Tag: right

  • ಪುಷ್ಪ 2 ಆಡಿಯೋ ಹಕ್ಕು ಬರೋಬ್ಬರಿ 65 ಕೋಟಿಗೆ ಸೇಲ್

    ಪುಷ್ಪ 2 ಆಡಿಯೋ ಹಕ್ಕು ಬರೋಬ್ಬರಿ 65 ಕೋಟಿಗೆ ಸೇಲ್

    ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

    ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

    ಈಗಾಗಲೇ ಪುಷ್ಪ 2 ಸಿನಿಮಾದ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಚಿತ್ರದ ನಿರ್ಮಾಪಕರ ಹಾಗೂ ನಿರ್ದೇಶಕರ ಮನೆ, ಕಚೇರಿ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದ ಬೆನ್ನಲ್ಲೇ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಇನ್ನೇನು ಸದ್ಯದಲ್ಲೇ ಮುಂದಿನ ಹಂತದ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅಲ್ಲು ಅಭಿಮಾನಿಗಳಿಗೆ ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದ್ದು ಸಂಭ್ರಮ ತಂದಿದೆ.

  • ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ

    ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ

    ನ್ನಡ ಸಿನಿಮಾ ರಂಗದ ಪ್ರತಿಭಾವಂತ ನಿರ್ದೇಶಕ ಶಶಾಂಕ್ ಮತ್ತೆ ಹೊಸಬರನ್ನು ಹಾಕಿಕೊಂಡು ಮಾಡಿರುವ ‘ಲವ್ 360’ ಸಿನಿಮಾಗೆ ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ರಿಮೇಕ್ ರೈಟ್ಸ್ ಗಾಗಿ ತಮಿಳು ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು, ದೊಡ್ಡ ನಿರ್ಮಾಣ ಸಂಸ್ಥೆಯೇ ಹಕ್ಕುಗಳನ್ನು ಕೇಳಿದೆಯಂತೆ. ಈ ಕುರಿತು ಸ್ವತಃ ಶಶಾಂಕ್ ಅವರೇ ಬರೆದುಕೊಂಡಿದ್ದಾರೆ.

    ಲವ್ 360 ಡಿಗ್ರಿ ಸಿನಿಮಾ ರಿಲೀಸ್ ಆದಾಗ ಮೊದಲೆರಡು ದಿನ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಗಲಿಲ್ಲ. ಆದರೆ, ನೋಡಿದವರೆಲ್ಲ ಶಶಾಂಕ್ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಇಂತಹ ಸಿನಿಮಾಗಳು ಗೆಲ್ಲಬೇಕು ಎಂದು ಹಲವು ಕಲಾವಿದರು ಮತ್ತು ನಿರ್ದೇಶಕರು ಮಾತನಾಡಿದರು. ಆನಂತರ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಇದೀಗ ರಿಮೇಕ್ ರೈಟ್ಸ್ ಗೂ ಕೂಡ ಭಾರೀ ಬೇಡಿಕೆ ಕ್ರಿಯೆಟ್ ಆಗಿದೆ. ಇದನ್ನೂ ಓದಿ:ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

    ಈ ಸಿನಿಮಾದ ಮೂಲಕ ಪ್ರವೀಣ್ ಎನ್ನುವ ಹೊಸ ಹುಡುಗ ಸಿನಿಮಾ ರಂಗಕ್ಕೆ ಪ್ರವೇಶವಾಗಿದ್ದು, ರಚನಾ ನಾಯಕಿಯಾಗಿ ನಟಿಸಿದ್ದಾರೆ. ಒಂದೊಳ್ಳೆ ಪ್ರೇಮಕಥೆಗೆ ಸಸ್ಪೆನ್ಸ್ ಅಂಶಗಳನ್ನು ಬಳಸಿಕೊಂಡು ಮಾಡಿರುವ ಲವ್ 360 ಸಿನಿಮಾ ಮುಂದಿನ ದಿನಗಳಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಮೇಕ್ ಆಗಲಿದ್ದು, ಯಾರೆಲ್ಲ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ವಿಡಿಯೋ ಮಾರಿಕೊಂಡ ಸ್ಟಾರ್ ನಟಿ ನಯನತಾರಾ

