Tag: residential school

  • ವಸತಿ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 19 ಜನ್ರಿಗೆ ಕೊರೊನಾ ಪಾಸಿಟಿವ್

    ವಸತಿ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 19 ಜನ್ರಿಗೆ ಕೊರೊನಾ ಪಾಸಿಟಿವ್

    ಗದಗ: ಕೊರೊನಾ 2ನೇ ಅಲೆಯ ಆತಂಕ ಈಗ ಶಾಲಾ ಮಕ್ಕಳಿಗೂ ಕಾಡತೊಡಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಒಟ್ಟು 19 ಜನ್ರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

    ಎರಡು ದಿನಗಳ ಹಿಂದೆ ಇದೇ ವಸತಿ ಶಾಲೆಯಲ್ಲಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಅಡುಗೆ ಸಿಬ್ಬಂದಿ ಸೇರಿ ಒಟ್ಟು 5 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಆರೋಗ್ಯ ಇಲಾಖೆ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ತಪಾಸಣೆ ಒಳಪಡಿಸಿದಾಗ, ಇಂದು ಮತ್ತೆ 14 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ವಾಜಪೇಯಿ ವಸತಿ ಶಾಲೆಯ 18 ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿ ಸೇರಿ ಒಟ್ಟು 19 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಶಾಲೆಯಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಹುತೇಕ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ.

    ರೋಣ ಪುರಸಭೆ ಸಿಬ್ಬಂದಿ ವಸತಿ ಶಾಲೆಯನ್ನು ಸಂಪೂರ್ಣ ಸ್ಯಾನಿಟೈಜೆಷನ್ ಮಾಡಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಪಾಸಣೆ ಮಾಡಲಾಗುತ್ತಿದ್ದು, 25 ಜನರ ವರದಿ ಬರುವುದು ಬಾಕಿ ಇದೆ. ಸ್ಥಳಕ್ಕೆ ರೋಣ ತಹಶೀಲ್ದಾರ್ ಜಕ್ಕನಗೌಡ್ರ, ಬಿ.ಇ.ಓ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿದೆ. ವಸತಿ ಶಾಲೆ ಮಕ್ಕಳು ಆ ಏರಿಯಾದ ಅನೇಕ ಕಡೆಗಳಲ್ಲಿ ಓಡಾಡಿರುವುದರಿಂದ, ವಸತಿ ಶಾಲೆಗೆ ಕೊರೊನಾ ಕಂಠಕವಾಗಿ ಪರಿಣಮಿಸುತ್ತಾ ಎಂಬ ಭಯ ಸ್ಥಳೀಯರಲ್ಲಿ ಶುರುವಾಗಿದೆ.

  • ವಿದೇಶಿಗರ ಕ್ವಾರಂಟೈನ್- ವಸತಿ ಶಾಲೆಗೆ ರಾತ್ರೋರಾತ್ರಿ ಕಟ್ಟಿಗೆ ಬೇಲಿ ಹಾಕಿ ಮುಚ್ಚಿದ ಗ್ರಾಮಸ್ಥರು

    ವಿದೇಶಿಗರ ಕ್ವಾರಂಟೈನ್- ವಸತಿ ಶಾಲೆಗೆ ರಾತ್ರೋರಾತ್ರಿ ಕಟ್ಟಿಗೆ ಬೇಲಿ ಹಾಕಿ ಮುಚ್ಚಿದ ಗ್ರಾಮಸ್ಥರು

