Tag: Richa Ghosh

  • ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    – ಯುಪಿ ವಾರಿಯರ್ಸ್‌ಗೆ 12 ರನ್‌ಗಳ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ಸ್ನೇಹ್‌‌ ರಾಣಾ ಭರ್ಜರಿ ಸಿಕ್ಸರ್‌, ಬೌಂಡರಿ ಆಟದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 12 ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಮೂಲಕ ಡಬ್ಲ್ಯೂಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಮಾರ್ಚ್‌ 11 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಬಾಕಿ ಇರುವ ಒಂದು ಪಂದ್ಯವನ್ನಾಡಿ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ ಅಭಿಯಾನಕ್ಕೆ ವಿದಾಯ ಹೇಳಲಿದೆ.

    ಇನ್ನೂ 2025ರ ಆವೃತ್ತಿಯ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಯುಪಿ ವಾರಿಯರ್ಸ್‌ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೆಯ 12 ಎಸೆತಗಳಲ್ಲಿ ಆರ್‌ಸಿಬಿ ಗೆಲುವಿಗೆ 42 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ನೇಹ್‌ರಾಣಾ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್‌ ಪ್ರದರ್ಶಿಸಿದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 28 ರನ್‌ (1, 4, 6, 6, 5nb, 6) ರನ್‌ ಸಿಡಿಸಿದರು. ಆದ್ರೆ 19ನೇ ಓವರ್‌ನ ಕೊನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ಅಲ್ಲಿಯವರೆಗೂ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದಂತಾಯ್ತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಯುಪಿ ತಂಡ 5 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.3 ಓವರ್‌ಗಳಲ್ಲಿ 123ರನ್‌ ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಮಾಡಲು ಆರಂಭಿಸಿದ ಆರ್‌ಸಿಬಿ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ ಅವರ ಬ್ಯಾಟಿಂಗ್‌ ವೈಫಲ್ಯಕ್ಕೆ ತಂಡ ಬೆಲೆ ತೆರಬೇಕಾಯಿತು.

    ರಿಚಾ, ರಾಣಾ ಹೋರಾಟ ವ್ಯರ್ಥ:
    ಒಂದೆಡೆ ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ರಿಚಾ ಘೋಷ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದರು. ಕೇವಲ 33 ಎಸೆತಗಳಲ್ಲಿ 69 ರನ್‌ (6 ಬೌಂಡರಿ, 5 ಸಿಕ್ಸ್‌) ಗಳಿಸಿ ಔಟಾದರು. ಇದರೊಂದಿಗೆ ಪೆರ್ರಿ 28 ರನ್‌, ಜಾರ್ಜಿಯಾ 17 ರನ್‌, ಶಬ್ನೇನಿ ಮೇಘನಾ 27 ರನ್‌, ಕೊನೆಯಲ್ಲಿ ಸ್ನೇಹ್‌ ರಾಣಾ 6 ಎಸೆತಗಳಲ್ಲಿ 26 ರನ್‌ ಕೊಡುಗೆ ನೀಡಿದರು.

    WPL ಇತಿಹಾಸದಲ್ಲೇ ದಾಖಲೆಯ ರನ್‌:
    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಲು ಶುರು ಮಾಡಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ರನ್‌ ಸಹ ಆಗಿದೆ. ಮತ್ತೊಂದೆಡೆ ಅಜೇಯ 99 ರನ್ ಗಳಿಸಿದ ಜಾರ್ಜಿಯಾ, ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು.

    ಆರಂಭಿಕರಾಗಿ ಕಣಕ್ಕಿಳಿದ ಯುಪಿಗೆ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೊಲ್ ಸ್ಫೋಟಕ ಆರಂಭ ತಂದುಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.1 ಓವರ್‌ಗಳಲ್ಲೇ 77 ರನ್‌ಗಳ ಜೊತೆಯಾಟ ಕಟ್ಟಿದರು. ಹ್ಯಾರಿಸ್ 22 ಎಸೆತಗಳಲ್ಲಿ 39 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ಕಿರಣ್ ನವಗಿರೆ ಕೇವಲ 16 ಎಸೆತಗಳಲ್ಲಿ ಸ್ಫೋಟಕ 46 ರನ್ (5 ಸಿಕ್ಸರ್, 2 ಬೌಂಡರಿ) ಗಳಿಸಿ ಅಬ್ಬರಿಸಿದರು. ವಿಕೆಟ್‌ನ ಇನ್ನೊಂದು ತುದಿಯಿಂದ ಬಿರುಸಿನ ಆಟವಾಡಿದ ಜಾರ್ಜಿಯಾ, ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಸ್ಫೋಟಕ ಪ್ರದರ್ಶನ ನೀಡಿದ ಜಾರ್ಜಿಯಾ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು.

    56 ಎಸೆತಗಳನ್ನು ಎದುರಿಸಿದ ಜಾರ್ಜಿಯಾ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸ‌ರ್‌ನೊಂದಿಗೆ 99 ರನ್‌ಗಳಿಸಿ ಅಜೇಯರಾಗುಳಿದರು.

  • WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

    WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

    ವಡೋದರ: ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಎಲ್ಲೀಸ್ ಪೆರ್ರಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

    ವಡೋದರಾದಲ್ಲಿ ಶುಕ್ರವಾರ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಪೇರಿಸಿತು. ಗೆಲ್ಲಲು ಬೃಹತ್ ಗುರಿ ಪಡೆದ ಆರ್ ಸಿಬಿ ವನಿತೆಯರ ಬಳಗ ಇನ್ನೂ 9 ಎಸೆತಗಳು ಬಾರಿ ಇರುವಾಗಲೇ 202 ರನ್‌ ಸಿಡಿಸಿ ಗೆದ್ದು ಬೀಗಿತು.

    ಗೆಲುವಿಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    14ನೇ ಓವರ್‌ ಕಳೆಯುತ್ತಿದ್ದಂತೆ ರಿಚಾ – ಕನಿಕಾ ಹೊಡಿ ಬಡಿ ಆಟಕ್ಕೆ ಮುಂದಾದರು. ವಿಕೆಟ್‌ ಬಿಟ್ಟುಕೊಡದೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಿದ್ದರು. ಇವರಿಬ್ಬರ ಸ್ಫೋಟಕ ಆಟದಿಂದ ಕೊನೆಯ 27 ಎಸೆತಗಳಲ್ಲಿ ತಂಡಕ್ಕೆ 79 ರನ್‌ ಸೇರ್ಪಡೆಯಾಯಿತು. 15, 16, 17, 18, 19ನೇ ಓವರ್‌ಗಳಲ್ಲಿ ಕ್ರಮವಾಗಿ 16, 23, 16, 17, 7 ರನ್‌ ಸೇರ್ಪಡೆಯಾಯಿತು. ಇದು ಆರ್‌ಸಿಬಿ ಗೆಲುವಿಗೆ ಕಾರಣವಾಯಿತು.

    ದಾಖಲೆಯ ಚೇಸಿಂಗ್‌:
    ಗುಜರಾತ್‌ ವಿರುದ್ಧದ ಗೆಲುವಿನೊಂದಿಗೆ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ದಾಖಲೆಯ ಜಯಕ್ಕೆ ಪಾತ್ರವಾಯಿತು. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧವೇ ಮುಂಬೈ ಇಂಡಿಯನ್ಸ್‌ 191 ರನ್‌, ಆರ್‌ಸಿಬಿ 189 ರನ್‌, ಯುಪಿ ವಾರಿಯರ್ಸ್‌ 179 ರನ್‌ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ 172 ರನ್‌ಗಳ ಚೇಸಿಂಗ್‌ ಮಾಡಿದ್ದು ದೊಡ್ಡ ಮೊತ್ತದ ಚೇಸಿಂಗ್‌ ಆಗಿತ್ತು. ಇದೀಗ ಆರ್‌ಸಿಬಿ ಎಲ್ಲ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

    ಆರ್‌ಸಿಬಿಗೆ ಆರಂಭಿಕ ಆಘಾತ:
    ಬೃಹತ್‌ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2 ಓವರ್‌ಗಳಲ್ಲಿ 14 ರನ್‌ ಗಳಿಸಿದ್ದರೂ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಎಲ್ಲಿಸ್‌ ಪೆರ್ರಿ ಆರ್‌ಬಿಗೆ ಆಸರೆಯಾದರು. 25 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಪೆರ್ರಿ ಒಟ್ಟು 34 ಎಸೆತಗಳಲ್ಲಿ 57 ರನ್‌ (2 ಸಿಕ್ಸರ್‌, 6 ಬೌಂಡರಿ) ಚಚ್ಚಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ರಾಘ್ವಿ ಬಿಸ್ಟ್ 25 ರನ್‌ಗಳ ಕೊಡುಗೆ ನೀಡಿದರು.

    97 ರನ್‌ಗಳ ಜೊತೆಯಾಟ:
    ಇವರಿಬ್ಬರ ವಿಕೆಟ್ ಪತನದ ಬಳಿಕ ಒಟ್ಟಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಹೋರಾಟ ನಡೆಸಿದರು. ಗುಜರಾತ್ ಬೌಲರ್ ಗಳನ್ನು ಚೆಂಡಾಡಿದ ಇಬ್ಬರು ಬ್ಯಾಟರ್ ಗಳು ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ 5ನೇ ವಿಕೆಟ್‌ಗೆ ಕನಿಕಾ ಅಹುಜಾ ಹಾಗೂ ರಿಚಾ ಘೋಷ್‌ ಜೋಡಿ ಕೇವಲ 37 ಎಸೆತಗಳಲ್ಲಿ ಸ್ಫೋಟಕ 93 ರನ್‌ಗಳ ಜೊತೆಯಾಟ ನೀಡಿತು. ಇದರಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು.

    ‌ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಪವರ್‌ ಪ್ಲೇನಲ್ಲಿ 39 ರನ್‌ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಕೇವಲ 68 ರನ್‌ ಗಳಿಸಿತ್ತು. ಇದರಿಂದ ಗುಜರಾತ್‌ 150 ರನ್‌ಗಳ ಗಡಿ ದಾಟುವುದೂ ಕಷ್ಟವೆಂದೇ ಭಾವಿಸಲಾಗಿತ್ತು.

    ಆಶ್ಲೀ ಗಾರ್ಡ್ನರ್ ಆರ್ಭಟ:
    ನಿಧಾನಗತಿಯ ಬ್ಯಾಟಿಂಗ್‌ನಿಂದ ಗುಜರಾತ್‌ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ಲೀ ಗಾರ್ಡ್ನರ್ ಜೀವ ತುಂಬಿದರು. ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ್ದರು. ಕೇವಲ 25 ಎಸೆತಗಳಲ್ಲೇ 3 ಬೌಂಡರಿ, 4 ಸಿಕ್ಸರ್‌ ನೆರವಿನೊಂದಿಗೆ ಸ್ಫೋಟಕ ಫಿಫ್ಟಿ ಸಿಡಿಸಿದರು. 213.51 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಗಾರ್ಡ್ನರ್ ಒಟ್ಟು 37 ಎಸೆತಗಳಲ್ಲಿ 79 ರನ್‌ (8 ಸಿಕ್ಸರ್‌, 3 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಡಿಯಾಂಡ್ರಾ ಡಾಟಿನ್ 25 ರನ್‌, ಸಿಮ್ರಾನ್‌ ಶೈಕ್‌ 11 ರನ್‌ ಹಾಗೂ ಹರ್ಲೀನ್‌ ಡಿಯೋಲ್‌ 9 ರನ್‌ ಕೊಡುಗೆ ನೀಡಿದರು.

