Tag: Resque

  • ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

    ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

    ಮಂಗಳೂರು: ಲಾಕ್‍ಡೌನ್ ಹಿನ್ನೆಲೆ ಜನದಟ್ಟಣೆ ಕಡಿಮೆಯಾಗಿರುವುದರಿಂದ ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ನಂತರ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಘಟನೆ ನಡೆದಿದ್ದು, ಮಜಿ ಮೋನಪ್ಪ ಅವರ ಜಮೀನಿನಲ್ಲಿರುವ ಸುಮಾರು 6 ಅಡಿ ಆಳದ ಬಾವಿಗೆ ಚಿರತೆ ಬಿದ್ದು ಆತಂಕ ಸೃಷ್ಟಿಸಿತ್ತು. ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹೊರಳಾಡುತ್ತಿತ್ತು. ರಾತ್ರಿ ವೇಳೆ ಕಾಣದೆ ಚಿರತೆ ಬಾವಿಯಲ್ಲಿ ಬಿದ್ದಿದ್ದು, ಬೆಳಗ್ಗೆ ಹೊಲದ ಮಾಲೀಕರ ಗಮನಕ್ಕೆ ಬಂದಿದೆ.

    ಬಳಿಕ ಮನೆಯವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೋಲೀಸರು ಜಂಟಿ ಕಾರ್ಯಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಿದ್ದಾರೆ. ಸುಮಾರು ಎರಡು ವರ್ಷ ಪ್ರಾಯದ ಮರಿ ಚಿರತೆ ಇದಾಗಿದ್ದು, ಚಿರತೆಯನ್ನು ರಕ್ಷಿಸಿದ ಬಳಿಕ ಸುರಕ್ಷಿತವಾಗಿ ಪಶ್ಚಿಮಘಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

  • ಜೀವ ಪಣಕ್ಕಿಟ್ಟು ಜಿಂಕೆಯನ್ನು ರಕ್ಷಣೆ ಮಾಡಿದ ಕುಂದಾಪುರದ ಸಾಹಸಿಗರು

    ಜೀವ ಪಣಕ್ಕಿಟ್ಟು ಜಿಂಕೆಯನ್ನು ರಕ್ಷಣೆ ಮಾಡಿದ ಕುಂದಾಪುರದ ಸಾಹಸಿಗರು

    ಉಡುಪಿ: ಕೆಸರಿನ ಹೊಂಡದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಜಿಂಕೆಯನ್ನು ರಕ್ಷಣೆ ಮಾಡಲು ಕುಂದಾಪುರದ ಇಬ್ಬರು ಸಾಹಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.

    ಬಾಯಾರಿಕೆಯಿಂದ ಬಳಲಿ ನೀರು ಅರಸುತ್ತಾ ಜಿಂಕೆಯೊಂದು ಕಾಡಿನಿಂದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ಧಾಪುರಕ್ಕೆ ಬಂದಿದೆ. ಕೆಸರಿನ ಹೊಂಡದ ನಡುವೆ ನೀರು ಕಂಡ ಜಿಂಕೆ ಮದಗಕ್ಕೆ ಇಳಿದಿದೆ. ಅಷ್ಟರಲ್ಲಿ ಪಾಪ ಜಿಂಕೆಯ ನಾಲ್ಕೂ ಕಾಲುಗಳು ಕೆಸರಿನಾಳದಲ್ಲಿ ಹೂತು ಹೋಗಿದೆ. ಚೂಪು ಕಾಲಿನ ಜಿಂಕೆಗೆ ಮೇಲೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

    ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಸ್ಥಳೀಯ ಅರಣ್ಯಾಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಅಷ್ಟರಲ್ಲಿ ಜೀವದ ಹಂಗು ತೊರೆದು ಕೃಷ್ಣ ಪೂಜಾರಿ ಮತ್ತು ಪ್ರಶಾಂತ್ ಕುಮಾರ್ ಕೆಸರಿನ ಮದಗಕ್ಕೆ ಇಳಿದಿದ್ದಾರೆ.

    ತಾವು ಕೆಸರಲ್ಲಿ ಹೂತು ಹೋಗುತ್ತಿದ್ದರೂ ಅದನ್ನು ಲೆಕ್ಕಿಸದೆ ಜಿಂಕೆಯನ್ನು ರಕ್ಷಿಸಲು ಹೋರಾಟ ಮಾಡಿದ್ದಾರೆ. ಇಬ್ಬರನ್ನು ಕಂಡು ಕಾಡುಪ್ರಾಣಿಯೂ ಭಯಗೊಂಡು ಸಹಕರಿಸಿಲ್ಲ. ನಂತರ ಹರಸಾಹಸ ಪಟ್ಟು ಜಿಂಕೆಯನ್ನು ಹೊಂಡದಿಂದ ಮೇಲೆತ್ತಲಾಯ್ತು. ಕೆಸರು ದಾಟಿ ಗಟ್ಟಿ ಭೂಮಿ ಸಿಕ್ಕ ಕೂಡಲೇ ಜಿಂಕೆ ಬದುಕಿದ್ನಲ್ಲಾ ಬಡಜೀವ ಅಂತ ಕಾಡಿನತ್ತ ಓಡಿಹೋಗಿದೆ.

    ಪ್ರಾಣವನ್ನೇ ಪಣಕ್ಕಿಟ್ಟು ಮೂಕ ಪ್ರಾಣಿಯನ್ನು ರಕ್ಷಣೆ ಮಾಡಿದ ಕೃಷ್ಣಪೂಜಾರಿ ಮತ್ತು ಪ್ರಶಾಂತ್ ಕುಮಾರ್ ಅವರ ಸಾಹಸವನ್ನು ಸ್ಥಳೀಯರು, ಅರಣ್ಯಾಧಿಕಾರಿಗಳು ಹೊಗಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೃಷ್ಣಪೂಜಾರಿ ಮತ್ತು ಪ್ರಶಾಂತ್ ಮಾತು ಬಾರದ ಮೂಕ ಪ್ರಾಣಿಯ ವೇದನೆ ಕಂಡು ಸುಮ್ಮನಿರಲು ಮನಸ್ಸು ಕೇಳಲಿಲ್ಲ. ನೇರ ಕೆಸರಿಗೆ ಇಳಿದೇ ಬಿಟ್ಟೆವು. ನಾವು ಹೂತು ಹೋಗುವ ಪರಿಸ್ಥಿತಿ ಎದುರಾದರೆ ಅರಣ್ಯ ಇಲಾಖೆ, ಸ್ಥಳೀಯರು ಸಹಾಯಕ್ಕೆ ಬರುತ್ತಾರೆ ಎಂಬ ನಂಬಿಕೆಯಿತ್ತು ಎಂದು ಹೇಳಿದ್ದಾರೆ.

  • ಮಧ್ಯರಾತ್ರಿಯ ಕಗತ್ತಲಲ್ಲಿ ಬೆಟ್ಟ ಸೇರಿದ್ದ ಯುವಕರು – ಟ್ರೆಕ್ಕಿಂಗ್‍ಗೆ ಬಂದು ಪಡಬಾರದ ಫಜೀತಿ ಪಟ್ಟರು

    ಮಧ್ಯರಾತ್ರಿಯ ಕಗತ್ತಲಲ್ಲಿ ಬೆಟ್ಟ ಸೇರಿದ್ದ ಯುವಕರು – ಟ್ರೆಕ್ಕಿಂಗ್‍ಗೆ ಬಂದು ಪಡಬಾರದ ಫಜೀತಿ ಪಟ್ಟರು

    ಚಿಕ್ಕಬಳ್ಳಾಪುರ: ಟ್ರೆಕ್ಕಿಂಗ್ ಬಂದ ಮೂವರು ಯುವಕರು ಮಧ್ಯರಾತ್ರಿಯ ಕಗ್ಗತ್ತಲ್ಲಿ ಬೃಹದಾಕರದ ಬೆಟ್ಟ ಹತ್ತಿ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲಾಗದೇ ಫಜೀತಿ ಪಟ್ಟ ಘಟನೆ ಚಿಕ್ಕಬಳ್ಳಾಪುರ ದಿವ್ಯ ಗಿರಿಧಾಮದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಕರ್ ಕುಮಾರ್, ಐಷು ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ದೀಪಾಂಶು ಟ್ರೆಕ್ಕಿಂಗ್‍ಗೆ ಆಗಮಿಸಿ ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದಾಗಿ ಸುರಕ್ಷಿತವಾಗಿ ಇಳಿದಿದ್ದಾರೆ.


    ನಡೆದಿದ್ದೇನು?
    ಮೂವರು ಯುವಕರು ಪಡೆದು ಮಧ್ಯರಾತ್ರಿ ಕಾರಹಳ್ಳಿ ಕ್ರಾಸ್ ಮಾರ್ಗದ ಮುಖಾಂತರ ಕಡಿದಾದ ದಿವ್ಯಗಿರಿ ಬೆಟ್ಟದ ಅರ್ಧಭಾಗಕ್ಕೆ ತೆರಳಿದ್ದಾರೆ. ಆದರೆ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲು ಯತ್ನಿಸಿದ ವೇಳೆ ಅವರಿಗೆ ತಾವು ಆಗಮಿಸಿದ್ದ ಸ್ಥಳ ನೋಡಿ ಶಾಕ್ ಆಗಿದೆ. ಬೆಟ್ಟ ಹತ್ತಿ ಕಡಿದಾದ ಜಾಗದಲ್ಲಿ ಕೂತಿದ್ದ ಅವರಿಗೆ ಬೆಳಿಗ್ಗೆ ಇಳಿಯಲು ಹೆದರಿಕೆಯಾಗಿದೆ. ಏಕೆಂದರೆ ಬೆಟ್ಟದ ತೀರ ಕಡಿದಾದ ಜಾಗಕ್ಕೆ ತೆರಳಿದ್ದ ಯುವಕರು ಒಂದು ಹೆಜ್ಜೆ ಮುಂದಿಟ್ಟರೂ ಅಪಾಯ ಕಾದಿತ್ತು. ಅಪಾಯದ ತೀವ್ರತೆ ಅರಿತ ಯುವಕರು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಈ ಯುವಕರ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಜೊತೆಗೂಡಿ ಯುವಕರ ರಕ್ಷಣೆ ಮಾಡಿದ್ದಾರೆ.

    ಮೂವರಲ್ಲಿ ದೀಪಾಂಶು ಚಾರಣದ ವೇಳೆ ಬಿದ್ದು ಗಾಯಗೊಂಡಿದ್ದು, ಮೊಣಕಾಲಿಗೆ ಗಂಭೀರವಾದ ಗಾಯವಾಗಿ ತೀವ್ರತರವಾದ ರಕ್ತಸ್ರಾವವಾಗಿದೆ. ಇದರಿಂದ ನಡೆಯಲು ಸಾಧ್ಯವಾಗದೇ ಸ್ಥಿತಿಗೆ ತಲುಪಿದ್ದ ಯುವಕನನ್ನು ಸಿಬ್ಬಂದಿ ಹೊತ್ತುಕೊಂಡು ರಕ್ಷಣೆ ಮಾಡಿದ್ದಾರೆ.

    ಚಾರಣಿಗರ ಹಾಟ್ ಸ್ಪಾಟ್: ಪಂಚಗಿರಿಗಿಳ ನಾಡು ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗುಡ್ಡಗಳು ಇತ್ತೀಚೆಗೆ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೇವರಿಟ್ ತಾಣಗಳಾಗಿ ಮಾರ್ಪಾಡಾಗಿವೆ. ಬೆಂಗಳೂರು ನಗರದಿಂದ ಕೂಗಳತೆ ದೂರದ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ, ದಿವ್ಯಗಿರಿ, ಚನ್ನಗಿರಿ ಸೇರಿದಂತೆ ಸ್ಕಂದಗಿರಿಗಳು ಈಗ ಟ್ರೆಕ್ಕಿಂಗ್ ತಾಣಗಳಾಗಿ ಮಾರ್ಪಾಡಾಗಿವೆ. ಸರ್ಕಾರವೂ ಕೂಡ ಸ್ಕಂದಗಿರಿ ಬೆಟ್ಟಕ್ಕೆ ಅಧಿಕೃತವಾಗಿ ಚಾರಣ ಆರಂಭಿಸಿ ಹಣ ಕೂಡ ಗಳಿಸುತ್ತಿದೆ. ಆದರೆ ಸ್ಕಂದಗಿರಿ ಬಿಟ್ಟು ಬೇರೆ ಯಾವ ಬೆಟ್ಟದಲ್ಲೂ ಚಾರಣ ಮಾಡುವಂತಿಲ್ಲ. ಇದರ ನಡುವೆಯೂ ಈ ಮೂವರು ಯುವಕರು ದಿವ್ಯಗಿರಿ ಬೆಟ್ಟಕ್ಕೆ ಸಾಗಿ ಅಪಾಯ ಎದುರಿಸಿದ್ದಾರೆ.

