Tag: RG Kar Hospital

  • ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್‌ – ಅಪರಾಧಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ

    ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್‌ – ಅಪರಾಧಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ

    ಕೋಲ್ಕತ್ತಾ: ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ (RG Kar Medical College Hospital) ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಸಂಜಯ್‌ ರಾಯ್‌ಗೆ (34) ಜೀವಾವಧಿ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಕೋಲ್ಕತ್ತಾ ಕೋರ್ಟ್‌ (Kolkata court) ತೀರ್ಪು ಪ್ರಕಟಿಸಿದೆ.

    ಶನಿವಾರವಷ್ಟೇ (ಜ.18) ಕೋಲ್ಕತ್ತಾ (Kolkatta) ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಅನಿರ್ಬನ್ ದಾಸ್ (Anirban Das) ಅವರಿದ್ದ ಏಕಸದಸ್ಯ ಪೀಠ ಸಂಜಯ್‌ ರಾಯ್‌ನನ್ನು (Sanjay Roy) ದೋಷಿ ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿತ್ತು, ಇಂದು (ಜ.20) ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತು. ವಿಚಾರಣೆ ನಡೆಸಿದ 57 ದಿನಗಳಲ್ಲಿ ಕೋರ್ಟ್‌ ತೀರ್ಪು ಪ್ರಕಟಿಸಿರುವುದು ವಿಶೇಷ.

    ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ ಕೋರ್ಟ್‌ ಶಿಕ್ಷೆ ವಿಧಿಸಿದೆ. ಇದೇ ವೇಳೆ ಸಂತ್ರಸ್ತೆ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದ್ರೆ ಸಂತ್ರಸ್ತೆ ಪೋಷಕರು ತಮಗೆ ಪರಿಹಾರ ಬೇಡವೆಂದರು. ಈ ವೇಳೆ ಕೋರ್ಟ್‌, ಕಾನೂನು ಪ್ರಕಾರವೇ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಹಣವನ್ನು ಹೇಗೆ ಬೇಕಾದ್ರೂ ಬಳಸಿಕೊಳ್ಳಲು ಸಂತ್ರಸ್ತೆ ಪೋಷಕರು ಅರ್ಹರಿರುತ್ತಾರೆ ಎಂದು ಹೇಳಿತು.

    ಇನ್ನೂ ನ್ಯಾಯಾಧೀಶರು ಶನಿವಾರ ತೀರ್ಪು ಪ್ರಕಟಿಸುತ್ತಿದ್ದಂತೆ ದೋಷಿಯಾಗಿರುವ ಸಂಜಯ್‌ ರಾವ್‌ ನಾನು ಅಮಾಯಕ. ಯಾವುದೇ ಕೃತ್ಯ ಎಸಗಿಲ್ಲ ಎಂದು ಹೇಳಿ ತನ್ನ ಮೇಲಿದ್ದ ಆರೋಪಗಳನ್ನು ನಿರಾಕರಿಸಿದ್ದ.

    ಏನಿದು ಪ್ರಕರಣ?
    2024ರ ಆಗಸ್ಟ್‌ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸರಿಗೆ ಸೇವಕನಾಗಿದ್ದ ಈತ 4  ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿತ್ತು.

    ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಕೊನೆಗೆ ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ಒಪ್ಪಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅತ್ಯಾಚಾರ ನಡೆದಿದ್ದು ದೃಢ ಎಂದು ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತಾ ಪೊಲೀಸರು ಆಗಸ್ಟ್‌ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಬಂಧನ ನಡೆದಿತ್ತು. ನವೆಂಬರ್‌ 12 ರಿಂದ ವಿಚಾರಣೆ ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಆರೋಪಿಯ ವಿಚಾರಣೆ ಜನವರಿ 9ರಂದು ಕೊನೆಗೊಂಡಿತ್ತು.

  • ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ ಕೇಸ್‌ – ಸಂಜಯ್‌ ರಾಯ್‌ ದೋಷಿ

    ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ ಕೇಸ್‌ – ಸಂಜಯ್‌ ರಾಯ್‌ ದೋಷಿ

    ಕೋಲ್ಕತ್ತಾ: ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಆರ್ ಜಿ ಕರ್ ಮೆಡಿಕಲ್‌ ಕಾಲೇಜು (R. G. Kar Medical College and Hospital) ಟ್ರೈನಿ ವೈದ್ಯೆಯ ಅತ್ಯಾಚಾರ (Rape) ಮತ್ತು ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಂಜಯ್‌ ರಾಯ್‌ನನ್ನು (Sanjay Roy) ದೋಷಿ ಎಂದು ಹೇಳಿ ಕೋರ್ಟ್‌ ತೀರ್ಪು ಪ್ರಕಟಿಸಿದೆ.

    ಕೋಲ್ಕತ್ತಾ (Kolkatta) ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅನಿರ್ಬನ್ ದಾಸ್ ಇಂದು ತೀರ್ಪು ಪ್ರಕಟಿಸಿದರು. ಅತ್ಯಾಚಾರ, ಕೊಲೆ ಸೆಕ್ಷನ್ ಗಳಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು ಸೋಮವಾರ (ಜ.20) ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ವಿಚಾರಣೆ ನಡೆಸಿದ 57 ದಿನಗಳಲ್ಲಿ ಕೋರ್ಟ್‌ ತೀರ್ಪು ಪ್ರಕಟಿಸಿರುವುದು ವಿಶೇಷ. ಇದನ್ನೂ ಓದಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿರೋದು ದೃಢ – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ದೋಷಿಯಾಗಿರುವ ಸಂಜಯ್‌ ರಾವ್‌ ನಾನು ಅಮಾಯಕ. ಯಾವುದೇ ಕೃತ್ಯ ಎಸಗಿಲ್ಲ ಎಂದು ಹೇಳಿ ತನ್ನ ಮೇಲಿದ್ದ ಆರೋಪಗಳನ್ನು ನಿರಾಕರಿಸಿದ್ದಾನೆ. ತೀರ್ಪು ಪ್ರಕಟದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಕೋಣೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಸುಮಾರು 300ಕ್ಕೂ ಹೆಚ್ಚು ಪೊಲೀಸರನ್ನು ಕೋರ್ಟ್‌ ಆವರಣದ ಸುತ್ತ ನಿಯೋಜಿಸಲಾಗಿತ್ತು.

    ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಕೊನೆಗೆ ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ಒಪ್ಪಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅತ್ಯಾಚಾರ ನಡೆದಿದ್ದು ದೃಢ ಎಂದು ಚಾರ್ಜ್‌ಶೀಟ್‌ ಸಲ್ಲಿಸಿತ್ತು.

    ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತ ಪೊಲೀಸರು ಆಗಸ್ಟ್‌ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಬಂಧನ ನಡೆದಿತ್ತು. ನವೆಂಬರ್‌ 12 ರಿಂದ ವಿಚಾರಣೆ ಆರಂಭವಾಗಿತ್ತು.  ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಆರೋಪಿಯ ವಿಚಾರಣೆ ಜನವರಿ 9ರಂದು ಕೊನೆಗೊಂಡಿತ್ತು.

    ಏನಿದು ಪ್ರಕರಣ?
    ಕಳೆದ ಆಗಸ್ಟ್‌ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸರಿಗೆ ಸೇವಕನಾಗಿದ್ದ ಈತ 4  ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.

  • ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಕೇಸ್ – ಆರೋಪಿಗಳಿಗೆ ಜಾಮೀನು

    ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಕೇಸ್ – ಆರೋಪಿಗಳಿಗೆ ಜಾಮೀನು

    ಕೋಲ್ಕತ್ತಾ: ಇಲ್ಲಿನ (Kolkata) ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (RG Kar Hospital Case) ಸಂಬಂಧಿಸಿದಂತೆ ಕೋಲ್ಕತ್ತಾದ ಸೀಲ್ದಾ ನ್ಯಾಯಾಲಯವು (Court) ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಮಾಜಿ ಅಧಿಕಾರಿ ಅಭಿಜಿತ್ ಮೊಂಡಲ್‌ಗೆ ಜಾಮೀನು ಮಂಜೂರು ಮಾಡಿದೆ.

    ಕೋಲ್ಕತ್ತಾ ಹೈಕೋರ್ಟ್‌ನಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿಲಾಗಿತ್ತು. ಸಿಬಿಐ 90 ದಿನಗಳ ಅವಧಿಯಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ವಿಫಲವಾಗಿದೆ. ಇದು ಆರೋಪಗಳಿಗೆ ಜಾಮೀನು ಸಿಗಲು ಕಾರಣವಾಯಿತು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ವೈದ್ಯೆಯ ತಾಯಿ, ಸಿಬಿಐ ತನಿಖೆಯನ್ನು ಚುರುಕುಗೊಳಿಸುತ್ತದೆ ಮತ್ತು ನ್ಯಾಯ ಸಿಗುವಂತೆ ಮಾಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಈಗ, ಆರೋಪಿಗಳಿಗೆ ಜಾಮೀನು ನೀಡಿರುವುದರಿಂದ, ವ್ಯವಸ್ಥೆ ನಮ್ಮನ್ನು ವಿಫಲಗೊಳಿಸುತ್ತಿದೆ ಎಂದು ಭಾಸವಾಗುತ್ತಿದೆ. ಅಲ್ಲದೇ ಪ್ರತಿದಿನ ಪ್ರಭಾವಶಾಲಿಗಳು ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುವ ಮತ್ತೊಂದು ಪ್ರಕರಣ ಇದಾಗಲಿದೆಯೇ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

    ಬಂಧಿತ ಪೊಲೀಸ್ ಅಧಿಕಾರಿಯು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂದೀಪ್ ಘೋಷ್ ಸಾಕ್ಷ್ಯವನ್ನು ನಾಶಗೊಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇಬ್ಬರನ್ನೂ ಸಿಬಿಐ ಬಂಧಿಸಿತ್ತು.

    ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೊಂಡಾಲ್ ಅವರ ವಕೀಲರು, ಶೀಘ್ರದಲ್ಲೇ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಹಣಕಾಸು ಅವ್ಯವಹಾರದ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯಾಗಿರುವ ಸಂದೀಪ್ ಘೋಷ್, ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಸಹ ಬಂಧನದಲ್ಲಿಯೇ ಇರಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

    ಏನಿದು ಕೇಸ್?‌
    ಈ ವರ್ಷ ಆಗಸ್ಟ್‌ನಲ್ಲಿ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು. ಅಲ್ಲದೇ ಕೆಲವು ಪ್ರಮುಖ ಆರೋಪಿಗಳನ್ನು ಸಿಬಿಐ ಬಂಧಿಸಿದ್ದು, ತನಿಖೆ ನಡೆಸುತ್ತಿದೆ.

  • ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ – ಆರ್‌ಜಿ ಕರ್ ಆಸ್ಪತ್ರೆಯ 45ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ

    ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ – ಆರ್‌ಜಿ ಕರ್ ಆಸ್ಪತ್ರೆಯ 45ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ

    ಕೋಲ್ಕತ್ತಾ: ಆಗಸ್ಟ್‌ನಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರಿಗೆ ಬೆಂಬಲಿಸಿ ಪಶ್ಚಿಮ ಬಂಗಾಳದ ಆರ್‌ಜಿ ಕರ್ ಆಸ್ಪತ್ರೆಯ (RG Kar Hospital) 45 ಕ್ಕೂ ಹೆಚ್ಚು ಹಿರಿಯ ವೈದ್ಯರು (Doctors) ಮತ್ತು ಅಧ್ಯಾಪಕರು ರಾಜೀನಾಮೆ ನೀಡಿದ್ದಾರೆ.

    ರಾಜೀನಾಮೆ ಸಲ್ಲಿಸುವಾಗ ಹಿರಿಯ ವೈದ್ಯರು, ಕಿರಿಯ ಸಹೋದ್ಯೋಗಿಗಳ ಬೇಡಿಕೆಗಳನ್ನು ಈಡೇರಿಸಿಲ್ಲ. ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ತನಿಖೆಯಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಆರೋಪಿಸಿದ್ದಾರೆ.

    ಸದ್ಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಭಟನಾ ನಿರತ ವೈದ್ಯರ ಆರೋಗ್ಯ ಹದಗೆಟ್ಟಿದೆ. ಪ್ರತಿಭಟನಾನಿರತ ವೈದ್ಯರು ಮತ್ತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರ ಜೊತೆ ರಾಜಿ ಮಾಡಿಕೊಳ್ಳುವಂತೆ ಸರ್ಕಾರವನ್ನು ಕೋರುತ್ತೇವೆ ಎಂದು ಆರ್‌ಜಿ ಕರ್ ಆಸ್ಪತ್ರೆ ಆಡಳಿತಕ್ಕೆ ಬರೆದ ಪತ್ರದಲ್ಲಿ ವೈದ್ಯರು ತಿಳಿಸಿದ್ದಾರೆ.

    ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈದ್ಯರ ಹದಗೆಟ್ಟ ಸ್ಥಿತಿಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವಂತೆ ತೋರುತ್ತಿದೆ. ಇದೇ ಕಾರಣಕ್ಕೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

    ಈ ಬೆಳವಣಿಗೆಯ ನಡುವೆ ಮತ್ತೊಂದು ವೈದ್ಯರ ಸಂಘಟನೆಯಾದ ಜಾಯಿಂಟ್ ಪ್ಲಾಟ್‌ಫಾರ್ಮ್ ಆಫ್ ಡಾಕ್ಟರ್ಸ್ (ಜೆಪಿಡಿ) ಸಹ ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಬೆಂಬಲವಾಗಿ ಹೇಳಿಕೆಯನ್ನು ನೀಡಿದೆ.

    ಆರ್‌ಜಿ ಕರ್ ಅತ್ಯಾಚಾರ-ಹತ್ಯೆ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ದುರ್ಗಾಪೂಜೆ ಸಂಭ್ರಮದ ನಡುವೆಯೂ ಕಿರಿಯ ವೈದ್ಯರು ಸತತ ನಾಲ್ಕನೇ ದಿನವೂ ಮಂಗಳವಾರ ತಮ್ಮ ಆಮರಣಾಂತ ಉಪವಾಸವನ್ನು ಮುಂದುವರೆಸಿದರು. ಸುಮಾರು 15 ಹಿರಿಯ ವೈದ್ಯರು ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ನಡೆಸುವ ಮೂಲಕ ಅವರೊಂದಿಗೆ ಸೇರಿ ಒಗ್ಗಟ್ಟು ಪ್ರದರ್ಶಿಸಿದರು.

  • ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಆರೋಪ – 10 ವೈದ್ಯರು ಸೇರಿ 59 ಮಂದಿ ಸಸ್ಪೆಂಡ್‌!

    ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಆರೋಪ – 10 ವೈದ್ಯರು ಸೇರಿ 59 ಮಂದಿ ಸಸ್ಪೆಂಡ್‌!

    ಕೋಲ್ಕತ್ತಾ: ರ‍್ಯಾಗಿಂಗ್‌ (Raggin), ಬೆದರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ( RG Kar Hospital) ವೈದ್ಯರು (Doctors) ಹಾಗೂ ವಿದ್ಯಾರ್ಥಿಗಳು ಸೇರಿದಂತೆ 59 ಮಂದಿಯನ್ನು ಅಮಾನತುಗೊಳಿಸಲಾಗಿದೆ.

    ರ‍್ಯಾಗಿಂಗ್, ಮನಿ ಲಾಂಡರಿಂಗ್ ಮತ್ತು ಬೆದರಿಕೆ ಆರೋಪಗಳ ತನಿಖೆಯ ನಂತರ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯು ಸಂಸ್ಥೆಯ 10 ವೈದ್ಯರನ್ನು ಹೊರಹಾಕಿದೆ. ಆಸ್ಪತ್ರೆಯಲ್ಲಿ ಕಿರುಕುಳ ನೀಡುವುದು, ಭಯದ ವಾತಾವರಣ ಸೃಷ್ಟಿಸುವುದು ಸೇರಿದಂತೆ ಹಲವು ಆರೋಪಗಳನ್ನು ವೈದ್ಯರು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಕಾಲೇಜು ಕೌನ್ಸಿಲ್ ಸಭೆಯಲ್ಲಿ ಈ ವೈದ್ಯರನ್ನು ಹಾಸ್ಟೆಲ್‌ನಿಂದ ಶಾಶ್ವತವಾಗಿ ಹೊರಹಾಕಲು ನಿರ್ಧರಿಸಲಾಯಿತು. ಅವರ ಮನೆಗಳಿಗೂ ನೋಟಿಸ್ ಕಳುಹಿಸಲಾಯಿತು. 10 ವೈದ್ಯರ ಉಚ್ಚಾಟನೆಯೊಂದಿಗೆ, ಇಂಟರ್ನಿಗಳು, ವಿದ್ಯಾರ್ಥಿಗಳು ಮತ್ತು ಗೃಹ ಸಿಬ್ಬಂದಿ ಸೇರಿದಂತೆ ಒಟ್ಟು 59 ಜನರನ್ನು ಅಮಾನತುಗೊಳಿಸಲಾಗಿದೆ.

    ಉಚ್ಚಾಟಿತ ವೈದ್ಯರಲ್ಲಿ ಸೌರಭ್ ಪಾಲ್, ಆಶಿಶ್ ಪಾಂಡೆ (ಇವರನ್ನು ಸಿಬಿಐ ಬಂಧಿಸಿದೆ), ಅಭಿಷೇಕ್ ಸೇನ್, ಆಯುಶ್ರೀ ಥಾಪಾ, ನಿರ್ಜನ್ ಬಾಗ್ಚಿ, ಸರೀಫ್ ಹಸನ್, ನೀಲಾಗ್ನಿ ದೇಬನಾಥ್, ಅಮರೇಂದ್ರ ಸಿಂಗ್, ಸತ್ಪಾಲ್ ಸಿಂಗ್ ಮತ್ತು ತನ್ವೀರ್ ಅಹ್ಮದ್ ಕಾಜಿ ಸೇರಿದ್ದಾರೆ. ಹಾಸ್ಟೆಲ್‌ಗಳನ್ನು ಖಾಲಿ ಮಾಡಲು ಅವರಿಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ.

    ಹೆಚ್ಚುವರಿಯಾಗಿ, ಅವರ ಹೆಸರುಗಳನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ರವಾನಿಸಲಾಗುತ್ತದೆ. ಅದು ಅವರ ವೈದ್ಯಕೀಯ ನೋಂದಣಿ ಪ್ರಮಾಣಪತ್ರಗಳನ್ನು ಪರಿಶೀಲಿಸಬಹುದು ಮತ್ತು ರದ್ದುಗೊಳಿಸಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

    ರ‍್ಯಾಗಿಂಗ್‌, ಬೆದರಿಕೆಗಳು, ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಹಲವರಿಂದ ದೂರುಗಳು ಬಂದ ಬಳಿಕ ತನಿಖೆ ನಡೆಸಲಾಗಿತ್ತು. ಈ ವೇಳೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರುವಂತೆ ಒತ್ತಡ, ಕೆಲವು ಮೆರವಣಿಗೆ ಮತ್ತು ಸಭೆಗಳಲ್ಲಿ ಭಾಗವಹಿಸದಂತೆ ಕಿರುಕುಳ ನೀಡಿದ್ದಾರೆ ಎಂದು ಹಲವಾರು ವಿದ್ಯಾರ್ಥಿಗಳು ಆರೋಪಿಸಿದ್ದರು.

    ಆಗಸ್ಟ್ 9 ರಂದು RG ಕರ್ ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ರಾಜ್ಯದಾದ್ಯಂತ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ರ‍್ಯಾಗಿಂಗ್‌ ಬಗ್ಗೆ ದೂರುಗಳು ದಾಖಲಾಗಿದ್ದವು.

  • ಮಹಿಳಾ ವೈದ್ಯರಿಗೆ ನೈಟ್ ಶಿಫ್ಟ್ ತೆಗೆದು ಅಧಿಸೂಚನೆ – ಮಮತಾ ಸರ್ಕಾರಕ್ಕೆ ಸುಪ್ರೀಂ ಚಾಟಿ

    ನವದೆಹಲಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರಿಗೆ ರಾತ್ರಿ ಪಾಳಿ ನೀಡುವುದನ್ನು ನಿಲ್ಲಿಸುವ ಪಶ್ಚಿಮ ಬಂಗಾಳ (West Bengal) ಸರ್ಕಾರದ ಅಧಿಸೂಚನೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಟುವಾಗಿ ಟೀಕಿಸಿದ್ದಾರೆ. ಅಲ್ಲದೇ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವೈದ್ಯರಿಗೆ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಚಾಟಿ ಬೀಸಿದ್ದಾರೆ.

    ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಆದ ಬಳಿಕ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಿದ್ದುಪಡಿ ಮಾಡಲು ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ (Supreme Court) ನಿರ್ದೇಶಿಸಿಸಿದೆ.

    ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಅವರು ರಿಯಾಯಿತಿಯನ್ನು ಬಯಸುವುದಿಲ್ಲ. ಅದಕ್ಕೆ ಪರಿಹಾರವೆಂದರೆ, ನೀವು ಭದ್ರತೆಯನ್ನು ನೀಡಬೇಕು. ಪಶ್ಚಿಮ ಬಂಗಾಳ ಅಧಿಸೂಚನೆಯನ್ನು ಸರಿಪಡಿಸಬೇಕು. ಭದ್ರತೆ ಒದಗಿಸುವುದು ನಿಮ್ಮ ಕರ್ತವ್ಯ, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳಲಾಗುವುದಿಲ್ಲ. ಮಹಿಳೆಯರು ಪೈಲಟ್‍ಗಳಾಗಿ, ಸೇನೆಯಲ್ಲಿ ರಾತ್ರಿ ಕೆಲಸ ಮಾಡುತ್ತಾರೆ ಎಂಬುದನ್ನು ನೀವು ಗಮನಿಸಬೇಕು ಎಂದು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಸಿಬಲ್ ಅವರಿಗೆ ಸಿಜೆಐ ಸೂಚಿಸಿದರು.

    ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (RG Kar Hospital) ನಡೆದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಪೀಠವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆ ನಡೆಸುತ್ತಿದೆ.

    ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ-ಕೊಲೆ ಘಟನೆಯ ಕುರಿತು ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಧಾನ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ ಅವರು ಮಹಿಳಾ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ನೂತನ ಕ್ರಮಗಳನ್ನು ಘೋಷಿಸಿದ್ದರು.

    ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಮಹಿಳಾ ಸ್ನೇಹಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಸ್ಥಳೀಯ ಪೊಲೀಸರಿಂದ ನಿತ್ಯ ರಾತ್ರಿ ಗಸ್ತು ತಿರುಗಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ರಾತ್ರಿ ಕರ್ತವ್ಯದ ವೇಳೆ ಮಹಿಳಾ ವೈದ್ಯರು ಜೋಡಿಯಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಶಿಫ್ಟ್ ವ್ಯವಸ್ಥೆ ಮಾಡಲಾಗುವುದು. ಈ ಮಾರ್ಗಸೂಚಿಗಳನ್ನು ಅನುಸರಿಸಲು ಖಾಸಗಿ ಆರೋಗ್ಯ ಕೇಂದ್ರಗಳಿಗೂ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • ಒಪ್ಪಿಗೆ ಪತ್ರ ಇಲ್ಲದೇ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷೆ ಹೇಗೆ ನಡೆಯಿತು? – ಬಂಗಾಳ ಸರ್ಕಾರಕ್ಕೆ ಸುಪ್ರೀಂ ಚಾಟಿ

    ಒಪ್ಪಿಗೆ ಪತ್ರ ಇಲ್ಲದೇ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷೆ ಹೇಗೆ ನಡೆಯಿತು? – ಬಂಗಾಳ ಸರ್ಕಾರಕ್ಕೆ ಸುಪ್ರೀಂ ಚಾಟಿ

    – ನಾಳೆ ಸಂಜೆಯೊಳಗೆ ಕರ್ತವ್ಯಕ್ಕೆ ಹಾಜರಾಗಲು ವೈದ್ಯರಿಗೆ ಸೂಚನೆ

    ನವದೆಹಲಿ: ಔಪಚಾರಿಕ ಕೋರಿಕೆ ಇಲ್ಲದೇ ಟ್ರೈನಿ ವೈದ್ಯೆಯ ಮೃತದೇಹದ ಮರಣೋತ್ತರ ಪರೀಕ್ಷೆ ಹೇಗೆ ನಡೆಸಲಾಯಿತು ಎಂದು ಪಶ್ಚಿಮ ಬಂಗಾಳ (West Bengal) ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದೆ.

    ಶವವನ್ನು ಮರಣೋತ್ತರ ಪರೀಕ್ಷೆಗೆ ನೀಡುವಾಗ ಒಪ್ಪಿಗೆ ಪತ್ರ ಅಗತ್ಯವಾಗಿಬೇಕು. ಅದಿಲ್ಲದೇ ವೈದ್ಯರು ಶವವನ್ನು ಪಡೆಯುವುದಿಲ್ಲ ಈ ನಿಯಮಗಳ ಮಧ್ಯೆ ಔಪಚಾರಿಕ ಅನುಮತಿ ಇಲ್ಲದೇ ಮರಣೋತ್ತರ ಪರೀಕ್ಷೆ ಹೇಗೆ ನಡೆಸಲಾಯಿತು ಎಂದು ಕೋರ್ಟ್ ಪ್ರಶ್ನಿಸಿದೆ.

    ಕೊಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ (RG Kar Hospital) ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಚಾರ ಮತ್ತು ಕೊಲೆ ಪ್ರಕರಣದ (Kolkata horror) ವಿಚಾರಣೆ ಮುಂದುವರಿಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ಕೊಲೆ ಪ್ರಕರಣದಲ್ಲಿ ಅಸ್ವಾಭಾವಿಕ ಸಾವಿನ ವರದಿಯ ಸಮಯದ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿತು.

    ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣದ ಮಧ್ಯಂತರ ವರದಿಯನ್ನು ಸಲ್ಲಿಸಿತು. ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಫೋರೆನ್ಸಿಕ್ಸ್ ವರದಿ ಮಾದರಿಗಳನ್ನು ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ಗೆ ಕಳುಹಿಸಲು ಯೋಜಿಸಿದೆ. ಸಾಕ್ಷ್ಯಾಧಾರಗಳ ನಿರ್ವಹಣೆಯಲ್ಲಿನ ವ್ಯತ್ಯಾಸಗಳಾಗಿವೆ. ರಕ್ತದ ಮಾದರಿಗಳನ್ನು ಅಗತ್ಯವಿರುವ 4 ಡಿಗ್ರಿ ಸೆಲ್ಸಿಯಸ್‍ನಲ್ಲಿ ಸಂಗ್ರಹಿಸಲಾಗಿಲ್ಲ. ಅತ್ಯಾಚಾರ ಮತ್ತು ಕೊಲೆ ತನಿಖೆಯಲ್ಲಿ ಮೊದಲ ಕೆಲವು ಗಂಟೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಅದಕ್ಕಾಗಿಯೇ ನಿಮ್ಮ ಬಳಿ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ ಇದೆಯೇ ಅಥವಾ ಇಲ್ಲವೇ ಎಂದು ಕೇಳಿದರು. ಆರೋಪಿಗಳು ಹೊರಬಂದ ನಂತರ ಬೇರೆ ಯಾರು ಪ್ರವೇಶಿಸಿದರು? ಎಂದರು. ಇದಕ್ಕೆ ಉತ್ತರಿಸಿದ ಬಂಗಾಳ ಸರ್ಕಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಾಕ್ಷಿಯಾಗಿ ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

    ವೈದ್ಯರು ಮುಷ್ಕರ ನಡೆಸಿದ್ದರಿಂದ 23 ಜನರು ಸಾವನ್ನಪ್ಪಿದ್ದಾರೆ ಎಂದು ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ್ದು, ರಾಜ್ಯ ಆರೋಗ್ಯ ಇಲಾಖೆ ನೀಡಿದ ವರದಿಯನ್ನು ಕೋರ್ಟ್‍ಗೆ ಸಲ್ಲಿಸಲಾಯಿತು. ಇದೇ ವೇಳೆ ವೈದ್ಯರಿಕೆ ಬೆದರಿಕೆ ಬರುತ್ತಿವೆ ಎಂದು ಹಿರಿಯ ವಕೀಲೆ ಗೀತಾ ಲೂತ್ರಾ ಪ್ರಸ್ತಾಪಿಸಿದರು. ಅಲ್ಲದೇ ವೈದ್ಯರು ಕರ್ತವ್ಯಕ್ಕೆ ಬರಲು ಹೆದರುತ್ತಿದ್ದಾರೆ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ವೈದ್ಯರು ಕರ್ತವ್ಯಕ್ಕೆ ಮರಳದಿದ್ದರೆ ಕ್ರಮ ಕೈಗೊಳ್ಳುವುದು ತಡೆಯಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಮರಳುವ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿದೆ. ಒಂದು ವೇಳೆ ಕರ್ತವ್ಯಕ್ಕೆ ಮರಳದಿದ್ದರೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ನಾವು ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ನಾಳೆ ಸಂಜೆ 5 ಗಂಟೆಯೊಳಗೆ ವೈದ್ಯರು ಕೆಲಸಕ್ಕೆ ಮರಳಬೇಕು. ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು. ಒಂದು ವೇಳೆ ಕೆಲಸಕ್ಕೆ ಗೈರುಹಾಜರಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಕೆ ನೀಡಿತು.

    ಆರ್‌.ಜಿ ಕರ್‌ ಕಾಲೇಜಿಗೆ ಭದ್ರತೆ ನೀಡುವ ದೃಷ್ಠಿಯಿಂದ ಬಂಗಾಳ ಗೃಹ ಇಲಾಖೆಯ ಅಧಿಕಾರಿ ಮತ್ತು ಸಿಐಎಸ್‍ಎಫ್ ಹಿರಿಯ ಅಧಿಕಾರಿ ಸಭೆ ನಡೆಸಬೇಕು ಮತ್ತು ಕೂಡಲೇ ವ್ಯವಸ್ಥಿತ ಭದ್ರತೆ ಒದಗಿಸಬೇಕು ಎಂದು ಪೀಠ ಸೂಚಿಸಿತು.

  • ಆರ್ಥಿಕ ಅವ್ಯವಹಾರಗಳ ಸಿಬಿಐ ತನಿಖೆ ಪ್ರಶ್ನಿಸಿ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿ ವಜಾ

    ಆರ್ಥಿಕ ಅವ್ಯವಹಾರಗಳ ಸಿಬಿಐ ತನಿಖೆ ಪ್ರಶ್ನಿಸಿ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿ ವಜಾ

    ನವದೆಹಲಿ: ಆರ್ಥಿಕ ಅವ್ಯವಹಾರಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಕೋಲ್ಕತ್ತಾ ಹೈಕೋರ್ಟ್‌ (Kolkata High Court) ಆದೇಶವನ್ನು ಪ್ರಶ್ನಿಸಿ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ತನಿಖೆಯನ್ನು ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿತು. ಇದನ್ನೂ ಓದಿ: ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ – ಶಕ್ತಿ ಪರಿವರ್ತನಾ ಶೃಂಗಸಭೆಯಲ್ಲಿ ಜೋಶಿ ಶ್ಲಾಘನೆ

    ಘೋಷ್ ಪರ ಹಿರಿಯ ವಕೀಲ ಮೀನಾಕ್ಷಿ ಅರೋರಾ ವಾದ ಮಂಡಿಸಿದರು. ಅರ್ಜಿದಾರರು ವಿಚಾರಣೆಗೆ ಆಕ್ಷೇಪಣೆ ಸಲ್ಲಿಸುತ್ತಿಲ್ಲ. ಆದರೆ ಹೈಕೋರ್ಟ್ ಮಾಡಿದ ಕೆಲವು ಪ್ರತಿಕೂಲ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದಾರೆ. ಆ.9 ರಂದು ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆಯೊಂದಿಗೆ ಆರೋಪಿತ ಅಕ್ರಮಗಳನ್ನು ಜೋಡಿಸುವ ಹೈಕೋರ್ಟ್‌ನ ಕಲ್ಪನೆ ಬಗ್ಗೆ ಆಕ್ಷೇಪವಿದೆ ಎಂದು ಅವರು ಹೇಳಿದರು.

    ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಸಿಜೆಐ ಇದು ತನಿಖೆಯ ವಿಷಯವಾಗಿದೆ. ಬಯೋಮೆಡಿಕಲ್ ತ್ಯಾಜ್ಯದ ಸಮಸ್ಯೆಯು ಒಂದು ಪ್ರಚೋದಕವಾಗಿದೆ. ಆದ್ದರಿಂದ ಈ ವಿಷಯದಲ್ಲಿ ತಾರ್ಕಿಕ ತೀರ್ಮಾನಕ್ಕೆ ಬರಬೇಕು ಎನ್ನುವುದು ಹೈಕೋರ್ಟ್ ಬಯಸುತ್ತದೆ. ಇದರಲ್ಲಿ ನಾವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಸಿಜೆಐ ಹೇಳಿದರು. ಇದನ್ನೂ ಓದಿ: ಮುಂಬೈನ ಟೈಮ್ಸ್ ಟವರ್‌ನಲ್ಲಿ ಅಗ್ನಿ ಅವಘಡ

    ಇದಕ್ಕೆ ಪ್ರತಿಕ್ರಿಯಿಸಿದ ಅರೋರಾ, ಹೈಕೋರ್ಟ್ ಈ ಬಗ್ಗೆ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿಜೆಐ ನಾವು ತನಿಖೆಯನ್ನು ಸ್ತಬ್ಧಗೊಳಿಸಬಾರದು. ನಮ್ಮ ಮುಂದೆ ಸ್ಥಿತಿ ವರದಿಗಳನ್ನು ಸಲ್ಲಿಸುವಂತೆ ನಾವು ಸಿಬಿಐಗೆ ಸೂಚಿಸುತ್ತೇವೆ ಎಂದರು.

    ಹೈಕೋರ್ಟ್ ಮಾಡಿದ ಅವಲೋಕನಗಳನ್ನು ಆದೇಶದಿಂದ ತೆಗೆದುಹಾಕಬೇಕು ಎಂದು ಅರೋರಾ ಒತ್ತಾಯಿಸಿದರು. ಈ ಹಂತದಲ್ಲಿ ಅರ್ಜಿದಾರರು ಪೂರ್ವಾಗ್ರಹ ಪೀಡಿತರಾಗಿರುವುದರಿಂದ ಇವುಗಳನ್ನು ಪ್ರಾಥಮಿಕ ಅವಲೋಕನಗಳು ಎಂದು ನ್ಯಾಯಾಲಯವು ದಾಖಲಿಸಬಹುದು ಎಂದು ಅರೋರಾ ವಿನಂತಿಸಿದರು. ಆದರೆ ಅದಕ್ಕೆ ಪೀಠ ನಿರಾಕರಿಸಿತು. ಇದನ್ನೂ ಓದಿ: Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತರ್ ಅಲಿ ಅವರು ಮಾಜಿ ಪ್ರಾಂಶುಪಾಲ ಡಾ. ಘೋಷ್ ವಿರುದ್ಧ ಕೋಲ್ಕತ್ತಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೃತದೇಹಗಳ ದುರುಪಯೋಗ, ಜೈವಿಕ ತ್ಯಾಜ್ಯವನ್ನು ಮುಕ್ತ ಮಾರುಕಟ್ಟೆಯಲ್ಲಿ ಮರು ಮಾರಾಟ, ಸಾರ್ವಜನಿಕ ನಿಧಿಯ ದುರುಪಯೋಗ ಮುಂತಾದ ಗಂಭೀರ ಅಕ್ರಮಗಳನ್ನು ಮಾಡಿದ್ದರು. ಆರೋಪದ ಹಿನ್ನೆಲೆ ಹೈಕೋರ್ಟ್ ತನಿಖೆಗೆ ನೀಡಿದೆ.