    ಮದುವೆ ವಿಡಿಯೋ ಮಾರಿಕೊಂಡ ಸ್ಟಾರ್ ನಟಿ ನಯನತಾರಾ

    ಮಿಳು ಸಿನಿಮಾ ರಂಗದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ವಿವಾಹ ಇದೇ ಜೂನ್ 09ರಂದು ಚೆನ್ನೈನಲ್ಲಿ ನಡೆಯಲಿದೆ. ಖಾಸಗಿ ರೆಸಾರ್ಟ್ ವೊಂದು ಈ ಜೋಡಿಯ ಮದುವೆಗೆ ಸಿದ್ಧವಾಗುತ್ತಿದೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಜೋಡಿಯು ಅಲ್ಲಿನ ಮುಖ್ಯಮಂತ್ರಿ ಸೇರಿದಂತೆ ಸಿನಿಮಾ ರಂಗದ ಅನೇಕ ಗಣ್ಯರಿಗೆ ಮದುವೆಗೆ ಆಹ್ವಾನಿಸಿದ್ದಾರೆ. ಅದೊಂದು ಅದ್ಧೂರಿ ಮದುವೆ ಆಗಿರುವುದರಿಂದ ಅದರ ವಿಡಿಯೋ ಹಕ್ಕುಗಳನ್ನು ಓಟಿಟಿಗೆ ಸೇಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ಟಾರ್ ಮದುವೆಗಳು ವಾಹಿನಿಗಳಿಗೆ ಮತ್ತು ಓಟಿಟಿಗಳಿಗೆ ಮಾರಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿಂದೆ ರಣ್ವೀರ್ ಕಪೂರ್ ಕೂಡ ಕೋಟ್ಯಂತರ ರೂಪಾಯಿಗೆ ತಮ್ಮ ಮದುವೆ ವಿಡಿಯೋವನ್ನು ಮಾರಿಕೊಂಡಿದ್ದರು. ಕನ್ನಡದಲ್ಲಿ ದಿಗಂತ್ ಕೂಡ ಹಾಗೆಯೇ ಮಾಡಿದ್ದರು. ಇದೀಗ ನಯನತಾರಾ ಕೂಡ ಕೋಟ್ಯಂತರ ರೂಪಾಯಿಗೆ ತಮ್ಮ ಮದುವೆ ವಿಡಿಯೋ ಹಕ್ಕನ್ನು ಮಾರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿಷ್ಠಿತ ಓಟಿಟಿ ವೇದಿಕೆ ಹಕ್ಕುಗಳನ್ನು ಪಡೆದಿದೆಯಂತೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

    ತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಬಾಲಿವುಡ್ ಸಿನಿಮಾ ರಂಗದ ಅನೇಕ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆಯಂತೆ. ಆದರೆ, ಮದುವೆಗೆ ಕೆಲವೇ ಕೆಲವು ಜನರಿಗೆ ಆಮಂತ್ರಿಸಲಾಗಿದ್ದು, ಆರತಕ್ಷತೆಗೆ ಬಹುತೇಕ ಸಿನಿಮೋದ್ಯಮಿಗಳು ಭಾಗಿಯಾಗಲಿದ್ದಾರಂತೆ. ಕನ್ನಡದಲ್ಲಿ ನಯನತಾರಾ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದಾರೆ. ಹಾಗಾಗಿ ಉಪೇಂದ್ರ ಕೂಡ ಈ ಮದುವೆಯಲ್ಲಿ ಹಾಜರಿರಲಿದ್ದಾರೆ ಎನ್ನುವ ಮಾಹಿತಿ ಇದೆ. ಉಳಿದಂತೆ, ಕಮಲ್ ಹಾಸನ್, ರಜನೀಕಾಂತ್ ಸಮಂತಾ, ವಿಜಯ್ ಸೇತುಪತಿ, ಅನುಷ್ಕಾ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಿಲಾಗಿದೆ. ಇನ್ನು ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿದೆ.

  • ಹೌದು, ನಾವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತವೆ – ಟ್ವಿಟ್ಟರ್‌ ಉದ್ಯೋಗಿಯ ವೀಡಿಯೋ ವೈರಲ್‌

    ಹೌದು, ನಾವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತವೆ – ಟ್ವಿಟ್ಟರ್‌ ಉದ್ಯೋಗಿಯ ವೀಡಿಯೋ ವೈರಲ್‌

    ವಾಷಿಂಗ್ಟನ್‌: ಟ್ವಿಟ್ಟರ್‌ ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತದೆ ಎಂದು ಕಂಪನಿಯ ಹಿರಿಯ ಎಂಜಿನಿಯರ್‌ ಹೇಳಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಅಮೆರಿಕದ ಬಲಪಂಥಿಯ ಸಂಘಟನೆ Project Veritas ಕುಟುಕು ಕಾರ್ಯಾಚರಣೆ ಮಾಡಿರುವ ವೀಡಿಯೋವನ್ನು ರಿಲೀಸ್‌ ಮಾಡಿದೆ. ಉದ್ಯೋಗಿ ಸಿರು ಮುರುಗೇಸನ್‌ ಕಂಪನಿ ಎಡಪಂಥೀಯ ಧೋರಣೆಯ ಬಗ್ಗೆ ಮಾತನಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

    https://twitter.com/Timcast/status/1526336405663776768

    ಟ್ವಿಟ್ಟರ್‌ ಬಲಪಂಥೀಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತದೆ. ಎಡಪಂಥೀಯರ ಪರ ಬಗ್ಗೆ ಹೆಚ್ಚಿನ ಒಲವು ಹೊಂದಿದೆ ಎಂಬ ಆರೋಪ ಮೊದಲಿನಿಂದಲೂ ಬರುತ್ತಿತ್ತು. ಈಗ ಈ ವೀಡಿಯೋ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ #TwitterExposed ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.  ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್

    ವೀಡಿಯೋದಲ್ಲಿ ಏನಿದೆ?
    ಟ್ವಿಟ್ಟರ್‌ ಎಡಪಂಥದ ಪರ ಹೆಚ್ಚಿನ ಒಲವು ಹೊಂದಿದೆ. ಟ್ವಿಟ್ಟರ್‌ಗೆ ಸೇರಿದ ಬಳಿಕ ಉದ್ಯೋಗಿಗಳು ತಮ್ಮ ಚಿಂತನೆಯನ್ನು ಬದಲಾಯಿಸಿ ಹೊಂದಿಕೊಳ್ಳುತ್ತರೆ. ಬಲಪಂಥೀಯ ವ್ಯಕ್ತಿಗಳನ್ನು ನಾವು ಸೆನ್ಸಾರ್‌ ಮಾಡುತ್ತೇವೆ.

    ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸದಂತೆ ಉದ್ಯೋಗಿಗಳು ತಡೆದಿದ್ದರು. ಮಸ್ಕ್‌ ಬಂಡವಾಳಶಾಹಿ ವ್ಯಕ್ತಿ. ನಾವು ನಿಜವಾಗಿಯೂ ಬಂಡವಾಳಶಾಹಿಗಳಂತೆ ಕೆಲಸ ಮಾಡುತ್ತಿಲ್ಲ. ನಾವು ಸಮಾಜವಾದಿಗಳು ಎಂದು ಸಿರು ಮುರುಗೇಸನ್‌ ಹೇಳಿದ್ದಾರೆ.

    ಈ ವೀಡಿಯೋ ರಿಲೀಸ್‌ ಆದ ಬಳಿಕ ಟ್ವಿಟ್ಟರ್‌ ಕಂಪನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • ಸಮಾಜವಾದದ ತೊಟ್ಟಿಲಲ್ಲಿ ಈಗ ಎಡ ಬಲ ಪೈಪೋಟಿ ಬಲು ಜೋರು

    ಸಮಾಜವಾದದ ತೊಟ್ಟಿಲಲ್ಲಿ ಈಗ ಎಡ ಬಲ ಪೈಪೋಟಿ ಬಲು ಜೋರು

    ಸುಕೇಶ್ ಡಿ.ಎಚ್
    ದೊಂದು ಕಾಲವಿತ್ತು ರಾಜ್ಯ ರಾಜಕಾರಣದಲ್ಲಿ ಸಮಾಜವಾದಿಗಳ ಅಬ್ಬರ ಜೋರಿತ್ತು. ಕಾಕತಾಳೀಯ ಎಂಬಂತೆ ಘಟಾನುಘಟಿ ಸಮಾಜವಾದಿ ನಾಯಕರು ಮಲೆನಾಡಿನ ಮಡಿಲಿಂದ ಬಂದು ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದ್ದರು. ಕಡಿದಾಳು ಮಂಜಪ್ಪ, ಶಾಂತವೀರ ಗೋಪಾಲಗೌಡರು, ವೀರಪ್ಪಗೌಡರು, ಜೆ.ಹೆಚ್.ಪಟೇಲ್, ಹೆಚ್.ಜಿ.ಗೋವಿಂದೇಗೌಡರು, ಕಾಗೋಡು ತಿಮ್ಮಪ್ಪ, ಸಾರೆಕೊಪ್ಪ ಬಂಗಾರಪ್ಪ… ಹೀಗೆ ಸಾಲು ಸಾಲು ಸಮಾಜವಾದಿ ನಾಯಕರನ್ನು ಕೊಟ್ಟ ಮಲೆನಾಡು ಕಳೆದ ಎರಡು ದಶಕಗಳಲ್ಲಿ ಬೇರೆಯದೇ ದಿಕ್ಕಿಗೆ ತಿರುಗಿಕೊಂಡಂತಿದೆ.

    ಪಾಕಿಸ್ತಾನ್ ಜಿಂದಾಬಾದ್ ಅನ್ನೋ ಒಂದೇ ಒಂದು ಕೂಗು ಈಗ ಎಲ್ಲರ ಚಿತ್ತ ಮಲೆನಾಡಿನತ್ತ ಹರಿಯುವಂತೆ ಮಾಡಿದೆ. ಅಮೂಲ್ಯ ಲಿಯೋನಾ ಅನ್ನೋ ಎಳಸು ಹುಡುಗಿಯೊಬ್ಬಳ ದೇಶ ದ್ರೋಹದ ಕೆಲಸ ಅವಳ ಮೂಲ ಯಾವುದು ಅನ್ನೋ ಹುಡುಕಾಟದೊಂದಿಗೆ ಮತ್ತೆ ಮಲೆನಾಡಿನ ಹೆಬ್ಬಾಗಿಲಿಗೆ ಬಂದು ನಿಂತಿದೆ. ಹಾಗೆ ನೋಡಿದರೆ ಕಳೆದ ಎರಡು ದಶಕದಲ್ಲಿ ಎಡ ಪಂಥೀಯರು ಹಾಗೂ ಬಲ ಪಂಥೀಯರು ಇಬ್ಬರ ಪಾಲಿಗೂ ಮಲೆನಾಡು ಸ್ವರ್ಗವಾಗಿ ಕಂಡಿರುವುದು, ಸಮಾಜವಾದದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ ಕಾಣುತ್ತಿದೆ.

