Tag: Republic Day 2025

  • ದೆಹಲಿ ಗಣರಾಜ್ಯೋತ್ಸವ 2025 – ಲಕ್ಕುಂಡಿ ಸ್ತಬ್ಧಚಿತ್ರಕ್ಕೆ ವೋಟ್‌ ಮಾಡಲು ಹೇಮಂತ್ ನಿಂಬಾಳ್ಕರ್ ಮನವಿ

    ದೆಹಲಿ ಗಣರಾಜ್ಯೋತ್ಸವ 2025 – ಲಕ್ಕುಂಡಿ ಸ್ತಬ್ಧಚಿತ್ರಕ್ಕೆ ವೋಟ್‌ ಮಾಡಲು ಹೇಮಂತ್ ನಿಂಬಾಳ್ಕರ್ ಮನವಿ

    ಬೆಂಗಳೂರು: ದೆಹಲಿಯಲ್ಲಿ ಜ.26 ರಂದು ನಡೆದ 76ನೇ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ (Republic Day 2025) ಭಾಗವಹಿಸಿದ್ದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಜನಾಭಿಪ್ರಾಯ ಆಧರಿಸಿ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯವು ಆನ್‌ಲೈನ್‌ನಲ್ಲಿ ವೋಟ್‌ ಮಾಡಲು ಅವಕಾಶ ಕಲ್ಪಿಸಿದೆ. ಈ ಬಾರಿ ಕರ್ನಾಟಕ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರದೊಂದಿಗೆ (Lakkundi Tableau) ಭಾಗವಹಿಸಿತ್ತು. ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ರಾಜ್ಯದ ಸ್ತಬ್ಧಚಿತ್ರವನ್ನು ಓಟ್ ಮಾಡಿ ಬೆಂಬಲಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಮನವಿ ಮಾಡಿದ್ದಾರೆ.

    ಕೇಂದ್ರ ಸರ್ಕಾರವು ಅತ್ಯುತ್ತಮ ಸ್ತಬ್ಧಚಿತ್ರದ ಆಯ್ಕೆಗಾಗಿ ಸಾರ್ವಜನಿಕರು ಆನ್‌ಲೈನ್‌ನಲ್ಲಿ, ಇಮೇಲ್ ಮತ್ತು ಎಸ್ಎಂಎಸ್ ಮೂಲಕ ವೋಟ್‌ ಮಾಡಲು ಅವಕಾಶ ಕಲ್ಪಿಸಿದೆ. ಜ.28ರ ಮಧ್ಯರಾತ್ರಿ 12ರ ವರೆಗೆ ಓಟ್ ಮಾಡಲು ಅವಕಾಶವಿದೆ. ಸಾರ್ವಜನಿಕರು ನಿಗದಿತ ಅವಧಿಯೊಳಗೆ ಓಟ್ ಮಾಡಿ ರಾಜ್ಯದ ಸ್ತಬ್ಧಚಿತ್ರವನ್ನು (Karnataka’s Republic Day Tableau) ಬೆಂಬಲಿಸುವಂತೆ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

    ವೋಟ್‌ ಮಾಡುವ ವಿಧಾನದ ಬಗ್ಗೆ ಇಲಾಖೆಯು ಕಿರುಚಿತ್ರವನ್ನು ಸಹ ಬಿಡುಗಡೆಗೊಳಿಸಿದೆ. ಇದನ್ನು ಅನುಸರಿಸಿ, Lakkundi Cradle of stone Craft ವಿಷಯದ ಸ್ತಬ್ಧಚಿತ್ರಕ್ಕೆ ಹೆಚ್ಚು ಹೆಚ್ಚು ಓಟ್ ಮಾಡುವ ಮೂಲಕ ಬೆಂಬಲ ಹಾಗೂ ಮೆಚ್ಚುಗೆ ಸೂಚಿಸಬೇಕೆಂದೂ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