    ಸದ್ಯ ಗಾಯಾಳು ದೀಪಾಂಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಕ್ರಮವಾಗಿ ಚಾರಣ ಕೈಗೊಂಡ ಹಿನ್ನಲೆ ನಂದಿಗಿರಿಧಾಮ ಪೊಲೀಸ್ ಠಾಣೆ ಸೇರಿದ್ದಾರೆ. ಹೀಗಾಗಿ ಚಾರಣ ಎಂದು ಬೆಟ್ಟಕ್ಕೆ ಹೋಗುವ ಮುನ್ನ ಒಮ್ಮೆ ಯೋಚಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀನಿನ ಬಲೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ: ವಿಡಿಯೋ ನೋಡಿ

    ಮೀನಿನ ಬಲೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ: ವಿಡಿಯೋ ನೋಡಿ

    ಕಾರವಾರ: ದನಗಳು ಹೂವುಗಳನ್ನು ತಿನ್ನಬಾರದೆಂದು ಗಿಡಗಳ ಮೇಲೆ ಹಾಕಿದ್ದ ಮೀನಿನ ಬಲೆಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

    ಆಹಾರ ಅರಸಿ ಮುಂಡಳ್ಳಿ ಗ್ರಾಮದ ತಿರಗನಮನೆ ಶನಿಯಾರ ನಾಯ್ಕ ಎಂಬುವವರ ಮನೆಗೆ ರಾತ್ರಿ ವೇಳೆಯಲ್ಲಿ ಬಂದಿದ್ದ ನಾಗರಹಾವು, ಗಿಡಗಳ ಮೇಲೆ ಹಾಕಲಾಗಿದ್ದ ಮೀನಿನ ಬಲೆಗೆ ಸಿಲುಕಿದೆ. ಇದು ಬೆಳಗ್ಗೆ ಮನೆಯ ಮಾಲೀಕರ ಗಮನಕ್ಕೆ ಬಂದಕೂಡಲೇ ಸ್ಥಳೀಯ ಉರಗ ತಜ್ಞ ಮಾದೇವ ನಾಯ್ಕರವರಿಗೆ ಮಾಹಿತಿ ನೀಡಿದ್ದಾರೆ.

    ಹಾವಿನ ರಕ್ಷಣಾ ಕಾರ್ಯವನ್ನ ನಡೆಸುವ ಕಾರ್ಯವನ್ನು ಮಾಡುತ್ತಿರುವ ಮಾದೇವ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಬಲೆಯಲ್ಲಿ ಸಿಲುಕಿದ್ದ ನಾಗರಹಾವನ್ನು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬಲೆಯಲ್ಲಿ ಸಿಲುಕಿದ್ದ ನಾಗರಹಾವು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗಾಯಗಳನ್ನು ಮಾಡಿಕೊಂಡಿದ್ದು ಉರಗ ತಜ್ಞ ಮಾದೇವನಾಯ್ಕ ಅದರ ದೇಹಕ್ಕೆ ಅರಿಶಿನ ಹಚ್ಚಿ ಉಪಚಾರ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MXWKyYCwlco

     

  • ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

    ಚಿಕ್ಕೋಡಿ ಪಟ್ಟಣದ ಹುಕ್ಕೇರಿ ಕ್ರಾಸ್ ಬಳಿ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಕಲ್ಲು ತುಂಬಿದ್ದ ಟಿಪ್ಪರ್ ಗುದ್ದಿದ ಪರಿಣಾಮ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ. ಕಾರ್ ನುಜ್ಜಾಗುಜ್ಜಾಗಿದ್ದರಿಂದ ಒಳಗಡೆ ಯಕ್ಸಾಂಬಾ ಪಟ್ಟಣದ ಜಗದೀಶ್ ಸರಿಕರ್ ಮತ್ತು ಅಥಣಿಯ ಹೊನಕಪ್ಪ ಎಂಬವರು ಸಿಲುಕಿಕೊಂಡಿದ್ದರು.

    ಕಾರಿನೊಳಗೆ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಚಿಕ್ಕೋಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.