, ಯುವ ಆಟಗಾರರಿಗೆ ಅವಕಾಶ ನೀಡಿ ಹಲವು ಪ್ರಯೋಗಗಳನ್ನು ನಡೆಸುತ್ತಿದೆ.

  • ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

    ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

    ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟಿ20 ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‍ನಲ್ಲಿ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿತ್ತು. ಅಲ್ಲದೇ ಹಲವು ಕ್ರಿಕೆಟ್ ವಿಶ್ಲೇಷಕರು ಕೆಲ ಪಂದ್ಯಗಳಿಗೆ ರಿಷಬ್‍ಗೆ ವಿಶ್ರಾಂತಿ ನೀಡಿದರೆ ಒಳಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಂತ್ ಬೆಂಬಲಕ್ಕೆ ನಿಂತಿದ್ದು. ಪಂತ್ ಸೂಪರ್ ಪ್ಲೇಯರ್ ಎಂದಿದ್ದಾರೆ. ಇದನ್ನು ಓದಿ: ‘ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    ರಿಷಬ್ ಪಂತ್‍ಗೆ ಕೆಲ ಸಮಯಾವಕಾಶ ನೀಡಬೇಕಿದೆ. ಸದ್ಯ ಆತ ಒತ್ತಡದಲ್ಲಿರುವುದು ಸ್ಪಷ್ಟವಾಗಿ ಆರ್ಥವಾಗುತ್ತಿದೆ. ಆದ್ದರಿಂದಲೇ ಆತನ ಮೇಲೆ ಯಾವುದೇ ರೀತಿಯ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಪಂತ್ ಸೂಪರ್ ಪ್ಲೇಯರ್ ಆಗಿದ್ದು, ಟೀಂ ಇಂಡಿಯಾ ಬಾಂಗ್ಲಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇತ್ತ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ರಿಷಬ್ ಪಂತ್‍ಗೆ ಲಭಿಸಲಿಲ್ಲ. ಆದರೆ ವಿಕೆಟ್ ಹಿಂದೆ ಮಾತ್ರ ರಿಷಬ್ ವಿಫಲರಾಗಿದ್ದರು. ಬೌಂಡರಿ ಗೆರೆ ಬಳಿಯಿಂದ ಆಟಗಾರರು ಎಸೆಯುವ ಚೆಂಡನ್ನು ಪಡೆಯುವಲ್ಲಿಯೂ ಪಂತ್ ವಿಫಲರಾದ ಕಾರಣ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್ ಕೂಡ ಲಭಿಸಿತ್ತು. ಅಲ್ಲದೇ ಲಿಟಾನ್ ದಾಸ್ ಸ್ಟಂಪ್ ಔಟ್ ಮಾಡುವಲ್ಲಿ ಎಡವಟ್ಟು ಮಾಡಿ ಅವಕಾಶವನ್ನು ಕೈಚೆಲ್ಲಿದ್ದರು. ಅಲ್ಲದೇ ಬಾಂಗ್ಲಾದ ಮತ್ತೊಬ್ಬ ಆಟಗಾರನ ಸ್ಟಂಪ್ ಔಟ್ ವಿಚಾರದಲ್ಲೂ ಅದೃಷ್ಟವಶಾತ್ ಪಾರಾಗಿದ್ದರು. ಸದ್ಯ ಭಾನುವಾರ ನಡೆಯಲಿರುವ 3ನೇ ಅಂತಿಮ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

  • `ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    `ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    – ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿದ್ದಾರೆ ಪಂತ್
    – ಸ್ಟಂಪಿಂಗ್ ವೇಳೆ ಪಂತ್ ಎಡವಟ್ಟು

    ರಾಜ್‍ಕೋಟ್: ಕೀಪರ್ ರಿಷಬ್ ಪಂತ್ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸ್ಟಂಪಿಂಗ್ ವೇಳೆ ಮಾಡಿದ ಎಡವಟ್ಟಿನಿಂದ ಈಗ ಫುಲ್ ಟ್ರೋಲ್ ಆಗುತ್ತಿದ್ದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

    ಯಜುವೇಂದ್ರ ಚಹಲ್ ಎಸೆದ 6ನೇ ಓವರಿನ ಮೂರನೇ ಎಸೆತವನ್ನು ಬಲವಾಗಿ ಹೊಡೆಯಲು ಲಿಟನ್ ದಾಸ್ ಕ್ರೀಸ್ ಬಿಟ್ಟು ಮುನ್ನುಗ್ಗಿದ್ದರು. ಆದರೆ ಬಾಲ್ ಬ್ಯಾಟಿಗೆ ಸಿಗದ ಕಾರಣ ಕೀಪರ್ ಕೈ ಸೇರಿತು. ಬಾಲ್ ಸಿಕ್ಕಿದ ಕೂಡಲೇ ರಿಷಬ್ ಪಂತ್ ಸ್ಟಂಪ್ ಮಾಡಿದ್ದಾರೆ.

