Tag: resort politics

  • ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ನಡೆದ ಜಗಳಕ್ಕೆ ಬಿಜೆಪಿ ‘ಆಪರೇಷನ್ ಕಮಲ’ ಕಾರಣ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ಸಭೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿ ಮಾತನಾಡಿದ ಡಿಕೆ ಸುರೇಶ್ ಅವರು, ಬಿಜೆಪಿಯ ಆಪರೇಷನ್ ಕಮಲದಲ್ಲಿ ಹಣದ ವ್ಯವಹಾರವೂ ನಡೆದಿದ್ದು, ರೆಸಾರ್ಟಿನಲ್ಲಿ ಶಾಸಕರ ನಡುವೆ ಗಲಾಟೆಗೆ ಬಿಜೆಪಿಯೇ ಕಾರಣ. ಅವರು ಕೈಗೊಂಡಿದ್ದ ಆಪರೇಷನ್ ಕಮಲದಿಂದಲೇ ನಾವು ರೆಸಾರ್ಟಿಗೆ ಹೋಗಿದ್ದು, ಇಲ್ಲವಾದರೆ ರೆಸಾರ್ಟಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮಗಳ ವರದಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾಧ್ಯಮದವರು ಕೆಲವು ವಿಷಯ ಮುಚ್ಚಿಟ್ಟಿದ್ದಾರೆ. ಆಪರೇಷನ್ ಕಮಲ ಯಾವ ಹಂತದಲ್ಲಿ ನಡೆಯುತ್ತಿದೆ. ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇದೆ. ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಶಾಸಕರ ನಡುವಿನ ಗಲಾಟೆಯ ಬಗ್ಗೆ ಸಮರ್ಥನೆ ನೀಡಲು ಯತ್ನಿಸಿ ಗೊಂದಲ ವಾತಾವರಣ ನಿರ್ಮಾಣ ಮಾಡುವಂತೆ ಹೇಳಿಕೆ ನೀಡಿದರು.

    ಇದೇ ವೇಳೆ ಆಪರೇಷನ್ ಕಮಲದಲ್ಲಿ ನಡೆದಿದೆ ಎಂದು ಹೇಳುತ್ತಿರುವ ಹಣಕಾಸಿನ ವ್ಯವಹಾರದ ಬಗ್ಗೆ ನಿಮಗೆ ಇರುವ ಮಾಹಿತಿ ನೀಡಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಎಲ್ಲವೂ ಮಾಧ್ಯಮಗಳಿಗೆ ತಿಳಿದಿದೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಉಲ್ಟಾ ಹೊಡೆದ ಡಿಕೆ ಸುರೇಶ್: ಶಾಸಕ ಆನಂದ್ ಸಿಂಗ್ ಅವರು ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ್ದಾರೆ ಎಂದು ಅಂದು ಮಾಹಿತಿ ನೀಡಿದ್ದ ಡಿಕೆ ಸುರೇಶ್ ಅವರು, ಇಂದು ಕಾಂಗ್ರೆಸ್ ಶಾಸಕ ಶಾಸಕರ ನಡುವಿನ ಗಲಾಟೆಗೆ ಆಪರೇಷನ್ ಕಮಲವೇ ಕಾರಣ ಎಂದು ಹೇಳಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಯಾವುದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನ ಪ್ರಕಾರ ಪೊಲೀಸರು ಕ್ರಮ ತೆಗದುಕೊಳ್ಳುತ್ತಾರೆ. ಆನಂದ್ ಸಿಂಗ್ ಬಹುಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

    ಆಪರೇಷನ್ ಕಮಲದ ಬಗ್ಗೆ ಪದೇ ಪದೇ ದಾಖಲೆ ಬಿಡುಗಡೆ ಮಾಡುತ್ತೇವೆ. ಈ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಸೂಕ್ತ ಸಮಯ ಬಂದರೆ ಬಿಡುಗಡೆ ಮಾಡುತ್ತೇವೆ ಎಂದು ಜಾರಿಕೊಂಡಿದ್ದರು. ಆದರೆ ಇದುವರೆಗೂ ದೋಸ್ತಿ ಸರ್ಕಾರದ ಯಾವುದೇ ನಾಯಕರು ಕೂಡ ಅಧಿಕೃತವಾಗಿ ಹಣಕಾಸಿನ ವ್ಯವಹಾದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.

    https://www.youtube.com/watch?v=yHwEYzuJJPM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಗ್ಗೆ ಮಾನ ಮರ್ಯಾದೆ, ಕಾಮನ್‍ಸೆನ್ಸ್ ಇಲ್ವಾ ಎಂದ ಕೆಪಿಸಿಸಿ ಅಧ್ಯಕ್ಷರು ಸಂಜೆ ಕ್ಷಮೆ ಕೇಳಿದ್ರು!

    ಬೆಳಗ್ಗೆ ಮಾನ ಮರ್ಯಾದೆ, ಕಾಮನ್‍ಸೆನ್ಸ್ ಇಲ್ವಾ ಎಂದ ಕೆಪಿಸಿಸಿ ಅಧ್ಯಕ್ಷರು ಸಂಜೆ ಕ್ಷಮೆ ಕೇಳಿದ್ರು!

    ಬೆಂಗಳೂರು: ಮಾಧ್ಯಮದವರಿಗೆ ಮಾನ ಮರ್ಯಾದೆ ಇಲ್ವಾ..? ಕಾಮನ್‍ಸೆನ್ಸ್ ಇಲ್ವಾ ಎಂದು ಕೇಳಿದ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೊನೆಗೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.

    ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಶಾಸಕ ಗಣೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ಆಗಮಿಸಿದ್ದರು. ಇದನ್ನು ವರದಿ ಮಾಡಲು ಆಗಮಿಸಿದ್ದ ಮಾಧ್ಯಮಗಳಿಗೆ ದಿನೇಶ್ ಗುಂಡೂರಾವ್ ಅವರು, ನಿಮಗೆ ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಕಚೇರಿ, ಇವರು ಪಕ್ಷದ ಒಳಗಿನ ವಿಚಾರ ಮಾತನಾಡಲು ಬಂದಿದ್ದಾರೆ. ಇದನ್ನೆಲ್ಲಾ ಶೂಟ್ ಮಾಡಲು ನಿಮಗೆ ಕಾಮನ್ ಸೆನ್ಸ್ ಇಲ್ವಾ ಎಂದೆಲ್ಲಾ ಕೇಳುತ್ತಾ ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ವಾಕ್ಚತುರ್ಯ ಪ್ರದರ್ಶನ ಮಾಡಿದ್ದರು.

    ಯಾವಾಗ ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭವಾಯಿತೋ ದಿನೇಶ್ ಗುಂಡೂರಾವ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಲ್ಲಿ ಕ್ಷಮೆ ಯಾಚಿಸಿದರು. ನಮ್ಮ ಚೇಂಬರ್ ನಲ್ಲಿ ಆಂತರಿಕ ಸಭೆ ನಡೆಯುತ್ತಿತ್ತು. ಈ ವೇಳೆ ಕಂಪ್ಲಿ ಕಾರ್ಯಕರ್ತರು ಬಂದಾಗ ಮನವಿ ಸ್ವೀಕಾರ ಮಾಡುತ್ತಿದ್ದೆ. ಆದರೆ ಮಾಧ್ಯಮದವರು ಇರೋದು ಗೊತ್ತಿರಲಿಲ್ಲ. ಆಗ ತಕ್ಷಣ ಮಾಧ್ಯಮದವ್ರು ಬಂದಿರೋದು ನೋಡಿ ಹೊರಗೆ ಹೋಗಿ ಎಂದು ತಮ್ಮಿಂದಾದ ತಪ್ಪಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಮಾಧ್ಯಮದವರು ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಉತ್ತಮ ಸಂಬಂಧ ಇದೆ. ಆ ಸಂದರ್ಭದಲ್ಲಿ ಬಾಯಿ ತಪ್ಪಿ ಕೆಲವು ಮಾತುಗಳು ನನ್ನಿಂದ ಬಂದವು. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮದವರ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.

    ನಾನೇ ಸಭೆಯಿಂದ ಹೊರಗಿದ್ದೆ!: ಬೆಳಗ್ಗೆ ನಡೆದ ಸಭೆಯಲ್ಲಿ ನನ್ನನ್ನು ಹೊರಗಿಟ್ಟು ಸಭೆ ನಡೆಸಿಲ್ಲ. ಅನೇಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜೊತೆ ಮುಕ್ತವಾಗಿ ಮಾತಾಡುವುದಿತ್ತು. ಹಾಗಾಗಿ ನಾನೇ ಸಭೆಯಲ್ಲಿ ಇರಲ್ಲ ಎಂದು ಹೇಳಿದ್ದೆ. ಎಲ್ಲರೂ ಅಭಿಪ್ರಾಯ ನೀಡುವಾಗ ಅವರಿಗೆ ಮುಜುಗರ ಆಗಬಾರದು. ಅದಕ್ಕಾಗಿ ನಾನು ಹೊರಗೆ ಇದ್ದೆ. ಅಧ್ಯಕ್ಷರನ್ನು ಹೊರಗಿಟ್ಟು ಸಭೆ ಮಾಡುವ ಸನ್ನಿವೇಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಜೆ.ಎನ್.ಗಣೇಶ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಕಾನೂನು ಪ್ರಕಾರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೂ ಈ ಥರಾ ತಲೆ ತಪ್ಪಿಸಿಕೊಳ್ಳಬಾರದು. ಕಾನೂನಿಗೆ ಎಲ್ಲರೂ ಬೆಲೆ ಕೊಡಬೇಕಾಗುತ್ತದೆ. ಕಾಂಗ್ರೆಸ್ ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದರು.

    ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನ ರೆಸಾರ್ಟಿಗೆ ಕರೆದೊಯ್ದಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪರಸ್ಪರ ಬಡಿದಾಡಿಕೊಂಡ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಆರಂಭದಿಂದಲೂ ಭಿನ್ನ ಹೇಳಿಕೆಗಳನ್ನ ನೀಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ ವಿರುದ್ಧ ದೂರು ನೀಡುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗಣೇಶ್ ರನ್ನು ಅಮಾನತು ಮಾಡಿದ್ದರು. ಸದ್ಯ ಗಣೇಶ್ ಬಂಧನದ ಭಯದಿಂದ ನಾಪತ್ತೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್ ಮೇಲಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಘಟನೆ ವೇಳೆ ಸ್ಥಳದಲ್ಲಿದ್ದ ಖಾಸಗಿ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಬಳಿಕ ಅವರನ್ನು ಬಚ್ಚಿಡಲಾಗಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. 