    ಪಂದ್ಯದ ಗತಿ ಬದಲಿಸಿದ ಗಾರ್ಡ್ನರ್ ಸಿಕ್ಸರ್
    13 ಓವರ್‌ ಕಳೆದರೂ ಗುಜರಾತ್‌, 3 ವಿಕೆಟ್‌ಗೆ 98 ರನ್‌ಗಳನ್ನಷ್ಟೇ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪ್ರೇಮಾ ರಾವತ್‌ ಬೌಲಿಂಗ್‌ಗೆ ಆಶ್ಲೀ ಗಾರ್ಡ್ನರ್ ಹ್ಯಾಟ್ರಿಕ್‌ ಸಿಕ್ಸರ್‌ ಚಚ್ಚಿದರು. ಇದರೊಂದಿಗೆ ಒಂದೇ ಓವರ್‌ನಲ್ಲಿ 21 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಅಲ್ಲದೇ ಗುಜರಾತ್‌ ಆಟಗಾರ್ತಿಯರು 18, 19ನೇ ಓವರ್‌ಗಳಲ್ಲಿ ತಲಾ 20 ರನ್‌ ಚಚ್ಚಿದರು. ಇದು ದೊಡ್ಡ ಮೊತ್ತಕ್ಕೆ ಕಾರಣವಾಯಿತು.

    ಆರ್‌ಸಿಬಿ ಪರ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತರೆ, ಕನಿಕಾ ಅಹುಜಾ, ಜಾರ್ಜಿಯಾ ವೇರ್ಹ್ಯಾಮ್, ಪ್ರೇಮಾ ರಾವತ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • Women’s Asia Cup: ರಿಚಾ ಸ್ಫೋಟಕ ಅರ್ಧಶಕ – ಭಾರತಕ್ಕೆ 78 ರನ್‌ಗಳ ಭರ್ಜರಿ ಜಯ; ಸೆಮಿಸ್‌ಗೆ ಇನ್ನೊಂದೇ ಹೆಜ್ಜೆ!

    Women’s Asia Cup: ರಿಚಾ ಸ್ಫೋಟಕ ಅರ್ಧಶಕ – ಭಾರತಕ್ಕೆ 78 ರನ್‌ಗಳ ಭರ್ಜರಿ ಜಯ; ಸೆಮಿಸ್‌ಗೆ ಇನ್ನೊಂದೇ ಹೆಜ್ಜೆ!

    ಡಂಬುಲ್ಲಾ: ರಿಚಾ ಘೋಷ್‌ (Richa Ghosh) ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅವರ ಭರ್ಜರಿ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್‌ ತಂಡವು (India Womens Team) ಯುಎಇ ವಿರುದ್ಧ 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೆಮಿಫೈನಲ್‌ಗೆ ಇನ್ನಷ್ಟು ಹತ್ತಿರವಾಗಿದೆ.

    ಇಲ್ಲಿನ ರಣಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವನಿತೆಯರ ತಂಡ 20 ಓವರ್‌ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಭರ್ಜರಿ 201 ರನ್ ಗಳಿಸಿತ್ತು. ಇದು ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇದುವರೆಗಿನ ಗರಿಷ್ಠ ಸ್ಕೋರ್ ಸಹ ಆಗಿದೆ. 202 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಯುಎಇ (United Arab Emirates Women) ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ, ಮತ್ತೊಂದೆಡೆ ಬ್ಯಾಟರ್‌ಗಳ ಬಲದಿಂದ ರನ್‌ ಪೇರಿಸುತ್ತಾ ಸಾಗಿತ್ತು. ಕೊನೇ 2 ಓವರ್‌ಗಳಲ್ಲಿ ರಿಚಾ ಘೋಷ್‌ ಹಾಗೂ ಹರ್ಮನ್‌ ಪ್ರೀತ್‌ ( Harmanpreet Kaur) ತಮ್ಮ ಸ್ಫೋಟಕ ಪ್ರದರ್ಶನದಿಂದ 37 ರನ್‌ ಕಲೆಹಾಕುವ ಮೂಲಕ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ರಿಷಾ ಘೋಷ್‌ 64 ರನ್‌ (29 ಎಸೆತ, 1 ಸಿಕ್ಸರ್‌, 12 ಬೌಂಡರಿ), ಹರ್ಮನ್‌ ಪ್ರೀತ್‌ ಕೌರ್‌ 66 ರನ್‌ (47 ಎಸೆತ, 1 ಸಿಕ್ಸರ್, 7 ಬೌಂಡರಿ), ಶಫಾಲಿ ವರ್ಮಾ 37 ರನ್‌, ಸ್ಮೃತಿ ಮಂಧಾನ 13 ರನ್‌, ದಯಾಳನ್‌ ಹೇಮಲತಾ 2 ರನ್‌, ಜೆಮಿಮಾ ರೊಡ್ರಿಗ್ಸ್‌ 14 ರನ್‌ ಗಳಿಸಿ ಮಿಂಚಿದರು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಯುಎಇ ಪರ ಇಶಾ ಓಜಾ 38 ರನ್‌, ಕವಿಶ ಈಗೋಡಗೆ 40 ಗಳಿಸಿದರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಔಟಾದರು.