    ನಿಯಮಗಳ ಪ್ರಕಾರ ಕೀಪರ್ ವಿಕೆಟ್ ಹಿಂದುಗಡೆ ಬಾಲ್ ಹಿಡಿದು ಸ್ಟಂಪ್ ಮಾಡಬೇಕು. ಆದರೆ ರಿಷಬ್ ಪಂತ್ ಔಟ್ ಮಾಡಲು ಮುನ್ನುಗ್ಗಿ ವಿಕೆಟ್ ಮುಂದುಗಡೆ ಬಾಲ್ ಹಿಡಿದು ಸ್ಟಂಪ್ ಮಾಡಿದ್ದರು. ರಿಷಬ್ ಪಂತ್ ಜೀವದಾನ ನೀಡಿದ್ರೂ ಕೊನೆಗೆ ಅವರಿಂದಲೇ ಲಿಟನ್ ದಾಸ್ ರನೌಟ್ ಆದರು.

    ಸುಲಭದ ಸ್ಟಂಪ್ ಔಟ್ ವೇಳೆ ಕ್ರಿಕೆಟಿನ ಮೂಲ ನಿಯಮ ಪಾಲಿಸದ್ದಕ್ಕೆ ಚಹಲ್ ಕೆಟ್ಟ ಪದಗಳಿಂದ ನಿಂದಿಸಿದರೆ ರೋಹಿತ್ ಶರ್ಮಾ ಸಹ ಪಂತ್ ವಿರುದ್ಧ ಗರಂ ಆಗಿದ್ದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೋ’ಹಿಟ್’ ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಭರ್ಜರಿ ಜಯ

    https://twitter.com/barainishant/status/1192446051493597184

    ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ರಿಷಬ್ ಪಂತ್‍ಗೆ ಅವಕಾಶ ನೀಡುವುದು ಜಾಸ್ತಿಯಾಗಿದೆ. ಅವಕಾಶ ನೀಡಿದರೂ ಬ್ಯಾಟಿಂಗ್ ಮತ್ತು ಕೀಪಿಂಗ್‍ನಲ್ಲಿ ಪಂತ್ ವಿಫಲರಾಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಧೋನಿ ಮತ್ತು ಪಂತ್ ಸ್ಟಂಪ್ ಮಾಡುತ್ತಿರುವ ಫೋಟೋ ಹಾಕಿ ಶಾಲೆಗೆ ಹೋಗಿ ಕಲಿತರೆ ಧೋನಿಯಂತಾಗುತ್ತಾರೆ. ಆದರೆ ಆ್ಯಪ್ ಮೂಲಕ ಶಿಕ್ಷಣ ಪಡೆದರೆ ಪಂತ್ ರೀತಿ ಆಗುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

    ಸಚಿನ್ ಜಾಗದಲ್ಲಿ ಈಗ ಕೊಹ್ಲಿ ಇದ್ದಾರೆ. ಆದರೆ ಧೋನಿ ಜಾಗದಲ್ಲಿ ಈಗ ಯಾರು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿ ಪಂತ್ ವಿರುದ್ಧ ಅಸಮಾಧಾನ ಪ್ರಕಟಿಸಿದ್ದಾರೆ.

  • ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

    ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ನಾಲ್ಕನೇ ಕ್ರಮಾಂಕದಲ್ಲಿ ಯಶಸ್ಸು ಸಾಧಿಸುವಲ್ಲಿ ರಿಷಭ್ ಪಂತ್ ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಆ ಕ್ರಮಾಂಕದಿಂದ ಕೆಳಕ್ಕೆ ಕಳುಹಿಸಬೇಕು. ಸ್ವತಂತ್ರವಾಗಿ ಆಡಲು ಬಿಟ್ಟರೆ ಪಂತ್ ಮತ್ತೆ ಫಾರ್ಮ್ ಗೆ ಹಿಂತಿರುಗುತ್ತಾರೆ ಎಂದು ವಿ.ವಿ.ಎಸ್ ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ 2019ರ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದ 21 ವರ್ಷದ ರಿಷಭ್ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 45ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಪಂತ್ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕ್ರಮಾಂಕದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ರಿಷಭ್ ಪಂತ್ ಐದನೇ ಅಥವಾ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು. ಅಲ್ಲಿ ಪಂತ್ ದೊಡ್ಡ ಹೊಡೆತಗಳನ್ನು ಆಡಲು ಸ್ವಾತಂತ್ರ್ಯ ಪಡೆಯಬಹುದು. ನಾಲ್ಕನೇ ಸ್ಥಾನದಲ್ಲಿ ಹೇಗೆ ರನ್ ಗಳಿಸಬೇಕು ಎಂಬುದು ಪಂತ್‍ಗೆ ತಿಳಿದಿಲ್ಲ. ಹಾಗಾಗಿ ಪಂತ್ ಮೇಲೆ ಹೆಚ್ಚು ಒತ್ತಡ ಹೇರುವ ಅಗತ್ಯವಿಲ್ಲ. ಎಲ್ಲಾ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಕೆಟ್ಟ ಗಳಿಗೆಯನ್ನು ಹೊಂದಿದ್ದಾರೆ. ಸ್ಟ್ರೈಕ್‍ಗಳನ್ನು ತಿರುಗಿಸುವ ಮೂಲಕ ಅವರು ತಮ್ಮ ಆಟವನ್ನು ವೈವಿಧ್ಯಗೊಳಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಪಂತ್ ಶಾಟ್ ಆಯ್ಕೆಯು ಇನ್ನಿಂಗ್ಸ್ ನ ಆರಂಭದಲ್ಲಿ ಸರಿಯಾಗಿ ಸಿಗುತ್ತಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