    ಕಂಪ್ಲಿ ಶಾಸಕ ಗಣೇಶ್ ಹಾಗು ಆನಂದ್ ಸಿಂಗ್ ನಡುವಿನ ಬಡಿದಾಟದ ವೇಳೆ ಗಣೇಶ್ ನಿಯೋಜಿಸಿದ್ದ ಖಾಸಗಿ ಗನ್‍ಮ್ಯಾನ್ ಶರಣಪ್ಪ ಕೂಡ ಇದ್ದರು. ಈ ನಡುವೆ ಗಣೇಶ್ ಕೋಪದಲ್ಲಿ ಗನ್‍ಮ್ಯಾನ್ ಬಳಿ ಇದ್ದ ಗನ್ ಕೇಳಿದ್ದಾರೆ. ಗನ್ ನೀಡಿದ್ರೆ ಅನಾಹುತ ಸಂಭವಿಸಬಹುದು ಎಂದು ತಿಳಿದು ಸಮಾಧಾನ ಮಾಡಲು ಶರಣಪ್ಪ ಯತ್ನಿಸಿದ್ದಾರೆ. ಗನ್ ನೀಡದ್ದಕ್ಕೆ ಮತ್ತಷ್ಟು ಕೋಪಗೊಂಡಿದ್ದ ಗಣೇಶ್, ಶರಣಪ್ಪ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಗಣೇಶ್ ರೌದ್ರಾವತಾರವನ್ನು ಕಂಡ ಕಾಂಗ್ರೆಸ್ ಶಾಸಕರು ಕ್ಷಣ ಕಾಲ ಶಾಕ್‍ಗೆ ಒಳಗಾಗಿದ್ದು, ಆ ಬಳಿಕ ಗಲಾಟೆಯನ್ನು ಬಿಡಿಸಿ ಗಣೇಶ್ ಅವರನ್ನು ರೂಮಿಗೆ ಕಳುಹಿಸಿದ್ದಾರೆ. ಆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಕೊಂಡ್ಯೊಯಲು ಹೋಟೆಲ್ ಸಿಬ್ಬಂದಿ ಕಾರ್ಯ ಪ್ರವೃತ್ತರಾದರೆ, ಇತ್ತ ಘಟನೆಯಲ್ಲಿ ಗಾಯಗೊಂಡಿದ್ದ ಗನ್ ಮ್ಯಾನ್‍ರನ್ನು ಕೂಡ ಹೋಟೆಲ್ ನಿಂದ ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಶಾಸಕ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಶರಣಪ್ಪ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಆಗಿರುವ ಹಾಗೂ ಶರಣಪ್ಪ ಮೇಲೆ ಹಲ್ಲೆ ಮಾಡಿದ್ದಕ್ಕೆ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗುತ್ತದೆ ಎನ್ನುವ ಭಯದಿಂದ ಗಣೇಶ್ ಅವರನ್ನು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ.

    ಘಟನೆ ನಡೆದ ಬಳಿಕ ರೆಸಾರ್ಟ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಗಣೇಶ್, ಸರ್ಕಾರಿ ಗನ್‍ಮ್ಯಾನ್‍ನನ್ನು ತೋರಿಸಿ, ಹಲ್ಲೆ ಮಾಡಿರುವ ಘಟನೆ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿರುವ ವರದಿ ಸುಳ್ಳು. ಯಾವುದೇ ಗನ್‍ಮ್ಯಾನ್ ಮೇಲೆ ಹಲ್ಲೆ ನಡೆದಿಲ್ಲ. ಸಣ್ಣ ವೈಯಕ್ತಿಕ ವಿಚಾರಕ್ಕೆ ಚರ್ಚೆ ನಡೆದಿದ್ದು, ಯಾವುದೇ ಕಾರಣಕ್ಕೂ ಹಲ್ಲೆ ನಡೆದಿಲ್ಲ ಎಂದು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

    https://www.youtube.com/watch?v=pgwGXV3NmMA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಸಾರ್ಟ್ ಗಲಾಟೆಯಿಂದ ಹತಾಶೆಗೊಂಡ ‘ಕೈ’ ನಾಯಕರು – ಮಾಧ್ಯಮಗಳ ವಿರುದ್ಧ ದಿನೇಶ್ ಗುಂಡೂರಾವ್ ಗರಂ

    ರೆಸಾರ್ಟ್ ಗಲಾಟೆಯಿಂದ ಹತಾಶೆಗೊಂಡ ‘ಕೈ’ ನಾಯಕರು – ಮಾಧ್ಯಮಗಳ ವಿರುದ್ಧ ದಿನೇಶ್ ಗುಂಡೂರಾವ್ ಗರಂ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕರು ಪರಸ್ಪರ ಬಡಿದಾಡಿಕೊಂಡ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಕೈ ನಾಯಕರು ತಾಳ್ಮೆ ಕಳೆದುಕೊಂಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳಿಂದಾಗಿ ಪಕ್ಷದ ಮಾನ ಹೋಗಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಮಾನ ಇದ್ಯಾ ಎಂದು ಪ್ರಶ್ನಿಸಿದ್ದಾರೆ.

    ರೆಸಾರ್ಟ್ ಗಲಾಟೆ ನಡೆದ ಬಳಿಕ ಆರಂಭದಲ್ಲಿ ನಾಯಕರು ಏನು ಆಗಿಲ್ಲ, ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದೆಲ್ಲ ಸುಳ್ಳು ಹೇಳಿದ್ದರು. ಈ ಘಟನೆಯ ಬಗ್ಗೆ ಸತ್ಯ ಹೊರ ಬಂದ ಬಳಿಕ ಕಾಂಗ್ರೆಸ್ಸಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರವಾಗಿತ್ತು. ರೆಸಾರ್ಟ್ ಗಲಾಟೆ ವಿಚಾರದಿಂದ ತಾಳ್ಮೆ ಕಳೆದುಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.

    ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಜಿಲ್ಲಾವಾರು ಮುಖಂಡರ ಸಭೆ ನಡೆಯುತಿತ್ತು. ಈ ವೇಳೆ ಕಚೇರಿಗೆ ಆಗಮಿಸಿದ್ದ ಶಾಸಕ ಕಂಪ್ಲಿ ಗಣೇಶ್ ಬೆಂಬಲಿಗ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.

    ಕಾರ್ಯಕರ್ತರ ಪ್ರತಿಭಟನೆಯನ್ನು ಮಾಧ್ಯಮಗಳು ವರದಿ ಮಾಡಲು ಮುಂದಾಗುತ್ತಿದ್ದಾಗ ದಿನೇಶ್ ಗುಂಡೂರಾವ್, ನಿಮಗೆ ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಕಚೇರಿ, ಇವರು ಪಕ್ಷದ ಒಳಗಿನ ವಿಚಾರ ಮಾತನಾಡಲು ಬಂದಿದ್ದಾರೆ. ಇದನ್ನೆಲ್ಲಾ ಶೂಟ್ ಮಾಡಲು ನಿಮಗೇ ಕಾಮನ್ ಸೆನ್ಸ್ ಇಲ್ವಾ ಎಂದು ಹೇಳಿ ನಿಂದಿಸಿದ್ದಾರೆ.

    ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನ ರೆಸಾರ್ಟಿಗೆ ಕರೆದ್ಯೊದಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪರಸ್ಪರ ಬಡಿದಾಡಿಕೊಂಡ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಆರಂಭದಿಂದಲೂ ಭಿನ್ನ ಹೇಳಿಕೆಗಳನ್ನ ನೀಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ ವಿರುದ್ಧ ದೂರು ನೀಡುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗಣೇಶ್‍ರನ್ನು ಅಮಾನತು ಮಾಡಿದ್ದರು. ಸದ್ಯ ಗಣೇಶ್ ಪೊಲೀಸ್ ಬಂಧನದ ಭಯದಿಂದ ನಾಪತ್ತೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    https://www.youtube.com/watch?v=lSR-9f0tyNQ

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕರು ರೆಸಾರ್ಟಿನಲ್ಲಿ ಕಂಡರೆ ಮುಖಕ್ಕೆ ಸಗಣಿ ಎರಚುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್

    ಶಾಸಕರು ರೆಸಾರ್ಟಿನಲ್ಲಿ ಕಂಡರೆ ಮುಖಕ್ಕೆ ಸಗಣಿ ಎರಚುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್

    ರಾಯಚೂರು: ರಾಜ್ಯದ ಶಾಸಕರು ರೆಸಾರ್ಟಿನಲ್ಲಿ ತೋರಿರುವ ವರ್ತನೆಯಿಂದ ರಾಜ್ಯಕ್ಕೆ ಅಪಮಾನವಾಗಿದೆ. ಇನ್ನು ಮುಂದೆ ಶಾಸಕರು ರೆಸಾರ್ಟಿನಲ್ಲಿ ಕಂಡರೆ ರೈತ ಸಂಘದ ಮಹಿಳಾ ಕಾರ್ಯಕರ್ತರು ಸೆಗಣಿ ಮುಖಕ್ಕೆ ಎರಚಿ ಪ್ರತಿಭಟನೆ ಮಾಡುತ್ತಾರೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಶಾಸಕರ ನಡುವೆ ನಡೆದ ಗಲಾಟೆಯಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಇಂತಹ ಅಪಮಾನ ಯಾವುದೇ ಆಗುವುದಿಲ್ಲ. ವಿಧಾನಸೌಧ ಸೇರಿದಂತೆ ಅನೇಕ ಸಭಾಂಗಣಗಳಿದ್ದರೂ, ರೆಸಾರ್ಟಿನಲ್ಲಿ ಏನು ಚರ್ಚೆ ಮಾಡುತ್ತಾರೆ. ರಾಜಕೀಯಕ್ಕಾಗಿ ರೆಸಾರ್ಟ್ ಸಭೆ ನಡೆಸಿದರೆ ಸಂಘಟನೆಯ ಕಾರ್ಯಕರ್ತರು ನುಗ್ಗಿ ಸೆಗಣಿ ಬಳಿಯಲಿದ್ದಾರೆ. ಈ ಮೂಲಕ ಇಂತಹ ಸಭೆಗಳಿಗೆ ಇತಿಶ್ರೀ ಹಾಡುತ್ತೇವೆ ಎಂದರು.

    ಸಿಎಂ ಕುಮಾರಸ್ವಾಮಿ ಅವರೊಂದಿಗೆ ನಾಳೆ ರೈತ ಸಂಘಟನೆಗಳ ಬಜೆಟ್ ಪೂರ್ವ ಸಭೆ ನಿಗದಿಯಾಗಿದೆ. ಮುಂದಿನ ಬಜೆಟ್‍ನಲ್ಲಿ ರೈತರ ಪರ ವಿಚಾರಗಳ ಸೇರ್ಪಡೆಗೆ ಒತ್ತಾಯಿಸಲು ನಿರ್ಧಾರ ಮಾಡಿರುವುದಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯರ ನಡೆ ಆಶ್ಚರ್ಯ ತಂದಿದೆ: ಹೆಚ್.ವಿಶ್ವನಾಥ್

    ಸಿದ್ದರಾಮಯ್ಯರ ನಡೆ ಆಶ್ಚರ್ಯ ತಂದಿದೆ: ಹೆಚ್.ವಿಶ್ವನಾಥ್

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನವರೇ ರೆಸಾರ್ಟ್ ರಾಜಕೀಯದ ಮುಂದಾಳತ್ವ ವಹಿಸಿರೋದರ ಬಗ್ಗೆ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರಾದ ಹೆಚ್ ವಿಶ್ವನಾಥ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ಅವರು ಸಿಎಂ ಆಗೋವಾಗಲೂ ರೆಸಾರ್ಟ್ ರಾಜಕೀಯ ಮಾಡಿಲ್ಲ. ಬೇರೆಯವರನ್ನ ಸಿಎಂ ಮಾಡುವುದಕ್ಕೂ ರೆಸಾರ್ಟ್ ರಾಜಕೀಯ ಮಾಡಿಲ್ಲ. ಆದ್ರೆ ಈಗ ಅವರೇ ಬಸ್ ನಲ್ಲಿ ಮುಂದಾಳತ್ವ ವಹಿಸಿಕೊಂಡು ಹೋಗ್ತಾ ಇರೋದು ನಮಗೆ ಆಶ್ಚರ್ಯ ತಂದಿದೆ. ರೆಸಾರ್ಟ್ ರಾಜಕೀಯ ಸೂಕ್ತ ಅಲ್ಲ ಎಂಬುವುದು ಗೊತ್ತಿದ್ದರೂ ಕಳೆದ 10 ವರ್ಷದಿಂದ ಬೇಕು ಬೇಡ್ವೋ ಮಾಡುತ್ತಾ ಬಂದಿದ್ದೇವೆ. ರೆಸಾರ್ಟ್ ರಾಜಕಾರಣದಿಂದ ಯಾರಿಗೂ ಪ್ರಯೋಜನವಿಲ್ಲ ಅಂತ ತಿಳಿಸಿದರು.

