Tag: RIMS

  • ರಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು- ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

    ರಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು- ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

    ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿ ಕ್ಯಾಮೆರಾ ಜಖಂಗೊಳಿಸಿದ್ದಾರೆ. ರಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕುರಿತ ವರದಿ ಮಾಡಲು ಮುಂದಾಗಿದ್ದಕ್ಕೆ ಗೂಂಡಾವರ್ತನೆ ತೋರಿದ್ದಾರೆ.

    ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ 21 ದಿನಗಳ ಹೆಣ್ಣು ಮಗು ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣಬಿಟ್ಟಿದೆ. ಶಕ್ತಿನಗರದ ನಿವಾಸಿಗಳಾದ ಮರಿಯಪ್ಪ ಜಮಸಮ್ಮ ದಂಪತಿಯ ಮಗು ಮಲಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಹೇಳಿದಂತೆ ಪೋಷಕರು ಖಾಸಗಿ ಪ್ರಯೋಗಾಲಯದಲ್ಲೇ ಸ್ಕ್ಯಾನಿಂಗ್, ಎಕ್ಸ್ ರೇ, ರಕ್ತಪರೀಕ್ಷೆಯನ್ನೂ ಮಾಡಿಸಿದ್ರು. ಆದ್ರೆ ಸಮಯಕ್ಕೆ ಸರಿಯಾಗಿ ಬಂದು ಶಿಶುವನ್ನ ವೈದ್ಯರು ತಪಾಸಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

    ಎಲ್ಲಾ ಪರೀಕ್ಷೆಗಳ ವರದಿಯನ್ನ ಪರಿಶೀಲಿಸಿ ವೈದ್ಯರು ಸಮಸ್ಯೆಯಿಲ್ಲ ಅಂತ ಹೇಳಿದ್ದರು. ಆದ್ರೆ ಏಕಾಏಕಿ ಮಗು ಪ್ರಾಣಬಿಟ್ಟಿದೆ ಅಂತ ಪೋಷಕರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ವರದಿಗೆ ತೆರಳಿದ ಮಾಧ್ಯಮದವರ ಮೇಲೂ ಆಸ್ಪತ್ರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕ್ಯಾಮೆರಾ ಕಿತ್ತುಕೊಂಡು ಹಾಳು ಮಾಡಿದ್ದಾರೆ.

     

  • 14 ವರ್ಷಕ್ಕೆ ತಾಯಿಯಾದ ಬಾಲಕಿ: ಇಬ್ಬರು ಆರೋಪಿಗಳ ಬಂಧನ

    14 ವರ್ಷಕ್ಕೆ ತಾಯಿಯಾದ ಬಾಲಕಿ: ಇಬ್ಬರು ಆರೋಪಿಗಳ ಬಂಧನ

    ರಾಯಚೂರು: ಮಾನ್ವಿ ತಾಲೂಕಿನ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿ ಕಾಮುಕರ ಕಾಟಕ್ಕೆ ಏನೂ ಅರಿಯದ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ.

    ಬಾಲಕಿಗೆ ಎಂಟು ತಿಂಗಳು ತುಂಬಿದಾಗ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದು ಬಯಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಗಂಡು ಮಗು ಜನಿಸಿದೆ. ಬಾಲಕಿ ಹಾಗೂ ಶಿಶು ಆರೋಗ್ಯವಾಗಿದ್ದಾರೆ. ಆದ್ರೆ ಈಗ ಬಾಲಕಿಯ ಪೋಷಕರು ಮಗಳು ಬೇಕಿಲ್ಲ, ಮೊಮ್ಮಗನೂ ಬೇಕಿಲ್ಲ ಅಂತ ದೂರವಿಟ್ಟಿದ್ದಾರೆ. ಬಾಲಕಿ ಮಾತ್ರ ತನ್ನ ಮಗು ಬೇಕು ಅಂತ ಹಂಬಲಿಸುತ್ತಿದ್ದಾಳೆ.

    ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿಗಳು ತಾಯಿ ಮಗುವನ್ನ ರಾಯಚೂರಿನ ಬಾಲಮಂದಿರಕ್ಕೆ ಸೇರಿಸಿದ್ದಾರೆ. ರಾಯಚೂರಿನಲ್ಲಿ ತಾಯಿ-ಮಕ್ಕಳ ಆರೈಕೆ ಕೇಂದ್ರವಿಲ್ಲದ ಕಾರಣ ಬಳ್ಳಾರಿ ಅಥವಾ ಬಾಗಲಕೋಟಿಗೆ ಬಾಲಕಿ ಹಾಗೂ ಶಿಶುವನ್ನ ಕಳುಹಿಸುವುದಾಗಿ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಜಯಶ್ರಿ ಚನ್ನಾಳ ಹೇಳಿದ್ದಾರೆ.

    ಮದುವೆಯಾಗುವುದಾಗಿ ಪುಸಲಾಯಿಸಿ ಗ್ರಾಮದ ವಿರೇಶ್ ಹಾಗೂ ಶಿವರಾಜ್ ಎಂಬವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಗರ್ಭಿಣಿಯಾದಾಗಲೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಗರ್ಭ ತೆಗೆಸಲು ಪೋಷಕರು ಪ್ರಯತ್ನಿಸಿದಾಗ ಎಂಟು ತಿಂಗಳು ತುಂಬಿರುವುದು ತಾಯಿ ಜೀವಕ್ಕೆ ಕುತ್ತು ತರಬಹುದು ಅಂತ ಹೆದರಿ ಸುಮ್ಮನಾಗಿದ್ದಾರೆ.

