Tag: rescue operation

  • ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

    ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

    ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ

    ಡೆಹ್ರಾಡೂನ್: ಧರಾಲಿಯಲ್ಲಿ (Dharali) ಸಂಭವಿಸಿದ್ದ ಭೀಕರ ಮೇಘಸ್ಫೋಟದಲ್ಲಿ ಸಿಲುಕಿ ನಾಪತ್ತೆಯಾಗಿದ್ದವರ ಪೈಕಿ 274 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಇನ್ನೂ 59 ಜನರ ರಕ್ಷಣೆಗಾಗಿ ಶೋಧ ಕಾರ್ಯ ನಡೆದಿದೆ.

    ಆ.5ರ ಮಧ್ಯಾಹ್ನ ಉತ್ತರಕಾಶಿಯ ಧರಾಲಿಯಲ್ಲಿ ಖೀರ್ ಗಂಗಾ ನದಿಯ ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದು ಮೇಘಸ್ಫೋಟ ಸಂಭವಿಸಿತ್ತು. ಪರಿಣಾಮ ಅಲ್ಲಿದ್ದ ಮನೆಗಳು, ಹೋಟೆಲ್, ಹೋಂಸ್ಟೇಗಳು ಸೇರಿ ಎಲ್ಲವೂ ಕೊಚ್ಚಿಕೊಂಡು ಹೋಗಿ ಸರ್ವನಾಶವಾಗಿತ್ತು. ಜೊತೆಗೆ ಗ್ರಾಮಸ್ಥರು, ಪ್ರವಾಸಿಗರು ಸೇರಿದಂತೆ ಹಲವರು ನಾಪತ್ತೆಯಾಗಿದ್ದರು. ಈವರೆಗೂ 274 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಈ ಪೈಕಿ ಗಂಗೋತ್ರಿ ಹಾಗೂ ಇತರ ಪ್ರವಾಸಿತಾಣಗಳಲ್ಲಿ ಸಿಲುಕಿಕೊಂಡಿದ್ದ ಗುಜರಾತ್‌ನ 131 ಮತ್ತು ಮಹಾರಾಷ್ಟ್ರದ 123 ಪ್ರವಾಸಿಗರನ್ನು ಉತ್ತರಕಾಶಿ ಹಾಗೂ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.ಇದನ್ನೂ ಓದಿ: ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

    ನಾಪತ್ತೆಯಾದವರ ರಕ್ಷಣೆಗಾಗಿ ಪ್ಯಾರಾಮಿಲಿಟರಿ ಪಡೆ ಹಾಗೂ ವೈದ್ಯಕೀಯ ತಂಡಗಳು ಸರಕು ಸಾಗಾಣೆ ಮಾಡಲು ಬಳಸುವ ಚಿನೂಕ್ ಹೆಲಿಕಾಪ್ಟರ್ ಮತ್ತು ಏರ್-ಲಿಫ್ಟಿಂಗ್‌ನ್ನು ಬಳಸಿಕೊಳ್ಳುತ್ತಿವೆ. ಅದಲ್ಲದೇ ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಉಪಯೋಗಿಸುವ ಹೆಲಿಕಾಪ್ಟರ್‌ಗಳನ್ನು ಕೂಡ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳ ಬಳಕೆಯಿಂದಾಗಿ ರಕ್ಷಣಾ ಕಾರ್ಯ ಸುಗಮವಾಗಿ ಸಾಗುತ್ತಿದ್ದು, 50 ನಾಗರಿಕರು ಹಾಗೂ 9 ಸೈನಿಕರ ಪತ್ತೆಗಾಗಿ ಸದ್ಯ ಶೋಧ ಕಾರ್ಯ ಮುಂದುವರೆದಿದೆ.

    ಸದ್ಯ ಘಟನಾ ಸ್ಥಳಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತನಾಡಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಮೇಘಸ್ಫೋಟದಿಂದಾಗಿ ಧರಾಲಿ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದುರಂತದಿಂದಾಗಿ ಧರಾಲಿ ಎಲ್ಲಾ ಸಂಪರ್ಕಗಳಿಂದ ಕಡಿತಗೊಂಡಿದೆ. ದಕ್ಷಿಣ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರವೂ ಸಹ ನಾಶವಾಗಿದೆ ಎನ್ನಲಾಗಿದೆ. ದುರಂತದಲ್ಲಿ ಈವರೆಗೂ 5 ಜನರು ಸಾವನ್ನಪ್ಪಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಇದನ್ನೂ ಓದಿ: ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

  • Photo Gallery | ಇಂದ್ರಯಾಣಿ ನದಿಯಲ್ಲಿ ಉಕ್ಕಿ ಹರಿದ ಪ್ರವಾಹಕ್ಕೆ ಕುಸಿದ ಸೇತುವೆ

    Photo Gallery | ಇಂದ್ರಯಾಣಿ ನದಿಯಲ್ಲಿ ಉಕ್ಕಿ ಹರಿದ ಪ್ರವಾಹಕ್ಕೆ ಕುಸಿದ ಸೇತುವೆ

    ಪುಣೆಯ ಕುಂದಮಲ ಪ್ರದೇಶದಲ್ಲಿರುವ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಹಳೆಯ ಸೇತುವೆ ಕುಸಿದಿದ್ದು ಹಲವಾರು ಪ್ರವಾಸಿಗರು ನದಿಗೆ ಬಿದ್ದಿದ್ದಾರೆ. ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿ ಸೌಂದರ್ಯ ವೀಕ್ಷಣೆಗೆ ಬಂದವರು ನದಿಯಲ್ಲೇ ಕೊಚ್ಚಿಹೋಗಿದ್ದಾರೆಂದು ವರದಿಗಳು ತಿಳಿಸಿವೆ. ಘಟನೆ ತಿಳಿದ ಕೂಡಲೇ ದೌಡಾಯಿಸಿರುವ ಸ್ಥಳೀಯ ಅಧಿಕಾರಿಗಳು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಇದಕ್ಕೆ ಸ್ಥಳೀಯರೂ ಕೈಜೋಡಿಸಿದ್ದಾರೆ. ದುರ್ಘಟನೆಯನ್ನು ಬಿಚ್ಚಿಡುವ ಒಂದಿಷ್ಟು ಚಿತ್ರಗಳು ಇಲ್ಲಿವೆ ನೋಡಿ….

     

  • ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು

    ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು

    – ನದಿ ನೀರು ವೀಕ್ಷಣೆಗೆ ಬಂದವರು ನದಿಯಲ್ಲೇ ಕೊಚ್ಚಿಹೋದರು

    ಮುಂಬೈ: ಪುಣೆಯಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಕನಿಷ್ಠ 20 ರಿಂದ 25 ಮಂದಿ ನೀರಿನಲ್ಲೇ ಕೊಚ್ಚಿಹೋಗಿದ್ದಾರೆಂದು ವರದಿಯಾಗಿದೆ.

