Tag: Riders

  • ರಸ್ತೆ ಮಧ್ಯೆ ಒಂಟಿ ಸಲಗನ ರಾಜಗಾಂಭೀರ್ಯ ನಡಿಗೆ

    ರಸ್ತೆ ಮಧ್ಯೆ ಒಂಟಿ ಸಲಗನ ರಾಜಗಾಂಭೀರ್ಯ ನಡಿಗೆ

    ಚಿಕ್ಕಮಗಳೂರು: ಆನೆ ಕಂಡು ಸರ್ಕಾರಿ ಬಸ್ ಚಾಲಕ ಬಸ್‍ನ್ನ ಒಂದು ಕಿ.ಮೀ. ಹಿಮ್ಮುಖವಾಗಿ ಓಡಿಸಿದ್ರು, ಅದೇ ಜಾಗದಲ್ಲಿ ಹಣ್ಣಿನ ಲಾರಿಯನ್ನ ಅಡ್ಡಗಟ್ಟಿದ ಒಂಟಿ ಸಲಗ ಹಣ್ಣನ್ನು ತಿಂದು ಟೆಂಪೋವನ್ನು ಸೈಡಿಗೆ ನೂಕಿತ್ತು. ಮತ್ತದೇ ಜಾಗದಲ್ಲಿ ಒಂಟಿ ಸಲಗನ ಕಾಟಕ್ಕೆ ಪ್ರಯಾಣಿಕರು ವಾಹನಗಳನ್ನು ಹಿಂದಿರುಗಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಒಂಟಿ ಸಲಗನ ಉಪಟಳ ಹೆಚ್ಚಾಗಿದೆ. ಈ ಮಾರ್ಗ ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಅರಣ್ಯ ಇರುವುದರಿಂದ ಒಂಟಿ ಸಲಗೆ ಎಲ್ಲಿರುತ್ತೆ ಎಂದು ಹೇಳಲಾಗದು. ಕಣ್ಣಿಗೆ ಬಿದ್ದರಷ್ಟೆ ಕಾಣುತ್ತದೆ.

    ಎರಡು ದಿನಗಳ ಹಿಂದೆ ಇದೇ ಮಾರ್ಗವಾಗಿ ತರೀಕೆರೆಗೆ ಹೋಗುತ್ತಿದ್ದ ಬೈಕ್ ಸವಾರರು ತಿರುವಿನಲ್ಲಿ ಗಾಡಿಯನ್ನು ತಿರುಗಿಸುತ್ತಿದ್ದಂತೆ ಒಂಟಿ ಸಲಗನ ದರ್ಶನವಾಗಿದೆ. ಕೂಡಲೇ ಗಾಡಿಯನ್ನು ನಿಲ್ಲಿಸಿ, ಗಾಬರಿಯಿಂದ ಬೈಕ್ ತಿರುಗಿಸಿಕೊಂಡು ವಾಪಸ್ ಬಂದಿದ್ದಾರೆ. ಬೈಕ್ ತಿರುಗಿಸಿಕೊಂಡು ಬರಬಹುದು. ಆದರೆ ಕಾರು, ಬಸ್ಸುಗಳನ್ನ ಘಾಟಿ ರಸ್ತೆಯಲ್ಲಿ ತಿರುಗಿಸೋದು ಕಷ್ಟವಾಗುತ್ತದೆ.

    ಅದು ಸಾಧ್ಯವಿದ್ದರೂ ಕಣ್ಣಿಗೆ ಆನೆ ಕಂಡಾಗ ಅಸಾಧ್ಯ. ಮೂರು ತಿಂಗಳ ಅವಧಿಯಲ್ಲಿ ಇದೇ ಮಾರ್ಗದ ಮಲ್ಲೆನಹಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಆನೆ ದಾಳಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕೂಡಲೇ ಅಧಿಕಾರಿಗಳು ಒಂಟಿ ಸಲಗನನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    https://www.youtube.com/watch?v=afOhLRWdGW0

  • 500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ನೋಟಿಸ್!

    500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ನೋಟಿಸ್!

