Tag: Revathi

  • ಭಾವಿ ಪತ್ನಿಗೆ ವಜ್ರದುಂಗರ ತೊಡಿಸಿದ ನಿಖಿಲ್

    ಭಾವಿ ಪತ್ನಿಗೆ ವಜ್ರದುಂಗರ ತೊಡಿಸಿದ ನಿಖಿಲ್

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ವಜ್ರದುಂಗರ ತೊಡಿಸುವ ಮೂಲಕ ರೇವತಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದಿದೆ. ಈ ನಿಶ್ಚಿತಾರ್ಥ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರ ಸಹೋದರಿಯರಾದ ಶೈಲಜಾ ಮತ್ತು ಅನಸೂಯ ಹಾಗೂ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲಾ ತಯಾರಿಗಳು ಆಗಿವೆ. ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಕೋರಿದರು. ಇದನ್ನೂ ಓದಿ: ಇಲ್ಲ ಇಲ್ಲ ಎಂದು ಹೇಳಿ ನಾಚಿಕೊಂಡು ಹೋದ ರೇವತಿ

    ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್‍ನಲ್ಲಿದ್ದು, ಕಾರ್ಪೆಟ್‍ಯಿಂದ ಹಿಡಿದು ನಿಖಿಲ್-ರೇವತಿ ಉಂಗುರ ಬದಲಾಯಿಸುವ ಮಂಟಪ ಕೂಡ ಶ್ವೇತ ವರ್ಣದಲ್ಲಿದೆ. ನಿಶ್ಚಿತಾರ್ಥದ ಮಂಟಪ ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿ ಬಣ್ಣದ ಹೂವನ್ನು ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್‍ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ. ಸೀಲಿಂಗ್ ಸಹ ಹೂವಿನಿಂದಲೇ ಅಲಂಕಾರ ಮಾಡಲಾಗಿದೆ. ತಾಜ್ ವೆಸ್ಟೆಂಡ್ ಗೇಟಿನಿಂದ ನಿಶ್ಚಿತಾರ್ಥ ನಡೆಯುವ ಜಾಗದ ವರೆಗೂ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಇದನ್ನೂ ಓದಿ: ದೊಡ್ಡಗೌಡರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ರೇವತಿಗೆ ಉಂಗುರ ತೊಡಿಸಲು ನಿಖಿಲ್ ಖಾತರ


    ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನ ಎಲ್ಲರಿಗೂ ಒಂದೇ ರೀತಿಯ ಅಡುಗೆಯನ್ನು ಮಾಡಿಸಲಾಗಿದೆ. ಸುಮಾರು 50 ರೀತಿಯ ಕರ್ನಾಟಕ ಶೈಲಿಯ ಖಾದ್ಯಗಳನ್ನು ಬಂದ ಅತಿಥಿಗಳು ಸವಿಯುತ್ತಿದ್ದಾರೆ. ವಿಶೇಷ ಎಂದರೆ ಕುಮಾರಸ್ವಾಮಿಯವರು ತಮ್ಮ ಪುತ್ರನ ನಿಶ್ಚಿತಾರ್ಥಕ್ಕೆ ಬಂದಂತವರು ಬಾಳೆ ಎಲೆಯಲ್ಲಿ ಊಟ ಮಾಡಬೇಕು ಎಂದು ಆಸೆಪಟ್ಟಿದ್ದರು. ಈ ಕಾರಣಕ್ಕೆ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತಿದೆ. ಇದರ ಜೊತೆ ಅನುಕೂಲವಾಗಲಿ ಎಂದು ಬಫೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

    ನಿಶ್ಚಿತಾರ್ಥಕ್ಕೆ ಬಂದ ಎಲ್ಲರೂ ಊಟ ಮಾಡಿ ಹೋಗಬೇಕು ಎನ್ನುವ ಉದ್ದೇಶದಿಂದ ಈ ರೀತಿ ವ್ಯವಸ್ಥೆ ಮಾಡಲಾಗಿದೆ. ಇನ್ನು 50 ಖ್ಯಾದ್ಯಗಳನ್ನು ದೇವೇಗೌಡರ ಕುಟುಂಬ ಮತ್ತು ಹುಡುಗಿ ಮನೆಯ ಕುಟುಂಬದವರೆಲ್ಲರೂ ರುಚಿ ನೋಡಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಮದುವೆ ಊಟದಲ್ಲಿ ಪರೋಟ, ರೋಟಿ, ವಿವಿಧ ಪಲ್ಯ, ಹೋಳಿಗೆ, ಚಿರೋಟಿ ಸೇರಿದಂತೆ 50 ಖಾದ್ಯಗಳು, ನಾಲ್ಕು-ಐದು ಬಗೆಯ ತಾಜಾ ಜ್ಯೂಸ್ ಸೇರಿದಂತೆ ತಂಪು ಪಾನೀಯಗಳು. ಮೆಸ್ಮಲಯ್, ಜಾಮೂನು ಸೇರಿದಂತೆ ಐದರಿಂದ ಆರು ಸ್ವೀಟ್‍ಗಳನ್ನು ಮಾಡಲಾಗಿದೆ. ಒಟ್ಟು 6 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.

  • ಇಲ್ಲ ಇಲ್ಲ ಎಂದು ಹೇಳಿ ನಾಚಿಕೊಂಡು ಹೋದ ರೇವತಿ

    ಇಲ್ಲ ಇಲ್ಲ ಎಂದು ಹೇಳಿ ನಾಚಿಕೊಂಡು ಹೋದ ರೇವತಿ

    – ನಾವಿಬ್ಬರು ತುಂಬಾ ಖುಷಿಯಾಗಿದ್ದೀವಿ: ನಿಖಿಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರು ಇಂದು ರೇವತಿ ಅವರ ಜೊತೆ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಮಾತನಾಡಿದ ನಿಖಿಲ್ ಅವರು, ಕುಟುಂಬಸ್ಥರು ನಿಶ್ಚಿತಾರ್ಥ ನಿಗದಿ ಮಾಡಿದ್ದು, ನಾವಿಬ್ಬರು ತುಂಬಾ ಖುಷಿಯಾಗಿದ್ದೀವಿ ಎಂದರು. ಇತ್ತ ರೇವತಿ ಅವರು ಮಾಧ್ಯಮಗಳನ್ನು ನೋಡಿ ಇಲ್ಲ ಇಲ್ಲ ಎಂದು ಹೇಳಿ ನಾಚಿಕೊಂಡು ಕಾರಿನಲ್ಲಿ ಹೋಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್ ಅವರು, ನನ್ನ ಜೀವನದ ಮೊದಲನೇ ಅಧ್ಯಾಯನವನ್ನು ನಾನು ಇಂದು ಪ್ರಾರಂಭಿಸುತ್ತಿದ್ದೇನೆ. ಎರಡು ಕುಟುಂಬಗಳು ಸೇರಿ ನನ್ನ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಮೊದಲನೇ ಹೆಜ್ಜೆ ಇಡುತ್ತಿದ್ದೇವೆ. ಹಾಗಾಗಿ ನಮಗೆ ರಾಜ್ಯದ ಜನತೆಯ ಆಶೀರ್ವಾದ ಕೂಡ ಬೇಕಾಗಿದೆ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ನನ್ನ ಮೇಲಿನ ನಿಮ್ಮ ಪ್ರೀತಿ, ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲಿರಲಿ: ನಿಖಿಲ್

    ಇದೇ ವೇಳೆ ರಾಜಕೀಯ ಬೇರೆ, ವೈಯಕ್ತಿಕ ಜೀವನ ಬೇರೆ. ನನ್ನ ತಂದೆ ಪಕ್ಷಾತೀತವಾಗಿ ಹಲವಾರು ಗಣ್ಯರಿಗೆ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದಾನೆ. ನಾನು ಚಿತ್ರರಂಗದಲ್ಲಿ ಮೂರು ಸಿನಿಮಾಗಳು ಮಾಡಿದ್ದು, ನಾನೇ ಕೆಲವರಿಗೆ ಸ್ವತಃ ಆಹ್ವಾನಿಸಿದೆ. ನಮ್ಮ ಸಂಪ್ರದಾಯದ ಪ್ರಕಾರ ನಾವು ಮದುವೆ ಮಾಡಿಕೊಳ್ಳುತ್ತಿದ್ದೇವೆ. ಕಳೆದ 10 ದಿನಗಳಿಂದ ರೇವತಿ ಅವರು ಪ್ರೀ ವೆಡ್ಡಿಂಗ್ ಶೂಟ್ ಹಾಗೂ ಸಂಗೀತ ಕಾರ್ಯಕ್ರಮ ಬೇಡ ಎಂದು ಹೇಳಿದ್ದಾರೆ. ಶಾಸ್ತ್ರ ಬದ್ಧವಾಗಿ ಮದುವೆ ಆಗೋಣ ಎಂದು ಹೇಳುತ್ತಿದ್ದಾರೆ ಎಂದು ನಿಖಿಲ್ ಹೇಳಿದರು.

    ಏಪ್ರಿಲ್ 17ಕ್ಕೆ ಮದುವೆ ದಿನ ನಿಗದಿಯಾಗಿದೆ. ನಮ್ಮ ತಾತನ ಕನಸಿನಂತೆ ರಾಮನಗರ ಜಿಲ್ಲೆಯಲ್ಲಿ ಮದುವೆ ನಡೆಯಲಿದೆ. ನಮ್ಮನ್ನು ಪ್ರೀತಿಸುವ ವರ್ಗ ಎಲ್ಲರಿಗೂ ಮದುವೆ ಆಹ್ವಾನ ನೀಡಲಾಗುತ್ತೆ ಎಂದರು. ಇದೇ ವೇಳೆ, 10 ದಿನದಲ್ಲಿ ನಾನು ರೇವತಿ ಅವರ ಜೊತೆ ತುಂಬಾ ಮಾತನಾಡಿದ್ದೇನೆ. ನಮ್ಮ ಮುಂದಿನ ಜೀವನ ಹೇಗೆ ಇರಬೇಕು ಎಂಬುದು ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ ಎಂದು ನಿಖಿಲ್ ತಿಳಿಸಿದರು.

  • ದೊಡ್ಡಗೌಡರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ರೇವತಿಗೆ ಉಂಗುರ ತೊಡಿಸಲು ನಿಖಿಲ್ ಖಾತರ

    ದೊಡ್ಡಗೌಡರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ರೇವತಿಗೆ ಉಂಗುರ ತೊಡಿಸಲು ನಿಖಿಲ್ ಖಾತರ

    ಬೆಂಗಳೂರು: ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕುಟುಂಬದಲ್ಲಿ ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಇಂದು ರೇವತಿ ಜೊತೆಗೆ ಅಧಿಕೃತವಾಗಿ ಎಂಗೇಜ್ ಆಗುತ್ತಿದ್ದಾರೆ.

    ಜಾಗ್ವಾರ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಮೂರೇ ಸಿನಿಮಾಗಳಲ್ಲಿ ನಟಿಸಿದ್ರೂ ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂದು ಮನೆಯವರು ನೋಡಿರುವ ರೇವತಿ ಅವರ ಜೊತೆ ನಿಖಿಲ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದವರು ಹಾಗೂ ಗಣ್ಯರ ಸಮ್ಮುಖದಲ್ಲಿ ನಿಖಿಲ್ ಹಾಗೂ ರೇವತಿ ತಾಜ್ ವೆಸ್ಟೆಂಡ್‍ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಕಲ್ಲರ್ ಫುಲ್ ವೇದಿಕೆಯಲ್ಲಿ ಉಂಗುರವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ.

    ಹಾಲಿ ಶಾಸಕ ಲೇಔಟ್ ಕೃಷ್ಣಪ್ಪ ಮೊಮ್ಮಗಳಾಗಿರುವ ರೇವತಿ ನಿಶ್ಚಿತಾರ್ಥವನ್ನು ಮುಂದೆ ನಿಂತು ಮಾಡುತ್ತಿದ್ದಾರೆ. ಮಂಜುನಾಥ್ ಮತ್ತು ಶ್ರೀದೇವಿ ಎರಡನೇ ಪುತ್ರಿಯಾಗಿರುವ ರೇವತಿಯನ್ನು ಇತ್ತೀಚೆಗಷ್ಟೇ ನಿಖಿಲ್ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ಹುಡುಗಿ ನೋಡುವ ಕಾರ್ಯಕ್ರಮವನ್ನು ಮುಗಿಸಿದ್ದರು. ಎಂಸಿಎ ಪದವೀಧರೆಯಾಗಿರುವ ರೇವತಿ ಮನೆಯವರು ಕುಮಾರಸ್ವಾಮಿಯವರ ಮನೆಗೆ ಭೇಟಿ ಕೊಟ್ಟು ಮದುವೆ ಮಾತುಕತೆಯನ್ನು ನಡೆಸಿದ್ದರು.

    ತಾಜ್ ವೆಸ್ಟೆಂಡ್‍ನಲ್ಲಿ ಹೋಟೆಲ್ ಮದುವಣಗಿತ್ತಿಯಂತೆ ಅಲಂಕಾರಿಸಲಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಗುರು-ಹಿರಿಯರ ಸಮ್ಮುಖದಲ್ಲಿ ನಿಖಿಲ್, ರೇವತಿಯ ಕೈಗೆ ಉಂಗುರವನ್ನು ತೊಡಿಸಲಿದ್ದಾರೆ. ದೊಡ್ಡ ಗೌಡ್ರ ಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ರಾಜಕಾರಣಿಗಳು ಮತ್ತು ಚಿತ್ರರಂಗದವರಿಗೆ ಆಹ್ವಾನ ನೀಡಲಾಗಿದೆ. ಸಿನಿಮಾ ತಾರೆಯರು ಮತ್ತು ರಾಜಕೀಯದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಏಪ್ರಿಲ್‍ನಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದು, ಖುದ್ದು ಕುಮಾರಸ್ವಾಮಿ ಅವರೇ ಮಾಹಿತಿ ನೀಡಿದ್ದಾರೆ.

  • ನಂಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್: ನಿಖಿಲ್

    ನಂಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್: ನಿಖಿಲ್

    ಬೆಂಗಳೂರು: ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ಇನ್ನೂ ಕೆಲವು ದಿನಗಳಿವೆ. ಈಗಾಗಲೇ ಮನೆಯಲ್ಲಿ ಎಂಗೇಜ್‍ಮೆಂಟ್‍ಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದೀಗ ಮೊದಲ ಬಾರಿಗೆ ನಿಖಿಲ್ ತಮ್ಮ ಭಾವಿ ಪತ್ನಿಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ನಿಖಿಲ್‍ಗೆ ಇಂದು ಡಬಲ್ ಸಂಭ್ರಮ – ಫೆ.10ಕ್ಕೆ ಜಾಗ್ವಾರ್‌ನ ನಿಶ್ಚಿತಾರ್ಥ

    ನನಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್ ಎಂದು ನಿಖಿಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಮದುವೆ ಬಗ್ಗೆ ಮಾತನಾಡಿದ ನಿಖಿಲ್, ನಮ್ಮ ಮನೆಯವರಿಗೆ ನೀವು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತೀನಿ ಎಂದು ಹೇಳಿದ್ದೆ. ಈಗ ರೇವತಿ ಅವರನ್ನು ಮನೆಯವರು ನೋಡಿ ಆಯ್ಕೆ ಮಾಡಿದ್ದರು. ನನ್ನ ಅಭಿಪ್ರಾಯವನ್ನು ಕೇಳಿದರು. ನಾನು ಒಪ್ಪಿದ ಮೇಲೆ ಮದುವೆ ಫಿಕ್ಸ್ ಮಾಡಿದ್ದಾರೆ. ಹೀಗಾಗಿ ಕುಟುಂಬದವರ ಮಾತು ಉಳಿಸಿಕೊಂಡಿರುವುದಕ್ಕೆ ಖುಷಿಯಾಗಿದೆ ಎಂದರು.

    ಇನ್ನೂ ತಮ್ಮ ಭಾವಿ ಪತ್ನಿಯ ಬಗ್ಗೆ ಮಾತನಾಡಿ, ರೇವತಿ ಸಂಪ್ರದಾಯಸ್ಥ ಮನೆಯವರ ಮಗಳು. ಅವರು ವಿದ್ಯಾವಂತೆ ಜೊತೆಗೆ ಒಳ್ಳೆಯ ಆಚಾರವಿದೆ. ಅವರ ಜೊತೆ ನಾನು ಮಾತನಾಡಿದ್ದೇನೆ. ನನ್ನ ಎರಡು ಸಿನಿಮಾಗಳನ್ನು ಅವರು ಥಿಯೇಟರ್ ನಲ್ಲಿ ನೋಡಿರುವುದಾಗಿ ತಿಳಿಸಿದ್ದರು. ನನಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್ ಎಂದು ರೇವತಿ ಬಗ್ಗೆ ಹೇಳಿದ್ದಾರೆ.

    ಇದೇ ತಿಂಗಳು ಫೆಬ್ರವರಿ 10 ರಂದು ನಿಖಿಲ್ ಮತ್ತೆ ರೇವತಿ ನಿಶ್ಚಿತಾರ್ಥ ನಡೆಯಲಿದೆ. ತಾಜ್ ವೆಸ್ಟ್ ಎಂಡ್‍ ಹೋಟೆಲಿನಲ್ಲಿ ಅದ್ಧೂರಿಯಾಗಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ. ಈ ಜೋಡಿಯ ಎಂಗೇಜ್‍ಮೆಂಟ್‍ನಲ್ಲಿ ನಿಖಿಲ್ ಮತ್ತು ರೇವತಿ ಕುಟುಂಬದವರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಸುಮಾರು 5 ಸಾವಿರ ಜನರು ನಿಶ್ಚಿತಾರ್ಥದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

    ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಜ.26 ರಂದು ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ದೇವೇಗೌಡರ ಕುಟುಂಬದವರು ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದರು. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರಾದ ಅನುಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದರು.

  • ನಿಖಿಲ್‍ಗೆ ಕೂಡಿ ಬಂತು ಕಂಕಣ – ಕೈ ಶಾಸಕರ ಸೋದರನ ಮೊಮ್ಮಗಳೊಂದಿಗೆ ಅಭಿಮನ್ಯು ಕಲ್ಯಾಣ

    ನಿಖಿಲ್‍ಗೆ ಕೂಡಿ ಬಂತು ಕಂಕಣ – ಕೈ ಶಾಸಕರ ಸೋದರನ ಮೊಮ್ಮಗಳೊಂದಿಗೆ ಅಭಿಮನ್ಯು ಕಲ್ಯಾಣ

    ಬೆಂಗಳೂರು: ಮಾಜಿ ಸಿಎಂ ಮಗ ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯದಲ್ಲೇ ತಮ್ಮ ವಿವಾಹವನ್ನು ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.

    ಕಾಂಗ್ರೆಸ್ ಶಾಸಕರ ಅಣ್ಣನ ಮೊಮ್ಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಮದುವೆಯಾಗಲಿದ್ದಾರೆ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಈ ಜೋಡಿಯ ಕಲ್ಯಾಣ ಮೇ 17 ಮತ್ತು 18 ರಂದು ನಡೆಯಲಿದೆ. ಇದನ್ನೂ ಓದಿ: ಸದ್ಯದಲ್ಲೇ ಮದುವೆ ಬಗ್ಗೆ ಅನೌನ್ಸ್ ಮಾಡ್ತೇನೆ: ನಿಖಿಲ್

    ಇಂದು ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ದೇವೇಗೌಡರ ಕುಟುಂಬದವರು ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರಾದ ಅನುಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದಾರೆ.