Tag: Rishabh Pant

  • ಆಫ್ರಿಕಾ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟ- ಯಾರಾಗ್ತಾರೆ ಕೀಪರ್?

    ಆಫ್ರಿಕಾ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟ- ಯಾರಾಗ್ತಾರೆ ಕೀಪರ್?

    – ವಿರಾಟ್‍ಗೆ ಇಲ್ಲ ವಿಶ್ರಾಂತಿ, ಹಾರ್ದಿಕ್, ಭುಮಿ ಕಮ್‍ಬ್ಯಾಕ್
    – ರಾಹುಲ್, ರಿಷಬ್ ಇಬ್ಬರಿಗೆ ಅವಕಾಶ

    ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.

    ಗಾಯದಿಂದ ಚೇತರಿಸಿಕೊಂಡ ಅನುಭವಿ ಆಟಗಾರ, ಓಪನರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಆದರೆ, ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ಅವರನ್ನು ಕೈಬಿಡಲಾಗಿದೆ.

    ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭುವಿ ಕೂಡ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭುವನೇಶ್ವರ್ ಕುಮಾರ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಜಸ್‍ಪ್ರೀತ್ ಬುಮ್ರಾ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಏಕದಿನ ಸರಣಿಯ ತಂಡದಲ್ಲಿ ಯುವ ಆಟಗಾರ ಶುಭ್‍ಮನ್ ಗಿಲ್ ಅವರನ್ನು ಉಳಿಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

    ಮೂವರು ವೇಗದ ಬೌಲರ್‌ಗಳು:
    ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೇಗದ ಬೌಲರ್ ಗಳಾದ ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಸುವ ಸಾಧ್ಯತೆ ಇದೆ.

    ಭಾರತದ ಸ್ಪಿನ್ ಪಡೆಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್ ಸ್ಥಾನ ಪಡೆದಿದ್ದಾರೆ. ಆದರೆ ಕುಲದೀಪ್ ಯಾದವ್ ಅವರನ್ನು ಇತರೆ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ಬಲವಾಗಿ ಕಾಣುತ್ತಿದೆ.

    ವಿಕೆಟ್ ಕೀಪರ್ ಯಾರು?
    ಟೀಂ ಇಂಡಿಯಾ ಕ್ರಿಕೆಟ್ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಯಾರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ನ್ಯೂಜಿಲೆಂಡ್ ಪ್ರಸಾದ ವೇಳೆ 3 ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೀಪಿಂಗ್ ಜವಾಬ್ದಾರಿ ಹಾಗೂ ಎರಡನ್ನೂ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ ಬೀಳುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.

     

    ವೇಳಾಪಟ್ಟಿ:
    ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 12ರಂದು ಮಧ್ಯಾಹ್ನ 1.30 ರಿಂದ ಆರಂಭವಾಗಲಿದೆ. ಎರಡನೇ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ. ಕೊನೆಯ ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದಲ್ಲಿ ಮಾರ್ಚ್ 18ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ.

    ಭಾರತ ತಂಡ:
    ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಜಸ್‍ಪ್ರೀತ್ ಬುಮ್ರಾ ಇದ್ದಾರೆ. ಇತರೆ ಆಟಗಾರರ ಪಟ್ಟಿಯಲ್ಲಿ ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್‍ಮನ್ ಗಿಲ್.

  • ವಿನಾಕಾರಣ ರನೌಟ್ ಆಗಿ ಟೀಕೆಗೆ ಗುರಿಯಾದ ಪಂತ್- ವಿಡಿಯೋ

    ವಿನಾಕಾರಣ ರನೌಟ್ ಆಗಿ ಟೀಕೆಗೆ ಗುರಿಯಾದ ಪಂತ್- ವಿಡಿಯೋ

    ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ ಪಂದ್ಯದ ಎರಡನೇ ದಿನದ ಆಟದ ವೇಳೆ ರಿಷಬ್ ಪಂತ್ ವಿನಾಕಾರಣ ರನೌಟ್ ಆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಪಂತ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ವೆಲ್ಲಿಂಗ್ಟನ್ ಬೇಸಿನ್ ರಿಸರ್ವ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಿತ್ತು. ಎರಡನೇ ದಿನದಾಟ ಪ್ರಾರಂಭಿಸಿದ ರಿಷಬ್ ಪಂತ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆಟ ಪ್ರಾರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ 59ನೇ ಓವರಿನಲ್ಲಿ ಪಂತ್ ಎಡವಟ್ಟು ಮಾಡಿಕೊಂಡು ವಿಕೆಟ್ ಒಪ್ಪಿಸಿದರು. ಬಳಿಕ ಬಂತ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಎಲ್ಲಾ ವಿಕೆಟ್ ಕಳೆದುಕೊಂಡು 165 ರನ್ ಪೇರಿಸಿತು.

    ಪಂದ್ಯದ 59ನೇ ಓವರಿನ 2ನೇ ಎಸೆತದಲ್ಲಿ ಸ್ಟ್ರೈಕ್‍ನಲ್ಲಿದ್ದ ಅಜಿಂಕ್ಯ ರಹಾನೆ ಹಾಫ್ ಸೈಡ್‍ಗೆ ಬಾಲ್ ಅನ್ನು ಅಟ್ಟಿ ಒಂಟಿ ರನ್ ಗಳಿಸಲು ಯತ್ನಿಸಿದರು. ಈ ವೇಳೆ ಫೀಲ್ಡರ್ ಬಾಲ್‍ಅನ್ನು ಬೇಗ ಹಿಡಿದಿದ್ದರಿಂದ ಪಂತ್ ರನ್ ಬೇಡ ಎಂದು ನಿಲ್ಲಿಸಿದರು. ಆದರೆ ರಹಾನೆ ಅದಾಗಲೇ ಅರ್ಧ ಕ್ರಿಸ್ ಮಧ್ಯಕ್ಕೆ ಬಂದಿದ್ದರು. ಫೀಲ್ಡರ್ ಚೆಂಡನ್ನು ವಿಕೆಟ್‍ಗೆ ಥ್ರೋ ಮಾಡಿದ್ದರಿಂದ ವಿನಾಕಾರಣ ಪಂತ್ ಸ್ಟ್ರೈಕ್‍ಗೆ ಓಡಿ ಔಟ್ ಆದರು.

