Tag: RIMS

  • ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ

    ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವುದಾಗಿ ವೈದ್ಯರು (Doctors) ತಿಳಿಸಿದ್ದಾರೆ.

    ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ (Health Department) ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದೆ. ಗ್ರಾಮದ ವಾತಾವರಣ ಬಗ್ಗೆ ಅಧ್ಯಯನವನ್ನೂ ನಡೆಸಿದೆ. ಇದನ್ನೂ ಓದಿ: ಸತತ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಭೂಪೇಂದ್ರ ಪಟೇಲ್

    5 ವರ್ಷದ ಮಗುವಿಗೆ ಜ್ವರ ಹೆಚ್ಚಾಗಿದ್ದರಿಂದ ರಾಯಚೂರಿನಿಂದ ಬಳ್ಳಾರಿಯ ರಿಮ್ಸ್ (RIMS) ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣಗಳು ಇತ್ತೆಂದು ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಎಲ್ಲವೂ ನೆಗೆಟಿವ್ ಬಂದಿದ್ದರಿಂದ ಮಗುವಿನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿತು. ಆದ್ರೆ ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೂ ಇರಲಿಲ್ಲ. ವರದಿ ಕೈ ಸೇರುವಷ್ಟರಲ್ಲಿ ಸಂಪೂರ್ಣ ಗುಣಮುಖವಾಗಿತ್ತು. ಆರೋಗ್ಯ ಇಲಾಖೆ ಮತ್ತೊಮ್ಮೆ ಕಳುಹಿಸಿದ್ದ ಬಾಲಕಿ ಹಾಗೂ ಪೋಷಕರ ಮಾದರಿಗಳು ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ.

    ಸದ್ಯ ಮಗು ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. ಝಿಕಾ ವೈರಸ್ ಪತ್ತೆ ಹಿನ್ನಲೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸಾಂಕ್ರಾಮಿಕ ರೋಗ ತಜ್ಞರ ವಿಶೇಷ ತಂಡ ಕೋಲ್ಕತ್ತಾದಿಂದ ಬಂದಿದ್ದು ಪರಿಶೀಲನೆ ನಡೆಸಿದೆ. ಮಗು ವಾಸವಾದ ಸ್ಥಳ ಹಾಗೂ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳು ಸ್ಥಳೀಯರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ಝಿಕಾ ವೈರಸ್ ಲಕ್ಷಣಗಳು: ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿ ಜ್ವರ, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಮತ್ತು ಸ್ನಾಯು ನೋವುಗಳು ಕಂಡುಬರುತ್ತದೆ. ಇದು ಸೊಳ್ಳೆ ಕಡಿತದಿಂದ ಉಂಟಾಗುವ ರೋಗವಾಗಿದೆ. ಗರ್ಭಿಣಿಯರು ಹೆಚ್ಚಾಗಿ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಅಂಬ್ಯುಲೆನ್ಸ್ ಇಲ್ಲದೆ ರಿಮ್ಸ್ ಆಸ್ಪತ್ರೆ ಮುಂದೆ ನರಳಾಡಿದ ರೋಗಿ

    ಅಂಬ್ಯುಲೆನ್ಸ್ ಇಲ್ಲದೆ ರಿಮ್ಸ್ ಆಸ್ಪತ್ರೆ ಮುಂದೆ ನರಳಾಡಿದ ರೋಗಿ

    ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆ ಮುಂದೆ ಅಂಬ್ಯುಲೆನ್ಸ್ ಇಲ್ಲದೆ ರೋಗಿಯೊಬ್ಬ ಸುಮಾರು ಅರ್ಧಗಂಟೆ ಕಾಲ ಫುಟ್‍ಪಾತ್ ಮೇಲೆ ನರಳಾಡಿದ ಘಟನೆ ನಡೆದಿದೆ.

    ಯಾದಗಿರಿ ಜಿಲ್ಲೆಯಿಂದ ರಿಮ್ಸ್‌ಗೆ ಬಂದಿದ್ದ ಸುಮಾರು 38 ವರ್ಷ ಪ್ರಾಯದ ನಾಗರಾಜ್ ವೈದ್ಯರ ಸಲಹೆ ಮೇರೆಗೆ ಬೇರೆ ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಇಲ್ಲದೆ ಆಸ್ಪತ್ರೆ ಹೊರಗಡೆಯೇ ಸುಮಾರು ಹೊತ್ತು ನರಳಾಡಬೇಕಾಯಿತು. ಇದನ್ನೂ ಓದಿ: ನಾನು 35 ಅಂಕ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ

    ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿ ರಿಮ್ಸ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದ, ಓಪೆಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ರೋಗಿಗೆ ಹೋಗಲು ಸಾಧ್ಯವಾಗಿಲ್ಲ, ಆಸ್ಪತ್ರೆ ಹೊರಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾದರೂ ಕೂಡ ಅಂಬ್ಯುಲೆನ್ಸ್ ಬಾರದ ಹಿನ್ನೆಲೆ ರೋಗಿ ಫುಟ್‍ಪಾತ್ ಮೇಲೆ ಮಲಗಿದ್ದ. ಇದನ್ನು ಗಮನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಬಳಿಕ ಎಚ್ಚೆತ್ತ ವೈದ್ಯಾಧಿಕಾರಿಗಳು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ರೋಗಿಯನ್ನು ಓಪೆಕ್ ಆಸ್ಪತ್ರೆಗೆ ರವಾನಿಸಿದರು. ಇದನ್ನೂ ಓದಿ: ನಮ್ಮ ಹಾಜರಿ ಕ್ಯಾಂಟೀನ್‍ನಲ್ಲೇ ಹೆಚ್ಚಾಗಿರುತ್ತಿತ್ತು ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ

  • ರಾಯಚೂರು ನಗರಸಭೆಯಿಂದ ರಿಮ್ಸ್‌ಗೆ  2ಡಿ ಎಕೋ ಯಂತ್ರ ದೇಣಿಗೆ

    ರಾಯಚೂರು ನಗರಸಭೆಯಿಂದ ರಿಮ್ಸ್‌ಗೆ 2ಡಿ ಎಕೋ ಯಂತ್ರ ದೇಣಿಗೆ

    – ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆ

    ರಾಯಚೂರು: ಕೊರೊನಾ ಮೂರನೇ ಅಲೆ ಹಿನ್ನೆಲೆ ರಾಯಚೂರು ನಗರಸಭೆ ನಗರದ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆಗೆ ಪಿಡಿಯಾಟ್ರಿಕ್ 2ಡಿ ಎಕೋ ಯಂತ್ರವನ್ನು ದೇಣಿಗೆಯಾಗಿ ನೀಡಿದೆ.

    ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಇದುವರೆಗೂ ಅಗತ್ಯ ಯಂತ್ರೋಪಕರಣಗಳ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ 2ಡಿ ಎಕೋ ಯಂತ್ರದ ಕೊರತೆ ಹಿನ್ನೆಲೆ ನಗರಸಭೆ ದೇಣಿಗೆ ನೀಡಿದೆ.

    ಕೋವಿಡ್ ಬಂದು ಗುಣಮುಖರಾದ ಮಕ್ಕಳಲ್ಲಿ ಎಮ್‍ಐಎಸ್‍ಸಿ ತೊಂದರೆ ಕಾಣಿಸಿಕೊಂಡಾಗ ಹೃದಯ ಸಂಬಂಧಿ ತೊಂದರೆಗಳು ಉಂಟಾಗುತ್ತವೆ. ಮಕ್ಕಳಿಗೆ ಸ್ಕ್ಯಾನ್‍ಮಾಡಲು ಯಂತ್ರೋಪಕರಣದ ಕೊರತೆಯಿತ್ತು. ಮೂರನೇ ಅಲೆ ಆತಂಕದ ಹಿನ್ನೆಲೆ ಸರ್ಕಾರಕ್ಕೂ ಯಂತ್ರೋಪಕರಣಗಳಿಗಾಗಿ ಮನವಿ ಮಾಡಲಾಗಿದೆ. ಸರ್ಕಾರದಿಂದ ಇನ್ನೂ ಅಗತ್ಯ ಯಂತ್ರೋಪಕರಣಗಳು ಸರಬರಾಜು ಆಗಿಲ್ಲ. ಈ ಮಧ್ಯೆ ಆಸ್ಪತ್ರೆ ಆಡಳಿತ ಮಂಡಳಿ ಮನವಿ ಹಿನ್ನೆಲೆ ನಗರಸಭೆ 13 ಲಕ್ಷ 50 ಸಾವಿರ ಮೌಲ್ಯದ ಯಂತ್ರವನ್ನು ದೇಣಿಗೆಯಾಗಿ ನೀಡಿದೆ. ಇದನ್ನೂ ಓದಿ: ಕೊರೊನಾ ಹೆಚ್ಚಳ- ಉತ್ತರ ಕನ್ನಡ ಗಡಿಗಳಲ್ಲಿ ಕಟ್ಟೆಚ್ಚರ

    ಮಕ್ಕಳು ದಾಖಲಾದ ಬೆಡ್‍ವರೆಗೆ ತೆಗೆದುಕೊಂಡು ಹೋಗಬಹುದಾದ ಚಾಲಿತ ಯಂತ್ರ ಇದಾಗಿರುವುದರಿಂದ ಹೆಚ್ಚು ಅನುಕೂಲಕರವಾಗಿದೆ ಎಂದು ರಿಮ್ಸ್ ವೈದ್ಯರು ತಿಳಿಸಿದ್ದು, ನವಜಾತ ಶಿಶುವಿನಿಂದ 18 ವರ್ಷ ವಯಸ್ಸಿನವರ ಹೃದಯ ಸಮಸ್ಯೆ ಪರೀಕ್ಷಿಸಲು ಈ ಯಂತ್ರ ಬಳಕೆಯಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

  • ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ HLH ಸಮಸ್ಯೆ ರಾಯಚೂರಿನಲ್ಲಿ ಪತ್ತೆ

    ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ HLH ಸಮಸ್ಯೆ ರಾಯಚೂರಿನಲ್ಲಿ ಪತ್ತೆ

    ರಾಯಚೂರು: ಕೋವಿಡ್ ಸೋಂಕು ತಗುಲಿದ ಮಕ್ಕಳಲ್ಲಿ ಗುಣಮುಖರಾದ ಮೂರ್ನಾಲ್ಕು ವಾರಗಳ ಬಳಿಕ ಕಾಣಿಸಿಕೊಳ್ಳುವ ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್‍ಎಲ್‍ಎಚ್) ಸಮಸ್ಯೆಯ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಎಚ್‍ಎಲ್‍ಎಚ್ ನಿಂದ ಬಳಲುತ್ತಿದ್ದ 5 ವರ್ಷದ ಮಗು ಈಗ ಗುಣಮುಖವಾಗಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣಕ್ಕೆ ವೈದ್ಯರ ಚಿಕಿತ್ಸೆ ಯಶಸ್ವಿಯಾಗಿದೆ. ನಗರದ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಣ್ಣು ಮಗು ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ.

    ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ (ಎಚ್‍ಎಲ್‍ಎಚ್) ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ಬಿಕ್ಕಟ್ಟಾಗಿದೆ. ವಿಪರೀತ ಜ್ವರ, ವಾಂತಿ ಭೇದಿ, ಹೊಟ್ಟೆನೋವು ಇದರ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ರಿಮ್ಸ್ ನ ಪಿಐಸಿಯು ನಲ್ಲಿ ಚಿಕಿತ್ಸೆ ಪಡೆದ ಮಗು ಈಗ ಸಂಪೂರ್ಣ ಗುಣಮುಖಳಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಇನ್ನೂ ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆ ಮಲ್ಟಿಪಲ್ ಇಂಫ್ಲಾಮೆಟರಿ ಸಿಂಡ್ರೋಮ್ (ಎಂಐಎಸ್) ಜಿಲ್ಲೆಯ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಎರಡು ಎಂಐಎಸ್ ಪ್ರಕರಣಗಳಲ್ಲೂ ಮಕ್ಕಳು ಗುಣಮುಖರಾಗಿದ್ದಾರೆ. ಸಮಸ್ಯೆಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮಕ್ಕಳು ಬೇಗ ಗುಣಮುಖರಾಗುತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ.

  • ಕೊರೊನಾ ಭೀತಿಯಲ್ಲಿ ರಿಮ್ಸ್ ಆಸ್ಪತ್ರೆ – ಕ್ವಾರಂಟೈನ್‍ನಲ್ಲಿ ವೈದ್ಯ ಸೇರಿ 10 ಸಿಬ್ಬಂದಿ

    ಕೊರೊನಾ ಭೀತಿಯಲ್ಲಿ ರಿಮ್ಸ್ ಆಸ್ಪತ್ರೆ – ಕ್ವಾರಂಟೈನ್‍ನಲ್ಲಿ ವೈದ್ಯ ಸೇರಿ 10 ಸಿಬ್ಬಂದಿ

    ರಾಯಚೂರು: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ರಿಮ್ಸ್ ಸಿಬ್ಬಂದಿಗೆ ಸುರಕ್ಷತೆ ಆತಂಕ ಎದುರಾಗಿದೆ. ಹೀಗಾಗಿ ಓರ್ವ ಇಂಟರ್ನ್ ವೈದ್ಯ ಸೇರಿ 10ಕ್ಕೂ ಹೆಚ್ಚು ಸಿಬ್ಬಂದಿ ಓಪೆಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ.

    ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಗೆ ಸುರಕ್ಷತೆಯಿಲ್ಲದೆ ಚಿಕಿತ್ಸೆ ನೀಡಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಸಿಬ್ಬಂದಿ ಕ್ವಾರಂಟೈನ್‍ಗೆ ಹೋಗಿದ್ದಾರೆ. ಇದುವರೆಗೆ ಕೇವಲ ಸಾಧಾರಣ ಮಾಸ್ಕ್ ಮಾತ್ರ ನೀಡಿದ್ದ ವೈದ್ಯಕೀಯ ಬೋಧಕ ಆಸ್ಪತ್ರೆ ಸಿಬ್ಬಂದಿ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವಹಿಸಿತ್ತು. ಇದರಿಂದ ಎನ್ 95 ಮಾಸ್ಕ್ ನೀಡುವಂತೆ ಇಂಟರ್ನ್ ವೈದ್ಯರು ಹಾಗೂ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ.

    ಸುರಕ್ಷತೆ ನೀಡದಿದ್ದರೆ ಕೆಲಸಕ್ಕೆ ಗೈರಾಗುವುದಾಗಿ ಸಿಬ್ಬಂದಿ ಹೇಳಿದ್ದರಿಂದ ಆಸ್ಪತ್ರೆ ಹಿರಿಯ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ. ಎಲ್ಲ ಸಿಬ್ಬಂದಿಗೂ ಎನ್ 95 ಮಾಸ್ಕ್ ಕೊಡುವುದಾಗಿ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರೆ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಗ್ಲೌಸ್ ಹಾಗೂ ಎನ್ 95 ಮಾಸ್ಕ್ ನೀಡಿಲ್ಲ.

    ಜಿಲ್ಲೆಯಲ್ಲಿ ಒಟ್ಟು 50 ಜನ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದು, 30 ಜನರ ವರದಿ ಪ್ರಯೋಗಾಲಯದಿಂದ ಬರುವುದು ಬಾಕಿಯಿದೆ. ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ.

  • ರಾಯಚೂರಿನ ರಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಇಡೀ ರಾತ್ರಿ ಪರದಾಡಿದ ಗರ್ಭಿಣಿ

    ರಾಯಚೂರಿನ ರಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಇಡೀ ರಾತ್ರಿ ಪರದಾಡಿದ ಗರ್ಭಿಣಿ

    ರಾಯಚೂರು: ಯಾವುದೇ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಬಂದ್ ಮಾಡಿದರೆ ಲೈಸೆನ್ಸ್ ರದ್ದು ಮಾಡುತ್ತೇನೆ ಅಂತ ಆರೋಗ್ಯ ಸಚಿವರೇನೋ ಖಡಕ್ ಆದೇಶ ಹೊರಡಿಸಿದ್ದಾರೆ.  ಸಚಿವರ ಉಸ್ತುವಾರಿ ಜಿಲ್ಲೆ ರಾಯಚೂರಿನ ಸರ್ಕಾರಿ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ತುಂಬು ಗರ್ಭಿಣಿಯನ್ನ ದಾಖಲಿಸಿಕೊಳ್ಳದೇ ರಾತ್ರಿ ಇಡೀ ಅಲೆದಾಡಿಸಿದ ಘಟನೆ ನಡೆದಿದೆ.

    ವೈದ್ಯರ ಕೊರತೆ ನೆಪವೊಡ್ಡಿ ಗರ್ಭಿಣಿಯನ್ನ ದಾಖಲು ಮಾಡಿಕೊಳ್ಳದೇ ಆಸ್ಪತ್ರೆಯಿಂದ ಸಿಬ್ಬಂದಿ ಹೊರ ಹಾಕಿದ್ದಾರೆ. ಸಂಜೆ ಐದು ಗಂಟೆ ಸುಮಾರಿಗೆ ಬಂದ ಸಿರವಾರ ಪಟ್ಟಣದ ಗರ್ಭಿಣಿ ಮೋಹಿನಾ ಬೇಗಂ ಳನ್ನ ವೈದ್ಯರಿಲ್ಲ ಅನ್ನೋ ನೆಪವೊಡ್ಡಿ ರಾತ್ರಿ ವಾಪಸ್ ಕಳಿಸಿದ್ದರು. ಅಲ್ಲಿಂದ ನಗರದ ನವೋದಯ ಬೋಧಕ ಆಸ್ಪತ್ರೆಗೆ ತೆರಳಬೇಕಾಯಿತು. ಆದರೆ ನವೋದಯ ಆಸ್ಪತ್ರೆಯಲ್ಲಿ ರಕ್ತದ ಕೊರತೆ ನೆಪವೊಡ್ಡಿ ವಾಪಸ್ ರಿಮ್ಸ್ ಗೆ ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದರು. ಇದರಿಂದ ಕ್ರೂಸರ್ ವಾಹನದಲ್ಲೇ ಮಹಿಳೆಯನ್ನ ಕರೆದುಕೊಂಡು ಕುಟುಂಬಸ್ಥರು ತಿರುಗಾಡಿದರು.