    ಮಲೆನಾಡ ಮಡಿಲಲ್ಲಿ ನಕ್ಸಲರ ಗುಂಡಿನ ಸದ್ದು ಬಲಪಂಥೀಯರ ದತ್ತ ಪೀಠದ ಕೂಗು ಹೆಚ್ಚು ಕಡಿಮೆ ಒಟ್ಟೊಟ್ಟಿಗೆ ಕೇಳಿಬಂದಿತ್ತು. ಇದೆಲ್ಲದಕ್ಕೆ ಕಳಶವಿಟ್ಟಂತೆ ಮಲೆನಾಡಿನ ದಟ್ಟ ಕಾನನ ಭಯೋತ್ಪಾದಕರ ಶಸ್ತ್ರಾಭ್ಯಾಸಕ್ಕೆ ವೇದಿಕೆಯಾಗಿದೆ ಅನ್ನೋ ಅನುಮಾನದ ನಡುವೆಯೇ ಕೆಲವೇ ವರ್ಷದ ಹಿಂದೆ ಕೊಪ್ಪ ಬಳಿಯ ಹಳ್ಳಿಯಲ್ಲಿ ಭಯೋತ್ಪಾದಕರ ಬಂಧನವು ಆಗಿ ಹೋಯ್ತು. ಬೆಚ್ಚನೆ ಪರಿಸರದ ಮಧ್ಯೆ ಸಮಾಜವಾದದ ಕನವರಿಕೆಯಲ್ಲಿದ್ದ ಮಲೆನಾಡಿಗರಿಗೆ ನಕ್ಸಲ್ ಚಳುವಳಿ ಎಂದರೇನು? ಭಗವಾಧ್ವಜ ಅಂದರೇನು ಅನ್ನೋ ಕಲ್ಪನೆಯೂ ಇರಲಿಲ್ಲ. ಆದರೆ 2000ದ ಸುಮಾರಿಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ನಾಲ್ಕು ಜಿಲ್ಲೆ ಗಡಿಭಾಗವಾದ ಆಗುಂಬೆ ಸುತ್ತಮುತ್ತಲಿನ ದಟ್ಟ ಕಾನನದ ನಡುವೆ ನಕ್ಸಲರ ಶಸ್ತ್ರಾಭ್ಯಾಸ ಶುರುವಾಗಿತ್ತು. ಅದೇ ನಾಲ್ಕು ಜಿಲ್ಲೆಗಳನ್ನ ಗುರಿಯಾಗಿಸಿಕೊಂಡು ಚಿಕ್ಕಮಗಳೂರಿನ ಬಾಬಾ ಬುಡಾನ್ ಗಿರಿಯಲ್ಲಿ ಬಲ ಪಂಥೀಯರ ದತ್ತ ಮಾಲಾ ಅಭಿಯಾನ ಅದೇ 2000 ಇಸವಿಯ ಆಜುಬಾಜಲ್ಲಿ ದೊಡ್ಡ ಪ್ರಮಾಣದಲ್ಲಿ ಚಾಲ್ತಿಗೆ ಬಂತು. ಪರಸ್ಪರ ವಿರುದ್ಧವಾದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಎಡ ಹಾಗೂ ಬಲ ಎರಡು ಪಂಥದವರು ತಮ್ಮದೇ ಆದ ರೀತಿಯಲ್ಲಿ ಮಲೆನಾಡನ್ನು ಆವರಿಸತೊಡಗಿದರು.

    ಪಶ್ಚಿಮ ಘಟ್ಟದ ಕಾಡಲ್ಲಿ ಸುಲಭವಾಗಿ ರಕ್ಷಣೆ ಪಡೆಯಬಹುದು ಅನ್ನೋ ಒಂದೇ ಒಂದು ಕಾರಣ ಹೊರತುಪಡಿಸಿದರೆ ನಕ್ಸಲರಿಗೆ ಮಲೆನಾಡಿನ ಕಾನನ ಪ್ರವೇಶಕ್ಕೆ ಬೇರೆ ಯಾವುದೇ ಕಾರಣ ಇರಲಿಲ್ಲ. ಯಾವುದೇ ರೀತಿಯ ನೆರವು ಮಲೆನಾಡಿಗರಿಂದ ನಿರೀಕ್ಷೆ ಮಾಡುವಂತಿರಲಿಲ್ಲ. ಜಮೀನ್ದಾರಿಕೆ, ಪಾಳೆಗಾರಿಕೆ ಯಾವುದೂ ಮಲೆನಾಡಿನ ಸಮಸ್ಯೆಯೇ ಆಗಿರಲಿಲ್ಲ. ಕಾಡಿನಷ್ಟೇ ತಣ್ಣಗೆ ಅಲ್ಲಿನ ರೈತಾಪಿ ಜನ ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಂಡವರು. ಕಾಡು ಬಿಟ್ಟರೆ ಬೇರೆ ಯಾವ ನೆರವು ಸಿಗಲ್ಲ ಅನ್ನೋದು ಖಚಿತವಾದರೂ ಅಲ್ಲಲ್ಲಿ ಗುಂಡಿನ ಸದ್ದು ಮಾಡಿದ ನಕ್ಸಲರು ಕೊನೆಗೆ ತಾವು ಗುಂಡೇಟು ತಿಂದು ಮಲಗಿದರು. ಮಲೆನಾಡಿನಲ್ಲಿ ಎಡಪಂಥೀಯ ರಕ್ತ ಕ್ರಾಂತಿಯ ಕನಸು ಬಹುತೇಕ ಮುಗಿದ ಅಧ್ಯಾಯ. ಅದರ ಪಳೆಯುಳಿಕೆಗಳು ಇದೇ ಅಮೂಲ್ಯ ಲಿಯೋನಳಂತಹ ಶನಿ ಸಂತಾನಗಳು ಕಂಡ ಕಂಡ ವೇದಿಕೆಯಲ್ಲಿ ಮೈಕು ಹಿಡಿದು ಮಾನಸಿಕ ಅಸ್ವಸ್ಥರಂತೆ ಕೂಗತೊಡಗಿದ್ದಾರೆ.