    ‘ರನ್ ಓಡದೇ ಬಾಲ್ ಎಲ್ಲಿದೆ ಎಂದು ನೋಡಲು ಪಂತ್ ಪ್ರಯತ್ನಿಸುತ್ತಿದ್ದರು. ಅದು ಅವರಿಗೆ ಹಿಂಜರಿಕೆಯನ್ನು ಉಂಟುಮಾಡಿತು’ ಎಂದು ನಿರೂಪಕ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಇದೇ ವೇಳೆ ಸಹ ನಿರೂಪಕ ಸ್ಕಾಟ್ ಸ್ಟೈರಿಸ್ ಅವರು, ‘ನಿಮ್ಮ ಜೊತೆಗಾರರನ್ನು ನೀವು ನಂಬಬೇಕು. ಅಜಿಂಕ್ಯ ರಹಾನೆ ಅವರನ್ನು ನಂಬದ ಪಂತ್ ನಿರಾಶೆಗೆ ತುತ್ತಾದರು ಎಂದು ಹೇಳಿದ್ದಾರೆ.

    https://twitter.com/DeepPhuyal/status/1231043063096762369

    ಪಂತ್ ತನ್ನ ಜೊತೆಗಾರರನ್ನು ನಂಬಿ ಓಡಿದ್ದರೆ ರನ್ ಗಳಿಸಿ ವಿಕೆಟ್ ಉಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಫೀಲ್ಡರ್ ಕೂಡ ಬಹುಬೇಗ ಬಾಲ್ ಹಿಡಿದು ಎಸೆಯುತ್ತಿರಲಿಲ್ಲ. ಆದರೆ ಬ್ಯಾಟ್ಸ್‍ಮನ್‍ಗಳ ಮಧ್ಯೆ ಇದ್ದ ಗೊಂದಲ ಅರಿತ ಫೀಲ್ಡರ್ ವಿಕೆಟ್‍ಗೆ ಬಾಲ್ ಎಸೆದರು. ರಹಾನೆ ಜೊತೆಗಾರರು ನಂಬಬಹುದಾದ ವ್ಯಕ್ತಿ’ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

    63 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿಂಕ್ಯೆ ರಹಾನೆ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ. ಅಷ್ಟೇ ಅಲ್ಲದೆ ಯಾವುದೇ ಜೊತೆಗಾರರು ಕೂಡ ರನೌಟ್ ಆಗಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರಿಷಬ್ ಪಂತ್ ವಿನಾಕಾರಣ ರನೌಟ್ ಆಗುವ ವಿಕೆಟ್ ಕಳೆದುಕೊಂಡರು.

  • ನಾನು ಈಗ ‘ಅತ್ಯುತ್ತಮ ಕಂಪನಿಯ ಜೊತೆಯಲ್ಲಿದ್ದೇನೆ’ ಎಂದ ರಾಹುಲ್

    ನಾನು ಈಗ ‘ಅತ್ಯುತ್ತಮ ಕಂಪನಿಯ ಜೊತೆಯಲ್ಲಿದ್ದೇನೆ’ ಎಂದ ರಾಹುಲ್

    ವೆಲ್ಲಿಂಗ್ಟನ್: ಟೀಂ ಇಂಡಿಯಾ ಕ್ರಿಕೆಟರ್ ಕೆ.ಎಲ್.ರಾಹುಲ್ ಉತ್ತಮ ಬ್ಯಾಟಿಂಗ್, ಕೀಪಿಂಗ್ ಮೂಲಕ ತಮ್ಮ ಖ್ಯಾತಿಯನ್ನು ಬೆಳೆಸಿಕೊಂಡಿದ್ದಾರೆ. 2019ರ ಆರಂಭಿಕ ಹಂತದಲ್ಲಿ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿದ್ದ ರಾಹುಲ್ ಈಗ ಸೀಮಿತ ಓವರ್‌ಗಳ ಭಾರತ ತಂಡದಲ್ಲಿ ಅನಿವಾರ್ಯ ಸದಸ್ಯರಾಗಿದ್ದಾರೆ. ಓಪನರ್, ಫಿನಿಶರ್ ಮತ್ತು ವಿಕೆಟ್ ಕೀಪರ್ ಹೀಗೆ ಭಾರತೀಯ ತಂಡದಲ್ಲಿ ಅನೇಕ ಪಾತ್ರಗಳನ್ನು ವಹಿಸಿಕೊಂಡ ರಾಹುಲ್ ಅವರು ಕ್ರೀಡಾ ನಿರೂಪಕ ಮತ್ತು ಪ್ರೆಸೆಂಟರ್ ಜತಿನ್ ಸಪ್ರು ಅವರ ಮಗಳೊಂದಿಗೆ ಕಾಣಿಸಿಕೊಂಡು ಮೈದಾನದಿಂದ ಹೊಸ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.

    ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಟಿಮ್ ಪೈನ್ ಅವರ ಮಕ್ಕಳೊಂದಿಗೆ ಗುರುತಿಸಿಕೊಂಡಿದ್ದ ರಿಷಬ್ ಪಂತ್ ಅವರು ‘ಬೇಬಿಸಿಟ್ಟರ್’ ಎಂದು ಖ್ಯಾತಿ ಗಳಿಸಿದ್ದರು. ಈಗ ಭಾರತದ ಏಕದಿನ ಮತ್ತು ಟಿ20 ತಂಡಗಳಲ್ಲಿ ವಿಕೆಟ್ ಕೀಪರ್ ಆಗಿ ಪಂತ್ ಸ್ಥಾನವನ್ನು ರಾಹುಲ್ ವಹಿಸಿಕೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರಂತೆ ಬೇಬಿ ಸಿಟ್ಟರ್ ಆಗಿ ರಾಹುಲ್ ಕಾಣಿಸಿಕೊಂಡಿದ್ದಾರೆ.

    ಕೆ.ಎಲ್.ರಾಹುಲ್ ಅವರು ಸಪ್ರು ಅವರ ಮಗಳ ಜೊತೆ ಇರುವ ಫೋಟೋವನ್ನು ಟ್ವಿಟ್ ಮಾಡಿ, ‘ಅತ್ಯುತ್ತಮ ಕಂಪನಿಯಲ್ಲಿ’ ಎಂದು ಬರೆದುಕೊಂಡಿದ್ದಾರೆ.

    ಸಪ್ರು ಕೂಡ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಮತ್ತೊಂದು ಪಾತ್ರ’ ಎಂದು ಬರೆದುಕೊಂಡಿದ್ದಾರೆ. ಕೆ.ಎಲ್.ರಾಹುಲ್ ಕಳೆದ ಕೆಲವು ಪಂದ್ಯಗಳಲ್ಲಿ ಓವರ್ ಬ್ಯಾಟ್ಸ್‌ಮನ್, ಕೀಪಿಂಗ್, ತಂಡದ ನಾಯಕ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗಾಗಿ ಮತ್ತೊಂದು ಪಾತ್ರವನ್ನು ರಾಹುಲ್ ನಿರ್ವಹಿಸುತ್ತಿದ್ದಾರೆ ಎಂದು ಸಪ್ರು ಹೇಳಿದ್ದಾರೆ.

    ಕಿವೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಫಾರ್ಮ್ ಮತ್ತು ಸಾಕಷ್ಟು ಭರವಸೆಯನ್ನು ತೋರಿಸಿದ್ದರೂ ರಾಹುಲ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ. 27 ವರ್ಷದ ರಾಹುಲ್ 5 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅಗ್ರ ಸ್ಕೋರಿಂಗ್ ಬ್ಯಾಟ್ಸ್‍ಮನ್‍ಗಳಲ್ಲಿ ಒಬ್ಬರಾಗಿದ್ದರು.

    ಟೆಸ್ಟ್ ಸರಣಿಗೆ ಸ್ಥಾನ ಪಡೆಯದಿದ್ದರೂ ರಾಹುಲ್ ಅವರನ್ನು ನ್ಯೂಜಿಲೆಂಡ್‍ನಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಅವರು ಸ್ಥಾನ ಪಡೆಯುತ್ತಾರೆ ಎಂಬ ವಿಶ್ವಾಸವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅವರು ಕಿವೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡದಿದ್ದರೆ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನೀಲಿ ಜರ್ಸಿ ತೊಟ್ಟು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ‘ವಿರಾಟ್ ನೀನು ಕೂಡ ಧೋನಿ ರೀತಿಯೇ?’- ಕೊಹ್ಲಿ ವಿರುದ್ಧ ಸೆಹ್ವಾಗ್ ಫೈರ್

    ‘ವಿರಾಟ್ ನೀನು ಕೂಡ ಧೋನಿ ರೀತಿಯೇ?’- ಕೊಹ್ಲಿ ವಿರುದ್ಧ ಸೆಹ್ವಾಗ್ ಫೈರ್

    ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 4 ಪಂದ್ಯಗಳು ಪೂರ್ಣಗೊಂಡಿದ್ದು, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಯಾವುದೇ ಅವಕಾಶವನ್ನು ಪಡೆಯಲಿಲ್ಲ. ಕೆಎಲ್ ರಾಹುಲ್ ಆರಂಭಿಕರಾಗಿ ಮಾತ್ರವಲ್ಲದೇ ವಿಕೆಟ್ ಹಿಂದೆಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಿಷಬ್ ಪಂತ್ ಸ್ಥಾನಕ್ಕೆ ಮನೀಶ್ ಪಾಂಡೆರನ್ನು ಆಯ್ಕೆ ಮಾಡಲಾಗಿದೆ. ಆದರೆ ರಿಷಬ್ ಪಂತ್ ಕೈಬಿಡುವ ಮುನ್ನ ಆತನೊಂದಿಗೆ ಮಾತನಾಡಿದ್ದೀರಾ ಎಂದು ಸೆಹ್ವಾಗ್ ಕೊಹ್ಲಿಗೆ ಪ್ರಶ್ನೆ ಮಾಡಿದ್ದಾರೆ.

    2011-12ರಲ್ಲಿ ಆಸೀಸ್ ಟೂರ್ನಿಯ ವೇಳೆ ನಿಧಾನಗತಿಯ ಫೀಲ್ಡಿಂಗ್ ಮಾಡುತ್ತಾರೆ ಎಂದು ಸೆಹ್ವಾಗ್, ಸಚಿನ್, ಗೌತಮ್ ಗಂಭೀರ್ ಅವರನ್ನು ತಂಡದ ನಾಯಕರಾಗಿದ್ದ ಧೋನಿ ರೋಟೆಶನ್ ಮಾಡಿದ್ದರು. ಆದರೆ ಈ ಬಗ್ಗೆ ಒಮ್ಮೆಯೂ ಧೋನಿ ತಂಡದ ಆಟಗಾರರ ಚರ್ಚೆಯ ಸಂದರ್ಭದಲ್ಲಿ ಧೋನಿ ಪ್ರಸ್ತಾಪ ಮಾಡಿರಲಿಲ್ಲ. ಅಲ್ಲದೇ ನೇರ ಈ ವಿಚಾರವನ್ನು ಮಾಧ್ಯಮ ಎದುರು ಹೇಳಿದ್ದರು. ಮಾಧ್ಯಮಗಳಿಂದ ಅಂದು ನಾವು ಈ ವಿಚಾರವನ್ನು ತಿಳಿದುಕೊಂಡಿದ್ದೇವು ಎಂದು ಸೆಹ್ವಾಗ್ ಹೇಳಿದ್ದಾರೆ.

