ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ, ಓರ್ವ ಸಾವನ್ನಪ್ಪಿ, ಹಲವು ಜನ ಅವಶೇಷಗಳ ಅಡಿಯಲ್ಲಿ ಸಿಲುಕೊಂಡಿದ್ದಾರೆ.
ರಾಜಧಾನಿಯ ಹಳೆಯ ನಗರ ಹಾಗೂ ಜನಜಂಗುಳಿ ಹೆಚ್ಚಿರುವ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆಯು ಸಂಜೆ 4.45ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ ಅದರ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ಸೇರಿದಂತೆ 10 ಕ್ಕೂ ಹೆಚ್ಚು ಬೈಕುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅವಶೇಷಗಳ ಅಡಿಯಲ್ಲಿ ಹಲವು ಮಂದಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಸಿಲುಕಿಕೊಂಡಿರುವ ಜನರನ್ನು ರಕ್ಷಿಸುತ್ತಿದ್ದು, ಗಾಯಗೊಂಡಿದ್ದ 8 ಮಂದಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇತುವೆ ಬಿದ್ದ ಪರಿಣಾಮ ವಾಹನಗಳು ಸಂಪೂರ್ಣ ನಜ್ಜು-ಗುಜ್ಜಾಗಿವೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೇತುವೆ ಕುಸಿದು ಬಿದ್ದು, ಹಲವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವುದು ಮಾಹಿತಿ ಸಿಕ್ಕಿದೆ. ಈಗಾಗಲೇ ರಕ್ಷಣಾ ತಂಡ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಯು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾನು ತುರ್ತು ಭೇಟಿಗಾಗಿ ಡಾರ್ಜಿಲಿಂಗ್ ಗೆ ಭೇಟಿ ನೀಡಿದ್ದು, ಯಾವುದೇ ವಿಮಾನಗಳು ಇಲ್ಲದ ಕಾರಣ ಘಟನಾ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಶೀಘ್ರವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲದೇ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿಯ ಮುಖಂಡ ಮುಕುಲ್ ರಾಯ್ ಪ್ರತಿಕ್ರಿಯಿಸಿ, ಸೇತುವೆ ಕುಸಿತಕ್ಕೆ ಸಿಎಂ ಮಮತಾ ಬ್ಯಾನರ್ಜಿಯವರೇ ನೇರ ಹೊಣೆ. ಕೇವಲ ಅವರು ನಗರವನ್ನು ಸುಂದರವಾಗಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಯಾವುದೇ ಹಳೆಯ ಕಾಮಗಾರಿಗಳನ್ನು ಸರಿಪಡಿಸುವಲ್ಲಿ ಗಮನಹರಿಸಿಲ್ಲ. ಇದರ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv