ಬೆಂಗಳೂರು: ಕೊರೊನಾ ಬಳಿಕ ನಟಿಮಣಿಯರಿಗೆ ಮಾಲ್ಡಿವ್ಸ್ ಫೇವರಿಟ್ ಪ್ಲೇಸ್ ಎನ್ನುವಂತಾಗಿದ್ದು, ಸ್ಯಾಂಡಲ್‍ವುಡ್, ಬಾಲಿವುಡ್ ಮಾತ್ರವಲ್ಲದೆ ಇದೀಗ ಟಾಲಿವುಡ್‍ನ ಸಮಂತಾ ಸಹ ಮಾಲ್ಡಿವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹತ್ತಾರು ನಟಿಯರು ಐಲ್ಯಾಂಡ್‍ಗಳಲ್ಲಿ ಮೊಕ್ಕಾಂ ಹೂಡಿದ್ದು, ಕಡಲ ಕಿನಾರೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ನಟಿಮಣಿಯರು ಮಾಲ್ಡಿವ್ಸ್ ಗೆ ಭೇಟಿ ನೀಡಲು ಕಾರಣವೇನು, ಇದ್ದಕ್ಕಿದ್ದಂತೆ ಹೋಗಿದ್ದೇಕೆ, ಅಲ್ಲಿನ ಹೋಟೆಲ್ ಹೇಗಿವೆ, ಒಂದು ರಾತ್ರಿ ಹೋಟೆಲ್‍ಗಳಲ್ಲಿ ಕಾಲ ಕಳೆಯಲು ದರ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಸೆಲೆಬ್ರಿಟಿಗಳು ಇದೀಗ ಗೂಡಿನಿಂದ ಹಾರಿದ ಹಕ್ಕಿಗಳಂತಾಗಿದ್ದು, ತನಮ್ಮ ನೆಚ್ಚಿನ ಸ್ಥಳಗಳಿಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ನಟಿಮಣಿಯರಿಗೆ ಬೀಚ್, ನೀರು ಎಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸ್ಯಾಂಡಲ್‍ವುಡ್, ಬಾಲಿವುಡ್ ಹಾಗೂ ಟಾಲಿವುಡ್‍ನ ಬೆಡಗಿಯರು ಮಾಲ್ಡಿವ್ಸ್‍ನ್ನು ತಮ್ಮ ಪ್ರವಾಸದ ಡೆಸ್ಟಿನೇಶನ್ ಮಾಡಿಕೊಂಡಿದ್ದಾರೆ. ಹತ್ತಾರು ನಟಿಯರು ಮತ್ಸ್ಯ ಕನ್ಯೆಯರಂತೆ ಸಮುದ್ರ ವಿಹಾರಿಗಳಾಗಿದ್ದಾರೆ.
ಕನ್ನಡದ ಪ್ರಣೀತಾ, ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್, ತೆಲುಗಿನ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್ ದಂಪತಿ, ಬಾಲಿವುಡ್‍ನ ರಕುಲ್ ಪ್ರೀತ್ ಸಿಂಗ್, ದಿಶಾ ಪಟಾಣಿ, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಟೈಗರ್ ಶ್ರಫ್, ಮೌನಿ ರಾಯ್, ನೇಹಾ ಧುಪಿಯಾ ಸೇರಿದಂತೆ ಹತ್ತು ಹಲವು ನಟಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ಒಮ್ಮೆಲೆ ನಟಿಮಣಿಯರು ಮಾಲ್ಡಿವ್ಸ್ ಗೆ ತೆರಳಿದ್ದಾರೆ.
ಸಮುದ್ರ ಪ್ರಿಯರಿಗೆ ಮಾಲ್ಡಿವ್ಸ್ ಹೇಳಿ ಮಾಡಿಸಿದ ಸ್ಥಳ. ತುಂಬಾ ಜನ ಮಾಲ್ಡಿವ್ಸ್ ಭೇಟಿ ನೀಡಲು ಪ್ರಮುಖ ಕಾರಣ ಅಲ್ಲಿನ ಹವಾಮಾನ. ಅದರಲ್ಲೂ ನವೆಂಬರ್ ನಿಂದ ಏಪ್ರಿಲ್ ವರೆಗೆ ಈ ದ್ವೀಪ ದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಈ ವೇಳೆ ಅಲ್ಲಿನ ತಾಪಮಾನ ಸರಾಸರಿ 29 ಡಿಗ್ರಿ ಸೆಲ್ಸಿಯಸ್‍ನಿಂದ 31 ಡಿಗ್ರಿ ಸೆಲ್ಸಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಮಳೆ ಹಾಗೂ ಬಿಸಿಲು ತುಂಬಾ ಕಡಿಮೆ ಹೀಗಾಗಿ ಹೆಚ್ಚು ಜನ ಭೇಟಿ ನೀಡುತ್ತಾರೆ.
ಮಾಲ್ಡಿವ್ಸ್ ಯಾಕೆ ಇಷ್ಟ?
ಮಾಲ್ಡಿವ್ಸ್ ದ್ವೀಪಗಳ ಸಮೂಹವಾಗಿದ್ದು, ಬರೋಬ್ಬರಿ 1,190ಕ್ಕೂ ಹೆಚ್ಚು ಹವಳ ದ್ವೀಪಗಳನ್ನು ಹೊಂದಿದೆ. ಇನ್ನೂ ವಿಶೇಷ ಎಂಬಂತೆ ಈ ದೇಶಕ್ಕೆ ಪ್ರಯಾಣಿಸುವವರಿಗಾಗಿ ನೈಸರ್ಗಿಕ ಪ್ರತ್ಯೇಕತೆಯನ್ನು ನೀಡಲಾಗುತ್ತದೆ. ಇಲ್ಲಿನ ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುತ್ತವೆ. ಇದರಿಂದಾಗಿ ಸುರಕ್ಷತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತವೆ.
ಇಲ್ಲಿ ‘ಒಂದು ದ್ವೀಪ ಒಂದು ರೆಸಾರ್ಟ್’ ಪರಿಕಲ್ಪನೆಯನ್ನು ಅನುಸರಿಸಲಾಗುತ್ತದೆ. ಇದರಿಂದ ಮಾಲ್ಡಿವ್ಸ್ ಗೆ ಭೇಟಿ ನೀಡುವ ಪ್ರಯಾಣಿಕರು ತಾವು ಉಳಿದುಕೊಂಡ ರೆಸಾರ್ಟ್‍ಗೆ ಸೀಮಿತವಾಗುತ್ತಾರೆ. ಹೀಗಾಗಿ ಇತರ ಸ್ಥಳಗಳಿಗೆ ಹೋಲಿಸಿದರೆ ಇದು ಸುರಕ್ಷಿತ ಎನ್ನಿಸುತ್ತದೆ. ಅಲ್ಲದೆ ಮಾಲ್ಡಿವ್ಸ್ ಗೆ ಭೇಟಿ ನೀಡದ ಬಳಿಕ ಕ್ವಾರಂಟೈನ್ ಆಗುವ ಅಗತ್ಯವಿಲ್ಲ. ಮಾತ್ರವಲ್ಲದೆ ಪಾಸ್‍ಪೋರ್ಟ್ ಹೊಂದಿದ ಭಾರತೀಯರಿಗೆ 30 ದಿನಗಳ ಉಚಿತ ವೀಸಾವನ್ನು ಸಹ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಮಾಲ್ಡಿವ್ಸ್ ಗೆ ಭೇಟಿ ನೀಡಬಹುದಾಗಿದೆ.
ರೆಸಾರ್ಟ್ ದರವೆಷ್ಟು?
ಮಾಲ್ಡಿವ್ಸ್ ನಲ್ಲಿ ಪ್ರತಿ ದ್ವೀಪಕ್ಕೊಂದು ರೆಸಾರ್ಟ್ ಇದ್ದು, ಸಾವಿರಕ್ಕೂ ಅಧಿಕ ರೆಸಾರ್ಟ್‍ಗಳಿವೆ. ಸಾವಿರದಿಂದ ಲಕ್ಷಾಂತರ ರೂ. ದರದ ರೆಸಾರ್ಟ್‍ಗಳಿದ್ದು, ಸಾಮರ್ಥ್ಯಕ್ಕನುಸಾರ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಸಹ ತೆರಳಬಹುದಾಗಿದೆ. ಸದ್ಯ ಟಾಲಿವುಡ್ ನಟಿ ಸಮಂತಾ ಅವರು ತಂಗಿರುವ ಜೋಲಿ ಮಾಲ್ಡಿವ್ಸ್ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ರೂಂ ಬಾಡಿಗೆ ಬರೋಬ್ಬರಿ 1.5 ಲಕ್ಷ ರೂ.ಗಳಾಗಿವೆ.
ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಜೋಡಿ ಸಹ ಹನಿಮೂನ್‍ಗಾಗಿ ಮಾಲ್ಡಿವ್ಸ್ ಗೆ ತೆರಳಿದ್ದರು. ಇವರು ಅಂಡರ್ ವಾಟರ್ ಹೋಟೆಲ್‍ನಲ್ಲಿ ತಂಗಿದ್ದರು. ಇದು ವಿಶ್ವದ ಮೊದಲ ಸಬ್‍ಮರ್ಜಡ್ ಹೋಟೆಲ್ ಆಗಿದ್ದು, ಹಿಂದೂ ಮಹಾಸಾಗರದ ಮೇಲ್ಮೈಗಿಂತ 16 ಅಡಿ ಆಳದಲ್ಲಿರುವ ವಿಶ್ವದ ಮೊದಲ ಹೋಟೆಲ್ ಆಗಿದೆ. ಕಾಜಲ್ ದಂಪತಿ ಮುರಾಕಾ ಹೋಟೆಲ್‍ನಲ್ಲಿ ತಂಗಿದ್ದು, ಇದರ ಒಂದು ದಿನದ ಬಾಡಿಗೆ ಅಂದಾಜು 37.33 ಲಕ್ಷ ರೂ.ಗಳಾಗಿವೆ. ಇತ್ತೀಚೆಗೆ ಕಾಜಲ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದು, ಸಮುದ್ರದ ಆಳದಲ್ಲಿರುವ ಗಾಜಿನ ರೂಮ್‍ನಲ್ಲಿ ಕುಳಿತಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಈ ಮೂಲಕ ಅಂಡರ್ ವಾಟರ್ ವೇವ್ ತೋರಿಸಿದ್ದರು.
ರೆಸಾರ್ಟ್‍ಗಳಲ್ಲಿ ಪ್ರೈವೆಸಿ ಹಾಗೂ ಉತ್ತಮ ವಾತಾವರಣ, ಯಾವುದೇ ಕಿರಿಕಿರಿ ಇಲ್ಲದ್ದರಿಂದ ಬಹುತೇಕ ನಟ, ನಟಿಯರು ಮಾಲ್ಡಿವ್ಸ್ ಗೆ ತೆರಳಲು ಇಷ್ಟಪಡುತ್ತಾರೆ. ಹೀಗಾಗಿಯೇ ಇದೀಗ ತಂಡೋಪ ತಂಡವಾಗಿ ತೆರಳಿದ್ದಾರೆ.