Tag: Retired soldiers

  • ಎಣ್ಣೆ ಕೊಡದಿದ್ದರೆ ಧರಣಿ- ನಿವೃತ್ತ ಸೈನಿಕರ ಎಚ್ಚರಿಕೆಗೆ ಮಣಿದ ಅಬಕಾರಿ ಇಲಾಖೆ

    ಎಣ್ಣೆ ಕೊಡದಿದ್ದರೆ ಧರಣಿ- ನಿವೃತ್ತ ಸೈನಿಕರ ಎಚ್ಚರಿಕೆಗೆ ಮಣಿದ ಅಬಕಾರಿ ಇಲಾಖೆ

    ಶಿವಮೊಗ್ಗ: ಮದ್ಯ ನೀಡುವಂತೆ ನಿವೃತ್ತ ಸೈನಿಕರು ಆಗ್ರಹಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಗರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮಿಲಿಟರಿ ಕ್ಯಾಂಟೀನ್ ಸಹ ಬಂದ್ ಆಗಿತ್ತು. ಆದರೆ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ದಿನದಿಂದ ಮಿಲಿಟರಿ ಕ್ಯಾಂಟೀನ್ ಓಪನ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಯಾವುದೇ ಸಮಸ್ಯೆ ಇಲ್ಲದೇ ನಿವೃತ್ತ ಸೈನಿಕರು ಕ್ಯಾಂಟೀನ್‍ನಲ್ಲಿ ಮದ್ಯ ಖರೀದಿ ಮಾಡುತ್ತಿದ್ದರು.

    ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ನೂರಾರು ಮಂದಿ ನಿವೃತ್ತ ಸೈನಿಕರು ಇಂದು ಬೆಳಗ್ಗೆ ನಗರದ ಹೊಳೆ ಬಸ್ ನಿಲ್ದಾಣದ ಸಮೀಪದ ಮಿಲಿಟರಿ ಕ್ಯಾಂಟೀನ್‍ಗೆ ಮದ್ಯ ಖರೀದಿಸಲೆಂದು ಆಗಮಿಸಿದ್ದರು. ಈ ವೇಳೆ ನಿವೃತ್ತ ಸೈನಿಕರು ಮದ್ಯ ಖರೀದಿಗೆ ಸರದಿ ಸಾಲಿನಲ್ಲೇ ನಿಂತಿದ್ದರು. ಆದರೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್‌ಪೆಕ್ಟರ್ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಮದ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಯಾಂಟೀನ್‍ನಲ್ಲಿದ್ದ ಸ್ಟಾಕ್ ಸಹ ಪರಿಶೀಲನೆ ನಡೆಸಿದರು.

    ಈ ವೇಳೆ ಎರಡು ಬ್ರಾಂಡ್‍ನ ಬಾಟಲಿಗಳ ಮೇಲೆ ಪೇಪರ್ ಸೀಲ್ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ಅಬಕಾರಿ ಇನ್ಸ್‌ಪೆಕ್ಟರ್ ಅವರು ಮದ್ಯ ಮಾರಾಟ ನಿಲ್ಲಿಸುವಂತೆ ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಿ ತೆರಳಿದರು. ಅದರಂತೆ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟವನ್ನು ಅಧಿಕಾರಿಗಳು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೆರಳಿದ ನಿವೃತ್ತ ಸೈನಿಕರು ಅಬಕಾರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮದ್ಯದ ಬಾಟಲಿಗಳು ಕ್ಯಾಂಟೀನ್‍ಗೆ ತಲುಪುವ ಮುನ್ನ ನಾಲ್ಕೈದು ಕಡೆ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲಿಸಿದ ನಂತರವೇ ಕ್ಯಾಂಟೀನ್‍ಗೆ ಬರುತ್ತವೆ. ಹೀಗಿರುವಾಗ ಸೀಲ್ ಇಲ್ಲ ಅಂದರೆ ಅದು ಅಬಕಾರಿ ಇಲಾಖೆಯವರ ತಪ್ಪು. ಸೀಲ್ ಇಲ್ಲ ಅಂದ ಮೇಲೆ ಯಾಕೆ ಕಳುಹಿಸಿದರು ಎಂದು ಅಬಕಾರಿ ಸಿಬ್ಬಂದಿ ವಿರುದ್ಧವೇ ನಿವೃತ್ತ ಸೈನಿಕರು ಗುಡುಗಿದರು.

    ನಾವು ಕೊರೊನಾ ಪಾಸ್ ಪಡೆದು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರ ದೂರದ ಊರುಗಳಿಂದ ಮದ್ಯ ಖರೀದಿಸಲು ಬಂದಿದ್ದೇವೆ. ನಾವು ಮದ್ಯ ತೆಗೆದುಕೊಂಡೇ ಹೋಗುವುದು. ಒಂದು ವೇಳೆ ನೀವು ಕೊಡದಿದ್ದರೆ ಅಬಕಾರಿ ಇಲಾಖೆ ಕಚೇರಿ ಎದುರೇ ಧರಣಿ ನಡೆಸುತ್ತೇವೆ ಎಂದು ನಿವೃತ್ತ ಸೈನಿಕರು ಎಚ್ಚರಿಕೆ ನೀಡಿದರು.

    ಇದರಿಂದಾಗಿ ಅಬಕಾರಿ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಪರಿಶೀಲನೆ ನಡೆಸುವ ನೆಪ ಹೇಳಿ, ಸುಮ್ಮನೆ ಯಾಕೆ ನಿವೃತ್ತ ಸೈನಿಕರನ್ನು ಎದುರು ಹಾಕಿಕೊಳ್ಳುವುದು ಎಂಬ ಕಾರಣದಿಂದ ನಾವು ಇದನ್ನು ನಂತರ ಪರಿಶೀಲಿಸುತ್ತೇವೆ. ಸದ್ಯ ನೀವೀಗ ಮದ್ಯ ತೆಗೆದುಕೊಂಡು ಹೋಗಿ ಎಂದು ಹೇಳಿ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟರು.

  • ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

    ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

    ದಾವಣಗೆರೆ: ಕಳೆದ 20 ವರ್ಷಗಳಿಂದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಿವೃತ್ತ ಯೋಧರ ಸಂಘ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕೋರಲಾಯಿತು.

    ಸಾಸಲು ಗ್ರಾಮದ ಜಯಣ್ಣ, ಕೆಟಿಜೆ ನಗರದ ಸುಶೀಲ್ ಕುಮಾರ್, ತುರ್ಚುಘಟ್ಟದ ಶ್ರೀನಿವಾಸ್ ನಿವೃತ್ತಿ ಯೋಧರು. ಇಪ್ಪತ್ತುವರೆ ವರ್ಷಗಳ ಕಾಲ ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶ, ಹರ್ಯಾಣ, ಮೇಘಾಲಯ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸಿದ್ದ ಯೋಧರು ಇಂದು ನಿವೃತ್ತಿಯಾಗಿ ತವರಿಗೆ ಆಗಮಿಸಿದರು.

    ನಿವೃತ್ತಿಯಾಗಿ ತವರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಯೋಧರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಆರತಿ ಎತ್ತಿ ತಿಲಕವಿಟ್ಟು ಸಿಹಿ ಹಂಚಿದರು. ಅಲ್ಲದೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಮಟೆ ಬಾರಿಸಿಕೊಂಡು ಅದ್ಧೂರಿಯಾಗಿ ಸ್ವಾಗತ ಕೋರಿ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿದರು.

    ದೇಶಕ್ಕಾಗಿ ಕೆಲಸ ಮಾಡಿದ್ದು ನಮಗೆ ತುಂಬಾ ಹೆಮ್ಮೆಯಿದೆ. ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದೆವು. ಶಾಲೆಯಲ್ಲಿ ಶಿಕ್ಷಕರು ದೇಶಾಭಿಮಾನವನ್ನು ತುಂಬಿದ್ದಕ್ಕೆ ನಾವು ಇಂದು ಯೋಧರಾಗಿದ್ದೇವೆ. ಅವಕಾಶ ಸಿಕ್ಕರೆ ಮತ್ತೆ ದೇಶ ಸೇವೆಗೆ ಹೋಗುತ್ತೇವೆ. ಅಲ್ಲದೆ ಯುವಕರನ್ನು ದೇಶ ಸೇವೆ ಮಾಡಲು ತರಬೇತಿ ನೀಡುತ್ತೇವೆ ಎಂದು ಹೆಮ್ಮೆಯಿಂದ ನಿವೃತ್ತ ಯೋಧರು ಹೇಳಿಕೊಂಡರು.