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಬಾಣವಾಡಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದೇಶಿಗರ ಕ್ವಾರಂಟೈನ್ ವಿಚಾರವಾಗಿ, ಮಠದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಬೇಡ ಎಂದು ವಸತಿ ಶಾಲೆಗೆ ರಾತ್ರೋರಾತ್ರಿ ಕಟ್ಟಿಗೆ ಬೇಲಿ ಹಾಕಿ ಮುಚ್ಚಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದರು. ಇಂದು ಗ್ರಾಮಸ್ಥರ ಜೊತೆ ಜಂಟಿ ಸಭೆ ನಡೆಸಿದ ಅಧಿಕಾರಿಗಳು ಮತ್ತು ಪೊಲೀಸರು ಹಾಗೂ ವಸತಿ ಶಾಲೆ ಒಳಗೊಂಡಿರುವ ಮಠದ ಸಿಬ್ಬಂದಿಗಳು ಸಭೆ ನಡೆಸಿ, ಜನವಸತಿ ಪ್ರದೇಶವಾದ ಬಾಣವಾಡಿಯಲ್ಲಿ ಕ್ವಾರಂಟೈನ್ ಬೇಡ, ಪಕ್ಕದ ಗುಡೇಮಾರನಹಳ್ಳಿಯ ಜನನಿಬಿಡ ನಮ್ಮ ಮಠದ ಸಂಸ್ಥೆಯಾದ ಮಾರುತಿ ಶಾಲೆಯನ್ನು ಬೇಕಾದರೆ ಬಳಸಿಕೊಳ್ಳಿ ಎಂದು ಮಠದ ಮುಖ್ಯಸ್ಥರಾದ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ.

    ಸಭೆ ಬಳಿಕ ಕಟ್ಟಿಗೆ ಬೇಲಿ ತೆರವು ಮಾಡಿದ ಸ್ಥಳೀಯ ಪೊಲೀಸರು, ಕ್ವಾರಂಟೈನ್ ವಿಚಾರದಲ್ಲಿ ಆತಂಕಕ್ಕೆ ಒಳಗಾಗಿರುವ ಬಾಣವಾಡಿ ಗ್ರಾಮಸ್ಥರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಯಾವುದೇ ಕಾರಣಕ್ಕೂ ನಮ್ಮ ಗ್ರಾಮದಲ್ಲಿ ವಿದೇಶಿಗರ ಕ್ವಾರಂಟೈನ್ ಮಾಡಬೇಡಿ ಎಂದು ಬಾಣವಾಡಿ ಗ್ರಾಮದವರು ಮನವಿ ಮಾಡಿದ್ದರು. ಇಂದು ಆತಂಕಗೊಂಡು ಜನರು ವಸತಿ ಶಾಲೆಯ ಮುಂದೆ ಜಮಾಯಿಸಿದ ನೂರಾರು ಗ್ರಾಮಸ್ಥರು, ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿ, ನಮ್ಮ ಮತ್ತೊಂದು ಶಾಲೆ ಇದೆ ಅಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ ಸಚ್ಚಿದಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ ಸಭೆ ನಿರ್ಧಾರ ಎಷ್ಟರಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

  • ಕೋಳಿ ಫಾರ್ಮ್‍ನಲ್ಲಿ ನಡೀತಿದೆ ವಸತಿ ಶಾಲೆ- ಒಂದೇ ಕೊಠಡಿಲಿ 150 ಮಕ್ಕಳಿಗೆ ಶಿಕ್ಷಣ!

    ಕೋಳಿ ಫಾರ್ಮ್‍ನಲ್ಲಿ ನಡೀತಿದೆ ವಸತಿ ಶಾಲೆ- ಒಂದೇ ಕೊಠಡಿಲಿ 150 ಮಕ್ಕಳಿಗೆ ಶಿಕ್ಷಣ!

    – 150 ಮಕ್ಕಳು ಎರಡೇ ಎರಡು ಶೌಚಾಲಯ
    – ಹಾದಿ ಬೀದಿಯಲ್ಲಿ ಮಕ್ಕಳು ಸ್ನಾನ

    ಬಳ್ಳಾರಿ: ಸರ್ಕಾರಿ ಶಾಲೆ ಶಿಕ್ಷಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಇಲ್ಲೊಂದು ಶಾಲೆ ಇದೆ. ಆ ಶಾಲೆಯ ಸ್ಥಿತಿಯನ್ನು ನೋಡಿದರೆ ಎಂಥವರಿಗೂ ಅಚ್ಚರಿ ಆಗದೇ ಇರದು. ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸ್ಥಿತಿಯನ್ನು ನೀವೂ ನೋಡಿದ್ರೆ ಈ ರೀತಿಯ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕಾ ಅನ್ನೋ ಪ್ರಶ್ನೆ ಮೂಡದೇ ಇರದು.

    ಹೌದು. ಕಳೆದ ನಾಲ್ಕೈದು ತಿಂಗಳ ಹಿಂದೆ ಇದು ಒಂದು ಕೋಳಿ ಫಾರ್ಮ್ ಆಗಿತ್ತು. ಈ ಕೋಳಿ ಫಾರ್ಮ್ ನಲ್ಲಿ ಸುಮಾರು 5 ಸಾವಿರ ಕೋಳಿಗಳನ್ನು ಸಾಕಲಾಗುತಿತ್ತು. ಆದರೆ ಈಗ ಅದೇ ಕೋಳಿ ಫಾರ್ಮ್ ಇಂದು ಮಕ್ಕಳ ವಸತಿ ಶಾಲೆಯಾಗಿ ಮಾರ್ಪಟ್ಟಿದೆ. ಕೋಳಿ ಫಾರ್ಮ್ ಈಗ ವಸತಿ ಶಾಲೆಯಾಗಿ ಬದಲಾಗಿದ್ದು, ಹಿಂದುಳಿದ ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ದಯನೀಯ ಸ್ಥಿತಿಯಾಗಿದೆ.

    ಈ ಮಕ್ಕಳ ಸ್ಥಿತಿಯನ್ನು ಒಂದು ಸಾರಿ ನೀವು ನೋಡಿದರೆ ಗೊತ್ತಾಗುತ್ತೆ. ಇಲ್ಲಿ ಸುಮಾರು 150 ಮಕ್ಕಳು ಕಲಿಯುತ್ತಿದ್ದು, ಈ ಎಲ್ಲಾ ಮಕ್ಕಳಿಗೆ ಕೇವಲ ಎರಡೇ ಎರಡು ಶೌಚಾಲಯ ನಿರ್ಮಿಸಿದ್ದಾರೆ. ಹೀಗಾಗಿ ಇಲ್ಲಿನ ಹೆಣ್ಣು ಮಕ್ಕಳು ಸ್ನಾನದ ಗೃಹದಲ್ಲಿ ಸ್ನಾನ ಮಾಡಿದ್ರೆ, ಗಂಡು ಮಕ್ಕಳು ಹಾದಿ ಬೀದಿಯಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಕಲಿಯುವ ಮಕ್ಕಳು ಬಹುತೇಕರು ಗ್ರಾಮೀಣ ಪ್ರದೇಶದವರು. ತಮ್ಮ ತಂದೆ-ತಾಯಿಗಳು ಉದ್ಯೋಗ ಅರಸಿ ಬೇರೆ ಕಡೆಗೆ ದುಡಿಯಲು ಹೋಗುತ್ತಾರೆ. ಹೀಗಾಗಿ ಈ ಮಕ್ಕಳಿಗೆ ಇದೇ ಶಾಲೆ ಇದೇ ಮನೆ. ಇಲ್ಲಿ ಶಾಲೆಯೂ ಅದೇ ವಸತಿ ನಿಲಯವೂ ಇದೆ. ಇದೇ ಕೋಳಿ ಫಾರ್ಮ್ ನಲ್ಲಿ ಶಿಕ್ಷಣ ಇದೇ ಕೋಳಿ ಫಾರ್ಮ್ ವಸತಿ ಮಾಡಬೇಕಾದ ದಯನೀಯ ಸ್ಥಿತಿ ಈ ಮಕ್ಕಳದ್ದಾಗಿದೆ.

    ಶಾಲೆಯಲ್ಲಿ 6 ರಿಂದ 8 ನೇ ತರಗತಿಯವರೆಗೂ ಇದೆ. ಇಲ್ಲಿ ಕಲಿಯುವ ಮಕ್ಕಳಿಗೆ ಸೂಕ್ತ ಭದ್ರತೆಯೂ ಕೂಡ ಇಲ್ಲ. ಊರ ಹೊರಗಿನ ಶಾಲೆ ಇದಾಗಿದ್ದರಿಂದ ಮಕ್ಕಳು ಭಯದಲ್ಲಿ ಬದುಕುತ್ತಿದ್ದಾರೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಕೂಡ ಇಲ್ಲಿ ಕಲಿಯುತ್ತಿದ್ದು, ಒಂದೇ ಕೋಳಿ ಫಾರ್ಮ್ ನಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ.