    ಅಂದು ತಂಡದಲ್ಲಿ ಕೇವಲ ರೊಟೇಷನ್ ಬಗ್ಗೆ ಮಾತ್ರ ಚರ್ಚೆ ನಡೆಸಿ ರೋಹಿತ್ ಶರ್ಮಾಗೆ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದರು. ಆದರೆ ನಿಧಾನಗತಿ ಫೀಲ್ಡಿಂಗ್ ಬಗ್ಗೆ ಅಲ್ಲಿಯೇ ತಿಳಿಸಿದ್ದರೆ ಉತ್ತಮವಾಗಿ ಇರುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಹಾಗೂ ನಾಯಕ ಕೊಹ್ಲಿ ನಡುವೆ ಕಮ್ಯುನಿಕೇಷನ್ ಗ್ಯಾಪ್ ಇರುವಂತಿದ್ದು. ಖಂಡಿತ ಇದು ತಪ್ಪಾಗುತ್ತದೆ. ಧೋನಿ ರೀತಿಯಂತೆಯೇ ಕೊಹ್ಲಿ ಕೂಡ ನಡೆದುಕೊಳ್ಳುತ್ತಿದ್ದರಾ ಎಂಬುವುದು ನನಗೆ ತಿಳಿದಿಲ್ಲ. ಆದರೆ ರೋಹಿತ್ ಶರ್ಮಾ ನಾಯಕರಾಗಿದ್ದ ಸಂದರ್ಭದಲ್ಲಿ ಮಾತ್ರ ಆಟಗಾರರೊಂದಿಗೆ ಹೆಚ್ಚಿನ ಮಾತುಕತೆ ನಡೆಸುತ್ತಿದ್ದರು ಎಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.

  • ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ- ಟ್ರೋಲ್‍ಗೆ ಸಿಲುಕಿದ ಪಂತ್

    ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ- ಟ್ರೋಲ್‍ಗೆ ಸಿಲುಕಿದ ಪಂತ್

    ಬೆಂಗಳೂರು: ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್‍ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹಂಗಾಮಿ ವಿಕೆಟ್ ಕೀಪರ್ ಆಗಿ ಸೈ ಎನಿಸಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಮುಂಬೈ ಮತ್ತು ರಾಜ್‍ಕೋಟ್ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ತಮ್ಮ ಅದ್ಭುತ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡ ರಿಷಭ್ ಪಂತ್ ಅವರು ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಗ್ಲೌಸ್ ಕೀಪಿಂಗ್ ಮಾಡುತ್ತಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಅದ್ಭುತ ವಿಕೆಟ್ ಕೀಪಿಂಗ್ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಭಾನುವಾರ ಬೆಂಗ್ಳೂರಲ್ಲಿ ಇಂಡೋ-ಆಸೀಸ್ ಹೈವೋಲ್ಟೇಜ್ ಪಂದ್ಯ

    ಕಳೆದ ಕೆಲವು ಪಂದ್ಯಗಳಲ್ಲಿ ರಿಷಭ್ ಪಂತ್‍ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರ ಹೀಗಾಗಿ ಪಂತ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ‘ನೀವು ಈಗ ಹೊರಟುಹೋದರೆ ದೂರ ಹೋಗಿ ಎಂದು ನೆಟ್ಟಿಗರೊಬ್ಬರು ಪಂತ್ ಅವರನ್ನು ಟ್ರೋಲ್ ಮಾಡಿದ್ದಾರೆ.  ಇದನ್ನೂ ಓದಿ: 1 ರನ್ ಅಂತರದಲ್ಲಿ 2 ಪ್ರಮುಖ ವಿಕೆಟ್ ಪತನ- 36 ರನ್‍ಗಳಿಂದ ಗೆದ್ದ ಭಾರತ

    ಈ ಪಂದ್ಯದಲ್ಲಿ ರಾಹುಲ್ ವಿಶೇಷ ದಾಖಲೆಯೊಂದನ್ನು ಬರೆದರು. ಏಕದಿನ ಕ್ರಿಕೆಟ್ ನಲ್ಲಿ 1000 ರನ್‍ಗಳನ್ನು ಪೂರೈಸಿದ ಸಾಧನೆ ಮಾಡಿದರು. ಆ್ಯರನ್ ಫಿಂಚ್ ಅವರನ್ನು ರಾಹುಲ್ ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮೂಲಕ ಪೆವಿಲಿಯನ್‍ಗೆ ಅಟ್ಟಿದರು. ಇದನ್ನು ನೋಡಿದ ಅಭಿಮಾನಿಗಳು ರಿಷಭ್ ಪಂತ್ ಬದಲು ಧೋನಿ ಜಾಗಕ್ಕೆ ಕೆ.ಎಲ್.ರಾಹುಲ್ ಅವರೇ ಸೂಕ್ತ ಆಟಗಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 47 ರನ್ ಮತ್ತು ಎರಡನೇ ಪಂದ್ಯದಲ್ಲಿ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 80ರನ್ ಗಳಿಸಿದರು. ಇದಲ್ಲದೆ ಎರಡನೇ ಪಂದ್ಯದಲ್ಲಿ ಅವರು ಆ್ಯರನ್ ಫಿಂಚ್ ಅವರನ್ನು ಉತ್ತಮ ಶೈಲಿಯಲ್ಲಿ ಸ್ಟಂಪ್ ಮಾಡಿದರು. ಇದರ ನಂತರ ರಾಹುಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಯಿತು. ಇದನ್ನೂ ಓದಿ: ಬಿಸಿಸಿಐ ಆಟಗಾರರ ಒಪ್ಪಂದದ ಪಟ್ಟಿಯಿಂದ ಧೋನಿ ಔಟ್

    ಮುಂಬೈನಲ್ಲಿ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ 44ನೇ ಓವರ್ ನಲ್ಲಿ ಪಂತ್ ಅವರ ಹೆಲ್ಮೆಟ್‍ಗೆ ಬಾಲ್ ಬಡೆದು ಗಾಯಗೊಂಡಿದ್ದರು. ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಬದಲಿಗೆ ಆಂಧ್ರಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್.ಭರತ್ ತಂಡ ಸೇರಿದ್ದಾರೆ. ಆದರೆ ಭರತ್ ಅವರಿಗೆ ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಇಲೆವೆನ್‍ನಲ್ಲಿ ಅವಕಾಶ ಸಿಗಲಿಲ್ಲ.

  • ಪಂಥ್ ಸ್ಥಾನಕ್ಕೆ ಆಂಧ್ರದ ಕೆ.ಎಸ್.ಭರತ್ ಆಯ್ಕೆ

    ಪಂಥ್ ಸ್ಥಾನಕ್ಕೆ ಆಂಧ್ರದ ಕೆ.ಎಸ್.ಭರತ್ ಆಯ್ಕೆ

    ರಾಜ್‍ಕೋಟ್: ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ರಿಷಭ್ ಪಂತ್ ಅವರ ಸ್ಥಾನದಲ್ಲಿ ಆಂಧ್ರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್.ಭಾರತ್ ರಾಜ್‍ಕೋಟ್ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

    ರಿಷಭ್ ಪಂತ್ ಬದಲಿಗೆ ಮನೀಶ್ ಪಾಂಡೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು. ಇತ್ತ ಕೆಎಲ್ ರಾಹುಲ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಭಾರತ-ಎ ಪ್ರವಾಸಕ್ಕೆ ನ್ಯೂಜಿಲೆಂಡ್‍ಗೆ ಹೋಗುವುದರೊಂದಿಗೆ, ಅವರನ್ನು ಪಂತ್ ಅವರ ಬ್ಯಾಕಪ್ ಆಗಿ ಸೇರಿಸಲು ಮಂಡಳಿ ನಿರ್ಧರಿಸಿದೆ.

    ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚೇತರಿಕೆ ಬಗ್ಗೆ ಇಲ್ಲಿ ನಿಗಾ ವಹಿಸಲಾಗುತ್ತಿದೆ. ಭಾನುವಾರ ಮೂರನೇ ಏಕದಿನ ಪಂದ್ಯದಲ್ಲಿ ಅವರು ಆಡಬೇಕೋ, ಬೇಡವೋ ಎಂದು ನಿರ್ಧರಿಸಲಾಗುತ್ತದೆ. ಮುಂಬೈನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಂತ್ ತಲೆಗೆ ಪೆಟ್ಟಾಗಿತ್ತು. ಈ ಪಂದ್ಯದಲ್ಲಿ ಪಂತ್ 28ರನ್ ಸಿಡಿಸಿದ್ದರು. ಪಂತ್ ವಿಶ್ರಾಂತಿ ಹಿನ್ನೆಲೆಯಲ್ಲಿ ಮನೀಶ್ ಪಾಂಡೆ ಮೈದಾನಕ್ಕಿಳಿದರು. ಆ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು.

    ರಾಜ್‍ಕೋಟ್ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಗಾಯಗೊಂಡರೆ, ಆ ಸಂದರ್ಭದಲ್ಲಿ ಭರತ್ ಅವರನ್ನು ಕಣಕ್ಕಿಳಿಸಬಹುದು. ತಂಡಕ್ಕೆ ಬ್ಯಾಕಪ್ ಆಗಿ ಭರತ್ ಅವರನ್ನು ಕರೆಸಿಕೊಳ್ಳುವುದು ಇದೇ ಮೊದಲಲ್ಲ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಅವರ ಬ್ಯಾಕಪ್ ಆಗಿ ಭರತ್ ಅವರನ್ನು ಉಳಿಸಿಕೊಳ್ಳಲಾಗಿತ್ತು.

    ಆಂಧ್ರಪ್ರದೇಶ ಪರ ಆಡಿದ ಭಾರತ್ 71 ಪ್ರಥಮ ದರ್ಜೆ ಪಂದ್ಯಗಳಲ್ಲಿ 37.66 ಸರಾಸರಿಯಲ್ಲಿ 4,143 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 51 ಗ್ರೇಡ್-ಎ ಪಂದ್ಯಗಳಲ್ಲಿ 1,351 ರನ್ ಗಳಿಸಿದ್ದಾರೆ.