    ಬೌಲರ್‌ಗಳ ಕಮಾಲ್‌:
    ದೊಡ್ಡ ಮೊತ್ತ ಬೆನ್ನಟ್ಟಲು ಮುಂದಾದ ಯುಎಇ ತಂಡವೂ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಆದರೆ, ಭಾರತೀಯ ಬೌಲರ್​ಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಪವರ್‌ ಪ್ಲೇನಲ್ಲೇ ಎದುರಾಳಿ ಬೌಲರ್‌ಗಳನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. ದೀಪ್ರಿ ಶರ್ಮಾ 2 ವಿಕೆಟ್‌ ಕಿತ್ತರೆ, ರೇಣುಕಾ ಸಿಂಗ್‌, ತನುಜಾ ಕನ್ವರ್‌, ಪೂಜಾ ವಸ್ತ್ರಕಾರ್‌, ರಾಧಾ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಎ ಗುಂಪಿನಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕಾರಣ ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಮುಂದಿನ ಪಂದ್ಯ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.

  • ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ!

    ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ!

    ಚೆನ್ನೈ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (Smriti Mandhana) ಅವರ ಬ್ಯಾಟಿಂಗ್‌ ನೆರವು ಹಾಗೂ ಸ್ನೇಹ್‌ ರಾಣಾ ಅವರ ಅಮೋಘ ಬೌಲಿಂಗ್‌ ಪ್ರದರ್ಶನದಿಂದ ಟೀಂ ಇಂಡಿಯಾ ಮಹಿಳಾ ತಂಡವು ದಕ್ಷಿಣಾ ಆಫ್ರಿಕಾ ಮಹಿಳಾ (South Africa Women) ತಂಡದ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದ್ದ ವನಿತೆಯರು ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಗೆಲುವು ಸಾಧಿಸಿದ್ದಾರೆ.

    ಚೆನ್ನೈನ (Chennai) ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 37 ರನ್‌ ಗುರಿ ಪಡೆದ ಭಾರತ ಮಹಿಳಾ ತಂಡ 9.2 ಓವರ್‌ಗಳಲ್ಲೇ ಗುರಿ ತಲುಪಿ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ಅಜೇಯರಾಗಿ ಉಳಿದರು. ಇದನ್ನೂ ಓದಿ: ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

    ಟಾಸ್ ಗೆದ್ದು ಮೊದಲ ಬ್ಯಾಟ್​ ಮಾಡಿದ ಹರ್ಮನ್​ ಪ್ರೀತ್ ಕೌರ್‌ (Harmanpreet Kaur) ಬಳಗ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್​ ಮೊತ್ತ ಪೇರಿಸಿತ್ತು. 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಪ್ರತಿಯಾಗಿ ಆಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 84.3 ಓವರ್​ಗಳಿಗೆ 266 ರನ್ ಗಳಿಸಿ ಆಲೌಟ್‌ ಆಯಿತು. ಬಳಿಕ ಫಾಲೋ ಆನ್‌ ಗುರಿಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 154.4 ಓವರ್‌ಗಳಲ್ಲಿ 373 ಗಳಿಸಿ ಆಲೌಟ್‌ ಆಯಿತು. ಇದರಿಂದ ಭಾರತ ತಂಡ 37 ರನ್​ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.

    ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ ಬ್ಯಾಟರ್ಸ್‌:
    ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ ದಾಖಲಿಸಿದರು. ಇದರೊಂದಿಗೆ ಸ್ಮೃತಿ ಮಂಧಾನ ಅಮೋಘ ಶತಕ ಸಿಡಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 292 ರನ್​ಗಳ ಜತೆಯಾಟ ನೀಡಿತ್ತು. ಸ್ಮೃತಿ ಮಂಧಾನ 161 ಎಸೆತಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರೆ. ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ದ್ವಿಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗ್ಸ್‌ 55 ರನ್‌, ಹರ್ಮನ್​ಪ್ರೀತ್ ಕೌರ್ 69 ರನ್‌, ರಿಚಾ ಘೋಷ್ 86 ರನ್ ಸಿಡಿಸಿ ಮಿಂಚಿದರು.

    ಸ್ನೇಹ್ ರಾಣಾ ದಾಳಿಗೆ ಆಫ್ರಿಕಾ ತತ್ತರ:
    ಮೊದಲ ಇನ್ನಿಂಗ್ಸ್​ ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ತಂಡ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲುಸ್ 65 ರನ್‌ ಮತ್ತು ಮರಿಜಾನ್ನೆ ಕಪ್ 74 ರನ್‌ ಗಳಿಸಿ ಬ್ಯಾಟಿಂಗ್‌ ಬಲ ನೀಡಿದ್ದರು. ಇದರೊಂದಿಗೆ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್​ ರಾಣಾ 8 ವಿಕೆಟ್ ಕಿತ್ತರು. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ವೋಲ್ವರ್ತ್​​ ಮತ್ತು ಸುನೆ ಲೂಸ್ ಶತಕ:
    337 ರನ್​ಗಳ ಹಿನ್ನಡೆ ಅನುಭವಿಸಿದ ಪ್ರವಾಸಿ 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕಿ ಲಾರಾ ವೋಲ್ವರ್ತ್​​ ಮತ್ತು ಸುನೆ ಲುಸ್​ ಶತಕ ಸಿಡಿಸಿ ಗಮನ ಸೆಳೆದರು. ಲಾರಾ 16 ಬೌಂಡರಿ ಸಹಿತ 122 ರನ್ ಬಾರಿಸಿದರೆ ಲುಸ್​ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ 61 ರನ್‌ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ 2ನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಕಿತ್ತರು, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟವನ್ನು ಕೊನೆಗೊಳಿಸಿದರು.