    ಈ ವಸತಿ ಶಾಲೆ ಮೊದಲು ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಇತ್ತು. ಅಲ್ಲಿ ಸರಿಯಾದ ಸ್ಥಳ ಸಿಗದ ಹಿನ್ನೆಲೆಯಲ್ಲಿ ಮತ್ತೆ ಈ ಶಾಲೆಯನ್ನು ಕೂಡ್ಲಿಗಿ ಪಟ್ಟಣದ ಬೇರೆ ವಸತಿ ಶಾಲೆಗೆ ಸ್ಥಳಾಂತರ ಮಾಡಲಾಯಿತು. ಆದರೆ ಅಲ್ಲಿಯೂ ಮಕ್ಕಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಈ ಪಾಳು ಬಿದ್ದ ಕೋಳಿ ಫಾರ್ಮ್ ನಲ್ಲಿ ಸ್ಥಳಾಂತರ ಮಾಡಲಾಯಿತು. ಶಾಲೆಗೆ ಬಾಡಿಗೆ ಕೊಟ್ಟ ಕೋಳಿ ಫಾರ್ಮ್ ಮಾಲೀಕರು ಶೌಚಾಲಯ ಕಟ್ಟಿಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಈಗ ಮಕ್ಕಳಿಗೆ ಕನಿಷ್ಠ ಸೌಲಭ್ಯಗಳು ಇಲ್ಲದೆ ಪ್ರತಿದಿನ ನರಕ ಯಾತನೆ ಅನುಭವಿಸುತ್ತಿರುವುದಾಗಿ ವಿದ್ಯಾರ್ಥಿನಿ ಶಕುಂತಲಾ ತನ್ನ ಅಳಲು ತೋಡಿಕೊಂಡಿದ್ದಾಳೆ.

    ಒಟ್ಟಿನಲ್ಲಿ ಸರ್ಕಾರ ಶಿಕ್ಷಣಕ್ಕೆ ಕೋಟಿ ಕೋಟಿ ಹಣ ನೀಡುತ್ತದೆ. ಆದರೆ ಇಲ್ಲಿನ ಸ್ಥಳೀಯ ನಾಯಕರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಈ ರೀತಿಯ ನರಕದಲ್ಲಿ ಶಿಕ್ಷಣ ಕಲಿಯಬೇಕಾದ ಸ್ಥಿತಿ ನಿರ್ಮಾಣ ಆಗಿದ್ದು ಮಾತ್ರ ವಿಪರ್ಯಾಸವಾಗಿದೆ.

  • ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವರಿಗೆ ಧನ್ಯವಾದ ತಿಳಿಸಿದ ಬಾಲಕಿ

    ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವರಿಗೆ ಧನ್ಯವಾದ ತಿಳಿಸಿದ ಬಾಲಕಿ

    ರಾಮನಗರ: ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವ ಸುರೇಶ್ ಕುಮಾರ್ ಅವರಿಗೆ ಹೂವು ಮಾರುತ್ತಿದ್ದ ಬಾಲಕಿ ಧನ್ಯವಾದ ತಿಳಿಸಿದ್ದಾಳೆ. ಶಾಲೆ ಮುಗಿದ ಬಳಿಕ ತಾಯಿ ಕಟ್ಟಿಕೊಡುತ್ತಿದ್ದ ಹೂವು ಮಾರುತ್ತಿದ್ದ ಬಾಲಕಿಯನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ವಸತಿ ಶಾಲೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

    ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದ ನಿವಾಸಿ ಶ್ರೀನಿವಾಸ್ ನಾಯ್ಕ್ ಹಾಗೂ ಲಕ್ಷ್ಮಿಬಾಯಿ ದಂಪತಿಯ ಪುತ್ರಿ ಸಂಗೀತಾ ಕೆಲಸವನ್ನು ಬಿಡಿಸಿ ಶಾಲೆಗೆ ಸೇರಿದ ಬಾಲಕಿ. ಇತ್ತೀಚೆಗೆ ಬೆಂಗಳೂರಿನ ಕೆಂಗೇರಿ ಬಳಿ ಹೂವು ಮಾರಾಟ ಮಾಡುತ್ತಿದ್ದ ಬಾಲಕಿ ಸಂಗೀತಾಳನ್ನು ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ನೋಡಿದ್ದರು. ಅಲ್ಲದೇ ಬಾಲಕಿ ಬಗ್ಗೆ ಸಚಿವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ನಿರ್ದೆಶನದಂತೆ ಸಂಬಂಧಿಸಿದ ಅಧಿಕಾರಿಗಳು ಬಾಲಕಿಯ ಪೂರ್ವಾಪರವನ್ನು ಸಂಗ್ರಹಿಸಿ ಮಾಹಿತಿ ನೀಡಿದ್ದರು. ಬಳಿಕ ಬಾಲಕಿ ಹಾಗೂ ಆಕೆಯ ತಾಯಿಯನ್ನ ವಿಚಾರಣೆ ನಡೆಸಿ ಬಾಲಕಿಯ ಇಚ್ಛೆ ಮೇರೆಗೆ ರಾಮನಗರದ ಕೈಲಾಂಚದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 7ನೇ ತರಗತಿಗೆ ಸೇರಿಸಿದ್ದಾರೆ.  

    ಸಂಗೀತಾಳ ತಂದೆ ಶ್ರೀನಿವಾಸ್ ನಾಯ್ಕ್ ಮನೆಯ ಜವಾಬ್ದಾರಿಯನ್ನ ತೆಗೆದುಕೊಳ್ಳದೇ ಪತ್ನಿ, ಮಗಳನ್ನು ತೊರೆದಿದ್ದಾನೆ. ಮಗಳ ಹೊಣೆ ಹೊತ್ತಿರುವ ಲಕ್ಷ್ಮಿಬಾಯಿ ಅವರು ಕೆಂಗೇರಿಯಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಯೇ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಸ್ವಗ್ರಾಮ ಹೊಳಲಿನಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿಬಾಯಿ ದಿನನಿತ್ಯ ಕೆಂಗೇರಿಯಿಂದ ಹೊಳಲು ರೈಲಿನಲ್ಲಿ ಗ್ರಾಮಕ್ಕೆ ಓಡಾಡುತ್ತಿದ್ದಾರೆ. ಇದರ ನಡುವೆ ಹೂವು ಕಟ್ಟಿಕೊಟ್ಟು ತನ್ನ ಮಗಳಿಗೆ ಅಕ್ಕಪಕ್ಕದ ಮನೆಗಳಿಗೆ ಕೊಡುವುದು, ಅಲ್ಲದೇ ಮಾರಾಟ ಮಾಡುವುದಕ್ಕೆ ತಿಳಿಸಿದ್ದರು. ತನ್ನ ತಾಯಿಗೆ ನೆರವಾಗಲು ಸಂಗೀತಾ ಹೂವು ಮಾರಾಟ ಮಾಡುವ ಕೆಲಸವನ್ನ ಮಾಡುತ್ತಿದ್ದಳು. ಇದೀಗ ವಸತಿ ಶಾಲೆಗೆ ಸೇರಿರುವ ಸಂಗೀತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾಳೆ. ಇದನ್ನೂ ಓದಿ: ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು

    ಓದುವ ವಯಸ್ಸಿನಲ್ಲಿ ಮಕ್ಕಳು ದುಡಿಯುವ ಕೆಲಸಕ್ಕೆ ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಬಾಲ್ಯದಲ್ಲೇ ತಮ್ಮ ಜೀವನವನ್ನ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿದ್ಯಾಭ್ಯಾಸಕ್ಕೂ ಎಳ್ಳುನೀರು ಬಿಡುವಂತಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವಾರು ಮಕ್ಕಳು ಪೆನ್, ಮೊಬೈಲ್ ವಸ್ತುಗಳು, ಹೂವು, ಸಣ್ಣಪುಟ್ಟ ವಸ್ತುಗಳನ್ನ ಹೆದ್ದಾರಿ ಸಿಗ್ನಲ್‍ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಅಂತಹ ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ಮುಖ ಮಾಡಬೇಕಿದೆ.

  • ಹೂ ಮಾರುತ್ತಿದ್ದ ಬಾಲಕಿಯನ್ನ ವಸತಿ ಶಾಲೆಗೆ ಸೇರಿಸಿದ ಸಚಿವರು

    ಹೂ ಮಾರುತ್ತಿದ್ದ ಬಾಲಕಿಯನ್ನ ವಸತಿ ಶಾಲೆಗೆ ಸೇರಿಸಿದ ಸಚಿವರು

    ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ ಆಕೆಯನ್ನು ಕಾಟಾಚಾರಕ್ಕೆ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ ಶಾಲೆ ಮುಗಿದ ಮೇಲೆ ಸಂಗೀತಾ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಳು. ಶಾಲೆ ಕಡೆ ಹೆಚ್ಚು ಗಮನ ಕೊಡಲಾಗದೇ, ಕಷ್ಟ ಪಟ್ಟು ಚಿಕ್ಕ ವಯಸ್ಸಿನಲ್ಲಿಯೇ ತಂದೆ, ತಾಯಿಗೆ ಕುಟುಂಬ ನಡೆಸಲು ಸಹಾಯ ಮಾಡುತ್ತಿದ್ದ ಸಂಗೀತಾಳನ್ನು ಕಂಡ ಸಚಿವರು ಆಕೆಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದನ್ನೂ ಓದಿ: ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು

    ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಸಂಗೀತಾ ಎಂಬ ಈ ಬಾಲಕಿ ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು. ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತಾಳನ್ನು ರಾಮನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ. ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು ಎಂದು ಬರೆದು ಬಾಲಕಿ ಶಾಲೆಯಲ್ಲಿ ಮಕ್ಕಳ ಜೊತೆ ಕೂತಿರುವ ಫೋಟೋ ಹಾಕಿ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  • ವಸತಿ ಶಾಲೆಯಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ

    ವಸತಿ ಶಾಲೆಯಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಮಗಳೂರು: ವಸತಿ ಶಾಲೆಯೊಂದರಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತರೀಕೆರೆ ಹೊರವಲಯದ ತುಂಗಾಭದ್ರಾ ವಸತಿ ಶಾಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಸಂಸದ ಬಿಎನ್ ಚಂದ್ರಪ್ಪ ಅವರಿಗೆ ಸೇರಿರುವ ಈ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.

    ಹಾಸ್ಟೆಲ್‍ನಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಿಂದ ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ಶಿಕ್ಷಣ ಇಲಾಖೆ ಬಿಇಒ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಕುರಿತು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

  • ಋತುಚಕ್ರವಾಗಿರೋದು ಯಾರಿಗೆಂದು ತಿಳಿಯಲು 70 ಹುಡುಗಿಯರ ಬಟ್ಟೆ ಕಳಚಿಸಿದ ವಾರ್ಡನ್!

    ಋತುಚಕ್ರವಾಗಿರೋದು ಯಾರಿಗೆಂದು ತಿಳಿಯಲು 70 ಹುಡುಗಿಯರ ಬಟ್ಟೆ ಕಳಚಿಸಿದ ವಾರ್ಡನ್!

    ಮುಜಾಫರ್‍ನಗರ್: ಉತ್ತರಪ್ರದೇಶದ ವಸತಿ ಶಾಲೆಯೊಂದರ ವಾರ್ಡನ್ ಹಾಗು ಶಾಲೆಯ ಮುಖ್ಯಸ್ಥೆಯಾದ ಮಹಿಳೆಯೊಬ್ಬಳು ಸುಮಾರು 70 ಹುಡುಗಿಯರನ್ನು ಬಟ್ಟೆ ಕಳಚುವಂತೆ ಮಾಡಿದ್ದಾಳೆ ಎಂದು ಆರೋಪ ಕೇಳಿಬಂದಿದೆ.

    ಬಾತ್‍ರೂಮಿನಲ್ಲಿ ರಕ್ತದ ಕಲೆ ಕಾಣಿಸಿದ ಹಿನ್ನೆಲೆಯಲ್ಲಿ ಋತಚಕ್ರವಾಗಿರೊದು ಯಾರಿಗೆ ಎಂದು ತಿಳಿಯಲು ವಾರ್ಡನ್, ವಿದ್ಯಾರ್ಥಿನಿಯರನ್ನು ಬಟ್ಟೆ ತೆಗೆಯುವಂತೆ ಮಾಡಿದ್ದಾಳೆ. ಅಲ್ಲದೆ ವಿದ್ಯಾರ್ಥಿನಿಯರನ್ನ ತರಗತಿಯಲ್ಲೇ ಬೆತ್ತಲೆಯಾಗಿ ಕೂರುವಂತೆ ಮಾಡಿದ್ದಾಳೆಂದು ಆರೋಪಿಸಲಾಗಿದೆ.