    ರೆಸಾರ್ಟ್ ಗೆ ಕರೆದುಕೊಂಡು ಹೋಗೋದ್ರಿಂದ ಯಾರ ಮನಸ್ಸನ್ನು ಕಟ್ಟಿಹಾಕೋಕಾಗಲ್ಲ. ಹೋಗಬೇಕು ಅನ್ನೋ ಶಾಸಕರು ಹೋಗೆ ಹೋಗ್ತಾರೆ. ರೆಸಾರ್ಟ್ ನಲ್ಲಿ ಕಟ್ಟಿ ಹಾಕೋದ್ರಿಂದ ಅವರನ್ನು ತಡೆಯೋಕೆ ಸಾಧ್ಯವಿಲ್ಲ ಅಂತಾ ನೇರವಾಗಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯ ನಿರ್ಧಾರಕ್ಕೆ ಟಾಂಗ್ ಕೊಟ್ರು. ಇನ್ನು ಜೆಡಿಎಸ್ ನ ಯಾವ ಶಾಸಕರು ರೆಸಾರ್ಟ್ ಗೆ ಹೋಗಲ್ಲ. ನಮಗೆ ಅದರ ಅವಶ್ಯಕತೆ, ಅನಿವಾರ್ಯತೆ ಇಲ್ಲ ಅಂತಾ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್‍ಗೆ ರೆಸಾರ್ಟ್ ರಾಜಕೀಯದ ಅನಿವಾರ್ಯತೆ ಇಲ್ಲ: ಸಿಎಂ

    ಜೆಡಿಎಸ್‍ಗೆ ರೆಸಾರ್ಟ್ ರಾಜಕೀಯದ ಅನಿವಾರ್ಯತೆ ಇಲ್ಲ: ಸಿಎಂ

    ಮೈಸೂರು: ರೆಸಾರ್ಟ್ ರಾಜಕೀಯ ಮಾಡೋದು ತಪ್ಪು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜೆಡಿಎಸ್ ಪಕ್ಷಕ್ಕೆ ರೆಸಾರ್ಟ್ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನನ್ನು ಮತ್ತು ಮೈತ್ರಿ ಸರ್ಕಾರವನ್ನು ಚಾಮುಂಡಿ ತಾಯಿ ರಕ್ಷಿಸುತ್ತಿದ್ದಾಳೆ. ನಮ್ಮನ್ನು ರಕ್ಷಿಸುತ್ತಿರುವ ಚಾಮುಂಡಿ ದೇವಿಯೆ ಬಿಜೆಪಿಯವರಿಗೆ ಒಳ್ಳೆಯ ಬುದ್ದಿ ಕೊಡಲಿ. ಬಿಜೆಪಿ ಮಾಡಿದ ಗೊಂದಲಕ್ಕಾಗಿ ಕಾಂಗ್ರೆಸ್‍ನವರು ತಮ್ಮ ಶಾಸಕರ ಜೊತೆ ಮಾತುಕತೆ ನಡೆಸಲು ರೆಸಾರ್ಟ್ ಗೆ ತೆರಳಿದ್ದಾರೆ. ಹಾಗಂತ ನಮ್ಮ ಜೆಡಿಎಸ್ ಶಾಸಕರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬರಲ್ಲ. ಅದರ ಅವಶ್ಯಕತೆಯು ನಮಗಿಲ್ಲ ಅಂತ ಹೇಳಿದ್ದಾರೆ.

    ಬಿಜೆಪಿಯ ಯಾವ ಶಾಸಕರನ್ನು ನಾವು ಆಪರೇಷನ್‍ಗೆ ಒಳಪಡಿಸಿಲ್ಲ. ಈಗ ನಾವು ಆಪರೇಷನ್ ಶುರುಮಾಡ್ಬೇಕು ಎಂದು ಬಿಜೆಪಿ ನಿರೀಕ್ಷಿಸುತ್ತಿದಿಯಾ? ನಿರೀಕ್ಷೆ ಇದ್ದರೆ ನಮಗೆ ಹೇಳಲಿ, ಆಗ ಮುಂದೆ ನೋಡುತ್ತೇವೆ ಎಂದು ಬಿಜೆಪಿ ಅವರ ಕಾಲೆಳೆದಿದ್ದಾರೆ. ಹಾಗೆಯೇ ಈ ಹಿಂದೆ ಯಡಿಯೂರಪ್ಪ ಅವರು ತಮ್ಮ ಸರ್ಕಾರ ರಚನೆ ಮಾಡಿದ ಮೇಲೂ ಆಪರೇಷನ್ ಕಮಲ ನಡೆಸಿದರು. ನಾವು ಅಂತಹ ಕೆಲಸಕ್ಕೆ ಮುಂದಾಗುವುದಿಲ್ಲ. ಆ ಅನಿವಾರ್ಯತೆಯೂ ನಮಗಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರವನ್ನ ಬೀಳಿಸುವ ಕನಸು ಕಾಣುತ್ತಲೇ ಇರುತ್ತೆ. ಅದಕ್ಕಾಗಿ ಇಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಆದರೆ ಅದ್ಯಾವುದು ಫಲ ಕೊಡುವುದಿಲ್ಲ ಎಂದು ಸಿಎಂ ಕಿಡಿಕಾರಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೋಡ್ರಿ, ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡಿಲ್ಲ: ಶ್ರೀರಾಮುಲು

    ನೋಡ್ರಿ, ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡಿಲ್ಲ: ಶ್ರೀರಾಮುಲು

    ಗುರುಗ್ರಾಮ: ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ನಮ್ಮೆಲ್ಲರನ್ನು ಕರೆಸಿ ಒಂದು ಕಡೆ ಸೇರಿಸಿದ್ದರು. ಪ್ರತಿದಿನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರು ಚುನಾವಣೆಗೆ ಹೇಗೆ ಸಿದ್ಧಗೊಳ್ಳಬೇಕು ಎಂಬುದರ ಮಾಹಿತಿ ನೀಡಿದರು. ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಕರೆದುಕೊಂಡು ಹೋಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀರಾಮುಲು ಆರೋಪಿಸಿದರು.

    ಬರಗಾಲಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ತನ್ನ ಜವಬ್ದಾರಿಗಳನ್ನು ಮರೆತ ಕಾಂಗ್ರೆಸ್ ಎಲ್ಲ ಶಾಸಕರನ್ನು ರೆಸಾರ್ಟ್ ನಲ್ಲಿ ಬಂಧಿಯಾಗಿಸಿದೆ. ನಾವು ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಬಂದಿದ್ದೆ ಹೊರತು ಆಪರೇಷನ್ ಕಮಲ ನಡೆಸಲು ಬಂದಿಲ್ಲ. ಕಾಂಗ್ರಸ್ಸಿನ ಯಾವ ಶಾಸಕರನ್ನು ನಾವು ಸೆಳೆಯುವ ಪ್ರಯತ್ನ ಮಾಡಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

    ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡ ಭ್ರಮೆಯಲ್ಲಿ ಹತಾಶರಾಗಿದ್ದರಿಂದ ಏನೇನೋ ಮಾತನಾಡುತ್ತಿದ್ದಾರೆ. ಮುಂಬೈನಲ್ಲಿ ಕಾಣಿಸಿಕೊಂಡಿದ್ದ ಶಾಸಕ ಅಶ್ವಥ್ ನಾರಾಯಣ್ ಅವರು ಮಹಾರಾಷ್ಟ್ರಸಿಎಂ ದೇವೇಂದ್ರ ಫಡ್ನಾವೀಸ್ ಭೇಟಿಯಾಗಲು ಹೋಗಿದ್ದರು. ಈ ಸಂಬಂಧ ಪಕ್ಷದ ಮುಖಂಡರು ಮಾತನಾಡುತ್ತಾರೆ ಎಂದು ಹೇಳಿ ಶ್ರೀರಾಮುಲು ನುಣುಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ ಪರಿಶೀಲನೆಗಾಗಿ ರೆಸಾರ್ಟಿನಿಂದ ವಾಪಸ್ ಆಗುತ್ತಿದ್ದಾರೆ ಬಿಜೆಪಿ ಶಾಸಕರು

    ಬರ ಪರಿಶೀಲನೆಗಾಗಿ ರೆಸಾರ್ಟಿನಿಂದ ವಾಪಸ್ ಆಗುತ್ತಿದ್ದಾರೆ ಬಿಜೆಪಿ ಶಾಸಕರು

    – 5 ದಿನ ರೆಸಾರ್ಟ್ ವಾಸ್ತವ್ಯಕ್ಕೆ ಕೋಟಿ, ಕೋಟಿ ಹಣ ಖರ್ಚು

    ನವದೆಹಲಿ: ಕೋಟಿ, ಕೋಟಿ ಹಣ ಖರ್ಚು ಮಾಡಿ ಐದು ದಿನಗಳ ಕಾಲ ಐಷಾರಾಮಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ರಾಜ್ಯಕ್ಕೆ ಮರಳುತ್ತಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಗುರುಗ್ರಾಮದಿಂದ 2 ಕಿಮೀ ದೂರದ ಸರಾಯ್‍ನಲ್ಲಿರುವ ಲೆಮನ್ ಟ್ರೀ ರೆಸಾರ್ಟ್ ನಿಂದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿಭಟ್, ಬಸವರಾಜ್ ದಢೇಸಗೂರು, ಹರೀಶ್ ಪುಂಜಾ, ಹರ್ಷವರ್ಧನ, ತಿಪ್ಪಾರೆಡ್ಡಿ ಹೊರಟಿದ್ದಾರೆ. ಮಾಧ್ಯಮದವರು ಮಾತನಾಡಿಸಲು ಯತ್ನಿಸಿದರೂ ಕಾರಿನಲ್ಲಿ ಕುಳಿತು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಇಂದು ರಾಜ್ಯಕ್ಕೆ ಮರಳಲಿದ್ದಾರೆ.

    ಇತ್ತ ಐಟಿಸಿ ಗ್ರ್ಯಾಂಡ್ ಭಾರತ್‍ನಿಂದ ಪ್ರತ್ಯೇಕ ಕಾರುಗಳಲ್ಲಿ ಶಾಸಕರ ಗುಂಪು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಸೋಮಶೇಖರ್ ರೆಡ್ಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬೆಳ್ಳಿ ಪ್ರಕಾಶ್, ರಾಮದಾಸ್, ಬಸವರಾಜ್ ಮತ್ತಿಮೂಡ್, ರಾಮಣ್ಣ ಲಮಾಣಿ, ದಿನಕರ್ ಶೆಟ್ಟಿ, ಕುಮಾರಸ್ವಾಮಿ, ಆರ್.ಅಶೋಕ್, ನಿರಂಜನ್, ಸಿ.ಸಿ.ಪಾಟೀಲ್, ದೊಡ್ಡನಗೌಡ, ಸಿದ್ದು ಸವದಿ ಇದ್ದರು. ಎಲ್ಲ ಶಾಸಕರು ಕಾರಿನ ಗ್ಲಾಸ್ ಏರಿಸಿಕೊಂಡು ಮಾಧ್ಯಮಗಳ ಜತೆ ಮಾತನಾಡದೇ ರೆಸಾರ್ಟಿನಿಂದ ಕಾಲ್ಕಿತ್ತಿದ್ದಾರೆ.

    ರಾಜ್ಯಕ್ಕೆ ಮರಳುತ್ತಿದ್ದ ರಾಜೂಗೌಡ, ಶಿವನಗೌಡನಾಯಕ್ ಹಾಗೂ ಶಿವರಾಜ್ ಪಾಟೀಲ್ ಮಾತನಾಡಿ, ಆಪರೇಷನ್ ಕಮಲದ ಕುರಿತು ಯಾವುದೇ ಮಾತುಕತೆಯಾಗಿಲ್ಲ. ನಾವು ಲೋಕಸಭಾ ಚುನಾವಣೆ ಸಿದ್ಧತೆಯ ಅಭ್ಯಾಸ ವರ್ಗಗಳು ಇದ್ದಿದ್ದರಿಂದ ಇಲ್ಲಿ ಉಳಿದುಕೊಂಡಿದ್ದೆವು ಎಂದು ಹೇಳಿದ್ದಾರೆ.

    ರೆಸಾರ್ಟ್ ಖರ್ಚು ಎಷ್ಟು?:
    104 ಶಾಸಕರ ಪೈಕಿ ಐವರು ಮಾತ್ರ ರೆಸಾರ್ಟಿಗೆ ಹೋಗಿರಲಿಲ್ಲ. ಶಾಸಕ ಗೋವಿಂದ ಕಾರಜೋಳ, ಎಸ್.ಎ. ರವೀಂದ್ರನಾಥ್, ಕರುಣಾಕರೆಡ್ಡಿ, ಸಿ.ಎಂ. ಉದಾಸಿ ಮತ್ತು ಸಿ.ಟಿ. ರವಿ ರೆಸಾರ್ಟಿಗೆ ಹೋಗಿರಲಿಲ್ಲ. ಉಳಿದ 99 ಶಾಸಕರು ರೆಸಾರ್ಟಿನಲ್ಲಿ ತಂಗಿದ್ದರು.

    ಗುರುಗ್ರಾಮದ ಐಟಿಸಿ ಗ್ರಾಂಡ್ ಭಾರತ್, ಲೆಮೆನ್ ಟ್ರೀ ಮತ್ತು ಮುಂಬೈ ರೆಸಾರ್ಟಿನಲ್ಲಿ ಬಿಜೆಪಿ ಶಾಸಕರು ತಂಗಿದ್ದರು. ಮೊದಲ 5 ದಿನ ಐಶಾರಾಮಿ ಐಟಿಸಿ ಗ್ರಾಂಡ್ ಭಾರತ್ ರೆಸಾರ್ಟಿನಲ್ಲಿ ಬಿಜೆಪಿಯ 97 ಶಾಸಕರು ಇದ್ದರು. ಐಟಿಸಿ ಗ್ರಾಂಡ್ ಭಾರತ್ `7′ ಸೌಲಭ್ಯದ ರೆಸಾರ್ಟ್ ಆಗಿದ್ದು, ಇಲ್ಲಿ ಒಂದು ದಿನಕ್ಕೆ ಒಂದು ರೂಮಿಗೆ ಕನಿಷ್ಟ 25 ಸಾವಿರ ರೂ. ಇದೆ. ಇಲ್ಲಿನ ವಿಲ್ಲಾಗಳ ಒಂದು ದಿನದ ಬಾಡಿಗೆ ಬರೊಬ್ಬರಿ 3 ಲಕ್ಷ ರೂಪಾಯಿ ಆಗಿದ್ದರೆ, ಬಿಜೆಪಿ ಶಾಸಕರು ಉಳಿದುಕೊಂಡಿದ್ದ ರೂಮ್ ಗಳ ಒಂದು ದಿನದ ಬಾಡಿಗೆ 75 ಸಾವಿರ ರೂ. ಇದೆ.

    ಬಿಜೆಪಿ ತನ್ನ ಶಾಸಕರಿಗಾಗಿ ಒಟ್ಟು 60 ರೂಮ್ ಗಳನ್ನು ಬುಕ್ ಮಾಡಿತ್ತು. ಒಟ್ಟು ಗುರುಗ್ರಾಮದ ಐಶಾರಾಮಿ ರೂಮ್ ಬಾಡಿಗೆಯೇ 2 ಕೋಟಿ 27 ಲಕ್ಷ ರೂಪಾಯಿ ಆಗಿದೆ. ಇನ್ನೂ ರೂಮ್ ಬಾಡಿಗೆ ಜಿಮ್, ಹೇರ್ ಸೆಲೂನ್, ಬಾಡಿ ಮಸಾಜ್, ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಸೇರಿದ ಎಲ್ಲ ಪ್ಯಾಕೇಜ್ ಕೂಡ ಇತ್ತು. ಮಧ್ಯಾಹ್ನ, ರಾತ್ರಿ ಊಟ ಹಾಗೂ ಮದ್ಯದ ವೆಚ್ಚ ಬೇರೆ ಇತ್ತು.

    ಲೆಮನ್ ಟ್ರೀ ರೆಸಾರ್ಟ್ ನಲ್ಲಿ 23 ಶಾಸಕರು ಇದ್ದರು. ಅದರ ಖರ್ಚು ಒಟ್ಟು 10 ಲಕ್ಷ ರೂಪಾಯಿ ಆಗಿದ್ದು, ರೂಮ್ ಬಾಡಿಗೆ ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಸೇರಿದ ಪ್ಯಾಕೇಜ್ ಆಗಿತ್ತು. ಒಟ್ಟಾರೆ ಆಪರೇಷನ್ ಕಮಲ ಮಾಡಲು ಬಿಜೆಪಿ ನಾಯಕರು 3.16 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಲೆಮನ್ ಟ್ರೀ ರೆಸಾರ್ಟ್ ನಲ್ಲಿದ್ದ 23 ಶಾಸಕರಿಗೆ 10 ಲಕ್ಷ ರೂ.ವನ್ನು ಬಿಜೆಪಿ ನಾಯಕರು ಖರ್ಚು ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ಯಾರು ಕೊಟ್ಟಿದ್ದಾರೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಪ್ರತಿಪಕ್ಷವೂ ಇಲ್ಲ- ಇದು ಕರ್ನಾಟಕದ ಕರ್ಮ

    ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಪ್ರತಿಪಕ್ಷವೂ ಇಲ್ಲ- ಇದು ಕರ್ನಾಟಕದ ಕರ್ಮ

    – ಖಾಲಿ ಹೊಡೆಯುತ್ತಿದೆ ವಿಧಾನಸೌಧ
    – ರೆಸಾರ್ಟಿನಲ್ಲಿ ಮಜಾ ಮಾಡಿ, ಕ್ಷೇತ್ರಕ್ಕೆ ಬರಬೇಡಿ
    – ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಡಿ

    ಬೆಂಗಳೂರು: ಈ ರೀತಿಯ ಕೀಳುಮಟ್ಟದ ಹೊಲಸು ರಾಜಕೀಯವನ್ನು ನಾವು ನೋಡಿಲ್ಲ. ಬರಗಾಲ ಇದೆ, ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯಲು ನೀರಿಲ್ಲ. ಆದರೆ ಕೋಟಿ ಕೋಟಿ ಖರ್ಚು ಮಾಡಿ ಶಾಸಕರು ರೆಸಾರ್ಟ್ ಗೆ ಹೋಗುತ್ತಿದ್ದಾರೆ ಎಂದು ಶಾಸಕರನ್ನು ಹುಡುಕಿಕೊಂಡು ಹಳ್ಳಿಗಳಿಂದ ಬಂದ ಜನ ತರಾಟೆ ತಗೆದುಕೊಳ್ಳುತ್ತಿದ್ದಾರೆ,

    ಮುಖ್ಯವಾಗಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಿಂದ ರೈತರು ಬೆಂಗಳೂರಿಗೆ ಬಂದಿದ್ದಾರೆ. ಇತ್ತ ಆಡಳಿತ ಪಕ್ಷ ಹಾಗೂ ವಿಪಕ್ಷ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿ ಬರುತ್ತಿದೆ. ಫೋನ್ ಮಾಡಿದರೂ ಸಿಗುತ್ತಿಲ್ಲ, ಕ್ಷೇತ್ರಕ್ಕೆ ಬಂದು ಸಮಸ್ಯೆ ಆಲಿಸುತ್ತಿಲ್ಲ ಎಂದು ಶಾಸಕರ ವಿರುದ್ಧ ಜನ ಕಿಡಿ ಕಾರುತ್ತಿದ್ದಾರೆ.

    ಜಾಧವ್‍ ಎಲ್ಲಿ: ರಾಯಚೂರು ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ ಜಾಧವ್ ಅವರು ಕೈ ಮುಖಂಡರ ಕೈಗೂ ಸಿಗದೇ ಅತ್ತ ಕ್ಷೇತ್ರದ ಜನರಿಗೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಜೊತೆಗೆ ಚಿಂಚೋಳಿ ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ಶಾಸಕರನ್ನು ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲದೇ ಜೆಡಿಎಸ್ ಶಾಸಕರು ಕೂಡ ಕೈಗೆ ಸಿಗುತ್ತಿಲ್ಲ. ಸಚಿವ ಎಂ.ಸಿ.ಮನಗೂಳಿ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಇಂತಹ ಶಾಸಕರು ನಮಗೇಕೆ ಬೇಕು ಎಂದು ಜನರು ಛೀಮಾರಿ ಹಾಕುತ್ತಿದ್ದಾರೆ.

    ಮೈಸೂರು: ಶಾಸಕರ ನಡೆಯನ್ನು ನಮಗೆ ನಾಚಿಕೆ ತರುವಂತಿದೆ. ಮತ ಕೇಳುವಾಗ ಗಲ್ಲಿ, ಬೀದಿ ಇಳಿದು ನಮ್ಮ ಮುಂದೆ ಬಂದು ಮತ ಕೇಳುತ್ತಾರೆ. ಆದರೆ ಜಯಗಳಿಸಿದ ಮೇಲೆ ರೆಸಾರ್ಟ್ ರಾಜಕೀಯ ಮಾಡುತ್ತಾರೆ. ನಾವು ಯಾಕೆ ಇಂತಹವರನ್ನು ಆಯ್ಕೆ ಮಾಡಿದ್ದೇವೆ ಅಂತ ಅಸಹ್ಯವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮೈಸೂರಿನ ನಾಗರಿಕರು ಮೂರು ಪಕ್ಷಗಳ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

    ಬಳ್ಳಾರಿ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಒಬ್ಬ ಶಾಸಕರಾಗಲಿ, ಸಚಿವರಾಗಲಿ ಬಂದು ನಮ್ಮ ನೋವನ್ನು ಕೇಳಿಲ್ಲ. ರೆಸಾರ್ಟ್ ರಾಜಕೀಯ ಹೇಸಿಗೆ ತರಿಸುವಂತಿದೆ. ಜನರಿಗೆ, ದನಕರುಗಳಿಗೆ ನೀರಿಲ್ಲ, ಉದ್ಯೋಗವಿಲ್ಲ. ಹೀಗಿರುವಾಗ ರಾಜ್ಯದ ಶಾಸಕರು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿದ್ದಾರೆ. ಆಪರೇಷನ್ ಕಮಲ ಮಾಡುವ ಮೂಲಕ ಬಿಜೆಪಿ ಅವರೇ ರೆಸಾರ್ಟ್ ರಾಜಕೀಯ ಆರಂಭಿಸಿದರು. ಅವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ತಮ್ಮ ಶಾಸಕರ ಮೇಲೆ ಪಕ್ಷದ ವರಿಷ್ಠರು ಹಾಗೂ ನಾಯಕರಿಗೆ ನಂಬಿಕೆ ಇಲ್ಲದಂತಾಗಿದೆ. ಕಳೆದ ಕೆಲವು ದಿನಗಳ ಬೆಳವಣಿಗೆ ನಮಗೆ ನಾಚಿಕೆ ತರುವಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಕಲಬುರಗಿ: ನೀತಿಗೆಟ್ಟ ರಾಜಕೀಯವನ್ನು ಶಾಸಕರು ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಗಮನ ನೀಡದೆ ಸಾರ್ವಜನಿಕರ ಹಣವನ್ನು ನಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಮಜಾ ಮಾಡುತ್ತಿದ್ದಾರೆ. ಇಂತಹ ಶಾಸಜಕರು ನಮಗೆ ಬೇಡವೇ ಬೇಡ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ರೆಸಾರ್ಟ್ ರಾಜಕೀಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv