Tag: rift

  • ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಮೈಸೂರು: ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕೆಲವರು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಂದಿ ವಿಗ್ರಹ ಪರಿಶೀಲನೆ ನಡೆಸಿದೆ.

    ನಂದಿ ವಿಗ್ರಹ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯನ್ನು ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ. ಕೆಲವು ಕಡೆ ಬಿರುಕು ಬಿಟ್ಟಿರುವ ರೀತಿ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಅದು ಬಿರುಕಲ್ಲ, ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದ್ದು, ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ಅದನ್ನು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.

    ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು, 1659-73ರಲ್ಲಿ ನಿರ್ಮಾಣಗೊಂಡಿದೆ. ಚಾಮುಂಡಿ ಬೆಟ್ಟದ ಪ್ರಮುಖ ಕೇಂದ್ರ ಬಿಂದುವೇ ಈ ನಂದಿ ವಿಗ್ರಹ. ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಭಕ್ತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಕಪ್ಪಾಗಿದ್ದ ನಂದಿ ವಿಗ್ರಹವನ್ನು ಇತ್ತೀಚೆಗೆ ಪಾಲಿಶ್ ಮಾಡಿ ಹೊಸ ರೂಪ ಕೊಡಲಾಗಿತ್ತು. ಈ ವೇಳೆ ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು.

  • ಅಭ್ಯರ್ಥಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಜೆಡಿಎಸ್‍ಗೆ ಬಂಡಾಯದ ಬಿಸಿ

    ಅಭ್ಯರ್ಥಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಜೆಡಿಎಸ್‍ಗೆ ಬಂಡಾಯದ ಬಿಸಿ

    ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಶಿವಮೊಗ್ಗದಲ್ಲಿ ಬಂಡಾಯದ ಬಿಸಿಗೆ ಪಕ್ಷ ಬಳಲುತ್ತಿದೆ.

    ಪಕ್ಷದ ಜಿಲ್ಲಾ ಅಧ್ಯಕ್ಷ ನಿರಂಜನ್ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಆಗುತ್ತಿದ್ದಂತೆ ಅಸಮಾಧಾನ ಬುಗಿಲೆದ್ದಿದೆ. ಪಕ್ಷದ ಜಿಲ್ಲಾಧ್ಯಕ್ಷ ನಿರಂಜನ್ ಅಭ್ಯರ್ಥಿಯಾಗಿ ಘೋಷಣೆ ಆಗುತ್ತಿದ್ದಂತೆ ಟಿಕೆಟ್ ಅಕಾಂಕ್ಷಿಯಾಗಿದ್ದ ಕಾರ್ಪೊರೇಟರ್ ನರಸಿಂಹಮೂರ್ತಿ ಅವರನ್ನು ನಗರ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆದಿದ್ದಾರೆ. ಇದು ನರಸಿಂಹಮೂರ್ತಿ ಸೇರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

    ನಗರ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡ ಬೆನ್ನಲ್ಲೇ ನರಸಿಂಹಮೂರ್ತಿ ನಾನು ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದ್ದಾರೆ. ಅಭ್ಯರ್ಥಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ನಿರಂಜನ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ನರಸಿಂಹ ಮೂರ್ತಿ, ಪಕ್ಷದ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಾರ್ಯಕರ್ತರ ಜೊತೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ದೂರಿದ್ದಾರೆ.

    ನಗರ ಘಟಕದ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ತೆಗೆದು ಹಾಕಿದ್ದಾರೆ. ನಗರ ಘಟಕ ವಿಸರ್ಜನೆ ಮಾಡಿದ್ದಾರೆ. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ನೋವಾಗಿದೆ. ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಹೇಳಿದ್ದಾರೆ. ನರಸಿಂಹಮುರ್ತಿ ಬಂಡಾಯದಿಂದಾಗಿ ಆರಂಭದಲ್ಲೇ ಜೆಡಿಎಸ್ ಭಿನ್ನಮತ ಎದುರಿಸುವಂತಾಗಿದೆ.