  • ಪಂತ್ ಬದಲು ಕೀಪಿಂಗ್ ಗ್ಲೌಸ್ ತೊಟ್ಟ ರಾಹುಲ್

    ಪಂತ್ ಬದಲು ಕೀಪಿಂಗ್ ಗ್ಲೌಸ್ ತೊಟ್ಟ ರಾಹುಲ್

    ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಬದಲು ಇಂದು ಬ್ಯಾಟ್ಸ್‌ಮನ್‌ ಕೆ.ಎಲ್.ರಾಹುಲ್ ಗ್ಲೌಸ್ ತೊಟ್ಟು ಕೀಪಿಂಗ್ ಮಾಡಿದ್ದಾರೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಕಂಡಿದೆ. ಭಾರತ ಇನ್ನಿಂಗ್ಸ್ ನಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆದ ಬೌನ್ಸರ್ ಬಾಲ್ ರಿಷಬ್ ಪಂತ್ ತಲೆಗೆ ಬಿದ್ದ ಪರಿಣಾಮ ಅವರು ಗಾಯಗೊಂಡರು. ಹೀಗಾಗಿ ಪಂತ್‍ಗೆ ವಿಶ್ರಾಂತಿ ನೀಡಿ ಅವರ ಜವಾಬ್ದಾರಿಯನ್ನು ಕೆ.ಎಲ್.ರಾಹುಲ್‍ಗೆ ನೀಡಲಾಯಿತು.

    ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ 28 ರನ್ (33 ಎಸೆತ, 2 ಬೌಂಡರಿ, ಸಿಕ್ಸರ್) ಗಳಿಸಿದ್ದರು. ಉತ್ತಮ ಬ್ಯಾಟಿಂಗ್ ಆರಂಭಿಸಿದ್ದ ಪಂತ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ ನ 43ನೇ ಓವರ್ ನ 2ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 49.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತ್ತು. ಶಿಖರ್ ಧವನ್ 74 ರನ್ (91 ಎಸೆತ, 9 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ 47 ರನ್ (61 ಎಸೆತ, 4 ಬೌಂಡರಿ) ಹೊಡೆದಿದ್ದರು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಆ್ಯರನ್ ಫಿಂಚ್ 110 ರನ್ (114 ಎಸೆತ, 13 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ 128 ರನ್ (112 ಎಸೆತ, 17 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರಿಂದ 37.4 ಓವರ್ ನಲ್ಲಿ 258 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.

  • ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟಿಯರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ವೇಳೆ ಹಲವು ಆಟಗಾರರ ಹೆಸರು ಕೂಡ ನಟಿಯರೊಂದಿಗೆ ಕೇಳಿ ಬರುತ್ತದೆ. ಸದ್ಯ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಗೆಳತಿ, ನಟಿ ಊರ್ವಶಿ ರೌಟೇಲಾ ಅವರ ಮೊಬೈಲ್ ನಂಬರನ್ನು ತಮ್ಮ ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇತ್ತೀಚೆಗಷ್ಟೇ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಪ್ರೇಯಸಿ ಇಶಾ ನೇಗಿ ಅವರೊಂದಿಗೆ ಇರುವ ಫೋಟೋವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಾವಿಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿರುವುದಾಗಿ ತಿಳಿಸಿದ್ದರು. ಆದರೆ ಇದಾದ ಬಳಿಕ ರಿಷಬ್ ಪಂತ್ ಅವರ ಮಾಜಿ ಗೆಳತಿ, ನಟಿ ಊರ್ವಶಿ ರೌಟೇಲಾ ಮತ್ತೆ ರಿಷಬ್‍ರನ್ನು ಸಂಪರ್ಕ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

    ಊರ್ವಶಿ ರೌಟೇಲಾರೊಂದಿಗೆ ಮಾತನಾಡಲು ಇಷ್ಟಪಡದ ರಿಷಬ್, ತಮ್ಮ ಮೊಬೈಲ್‍ನಲ್ಲಿ ನಟಿಯ ಮೊಬೈಲ್ ಸಂಖ್ಯೆಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ಪರಸ್ಪರ ಚರ್ಚೆ ನಡೆಸಿಕೊಂಡ ಬಳಿಕವೇ ತಮ್ಮ ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ಊರ್ವಶಿ ರೌಟೇಲಾ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on

  • ಪ್ರೇಯಸಿ ಇಶಾ ನೇಗಿ ಜೊತೆ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮ

    ಪ್ರೇಯಸಿ ಇಶಾ ನೇಗಿ ಜೊತೆ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಟೂರ್ನಿಯ ಬಳಿಕ ತಮ್ಮ ಪ್ರೇಯಸಿಯನ್ನು ಪರಿಚಯಿಸಿದ್ದ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಸದ್ಯ ಹೊಸ ಸಂಭ್ರಮವನ್ನು ಪ್ರೇಯಸಿ ಇಶಾ ನೇಗಿ ಜೊತೆ ಆಚರಿಸಿಕೊಂಡಿದ್ದಾರೆ.

    ಹೊಸ ವರ್ಷದ ಸಂಭ್ರಮವನ್ನು ಮಂಜಿನ ಬೆಟ್ಟದ ಪ್ರದೇಶವೊಂದರಲ್ಲಿ ಆಚರಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಿಷಬ್, ‘ಯಾವಾಗ ನಾನು ನಿನ್ನೊಂದಿಗೆ ಇರುತ್ತೇನೋ, ಆಗ ನನ್ನನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇತ್ತ ಇಶಾ ನೇಗಿ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಫೋಟೋ ಶೇರ್ ಮಾಡಿ, ‘5 ಇಯರ್ ಅಂಡ್ ಕೌಂಟಿಂಗ್…. ಲವ್ ಯು ಸ್ಕೈ ಬಿಗ್ ಬೇಬಿ’ ಎಂದು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಇಬ್ಬರು ನಡುವಿನ ಪ್ರೀತಿ ಆರಂಭವಾಗಿ 5 ವರ್ಷವಾಗಿದೆ ಎಂಬರ್ಥವನ್ನು ನೀಡುತ್ತಿದೆ.

     

    View this post on Instagram

     

    5th year and counting…love you sky big bubbie ????