    4ನೇ ದಿನದಾಟದಲ್ಲಿ 37 ರನ್‌ಗಳ ಗುರಿ ಪಡೆದ ಭಾರತ 9.2 ಓವರ್​​​ಗಳಲ್ಲೇ 37 ರನ್ ಗಳಿಸಿತು. ಇದನ್ನೂ ಓದಿ: `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್

    ಸಂಕ್ಷಿಪ್ತ ಸ್ಕೋರ್‌
    ಟೀಂ ಇಂಡಿಯಾ
    ಮೊದಲ ಇನ್ನಿಂಗ್ಸ್‌ – 603/6d
    2ನೇ ಇನ್ನಿಂಗ್ಸ್‌ – 37/0

    ದಕ್ಷಿಣ ಆಫ್ರಿಕಾ
    ಮೊದಲ ಇನ್ನಿಂಗ್ಸ್‌ – 266/10
    2ನೇ ಇನ್ನಿಂಗ್ಸ್‌ – 373/10

  • WPL 2024 – ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ

    WPL 2024 – ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ 23 ರನ್‌ಗಳ ಭರ್ಜರಿ ಜಯ ಗಳಿಸಿದೆ.

    ಆರ್‌ಸಿಬಿ ನೀಡಿದ್ದ 199 ರನ್‌ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್‌ಗೆ 20 ಓವರ್‌ಗಳಲ್ಲಿ 175 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದನ್ನೂ ಓದಿ: ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

    ಉತ್ತರಪ್ರದೇಶದ ಪರ ಅಲಿಸ್ಸಾ ಹೀಲಿ 38 ಎಸೆತಗಳಿಗೆ 7 ಫೋರ್‌ ಹಾಗೂ 3 ಸಿಕ್ಸ್‌ ಸೇರಿ 55 ರನ್‌ಗಳಿಸಿದರು. ಕಿರಣ್‌ ನವಿಗೆರೆ 11 ಎಸೆತಗಳಿಗೆ 18 ರನ್‌ ಕಲೆಹಾಕಿದರು. ಉಳಿದಂತೆ ಚಾಮರಿ ಅಥಾಪತ್ತು 8, ಗ್ರೇಸ್‌ ಹ್ಯಾರೀಸ್‌ 5, ಶ್ವೇತಾ ಶೆರಾವತ್‌ 1, ದೀಪ್ತಿ ಶರ್ಮಾ 33, ಪೂನಮ್‌ ಕೆಮ್ನಾರ್‌ 31, ಸೋಫಿ ಎಕ್ಲೆಸ್ಟೋನ್ 4 ಹಾಗೂ ಅಂಜಲಿ ಸರ್ವಾಣಿ 3 ರನ್‌ ಗಳಿಸಿದರು.

    ಆರ್‌ಸಿಬಿ ಪರ ಬ್ಯಾಟ್‌ ಬೀಸಿದ್ದ ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ‍್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿತ್ತು. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ

  • ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

    ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ 198 ರನ್ ಗಳಿಸಿದೆ. ಇದು ಈ ಆವೃತ್ತಿಯಲ್ಲಿ ತಂಡವೊಂದು ಬ್ಯಾಟಿಂಗ್‌ನಲ್ಲಿ ಗಳಿಸಿದ ಅಧಿಕ ಸ್ಕೋರ್ ಆಗಿದೆ.

    ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪರ‍್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್‌ಸಿವಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ

    ಟಾಸ್ ಸೋತೊ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಅಗ್ರಕ್ರಮಾಂಕದ ಬ್ಯಾಟರ್‌ಗಳು ಹೊಡಿಬಡಿ ಆಟಕ್ಕೆ ಮುಂದಾದರು. ಮೊದಲ ವಿಕೆಟ್‌ಗೆ ಸಬ್ಬಿನೇನಿ ಮೇಘನಾ ಮತ್ತು ಸ್ಮೃತಿ ಮಂಧಾನ ಜೋಡಿ 5.3 ಓವರ್‌ಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಮಂಧಾನ ಮತ್ತು ಎಲ್ಲಿಸ್ ಪರ‍್ರಿ 64 ಎಸೆತಗಳಲ್ಲಿ 94 ರನ್‌ಗಳ ಜೊತೆಯಾಟ ನೀಡಿದರು. ಕೊನೆಯಲ್ಲಿ ಸ್ಫೋಟಕ ಪ್ರದರ್ಶನದೊಂದಿಗೆ ಪರ‍್ರಿ ಹಾಗೂ ರಿಚಾ ಘೋಷ್ ಜೋಡಿ ಕೇವಲ 18 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಇದನ್ನೂ ಓದಿ: ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

    ಆರಂಭದಿಂದಲೇ ಯುಪಿ ವಾರಿಯರ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಆರ್‌ಸಿಬಿ ಮಹಿಳಾ ಬ್ಯಾರ್‌ಗಳು ಅಭಿಮಾನಿಗಳಿಗೆ ರಸದೌತಣ ನೀಡಿದರು. 160 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 80 ರನ್ (3 ಸಿಕ್ಸರ್, 10 ಬೌಂಡರಿ) ಚಚ್ಚಿದರೆ, ಎಲ್ಲಿಸ್ ಪರ‍್ರಿ 58 ರನ್ (37 ಎಸೆತ, 4 ಬೌಂಡರಿ, 4 ಸಿಕ್ಸರ್), ಮೇಘನಾ 28 ರನ್ (21 ಎಸೆತ, 5 ಬೌಂಡರಿ), ರಿಚಾ ಘೋಷ್ 21 ರನ್ (10 ಎಸೆತ, 2 ಬೌಂಡರಿ, 1 ಸಿಕ್ಸರ್), ಸೋಫಿ ಡಿವೈನ್ 2 ರನ್ ಗಳಿಸಿದರು.

    ಯುಪಿ ವಾರಿಯರ್ಸ್ ಪರ ಅಂಜಲಿ ಸರ್ವಾನಿ, ದೀಪ್ತಿ ಶರ್ಮಾ, ಸೋಫಿ ಎಕ್ಲಿಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.

  • WPL 2024: 2 ರನ್‌ಗಳ ರೋಚಕ ಜಯ – ಮೊದಲ ಗೆಲುವನ್ನು ಅಭಿಮಾನಿ ದೇವ್ರುಗಳಿಗೆ ಅರ್ಪಿಸಿದ ‌RCB

    WPL 2024: 2 ರನ್‌ಗಳ ರೋಚಕ ಜಯ – ಮೊದಲ ಗೆಲುವನ್ನು ಅಭಿಮಾನಿ ದೇವ್ರುಗಳಿಗೆ ಅರ್ಪಿಸಿದ ‌RCB

    – ಬ್ಯಾಟಿಂಗ್‌ನಲ್ಲಿ ಕೈಕೊಟ್ಟ ಮಂಧಾನ, ಸೋಭಾನ ಆಶಾ ಸ್ಪಿನ್‌ ಜಾದು

    ಬೆಂಗಳೂರು: ಸೋಭಾನ ಆಶಾ (Sobhana Asha) ಸ್ಪಿನ್‌ ಜಾದು ಹಾಗೂ ರಿಚಾ ಘೋಷ್‌, ಮೇಘನಾ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಯುಪಿ ವಾರಿಯರ್ಸ್‌ (UP Warriorz) ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿತು. ಮೊದಲ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದ ಆರ್‌ಸಿಬಿ (RCB) ತಂಡ ಈ ಬಾರಿ ಆರಂಭಿಕ ಪಂದ್ಯದಲ್ಲೇ ಗೆಲುವು ಸಾಧಿಸಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.

    ಕೊನೆಯ ಓವರ್‌ನಲ್ಲಿ‌ ಯುಪಿ ವಾರಿಯರ್ಸ್‌ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಸೋಫಿ ಎಕ್ಲೆಸ್ಟೋನ್‌ ಹಾಗೂ ದೀಪ್ತಿ ಶರ್ಮಾ ಜೋಡಿ ಮೊದಲ 4 ಎಸೆತಗಳಲ್ಲಿ ಕೇವಲ 2 ರನ್‌ ಕಲೆಹಾಕಿತು. 5ನೇ ಎಸೆತದಲ್ಲಿ ದೀಪ್ತಿ ಶರ್ಮಾ ಬೌಂಡರಿ ಬಾರಿಸಿದರು. ಕೊನೇ ಎಸೆತದಲ್ಲಿ 5 ರನ್‌ ಅಗತ್ಯವಿದ್ದಾಗ ಸೂಪರ್‌ ಓವರ್‌ ನಿರೀಕ್ಷಿಸಲಾಗಿತ್ತು. ಆದ್ರೆ ಬೌಲಿಂಗ್‌ನಲ್ಲಿದ್ದ ಸೋಫಿ ಮೊಲಿನೆಕ್ಸ್ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರಿಂದ ಆರ್‌ಸಿಬಿ 2 ರನ್‌ಗಳ ರೋಚಕ ಜಯ ಸಾಧಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತ್ತು. 158 ರನ್‌ಗಳ ಗುರಿ ಬೆನ್ನತ್ತಿದ ಯುಪಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಸಾಧಾರಣ ಮೊತ್ತದ ಚೇಸಿಂಗ್‌ ಆರಂಭಿಸಿದ ಯುಪಿ ವಾರಿಯರ್ಸ್‌ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿತ್ತಲ್ಲದೇ 8.3 ಓವರ್‌ಗಳಲ್ಲೇ 49 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್ ಜೋಡಿ 46 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಸ್ಪಿನ್‌ ದಾಳಿ ನಡೆಸಿದ ಸೋಭಾನ ಆಶಾ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದ್ರು. ಗ್ರೇಸ್‌ ಹ್ಯಾರಿಸ್‌ 38 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳುತ್ತಿದ್ದಂತೆ, ಸೆಹ್ರಾವತ್‌ ಸಹ ವಿಕೆಟ್‌ ಕೈಚೆಲ್ಲಿದರು. ಆ ನಂತರ ಗೆಲುವು ಆರ್‌ಸಿಬಿಯತ್ತ ವಾಲಿತು.

    ಅಲಿಸ್ಸಾ ಹೀಲಿ 5 ರನ್‌, ದಿನೇಶ್ ವೃಂದಾ 18 ರನ್‌, ತಹ್ಲಿಯಾ ಮೆಕ್‌ಗ್ರಾತ್ 22, ಕಿರಾನ್ ನವಗಿರೆ 1, ಪೂನಂ ಖೇಮ್ನಾರ್ 14 ರನ್‌, ದೀಪ್ತಿ ಶರ್ಮಾ 13 ರನ್‌ ಗಳಿಸಿದ್ರೆ ಸೋಫಿ ಎಕ್ಲೆಸ್ಟೋನ್ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಆರ್‌ಸಿಬಿ ಪರ ಸೋಭಾನಾ ಆಶಾ 4 ಓವರ್‌ಗಳಲ್ಲಿ 22 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ತಲಾ ಒಂದೊಂದು ವಿಕೆಟ್‌ ಪಡೆದರು.

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬವಾಗಿತ್ತು. ಪುರುಷ ಕ್ರೀಡಾಕೂಟಕ್ಕೂ ಕಮ್ಮಿಇಲ್ಲವೆನ್ನುವಂತೆ ಅಭಿಮಾನಿಗಳು ಮೈದಾನದಲ್ಲಿ ತುಂಬಿ ತುಳುಕಿದ್ದರು. ಪ್ರತಿಯೊಂದು ಕ್ಷಣದಲ್ಲೂ ಆರ್‌ಸಿಬಿ, ಆರ್‌ಸಿಬಿ ಉದ್ಘೋಷ ಕೂಗುತ್ತಾ ಕಣದಲ್ಲಿದ್ದ ಆಟಗಾರ್ತಿಯರನ್ನು ಹುರಿದುಂಬಿಸಿದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಆರ್‌ಸಿಬಿ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ನಿಧಾನಗತಿ ಬ್ಯಾಟಿಂಗ್‌ ಆರಂಭಿಸುವ ಜೊತೆಗೆ 75. ಓವರ್‌ಗಳಲ್ಲಿ 54 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಚಾ ಘೋಷ್‌ ಹಾಗೂ ಸಬ್ಬಿನೇನಿ ಮೇಘನಾ 50 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಆಸರೆಯಾದರು.

    ಸ್ಫೋಟಕ ಬ್ಯಾಟಿಂಗ್‌ ಮಾಡಿರ ರಿಚಾ ಘೋಷ್‌ 37 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 62 ರನ್‌ ಬಾರಿಸಿದ್ರೆ, ಮೇಘನಾ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 53 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಇನ್ನುಳಿದಂತೆ ಸೋಫಿ ಡಿವೈನ್ 1 ರನ್‌, ಸ್ಮೃತಿ ಮಂಧಾನ 13 ರನ್‌, ಎಲ್ಲಿಸ್ ಪೆರ್ರಿ 8 ರನ್‌, ಫಿ ಮೊಲಿನೆಕ್ಸ್ 9 ರನ್‌ ಹಾಗೂ ಶ್ರೇಯಾಂಕ ಪಾಟೀಲ್ 8 ರನ್‌ ಗಳಿಸಿದರು.

    ಯುಪಿ ವಾರಿಯರ್ಸ್‌ ಪರ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್‌ ಕಿತ್ತರೆ, ಗ್ರೇಸ್ ಹ್ಯಾರಿಸ್, ತಹ್ಲಿಯಾ ಮೆಕ್‌ಗ್ರಾತ್, ಸೋಫಿ ಎಕ್ಲೆಸ್ಟೋನ್ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ದೀಪ್ತಿ ಶರ್ಮಾ ದಾಖಲೆ- ಭಾರತಕ್ಕೆ 6 ವಿಕೆಟ್‌ಗಳ ಸುಲಭ ಜಯ

    ದೀಪ್ತಿ ಶರ್ಮಾ ದಾಖಲೆ- ಭಾರತಕ್ಕೆ 6 ವಿಕೆಟ್‌ಗಳ ಸುಲಭ ಜಯ

    ಕೇಪ್‌ಟೌನ್‌: ಟಿ20 ವಿಶ್ವಕಪ್‌ (T20 Cricket) ಟೂರ್ನಿಯ ಎರಡನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ಭಾರತ (Team India) 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

    ಗೆಲ್ಲಲು 118 ರನ್‌ಗಳ ಗುರಿಯನ್ನು ಪಡೆದ ಭಾರತ 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 119 ರನ್‌ ಹೊಡೆಯುವ ಮೂಲಕ ಸತತ ಎರಡನೇ ಜಯ ಗಳಿಸಿತು.

    ವಿಕೆಟ್‌ ನಷ್ಟವಿಲ್ಲದೇ 32 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 43 ರನ್‌ಗಳಿಸುವಷ್ಟರಲ್ಲಿ ಮೊದಲ ಮೂರು ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಮತ್ತು ರಿಚಾ ಘೋಷ್‌ (Richa Ghosh) 4ನೇ ವಿಕೆಟಿಗೆ 65 ಎಸೆತಗಳಲ್ಲಿ 72 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನದ ದಡಕ್ಕೆ ತಂದರು. ಇದನ್ನೂ ಓದಿ: WPL Auction 2023 ಹರಾಜು ನಡೆಸಿಕೊಟ್ಟ ಮಲ್ಲಿಕಾಗೆ ಬೇಷ್ ಎಂದ ಡಿಕೆ

    ಹರ್ಮನ್‌ ಪ್ರೀತ್‌ ಕೌರ್‌ 33 ರನ್‌(42 ಎಸೆತ, 3 ಬೌಂಡರಿ) ರಿಚಾ ಘೋಷ್‌ ಔಟಾಗದೇ 44 ರನ್‌(32 ಎಸೆತ, 5 ಬೌಂಡರಿ) ಹೊಡೆದರು. ಶಫಾಲಿ ವರ್ಮಾ 28 ರನ್‌, ಸ್ಮೃತಿ ಮಂಧಾನ 10 ರನ್‌ ಹೊಡೆದು ಔಟಾದರು.

    ವಿಂಡೀಸ್‌ ಪರ ಸ್ಟಾಫಾನಿ ಟೇಲರ್ 42 ರನ್‌, ಶೆಮೈನ್ ಕ್ಯಾಂಪ್ಬೆಲ್ಲೆ 30 ರನ್‌ ಹೊಡೆದು ಔಟಾದರು. ದೀಪ್ತಿ ಶರ್ಮಾ (Deepti Sharma) 3 ವಿಕೆಟ್‌ ಕಿತ್ತರೆ ರೇಣುಕಾ ಸಿಂಗ್‌ ಮತ್ತು ಪೂಜಾ ವಸ್ತ್ರಕರ್‌ ತಲಾ ಒಂದೊಂದು ವಿಕೆಟ್‌ ಪಡೆದರು.ಈ ಪಂದ್ಯದ ಮೂಲಕ ದೀಪ್ತಿ ಶರ್ಮಾ 100 ವಿಕೆಟ್‌ ಸಾಧನೆ ಮಾಡಿದರು. ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಿತ್ತ ಏಕೈಕ ಬೌಲರ್‌ ಎಂಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.