    ಇಬ್ಬರು ಆರೋಪಿಗಳ ವಿರುದ್ಧ ಏಪ್ರಿಲ್ 2 ರಂದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

  • ರಿಮ್ಸ್ ನಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಮಗು ಪತ್ತೆ

    ರಿಮ್ಸ್ ನಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಮಗು ಪತ್ತೆ

    ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಶಿಶು ಕೊನೆಗೂ ಪತ್ತೆಯಾಗಿದೆ. ಹಣದ ಆಸೆಗೆ ಶಿಶುವನ್ನ ಕದ್ದಿದ್ದ ಹಾಗೂ ಮಗುವನ್ನ ಪಡೆದಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.

    ಮಾರ್ಚ್ 28 ರಂದು ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಮಗು ಒಂದು ವಾರದ ಬಳಿಕ ನಗರದ ಜಲಾಲನಗರದಲ್ಲಿ ಪತ್ತೆಯಾಗಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವನ್ನ ಬಂಡವಾಳ ಮಾಡಿಕೊಂಡ ಆಟೋಚಾಲಕ ಚಾಂದ್ ಪಾಶ, ಶಿಶುವನ್ನ ಕದ್ದು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಸುಮಾರು ವರ್ಷಗಳಿಂದ ಮಕ್ಕಳಾಗದ ಜಲಾಲನಗರದ ಇಂದ್ರಮ್ಮ ಗಂಡು ಮಗುವನ್ನ ಖರೀದಿ ಮಾಡಿದ್ದರು. ಈಗ ಈ ಇಬ್ಬರೂ ಪೊಲೀಸರ ಅಥಿತಿಗಳಾಗಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಮಗುವನ್ನ ಚಾಂದ್‍ಪಾಶ ಕೈಗೆ ಯಾರು ಕೊಟ್ಟರು ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ.

    ದೇವದುರ್ಗದ ಮಲ್ಲಾಪುರ ಗ್ರಾಮದ ಯಲ್ಲಮ್ಮ ತಿಮ್ಮಣ್ಣ ದಂಪತಿಯ ಮೂರು ದಿನದ ನವಜಾತ ಶಿಶುವನ್ನ ಆಸ್ಪತ್ರೆಯಿಂದಲೇ ಕಳ್ಳತನ ಮಾಡಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಶಿಶು ಅಪಹರಣದ ಬಗ್ಗೆ ಪ್ರಕರಣ ದಾಖಲಾಗಿತ್ತು.

    ಈಗ ಪತ್ತೆಯಾಗಿರುವ ಶಿಶು ಆರೋಗ್ಯವಾಗಿದ್ದು ರಿಮ್ಸ್ ಆಸ್ಪತ್ರೆಯ ಸೂಕ್ಷ್ಮ ನಿಗಾ ಘಟಕದಲ್ಲಿಡಲಾಗಿದೆ.

    https://www.youtube.com/watch?v=aIVf7pjbNXQ

  • ಹುಚ್ಚು ನಾಯಿ ಕಚ್ಚಿ ಮಕ್ಕಳಿಗೆ ಗಂಭೀರ ಗಾಯ

    ಹುಚ್ಚು ನಾಯಿ ಕಚ್ಚಿ ಮಕ್ಕಳಿಗೆ ಗಂಭೀರ ಗಾಯ

    ರಾಯಚೂರು: ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಇಬ್ಬರು ಮಕ್ಕಳಿಗೆ ಕಡಿದು ಗಂಭೀರ ಗಾಯಗೊಳಿಸಿದೆ.

    6 ವರ್ಷದ ಅಜಯ್ ಮತ್ತು 4 ವರ್ಷದ ಕಾವೇರಿ ಹುಚ್ಚು ನಾಯಿ ಕಡಿತಕ್ಕೊಳಗಾಗಿರುವ ಮಕ್ಕಳು. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿದ ಹುಚ್ಚುನಾಯಿ ಸಿಕ್ಕಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದೆ. ಅಜಯ್‍ನ ಕುತ್ತಿಗೆ ಭಾಗಕ್ಕೆ ಬಲವಾಗಿದೆ ಕಚ್ಚಿದೆ. ಕಾವೇರಿಯ ತಲೆ ಹಾಗೂ ಮುಖಕ್ಕೆ ಕಚ್ಚಿದ್ದು ಮಕ್ಕಳ ಸ್ಥಿತಿ ಗಂಭೀರವಾಗಿದೆ.

    ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಹುಚ್ಚುನಾಯಿ ಗ್ರಾಮದ ಸುತ್ತಮುತ್ತ ಇನ್ನೂ ಓಡಾಡಿಕೊಂಡಿದ್ದು ಗ್ರಾಮದ ಜನರು ಭಯಭೀತರಾಗಿದ್ದಾರೆ. ತಕ್ಷಣ ಸಂಬಂಧಪಟ್ಟವರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.