    ತಲೆಗಾಂವ್ ಪ್ರದೇಶದ ಕುಂಡ್ಮಾಲ್ ಬಳಿ ಇಂದ್ರಯಾಣಿ ನದಿಗೆ ಕಟ್ಟಲಾಗಿದ್ದ ನಿರ್ಮಿಸಿದ್ದ ಹಳೆಯ ಸೇತುವೆ ಕೊಚ್ಚಿ ಹೋಗಿದೆ.‌ ಮಳೆಯ ಆರ್ಭಟ ಜೋರಾದ ಹಿನ್ನೆಲೆ ಪ್ರವಾಹ ಉಂಟಾಗಿದ್ದು ದುರ್ಘಟನೆ ಸಂಭವಿಸಿದೆ. ಕನಿಷ್ಠ 20 ರಿಂದ 25 ಮಂದಿಯಲ್ಲೇ ಕೊಚ್ಚಿ ಹೋಗಿದ್ದಾರೆ ಎಂದು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

    ಕಳೆದ ಕೆಲವು ತಿಂಗಳಿನಿಂದ ಈ ಸೇತುವೆ ಶಿಥಿಲಾವಸ್ಥೆಯಲ್ಲಿತ್ತು. ಹಾಗಾಗಿ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದ್ರೆ ಇತ್ತೀಚೆಗೆ ಭಾರೀ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಇಂದು ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿದ್ದು, ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ನದಿ ವೀಕ್ಷಣೆ ಮಾಡುತ್ತಿದ್ದ 20-25 ಮಂದಿ ನದಿಯಲ್ಲೇ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

    ಘಟನೆ ತಿಳಿದ ಕೂಡಲೇ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದೆ. ಸ್ಥಳೀಯರು ನದಿಯ ಬಳಿ ಸುಳಿಯದಂತೆ ಮುನ್ನೆಚ್ಚರಿಕೆ ಕೊಡಲಾಗಿದೆ. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

  • ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿದ್ದ ರಾಜ್ಯದ ತಂಡಕ್ಕೆ ಗಣ್ಯರ ಅಭಿನಂದನೆ

    ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿದ್ದ ರಾಜ್ಯದ ತಂಡಕ್ಕೆ ಗಣ್ಯರ ಅಭಿನಂದನೆ

    ಕೋಲಾರ: ಉತ್ತರಕಾಶಿಯ (Uttarkashi) ಸಿಲ್ಕ್ಯಾರ್ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರತೆಗೆಯಲು (Rescue Operation) ರಾಜ್ಯದ (Karnataka) 9 ಜನರ ಗಣಿಗಾರಿಕೆಯ ಎಂಜಿನಿಯರ್ ತಂಡ ಶ್ರಮಿಸಿದೆ. ಈ ತಂಡದಲ್ಲಿ ಬಂಗಾರಪೇಟೆಯ ಹೆಚ್.ಎಸ್ ವೆಂಕಟೇಶ್ ಪ್ರಸಾದ್ ಅವರು ಸಹ ಶ್ರಮಿಸಿದ್ದಾರೆ. ರಾಜ್ಯದಿಂದ ತೆರಳಿದ್ದ ತಂಡಕ್ಕೆ ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ವಿ.ಕೆ ಸಿಂಗ್ ಅವರು ವೆಂಕಟೇಶ್ ಪ್ರಸಾದ್ ಸೇರಿದಂತೆ ರಾಜ್ಯದ ಎಂಜಿನಿಯರ್‌ಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಕೇಂದ್ರದ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಅಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಮೈನಿಂಗ್ ಕಂಪನಿಯೊಂದರ ಸಿಇಒ ಸೈರಿಕ್ ಜೋಸೆಫ್ ನೇತೃತ್ವದಲ್ಲಿ ಹೆಚ್.ಎಸ್ ವೆಂಕಟೇಶ್ ಪ್ರಸಾದ್, ಶ್ರೀಕಾಂತ್, ಅಮೋಘ್, ಅಸೀಪ್ಮುಲ್ಲಾ, ಏರೋನ್ಯಾಟಿಕ್ ಇಂಜಿನಿಯರ್‍ಗಳಾದ ಗಜಾನ, ಎನ್ವಿಡಿ ಸಾಯಿ, ರೇಗು ಹಾಗೂ ಸತ್ಯ ಎಂಬವರ ತಂಡ ಕಾರ್ಯ ನಿರ್ವಹಿಸಿತ್ತು. ಇವರೆಲ್ಲರ ಶ್ರಮದ ಫಲವಾಗಿ 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು. ಇದನ್ನೂ ಓದಿ: COP28 Summit: ದುಬೈ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ – ಹಿಂದೂಸ್ತಾನ್‌ ಹಮಾರ ಎಂದ ಭಾರತೀಯರು

    ರಾಜ್ಯದ ಎಂಜಿನಿಯರ್‌ಗಳ ತಂಡ ನ.22 ರಂದು ಬೆಂಗಳೂರಿನಿಂದ ಡೆಹ್ರಾಡೂನ್‍ಗೆ ಹೊರಟು ಉತ್ತರಕಾಶಿ ತಲುಪಿದ್ದರು. ಬಳಿಕ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಚಿಂತನೆ ನಡೆಸಿ ಶ್ರಮಿಸಿದ್ದಾರೆ. ಬಳಿಕ ಬೆಟ್ಟದ ಮೇಲಿಂದ ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳಕ್ಕೆ ನೇರವಾಗಿ ಸುರಂಗ ಮಾರ್ಗ ಮಾಡಿ ಕಾರ್ಮಿಕರನ್ನು ಹೊರ ತೆಗೆಯಲು ನೆರವಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ಹೆಚ್.ಎಸ್ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿ, ಭಾರತೀಯ ಸೇನೆಯ ಕರ್ನಲ್ ದೀಪಕ್ ಪಾಟೀಲ್ ಕರೆ ಮಾಡಿ ನಮ್ಮ ನೆರವು ಕೇಳಿದ್ದರು. ಇದರಿಂದ 9 ಎಂಜಿನಿಯರ್‌ಗಳ ತಂಡ ತಲುಪಿತ್ತು, ಮಾನವೀಯತೆಯ ದೃಷ್ಠಿಯಿಂದ ಇಂತಹ ಕೆಲಸ ಮಾಡಲು ಖುಷಿಯಾಯಿತು. ಈ ಕೆಲಸದ ನಿರ್ವಹಣೆಯಲ್ಲಿ ಮೂಂಚೂಣಿಯಲ್ಲಿ ಇರಬೇಕೆಂದು ದಿನದ 24 ಗಂಟೆಯೂ ಕೆಲಸ ಮಾಡಿದ್ದೆವೆ. ಇಲ್ಲಿ ಕೆಲಸ ಮಾಡಲು ಊಟ ಹಾಗೂ ನಿದ್ರೆ ಬಗ್ಗೆ ಗಮನವಿರಲಿಲ್ಲ. ಮುಖ್ಯವಾಗಿ ಸುರಂಗದಲ್ಲಿ ಸಿಲುಕಿದ್ದವರನ್ನು ಹೊರತೆಗೆಯುವ ಕೆಲಸ ನಮ್ಮಿಂದಲೇ ಆಗಬೇಕೆಂದು ಉತ್ಸಾಹದಿಂದ ಕೆಲಸ ಮಾಡಿದ್ದೇವೆ. ಈ ಕೆಲಸ ಯಶಸ್ವಿಯಾಗಿದ್ದರಿಂದ ಭಾರೀ ಸಂತೋಷವಾಗಿದೆ ಎಂದಿದ್ದಾರೆ.

    ವೆಂಕಟೇಶ್ ಪ್ರಸಾದ್ ಅವರು 2015ರಲ್ಲಿ ಮೈನಿಂಗ್ ಎಂಜಿನಿಯರ್ ಆದ ಬಳಿಕ ಗುಜರಾತ್‍ನ ಎರಡು ಮೈನಿಂಗ್ ಕಂಪನಿಗಳಲ್ಲಿ 7 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಈಗ ಪ್ರಸ್ತುತ ಬೆಂಗಳೂರಿನ ಖಾಸಗಿ ಮೈನಿಂಗ್ ಕಂಪನಿ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ!

  • ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ನವದೆಹಲಿ: ಕಾರ್ಮಿಕರ ರಕ್ಷಣೆಗೆ ದೇಶಾದ್ಯಂತ ಪ್ರಾರ್ಥನೆ, ನಾವು ಸಾವನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಛಲ ತೊಟ್ಟ ಕಾರ್ಮಿಕರು, ಕಾರ್ಯಾಚರಣೆ ಮಧ್ಯೆ ಕೈಕೊಟ್ಟ ಯಂತ್ರ…ಹೆಜ್ಜೆ ಹೆಜ್ಜೆಗೂ ಅಡೆತಡೆಅಡ್ಡಿ ಆತಂಕಗಳ ನಡುವೆ ಉತ್ತರಾಖಂಡದ (Uttarakhand) ಸುರಂಗದಲ್ಲಿ (Tunnel) ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು (Workers) ಯಶಸ್ವಿಯಾಗಿ ರಕ್ಷಿಸಲಾಗಿದೆ.

    ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಡೆಸಿದ ಸಾಹಸೋಪೇತ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಗಂಟೆಗಳ ಬಳಿಕ ಎಲ್ಲಾ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸುರಂಗದಿಂದ ಕಾರ್ಮಿಕರು ಹೊರಬರುತ್ತಿದ್ದಂತೆ ಉತ್ತಾರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿಬ ವಿಕೆ ಸಿಂಗ್ ಹೂವಿನ ಹಾರವನ್ನು ಹಾಕಿ ಬರಮಾಡಿಕೊಂಡರು.

    ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ಪದ್ದತಿ ಬಳಸಿ ಡ್ರಿಲ್ಲಿಂಗ್ ಮಾಡಿದ್ದು ಫಲ ಕೊಟ್ಟಿದೆ. ನಂತರ ಸುರಂಗದ ಒಳಗೆ 3 ಮೀಟರ್‌ನಷ್ಟು ಕೊರೆಯಲಾಯಿತು. ಸಂಜೆ 7:05ಕ್ಕೆ ಸರಿಯಾಗಿ ಕಾರ್ಮಿಕರು ಸಿಲುಕಿದ್ದ ಸ್ಥಳವನ್ನು ಎನ್‌ಡಿಆರ್‌ಎಫ್ ತಲುಪಿತು. ಐವರು ಅಧಿಕಾರಿಗಳ ತಂಡ ಮೊದಲು ಸುರಂಗ ತಲುಪಿ ಕಾರ್ಮಿಕರನ್ನು ಭೇಟಿ ಮಾಡಿದರು. ನಂತರ 4 ಅಡಿಯಷ್ಟು ಅಗಲ ಪೈಪ್‌ನೊಳಗಿನಿಂದ ಸ್ಟ್ರೆಚರ್ ಬಳಸಿ ಹಲವು ಬ್ಯಾಚ್‌ಗಳಲ್ಲಿ ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಕರೆತಂದಿದೆ.

    3-3 ಕಾರ್ಮಿಕರನ್ನು ಬ್ಯಾಚ್‌ಗಳನ್ನಾಗಿ ವಿಂಗಡಿಸಿ ಅವರನ್ನು ಹೊರಗೆ ಕರೆತರಲಾಗಿದೆ. ಒಬ್ಬೊಬ್ಬ ಕಾರ್ಮಿಕ ಬಾಹ್ಯ ಜಗತ್ತನ್ನು ಕಂಡ ಕೂಡಲೇ ಸ್ಥಳದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಾವು ಗೆದ್ದು ಬಂದ ಪ್ರತಿಯೊಬ್ಬ ಕಾರ್ಮಿಕರನ್ನು ಹೂಹಾರದೊಂದಿಗೆ ಸ್ವಾಗತಿಸಲಾಗಿದೆ. ಈ ಎಲ್ಲಾ ಕೆಲಸ ಕೇವಲ ಅರ್ಧ ಗಂಟೆ ಅಂತರದಲ್ಲಿ ನಡೆದಿದೆ.

    ಸದ್ಯಕ್ಕೆ ಎಲ್ಲ ಕಾರ್ಮಿಕರೂ ಆರೋಗ್ಯವಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಒಂದೊಮ್ಮೆ ಯಾರಿಗಾದರೂ ಮೆಡಿಕಲ್ ಎಮೆರ್ಜೆನ್ಸಿ ಇದ್ದರೆ ಆಸ್ಪತ್ರೆಗೆ ಸಾಗಿಸಲು ಚಿನೂಕ್ ಹೆಲಿಕಾಪ್ಟರ್ ಸಜ್ಜಾಗಿ ಇರಿಸಲಾಗಿತ್ತು. ಅದೃಷ್ಟವಶಾತ್ ಅಂತಹ ಸನ್ನಿವೇಶ ಕಂಡುಬಂದಿಲ್ಲ. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    17 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ನೂರೆಂಟು ವಿಘ್ನಗಳು ಎದುರಾಗಿದ್ದವು. ವಿದೇಶಿ ತಜ್ಞರನ್ನು ಆಪರೇಷನ್‌ಗೆ ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಯಾವಾಗ ಮುಗಿಯಬಹುದು ಎಂಬ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ. ಆದರೆ ರಕ್ಷಣಾ ಪಡೆಗಳ ಅವಿರತ ಪ್ರಯತ್ನ ಇಂದು ಫಲ ಕೊಟ್ಟಿದೆ.