    ಗ್ರೂಪ್‌ 2 ಅಂಕಪಟ್ಟಿಯಲ್ಲಿ 2 ಜಯ, 2.497 ನೆಟ್‌ ರನ್‌ ರೇಟ್‌ನೊಂದಿಗೆ 4 ಅಂಕ ಪಡೆದಿರುವ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿದ್ದರೆ 2 ಜಯ, 0.590 ನೆಟ್‌ ರನ್‌ ರೇಟ್‌, 4 ಅಂಕದೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಕೇಪ್‌ಟೌನ್: ಭಾರತ ಮಹಿಳಾ ಕ್ರಿಕೆಟ್ ತಂಡದ ಜೆಮಿಮಾ ರಾಡ್ರಿಗಸ್ (Jemimah Rodrigues) ಹಾಗೂ ರಿಚಾ ಘೋಷ್ (Richa Ghosh) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ T20 ಮಹಿಳಾ ವಿಶ್ವಕಪ್ ಟೂರ್ನಿಯ (ICC Women’s T20 World Cup) ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ 7 ವಿಕೆಟ್‌ಗಳ ಜಯ ಸಾಧಿಸಿತು.

    ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಜೆಮಿಮಾ 38 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ ಅಜೇಯ 53 ರನ್ ಸಿಡಿಸಿದರು. ಇದೀಗ ತನ್ನ ಭರ್ಜರಿ ಆಟಕ್ಕೆ ಸ್ಫೂರ್ತಿಯಾಗಿದ್ದು, ಕೊಹ್ಲಿ (Virat Kohli) ಇನ್ನಿಂಗ್ಸ್ ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜೆಮಿಮಾ, ರಿಚಾ ಭರ್ಜರಿ ಬ್ಯಾಟಿಂಗ್‌ – ಪಾಕ್‌ ವಿರುದ್ಧ 7 ವಿಕೆಟ್‌ಗಳ ಜಯ

    ಹೌದು… ಕಳೆದ ವರ್ಷ ಟಿ20 ಪುರುಷರ ವಿಶ್ವಕಪ್ (T20 World Cup) ಆರಂಭಿಕ ಪಂದ್ಯದಲ್ಲೇ ಪಾಕಿಸ್ತಾನದ ಎದುರು ವಿರಾಟ್ ಕೊಹ್ಲಿ (Virat Kohli) 53 ಎಸೆತಗಳಲ್ಲಿ 82 ರನ್ ಚಚ್ಚಿದ್ದರು. ಕೊನೆಯ 20 ನಿಮಿಗಳಲ್ಲಿ ಕೊಹ್ಲಿಯ ಇನ್ನಿಂಗ್ಸ್ ಅತ್ಯಂತ ಸ್ಫೂರ್ತಿದಾಯಕವಾಗಿತ್ತು. ಕೊಹ್ಲಿ ಅವರ ಬಿರುಸಿನ ಬ್ಯಾಟಿಂಗ್ ನನಗೆ ಸ್ಫೂರ್ತಿದಾಯಕವಾಯಿತು. ಭಾನುವಾರದ ಪಂದ್ಯ ನನಗೆ ಆ ಒಂದು ನೆನಪನ್ನ ನೆನಪಿಸಿತು ಎಂದು ಜೆಮಿಮಾ ಹೇಳಿಕೊಂಡಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಯಾವಾಗಲೂ ವಿಶೇಷ ಮತ್ತು ರೋಚಕತೆಯಿಂದ ಕೂಡಿರುತ್ತವೆ. ಈ ಬಗ್ಗೆ ನಾವು ತಂಡದಲ್ಲೂ ಮಾತನಾಡಿದ್ದೇವೆ. ನಾವು ಯಾವಾಗಲೂ ಈ ಪಂದ್ಯಗಳನ್ನು ನೋಡುತ್ತಿದ್ದೇವು. ಅದರಲ್ಲೂ ವಿರಾಟ್ ಕೊಹ್ಲಿ ಅವರ ಪಂದ್ಯ ವೀಕ್ಷಿಸಿದ್ದು ನನಗೆ ಈಗಲೂ ನೆನಪಿದೆ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: `ನನ್ನ ಹೆಂಡತಿಗಿಂತ ಹೆಚ್ಚಾಗಿ ವಿರಾಟ್ ಕೊಹ್ಲಿಯನ್ನ ಪ್ರೀತಿಸುತ್ತೀನಿ’ – ಅಭಿಮಾನಿ ಪೋಸ್ಟರ್‌ಗೆ ನೆಟ್ಟಿಗರು ಫಿದಾ

    ಕೊನೆಯ 10, T20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಜೆಮಿಮಾ 30ಕ್ಕಿಂತಲೂ ಕಡಿಮೆ ರನ್ ಗಳಿಸಿದ್ದರು. ಆದರೆ ಪಾಕ್ ಎದುರು ವಿಶ್ವಾಸದಿಂದ ಕಣಕ್ಕಿಳಿದ್ದ ತಾರೆ, ಬೌಂಡರಿಗಳ ಮಳೆ ಸುರಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಸಹ ಟ್ವೀಟ್ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k