    ಮುಂಬೈ: ದುಬಾರಿ ಬೈಕ್, ಜಾಸ್ತಿ ಇಂಜಿನ್ ಸಾಮರ್ಥ್ಯ ಅಂತ ವೇಗವಾಗಿ ಹೋಗೋ ಬೈಕ್ ಮಾಲೀಕರಿಗೆ ಈಗ ಮುಂಬೈ ಪೊಲೀಸರು ಶಾಕ್ ಕೊಟ್ಟಿದ್ದಾರೆ. 500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

    500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಇಂಜಿನ್ ಹೊಂದಿರುವ ಬೈಕ್ ತುಂಬಾ ವೇಗವಾಗಿ, ಜಾಸ್ತಿ ಶಬ್ದ ಮಾಡಿಕೊಂಡು ರಸ್ತೆ ಮೇಲೆ ಓಡಾಡುತ್ತವೆ. ಇದರಿಂದ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ ಅಂತ ಮುಂಬೈ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದಾರೆ.

    ವಿಕೆಂಡ್ ಬಂದ್ರೆ ಸಾಕು ಈ ಗೋಳು ಇನ್ನು ಜಾಸ್ತಿಯಾಗುತ್ತೆ. ಈ ಬೈಕ್‍ಗಳಿಂದ ವಾರವಿಡೀ ಕೆಲಸ ಮಾಡಿ ಸುಸ್ತಾಗಿರೋ ಜನರಿಗೆ ರಜೆ ಸಿಕ್ಕರು ನೆಮ್ಮದಿಯಿಲ್ಲ. ರಜಾ ದಿನಗಳಲ್ಲಿ ಬೈಕ್ ಓಡಾಟ ಹೆಚ್ಚಾಗಿರುವುದರಿಂದ ಪೊಲೀಸರಿಗೆ 10 ರಿಂದ 15 ಕರೆಗಳು ಬರುತ್ತಿದೆ. ಆದ್ದರಿಂದ ನವಿ ಮುಂಬೈನ ಪಾಮ್ ಬೀಚ್ ಬಳಿಯ ನಿವಾಸಿಗಳ ದೂರಿನ ಆಧಾರದ ಮೇಲೆ ಪೊಲೀಸರು 500 ಸಿಸಿಗಿಂತ ಹೆಚ್ಚಿನ ಇಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ಕಳುಹಿಸಿದ್ದಾರೆ.

    ಪಾಮ್ ಬೀಚ್ ಪ್ರದೇಶದಲ್ಲಿ ವಿಕೆಂಡ್ ಬಂತು ಅಂದ್ರೆ 500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‍ಗಳ ಅಬ್ಬರ ಜೋರಾಗಿರುತ್ತೆ. ಅದರಲ್ಲೂ ರಾತ್ರಿ ವೇಳೆ ಇದರ ಆರ್ಭಟ ಹೆಚ್ಚು. ಈ ಬೈಕ್‍ಗಳ ಶಬ್ದದಿಂದ ಬೇಸತ್ತಿರುವ ಪಾಮ್ ಬೀಚ್ ಪ್ರದೇಶದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದರಿಂದ ವಿಕೆಂಡ್ ವೇಳೆ ಪೊಲೀಸರು ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪ್ಲಾನ್ ಮಾಡಿದ್ದರು.

    ಅತೀ ವೇಗದ ಬೈಕ್‍ಗಳಿಂದ ಪೊಲೀಸರಿಗೆ ನಿಯಮ ಉಲ್ಲಂಘಿಸುವ ರೈಡರ್ಸ್ ಗಳನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಆದರಿಂದ ಇದನ್ನು ತಡೆಗಟ್ಟಲು ಪಾಮ್ ಬೀಚ್ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಇರುವ 500ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಇಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ರವಾನಿಸಿದ್ದಾರೆ.

    ಅಷ್ಟೇ ಅಲ್ಲದೆ ಪಾಮ್ ಬೀಚ್ ಬಳಿ ಸ್ಪೀಡ್ ಟ್ರಾಕರ್ ಹಾಗೂ ಸಿಸಿಟಿವಿ ಅಳವಡಿಸಲಾಗಿದ್ದು, ರೂಲ್ಸ್ ಬ್ರೇಕ್ ಮಾಡುವ ಬೈಕ್ ರೈಡರ್ಸ್ ಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಈಗಾಗಲೇ ನೊಟೀಸ್ ನೀಡಿದವರ ಬೈಕ್ ಮಾಲೀಕರು ನಿಯಮ ಮೀರಿದರೆ ಅವರ ಲೈಸೆನ್ಸ್ ರದ್ದುಗೊಳಿಸಲಾಗುವುದು ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರು: ಭಾರೀ ಮಳೆಯಿಂದಾಗಿ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗಿ ನಗರದಲ್ಲಿ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಗುಡ್ಡಗಳು ಕುಸಿದು ಬೀಳುವ ಕಾರಣ ಶಿರಾಡಿ, ಸಂಪಾಜೆ ಘಾಟಿಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರ ಜೊತೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೈಲವನ್ನು ತರಲು ಸಂಕಷ್ಟವಾಗಿದೆ.

    ಕಳೆದ 2-3 ದಿನಗಳಿಂದಲೂ ಬೆಂಗಳೂರಿನ ಖಾಸಗಿ ಬಂಕ್‍ಗಳಲ್ಲಿ ಡೀಸೆಲ್ ಖಾಲಿಯಾಗಿದೆ. ನಗರದ ಖಾಸಗಿ ಬಂಕ್ ಗಳಾದ ಶೆಲ್, ಇಸ್ಸಾರ್ ಬಂಕ್ ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ. ಬರೀ ಖಾಸಗಿ ಬಂಕ್‍ಗಳಿಗೆ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗಿದ್ದು, ಸರ್ಕಾರಿ ಸ್ವಾಮ್ಯದ ಬಂಕ್‍ಗಳಿಗೆ ಬೇರೆ ಕಡೆಗಳಿಂದ ಪೂರೈಕೆಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಇಲ್ಲದ ಕಾರಣ ಮಾಲೀಕರು ಬಂಕ್ ಮುಚ್ಚಿದ್ದಾರೆ.

    ಇಂಡಿಯನ್, ಭಾರತ್ ಪೆಟ್ರೋಲ್ ಬಂಕ್ ಗಳಿಗೆ ಬೆಳಗಾವಿ, ಸಜ್ಜಾಪುರ ಭಾಗಗಳಿಂದ ಪೆಟ್ರೋಲ್ ಪೊರೈಕೆ ಆಗುತ್ತಿರುವುದರಿಂದ ಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ.

    ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಮಂಗಳೂರಿನಿಂದ ಪೆಟ್ರೋಲ್ ತರಲು ಸಮಸ್ಯೆಯಾಗಿದೆ. ತೈಲ ಇಲ್ಲದ ಕಾರಣ ಬಂಕ್ ಗಳನ್ನು ಮುಚ್ಚಲಾಗಿದೆ ಎಂದು ಬಂಕ್ ಮಾಲೀಕರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಚಾರ್ಮಾಡಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಈಗ ಘನ ವಾಹನಗಳು ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ರಸ್ತೆಯಲ್ಲೂ ಈಗ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚರಿಸುತ್ತಿದ್ದು, ಆಗಾಗ ಜಾಮ್ ಆಗುತ್ತಿದೆ. ಭಾನುವಾರ ಮಣ್ಣು ಕುಸಿದು ಬಿದ್ದ ಪರಿಣಾಮ ಸಂಚಾರ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಗಿತಗೊಂಡಿತ್ತು. ಸಂಜೆ ವೇಳೆ ಮಣ್ಣು ತೆರವು ಕಾರ್ಯ ನಡೆದ ಪರಿಣಾಮ ರಾತ್ರಿ ಮತ್ತೆ ಈ ಮಾರ್ಗದಲ್ಲಿ ಸಂಚಾರ ಆರಂಭಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪರಿಚಿತ ವಾಹನ ಡಿಕ್ಕಿ- ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

    ಅಪರಿಚಿತ ವಾಹನ ಡಿಕ್ಕಿ- ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

    ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಮೃತರನ್ನು ತಮಿಳುನಾಡಿನ ಸೇಲಂ ಮೂಲದ ಅಜಿತ್(21) ಹಾಗೂ ಹೊಸೂರು ಮೂಲದ ಸೂರ್ಯ(29) ಎಂದು ಗುರುತಿಸಲಾಗಿದೆ. ಆನೇಕಲ್ ತಾಲೂಕಿನಲ್ಲಿ ನೆರಳೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

    ಇನ್ನು ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ವಾಹನ ಹಾಗೂ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಡಿಸಿಎಂನಿಂದಾಗಿ ತುಮಕೂರು, ಬೆಂಗ್ಳೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಂ!

    ಡಿಸಿಎಂನಿಂದಾಗಿ ತುಮಕೂರು, ಬೆಂಗ್ಳೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಂ!

    ಬೆಂಗಳೂರು: ಉಪ ಮುಖ್ಯಮಂತ್ರಿಗಾಗಿ ಜೀರೋ ಟ್ರಾಫಿಕ್ ಮಾಡಲು ಹೋಗಿ, ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಟೋಲ್ ಗಳಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಹಾಗೂ ಜಾಸ್ ಟೋಲ್ ಗಳಲ್ಲಿ ವಾಹನ ಸವಾರರು ಜಾಮ್ ನಿಂದ ಹೈರಾಣಾಗಿದ್ದಾರೆ. ಡಿಸಿಎಂ ಡಾ. ಜಿ ಪರಮೇಶ್ವರ್ ಕೊರಟಗೆರೆಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರಿಂದ ಜೀರೋ ಟ್ರಾಫಿಕ್ ಮಾಡಲಾಗಿತ್ತು.

    ಅಷ್ಟೇ ಅಲ್ಲದೇ ರಂಜಾನ್ ಹಬ್ಬದ ರಜೆ ಹಾಗೂ ವಾರಾಂತ್ಯದ ರಜೆ ಮುಗಿಸಿಕೊಂಡು, ಜನರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಅಧಿಕ ದಟ್ಟಣೆ ಉಂಟಾಗಿ, ಟೋಲ್ ಗಳಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಸುಮಾರು ಹೆದ್ದಾರಿಯಲ್ಲಿ ಐದಾರು ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಇನ್ನೂ ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರು, ಟೌನ್ ಪೊಲೀಸರು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಉಪಮುಖ್ಯಮಂತ್ರಿಯಿಂದಾಗಿ ಬೆಂಗಳೂರಿಗೆ ತೆರಳಲು ಸವಾರರು ಪರದಾಡುವಂತಾಗಿತ್ತು.

  • ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ಸಂಚರಿಸೋ ವಾಹನ ಸವಾರರಿಗೆ ಕಹಿ ಸುದ್ದಿ

    ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ಸಂಚರಿಸೋ ವಾಹನ ಸವಾರರಿಗೆ ಕಹಿ ಸುದ್ದಿ

    ಬೆಂಗಳೂರು: ವಾಹನ ಸವಾರರಿಗೆ ಇದು ಕಹಿ ಸುದ್ದಿ. ಬೆಂಗಳೂರಿನ ಟ್ರಾಫಿಕ್‍ನಲ್ಲಿ ಒದ್ದಾಡುವವರು ತಪ್ಪದೇ ಈ ಸುದ್ದಿಯನ್ನು ಓದ್ಲೇಬೇಕು. ಯಾಕೆ ಅಂದ್ರೇ ಬೆಂಗಳೂರಿನ ಹೃದಯಭಾಗದ ಕೆಲ ರಸ್ತೆಗಳು ಬಂದ್ ಆಗಲಿವೆ.

    ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗದ ನಾಲ್ಕು ರಸ್ತೆ ಬಂದ್ ಆಗುವ ಸಾಧ್ಯತೆಗಳಿವೆ. ಬೆಂಗಳೂರಿನ ಸೆಂಟರ್ ಆಫ್ ಪಾಯಿಂಟ್ ಕಬ್ಬನ್ ಪಾರ್ಕಿನ ಒಳಗೆ ನಾಲ್ಕು ಗೇಟ್‍ಗಳನ್ನ ಬಂದ್ ಮಾಡಬೇಕು ಅನ್ನೊ ಪ್ರಸ್ತಾವನೆಯನ್ನ ತೋಟಗಾರಿಕಾ ಇಲಾಖೆ ಮಾಡಿದೆ. ಭಾನುವಾರ ಮಾತ್ರ ವಾಹನ ಓಡಾಟಕ್ಕೆ ನಿರ್ಬಂಧವಿತ್ತು. ಅದರೆ ಈಗ 4 ಗೇಟ್‍ಗಳಿಗೆ ಬೀಗ ಬೀಳುವ ಸಾಧ್ಯತೆಯಿದೆ. ವಿಪರೀತವಾಗಿ ಹೆಚ್ಚುತ್ತಿರುವ ಮಾಲಿನ್ಯವನ್ನ ತಡೆಯುವ ನಿಟ್ಟಿನಲ್ಲಿ ಈ ರಸ್ತೆಗಳನ್ನು ಮುಚ್ಚಲೇಬೇಕು ಅನ್ನೋದು ತೋಟಗಾರಿಕಾ ಇಲಾಖೆಯ ಒತ್ತಾಯವಾಗಿದೆ.

    ಬಾಲಭವನ ಗೇಟ್, ಬಿಎಸ್‍ಎನ್‍ಎಲ್ ಗೇಟ್, ಹಡ್ಸನ್ ಗೇಟ್, ಕೆಆರ್ ಸರ್ಕಲ್ ಗೇಟ್ ಈ ನಾಲ್ಕು ಗೇಟ್‍ಗಳಲ್ಲಿ ಎರಡನ್ನು ಮುಚ್ಚೋದು ಗ್ಯಾರೆಂಟಿ. ಇನ್ನೆರಡು ಗೇಟ್‍ಗಳನ್ನು ಮುಚ್ಚುವ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವ ನಿರ್ಧಾರಕ್ಕೆ ಬರಬಹುದು ಅನ್ನೋದು ಇನ್ನು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

    ಒಂದು ಕಡೆ ಉದ್ಯಾನನಗರಿ ಎನ್ನುವ ಹೆಸರಿಗೆ ಕಾರಣವಾಗಿರುವ ಸುಮಾರು 200 ಎಕರೆಯ ಕಬ್ಬನ್ ಪಾರ್ಕನ್ನು ಪಾರ್ಕ್ ಆಗಿಯೇ ಉಳಿಸಬೇಕು ಎನ್ನುವ ಒತ್ತಾಯವನ್ನು ವಾಕರ್ಸ್ ಆಸೋಸಿಯೆಶನ್ ಅಧ್ಯಕ್ಷ ಉಮೇಶ್ ಮಾಡಿದ್ದಾರೆ. ಆದ್ರೆ ಮತ್ತೊಂದು ಕಡೆ ವಾಹನ ಸವಾರರು ಸುಮಾರು ಎರಡು ವರ್ಷಗಳಿಂದ ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳನ್ನ ಬಳಸುತ್ತಿದ್ದು, ಈಗ ಈ ಪ್ರಸ್ತಾಪಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಗೇಟ್‍ಗಳನ್ನ ಮುಚ್ಚಿದ್ರೆ ನಾವು ಮೂರು-ನಾಲ್ಕು ಕಿ.ಮೀ. ಸುತ್ತಿ ಬರಬೇಕು. ತುಂಬಾ ಸಮಸ್ಯೆ ಎದುರಿಸಬೇಕಾಗುತ್ತೆ. ನಮ್ಮ ಟೈಮ್ ಸಹ ವೇಸ್ಟ್ ಆಗುತ್ತೆ ಅನ್ನೋದು ವಾಹನ ಸವಾರರ ಅಳಲು.

    ಒಂದು ಕಡೆ ಕಬ್ಬನ್ ಪಾರ್ಕ್ ರಕ್ಷಣೆ ಮಾಡಬೇಕು ಅನ್ನೊದಾದ್ರೇ ಇನ್ನೊಂದು ಕಡೆ ಈ ಬೆಂಗಳೂರು ಟ್ರಾಫಿಕ್ ತಲೆನೋವು. ಸರ್ಕಾರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುತ್ತೋ ಅಥವಾ ಮಾಲಿನ್ಯ ಕಡಿಮೆ ಮಾಡಿ ಪಾರ್ಕಿನ ರಕ್ಷಣೆ ಮಾಡುತ್ತೋ ಕಾದುನೋಡಬೇಕಿದೆ