    A post shared by Isha Negi (@ishanegi_) on

    ಕ್ರಿಕೆಟ್ ಪಂದ್ಯಗಳಿಂದ ಲಭಿಸಿದ ವಿರಾಮದ ಸಮಯವನ್ನು ಗೆಳತಿಯೊಂದಿಗೆ ಕಳೆಯುತ್ತಿರುವ ರಿಷಬ್, ಆಗಾಗ ಇಬ್ಬರ ವಿಶೇಷ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತ ಅಭಿಮಾನಿಗಳು ಕೂಡ ಜೋಡಿಗೆ ಶುಭ ಕೋರಿ ಕಮೆಂಟ್ ಮಾಡುತ್ತಿದ್ದಾರೆ.

    ಮೊದಲ ಬಾರಿಗೆ ಇಶಾ ನೇಗಿ ಜೊತೆಗಿರುವ ಫೋಟೋ ಶೇರ್ ಮಾಡಿದ್ದ ರಿಷಬ್, ‘ನಾನು ನಿನ್ನನ್ನು ಸಂತೋಷ ಪಡಿಸುತ್ತೇನೆ. ಯಾಕೆಂದರೆ ನನ್ನ ಸಂತೋಷಕ್ಕೆ ನೀನು ಕಾರಣ’ ಎಂದು ಬರೆದುಕೊಂಡಿದ್ದರು.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on

  • ಶ್ರೇಯಸ್, ಪಂತ್ ಅರ್ಧಶತಕ- ಪೋಲಾರ್ಡ್ ಪಡೆಗೆ 288 ರನ್‍ಗಳ ಗುರಿ

    ಶ್ರೇಯಸ್, ಪಂತ್ ಅರ್ಧಶತಕ- ಪೋಲಾರ್ಡ್ ಪಡೆಗೆ 288 ರನ್‍ಗಳ ಗುರಿ

    ಚೆನ್ನೈ: ವೆಸ್ಟ್ ಇಂಡೀಸ್ ಸಮರ್ಪಕ ಬೌಲಿಂಗ್ ಹಾಗೂ ಫೀಲ್ಟಿಂಗ್ ಎದುರು ಭಾರತ ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಭಾರೀ ಕಷ್ಟಪಟ್ಟಿದೆ. ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅರ್ಧಶತಕದ ಸಹಾಯದಿಂದ ಕೊಹ್ಲಿ ಪಡೆದ ವಿಂಡೀಸ್ ತಂಡಕ್ಕೆ 288 ರನ್‍ಗಳ ಗುರಿ ನೀಡಿದೆ.

    ಚೆನ್ನೈನ ಚಪಾಕ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಏಕದಿನ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಶ್ರೇಯಸ್ ಅಯ್ಯರ್ 70 ರನ್, ರಿಷಭ್ ಪಂತ್ 71, ಕೇದಾರ್ ಜಾಧವ್ 40 ರನ್‍ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಸಮರ್ಪಕ ಬೌಲಿಂಗ್‍ನಿಂದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ  ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾರನ್ನು ಕಟ್ಟಿ ಹಾಕಿತು. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್‍ನಿಂದ ಮಿಂಚಿದ್ದ ಕೆ.ಎಲ್.ರಾಹುಲ್ (6 ರನ್) ಬಹುಬೇಗ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿ ಕೊಹ್ಲಿ ಒಂದು ಬೌಂಡರಿ ಬಾರಿಸಿ ವಿಕೆಟ್ ಒಪ್ಪಿಸಿದರು. ಪರಿಣಾಮ ಇನ್ನಿಂಗ್ಸ್ ನ 7ನೇ ಓವರ್ ಮುಕ್ತಾಯಕ್ಕೆ ಭಾರತವು ಎರಡು ವಿಕೆಟ್ ನಷ್ಟಕ್ಕೆ 25 ರನ್ ಪೇರಿಸಲು ಶಕ್ತವಾಗಿತ್ತು.

    ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಂಡು ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‍ಗೆ ಸಾಥ್ ನೀಡಿದರು. ಈ ಜೋಡಿಯು ಮೂರನೇ ವಿಕೆಟ್ ನಷ್ಟಕ್ಕೆ 55 ರನ್‍ಗಳ ಜೊತೆಯಾಟ ಕಟ್ಟಿ ತಂಡದ ಮೊತ್ತವನ್ನು ಏರಿಸಿತು. ಆದರೆ ಇನ್ನಿಂಗ್ಸ್ ನ 18ನೇ ಓವರ್ ನ ಮೊದಲ ಎಸೆತದಲ್ಲಿಯೇ ರೋಹಿತ್ ವಿಂಡೀಸ್ ನಾಯಕಪೋಲಾರ್ಡ್ ಗೆ ಕ್ಯಾಚ್ ಒಪ್ಪಿಸಿದರು. 56 ಎಸೆತಗಳಲ್ಲಿ ರೋಹಿತ್ ಶರ್ಮಾ 6 ಬೌಂಡರಿ ಸೇರಿ 36 ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಹಿಟ್‍ಮ್ಯಾನ್ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇದುವರೆಗೂ 212 ಇನ್ನಿಂಗ್ಸ್ ಗಳಲ್ಲಿ (27 ಶತಕ, 42 ಅರ್ಧಶತಕ) 8,722 ರನ್ ದಾಖಲಿಸಿದ್ದಾರೆ.