    ಹೆಚ್ಚು ಕಡಿಮೆ ಅದೇ ಸಂದರ್ಭದಲ್ಲಿ ಬಾವುಟ ಕಟ್ಟಲು ಹುಡುಗರಿಲ್ಲದ ಸ್ಥಿತಿಯಲ್ಲಿ ದತ್ತ ಪೀಠದ ಹುಚ್ಚು ಎಬ್ಬಿಸಿದ ಬಜರಂಗದಳ ಅನ್ನೋ ಬಲ ಪಂಥೀಯ ಸಂಘಟನೆ ಎಬ್ಬಿಸಿದ ಹವಾಗೆ 4 ಜಿಲ್ಲೆಗಳು ಕೇವಲ 5 ವರ್ಷದಲ್ಲೆ ಕೇಸರಿಮಯವಾಗಿದ್ದು ಸುಳ್ಳಲ್ಲ. ಅದರ ನೇರ ಲಾಭ ಸಿಕ್ಕಿದ್ದು ಬಿಜೆಪಿಗೆ. ಆ ಎಲ್ಲಾ ಘಟನೆಗಳು ಈಗ ಇತಿಹಾಸ. ಆದರೆ ಒಮ್ಮೆ ದತ್ತ ಪೀಠದ ವಿವಾದವನ್ನು ಇಟ್ಟುಕೊಂಡು ಹಾರಿಸಿದ ಕೇಸರಿ ಬಾವುಟ ದಿನ ಕಳೆದಂತೆ ಸಾಕಷ್ಟು ಎತ್ತರಕ್ಕೆ ಹಾರತೊಡಗಿತು. ಸಹಜವಾಗಿಯೇ ಮಲೆನಾಡು, ಕರಾವಳಿ ಭಾಗದಲ್ಲಿ ಬೀಸಿದ ಗಾಳಿ ರಾಜ್ಯದ ಉದ್ದಗಲಕ್ಕೂ ಪಸರಿಸಿ ಇಡೀ ರಾಜ್ಯ ಬಿಜೆಪಿ ಮಯವಾಯ್ತು.

    ಕೇಸರಿ ಪತಾಕೆ ಹಾರಿಸಿದ ಬಲಪಂಥೀಯರ ವಿರುದ್ಧ ಸಹಜವಾಗಿಯೇ ಎಡ ಪಂಥೀಯರು, ಪ್ರಗತಿಪರರು ಧ್ವನಿ ಎತ್ತಲು ಮಲೆನಾಡಿನತ್ತ ಬಂದು ಎಡ ಹಾಗೂ ಬಲ ಕದನಕ್ಕೆ ಮತ್ತಷ್ಟು ಖದರು ತಂದುಕೊಟ್ಟರು. ಬಲಪಂಥೀಯ ಧರ್ಮಾಧಾರಿತ ರಾಜಕೀಯ ನಡೆಯನ್ನು ಟೀಕಿಸುವ ಭರದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಎಡಪಂಥೀಯ ನಾಯಕರು ಬಿಜೆಪಿಯ ಬೇರನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ ಎಡಬಿಡಂಗಿ ಅಂದುಕೊಂಡಿದ್ದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನು ವಿರೋಧ ಮಾಡಲೇಬೇಕಾದ ಸಂಕಷ್ಟಕ್ಕೆ ಸಿಲುಕಿ ಎಡಪಂಥೀಯರ ಜೊತೆ ಕೈ ಜೋಡಿಸಿ ಕೈ ಸುಟ್ಟುಕೊಂಡಿತು. ಅಲ್ಲಿಗೆ ಸಮಾಜವಾದದ ತೊಟ್ಟಿಲಾದ ಮಲೆನಾಡಲ್ಲಿ ಸಮಾಜವಾದವಿರಲಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಯಾವ ಕುರುಹು ಕಾಣದೇ ಎಡಬಲ ಕದನವೇ ಜೋರಾಯಿತು.

    ಬಿಜೆಪಿ ತನ್ನನ್ನು ವಿರೋಧಿಸುವ, ಟೀಕಿಸುವ ಎಲ್ಲರು ಎಡಪಂಥೀಯರು ಅನ್ನೋ ಅಘೋಷಿತ ಕಲ್ಪನೆಯನ್ನು ಮಲೆನಾಡಿಗರ ಮನಸಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಬೇಕಾದ ಕಾಂಗ್ರೆಸ್ಸಿಗರು ಎಡಪಂಥೀಯ ಪ್ರತಿನಿಧಿಗಳಂತೆ ಏನೇನೋ ಬಡಬಡಾಯಿಸಿ ಹೇಸಿಗೆ ಮಾಡಿಕೊಳ್ಳತೊಡಗಿದ್ದಾರೆ. ಅಮೂಲ್ಯ ಲಿಯೋನಾಳಂತಹ ನೂರಾರು ತಲೆ ತಿರುಕ ಸೈದ್ಧಾಂತಿಕ ರಾಯಭಾರಿಗಳು ಮಲೆನಾಡಿನ ತೊಟ್ಟಿಲಲ್ಲಿ ಯುದ್ಧ ತಾಯಾರಿ ನಡೆಸಿದರೆ. ಅತ್ತ ಬಲ ಪಂಥೀಯರ ಬತ್ತಳಿಕೆಯಲ್ಲೂ ಸಮಾಜದ ಸ್ವಾಸ್ಥ್ಯಕ್ಕೆ ಬಾಯಲ್ಲೇ ಬೆಂಕಿ ಹಚ್ಚಬಲ್ಲಂತಹ ಹುಚ್ಚು ಹುಡುಗರ ಗುಂಪೇ ಸಿದ್ಧವಾಗಿ ನಿಂತಿದೆ.

