ಮಂಗಳೂರು: ಗುರುಪುರದ ಬಳಿಯ ಗುಡ್ಡ ಕುಸಿತ ಸಂಭವಿಸಿದ ಬಳಿಕ ಸುಮಾರು ಐದು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಶವವನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತದಿಂದಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಸತತ ಐದು ಗಂಟೆಯಿಂದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದೀಗ 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಇಬ್ಬರ ಮೃತ ದೇಹ ಪತ್ತೆಯಾಗಿವೆ.
ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ ಮೂರ್ನಾಲ್ಕು ಗಂಟೆಗಳಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿತ್ತು. ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿತ್ತು. ಹೀಗಾಗಿ ಇಷ್ಟೇ ಸಮಯಕ್ಕೆ ಮುಗಿಯುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ.ಬಿ.ರೋಪೆಶ್ ತಿಳಿಸಿದ್ದರು. ಆದರೆ ಇದೀಗ ಇಬ್ಬರ ಮಕ್ಕಳ ಶವವನ್ನು ಹೊರಗಡೆ ತೆಗೆಯಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಗುಡ್ಡದ ಸುತ್ತ ಮುತ್ತ ಇದ್ದ 15 ಮನೆಯಲ್ಲಿದ್ದ ಜನರನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ನಾಳೆ ತಜ್ಞರ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಭೋಪಾಲ್: ಚಿರತೆಯೊಂದು ಬಾವಿಗೆ ಬಿದ್ದು ಪರದಾಡಿದ್ದು, ಹರಸಾಹಸಪಟ್ಟು ರಕ್ಷಣೆ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದಲ್ಲಿ ಘಟನೆ ನಡೆದಿದ್ದು, ಚಿರತೆಯ ರಕ್ಷಣೆಯ ವಿಡಿಯೋವನ್ನು ಅರಣ್ಯಾಧಿಕಾರಿ(ಐಎಫ್‍ಎಸ್) ಪ್ರವೀಣ್ ಕಾಸ್ವನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶಿವಪುರಿಯಲ್ಲಿ ಈ ಚಿರತೆ ಆಕಸ್ಮಿಕವಾಗಿ ಆಳದ ಬಾವಿಗೆ ಬಿದ್ದಿತ್ತು. ಸಮಯಕ್ಕೆ ಸರಿಯಾಗಿ ಇದನ್ನು ರಕ್ಷಿಸಲಾಗಿದ್ದು, ಈ ಕಾರ್ಯಾಚರಣೆ ಅದ್ಭುತವಾಗಿದೆ ಎಂದು ಕಾರ್ಯಾಚರಣೆಯ ಚತುರತೆಯನ್ನು ಶ್ಲಾಘಿಸಿದ್ದಾರೆ.
Ingenuity at best.
This #leopard fell into a deep well at Shivpuri, Madhya Praresh. Was rescued on time. He supported as well, many a times they attack the rescuers also. Via @ravindramtripa1 pic.twitter.com/fqwgQ4OFUQ
ಈ ವಿಡಿಯೋ ಒಂದು ನಿಮಿಷದ್ದಾಗಿದ್ದು, ನೀರು ಇರುವ ಬಾವಿಗೆ ಬಿದ್ದಿದ್ದ ಚಿರತೆಯನ್ನು ಮಂಚದ ಮೂಲಕ ಮೇಲೆತ್ತಲಾಗಿದೆ. ಮಂಚವನ್ನು ಉಲ್ಟಾ ಮಾಡಿ ಅದಕ್ಕೆ ಹಗ್ಗ ಕಟ್ಟಿ ಎಳೆ ಬಿಟ್ಟು, ಚಿರತೆ ಅದರ ಮೇಲೆ ಕುಳಿತ ನಂತರ ಮೇಲೆತ್ತುವ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಂಚದ ಮೇಲೆ ಚಿರತೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ.
ಚಿರತೆ ಬಾವಿಯಿಂದ ಹೊರಬರುತ್ತಿದ್ದಂತೆ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವರು ಭಯಭೀತರಾಗಿ ಓಡಲು ಪ್ರಾರಂಬಿಸುತ್ತಾರೆ. ನಂತರ ಚಿರತೆ ಸಹ ಓಡಿ ಹೋಗಿದೆ.