    ರಕ್ಷಣಾ ಕಾರ್ಯರಚಣೆ ನಡೆದಿದ್ದು ಹೀಗೆ:
    ಅವಶೇಷಗಳ ನಡುವೆ ಮೊದಲು ಡ್ರಿಲ್ಲಿಂಗ್ ನಡೆಸಿ ಕೊನೆ ಭಾಗ ಸುಮಾರು 57 ಮೀಟರ್ ಮಾತ್ರ ಮನುಷ್ಯರಿಂದಲೇ ಕೊರೆಯಲಾಯಿತು. ಸುರಂಗಕ್ಕೆ 90 ಸೆಂಟಿಮೀಟರ್ ಅಗಲದ ಪೈಪ್ ಅಳವಡಿಸಿ, ಅದರ ಮೂಲಕವೇ ಕಾರ್ಮಿಕರನ್ನು ಹೊರಕ್ಕೆ ತರಲಾಗಿದೆ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿ ಗ್ರೇಟ್ ಆಪರೇಷನ್ – 17 ದಿನಗಳ ಬಳಿಕ ಸಾವು ಗೆದ್ದ 41 ಕಾರ್ಮಿಕರು

    ಕಾರ್ಮಿಕರು 17 ದಿನ ಬದುಕಿದ್ದು ಹೇಗೆ?
    ನವೆಂಬರ್ 12 ರಂದು ಸಿಲ್‌ಕ್ಯಾರಾ ಸುರಂಗ ಕುಸಿತವಾಗಿತ್ತು. ಈ ಹಿನ್ನೆಲೆ 41 ಕಾರ್ಮಿಕರು ಅದರೊಳಗೆ ಸಿಲುಕೊಕೊಂಡಿದ್ದರು. ಅದೃಷ್ಟವಶಾತ್ ಕಾರ್ಮಿಕರು ಓಡಾಡುವುದಕ್ಕೆ 2 ಕಿ.ಮೀ ಸ್ಥಳಾವಕಾಶ ಇತ್ತು. ಸುರಂಗ ಕುಸಿದ 2-3 ದಿನಗಳಲ್ಲಿ ಪೈಪ್ ಮೂಲಕ ಆಹಾರ, ನೀರು, ಔಷಧಿ ಪೂರೈಕೆ ಮಾಡಲಾಗುತ್ತಿತ್ತು.

    ಕಾರ್ಮಿಕರ ಮನಸ್ಥೈರ್ಯ ಕಡಿಮೆಯಾಗದಿರಲು ಯೋಗ, ಸಂವಹನ ಮಾಡಿಸಲಾಗಿತ್ತು. ಕುಟುಂಬಸ್ಥರೊಡನೆ ಮಾತನಾಡಲು ಕಾರ್ಮಿಕರಿಗೆ ಮೊಬೈಲ್ ಸೌಲಭ್ಯ ನೀಡಲಾಗಿತ್ತು. ಸಿಲುಕೊಕೊಂಡಿದ್ದ ಕಾರ್ಮಿಕರೊಡನೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಖುದ್ದಾಗಿ ಮಾತನಾಡಿದ್ದರು.

    ವರವಾದ ನಿಷೇಧಿತ ರ‍್ಯಾಟ್ ಹೋಲ್ ಟೆಕ್ನಿಕ್:
    ಇಲಿ ಬಿಲ ಕೊರೆವ ಮಾದರಿಯ ನೆಲ ಕೊರೆಯುವ ಟೆಕ್ನಿಕ್ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೊನೆಗೆ ಸಹಾಯಕ್ಕೆ ಬಂದಿದೆ. ಇದು ಕಾರ್ಮಿಕರ ಸಣ್ಣ ಗುಂಪುಗಳು ನೆಲ ಅಗೆದು ಕಲ್ಲಿದ್ದಲು ತೆಗೆಯುವ ಪ್ರಕ್ರಿಯೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ಸಲಕರಣೆ ಬಳಸಿಕೊಂಡು ಕೈಗಳಿಂದ ನೆಲ ಅಗೆಯುವ ಪ್ರಕ್ರಿಯೆಯಾಗಿದೆ. ಒಬ್ಬರು ಮಾತ್ರ ಒಳಗೆ ತೂರುವಷ್ಟು ಸಣ್ಣ ಕುಣಿ ಅಗೆಯವ ಕ್ರಿಯೆಯಾಗಿದ್ದು, ಇದನ್ನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.

    ಆದರೆ ಪರಿಸರಕ್ಕೆ ಮಾರಕ ಮಾತ್ರವಲ್ಲದೆ ದುರಂತ ಹೆಚ್ಚಳದ ಕಾರಣ ಇದಕ್ಕೆ ನಿಷೇಧ ಹೇರಲಾಗಿದೆ. ಈ ವಿಧಾನ ನಿಷೇಧವಿದ್ದರೂ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಬಳಸಿಕೊಂಡು ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

  • 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

    41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

    ನವದೆಹಲಿ: ಕಳೆದ 17 ದಿನಗಳಿಂದ ಉತ್ತರಕಾಶಿ ಸುರಂಗದಲ್ಲಿ (Uttarkashi Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸಲಾಗಿದೆ. ವಿದೇಶಿ ಯಂತ್ರಗಳನ್ನು ತರಿಸಿಯೂ ಹಲವು ಪ್ರಯತ್ನಗಳನ್ನು ಮಾಡಿ ಅವುಗಳು ಕೈಕೊಟ್ಟ ಬಳಿಕ ಕೊನೆಗೆ ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ (Rat Hole Mining) ವಿಧಾನವೇ ಕೆಲಸಕ್ಕೆ ಬಂದಿದೆ.

    ಹೌದು, ಅಮೆರಿಕದಿಂದ ಆಗರ್ ಯಂತ್ರವನ್ನು ತರಿಸಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನ ಪಡುತ್ತಿದ್ದ ವೇಳೆ ಯಂತ್ರವೇ ಕೆಟ್ಟುಹೋಗಿತ್ತು. ಇದಾದ ಬಳಿಕ ರಕ್ಷಣಾ ಕಾರ್ಯಾಚರಣೆ ಭಾರೀ ವಿಳಂಬವೂ ಆಯಿತು. ಇದೀಗ ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ ವಿಧಾನದ ಮೂಲಕ ಪೂರ್ಣಗೊಳಿಸಲಾಗಿದೆ.

    ಏನಿದು ರ‍್ಯಾಟ್ ಹೋಲ್ ಮೈನಿಂಗ್?
    ರ‍್ಯಾಟ್ ಹೋಲ್ ಮೈನಿಂಗ್ ಕೈಯಿಂದ ಕೊರೆಯುವ ವಿಧಾನವಾಗಿದೆ. ಇದನ್ನು ನುರಿತ ಕೆಲಸಗಾರರಷ್ಟೇ ಮಾಡುತ್ತಾರೆ. ಮೇಘಾಲಯದಲ್ಲಿ ಹೆಚ್ಚಾಗಿ ಕಾರ್ಮಿಕರು ಈ ರೀತಿ ಕೊರೆಯುತ್ತಾರೆ. ನೆಲದಲ್ಲಿ ಕಿರಿದಾದ ಹೊಂಡಗಳನ್ನು ಅಗೆದು, ಒಬ್ಬ ವ್ಯಕ್ತಿ ತೂರಿಕೊಂಡು ಹೋಗಲು ಸಾಧ್ಯವಾಗುವಷ್ಟೇ ಅಗಲದ ಹೊಂಡಗಳನ್ನು ಕೊರೆಯಲಾಗುತ್ತದೆ. ವ್ಯಕ್ತಿ ಹೊಂಡವನ್ನು ಕೊರೆದಂತೆ ಮುಂದೆ ಮುಂದೆ ಸಾಗುತ್ತಾ ಕಲ್ಲಿದ್ದಲನ್ನು ಸಂಗ್ರಹಿಸುತ್ತಾನೆ.