    ರೋಹಿತ್ ವಿಕೆಟ್ ಬೆನ್ನಲ್ಲೇ ಮೈದಾನಕ್ಕಿಳಿದ ರಿಷಭ್ ಪಂತ್ ವಿಕೆಟ್ ಕಾಯ್ದುಕೊಂಡು ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್‍ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 24ನೇ ಓವರ್ ನ 3ನೇ ಎಸೆತದಲ್ಲಿ ಪಂತ್ ಎರಡು ರನ್ ಗಳಿಸುವ ಮೂಲಕ ಭಾರತವು 100 ರನ್ ಪೇರಿಸಿತು. ನಂತರದ ಎಸೆತವನ್ನು ಪಂತ್ ಬೌಂಡರಿಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಲು ಆರಂಭಿಸಿದರು.

    ಪಂತ್-ಅಯ್ಯರ್ ಆಸರೆ:
    ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಅರ್ಧಶತಕ (70 ಎಸೆತ) ಪೂರೈಸಿದರು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ 5ನೇ ಅರ್ಧಶತಕ ಇದಾಗಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟಿಂಗ್ ತೋರಿದ ಪಂತ್ ಕೂಡ ಅರ್ಧಶತಕ (49 ಎಸೆತ) ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪಂತ್ ಅವರ ಚೊಚ್ಚಲ ಅರ್ಧಶತಕವಾಗಿದೆ.

    ಇನ್ನಿಂಗ್ಸ್ ನ 36ನೇ ಓವರ್ 3ನೇ ಎಸೆತದಲ್ಲಿ ಪೋಲಾರ್ಡ್ ಬೌಲಿಂಗ್ ವೇಳೆ ಪಂತ್ ನೀಡಿದ್ದ ಕ್ಯಾಚ್ ಅನ್ನು ಶೆಲ್ಡನ್ ಕಾಟ್ರೆಲ್ ಕೈಚೆಲ್ಲಿದರು. ಜೀವದಾನ ಪಡೆದ ಪಂತ್ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್ ನಷ್ಟಕ್ಕೆ 114 ರನ್‍ಗಳ ಜೊತೆಯಾಟ ಕಟ್ಟಿಕೊಟ್ಟು ತಂಡದ ಮೊತ್ತವನ್ನು ಏರಿಸಿತು. ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 36ನೇ ಓವರ್ ನಲ್ಲಿ ವಿಕೆಟ್ ನೀಡಿದರು. 88 ಎಸೆತಗಳಲ್ಲಿ ಶ್ರೇಯಸ್ (5 ಬೌಂಡರಿ, ಸಿಕ್ಸ್) 70 ರನ್ ಗಳಿಸಿ ಪೆವಿಲಿಯನ್‍ಗೆ ತರೆಳಿದರು.

    ಶ್ರೇಯಸ್ ಅಯ್ಯರ್ ಬೆನ್ನಲ್ಲೇ 69 ಎಸೆತಗ್ಳಲ್ಲಿ (7 ಬೌಂಡರಿ, ಸಿಕ್ಸ್) 71 ರನ್ ಗಳಿಸಿದ್ದ ಪಂತ್ ಕೂಡ ವಿಕೆಟ್ ಒಪ್ಪಿಸಿದರು. 40ನೇ ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ 210 ರನ್ ಪೇರಿಸಿತು. ಬಳಿಕ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ 6ನೇ ವಿಕೆಟ್ ನಷ್ಟಕ್ಕೆ 59 ರನ್ ಗಳ ಜೊತೆಯಾಟ ಕಟ್ಟಿಕೊಟ್ಟರು. ಇನ್ನಿಂಗ್ಸ್ ನ 47ನೇ ಓವರ್ ನ 3ನೇ ಎಸೆತದಲ್ಲಿ ಕೇದಾರ್ ಜಾಧವ್ (40 ರನ್) ಹಾಗೂ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜಾ (21 ರನ್) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ನಲ್ಲಿ ಶಿವಂ ದುಬೆ (9 ರನ್) ಔಟಾದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು.

    9 ಸರಣಿಯಲ್ಲಿ ಭಾರತಕ್ಕೆ ಜಯ:
    ಕಳೆದ 13 ವರ್ಷಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 9 ಸರಣಿಗಳು ನಡೆದಿವೆ. ಎಲ್ಲ ಸರಣಿಯಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 2006ರಿಂದ ಉಭಯ ದೇಶಗಳ ನಡುವೆ 39 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 23 ಪಂದ್ಯ ಗೆದ್ದರೆ, 10 ಪಂದ್ಯದಲ್ಲಿ ಸೋಲು ಕಂಡಿದೆ. 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ಸೋಲಿಸಿತ್ತು. ಇತ್ತೀಚೆಗೆ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-1 ಅಂತರದಿಂದ ಮಣಿಸಿತು.

    ಏಕದಿನದಲ್ಲಿ ಸಮಬಲ:
    ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಈವರೆಗೆ 130 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಉಭಯ ತಂಡಗಳು ತಲಾ 62 ಪಂದ್ಯಗಳನ್ನು ಗೆದ್ದರೆ, 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಪೋರ್ಟ್ ಆಫ್ ಸ್ಪೇನ್‍ನಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‍ಗಳಿಂದ ವಿಂಡೀಸ್ ತಂಡವನ್ನು ಸೋಲಿಸಿತ್ತು. ಅದೇ ಸಮಯದಲ್ಲಿ, ಭಾರತವು 2019ರಲ್ಲಿ ಇದುವರೆಗೆ ಒಟ್ಟು 25 ಏಕದಿನ ಪಂದ್ಯಗಳಲ್ಲಿ 17 ಪಂದ್ಯಗಳನ್ನು ಗೆದ್ದಿದ್ದರೆ, 7 ಸೋಲು ಕಂಡಿದೆ. ಈ ಅವಧಿಯಲ್ಲಿ ವೆಸ್ಟ್ ಇಂಡೀಸ್ 25 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದ್ದರೆ, 13 ಪಂದ್ಯಗಳು ಸೋತಿತ್ತು.