Tag: Reservation Protest

  • ಸದಾಶಿವ ಆಯೋಗ ವರದಿ ಅಗತ್ಯವಿಲ್ಲ; ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಎಸ್ಸಿ ಲಿಸ್ಟ್‌ನಲ್ಲೇ ಇರುತ್ತೆ – ಸಿಎಂ

    ಸದಾಶಿವ ಆಯೋಗ ವರದಿ ಅಗತ್ಯವಿಲ್ಲ; ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಎಸ್ಸಿ ಲಿಸ್ಟ್‌ನಲ್ಲೇ ಇರುತ್ತೆ – ಸಿಎಂ

    – ಸದಾಶಿವ ಆಯೋಗ ವರದಿ ಜಾರಿ ಮಾಡಿಲ್ಲ ಎಂದ ಬೊಮ್ಮಾಯಿ

    ಚಿಕ್ಕಬಳ್ಳಾಪುರ: ಮೀಸಲಾತಿ (Reservation) ಹಂಚಿಕೆಯನ್ನು ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಅನ್ವಯ ಮಾಡಿಲ್ಲ. ನಮ್ಮ ಕ್ಯಾಬಿನೆಟ್‌ನ ಉಪಸಮಿಯಿಂದ ಮಾಡಿದ್ದೇವೆ. ಆದ್ದರಿಂದ ಬಂಜಾರ ಸಮುದಾಯದ ಮುಖಂಡರಿಗೆ ಆತಂಕ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.‌

    ಯಡಿಯೂರಪ್ಪ (BS Yediyurappa) ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣದ ಕುರಿತು ಚಿಕ್ಕಬಳ್ಳಾಪುರದಲ್ಲಿ ಸ್ಪಷ್ಟನೆ ನೀಡಿರುವ ಸಿಎಂ, ಬೋವಿ ಲಂಬಾಣಿ ಕೊರಮ ಕೊರಚ ಎಲ್ಲ ಸಮುದಾಯಗಳು ಎಸ್ಸಿ ಲಿಸ್ಟ್‌ನಲ್ಲೇ (SC Community) ಇರುತ್ತವೆ, ತೆಗೆದುಹಾಕುವ ಪ್ರಶ್ನೇಯೇ ಇಲ್ಲ. ನಾನೇ ಸ್ವತಃ ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇನೆ. ಸದಾಶಿವ ಆಯೋಗ ವರದಿಯ ಶಿಫಾರಸುಗಳ ಅನ್ವಯ ನಾವು ಮೀಸಲಾತಿ ಹಂಚಿಕೆ ಮಾಡಿಲ್ಲ, ಆಯೋಗದ ವರದಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ

    3 ಪರ್ಸೆಂಟ್ ಮೀಸಲಾತಿಯನ್ನ ನಾಲ್ಕೂವರೆ ಪರ್ಸೆಂಟ್‌ಗೆ ಹೆಚ್ಚಿಸಿದ್ದೇವೆ. ಸದಾಶಿವ ಆಯೋಗ ವರದಿಯ ಅಗತ್ಯವಿಲ್ಲ ಅಂತಾ ನಾವು ತೀರ್ಮಾನ ಮಾಡಿದ್ದೇವೆ. ಬೇಡಿಕೆಗಳಿಗೆ ಅನುಗುಣವಾಗಿಯೇ ನಾವು ಮೀಸಲಾತಿ ಪ್ರಕಟಿಸಿದ್ದೇವೆ. ಯಾವುದೇ ಗೊಂದಲವಿಲ್ಲದೇ ಎಲ್ಲ ಸಮುದಾಯಗಳ ಹಿತರಕ್ಷಣೆ ಮಾಡಿದ್ದೇವೆ. 2 ಲಕ್ಷದ ಹಕ್ಕು ಪತ್ರಗಳನ್ನ ಲಂಬಾಣಿ ತಾಂಡಾದ ಜನರಿಗೆ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ನಿಮ್ಮ ಪರವಾಗಿ ಇರುವ ಸರ್ಕಾರ ಎಂದು ಅಭಯ ನೀಡಿದ್ದಾರೆ.

    ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು. ಆ ಭಾಗದ ತಾಂಡಾಗಳಿಗೆ ಮೂಲ ಸೌಕರ್ಯಗಳನ್ನ ಕಲ್ಪಿಸಿಕೊಟ್ಟವರು ಯಡಿಯೂರಪ್ಪನವರು. ಹಿಂಸೆಗೆ ಅವಕಾಶ ಕೊಡದೇ ಏನೇ ವಿಷಯ ಇದ್ರೂ ಕೂತು ಬಗೆಹರಿಸೋಣ ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಶಿಕಾರಿಪುರದಲ್ಲಿ (Shikaripura) ಜನರು ಭುಗಿಲೇಳಲು ಕಾಂಗ್ರೆಸ್ ಪ್ರಚೋದನೆ ಕೊಟ್ಟಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು (Congress Leaders) ಪ್ರಚೋದನೆ ಕೊಟ್ಟಿದ್ದಾರೆ. ಬಿಜೆಪಿ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದನ್ನು ತಡೆಯೋಕೆ ಆಗದೆ, ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಇದಕ್ಕೆಲ್ಲ ಬಂಜಾರ ಸಮುದಾಯ ಒಳಗಾಗಬಾರದು. ಬಂಜಾರ ಸಮುದಾಯದ ರಕ್ಷಣೆ ಮೊದಲಿಂದಲೂ ಬಿಜೆಪಿ ಮಾಡಿದೆ, ಮುಂದೆಯೂ ಮಾಡಲಿದೆ. ತಪ್ಪು ದಾರಿಗೆಳೆಯುವ ಪ್ರಯತ್ನಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

    ಕಾಂಗ್ರೆಸ್‌ನವರ ಕುಕೃತ್ಯವನ್ನು ಖಂಡಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ಹಿಂಸೆಗೆ ಇಳಿಸುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್‌ನವರು ಕ್ಷೆಮೆಗೆ ಅರ್ಹರಲ್ಲ, ಇದು ರಾಷ್ಟ್ರೀಯ ಪಕ್ಷ ಮಾಡುವಂತಹ ಅತ್ಯಂತ ಸಣ್ಣ ಕೆಲಸ ಎಂದು ಕಿಡಿ ಕಾರಿದ್ದಾರೆ.

  • ಮೀಸಲಾತಿ ವಿರೋಧಿಸಿ ಪ್ರತಿಭಟನೆ – ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ

    ಮೀಸಲಾತಿ ವಿರೋಧಿಸಿ ಪ್ರತಿಭಟನೆ – ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ

    – ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ

    ಶಿವಮೊಗ್ಗ: ರಾಜ್ಯ ಸರ್ಕಾರ (Government Of Karnataka) ಕಳೆದ ಎರಡು ದಿನಗಳ ಹಿಂದೆ ಮೀಸಲಾತಿ (Reservation) ಪ್ರಕಟ ಮಾಡಿದ್ದು, ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.

    ಸದಾಶಿವ ಆಯೋಗದ ವರದಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ಈ ವರದಿ ಜಾರಿಗೊಳಿಸದಂತೆ ಆಗ್ರಹಿಸಿದ್ದಾರೆ. ಅಲ್ಲದೇ ನಗರದ ಮಾಳರಕೇರಿ ಬಡಾವಣೆಯಲ್ಲಿನ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್

    ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಂಸದ ಬಿ.ವೈ ರಾಘವೇಂದ್ರ ಭಾವಚಿತ್ರಕ್ಕೆ ಬೆಂಕಿ ಹಾಕಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹಲ್ಲೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅದಾನಿ ಕಂಪನಿ ವಿರುದ್ಧ JPC ತನಿಖೆಗೆ ಆಗ್ರಹ – ಸಂಸತ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ಪ್ರತಿಭಟನೆ

    ಬಂಜಾರ, ಲಂಬಾಣಿ, ಬೋವಿ, ಕೊರಮ ಕೊರಚ ಸಮುದಾಯದವರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಶಿಕಾರಿಪುರದಲ್ಲಿ‌ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.