    ಹಾಗೇ ನೋಡಿದರೆ ಶಾಂತ ಸ್ವಭಾವದ ಮಲೆನಾಡಿಗರ ಮನಸ್ಸಿನ ಆಳದಲ್ಲಿ ಸಮಾಜವಾದದ ಬೇರು ಎಲ್ಲೋ ಟಿಸಿಲೊಡೆಯಲು ಕಾಯುತ್ತಿದೆ. ರಾಜಕೀಯ ಹೊರತಾಗಿ ಸಾಮಾಜಿಕ ಹಾಗೂ ಆರ್ಥಿಕವಾದ ಸಾಕಷ್ಟು ಸಮಸ್ಯೆಗಳು ಮಲೆನಾಡಿಗರ ನೆಮ್ಮದಿ ಕೆಡಿಸಿದೆ. ಸಾಂಪ್ರದಾಯಿಕ ಬೆಳೆ ಅಡಿಕೆಗೆ ಬಂದ ಹಳದಿ ಎಲೆ ಹಾಗೂ ಬೇರು ಹುಳದ ರೋಗ ಮಲೆನಾಡಿಗರ ಅಸ್ತಿತ್ವವನ್ನೆ ಅಲ್ಲಾಡಿಸತೊಡಗಿದೆ. ಒತ್ತುವರಿ ಸಮಸ್ಯೆ, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ… ಹೀಗೆ ಸಾಲು ಸಾಲು ಸಮಸ್ಯೆಗಳು ಮಲೆನಾಡಿಗರ ಅಸ್ತಿತ್ವವನ್ನೆ ಅಲ್ಲಾಡಿಸುತ್ತಿದ್ದು, ಎಡ ಬಲ ಬಿಟ್ಟು ಭವಿಷ್ಯದ ಚಿಂತೆ ಮಾಡಬೇಕಿದ್ದ ಯುವ ಸಮುದಾಯದ ಕೈಯಲ್ಲಿ ಮೊಬೈಲಿದೆ, ಫ್ರೀ ಇಂಟರ್ ನೆಟ್ ಪ್ಯಾಕೇಜ್ ಇದೆ. ಖಾಲಿ ಕುಳಿತ ಹುಡುಗರ ತಲೆಗೆ ಸೈದ್ಧಾಂತಿಕ ವಿಷ ತುಂಬಲು ತಲೆ ಮಾಸಿದ ನಾಯಕರುಗಳಿದ್ದಾರೆ.

    ಕುಳಿತ ಮರ ಅಲ್ಲಾಡಿದರೂ ಪರವಾಗಿಲ್ಲ ಹಾರುವ ಮಂಗನಿಗೆ ಹೆಂಡ ಕುಡಿಸಿದರೆ ಎಂತ ಅಲ್ಲಾಡುವ ಮರವನ್ನಾದರೂ ಮಂಗ ಹಾರುತ್ತದೆ ಎಂಬಂತಾಗಿದೆ ಮಲೆನಾಡಿನ ಯುವಕರ ಸ್ಥಿತಿ. ಈ ಮಾನಸಿಕತೆ ಹಾಗೂ ಮಲೆನಾಡಿನಲ್ಲಿ ಕಳೆದ ಎರಡು ದಶಕದಲ್ಲಿ ತಲೆ ಎತ್ತಿದ ವಿಚಿತ್ರ ರಾಜಕೀಯ ಪ್ರಜ್ಞೆ ನಡುವೆಯೇ ಅಮೂಲ್ಯ ಲಿಯೋನಾಳಂತವರು ಹುಚ್ಚಾಟದ ಮಾತನಾಡಿ ದೇಶವೆ ಛೀ… ಥೂ… ಎನ್ನುವಂತೆ ಮಾಡಿದ್ದಾರೆ. ಇನ್ನು ಸಮಾಜವಾದದ ನೆಲದಿಂದ ಎಡ, ಬಲ ಬತ್ತಳಿಕೆಯಿಂದ ಯಾವ್ಯಾವ ಅಸ್ತ್ರಗಳು ಹೊರ ಬರುತ್ತೋ ಗೊತ್ತಿಲ್ಲ. ತಮ್ಮ ಅಸ್ತಿತ್ವವೇ ಅಲ್ಲಾಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಮಲೆನಾಡಿನ ಹುಡುಗ ಹುಡುಗಿಯರು ಸೈದ್ಧಾಂತಿಕ ಭ್ರಮೆಯಿಂದ ಹೊರ ಬರದಿದ್ದರೆ ಮುಂದೊಂದು ದಿನ ಸೈದ್ಧಾಂತಿಕ ನೆಲಗಟ್ಟಿನಲ್ಲೇ ನಿರಾಶ್ರಿತರ ಗಂಜಿ ಕೇಂದ್ರದ ಖಾಯಂ ಗಿರಿಕಿಗಳಾಗಬೇಕಾದ ಅನಿವಾರ್ಯತೆ ಸೃಷ್ಟಿಯಾದರೂ ಆಶ್ಚರ್ಯ ಪಡಬೇಕಿಲ್ಲ.

    [ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]