    ರ‍್ಯಾಟ್ ಹೋಲ್ ಎಂದರೆ ಹೆಸರೇ ಹೇಳಿದಂತೆ ಇಲಿಗಳು ಕೊರೆಯುವಂತಹ ಕಿರಿದಾದ ಹೊಂಡಗಳು. ಹೊಂಡಗಳನ್ನು ಅಗೆದ ನಂತರ ಗಣಿಗಾರನು ಹಗ್ಗ ಮತ್ತು ಬಿದಿರಿನ ಏಣಿಗಳನ್ನು ಬಳಸಿ ಹೊಂಡದೊಳಗೆ ಇಳಿಯುತ್ತಾನೆ. ಈ ವಿಧಾನವನ್ನು ಸಾಮಾನ್ಯವಾಗಿ ಕಲ್ಲಿದ್ದಲನ್ನು ಹೊರತೆಗೆಯಲು ಬಳಸಲಾಗುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ವಿಧಾನವನ್ನು ಬಳಸಿ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಹಾಗೂ ಅಲ್ಲೇ ಸಿಲುಕಿ ಹಸಿವಿನಿಂದ ಜನರು ಸಾವನಪ್ಪಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

    ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಮತ್ತೊಂದು ವಿಧವಿದೆ. ಇದರಲ್ಲಿ 10 ರಿಂದ 100 ಚದರ ಮೀಟರ್ ವರೆಗೆ ಬದಲಾಗುವ ಆಯತಾಕಾರದ ಹೊಂಡಗಳನ್ನು ಮಾಡಲಾಗುತ್ತದೆ. ಅದರ ಮೂಲಕ 100-400 ಅಡಿ ಆಳದ ಲಂಬವಾದ ಹೊಂಡವನ್ನು ಅಗೆಯಲಾಗುತ್ತದೆ. ಅದರಲ್ಲಿ ಕಲ್ಲಿದ್ದಲು ಕಂಡುಬಂದ ನಂತರ ರಂಧ್ರದ ಗಾತ್ರದ ಸುರಂಗಗಳನ್ನು ಅಡ್ಡಲಾಗಿ ಅಗೆಯಲಾಗುತ್ತದೆ. ಅದರ ಮೂಲಕ ಕಾರ್ಮಿಕರು ಕಲ್ಲಿದ್ದಲನ್ನು ಹೊರತೆಗೆಯುತ್ತಾರೆ.

    ರ‍್ಯಾಟ್ ಹೋಲ್ ಮೈನಿಂಗ್ ಬ್ಯಾನ್ ಯಾಕೆ?
    ರ‍್ಯಾಟ್ ಹೋಲ್ ಮೈನಿಂಗ್ ವಿಧಾನವು ಅದರ ಅಪಾಯಕಾರಿ ಕೆಲಸದ ಪರಿಸ್ಥಿತಿಗಳು, ಪರಿಸರ ಹಾನಿ ಮತ್ತು ಸಾವು ನೋವುಗಳಿಗೆ ಕಾರಣವಾಗುವ ಹಲವು ಅಂಶಗಳಿಂದಾಗಿ ತೀವ್ರ ಟೀಕೆಗಳನ್ನು ಎದುರಿಸಿದೆ. ಗಣಿಗಾರಿಕೆಗಳು ಸಾಮಾನ್ಯವಾಗಿ ಅನಿಯಂತ್ರಿತವಾಗಿದ್ದು, ಕಾರ್ಮಿಕರಿಗೆ ಸರಿಯಾದ ಗಾಳಿ, ರಚನಾತ್ಮಕ ಬೆಂಬಲ ಅಥವಾ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಲಾಗುತ್ತದೆ. ಮಾತ್ರವಲ್ಲದೇ ಈ ಹಳ್ಳದಲ್ಲಿ ಕಾರ್ಮಿಕರು ಇಳಿದ ಸಂದರ್ಭದಲ್ಲಿ ಮಳೆಯಾಗಿ, ಗಣಿಗಾರಿಕೆ ಪ್ರದೇಶದಲ್ಲಿ ನೀರು ನುಗ್ಗಿದ ಪರಿಣಾಮ ಅನೇಕ ಕಾರ್ಮಿಕರು ಅದರೊಳಗೆಯೇ ಪ್ರಾಣಬಿಟ್ಟಿರುವ ಅನೇಕ ನಿದರ್ಶನಗಳಿವೆ.

    ಈ ರೀತಿಯ ಗಣಿಗಾರಿಕೆಯಿಂದಾಗಿ ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2014 ರಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಅಭ್ಯಾಸವನ್ನು ನಿಷೇಧಿಸಿತು.

    ರ‍್ಯಾಟ್ ಹೋಲ್ ಮೈನಿಂಗ್ ಅತ್ಯಂತ ಅಪಾಯಕಾರಿಯಾಗಿದ್ದು ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಿದ್ದರೂ ಕೊನೆಗೆ ಅನಿವಾರ್ಯವಾಗಿ ಉತ್ತರಕಾಶಿಯ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಈ ವಿಧಾನವನ್ನು ಬಳಸಲಾಗಿದೆ. ಅನೇಕ ಜೀವಗಳಿಗೆ ಕುತ್ತಾಗಿದ್ದ ರ‍್ಯಾಟ್ ಹೋಲ್ ಮೈನಿಂಗ್ ವಿಧಾನವನ್ನು ಇದೀಗ ಅನೇಕ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, 41 ಕಾರ್ಮಿಕರನ್ನು ರಕ್ಷಣೆ ಮಾಡುವ ಮೂಲಕ ವರವಾಗಿ ಬಳಸಿಕೊಳ್ಳಲಾಗಿದೆ.

  • ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ (ಶುಕ್ರವಾರ) 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ.

    ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಕೊರೆಯುವ ಯಂತ್ರವನ್ನು ದುರಸ್ತಿಗೊಳಿಸಲು ಕೆಲವು ಗಂಟೆ ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉಂಟಾಗದಿದ್ದರೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಶೂಟಿಂಗ್‌ಗೆ ಅವಕಾಶ

    13 ದಿನಗಳಿಂದ ಸುರಂಗದೊಳಗೆ ಸಿಲುಕಿ ಪರದಾಡುತ್ತಿರುವ 41 ಕಾರ್ಮಿಕರನ್ನು ಇಂದು ಹೊರತರುವ ನಿರೀಕ್ಷೆಯಿದೆ. ಅಂಬುಲೆನ್ಸ್‌ಗಳು, ವೈದ್ಯರ ತಂಡ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದಾರೆ. ಕಾರ್ಮಿಕರಿಗೆ ನೀರು, ಆಹಾರ ವಿತರಿಸಲು ಪೈಪ್ ಅನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

  • ವೀಡಿಯೋ- ಮನೆ ಟೆರೆಸ್‍ನಲ್ಲಿ ನೇತಾಡ್ತಿದ್ದ ಬಾಲಕನ ರಕ್ಷಿಸಿದ ಬೀದಿ ಬದಿ ವ್ಯಾಪಾರಿ

    ವೀಡಿಯೋ- ಮನೆ ಟೆರೆಸ್‍ನಲ್ಲಿ ನೇತಾಡ್ತಿದ್ದ ಬಾಲಕನ ರಕ್ಷಿಸಿದ ಬೀದಿ ಬದಿ ವ್ಯಾಪಾರಿ

    – ಮನೆ ಮೇಲಿಂದ ಬಿದ್ದ ಬಾಲಕನ ಕ್ಯಾಚ್ ಹಿಡಿದು ರಕ್ಷಣೆ

    ಚೆನ್ನೈ: ಬಾಲಕ ಮನೆಯ ಟೆರೆಸ್ ಮೇಲೆ ತೆರಳಿದ್ದು, ಈ ವೇಳೆ ಗೋಡೆಗೆ ನೇತಾಡುತ್ತಿದ್ದ. ಇದನ್ನು ಗಮನಿಸಿದ ಬಾಲಕಿ, ಟೆರೆಸ್ ಮೇಲೆಯೇ ಬಾಲಕನ ಕೈ ಹಿಡಿದು ಎಳೆಯಲು ಯತ್ನಿಸಿದ್ದಾಳೆ ಆದರೆ ಸಾಧ್ಯವಾಗಿಲ್ಲ. ಇದೇ ಸಮಯಕ್ಕೆ ಬಂದ ಬೀದಿ ಬದಿ ವ್ಯಾಪಾರಿ ಮನೆಯ ಮೇಲಿಂದ ಬಿದ್ದ ಬಾಲಕನನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ. ಈ ಮೈ ಜುಮ್ ಎನ್ನಿಸುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತಮಿಳುನಾಡಿನ ತಿರುಚ್ಚಿ ಬಳಿ ಘಟನೆ ನಡೆದಿದ್ದು, ಟೆರೆಸ್ ಮೇಲೆ ನೇತಾಡುತ್ತಿದ್ದ ಬಾಲಕನನ್ನು ಬೀದಿ ಬದಿ ವ್ಯಾಪಾರಿ ರಕ್ಷಿಸಿದ್ದಾರೆ. ಮನೆಯ ಟೆರೆಸ್‍ನ ಮೂಲೆಗೆ ತೆರಳಿ ಗೋಡೆಯನ್ನು ಹಿಡಿದು ಬಾಲಕ ನೇತಾಡುತ್ತಿದ್ದ. ಆತನ ಸಹೋದರಿ ಬಾಲಕನ ಕೈ ಹಿಡಿದು ಮೇಲಿಂದ ಎಳೆಯಲು ಯತ್ನಿಸುತ್ತಿದ್ದಳು. ಈ ವೇಳೆ ಕೆಲವೇ ಸೆಕೆಂಡುಗಳಲ್ಲಿ ವ್ಯಕ್ತಿಯೊಬ್ಬರು ಮನೆ ಬಳಿಗೆ ಓಡೋಡಿ ಬಂದಿದ್ದಾರೆ.

    ಮನೆಯ ಬಳಿ ಬಂದ ವ್ಯಕ್ತಿ ಟೆರೆಸ್ ಕೆಳಗೆ ನಿಂತಿದ್ದು, ಈ ವೇಳೆ ಮಗುವನ್ನು ತನ್ನ ತೋಳುಗಳ ಮೂಲಕ ಕ್ಯಾಚ್ ಹಿಡಿಯುವ ರೀತಿ ನಿಂತಿದ್ದಾರೆ. ಈ ವೇಳೆ ಬಾಲಕನ ಸಹೋದರಿ ಆತನ ಕೈ ಬಿಟ್ಟಿದ್ದಾಳೆ. ಬಾಲಕ ಸುರಕ್ಷಿತವಾಗಿ ವ್ಯಕ್ತಿಯ ತೋಳಿನಲ್ಲಿ ಬಂದು ಸೇರಿದ್ದಾನೆ.

    ಬಾಲಕನನ್ನು ಮಣಪ್ಪರೈ ಸಮೀಪದ ಪಾಲಕೊಟ್ಟೈ ಗ್ರಾಮದವ ನಾಲ್ಕು ವರ್ಷದ ಎಡ್ರಿಕ್ ಎಝಿಲ್ ಎಂದು ಗುರುತಿಸಲಾಗಿದ್ದು, ಬಾಲಕನ ಸಹೋದರಿ 6 ವರ್ಷದ ಕವಿ ಎನ್ನಲಾಗಿದೆ. ಮಗುವಿನ ಪೋಷಕರಾದ ಜಾನ್ ಪೀಟರ್ ಹಾಗೂ ಜಾನ್ಸಿ ಮೇರಿ ಕೆಲಸ ನಿಮಿತ್ತ ಹೊರಗೆ ಹೋದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಘಟನೆ ಹೇಗಾಯ್ತು?
    ಅಕ್ಕ-ತಮ್ಮ ಇಬ್ಬರೂ ಟೆರೆಸ್ ಮೇಲೆ ಆಟವಾಡಲು ತೆರಳಿದ್ದಾರೆ. ಈ ವೇಳೆ ಎಝಿಲ್ ಇದ್ದಕ್ಕಿದ್ದಂತೆ ರೇಲಿಂಗ್ ಬಳಿ ಜಾರಿದ್ದಾನೆ. ನಂತರ ಗೋಡೆಯನ್ನು ಹಿಡಿದು ನೇತಾಡುತ್ತಿದ್ದ. ಕವಿ ತನ್ನ ಸಹೋದರ ಗೋಡೆಯ ಅಂಚಿನಲ್ಲಿ ನೇತಾಡುತ್ತಿದ್ದುದನ್ನು ಕಂಡು ತಕ್ಷಣವೇ ಅವನ ಕೈಗಳನ್ನು ಹಿಡಿದು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲು ಯತ್ನಿಸಿದ್ದಾಳೆ. ಅಲ್ಲದೆ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿಯುವಲ್ಲಿ ಸಹ ಯಶಸ್ವಿಯಾಗಿದ್ದಾಳೆ. ನಂತರ ನೆರೆ ಹೊರೆಯವರು ಬರುವಂತೆ ಜೋರಾಗಿ ಕಿರುಚಿದ್ದಾಳೆ.

