Tag: rioters

  • ಗಲಭೆಕೋರರು 1 ಸಾವಿರ ಕಿಮೀ ದೂರ ಹೋದ್ರೂ ಬಂಧಿಸುತ್ತೇವೆ: ಪ್ರವೀಣ್ ಸೂದ್

    ಗಲಭೆಕೋರರು 1 ಸಾವಿರ ಕಿಮೀ ದೂರ ಹೋದ್ರೂ ಬಂಧಿಸುತ್ತೇವೆ: ಪ್ರವೀಣ್ ಸೂದ್

    ಕೋಲಾರ: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಗಳಲ್ಲಿ ಭಾಗಿಯಾದವರು ಎಷ್ಟೇ ದೂರ ಹೋದರು ಸಹ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

    ಕೋಲಾರಕ್ಕೆ ಭೇಟಿ ನೀಡಿ ನಗರದ ಹೊರ ವಲಯದ ಟಮಕ ಬಳಿಯ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿ ನಂತರ ಕೋಲಾರಕ್ಕೆ ಬಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಿಮ್ಮ ಕೋಲಾರವೇ ಅಲ್ಲ 1 ಸಾವಿರ ಕಿಮೀ ಹೋಗಿದ್ದರೂ ಸಹ ಅವರನ್ನು ಬಂಧಿಸಲಾಗುವುದು ಎಂದು ಹೇಳಿದರು.

    ಅಂದು ರಾತ್ರಿ ಗಲಭೆಯಲ್ಲಿ ತೊಡಗಿದವರ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರು ಕೋಲಾರದಲ್ಲಿ ತಲೆ ಮರೆಸಿಕೊಂಡಿರುವ ಕುರಿತು ವರದಿಗಳು ಬಂದಿವೆ. ಕೋಲಾರ ಅಲ್ಲ ರಾಜ್ಯದ ಯಾವುದೇ ಮೂಲೆಗೆ ಹೋದರೂ ಸಹ ಬಿಡುವುದಿಲ್ಲ. ಅವರನ್ನು ಬಂಧಿಸಲಾಗುವುದು ಎಂದರು. ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲಾಗುವುದು, ಈಗಾಗಲೇ ಪೊಲೀಸ್ ಪೇದೆ ಹಾಗೂ ಪಿಎಸ್‍ಐ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಮುಂದಿನ ತಿಂಗಳು ಪರೀಕ್ಷೆ ನಡೆಯುತ್ತದೆ ಎಂದು ತಿಳಿಸಿದರು.

    ನರಸಾಪುರ ಸೇರಿದಂತೆ ಕೋಲಾರ ಜಿಲ್ಲೆಯ ಕೆಲ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಚಿಂತನೆ ನಡೆಯುತ್ತಿದೆ. ರಾಜ್ಯದಲ್ಲಿ ಕೋವಿಡ್ ಆರಂಭ ನಂತರ ಪೊಲೀಸ್ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದೆ ಜೊತೆಗೆ ಕೆಲವರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಅವರಿಗೆ ಪೊಲೀಸ್ ಇಲಾಖೆ ಕೃತಜ್ಞತೆ ತಿಳಿಸುತ್ತೇವೆ ಎಂದರು. ಇದೆ ವೇಳೆ ಕೇಂದ್ರ ವಲಯದ ಐಜಿ ಸೀಮಂತ್ ಕುಮಾರ್ ಸಿಂಗ್, ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ, ಕೆಜಿಎಫ್ ಎಸ್‍ಪಿ ಇಲಕ್ಕೀಯಾ ಕರುಣಾಗರನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.