    ಇಲ್ಲಿನ ದಿಗ್ರಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಗುರುವಾರದಂದು ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ದೂರು ದಾಖಲಿಸಿದ್ದಾರೆ. ಶಾಲೆಯ ಪ್ರಾಂಶುಪಾಲೆ ಹಾಗೂ ವಾರ್ಡನ್ ಆಗಿರುವ ಸುರೇಖಾ ತೋಮರ್, ತನ್ನ ಆದೇಶವನ್ನು ಪಾಲಿಸದಿದ್ದರೆ ಅದರ ಪರಿಣಾಮವನ್ನ ಎದುರಿಸಬೇಕಾಗುತ್ತದೆ ಎಂದು ಹೇಳಿ ವಿದ್ಯಾರ್ಥಿನಿಯರನ್ನ ಬೆದರಿಸಿದ್ದಾಳೆಂದು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಚಂದರ್ ಕೇಶ್ ಯಾದವ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಅಲ್ಲಿ ಯಾವ ಶಿಕ್ಷಕರೂ ಇರಲಿಲ್ಲ. ನಮ್ಮನ್ನು ಕಳಮಹಡಿಗೆ ಬರುವಂತೆ ಹೇಳಿದ್ರು. ಮೇಡಮ್ ನಮ್ಮ ಬಟ್ಟೆ ಕಳಚುವಂತೆ ಮಾಡಿದ್ರು. ಅವರು ಹೇಳಿದಂತೆ ಮಾಡದಿದ್ರೆ ಹೊಡೆಯುತ್ತೇನೆ ಅಂತ ಹೇಳಿದ್ರು. ನಾವು ಮಕ್ಕಳು, ನಾವೇನು ಮಾಡಲು ಸಾಧ್ಯ? ಅವರು ಹೇಳಿದಂತೆ ಮಾಡದೇ ಹೋಗಿದ್ದರೆ ನಮ್ಮನ್ನು ಹೊಡೆಯುತ್ತಿದ್ದರು ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿಕೆ ನೀಡಿದ್ದಾರೆ.

    ವಾರ್ಡನ್ ಅನೇಕ ವೇಳೆ ವಿದ್ಯಾರ್ಥಿನಿಯರಿಗೆ ಹೊಡೆದು ಬೆದರಿಸಿದ್ದು, ಆಕೆಗೆ ಶಿಕ್ಷೆಯಾಗಬೇಕೆಂದು ಪೋಷಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಂದ ತನಿಖೆ ನಡೆಸುವಂತೆ ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲಾಡಳಿತ ಸುರೇಖಾಳನ್ನು ಕೆಲಸದಿಂದ ವಜಾ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆದರೆ ಈ ಎಲ್ಲಾ ಆರೋಪಗಳನ್ನು ಸುರೇಖಾ ತೋಮರ್ ತಳ್ಳಿಹಾಕಿದ್ದು, ಅವರಿಗೆ ಬಟ್ಟೆ ಕಳಚುವಂತೆ ಯಾರೂ ಹೇಳಿಲ್ಲ. ನಾನು ಇಲ್ಲಿ ಇರಬಾರದು ಅಂತ ಇಲ್ಲಿನ ಸಿಬ್ಬಂದಿ ನಡೆಸಿರುವ ಪಿತೂರಿ ಇದು. ಇಲ್ಲಿನ ಸಿಬ್ಬಂದಿ ತಮ್ಮ ಕೆಲಸವನ್ನ ಸರಿಯಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸುವಂತೆ ನನಗೆ ಹೇಳಲಾಗಿತ್ತು. ನಾನು ತುಂಬಾ ಸ್ಟ್ರಿಕ್ಟ್, ಅದಕ್ಕೆ ನನ್ನನ್ನು ಅವರು ದ್ವೇಷಿಸುತ್ತಾರೆ ಎಂದು ಹೇಳಿದ್ದಾಳೆ.

    ಈ ಘಟನೆಯಿಂದಾಗಿ ಸುಮಾರು 35 ವಿದ್ಯಾರ್ಥಿಗಳು ಶಾಲೆಯನ್ನ ತೊರೆದಿದ್ದಾರೆ ಎಂದು ವರದಿಯಾಗಿದೆ.