    ಅಯ್ಯರ್, ಹಾರ್ದಿಕ್ ಸರಿಯಾದ ಆಯ್ಕೆ:
    ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಶ್ರೇಯಸ್ ಅಯ್ಯರ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸರಿಯಾದ ಆಯ್ಕೆ. ಇಬ್ಬರೂ ಅನುಭವಿ ಆಟಗಾರರು. ಪಂತ್ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನವನ್ನು ತುಂಬಬೇಕಿದೆ. ಈಗ ಪಂತ್ ಮೇಲೆ ವಿಭಿನ್ನ ಒತ್ತಡವಿದೆ. ಹಾಗಾಗಿ ಐದನೇ ಮತ್ತು ಆರನೇ ಸ್ಥಾನದಲ್ಲಿ ಪಂತ್ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸಬೇಕು. ಇದರೊಂದಿಗೆ ಪಂತ್ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಪಂತ್ 4 ರನ್ ಗಳಿಸಲು ಶಕ್ತವಾಗಿದರು. ಮೂರನೇ ಪಂದ್ಯದಲ್ಲಿಯೂ 19 ರನ್ ಗಳಿಸಿದ ಪಂತ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಪಂತ್ ಶಾಟ್ ಆಯ್ಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

  • ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿರುವ ಯುವ ಆಟಗಾರ ರಿಷಬ್ ಪಂತ್‍ಗೆ ಗೌತಮ್ ಗಂಭೀರ್ ‘ಸೀರಿಯಸ್’ ವಾರ್ನಿಂಗ್ ನೀಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವ ರಿಷಬ್ ಪಂತ್ ಒಮ್ಮೆ ತನ್ನ ಪ್ರದರ್ಶನದ ಕುರಿತು ಪರಿಶೀಲನೆ ನಡೆಸಿಕೊಂಡರೆ ಒಳ್ಳೆಯದು ಎಂದು ಗೌತಮ್ ಗಂಭೀರ್ ಹೇಳಿದ್ದು, ಪಂತ್‍ಗೆ ಉತ್ತಮ ಸಾಮರ್ಥ್ಯವಿದ್ದು, ಈ ಕುರಿತು ಯಾವುದೇ ಸಂದೇಹವಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಯುವ ಆಟಗಾರ ಸಂಜು ಸ್ಯಾಮ್ಸನ್ ಸವಾಲು ನೀಡುತ್ತಿದ್ದಾರೆ. ನನ್ನ ನೆಚ್ಚಿನ ಆಟಗಾರ ಸ್ಯಾಮ್ಸನ್ ಖಂಡಿತ ರಿಷಬ್‍ಗೆ ಸವಾಲಾಗಲಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

    ಧೋನಿ ಸ್ಥಾನವನ್ನು ತುಂಬುವಂತಹ ಆಟಗಾರರ ಆಯ್ಕೆಯಲ್ಲಿ ಪಂತ್ ಅವರಿಗೆ ಆಯ್ಕೆ ಸಮಿತಿ ಮೊದಲ ಅವಕಾಶ ನೀಡಿದೆ, ಆದರೆ ಪಂತ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತ ಸ್ಯಾಮ್ಸನ್ ಐಪಿಎಲ್ ಹಾಗೂ ಟೀಂ ಇಂಡಿಯಾ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯವ ನಿರೀಕ್ಷೆಯಲ್ಲಿದ್ದಾರೆ.

    ಇದೇ ವೇಳೆ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಕುರಿತು ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಈ ಆಟಗಾರರಿಗೆ ಉತ್ತಮ ಪ್ರದರರ್ಶನ ನೀಡುವ ಅವಕಾಶವಿದೆ. ಸರಣಿಯಲ್ಲಿ ಟೀಂ ಇಂಡಿಯಾ ಫೇವರೆಟಾಗಿದ್ದು, ದಕ್ಷಿಣ ಆಫ್ರಿಕಾ ತಂಡ ಅನುಭವಿ ಆಟಗಾರರ ಕೊರತೆ ಎದುರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್

    ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್

    ನವದೆಹಲಿ: ಭಾರತದ ಮಾಜಿ ನಾಯಕ ಎಂ.ಎಸ್ ಧೋನಿಯನ್ನು ಯುವ ಆಟಗಾರ ರಿಷಬ್ ಪಂತ್ ಟೆಸ್ಟ್ ವಿಕೆಟ್ ಕೀಪಿಂಗ್‍ನಲ್ಲಿ ಹಿಂದಿಕ್ಕಿದ್ದಾರೆ.

    ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ರಿಷಬ್ ಪಂತ್ ಆಡುತ್ತಿದ್ದಾರೆ. ಭಾರತದ ವಿಕೆಟ್ ಕೀಪರ್‍ ಗಳಲ್ಲಿ ಟೆಸ್ಟ್ ಪಂದ್ಯದಲ್ಲಿ ಅತಿ ಬೇಗ 50 ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.

    ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ವಿಂಡೀಸ್ ಆಟಗಾರ ಕ್ರೈಗ್ ಬ್ರಾಥ್‍ವೈಟ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಎಂ.ಎಸ್ ಧೋನಿ 15 ಟೆಸ್ಟ್ ಪಂದ್ಯಗಳಲ್ಲಿ 50 ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ್ದರು. ಆದರೆ ಆಡಿದ 11 ಪಂದ್ಯಗಳಲ್ಲೇ 50 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿರುವ ಪಂತ್, ಧೋನಿ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಈ ಸಾಧನೆ ಮಾಡಿದ ವಿಶ್ವದ ಟಾಪ್ ವಿಕೆಟ್ ಕೀಪರ್‍ ಗಳಲ್ಲಿ ಪಂತ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಅವರ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ 10 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮಾಜಿ ಕೀಪರ್ ಮಾರ್ಕ್ ಬೌಚರ್, ಇಂಗ್ಲೆಂಡ್‍ನ ಜೋಸ್ ಬಟ್ಲರ್ ಮತ್ತು ಆಸ್ಟ್ರೇಲಿಯಾದ ಟಿಮ್ ಪೈನ್ ಮೊದಲ ಸ್ಥಾನದಲ್ಲಿ ಇದ್ದಾರೆ.

    ದೆಹಲಿಯ ರಿಷಬ್ ಪಂತ್ ಅವರನ್ನು ಎಂ.ಎಸ್ ಧೋನಿಯ ನಂತರ ಭಾರತದ ಭವಿಷ್ಯದ ವಿಕೆಟ್ ಕೀಪರ್ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಮುಂದಿನ ಟೂರ್ನಿಗೆ ಸಿದ್ಧ ಮಾಡಲು ಈಗ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಹೆಚ್ಚು ಅವಕಾಶ ನೀಡುತ್ತಿದ್ದೇವೆ ಎಂದು ಭಾರತದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದರು.

    ಎಡಗೈ ಬ್ಯಾಟ್ಸ್ ಮನ್ ಆಗಿರುವ ಈ ಯುವ ಪ್ರತಿಭೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬೆಂಬಲ ನೀಡಿದ್ದು, ರಿಷಬ್ ಪಂತ್ ಅವರಲ್ಲಿ ನಾವು ಭವಿಷ್ಯವನ್ನು ನೋಡುತ್ತಿದ್ದೇವೆ. ಖಂಡಿತವಾಗಿಯೂ ಅವರು ಒಬ್ಬ ಒಳ್ಳೆಯ ಪ್ರತಿಭೆ ಇರುವಂತ ಆಟಗಾರ ಎಂದು ಹೇಳಿದ್ದರು.

  • ಧೋನಿ ದಾಖಲೆ ಮುರಿದ ಯುವ ವಿಕೆಟ್ ಕೀಪರ್ ರಿಷಬ್ ಪಂತ್

    ಧೋನಿ ದಾಖಲೆ ಮುರಿದ ಯುವ ವಿಕೆಟ್ ಕೀಪರ್ ರಿಷಬ್ ಪಂತ್

    ನವದೆಹಲಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಕ್ರಿಕೆಟ್ ಪಂದ್ಯದಲ್ಲಿ 65 ರನ್ ಸಿಡಿಸುವ ಮೂಲಕ ಧೋನಿ ದಾಖಲೆಯನ್ನು ಮುರಿದಿದ್ದಾರೆ.

    ವಿಂಡೀಸ್ ವಿರುದ್ಧ ಮಂಗಳವಾರ ನಡೆದ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಈ ಸಾಧನೆ ಮಾಡಿದ್ದು, ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನ ಬರೆದರು. ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅತಿ ಹೆಚ್ಚು ಅಂದರೆ 56 ರನ್ ಗಳಿಸಿದ್ದರು. 2017 ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ 56 ರನ್ ಸಿಡಿಸಿದ್ದರು.

    ಧೋನಿ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಮಾದರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಪಂತ್ 3ನೇ ಟಿ20 ಪಂದ್ಯದಲ್ಲಿ ನಾಯಕ ಕೊಹ್ಲಿರೊಂದಿಗೆ ಕೂಡಿ 106 ರನ್ ಜೊತೆಯಾಟ ನೀಡಿದ್ದರು. ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಪಡೆದು 3 ಪಂದ್ಯಗಳ ಟಿ20 ಸರಣಿಯಲ್ಲಿ ಗೆದ್ದು ಬೀಗಿದೆ.

    ವಿಂಡೀಸ್ ವಿರುದ್ಧ ಮೊದಲ 2 ಟಿ20 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಪಂತ್ ಮೊದಲ ಪಂದ್ಯದಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, 2ನೇ ಪಂದ್ಯದಲ್ಲಿ 4 ರನ್ ಗಳಿಸಿದ್ದರು. ಪರಿಣಾಮ ಅಂತಿಮ ಟಿ20 ಪಂದ್ಯಕ್ಕೆ ಅವರನ್ನು ಕೈಬಿಡಲಾಗುತ್ತದೆ ಎನ್ನಲಾಗಿತ್ತು. ಆದರೆ ನಾಯಕ ಕೊಹ್ಲಿ ನೀಡಿದ 3ನೇ ಅವಕಾಶವನ್ನು ಬಳಿಸಿಕೊಂಡ ಪಂತ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂತ್ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ 42 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 65 ರನ್ ಗಳಿಸಿದ್ದರು. ಇತ್ತ 45 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 59 ರನ್ ಗಳಿಸಿದ ಕೊಹ್ಲಿ, ಭಾರತದ ಪರ ಟಿ20 ಕ್ರಿಕೆಟ್ ಅತಿ ಹೆಚ್ಚು ಅರ್ಧ ಶತಕ ಗಳಿಸಿದ್ದ ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಟೀಂ ಇಂಡಿಯಾ ನಾಳೆ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದ್ದು, ಒಟ್ಟು 3 ಏಕದಿನ ಪಂದ್ಯಗಳನ್ನು ಟೂರ್ನಿಯಲ್ಲಿ ಆಡಲಿದೆ. ಆ ಬಳಿಕ ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಜರ್ನಿಯನ್ನು ವೆಸ್ಟ್ ಇಂಡೀಸ್ ತಂಡದ ವಿರುದ್ಧವೇ ಆರಂಭಿಸಲಿದೆ.

  • ಪಿಆರ್‌ಎಸ್‌ ಯುಗ ಆರಂಭ – ಅಭಿಮಾನಿಗಳ ಮನ ಗೆದ್ದ ರಿಷಬ್ ಪಂತ್

    ಪಿಆರ್‌ಎಸ್‌ ಯುಗ ಆರಂಭ – ಅಭಿಮಾನಿಗಳ ಮನ ಗೆದ್ದ ರಿಷಬ್ ಪಂತ್

    ಫ್ಲೋರಿಡಾ : ಮೊದಲ ಟಿ 20 ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತ 4 ವಿಕೆಟ್ ಗಳಿಂದ ಗೆದ್ದರೂ ರಿಷಬ್ ಪಂತ್ ಅವರು ಟೀಂ ಇಂಡಿಯಾ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಇನ್ನಿಂಗ್ಸ್ ಕೊನೆಯ ಓವರ್ ನಲ್ಲಿ ಪೊಲಾರ್ಡ್ 49 ರನ್(49 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಸ್ಟ್ರೈಕ್ ನಲ್ಲಿದ್ದರು. ನವದೀಪ್ ಸೈನಿಯ ಮೂರನೇ ಫುಲ್ ಟಾಸ್ ಎಸೆತ ನೇರವಾಗಿ ಪೊಲಾರ್ಡ್ ತೊಡೆಗೆ ಬಡಿಯಿತು. ಸೈನಿ ಎಲ್‍ಬಿಗೆ ಮನವಿ ಮಾಡಿದ್ರೂ ಅಂಪೈರ್ ತಿರಸ್ಕರಿಸಿದರು.

    ಅಂಪೈರ್ ಮನವಿ ತಿರಸ್ಕರಿಸಿದ್ದನ್ನು ನೋಡಿ ಕೀಪರ್ ರಿಷಬ್ ಪಂತ್ ಕೂಡಲೇ ಕೊಹ್ಲಿಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಪಂತ್ ಮಾತನ್ನು ಕೇಳಿ ಕೊಹ್ಲಿ ಡಿಆರ್‌ಎಸ್ ಮನವಿ ಮಾಡಿದರು. ಟಿವಿ ರಿಪ್ಲೇಯಲ್ಲಿ ಬಾಲ್ ಬ್ಯಾಟಿಗೆ ತಾಗದೇ ನೇರವಾಗಿ ತೊಡೆಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಾಣುತಿತ್ತು. ಕೊನೆಗೆ ರಿವ್ಯೂ ಪರಾಮರ್ಶಿಸಿ ಅಂಪೈರ್ ಔಟ್ ತೀರ್ಪು ನೀಡಿದರು.

    ಈ ಹಿಂದೆ ಧೋನಿ ಕೀಪರ್ ಆಗಿದ್ದಾಗಲೂ ಹಲವು ಬಾರಿ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಕೊಹ್ಲಿ ಸಲಹೆ ನೀಡುತ್ತಿದ್ದರು. ವಿಶೇಷವಾಗಿ ಎಲ್‍ಬಿ ಬಂದಾಗ ಬಾಲ್ ಬ್ಯಾಟಿಗೆ ತಾಗಿದೆಯೋ ಇಲ್ಲವೋ ಎನ್ನುವುದು ಕೀಪರ್‌ಗೆ  ಸಾಧಾರಣವಾಗಿ ಕೇಳಿಸುತ್ತದೆ. ಅದರಲ್ಲೂ ಸ್ಪಿನ್ ಬೌಲಿಂಗ್ ವೇಳೆ ಕೀಪರ್ ವಿಕೆಟ್ ಹತ್ತಿರದಲ್ಲೇ ಇರುವ ಕಾರಣ ಬಾಲ್ ಬ್ಯಾಟಿಗೆ ತಾಗಿದೆಯೋ? ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕೇಳುತ್ತದೆ. ವೇಗದ ಬೌಲಿಂಗ್ ವೇಳೆ ಕೀಪರ್ ದೂರದಲ್ಲಿ ಕೀಪಿಂಗ್ ಮಾಡುವ ಕಾರಣ ಅಷ್ಟು ನಿಖರವಾಗಿ ಧ್ವನಿಯನ್ನು ಗ್ರಹಿಸಲು ಆಗುವುದಿಲ್ಲ.

    ಪಂತ್ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದನ್ನು ನೋಡಿದ ನೆಟ್ಟಿಗರು, ಇನ್ನು ಮುಂದೆ ಡಿಆರ್‌ಎಸ್ ಅನ್ನು ಪಿಆರ್‌ಎಸ್‌(ಪಂತ್ ರಿವ್ಯೂ ಸಿಸ್ಟಂ) ಎಂಬುದಾಗಿ ಬದಲಾಯಿಸಬೇಕು. ಪಿಆರ್‌ಎಸ್‌ ಯುಗ ಆರಂಭವಾಗಿದೆ ಎಂದು ಶ್ಲಾಘಿಸಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು, ಧೋನಿಯಿಂದ ಪಂತ್ ಉತ್ತಮ ಪಾಠವನ್ನು ಕಲಿತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    ಈ ಪಂದ್ಯದಲ್ಲಿ ಭಾರತದ ಪರ ನವದೀಪ್ ಸೈನಿ ವಿಶೇಷ ದಾಖಲೆ ಬರೆದರು. ಟಿ 20 ಮಾದರಿಯ ಕ್ರಿಕೆಟಿನಲ್ಲಿ ಭಾರತದ ಪರ ತಾನು ಆಡಿದ ಮೊದಲ ಪಂದ್ಯದಲ್ಲೇ ಇನ್ನಿಂಗ್ಸಿನ 20ನೇ ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಮ್ಮ ಅಂತಿಮ ಓವರಿನಲ್ಲಿ ಸೈನಿ ಯಾವುದೇ ರನ್ ಬಿಟ್ಟುಕೊಡದೇ 1 ವಿಕೆಟ್ ಕಿತ್ತಿದ್ದರು. ಅಂತಿಮವಾಗಿ 4 ಓವರ್ ನಲ್ಲಿ 1 ಮೇಡನ್ ಹಾಕಿ 17 ರನ್ ನೀಡಿ 3 ವಿಕೆಟ್ ಕಿತ್ತ ಸೈನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ವಿಂಡೀಸ್ 9 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದರೆ ಭಾರತ 17.6 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ 4 ವಿಕೆಟ್‍ಗಳ ಜಯ ಸಾಧಿಸಿತು. ಎರಡನೇ ಟಿ 20 ಪಂದ್ಯ ಇಂದು ನಡೆಯಲಿದೆ. ಮೂರನೇ ಪಂದ್ಯ ಮಂಗಳವಾರ ನಡೆಯಲಿದೆ.

  • ಧೋನಿ ಅನುಪಸ್ಥಿತಿ ರಿಷಬ್ ಪಂತ್‍ಗೆ ಉತ್ತಮ ಅವಕಾಶ: ವಿರಾಟ್ ಕೊಹ್ಲಿ

    ಧೋನಿ ಅನುಪಸ್ಥಿತಿ ರಿಷಬ್ ಪಂತ್‍ಗೆ ಉತ್ತಮ ಅವಕಾಶ: ವಿರಾಟ್ ಕೊಹ್ಲಿ

    ಜಮೈಕಾ: ವೆಸ್ಟ್ ಇಂಡೀಸ್ ಟೂರ್ನಿಗೆ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರ ಅನುಪಸ್ಥಿತಿ ಯುವ ಆಟಗಾರ ರಿಷಬ್ ಪಂತ್‍ಗೆ ಉತ್ತಮ ಅವಕಾಶ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯದ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ರಿಷಬ್ ಪಂತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಸ್ಥಿರ ಪ್ರದರ್ಶನ ನೀಡಬೇಕು. ಧೋನಿ ಅವರ ಅನುಪಸ್ಥಿತಿಯಲ್ಲಿ ಅವರು ಚೆನ್ನಾಗಿ ಆಡಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಎಂ.ಎಸ್ ಧೋನಿ ಅವರು ಅನುಭವ ಯಾವಾಗಲೂ ನಮ್ಮ ತಂಡಕ್ಕೆ ಬೇಕು. ಆದರೆ ಅವರ ಅನುಪಸ್ಥಿತಿ ರಿಷಬ್ ಪಂತ್ ರೀತಿಯ ಯುವ ಆಟಗಾರರಿಗೆ ಒಳ್ಳೆಯ ಅವಕಾಶ. ಇದನ್ನು ಅವರ ಬಳಸಿಕೊಂಡು ಅವರ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ನಮಗೆ ಗೊತ್ತು ರಿಷಬ್ ಪಂತ್ ತುಂಬಾ ಒಳ್ಳೆಯ ಆಟಗಾರ. ರಿಷಬ್ ಪಂತ್ ಕೆಳ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಬೇಕು ಎಂದು ನಾವು ಬಯಸುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಎಂ.ಎಸ್.ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ, ರವೀಂದ್ರ ಜಡೇಜಾ, ಕ್ರುನಾಲ್ ಪಾಂಡ್ಯ, ರಿಷಬ್ ಪಂತ್ ಮುಂತಾದವರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಯಾರು ಫಿನಿಶರ್ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಬಳಸಿಕೊಳ್ಳುತ್ತಾರೆ ನೋಡಬೇಕು ಎಂದು ಕೊಹ್ಲಿ ಹೇಳಿದ್ದಾರೆ.

    ಈ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಧೋನಿ ವಿಶ್ವಕಪ್ ನಂತರ 2 ತಿಂಗಳ ವಿಶ್ರಾಂತಿ ತೆಗೆದುಕೊಂಡಿದ್ದು, ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಇಬ್ಬರು ಕೆಳ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಅನುಪಸ್ಥಿತಿಯಲ್ಲಿ, ಈ ಟೂರ್ನಿಯಲ್ಲಿ ಯಾರು ಚೆನ್ನಾಗಿ ಆಡುತ್ತಾರೆ ನೋಡಬೇಕಿದೆ.

    ಈ ನಿಟ್ಟಿನಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್‍ಗಾಗಿ ಭಾರತ ತಂಡವನ್ನು ಸಿದ್ಧ ಮಾಡಲು ನಾವು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ರಿಷಭ್ ಪಂತ್‍ಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದೇವೆ ಎಂದು ಭಾರತೀಯ ಆಯ್ಕೆ ಅಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಸುಳಿವು ನೀಡಿದ್ದರು.

    ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ ಇಂತಿದೆ.

    1. ಟಿ-20 ಸರಣಿ
    * ಆಗಸ್ಟ್ 3 (ಶನಿವಾರ) ಮೊದಲ ಟಿ-20 ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 4 (ಭಾನುವಾರ) ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ, ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 6 (ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

    2. ಏಕದಿನ ಸರಣಿ
    * ಆಗಸ್ಟ್ 8 (ಗುರುವಾರ) ಮೊದಲನೇ ಏಕದಿನ- ಗಯಾನಾದ ಪ್ರಾವಿಡೆನ್ಸ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 11 (ಭಾನುವಾರ) ಎರಡನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 14 (ಬುಧವಾರ) ಮೂರನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    3. ಟೆಸ್ಟ್ ಸರಣಿ
    * ಆಗಸ್ಟ್ 22 ಗುರುವಾರ ದಿಂದ ಆಗಸ್ಟ್ 26 ಸೋಮವಾರದ ವರಗೆ 1 ನೇ ಟೆಸ್ಟ್ ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಮೈದಾನದಲ್ಲಿ
    * ಆಗಸ್ಟ್ 30 ಶುಕ್ರವಾರದಿಂದ ಸೆಪ್ಟೆಂಬರ್ 03 ಮಂಗಳವಾರದ ವರೆಗೆ 2 ನೇ ಟೆಸ್ಟ್ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.

  • ಧೋನಿಯಂತಹ ಪ್ರಸಿದ್ಧ ಆಟಗಾರನಿಗೆ ಯಾವಾಗ ನಿವೃತ್ತಿ ಹೊಂದಬೇಕು ಗೊತ್ತು – ಎಂಎಸ್‍ಕೆ ಪ್ರಸಾದ್

    ಧೋನಿಯಂತಹ ಪ್ರಸಿದ್ಧ ಆಟಗಾರನಿಗೆ ಯಾವಾಗ ನಿವೃತ್ತಿ ಹೊಂದಬೇಕು ಗೊತ್ತು – ಎಂಎಸ್‍ಕೆ ಪ್ರಸಾದ್

    ನವದೆಹಲಿ: ಎಂ.ಎಸ್ ಧೋನಿಯಂತಹ ಪ್ರಸಿದ್ಧ ಆಟಗಾರನಿಗೆ ಯಾವಾಗ ನಿವೃತ್ತಿ ಹೊಂದಬೇಕು ಎಂಬುದು ಗೊತ್ತು ಎಂದು ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದಾರೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಇಂದು ಮುಂಬೈನಲ್ಲಿ ಸಭೆ ಸೇರಿ ಆಗಸ್ಟ್ 2ರಿಂದ ಭಾರತದ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಏಕದಿನ, ಟಿ-20 ಮತ್ತು ಟೆಸ್ಟ್ ಸರಣಿಯ ತಂಡಗಳನ್ನು ಆಯ್ಕೆ ಮಾಡಿದರು.

    ಈ ವೇಳೆ ಧೋನಿ ವಿಚಾರದ ಬಗ್ಗೆ ಮಾತನಾಡಿರುವ ಎಂ.ಎಸ್.ಕೆ ಪ್ರಸಾದ್, ನಿವೃತ್ತಿ ಎಂಬುದು ಆಟಗಾರ ವೈಯಕ್ತಿಕ ವಿಷಯವಾಗಿದ್ದು, ಅವರೇ ಆ ಬಗ್ಗೆ ನಿರ್ಧಾರ ಮಾಡಬೇಕು. ಅದ್ದರಿಂದ ಧೋನಿಯಂತಹ ಅನುಭವಿ ಆಟಗಾರರಿಗೆ ಯಾವಾಗ ನಿವೃತ್ತಿ ಹೊಂದಬೇಕು ಎಂಬುದು ಗೊತ್ತು ಎಂದು ಹೇಳಿದ್ದಾರೆ.

    ಎಂಎಸ್ ಧೋನಿ ಅವರು ಈ ಸರಣಿಗೆ ಲಭ್ಯವಿಲ್ಲ. ಅವರು ಈ ಸರಣಿಗೆ ತಮ್ಮ ಅಲಭ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಧೋನಿ ಅವರ ಬದಲು ಮೂರು ಮಾದರಿಯ ಕ್ರಿಕೆಟ್‍ಗೂ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿ ಈ ಬಾರಿಯ ವಿಶ್ವಕಪ್ ನಂತರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅದ್ದರಿಂದ ರಿಷಬ್ ಪಂತ್ ಅವರಿಗೆ ಹೆಚ್ಚಿನ ಅವಕಾಶ ನೀಡಿ ಅವರನ್ನು ಮುಂದಿನ ಯೋಜನೆಗಳಿಗೆ ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

    ವಿಶ್ವಕಪ್‍ನಲ್ಲಿ ಎಂ ಎಸ್ ಧೋನಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಆದರ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ. ಆದರೆ ಭಾರತ ತಂಡದಲ್ಲಿ ಯುವ ಆಟಗಾರರನ್ನು ಸಿದ್ಧ ಮಾಡಲು ಹೊರಟಿದ್ದೇವೆ. ಅದ್ದರಿಂದ ರಿಷಬ್ ಪಂತ್‍ಗೆ ಮೂರು ಮಾದರಿಯ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಆಗಿ ಅವಕಾಶ ನೀಡಿದ್ದೇವೆ ಎಂದರು.

    ಧೋನಿ ಟೆರಿಟೋರಿಯಲ್ ಆರ್ಮಿಯ ಪ್ಯಾರಾಶೂಟ್ ರೆಜಿಮೆಂಟ್‍ನ ಕರ್ನಲ್ ಆಗಿದ್ದಾರೆ. ಹಾಗಾಗಿ ತಮ್ಮ ಎರಡು ತಿಂಗಳ ರಜೆಯನ್ನು ರೆಜಿಮೆಂಟ್ ನಲ್ಲಿ ಕಳೆಯಲಿದ್ದಾರೆ. ಧೋನಿ ಅವರೇ ಸ್ವಇಚ್ಛೆಯಿಂದ ವೆಸ್ಟ್ ಇಂಡೀಸ್ ಜೊತೆಗಿನ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ತಮ್ಮ ಎರಡು ತಿಂಗಳ ರಜಾವಧಿಯನ್ನು ಪ್ಯಾರಾಮಿಲಿಟ್ರಿ ರೆಜಿಮೆಂಟ್ ಜೊತೆ ವ್ಯಯಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದರು.

    ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮೂರು ಮಾದರಿಯ ಪಂದ್ಯಗಳಿಗೂ ಆಟಗಾರನ್ನು ಆಯ್ಕೆ ಮಾಡಿದ್ದು, ಆಟಗಾರರ ಪಟ್ಟಿ ಇಂತಿದೆ.

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಹಾಗೂ ಉಮೇಶ್ ಯಾದವ್.

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.