    https://www.youtube.com/watch?v=qNL1w4eKDHc&feature=emb_logo

    ಅದೃಷ್ಟವೆಂಬಂತೆ ಬೀದಿ ಬದಿ ವ್ಯಾಪಾರಿ ಮೊಹಮ್ಮದ್ ಸಾಲಿಕ್ ಬಾಲಕಿ ಚೀರುವ ಧ್ವನಿಯನ್ನು ಕೇಳಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಮಗುವನ್ನು ರಕ್ಷಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಾಲಕನನ್ನು ಕಾಪಾಡುವ ಸಹೋದರಿ ಹಾಗೂ ಬೀದಿ ಬದಿ ವ್ಯಾಪಾರಿಯ ಪ್ರಯತ್ನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕುರಿಗಳನ್ನು ಬಿಟ್ಟು ಬರೋದಿಲ್ಲ- ಕುರಿಗಾಯಿಯನ್ನು ನಡುಗಡ್ಡೆಯಿಂದ ರಕ್ಷಿಸಲು ಸಿಬ್ಬಂದಿ ಹರಸಾಹಸ

    ಕುರಿಗಳನ್ನು ಬಿಟ್ಟು ಬರೋದಿಲ್ಲ- ಕುರಿಗಾಯಿಯನ್ನು ನಡುಗಡ್ಡೆಯಿಂದ ರಕ್ಷಿಸಲು ಸಿಬ್ಬಂದಿ ಹರಸಾಹಸ

    – ಐದು ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿದ್ದ ಕುರಿಗಾಯಿ
    – ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್‍ನಿಂದ ಕಾರ್ಯಾಚರಣೆ
    – 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ಸಾಹಸಮಯ ಕಾರ್ಯಾಚರಣೆ

    ಯಾದಗಿರಿ: ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿರುವ ಕುರಿಗಾಯಿ ಮನ ಒಲಿಸಲು ಎನ್‍ಡಿಆರ್‍ಎಫ್ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಜಪ್ಪಯ್ಯ ಅಂದರೂ ಕುರಿಗಾಯಿ ಮಾತ್ರ ತನ್ನ ಕುರಿಗಳನ್ನು ಬಿಟ್ಟು ಬರುವುದಿಲ್ಲ ಎಂದು ಹಠ ಹಿಡಿದಿದ್ದರು. ಸುಮಾರು 2 ಲಕ್ಷ ಕ್ಯೂಸೆಕ್ ನೀರು ದಾಟಿ ಎನ್‍ಡಿಆರ್‍ಎಫ್ ತಂಡ ಕುರಿಗಾಯಿ ಇರುವ ನಡುಗಡ್ಡೆ ಸ್ಥಳವನ್ನು ತಲುಪಿದ್ದು, ಕುರಿಗಾಯಿಯನ್ನು ಮನವೊಲಿಸಿ ರಕ್ಷಣಾ ಕಾರ್ಯ ಮಾಡಿದ್ದಾರೆ.

    ಜಿಲ್ಲೆಯ ನಾರಾಯಣಪುರದ ಐಬಿ ತಾಂಡ ಬಳಿಯ ಕೃಷ್ಣಾ ನದಿಯಲ್ಲಿ ಕುರಿಗಾಯಿ ಸಿಲುಕಿದ್ದರು. ರಕ್ಷಣಾ ತಂಡ ಕುರಿಗಾಯಿ ಟೋಪಣ್ಣ ಮನವೊಲಿಸಿ ನದಿಯ ಒಂದು ದಡಕ್ಕೆ ಕರೆ ತಂದಿದ್ದು, ನಡುಗಡ್ಡೆಯಲ್ಲಿದ್ದ ಶ್ವಾನದೊಂದಿಗೆ ಟೋಪಣ್ಣನನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಕುರಿಗಳನ್ನು ನಡುಗಡ್ಡೆಯಲ್ಲೇ ಬಿಟ್ಟು ಟೋಪಣ್ಣನನ್ನು ರಕ್ಷಣೆ ಮಾಡಲಾಗಿದೆ. ಯಾವುದೇ ಅಪಾಯವಿಲ್ಲದೆ ಕುರಿಗಾಯಿ ರಕ್ಷಣೆ ಮಾಡಲಾಗಿದ್ದು, 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ರೋಚಕ ಕಾರ್ಯಾಚರಣೆ ಮೂಲಕ ಕುರಿಗಾಯಿ ಮತ್ತು ನಾಯಿಯನ್ನು ರಕ್ಷಣೆ ಮಾಡಲಾಗಿದೆ.

    ಸುರಕ್ಷಿತವಾಗಿ ದಡ ಸೇರಿಸಿದ ಎನ್‍ಡಿಆರ್‍ಎಪ್ ತಂಡಕ್ಕೆ ಸ್ಥಳೀಯರು ಜಯ ಘೋಷ ಕೂಗಿದ್ದಾರೆ. ಶಾಸಕ ರಾಜೂಗೌಡ ಸಹ ರಕ್ಷಣಾ ತಂಡಕ್ಕೆ ಸನ್ಮಾನ ಮಾಡಿದ್ದಾರೆ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಎರಡೂ ತಂಡಗಳಿಗೆ ಅಗ್ನಿ ಶಾಮಕದಳದ ಸಿಬ್ಬಂದಿ ಸಹಾಯ ಮಾಡಿದ್ದಾರೆ.

    ಕುರಿಗಾಯಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ್ದರು. 250 ಕುರಿ, ನಾಲ್ಕು ನಾಯಿ ಜೊತೆ ಸಿಲುಕಿದ್ದರು. ಶನಿವಾರ ಸಂಜೆ ಡ್ರೋಣ್ ಮೂಲಕ ಕುರಿಗಾಯಿ ಸಿಲುಕಿರುವ ಸ್ಥಳ ಪತ್ತೆಯಾಗಿತ್ತು. ಇದೀಗ ಕಾರ್ಯಾಚರಣೆ ನಡೆಸಿ ಕುರಿಗಾಯಿ ಮತ್ತು ಕುರಿಗಳ ರಕ್ಷಣೆ ಮಾಡಲಾಗಿದೆ.

  • ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ

    ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ

    – ಒಬ್ಬ ಪ್ರಯಾಣಿಕನನ್ನು ನನ್ನ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದೆ
    – ಪತ್ನಿ, ಮಗುವಿಗಾಗಿ ಆತ ಅಳುತ್ತಿದ್ದ ದೃಶ್ಯ ಇನ್ನೂ ಕಣ್ಣಮುಂದಿದೆ

    ತಿರುವನಂತಪುರಂ: ಕೇರಳದ ಕೋಯಿಕ್ಕೊಡ್ ವಿಮಾನ ನಿಲ್ದಾಣದ ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಘಟನೆ ನಡೆದ ನಂತರ ರಕ್ಷಣಾ ಕಾರ್ಯ ಸಹ ಅದೇ ರೀತಿ ಭರದಿಂದ ಸಾಗಿದೆ. ಹೀಗಾಗಿಯೇ ಹಲವರ ಜೀವ ಉಳಿದಿದೆ. ಆದರೆ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದಾಗಿದೆ. ವಿಮಾನ ವಿದೇಶದಿಂದ ಬಂದರೂ ಕೊರೊನಾ ಸೋಂಕು ತಗುಲುವ ಭಯವಿಲ್ಲದೆ ಹಲವರ ಜೀವವನ್ನು ರಕ್ಷಿಸಿದ್ದಾರೆ.

    ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವರ್ಷಗಟ್ಟಲೇ ಅನುಭವವಿರುತ್ತದೆ. ಆದರೆ ಸಾಮಾನ್ಯ ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆದರೂ ಸಹ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪೈಕಿ ಸ್ಥಳೀಯರಾದ ಫಝಲ್ ಪುಥಿಯಾಕಥ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಘಟನೆ ನಡೆಯುತ್ತಿದ್ದಂತೆಯೇ 32 ವರ್ಷದ ಬ್ಯುಸಿನೆಸ್ ಮ್ಯಾನ್ ಹಾಗೂ ಸ್ಥಳೀಯರು ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಅವಘಡ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಒಟ್ಟು 190 ಪ್ರಯಾಣಿಕರ ಪೈಕಿ ದುರ್ಘಟನೆಯಲ್ಲಿ 18 ಜನ ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ವಿಮಾನ ಅವಘಡ ಸಂಭವಿಸುತ್ತಿದ್ದಂತೆ ಬ್ಲಾಸ್ಟ್ ಆದ ರೀತಿ ದೊಡ್ಡ ಶಬ್ದ ಕೇಳಿಸಿದ್ದು, ತಕ್ಷಣವೇ ನಾನು ಹಾಗೂ ಇತರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆವು. ಸ್ಥಳಕ್ಕೆ ಆಗಮಿಸಿದಾಗ ವಿಮಾನದಲ್ಲಿದ್ದವರೆಲ್ಲ ಕಿರುಚಾಡುತ್ತಿದ್ದರು. ಸಾಕಷ್ಟು ಜನ ರಕ್ತದ ಮಡುವಿನಲ್ಲಿದ್ದರು. ಹಲವರಿಗೆ ಗಂಭೀರ ಗಾಯಗಳಾಗಿದ್ದರೆ, ಇನ್ನೂ ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅಪಘಾತದ ಪರಿಣಾಮ ಎಷ್ಟಿತ್ತೆಂದರೆ ಬೋಯಿಂಗ್ 737 ಮುಂದಿನ ಭಾಗ ಸುಮಾರು 20 ಮೀಟರ್ ನಷ್ಟು ಹಿಂದೆ ಬಿದ್ದಿತ್ತು. ಅಷ್ಟರ ಮಟ್ಟಿಗೆ ವಿಮಾನ ಅಪ್ಪಳಿಸಿತ್ತು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪುಥಿಯಾಕಥ್ ಭೀಕರತೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ನಾವು ತೆರೆಳಿದಾಗ ಆಗಲೇ ಇಬ್ಬರು ಪೈಲೆಟ್‍ಗಳು ಸಾವನ್ನಪ್ಪಿದ್ದರು. ವಿಮಾನಕ್ಕೆ ಬೆಂಕಿ ತಗುಲಿದ್ದರೆ ಇನ್ನೂ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

    ವಿಮಾನ ದುರಂತ ಸಂಭವಿಸಿದಾಗ ರಕ್ಷಣಾ ಕಾರ್ಯವನ್ನು ಹೇಗೆ ನಡೆಸಬೇಕು ಎಂಬುದನ್ನು ನಾನು ಈ ಹಿಂದೆ ದೂರದಿಂದ ನೋಡಿದ್ದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಡಮ್ಮಿ ವಿಮಾನದಿಂದ ಇದನ್ನು ಮಾಡುತ್ತಾರೆ. ಆದರೆ ಈ ಪ್ರಯೋಗವೇ ಬೇರೆ ವಾಸ್ತವವೇ ಬೇರೆ ಎಂದು ಈ ಘಟನೆ ನೋಡಿದ ಬಳಿಕ ತಿಳಿಯಿತು. ನಾವು ಹೇಗೆ ಸಿದ್ಧರಿದ್ದೇವೆ ಎಂಬುದು ಮುಖ್ಯವಲ್ಲ, ಸ್ಥಳದಲ್ಲಿ ಸಾವು, ನೋವು ಸಂಭವಿಸಿದಾಗ ಪರಿಸ್ಥಿತಿ ಬೇರೆ ರೀತಿಯೇ ಆಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕಾಗುತ್ತದೆ ಎಂದು ಪುಥಿಯಾಕಥ್ ತಿಳಿಸಿದ್ದಾರೆ.

    ಪ್ರಯಾಣಿಕರಲ್ಲಿ ಯಾರಿಗೆ ಕೊರೊನಾ ಸೋಂಕು ತಗುಲಿರುತ್ತದೆಯೋ ಎಂಬುದರ ಕುರಿತು ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಸಾಧ್ಯವಾದಷ್ಟು ಜನರನ್ನು ಉಳಿಸಬೇಕೆಂಬುದಷ್ಟೇ ನಮ್ಮ ತಲೆಯಲ್ಲಿತ್ತು ಎಂದು ಪುಥಿಯಾಕಥ್ ತಿಳಿಸಿದ್ದಾರೆ.

    ಇಂತಹ ಪರಿಸ್ಥಿತಿಯಲ್ಲಿಯೂ ಒಬ್ಬ ಪ್ರಯಾಣಿನನ್ನು ನನ್ನ ಕಾರಿನಲ್ಲಿಯೇ ಆಸ್ಪತ್ರೆ ಸೇರಿಸಿದೆ. ಈ ವೇಳೆ ವ್ಯಕ್ತಿ ತನ್ನ ಪತ್ನಿ ಹಾಗೂ ಮಗುವಿಗಾಗಿ ಅಳುತ್ತಿದ್ದ. ಇದನ್ನು ನಾನು ಎಂದೂ ಮರೆಯುವುದಿಲ್ಲ. ನಾನು ಕಾರನ್ನು ಪರಿಶೀಲಿಸಿಲ್ಲ, ಖಂಡಿತವಾಗಿಯೂ ಹಿಂದಿನ ಸೀಟ್ ರಕ್ತವಾಗಿರುತ್ತದೆ. ನಾನೊಬ್ಬ ಮಾತ್ರವಲ್ಲ ನನ್ನಂತೆ ಹಲವರು ಚಿಕ್ಕ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಿಜಕ್ಕೂ ಈ ದೃಶ್ಯ ಆಘಾತಕಾರಿಯಾಗಿತ್ತು ಎಂದು ವಿವರಿಸಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಒಂದೇ ಭಾರತ್ ಮಿಷನ್ ಅಡಿ ಸರ್ಕಾರ ಏರ್ ಇಂಡಿಯಾ ವಿಮಾನಗಳ ಹಾರಾಟ ನಡೆಸುತ್ತಿದೆ. ಇದರ ಭಾಗವಾಗಿ ದುಬೈನಿಂದ ವಿಮಾನ ಕೇರಳದ ಕೋಯಿಕ್ಕೊಡ್‍ಗೆ ಆಗಮಿಸಿದೆ. ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಕರಿದ್ದರು. ಕೋಯಿಕ್ಕೊಡ್ ಟೇಬಲ್-ಟಾಪ್ ವಿಮಾನ ನಿಲ್ದಾಣವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.