    ತಡರಾತ್ರಿಯಾದ್ರೂ ಯಾವ ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಳ್ಳದ್ದಕ್ಕೆ ಕಂಗಾಲಾಗಿದ್ದ ಕುಟುಂಬಸ್ಥರು ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ದಾರಿ ಕಾಣದೇ ಪುನಃ ರಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ನಂತರ ರಿಮ್ಸ್ ನ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಹೆರಿಗೆಯ ಸಮಯದ ಮೀರಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೆರಿಗೆ ಮಾಡಲಾಗಿದೆ. ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದು ಸದ್ಯ ರಿಮ್ಸ್ ಆಸ್ಪತ್ರೆಯಲ್ಲೇ ತಾಯಿ, ಮಗು ಆರೋಗ್ಯವಾಗಿದ್ದಾರೆ.

  • ಶುಲ್ಕ ನೀಡದಿದ್ರೆ ರೋಗಿಯ ಕೈ ಸಹ ಮುಟ್ಟಲ್ಲ – ಸರ್ಕಾರಿ ವೈದ್ಯನ ಲಂಚಾವತಾರ

    ಶುಲ್ಕ ನೀಡದಿದ್ರೆ ರೋಗಿಯ ಕೈ ಸಹ ಮುಟ್ಟಲ್ಲ – ಸರ್ಕಾರಿ ವೈದ್ಯನ ಲಂಚಾವತಾರ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ತಿಳಿಯಲು ರಾಯಚೂರಿನ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ಮಲಗಿಹೋಗಿದ್ದೇ ಬಂತು. ಆದರೆ ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳ ಸ್ಥಿತಿ ಮಾತ್ರ ಬದಲಾಗಿಲ್ಲ.

    ಡಾ. ವಿಶ್ವನಾಥ್ ಸಿಂಧನೂರಿನ ಬಾದರ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡಾಕ್ಟರ್ ದುಡ್ಡು ಕೊಡದಿದ್ದರೆ ಯಾವ ರೋಗಿಗೂ ಚಿಕಿತ್ಸೆಯನ್ನೇ ನೀಡುವುದಿಲ್ಲ. ಸುಮಾರು 10 ವರ್ಷಗಳಿಂದ ಇಲ್ಲೇ ವೈದ್ಯರಾಗಿರುವ ಡಾ.ವಿಶ್ವನಾಥ್ ಈ ವಿಚಾರದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

    ರೋಗಿಗಳು ಕಡಿಮೆ ಹಣ ಕೊಟ್ಟರೆ ಇಷ್ಟೇ ಕೊಡಬೇಕು ಎಂದು ಬೇಡಿಕೆ ಮಾಡಿ ರೋಗಿಗಳಿಂದ ಹಣ ಕೀಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 200 ರೂಪಾಯಿಯಿಂದ ಒಂದೊಂದು ಚಿಕಿತ್ಸೆಗೆ ಒಂದೊಂದು ಫೀಸ್ ಅನ್ನು ಫಿಕ್ಸ್ ಮಾಡಿದ್ದಾರೆ. ಇದರ ಜೊತಗೆ ಒಮ್ಮೊಮ್ಮೆ ವಾರಗಟ್ಟಲೇ ಆಸ್ಪತ್ರೆಯ ಕಡೆ ಬಾರದೇ ಇದ್ದರೂ ಹಾಜರಾತಿಯಲ್ಲಿ ಮಾತ್ರ ಪ್ರತಿ ದಿನ ಹಾಜರಿ ಇರುತ್ತದೆ.

    ಬಾದರ್ಲಿ ಸೇರಿದಂತೆ ಸುತ್ತಮುತ್ತಲ ಗಿಣಿವಾರ, ಒಳಬಳ್ಳಾರಿ, ಯದ್ಲಡ್ಡಿ, ಆರ್ ಎಚ್ ಕ್ಯಾಂಪ್ 5, ಅಲಬನೂರು, ಅರೆಕನೂರು ಗ್ರಾಮಗಳ ಜನ ಈ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.

    ವೈದ್ಯನ ಹಣಬಾಕುತನಕ್ಕೆ ಬೇಸತ್ತು ಜನರೇ ತಮ್ಮ ಮೊಬೈಲ್ ನಲ್ಲಿ ಲಂಚಾವತಾರ ಸೆರೆ ಹಿಡಿದಿದ್ದಾರೆ. ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ಗ್ರಾಮೀಣ ಭಾಗದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಇಲ್ಲೂ ಫೀಸ್ ಎಂದು ಈ ವೈದ್ಯ ಹಣ ಕೀಳುತ್ತಿದ್ದಾರೆ.

    ಒಂದೆಡೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಅನ್ನೋ ಕೊರಗಿದ್ದರೆ ಇದ್ದ ವೈದ್ಯರಲ್ಲಿ ಇಂತಹವರು ರೋಗಿಗಳಿಂದ ಹಣ ವಸೂಲಿ ನಡೆಸಿದ್ದಾರೆ. ಒಂದು ವೇಳೆ ಈ ವೈದ್ಯನನ್ನ ಅಮಾನತು ಮಾಡಿದರೆ ಬೇರೆ ವೈದ್ಯರನ್ನ ನಿಯೋಜನೆ ಮಾಡ್ತಾರೋ ಇಲ್ವೋ ಅನ್ನೋ ಭಯ ಗ್ರಾಮಸ್ಥರಲ್ಲಿದೆ. ಕನಿಷ್ಠ ಈಗಲಾದರೂ ಮೇಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಇಂತಹ ವೈದ್ಯರ ಕಡೆ ಗಮನಹರಿಸಬೇಕು ಎಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.

  • ರಾಯಚೂರಿನ ರಿಮ್ಸ್, ಓಪೆಕ್ ಆಸ್ಪತ್ರೆಯ ಅವ್ಯವಸ್ಥೆ- ನೀರಿಲ್ಲದೇ ಶೌಚಕ್ಕೂ ಹೋಗದ ರೋಗಿಗಳು

    ರಾಯಚೂರಿನ ರಿಮ್ಸ್, ಓಪೆಕ್ ಆಸ್ಪತ್ರೆಯ ಅವ್ಯವಸ್ಥೆ- ನೀರಿಲ್ಲದೇ ಶೌಚಕ್ಕೂ ಹೋಗದ ರೋಗಿಗಳು

    ರಾಯಚೂರು: ಸರ್ಕಾರಿ ಆಸ್ಪತ್ರೆಗಳು ಅಂದರೆ ಬಡವರ ಪಾಲಿಗೆ ವರದಾನವಾಗಬೇಕು. ರಾಯಚೂರಿನ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆ ಬಡರೋಗಿಗಳಿಗೆ ಅಕ್ಷರಶಃ ನರಕವಾಗಿದೆ. ಅದರಲ್ಲೂ ಗರ್ಭಿಣಿಯರು, ಬಾಣಂತಿಯರ ಕಷ್ಟವನ್ನಂತೂ ಕೇಳುವವರೇ ಇಲ್ಲದಂತಾಗಿದೆ. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ನೀರಿಲ್ಲದೆ ಇಡೀ ಆಸ್ಪತ್ರೆಯೇ ಶೌಚಾಲಯದಂತಾಗಿದ್ದು, ಗಬ್ಬುವಾಸನೆ ಹೊಡೆಯುತ್ತಿದೆ. ಕುಡಿಯಲು ನೀರಿಲ್ಲ, ಶೌಚಕ್ಕೆ ತೆರಳಲು ರೋಗಿಗಳಿಗೆ ಸಾಧ್ಯವಿಲ್ಲ ಅನ್ನೋ ಕೆಟ್ಟ ಪರಸ್ಥಿತಿ ನಿರ್ಮಾಣವಾಗಿದೆ.

    ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ನೀರಿನ ಭೀಕರ ಸಮಸ್ಯೆ ಎದುರಾಗಿದ್ದು. ರೋಗಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಹೊರಗಡೆ ಖಾಸಗಿಯವರು ಲೀಟರ್‍ಗೆ 30 ರೂಪಾಯಿಯಂತೆ ನೀರನ್ನ ಮಾರಾಟ ಮಾಡುತ್ತಿದ್ದಾರೆ. ಕುಡಿಯುವ ನೀರನ್ನ ಹೇಗೋ ಹೊಂದಿಸಿಕೊಂಡ್ರೆ ಇಲ್ಲಿನ ಶೌಚಾಲಯದ್ದು ಇನ್ನೂ ದೊಡ್ಡ ಕತೆಯಾಗಿದೆ. ನೀರಿಲ್ಲದೆ ಎಲ್ಲಾ ಶೌಚಾಲಯಗಳು ಗಬ್ಬುನಾರುತ್ತಿವೆ. ರೋಗಿಗಳ ಕಡೆಯವರು ಆಸ್ಪತ್ರೆ ಸುತ್ತಮುತ್ತ ಶೌಚಕ್ಕೆ ಹೋಗುತ್ತಿದ್ದಾರೆ. ಆದ್ರೆ ರೋಗಿಗಳು ನೀರಿನ ಸಮಸ್ಯೆಯಿಂದ ಎರಡೆರಡು ದಿನಗಳಾದ್ರೂ ಶೌಚಕ್ಕೆ ಹೋಗದೇ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.

    ಆರು ಅಂತಸ್ತಿನ 500 ಹಾಸಿಗೆ ಆಸ್ಪತ್ರೆಯಾಗಿರುವ ರಿಮ್ಸ್ ಹಾಗೂ ಸೂಪರ್ ಸ್ಪೆಷಾಲಿಟಿ ಸೌಲಭ್ಯದ ಓಪೆಕ್ ಆಸ್ಪತ್ರೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಮೂಲ ಸೌಕರ್ಯವಿಲ್ಲದೆ ರೋಗಿಗಳು ತಮ್ಮ ರೋಗಕ್ಕಿಂತ ಇಲ್ಲಿನ ಸಮಸ್ಯೆಗಳಿಗೆ ನರಳಾಡುವಂತಾಗಿದೆ. ನಗರದಲ್ಲಿ ಅಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿರುವ ನಗರಸಭೆ ಆಸ್ಪತ್ರೆಗಳಿಗೂ ಅನಾನುಕೂಲ ಮಾಡಿದೆ. ರೋಗಿಗಳನ್ನ ಗಣನೆಗೆ ತೆಗೆದುಕೊಂಡು ನೀರಿನ ವ್ಯವಸ್ಥೆ ಮಾಡಬೇಕಾದ ರಿಮ್ಸ್ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಬಾಣಂತಿಯರು, ಗರ್ಭಿಣಿಯರಂತೂ ಆಸ್ಪತ್ರೆಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಈಗ ಎಚ್ಚೆತ್ತಿರುವ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹಾಗೂ ಸಂಸದ ಬಿ.ವಿ.ನಾಯಕ್ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದೆ, ಇನ್ನೂ ತಮ್ಮ ಸಮಸ್ಯೆಗಳು ಏನೇ ಇದ್ರೂ ಆಸ್ಪತ್ರೆಗೆ ಸಮರ್ಪಕವಾಗಿ ನೀರು ಒದಗಿಸಬೇಕಾದ ನಗರಸಭೆ ಹಾಗೂ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಬೇಜವಾಬ್ದಾರಿತನ ಮೆರೆಯುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಿಮ್ಸ್ ಆಸ್ಪತ್ರೆಯಲ್ಲಿ ಹೋಂ ಗಾರ್ಡ್ ನಿಂದ ರೋಗಿಯ ಸಂಬಂಧಿಕರ ಮೇಲೆ ಹಲ್ಲೆ

    ರಿಮ್ಸ್ ಆಸ್ಪತ್ರೆಯಲ್ಲಿ ಹೋಂ ಗಾರ್ಡ್ ನಿಂದ ರೋಗಿಯ ಸಂಬಂಧಿಕರ ಮೇಲೆ ಹಲ್ಲೆ

    ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ಕೆಟ್ಟು ನವಜಾತ ಶಿಶು ಹಾಗೂ ಪೋಷಕರು ಪರದಾಡಿದ ಯಡವಟ್ಟಿನ ಬೆನ್ನಲ್ಲೆ ಕ್ಷುಲ್ಲಕ ಕಾರಣಕ್ಕೆ ಹೋಂಗಾರ್ಡ್ ಒಬ್ಬರು ರೋಗಿಯ ಕಡೆಯವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.

    ನಜೀರ್ ಹಲ್ಲೆಗೊಳಗಾಗದ ವ್ಯಕ್ತಿ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂ ಗಾರ್ಡ್ ರಾಜಶೇಖರ್ ಎಂಬಾತ ನಜೀರ್ ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

    ನಜೀರ್ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ತಾಯಿ ಫಾತೀಮಾರನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದರು. ನಜೀರ್ ತಮ್ಮ ತಾಯಿಯನ್ನು ವೈದ್ಯರಿಗೆ ತೋರಿಸಲು ಚೀಟಿ ತೆಗೆದುಕೊಳ್ಳುವಾಗ ಈ ಹಲ್ಲೆ ನಡೆದಿದೆ.

    ಇದನ್ನೂ ಓದಿ: ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು

    ನಜೀರ್ ಅವರ ಕಣ್ಣಿನ ಕೆಳಭಾಗ ಹಾಗೂ ಹಣೆ ಮೇಲೆ ಗಾಯಗಳಾಗಿವೆ. ಹಣೆಗೆ ಮೂರು ಹೊಲಿಗೆ ಹಾಕಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕಣ್ಣಿನ ಸುತ್ತಲು ಊದಿಕೊಂಡಿದೆ. ಘಟನೆ ಹಿನ್ನೆಲೆ ಹೋಂಗಾರ್ಡ್ ರಾಜಶೇಕರನನ್ನ ವಜಾಗೊಳಿಸಿ ಆದೇಶಿಸಿರುವುದಾಗಿ ರಿಮ್ಸ್ ಮೆಡಿಕಲ್ ಸೂಪರಿಂಡೆಂಟ್ ಡಾ.ಬಸವರಾಜ್ ಪೀರಾಪುರೆ ಹೇಳಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು

    ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು

    ರಾಯಚೂರು: ನಗರದ ಪ್ರತಿಷ್ಠಿತ ಆಸ್ಪತ್ರೆ ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಸೋಮವಾರ ರಾತ್ರಿ ಆಸ್ಪತ್ರೆಯ ಲಿಫ್ಟ್ ನಲ್ಲಿ 2 ಗಂಟೆಗಳ ಕಾಲ ನವಜಾತ ಶಿಶು ಹಾಗೂ ಪೋಷಕರು ಸಿಲುಕಿ ಪರದಾಡಿದ ಘಟನೆ ನಡೆದಿದೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಕುರಡಿ ಗ್ರಾಮದ ನರಸಮ್ಮ ಎಂಬವರಿಗೆ ರಾತ್ರಿ 11 ಗಂಟೆಗೆ ಹೆರಿಗೆಯಾಗಿತ್ತು. ಹೆರಿಗೆ ಬಳಿಕ ಮಗುವನ್ನು ಶಿಶು ನಿಗಾ ಘಟಕಕ್ಕೆ ಕರೆದೊಯ್ಯುವಾಗ ಲಿಫ್ಟ್ ನಲ್ಲಿ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ. ಲಿಫ್ಟ್ ನಲ್ಲಿ ಮಗುವಿನೊಂದಿಗೆ ಪೋಷಕರು ಎರಡು ಗಂಟೆ ಸಿಲುಕಿದ್ರೂ ಆಸ್ಪತ್ರೆಯ ಯಾವ ಸಿಬ್ಬಂದಿಯೂ ಸಹಾಯಕ್ಕೆ ಮುಂದಾಗಿಲ್ಲ.

    ಕೊನೆಗೆ ಶಿಶುವಿನ ಪೋಷಕರು ತಮ್ಮ ಪರಿಚಯಸ್ಥರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಆಸ್ಪತ್ರೆ ಹೋಂ ಗಾರ್ಡಗಳು ಶಿಶು ಹಾಗೂ ಪೋಷಕರನ್ನ ಹೊರಗೆ ಕರೆತಂದಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.

    ಏಕಾಏಕಿ ಲಿಫ್ಟ್ ಕೆಡಲು ಕಾರಣ ತಿಳಿದುಬಂದಿಲ್ಲ. ಲಿಫ್ಟ್ ರಿಪೇರಿ ಕಾರ್ಯ ನಡೆದಿದ್ದು ರೋಗಿಗಳು ಮೇಲಂತಸ್ಥಿನ ಕೊಠಡಿಗಳಿಗೆ ತೆರಳಲು ಪರದಾಡುತ್ತಿದ್ದಾರೆ.