Wow! Proven time n again that we can co exist if humans behave themselves.
ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಿಸುತ್ತಿರುವವರೊಂದಿಗೆ ಚಿರತೆ ಸಹಕರಿಸಿದೆ. ಹಲವು ಬಾರಿ ಚಿರತೆಗಳು ರಕ್ಷಣಾ ಕಾರ್ಯಾಚರಣೆ ನಡೆಸದವರ ಮೇಲೆಯೇ ದಾಳಿ ನಡೆಸುತ್ತವೆ. ಆದರೆ ಈ ಚಿರತೆ ಅವರೊಂದಿಗೆ ಸಹಕರಿಸಿದೆ. ಈ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ರವೀಂದ್ರ ಮಣಿ ತ್ರಿಪಾಠಿಯವರು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
🙏 Great Rescue excellent work all member who done the best job.
ಮಾ.16ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಕೇವಲ 3 ಗಂಟೆಗಳಲ್ಲಿ 20 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. 2 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ಮೂಲಕ ರಕ್ಷಣಾ ಕಾರ್ಯಾಚರಣೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಲವರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ, ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗಾಂಧಿನಗರ: ಜನವಸತಿ ಪ್ರದೇಶಕ್ಕೆ ಧಾವಿಸಿದ್ದ 12 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್‍ನ ವಡೋದರಾ ಬಳಿಯ ರಾವಲ್ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ವನ್ಯಜೀವಿ ಸಂರಕ್ಷಕರು ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಸುಮಾರು 5-6 ಗಂಟೆಗಳ ಕಾಲ ನಡೆದಿದ್ದು, ಕಡೆಗೂ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೃಹತ್ ಮೊಸಳೆಯು ರಾವಲ್ ಗ್ರಾಮದ ಬಳಿ ಇರುವ ನರ್ಮದಾ ನದಿ ಕ್ಯಾನಲ್‍ನ ಸೋಲಾರ್ ಪ್ಲಾಂಟ್‍ನಿಂದ ಬಂದಿದ್ದು, ಗ್ರಾಮಸ್ಥರು ಈ ನೀರನ್ನು ಕೃಷಿಗಾಗಿ ಬಳಸುತ್ತಾರೆ.
#WATCH Gujarat: A 12-feet-long crocodile which had ventured out into fields in Raval village of Vadodara, yesterday, was rescued and handed over to forest department. pic.twitter.com/TOiVuqjXFv
ನರ್ಮದಾ ಕ್ಯಾನಲ್ ಸೋಲಾರ್ ಪ್ಲಾಂಟ್‍ನ ಎಂಜಿನಿಯರ್ ಬೆಳಗ್ಗೆ 10.30ಕ್ಕೆ ಕರೆ ಮಾಡಿ ರಾವಲ್ ಗ್ರಾಮದ ಬಳಿ 12 ಅಡಿ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ತಿಳಿಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದೆವು. ಮೊಸಳೆಯನ್ನು ರಕ್ಷಿಸಲು ಐದರಿಂದ ಆರು ತಾಸು ಸಮಯ ಹಿಡಿಯಿತು ಎಂದು ವನ್ಯ ಜೀವಿ ಸಂರಕ್ಷಕ ಹೇಮಂತ್ ವಧ್ವಾನ ತಿಳಿಸಿದ್ದಾರೆ.
ಬೃಹತ್ ಮೊಸಳೆ ಕಾಣುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದು, ಕೂಗಾಡಲು ಪ್ರಾರಂಭಿಸಿದ್ದಾರೆ. ನಂತರ ವನ್ಯ ಜೀವಿ ಸಂರಕ್ಷಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ಆಗಮಿಸಿ ಮೊಸಳೆಯನ್ನು ಹಿಡಿದಿದ್ದಾರೆ. ಐದಾರು ಗಂಟೆಗಳ ಕಾಲ ಹರ ಸಾಹಸ ಪಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಕ್ಷಿಸಿದ ಮೊಸಳೆಯನ್ನು ಹಲವು ಮೊಸಳೆಗಳಿರುವ ಕೆರೆಗೆ ಬಿಡಲಾಗಿದೆ. ಈ ರೀತಿ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಇಂತಹದ್ದೇ ಘಟನೆ ನಡೆದಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮಲಾಡ್‍ನ ಕರೂರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಗೋಡೆ ಕುಸಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬೆಳ್ಳಂಬೆಳಗ್ಗೆ ಈ ದುರಂತ ನಡೆದಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಗುಡಿಸಲುಗಳ ಮೇಲೆಯೇ 20 ಅಡಿ ಉದ್ದ ಹಾಗೂ ಬಹು ಎತ್ತರದ ಗೋಡೆ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿರುವ ಪರಿಣಾಮ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಫ್ ಪಡೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಶತಾಬ್ದಿ ಆಸ್ಪತ್ರೆ, ಜೋಗೇಶ್ವರಿ ಆಸ್ಪತ್ರೆ, ಎಂ.ಡಬ್ಲೂ ದೇಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಶತಾಬ್ದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮುಂಬೈ ನಗರದಲ್ಲಿ ದಶಕದಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಇಂದು ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರೈಲ್ವೇ ಹಳಿಗಳ ಮೇಲೂ ನೀರು ನಿಂತಿರುವ ಕಾರಣಕ್ಕೆ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಮಳೆರಾಯನ ಅಬ್ಬರಕ್ಕೆ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂದಿದೆ. ಇಡೀ ಮುಂಬೈ ನಗರವೇ ಮಳೆಗೆ ಜಲಾವೃತವಾಗಿದ್ದು, ಹಲವೆಡೆ ಮನೆಗಳ ಒಳಗೆ ಕೂಡ ನೀರು ನುಗ್ಗಿದೆ. ಅಲ್ಲದೆ ಮಿತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರು ಆಸುಪಾಸಿನ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಅಲ್ಲಿನ ಕಟ್ಟಡಗಳ ಕೆಳ ಮಹಡಿ ಸಂಪೂರ್ಣ ಜಲಾವೃತಗೊಳ್ಳುವ ಮಟ್ಟಿಗೆ ನೀರು ತುಂಬಿದೆ.
#UPDATE Mumbai: 18 dead after a wall collapsed on hutments in Pimpripada area of Malad East due to heavy rainfall today. https://t.co/0rm63e57VL
ಭುವನೇಶ್ವರ: ರಸ್ತೆಗೆ ಅಡ್ಡ ಬಂದ ಎಮ್ಮೆಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬಸ್ ಪಲ್ಟಿಯಾಗಿರುವ ಘಟನೆ ಒಡಿಶಾ ರಾಜ್ಯದ ಜಗತ್‍ಪುರದ ಮಹಾನದಿ ಸೇತುವೆ ಬಳಿ ಮಂಗಳವಾರ ನಡೆದಿದೆ.
ಅಪಘಾತಕ್ಕಿಡಾದ ಬಸ್ಸಿನಲ್ಲಿ 30 ಮಂದಿ ಪ್ರಯಾಣಿಕರಿದ್ದರು. ಮಹಾನದಿ ಸೇತುವೆ ಮೇಲೆ ಬಸ್ ಚಲಿಸುತ್ತಿದ್ದ ವೇಳೆ ರಸ್ತೆಗೆ ಎಮ್ಮೆಯೊಂದು ಅಡ್ಡ ಬಂದಿದೆ. ಎಮ್ಮೆಯನ್ನು ತಪ್ಪಿಸಲು ಹೋಗಿ ಬಸ್ ಚಾಲಕರ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಪಲ್ಟಿಯಾಗಿ ಕೆಳಕ್ಕುರುಳಿದೆ. ಬಸ್ ಪಲ್ಟಿಯಾದ ಪರಿಣಾಮ ಸುಮಾರು 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ನೀಡುಲಾಗುತ್ತದೆ. ಈ ಅವಘಡದಿಂದ ಬಹಳ ಬೇಸರವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದವರು ಆಗಮಿಸಿದ್ದು, ಜಿಲ್ಲಾಡಳಿತ ಅಧಿಕಾರಿಗಳು ಸೇರಿ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಚರಣೆಯು ಮುಂದುವರಿದಿದೆ.
#SpotVisuals: A bus carrying around 30 passengers fell from the Mahanadi bridge near Jagatpur in Cuttack today. Rescue teams present at the spot. More details awaited. #Odishapic.twitter.com/Mkqr00R7DW
ಡೆಹ್ರಾಡೂನ್: ಉತ್ತರಕಾಶಿಯಿಂದ ವಿಕಾಸನಗರಕ್ಕೆ ತೆರೆಳುತ್ತಿದ್ದ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 123 ಬಳಿ ಆಯ ತಪ್ಪಿ ಯಮುನಾ ನದಿಗೆ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ.
ಸುಮಾರು 300 ಮೀ. ಮೇಲಿಂದ ಬಸ್ಸು ಪಲ್ಟಿಯಾಗಿ ನದಿಗೆ ಬಿದ್ದಿದೆ. ಬಸ್ಸಿನಲ್ಲಿದ್ದ 11 ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಅಪಘಾತವಾಗಲು ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಅತೀಯಾದ ವೇಗದಲ್ಲಿ ಚಲಿಸುತ್ತಿದ್ದ ಕಾರಣಕ್ಕೆ ಬಸ್ ಪಲ್ಟಿಯಾಗಿ ನದಿಗೆ ಬಿದ್ದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
#UPDATE: 2 dead & 14 injured after a bus carrying more than 20 passengers fell in a gorge near Damta on Uttarkashi-Yamunotri Highway, earlier today. Rescue operation underway. #Uttarakhandpic.twitter.com/wXqIO5UY3H
ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಈ ಘಟನೆ ನಡೆದಿದ್ದು, ಸ್ಥಳಿಯರು ಹಾಗೂ ಉತ್ತರಕಾಶಿ ಜಿಲ್ಲಾಡಳಿತ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಪ್ರಯಾಣಿಕರಲ್ಲಿ 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾರೆ.
ಈಗಾಗಲೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೂ ಉಳಿದ ಪ್ರಯಾಣಿಕರಿಗಾಗಿ ಶೋಧಕಾರ್ಯ ಮುಂದುವರಿದಿದೆ.
– ಮಂಡ್ಯ, ಕಾರವಾರದಲ್ಲೂ ಸೈಕ್ಲೋನ್ ಹೊಡೆತ – 14 ಜನರ ಸಾವು, 223 ಜನರ ರಕ್ಷಣೆ
ತಿರುವನಂತರಪುರ: ಕನ್ಯಾಕುಮಾರಿ ಸೇರಿದಂತೆ ಕೇರಳದ ಕರಾವಳಿಯಲ್ಲಿ ಓಖಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯದ ಮಂಗಳೂರು ಕರಾವಳಿಗೂ ಓಖಿ ಚಂಡಮಾರತ ಅಪ್ಪಳಿಸಿದ್ದು, ಚಂಡಮಾರುತದ ರಭಸಕ್ಕೆ 4 ಮೀನುಗಾರಿಕಾ (ವೆಸಲ್) ಹಡುಗು ಮುಳುಗಡೆಯಾಗಿದೆ.
ಇದರ ಜೊತೆಗೆ ಇನ್ನೊಂದು ವೆಸಲ್ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಮಂದಿ ಕಾರ್ಮಿಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ವೆಸಲ್‍ನ ಮಾಲೀಕರು, ಸಾಮಾಗ್ರಿಗಳನ್ನು ಕಳಿಸುತ್ತಿರುವ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಲ್ಲಿ ಅನಾಹುತದ ಬೆನ್ನಲ್ಲೇ ಕಾರವಾರದಲ್ಲೂ ಓಖಿ ಸೈಕ್ಲೋನ್ ಗಂಟೆಗೆ 40 ಕಿ.ಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಇದರಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ. ಓಖಿ ಪ್ರಭಾವ ಸತತ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಓಖಿ ಚಂಡಮಾರುತದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿಯೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳು ಹೆಚ್ಚು ಏಳುತ್ತಿದ್ದು ಗಂಟೆಗೆ 35 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಎರಡು ದಿನಗಳವರೆಗೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕಾರವಾರ ಭಾಗದಲ್ಲಿ ನಾರ್ತ್ ಈಸ್ಟ್ ನಿಂದ ಬೀಸುತ್ತಿರುವ ಬಿರುಗಾಳಿಯ ಪ್ರಮಾಣ ತಗ್ಗಿದೆ. ಗಾಳಿಯು ದಿಕ್ಕು ಬದಲಿಸುತ್ತಿದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಸಂಜೆ ಅಥವಾ ನಾಳೆ ಸಂಜೆ ಒಳಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಮಂಡ್ಯ, ಕೋಲಾರದಲ್ಲೂ ಸೈಕ್ಲೋನ್ ಭೀತಿ ಎದುರಾಗಿದೆ. ಓಖಿ ಚಂಡಮಾರುತದಿಂದಾಗಿ ಕಟಾವಿಗೆ ಬಂದಿರುವ ಭತ್ತ, ರಾಗಿ ಆಹಾರ ಪದಾರ್ಥಗಳು ಬಿರುಗಾಳಿಗೆ ನಾಶವಾಗುವ ಆಂತಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟಾವು ಮಾಡಲಾಗಿರುವ ಬೆಳೆಗಳು ಮಳೆಗೆ ನಾಶವಾಗಿದೆ. ಮಂಡ್ಯದ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ರೈತ ಬೆಳೆದ ಭತ್ತದ ಬೆಳೆ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಮದ್ದೂರು ತಾಲೂಕಿನ, ವೈದ್ಯನಾಥಪುರ ಗ್ರಾಮದ ರೈತರು ಚಂಡಮಾರುತದ ಅರಿವಿಲ್ಲದೇ ತೆನೆ ಬಂದಿದ್ದ ಸುಮಾರು ನಾಲ್ಕು ಎಕರೆ ಪ್ರದೇಶದ ಭತ್ತದ ಪೈರನ್ನು ಕಟಾವು ಮಾಡಿದ್ದರು. ಆದರೆ ಭತ್ತದ ಪೈರನ್ನು ಒಕ್ಕಣೆ ಮಾಡುವ ಮುನ್ನವೇ ಮಳೆ ಸುರಿದು ಗದ್ದೆಯಲ್ಲಿ ನೀರು ನಿಂತಿದೆ. ಪರಿಣಾಮ ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ನೆನೆದು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಸಮುದ್ರಕ್ಕೆ ತೆರಳಿದ ಮೀನುಗಾರರನ್ನು ಭಾರತೀಯ ನೌಕಾ ಪಡೆ ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಸುಮಾರು 223 ಜನರನ್ನು ರಕ್ಷಣೆ ಮಾಡಿದೆ. ಇನ್ನು ಸಮುದ್ರಕ್ಕೆ ತೆರಳಿದ 40 ರಿಂದ 60 ಮೀನುಗಾರರ ಸುಳಿವು ಸಿಕ್ಕಿಲ್ಲ ಎಂದು ವರದಿಯಾಗಿದೆ. ಈವರೆಗೆ 14 ಜನ ಮೃತಪಟ್ಟಿದ್ದಾರೆ.
ಭಾರತೀಯ ನೌಕಪಡೆ ರಕ್ಷಣಾ ಕಾರ್ಯಚಾರಣೆ ಕೈಗೊಂಡಿರುವ ದೃಶ್ಯಗಳು ಲಭ್ಯವಾಗಿದೆ. ಇನ್ನು ಸಮುದ್ರಕ್ಕೆ ತೆರಳಿರುವ ಮೀನುಗಾರರ ಕುಟುಂಬಸ್ಥರು ಸಮುದ್ರ ದಡದಲ್ಲೇ ಕಾದು ಕುಳಿತ್ತಿದ್ದು, ನೀರು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.