Tag: Reva College

  • ಎಂಜಿನಿಯರಿಂಗ್ ಸೀಟ್ ಕೊಡಿಸ್ತೀನೆಂದು ವಿದ್ಯಾರ್ಥಿನಿಗೆ 1,27,500 ರೂ. ವಂಚನೆ!

    ಎಂಜಿನಿಯರಿಂಗ್ ಸೀಟ್ ಕೊಡಿಸ್ತೀನೆಂದು ವಿದ್ಯಾರ್ಥಿನಿಗೆ 1,27,500 ರೂ. ವಂಚನೆ!

    ಬೆಂಗಳೂರು: ಎಂಜಿನಿಯರಿಂಗ್ ಸೀಟ್ ಕೊಡಿಸುತ್ತೇನೆ ಅಂತಾ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ರಾಜೇಶ್ವರ್ ಬಂಧಿತ ಆರೋಪಿ. ಸೈಬರ್ ಖದೀಮನು ರೇವಾ ಕಾಲೇಜ್‍ನಲ್ಲಿ ಮಿಸ್ ಆಗಿದ್ದ ಎಂಜಿನಿಯರಿಂಗ್ ಸೀಟ್ ಕೊಡಿಸುತ್ತೇನೆ ಅಂತಾ ವಂಚಿಸಿದ್ದನು. ದೂರುದಾರರ ಮಗಳು ಕಾಲೇಜ್‍ನಲ್ಲಿ (ಇಸಿಎಮ್) ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಬ್ರಾಂಚ್ ಪಡೆದಿದ್ದರು. ಆದರೆ (ಸಿಎಸ್) ಕಂಪ್ಯೂಟರ್ ಸೈನ್ಸ್ ಬ್ರಾಂಚ್ ಬದಲಾವಣೆಗಾಗಿ ಕಾಯುತ್ತಿದ್ದರು. ಈ ವೇಳೆ ಖದೀಮನು ಮೆಸೇಜ್ ಮೂಲಕ ಕೆಲ ಬ್ರಾಂಚ್‍ಗಳ ಸೀಟ್ ಖಾಲಿಯಾಗಿದ್ದು, ಸಿಎಸ್ ಬ್ರಾಂಚ್‍ಗೆ ಬದಲಾಯಿಸಿ ಸೀಟ್ ಕೊಡಿಸುವುದಾಗಿ ಮೆಸೇಜ್ ಮಾಡಿದ್ದನು. ಈ ವೇಳೆ ವಿದ್ಯಾರ್ಥಿನಿ ತಂದೆಗೆ ಮೆಸೇಜ್ ಬಂದಿದ್ದೇ ತಡ ನಂಬರ್‍ಗೆ ಕರೆ ಮಾಡಿ ಮಾತನಾಡಿದ್ದರು. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು

    ನಂತರ ವಂಚಕನು ಅವರಿಂದ ಸಿಎಸ್ ಸೀಟ್ ಕೊಡಿಸುತ್ತೇನೆ ಅಂತಾ 1 ಲಕ್ಷದ 27 ಸಾವಿರದ 500 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದನು. ಅಕೌಂಟ್‍ಗೆ ಹಣ ಬರುತ್ತಿದ್ದಂತೆಯೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ವಿದ್ಯಾರ್ಥಿನಿ ತಂದೆ ಆರೋಪಿ ಮೊಬೈಲ್‍ಗೆ ಕರೆ ಮಾಡಿ ಬೇಸತ್ತಿದ್ದರು. ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಚೂರಿ ಹಾಕಿದ್ರು ಸಿದ್ದರಾಮಯ್ಯ: ಶ್ರೀರಾಮುಲು ಟೀಕೆ

    ನಂತರ ಅವರು ತಾವು ಮೋಸ ಹೋಗಿದ್ದು ಗೊತ್ತಾಗಿ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 3 ಮೊಬೈಲ್, 4 ಲ್ಯಾಪ್ ಟಾಪ್, 7 ಸಿಮ್, 21 ಗ್ರಾಂ ಚಿನ್ನ, 3 ಚಿನ್ನದ ನಾಣ್ಯಗಳು ಹಾಗೂ 1 ಲಕ್ಷದ 72 ಸಾವಿರದ 500 ಹಣವನ್ನು ಜಪ್ತಿ ಮಾಡಿದ್ದಾರೆ. ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೇವಾ ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ

    ರೇವಾ ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ

    ಬೆಂಗಳೂರು: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆಯನ್ನು ಜ.6 ರಂದು ರೇವಾ ಕ್ಯಾಂಪಸ್‍ನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ದಿನವು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ.ಶ್ಯಾಮರಾಜುರವರ ಹುಟ್ಟುಹಬ್ಬದ ದಿನವೂ ಆಗಿರುತ್ತದೆ. ಇದೇ ಸಂದರ್ಭದಲ್ಲಿ ರೇವಾ ವಿಶ್ವವಿದ್ಯಾಲಯದ ಪ್ರಗತಿಯ ಬಗ್ಗೆ ಒಂದು ಕಿರುಚಿತ್ರವನ್ನೂ ತೋರಿಸಲಾಯಿತು.

    ಪ್ರತಿವರ್ಷದಂತೆ ಈ ವರ್ಷವೂ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಷ ಇಸ್ರೋದ ಮಾಜಿ ಅಧ್ಯಕ್ಷ ರಾಜಸ್ಥಾನದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಕಸ್ತೂರಿ ರಂಗನ್ ಮತ್ತು ಪ್ರಖ್ಯಾತ ಭಾರತೀಯ ಸಿನಿಮಾ ನಿರ್ದೇಶಕ, ಕಥಾಸಂಕಲನಕಾರ ನಿರ್ಮಾಪಕರಾಗಿರುವ ಕೆ. ರಾಘವೇಂದ್ರರಾವ್ ಅವರಿಗೆ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಕ್ಷಣಾ ಸಚಿವಾಲಯ ವೈಜ್ಞಾನಿಕ ಸಲಹೆಗಾರರಾಗಿರುವ ಸತೀಶ್ ರೆಡ್ಡಿ ಅವರಿಗೆ ರೇವಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಮಾತನಾಡಿದ ಕಸ್ತೂರಿ ರಂಗನ್, ವಿಶ್ವವಿದ್ಯಾಲಯದ ಪ್ರಗತಿಯ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದರು. ಇಲ್ಲಿರುವ ವ್ಯವಸ್ಥಾಪಕರು, ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳ ಕೊಡುಗೆಯನ್ನು ಪ್ರಶಂಸಿಸಿ ಸಂಶೋಧನೆ ಬಗ್ಗೆ ಬಹಳ ಒತ್ತು ಕೊಡಬೇಕು. ನಮ್ಮ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.

    ರಾಘವೇಂದ್ರ ರಾವ್ ಅವರು ತಮ್ಮ 50 ವರ್ಷದ ಸಿನಿಮಾ ರಂಗದ ಪಯಣದ ಅನುಭವವನ್ನು ಹಂಚಿಕೊಂಡರು. ಯುವಕರು ನಮ್ಮ ದೇಶದ ಪ್ರಗತಿಗಾಗಿ ತಮ್ಮನ್ನು ತಾವು ಸಮರ್ಪಣಾಭಾವದಿಂದ ತೊಡಗಿಸಿಕೊಳ್ಳಬೇಕು. ತಮ್ಮ ತಾಯ್ನಾಡಿನ ಬಗ್ಗೆ ಹೆಮ್ಮ ಮತ್ತು ಗರ್ವ ಇರಬೇಕೆಂದು ತಿಳಿಸಿದರು.

    ಡಾ. ಸತೀಶ್‍ರೆಡ್ಡಿ ಅವರ ಪರವಾಗಿ ಡಾ.ಸುಧೀರ್ ಕಾಮತ್ ರೇವಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಸ್ವೀಕರಿಸಿ, ರೇವಾ ವಿಶ್ವವಿದ್ಯಾಲಯಕ್ಕೆ ಶುಭಕೋರಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ರೇವಾ ಮಾಡುತ್ತಿರುವ ಸಂಶೋಧನೆಯನ್ನು ಪ್ರಶಂಸಿದರು.

    ಸಂಸ್ಥಾಪಕರ ದಿನಾಚರಣೆ ಅಧ್ಯಕ್ಷತೆ ವಹಿಸಿದ್ದ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ. ಶ್ಯಾಮರಾಜುರವರು ಮಾತನಾಡುತ್ತಾ, ಕಲಿಕೆ ನಿರಂತರವಾದದ್ದು, ನಾವು ಕಲಿಯುವುದು ಬಹಳವಿದೆ. ರೇವಾ ಈ ಹಂತಕ್ಕೆ ಬರುವುದಕ್ಕೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳೇ ಕಾರಣ ಎಂದು ಶ್ಲಾಘಿಸಿದರು. ಸಂಸ್ಥಾಪಕರ ದಿನಾಚರಣೆಯ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.