Tag: Ridge Gourd chatni

  • ರುಚಿಕರ ತಾಲಿಪಟ್ಟು, ಹೀರೆಕಾಯಿ ಚಟ್ನಿ ಮಾಡುವ ಸುಲಭ ವಿಧಾನ

    ರುಚಿಕರ ತಾಲಿಪಟ್ಟು, ಹೀರೆಕಾಯಿ ಚಟ್ನಿ ಮಾಡುವ ಸುಲಭ ವಿಧಾನ

    ಬೆಳಗ್ಗೆ ಏನಪ್ಪಾ ತಿಂಡಿ ಮಾಡೋದು ಅಂತಾ ಯೋಚನೆ ಮಾಡ್ತಿದ್ದೀರಾ? ಸುಲಭವಾಗಿ ಕಡಿಮೆ ಸಮಯದಲ್ಲಿ ಯಾವ ತಿಂಡಿ ಮಾಡೋದು ಅಂತಾ ಗೋತ್ತಾಗ್ತಾಯಿಲ್ವಾ? ಹಾಗಾದ್ರೆ ನಮ್ಮ ಹತ್ರ ಇದೆ ಒಂದು ಸೂಪರ್ ರೆಸಿಪಿ ಅದೇ ತಾಲಿಪಟ್ಟು.

    ಹೌದು, ಕಡಿಮೆ ಸಮಯದಲ್ಲಿ ರುಚಿಕರ ತಾಲಿಪಟ್ಟುವನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.

    ತಾಲಿಪಟ್ಟು ಮಾಡಲು ಬೇಕಾಗುವ ಪದಾರ್ಥ:
    1. ಅಕ್ಕಿ ಹಿಟ್ಟು- 2 ಕಪ್
    2. ತುರಿದ ತೆಂಗಿನ ಕಾಯಿ- 1 ಕಪ್
    3. ಈರುಳ್ಳಿ- 2-3
    4. ಹಸಿ ಮೆಣಸು- 5-6
    5. ಕರಿಬೇವಿನ ಸೊಪ್ಪು- 5-6 ಎಲೆ
    6. ಜೀರಿಗೆ- 1 ಚಮಚ
    7. ರುಚಿಗೆ ತಕ್ಕಷ್ಟು ಉಪ್ಪು

    ಹೀರೆಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥ:
    1. ಕತ್ತರಿಸಿದ ಹೀರೆಕಾಯಿ
    2. ಸಾಸಿವೆ- 1 ಚಮಚ
    3. ಕರಿಬೇವಿನ ಸೊಪ್ಪು- 5-6 ಎಲೆ
    4. ಹುಣಸೆ ಹಣ್ಣು- 1-2 ಎಸಳು
    5. ಬೆಲ್ಲ- ಸ್ವಲ್ಪ
    6. ತುರಿದ ತೆಂಗಿನ ಕಾಯಿ- ಅರ್ಧ ಕಪ್
    7. ರುಚಿಗೆ ತಕ್ಕಷ್ಟು ಉಪ್ಪು

     

    ಮಾಡುವ ವಿಧಾನ:
    * ಮೊದಲು ಒಂದು ಪಾತ್ರೆಯಲ್ಲಿ 2 ಕಪ್ ಅಕ್ಕಿ ಹಿಟ್ಟು, 1 ಕಪ್ ತುರಿದ ತೆಂಗಿನ ಕಾಯಿ, 2-3 ಕತ್ತರಿಸಿದ ಈರುಳ್ಳಿ, 5-6 ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸು, ಸ್ವಲ್ಪ ಕರಿಬೇವಿನ ಸೊಪ್ಪು, 1 ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಹದವಾಗಿ ಕಲಿಸಬೇಕು. ನಂತರ ಮಿಶ್ರಣವನ್ನು 10 ನಿಮಿಷ ಹಾಗೆಯೇ ಬಿಡಿ.
    * ನಂತರ ಗ್ಯಾಸ್ ಹಚ್ಚಿ ಅದರ ಮೇಲೆ ಒಂದು ಪ್ಯಾನ್ ಇಟ್ಟು ಕಾಯಲು ಬಿಡಿ. ಬಳಿಕ ಎತ್ತಿಟ್ಟ ಮಿಶ್ರಣದಿಂದ ಒಂದೊಂದಾಗಿ ಉಂಡೆಗಳನ್ನು ಮಾಡಿಕೊಳ್ಳಿ.
    * ಪ್ಯಾನ್ ಕಾದ ಮೇಲೆ ತಯಾರಿಸಿದ ತಾಲಿಪಟ್ಟಿನ ಮಿಶ್ರಣದ ಒಂದೊಂದೇ ಉಂಡೆಯನ್ನು ಇಟ್ಟು ಕೈಗೆ ಸ್ವಲ್ಪ ನೀರು ಹಚ್ಚಿಕೊಂಡು ರೊಟ್ಟಿಯ ರೀತಿ ತಟ್ಟಬೇಕು. ಬಳಿಕ ಮೇಲಿಂದ ಸ್ವಲ್ಪ ಎಣ್ಣೆಯನ್ನು ಹಾಕಿ ಎರಡು ಬದಿಯಲ್ಲಿ ಹದವಾಗಿ ಬೇಯಿಸಿಬೇಕು. ಹೀಗೆ ಒಂದೊಂದೆ ತಾಲಿಪಟ್ಟನ್ನು ತಟ್ಟಿ ಬೇಯಿಸಿ.

    * ಈಗ ಹೀರೆಕಾಯಿ ಚಟ್ನಿ ಮಾಡಲು ಮೊದಲು ಒಂದು ಪ್ಯಾನ್‍ನಲ್ಲಿ ಕತ್ತರಿಸಿದ ಹೀರೆಕಾಯಿ, 1 ಚಮಚ ಸಾಸಿವೆ, ಸ್ವಲ್ಪ ಕರಿಬೇವಿನ ಸೊಪ್ಪು ಎಲ್ಲವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಹುರಿದ ಪದಾರ್ಥದ ಜೊತೆಗೆ ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಬೆಲ್ಲ, ತುರಿದ ತೆಂಗಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಮಿಕ್ಸಿ ಜಾರ್‍ನಲ್ಲಿ ಗ್ರೈಂಡ್ ಮಾಡಿಕೊಳ್ಳಿ.
    * ನಂತರ ತಯಾರಿಸಿದ ಹೀರೆಕಾಯಿ ಚಟ್ನಿ ಜೊತೆಗೆ ತಾಲಿಪಟ್ಟನ್ನು ಪ್ಲೇಟ್‍ನಲ್ಲಿ ಇಟ್ಟರೆ ರುಚಿಕರ ತಾಲಿಪಟ್ಟು ಸವಿಯಲು ಸಿದ್ಧ.

    ಹೀಗೆ ಸುಲಭವಾಗಿ ರುಚಿಕರ ತಾಲಿಪಟ್ಟುವನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಈ ರೆಸಿಪಿಯನ್ನು ನೀವು ತಯಾರಿಸಿ ಸವಿದು ಖುಷಿಪಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv