Tag: Reverse Operation

  • ಬಿಜೆಪಿ ಶಾಸಕರ 3 ದಿನ ರೆಸಾರ್ಟ್ ವಾಸ್ತವ್ಯ- 1.15 ಕೋಟಿ ರೂ. ವೆಚ್ಚ

    ಬಿಜೆಪಿ ಶಾಸಕರ 3 ದಿನ ರೆಸಾರ್ಟ್ ವಾಸ್ತವ್ಯ- 1.15 ಕೋಟಿ ರೂ. ವೆಚ್ಚ

    ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಿದರೆ, ಇತ್ತ ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ತಮ್ಮ ಶಾಸಕರನ್ನೂ ರೆಸಾರ್ಟ್‍ಗೆ ಕಳುಹಿಸಿದೆ. ಬಿಜೆಪಿ ಶಾಸಕರ ಮೂರು ದಿನಗಳ ರೆಸಾರ್ಟ್ ವೆಚ್ಚ ಬರೋಬ್ಬರಿ 1.15 ಕೋಟಿ ರೂ. ಆಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬಿಜೆಪಿ ಶಾಸಕರು ಒಟ್ಟು ಎರಡು ರೆಸಾರ್ಟ್ ಗಳಲ್ಲಿ ತಂಗಿದ್ದಾರೆ. ರಮಡ ರೆಸಾರ್ಟ್ ನಲ್ಲಿ ಒಟ್ಟು 73 ಬಿಜೆಪಿ ಶಾಸಕರು ಹಾಗೂ ಸಾಯಿಲೀಲಾದಲ್ಲಿ 20 ಶಾಸಕರು ವಾಸ್ತವ್ಯ ಹೂಡಿದ್ದಾರೆ. ರಮಡದಲ್ಲಿ ಒಂದು ದಿನದ ವಾಸ್ತವ್ಯಕ್ಕೆ 30 ಸಾವಿರ ರೂ. ವೆಚ್ಚವಾಗುತ್ತದೆ. ಮಾತ್ರವಲ್ಲದೆ, ತಿಂಡಿ, ಊಟ, ಮಸಾಜ್ ಎಲ್ಲದಕ್ಕೂ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ.

    ಒಂದು ದಿನಕ್ಕೆ ಒಟ್ಟು ಬಿಜೆಪಿ ಶಾಸಕರ ವೆಚ್ಚ ಸುಮಾರು 35 ರಿಂದ 40 ಲಕ್ಷ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮೂರು ದಿನಗಳಿಗೆ ಎಲ್ಲ ಶಾಸಕರ ರೆಸಾರ್ಟ್ ವೆಚ್ಚ ಒಟ್ಟು 1.15 ಕೋಟಿ ರೂ.ಗೂ ಹೆಚ್ಚು ಆಗಲಿದೆ ಎಂದು ತಿಳಿದುಬಂದಿದೆ.

    ವಾಕಿಂಗ್, ಜಾಗಿಂಗ್ ಮೂಡ್‍ನಲ್ಲಿ ಶಾಸಕರು
    ರಾಜಾನುಕುಂಟೆ ಸಮೀಪದ ರಮಡ ರೆಸಾರ್ಟ್‍ನಲ್ಲಿ ತಂಗಿರುವ ಶಾಸಕರು ಬೆಳಗ್ಗೆ ಫ್ರೆಶ್ ಮೂಡ್‍ನಲ್ಲಿದ್ದಾರೆ. ಇಂದು ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಮಾಡುವ ಮೂಲಕ ತಮ್ಮ ದಿನವನ್ನು ಆರಂಭಿಸಿದ್ದಾರೆ. ಪರಸ್ಪರ ಮಾತನಾಡುತ್ತಾ, ಎಂಜಾಯ್ ಮಾಡುತ್ತಾ ತಮ್ಮ ದಿನವನ್ನು ಆರಂಭಿಸಿದ್ದಾರೆ.

    ರಾಜ್ಯ ರಾಜಕೀಯದಲ್ಲೀಗ ಮೂರು ಪಕ್ಷ, 3 ದಿನ, 3 ಪ್ಲಾನ್ ನಡೀತಿದೆ. ದೋಸ್ತಿ ಸರ್ಕಾರ ವಿಶ್ವಾಸಮತದ ವಿಶ್ವಾಸದಲ್ಲಿರುವ ಕಾರಣ ಬಿಜೆಪಿ ಶಾಕ್‍ಗೆ ಒಳಗಾಗಿ ರಿವರ್ಸ್ ಆಪರೇಷನ್ ಭಯದಿಂದ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ. ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ಸಿಕ್ಕಿಲ್ಲ. ಹೀಗಾಗಿ ಗೊರಗುಂಟೆಪಾಳ್ಯದ ತಾಜ್ ವಿವಾಂತ ಹೋಟೆಲ್‍ನಲ್ಲಿ ತನ್ನ ಶಾಸಕರನ್ನು ಕಾಂಗ್ರೆಸ್ ಇರಿಸಿದೆ. ಜೆಡಿಎಸ್ ಶಾಸಕರು ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್‍ಶೈರ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ಸದನ ಆರಂಭವಾಗುವವರೆಗೆ ಎಲ್ಲರನ್ನು ರೆಸಾರ್ಟ್ ಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಲ್ಲದೆ ಎಲ್ಲಾ ಕಡೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.

     

  • ನಿಂಬೆ ಹಣ್ಣು ರೇವಣ್ಣನ ವಾಮಾಚಾರ ಸಫಲವಾಗಲ್ಲ: ರೇಣುಕಾಚಾರ್ಯ

    ನಿಂಬೆ ಹಣ್ಣು ರೇವಣ್ಣನ ವಾಮಾಚಾರ ಸಫಲವಾಗಲ್ಲ: ರೇಣುಕಾಚಾರ್ಯ

    ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದು, ನಿಂಬೆ ಹಣ್ಣು ರೇವಣ್ಣ ವಾಮಾಚಾರಕ್ಕೆ ಮುಂದಾಗಿದ್ದಾರೆ. ಅವರ ವಾಮಾಚಾರ ಸಫಲವಾಗುವುದಿಲ್ಲ ಎಂದು ಶಾಸಕ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

    ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಒಟ್ಟಿಗಿದ್ದೇವೆ, ರಿವರ್ಸ್ ಆಪರೇಷನ್ ಭಯ ಇಲ್ಲ. ನಮಗೆಲ್ಲ ಸಂಸ್ಕೃತಿ, ಸಂಸ್ಕಾರ ಇದೆ. ಮುಖ್ಯಮಂತ್ರಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಸಿಎಂ ಕೀಳು ಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ರಿವರ್ಸ್ ಆಪರೇಷನ್ ನಡೆಯಲ್ಲ. ಗೌರವದಿಂದ ಸಿಎಂ ಅವರು ರಾಜೀನಾಮೆ ನೀಡಿ ಹೋಗಬೇಕು. ನಿಂಬೆ ಹಣ್ಣು ರೇವಣ್ಣ ವಾಮಾಚಾರ ಮಾಡಿಸುತ್ತಿದ್ದು, ರೇವಣ್ಣ ಅವರ ವಾಮಾಚಾರ ಸಫಲ ಆಗುವುದಿಲ್ಲ. ರೇವಣ್ಣ ಅವರ ವಾಮಾಚಾರದಿಂದಲೇ ದೇವೇಗೌಡರು ಹಾಸನ ಬಿಟ್ಟು ಬರುವಂತಾಯಿತು ಎಂದು ಗುಡುಗಿದರು.

    ಎಷ್ಟು ದಿನ ರೆಸಾರ್ಟ್ ವಾಸ್ತವ್ಯ ಎಂದು ನಮ್ಮ ನಾಯಕರು ತೀರ್ಮಾನಿಸುತ್ತಾರೆ. ಸೋಮವಾರದವರೆಗೋ ಇಲ್ಲವೆ ಬುಧವಾರದವರೆಗೋ ಎಂಬುದನ್ನು ಯಡಿಯೂರಪ್ಪನವರು ನಿರ್ಧರಿಸುತ್ತಾರೆ. ನಾವು ಯಾರೂ ಕ್ಷೇತ್ರವನ್ನು ನಿರ್ಲಕ್ಷಿಸಿಲ್ಲ. ಸೋಮವಾರ ಇಲ್ಲಿಂದಲೇ ಒಟ್ಟಿಗೆ ಸದನಕ್ಕೆ ಹೋಗುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

    ಇದೇ ವೇಳೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷ ಬಿಡಲ್ಲ. 99ರಲ್ಲಿ ನಾನು ರಾಜಕೀಯಕ್ಕೆ ಸೇರಿದ್ದು, ಆಗಿನಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆ ಎಂದು ತಿಳಿಸಿದರು.

    ಶಿರಗುಪ್ಪ ಶಾಸಕ ಸೋಮಲಿಂಗಪ್ಪ ಮಾತನಾಡಿ, ನನ್ನ ಹೆಸರು ರಿವರ್ಸ್ ಆಪರೇಷನ್‍ನಲ್ಲಿ ಕೇಳಿ ಬರುತ್ತಿದ್ದು ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಒಂದು ತಿಂಗಳಿಂದಲೂ ನನ್ನ ಹೆಸರು ಕೇಳಿ ಬರುತ್ತಿದೆ. ಆದರೆ, ನನಗೆ ಯಾರೂ ಕರೆ ಮಾಡಿಲ್ಲ. ನಾನು ಪಕ್ಷ ಬಿಟ್ಟು ಹೋಗಲ್ಲ. ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿದಾಗಲೂ ನಾನು ಅವರ ಜೊತೆ ಹೋಗಲಿಲ್ಲ. ನಾನು ವಿದ್ಯಾರ್ಥಿ ದೆಸೆಯಿಂದಲೂ ಬಿಜೆಪಿಯಲ್ಲಿದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ. ಯಾರೋ ಕಿತಾಪತಿ ಮಾಡಿ ನನ್ನ ಹೆಸರು ತೇಲಿ ಬಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

  • ರಿವರ್ಸ್ ಆಪರೇಷನ್‍ಗೆ ಕರೆ ಬಂದಿತ್ತು: ಶಿರಹಟ್ಟಿ ಬಿಜೆಪಿ ಶಾಸಕ

    ರಿವರ್ಸ್ ಆಪರೇಷನ್‍ಗೆ ಕರೆ ಬಂದಿತ್ತು: ಶಿರಹಟ್ಟಿ ಬಿಜೆಪಿ ಶಾಸಕ

    ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಿವರ್ಸ್ ಆಪರೇಷನ್ ಕುರಿತು ಚರ್ಚೆ ನಡೆದಿದ್ದು, ಮೈತ್ರಿ ನಾಯಕರಿಂದ ಆಫರ್ ಬಂದಿತ್ತು ಎಂದು ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಸಭೆಯಲ್ಲಿ ತಿಳಿಸಿದ್ದಾರೆ.

    ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ವಿವರಿಸಿದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಕೋನರೆಡ್ಡಿ ಮತ್ತು ಭೀಮಾನಾಯ್ಕ್ ಮೂಲಕ ರಿವರ್ಸ್ ಆಪರೇಷನ್‍ಗೆ ಯತ್ನಿಸಲಾಗಿದ್ದು, ಇಬ್ಬರು ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಆದರೆ, ನಾನು ಅವರ ಆಫರ್ ತಿರಸ್ಕರಿಸಿದ್ದೇನೆ. ನಾನು ಕಳೆದ 25 ವರ್ಷದಿಂದ ಬಿಜೆಪಿಯಲ್ಲಿದ್ದು, ಇದೇ ಪಕ್ಷದಲ್ಲಿ ಇರುತ್ತೇನೆಂದು ತಿಳಿಸಿದೆ ಸಭೆಯ ಗಮನಕ್ಕೆ ತರುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ, ರಿವರ್ಸ್ ಆಪರೇಷನ್ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ ಎಂದರು.

    ಬುಧವಾರ ವಿಧಾನಸೌಧದಲ್ಲಿ ಧರಣಿ ನಡೆಸಿ ಬಳಿಕ ರಾಜಭವನಕ್ಕೆ ನಿಯೋಗ ತೆರಳಿ, ಪರಿಸ್ಥಿತಿ ಕುರಿತು ರಾಜ್ಯಪಾಲರ ಗಮನಕ್ಕೆ ತರಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯಪಾಲರು ಮಾತ್ರವಲ್ಲದೆ, ಮತ್ತೊಮ್ಮೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.

    ಬುಧವಾರ ಸಂಜೆ ಮತ್ತೆ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸ್ಪೀಕರ್ ತೀರ್ಮಾನದ ವಿರುದ್ಧ ಕೆಲವು ಬಿಜೆಪಿ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಈ ವೇಳೆ ಯಡಿಯೂರಪ್ಪ ಶಾಸಕರನ್ನು ಸಮಾಧಾನ ಪಡಿಸಿದ್ದಾರೆ. ನಾಳೆಯೂ ಕಾದು ನೋಡೋಣ, ನಾಳೆ ಮತ್ತಿಬ್ಬರು ರಾಜೀನಾಮೆ ನೀಡಬಹುದು. ಆತುರ ಮಾಡೋದು ಬೇಡ, ಪರಿಸ್ಥಿತಿ ನೋಡಿಕೊಂಡು ನಿಧಾನವಾಗಿ ವಿಚಾರಿಸೋಣ ಎಂದು ಯಡಿಯೂರಪ್ಪ ಶಾಸಕರಿಗೆ ತಿಳಿಸಿದ್ದಾರೆ. ಬಿಎಸ್‍ವೈ ನಾಳೆ ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಕುತೂಹಲ ಮೂಡಿಸಿದೆ.

    ಅರವಿಂದ ಲಿಂಬಾವಳಿ ಅವರು ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಲ್ಲ ಜಿಲ್ಲಾ ಕೇಂದ್ರದಲ್ಲಿ ಹಾಗೂ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

    ಪ್ರತಿಭಟನೆ ನಂತರ ಮಧ್ಯಾಹ್ನ 1ಕ್ಕೆ ರಾಜ್ಯಪಾಲರ ಭೇಟಿ ಮಾಡಿ, ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗುವುದು. ನಂತರ ಮಧ್ಯಾಹ್ನ 3ಕ್ಕೆ ಸ್ಪೀಕರ್ ಭೇಟಿ ಮಾಡಿ, ಶಾಸಕರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಬೇಕು ಎಂದು ಸ್ಪೀಕರ್‍ಗೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

  • ದೋಸ್ತಿ ನಾಯಕರಿಂದ ರಿವರ್ಸ್ ಆಪರೇಷನ್? – ಸಂಪರ್ಕಕ್ಕೆ ಸಿಗದ ಸಿರಗುಪ್ಪ ಶಾಸಕ

    ದೋಸ್ತಿ ನಾಯಕರಿಂದ ರಿವರ್ಸ್ ಆಪರೇಷನ್? – ಸಂಪರ್ಕಕ್ಕೆ ಸಿಗದ ಸಿರಗುಪ್ಪ ಶಾಸಕ

    ಬಳ್ಳಾರಿ: ಮೈತ್ರಿ ಪಕ್ಷದ ಶಾಸಕರು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದಂತೆ ದೋಸ್ತಿ ನಾಯಕರು ರಿವರ್ಸ್ ಆಪರೇಷನ್‍ಗೆ ಇಳಿದಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.

    ಬಿಜೆಪಿಯವರು ಆಪರೇಷನ್ ಕಮಲ ಮಾಡಿದರೆ ಏನು ಮಾಡಬೇಕು ಎನ್ನುವುದು ನಮಗೆ ಗೊತ್ತು ಎಂದು ಹೇಳಿಕೆ ನೀಡುತ್ತಿದ್ದ ಕೈ ನಾಯಕರ ಪಟ್ಟಿಯಲ್ಲಿದ್ದಾರೆ ಎನ್ನಲಾದ ಬಳ್ಳಾರಿಯ ಸಿರಗುಪ್ಪದ ಬಿಜೆಪಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ಕಳೆದ ರಾತ್ರಿಯಿಂದ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.

    ಭಾನುವಾರ ರಾತ್ರಿಯವರೆಗೂ ಸಿರಗುಪ್ಪದಲ್ಲಿದ್ದ ಶಾಸಕ ಸೋಮಲಿಂಗಪ್ಪ ಇಂದು ಮುಂಜಾನೆಯಿಂದ ಯಾರ ಕೈಗೂ ಸಿಗದೇ ಎಸ್ಕೇಪ್ ಆಗಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿದೆ. ಸೋಮಲಿಂಗಪ್ಪ ಹಾಗೂ ಅವರ ಆಪ್ತರ ಮೊಬೈಲ್ ಇಂದು ಮುಂಜಾನೆಯಿಂದ ಸ್ವಿಚ್ ಆಫ್ ಆಗಿವೆ. ಹೀಗಾಗಿ ಬಿಜೆಪಿ ನಾಯಕರು ಶಾಸಕ ಸೋಮಲಿಂಗಪ್ಪ ಸಂಪರ್ಕಿಸಲು ಹರಸಾಹಸ ಮಾಡುತ್ತಿದ್ದಾರೆ.

    ಸೋಮಲಿಂಗಪ್ಪಗೆ ಇಂದು ಬಿಜೆಪಿ ನಾಯಕರು ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಿದ್ದರು. ಆದರೆ ಸೋಮಲಿಂಗಪ್ಪ ಮಧ್ಯಾಹ್ನದವರೆಗೂ ಬೆಂಗಳೂರು ತಲುಪದಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಹೆಚ್ಚಿಸಿದೆ.

  • ರಿವರ್ಸ್ ಆಪರೇಷನ್ ಭೀತಿ- ರೆಸಾರ್ಟ್‌ನತ್ತ  ಬಿಜೆಪಿ ಶಾಸಕರು?

    ರಿವರ್ಸ್ ಆಪರೇಷನ್ ಭೀತಿ- ರೆಸಾರ್ಟ್‌ನತ್ತ ಬಿಜೆಪಿ ಶಾಸಕರು?

    ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕೈ-ತೆನೆ ಮುಖಂಡರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ರಿವರ್ಸ್ ಆಪರೇಷನ್‍ಗೂ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಬಿಜೆಪಿಯ ಶಾಸಕರ ರೆಸಾರ್ಟ್ ವಾಸ್ತವ್ಯ ಬಹುತೇಕ ಫಿಕ್ಸ್ ಆದಂತಾಗಿದ್ದು, ಮಿಡ್ ನೈಟ್‍ನಲ್ಲಿ ಅನೇಕ ಕೈ ಮುಖಂಡರು ಬಿಜೆಪಿಯ ಅತೃಪ್ತರಿಗೆ ಗಾಳ ಹಾಕಿದ್ದಾರೆ. ಕೈ ಮುಖಂಡರಿಂದ ರಿವರ್ಸ್ ಅಪರೇಷನ್ ನಡೆಸಲಾಗಿದೆ. ಅಲ್ಲದೆ ಇದರೊಂದಿಗೆ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇ ಔಟ್ ಶಾಸಕ ಗೋಪಾಲಯ್ಯ ಹೋಟೆಲ್‍ಗೆ ಬಂದಿದ್ದಾರೆ ಎಂಬ ಅನುಮಾನ ಈಗ ಕಮಲ ಪಾಳಯದಲ್ಲಿ ಮೂಡಿದೆ.

    ಇದೇ ವಿಚಾರವಾಗಿ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಜೊತೆ ಭೈರತಿ ಬಸವರಾಜ್ ಮುಂಬೈನಲ್ಲಿ ಜಗಳವಾಡಿದ್ದಾರೆ ಎನ್ನುವ ವಿಚಾರವಾಗಿ ಗುಸು ಗುಸು ಚರ್ಚೆ ಮಾಡಿದ್ದಾರೆ. ಇದಕ್ಕಾಗಿ ನಿನ್ನೆ ತಡರಾತ್ರಿಯವರೆಗೆ ಆಪ್ತರ ಜೊತೆ ಬಿಎಸ್‍ವೈ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ಈ ಕುರಿತು ಸಂಜೆ ಶಾಸಕಾಂಗ ಪಕ್ಷದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

    ಬಿಜೆಪಿಯಲ್ಲೂ ಅತೃಪ್ತಿಯ ಭೀತಿ:
    ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ, ಅತೃಪ್ತ ಕೈ-ತೆನೆಯ ಬಳಗಕ್ಕಷ್ಟೇ ಸಚಿವ ಸ್ಥಾನ ಕೊಡಲಾಗುತ್ತದೆ. ಸಾಕಷ್ಟು ವರ್ಷದಿಂದ ಪಕ್ಷಕ್ಕೆ ದುಡಿದವರಿಗೆ ಅವಕಾಶ ಸಿಗುವುದಿಲ್ಲ ಎಂದು ಕೆಲ ಬಿಜೆಪಿ ಶಾಸಕರ ಅಭಿಪ್ರಾಯವಾಗಿದೆ.

    ಇದೇ ವಿಚಾರವನ್ನು ಮುಂದಿಟ್ಟು ಘಟಾನುಘಟಿ ಕೈ ನಾಯಕರಿಂದ ಬಿಜೆಪಿಯ ಅತೃಪ್ತರಿಗೆ ಗಾಳ ಹಾಕಲಾಗುತ್ತಿದೆ. ಬಿಜೆಪಿ ಪಾಳಯದ ಶಾಸಕರಿಗೆ ಭರ್ಜರ ಅಫರ್ ನೀಡಿ ಸೆಳೆಯಲು ಯತ್ನಿಸಲಾಗಿದೆ. ಸುಮಾರು ನಾಲ್ಕೈದು ಜನ ಅತೃಪ್ತ ಕಮಲ ಪಾಳಯದ ಶಾಸಕರಿಗೆ ಗಾಳ ಹಾಕಲು ಕೈ ಪಾಳಯ ಸಜ್ಜಾಗಿದೆ. ಘಟಾನುಘಟಿ ನಾಯಕರೇ ಅಖಾಡಕ್ಕಿಳಿದು ಕಮಲ ಪಾಳಯದ ಶಾಸಕರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಈಗ ರಿವರ್ಸ್ ಅಪರೇಷನ್ ಭೀತಿ ಎದುರಾಗಿದೆ.

    ಅತೃಪ್ತರ ಪಟ್ಟಿಯಲ್ಲಿರುವ ಶಾಸಕರನ್ನು ಶಾಸಕಾಂಗ ಸಭೆಯ ಮೊದಲೇ ಯಡಿಯೂರಪ್ಪ ತಮ್ಮ ನಿವಾಸಕ್ಕೆ ಕರೆದು ಅವರೊಂದಿಗೆ ಮಾತಾನಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ರಿವರ್ಸ್ ಆಪರೇಷನ್‍ಗೆ ಒಳಾಗಲಿರುವ ಶಾಸಕರ ಮೇಲೆ ಬಿಎಸ್‍ವೈ ಟೀಮ್ ಹದ್ದಿನ ಕಣ್ಣಿಟ್ಟಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.