    https://www.mygov.in/group-poll/vote-your-favourite-tableau-and-marching-contingent-republic-day-parade-2025/ ಲಿಂಕ್‌ನ್ನು ಕ್ಲಿಕ್ ಮಾಡಿ, Login to participate ಮೇಲೆ ಕ್ಲಿಕ್ ಮಾಡಿ, ತಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ವಿವರ ನಮೂದಿಸಿ, ತಾವು ಸ್ವೀಕರಿಸುವ ಒಟಿಪಿ ನಮೂದಿಸಿ, ನಂತರ Resend. OTP/ Submitted ಇದರಲ್ಲಿ submitt ಕ್ಲಿಕ್ ಮಾಡಿ, ಎಲ್ಲಾ ಸ್ತಬ್ಧಚಿತ್ರಗಳ ಮಾಹಿತಿ ಕಾಣುತ್ತದೆ.Lakkundi : cradle of stone craft ಕ್ಲಿಕ್ ಮಾಡಿ ತಮ್ಮ ಮತವನ್ನು ದಾಖಲಿಸಬಹುದು.‌

    ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ MYGOVPOLL 357037,12 ಟೈಫ್ ಮಾಡಿ 7738299899 ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಓಟ್ ಮಾಡಬಹುದಾಗಿದೆ.

  • 76ನೇ ಗಣರಾಜ್ಯೋತ್ಸವ – ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ, ಸೇನಾ ಶಕ್ತಿ ಪ್ರದರ್ಶನ

    76ನೇ ಗಣರಾಜ್ಯೋತ್ಸವ – ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ, ಸೇನಾ ಶಕ್ತಿ ಪ್ರದರ್ಶನ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ಥವ್ಯ ಪಥದಲ್ಲಿ ನಡೆದ ಪಥಸಂಚಲನ (Republic Day Parade) ಗಮನ ಸೆಳೆಯಿತು.

    ಭಾರತೀಯ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಿಮಿತ್ತ ಈ ಬಾರಿ ʻಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿʼ ಥೀಮ್‌ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಯಿತು. ಸೇನಾ ಪರೇಡ್ ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್‌ ಯುದ್ಧ ವೀರರು ಹಾಗೂ ಓರ್ವ ಅಶೋಕ ಚಕ್ರ ಪುರಸ್ಕೃತರು ಪರೇಡ್ ನಲ್ಲಿ ಭಾಗಿಯಾಗಿರುವುದು ವಿಶೇಷವಾಗಿತ್ತು. ಇದೇ ವೇಳೆ ಎಲ್ಲಾ ರಾಜ್ಯಗಳ ಸ್ತಬ್ಧ ಚಿತ್ರಗಳು ಆಯಾ ರಾಜ್ಯಗಳ ಹೆಮ್ಮೆಯ ಪ್ರತೀಕವಾಗಿದ್ದವು.

    ಅದರಲ್ಲೂ ಈ ಬಾರಿ ಮಧ್ಯಪ್ರದೇಶದ ಚೀತಾ ಯೋಜನೆ, ಉತ್ತರ ಪ್ರದೇಶದ ಮಹಾ ಕುಂಭಮೇಳ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಲಕ್ಪತಿ ದೀದಿ ಯೋಜನೆ ಬಿಂಬಿಸುವ‌ ಟ್ಯಾಬ್ಲೊಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

    ಸೇನಾ ಶಕ್ತಿ ಪ್ರದರ್ಶನ:
    ಪರೇಡ್‌ನಲ್ಲಿ 22 ಯುದ್ಧ ವಿಮಾನಗಳು, 11 ಸಾರಿಗೆ ವಿಮಾನಗಳು ಹಾಗೂ 7 ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 40 ವಿಮಾನಗಳು ಹತ್ತು ವಿಭಿನ್ನ ನೆಲೆಗಳಿಂದ ಹಾರಾಟ ನಡೆಸಿದವು. 130ಜೆ ಸೂಪರ್ ಹರ್ಕ’ಯುಲಸ್, ಸಿ-275, ಸಿ-17 ಗ್ರೋಬ್ ಮಾಸ್ಟರ್, ಪಿ-8ಐ, ಮಿಗ್-29 ಮತ್ತು ಸುಖೋಯ್-30, ಇತರ ವಿಮಾನಗಳು ದೇಶದ ಗರಿಮೆಗೆ ಸಾಕ್ಷಿಯಾದವು.

    ಸಾಂಸ್ಕೃತಿಕ ಕಲಾ ಪ್ರದರ್ಶನ:
    ಇದೇ ಮೊದಲಬಾರಿಗೆ ಕರ್ತವ್ಯ ಪಥದಲ್ಲಿ 5,000 ಜನಪದ ಮತ್ತು ಬುಡಕಟ್ಟು ಕಲಾವಿದರು ತಮ್ಮದೇ ಆದ ಮೂಲ ಮತ್ತು ಅಧಿಕೃತ ವೇಷಭೂಷಣಗಳು, ಆಭರಣಗಳು, ಶಿರಸ್ತ್ರಾಣಗಳು ಮತ್ತು ಈಟಿಗಳು, ಕತ್ತಿಗಳು ಮತ್ತು ಡ್ರಮ್‌ಗಳಂತಹ ಸಾಂಪ್ರದಾಯಿಕ ಪರಿಕರಗಳೊಂದಿಗೆ ನೃತ್ಯ ಪ್ರದರ್ಶನ ಮಾಡಿದರು. ವಿಭಿನ್ನ ಸಂಸ್ಕೃತಿಗಳನ್ನು ಕಲೆಯಲ್ಲಿ ಪ್ರದರ್ಶಿಸಿದ್ದು ಆಕರ್ಷಕವಾಗಿತ್ತು.

    ಬೈಕ್ ಸಿಗ್ನಲ್ ಕಾರ್ಪ್ಸ್ ತಂಡದಿಂದ ವಿಶಿಷ್ಟ ಸಾಹಸ:
    ಬೈಕ್ ಸಿಗ್ನಲ್ ಕಾರ್ಪ್ಸ್ ತಂಡ ಚಲಿಸುವ ಮೋಟಾರ್‌ಬೈಕ್‌ ತಂಡ ವಿಶಿಷ್ಠ ಸಾಧನೆಗೆ ಸಾಕ್ಷಿಯಾಯಿತು. ಬೈಕ್‌ನಲ್ಲಿ ಅಳವಡಿಸಲಾದ 12 ಅಡಿ ಏಣಿಯ ಮೇಲೆ ರಾಷ್ಟ್ರಪತಿಗಳಿಗೆ ಸೆಲ್ಯೂಟ್ ಸಲ್ಲಿಸಿದ ಮೊದಲ ಮಹಿಳಾ ಭಾರತೀಯ ಸೇನಾಧಿಕಾರಿ ಎಂಬ ವಿಶ್ವ ದಾಖಲೆಯನ್ನೂ ಬರೆಯಿತು. ಇದೇ ವೇಳೆ ʻತ್ರೀ ಪೀಕ್ ಡೆವಿಲ್ ರಚನೆʼ ಮೂಲಕ ಪ್ರೇಕ್ಷಕರ ಮನಗೆದ್ದಿತು.

  • 76ನೇ ಗಣರಾಜ್ಯೋತ್ಸವದ ಸಂಭ್ರಮ – ರಾಷ್ಟ್ರಪತಿಯಿಂದ ಧ್ವಜಾರೋಹಣ

    76ನೇ ಗಣರಾಜ್ಯೋತ್ಸವದ ಸಂಭ್ರಮ – ರಾಷ್ಟ್ರಪತಿಯಿಂದ ಧ್ವಜಾರೋಹಣ

    ನವದೆಹಲಿ: 76ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ದೆಹಲಿಯ ಕರ್ತವ್ಯ ಪಥದಲ್ಲಿ (Kartavya Path) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಬೆಳಗ್ಗೆ 10:30ಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸೇನಾ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಠಿ ಸಲ್ಲಿಸಲಾಯಿತು.

    ಈ ಬಾರಿ ಮುಖ್ಯ ಅತಿಥಿಗಳಾಗಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಆಗಮಿಸಿದ್ದಾರೆ. ಹಾಗೆಯೇ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ (Narendra Modi), ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಹುತಾತ್ಮ ಯೋಧರಿಗೆ ಮೋದಿ ಗೌರವ
    76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಮಡಿದ ವೀರರಿಗೆ ಗೌರವ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನು ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು.

    ಪರೇಡ್‌ನಲ್ಲಿ ದೇಶದ ಮಿಲಿಟರಿ ಶಕ್ತಿ ಜೊತೆಗೆ ದೇಶದ ಭವ್ಯ ಪರಂಪರೆ, ಸಂಸ್ಕೃತಿಯ ಅನಾವರಣಗೊಳ್ಳುತ್ತಿದೆ. ಈ ಬಾರಿ ʻಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿʼ ಥೀಮ್‌ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಗುತ್ತಿದ್ದು, 10,000 ಗಣ್ಯರು ಪಾಲ್ಗೊಂಡಿದ್ದಾರೆ. ಅಲ್ಲದೇ 5,000 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

  • 76ನೇ ಗಣರಾಜ್ಯೋತ್ಸವದ ಸಂಭ್ರಮ – ಬೆಂಗಳೂರಿನಲ್ಲಿ ರಾಜ್ಯಪಾಲ ಗ್ಲೆಹ್ಲೋಟ್‌ರಿಂದ ಧ್ವಜಾರೋಹಣ

    76ನೇ ಗಣರಾಜ್ಯೋತ್ಸವದ ಸಂಭ್ರಮ – ಬೆಂಗಳೂರಿನಲ್ಲಿ ರಾಜ್ಯಪಾಲ ಗ್ಲೆಹ್ಲೋಟ್‌ರಿಂದ ಧ್ವಜಾರೋಹಣ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 76ನೇ ಗಣರಾಜ್ಯೋತ್ಸವದ (Republic Day 2025) ಆಚರಣೆ ಸಂಭ್ರಮದಿಂದಲೇ ನೆರವೇರಿತು. ಸರಿಯಾಗಿ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಮಾಣೆಕ್ಷಾ ಪರೇಡ್ ಮೈದಾನದಲ್ಲಿ (Manekshaw Parade Ground) ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.

    ನಂತರ ಪೊಲೀಸರಿಂದ ವಂದನಾ ಗೌರವ ಸ್ವೀಕರಿಸಿ, ಪರೇಡ್‌ ವೀಕ್ಷಿಸಿದ ರಾಜ್ಯಪಾಲರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು – 10,000 ಗಣ್ಯರಿಗೆ ಆಹ್ವಾನ, ಮಿಲಿಟರಿ ಶಕ್ತಿ ಅನಾವರಣ

    ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದು, 8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ ಸೇರಿ 1051 ಪೊಲೀಸರ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ 114 ಪಿಎಸ್​​ಐ, 58 ಎಎಸ್ಐ, 80 ಸಿಬ್ಬಂದಿ, 30 ಕ್ಯಾಮೆರಾ ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿದೆ. ಬಂದೋಬಸ್ತ್​​ಗೆ 10 ಕೆಎಸ್​ಆರ್​ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡನ್ನು ನಿಯೋಜನೆ ಮಾಡಲಾಗಿದೆ.

    ಅಲ್ಲದೆ, ಮೈದಾನದ ಸುತ್ತ ಒಟ್ಟು 103 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಕಲರ್ ಕೋಡ್​ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್ ಬಣ್ಣದ ಪಾಸ್ ನೀಡಲಾಗುತ್ತದೆ. ವಿಐಪಿ ಪಾಸ್ ಇದ್ದವರು ಗೇಟ್-2ರ ಮೂಲಕ ಪ್ರವೇಶಿಸಬಹುದು. ಮುಖ್ಯ ಅತಿಥಿಗಳು, ಗಣ್ಯರು ಗೇಟ್-3 ಮೂಲಕ ಪ್ರವೇಶಿಸಬಹುದು. ಗೇಟ್-4ರಲ್ಲಿ ಬಿಳಿ ಪಾಸ್ ನೀಡಲಾಗುತ್ತದೆ. ಇಲ್ಲಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್​ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ 2025 – ದೇಶದ ಜನತೆಗೆ ಶುಭಕೋರಿದ ಪ್ರಧಾನಿ, ಸಿಎಂ

  • ಗಣರಾಜ್ಯೋತ್ಸವ 2025 – ದೇಶದ ಜನತೆಗೆ ಶುಭಕೋರಿದ ಪ್ರಧಾನಿ, ಸಿಎಂ

    ಗಣರಾಜ್ಯೋತ್ಸವ 2025 – ದೇಶದ ಜನತೆಗೆ ಶುಭಕೋರಿದ ಪ್ರಧಾನಿ, ಸಿಎಂ

    – ಇದು ಬಲಿಷ್ಠ ಭಾರತ ನಿರ್ಮಿಸುವ ರಾಷ್ಟ್ರೀಯ ಹಬ್ಬ: ಮೋದಿ

    ನವದೆಹಲಿ / ಬೆಂಗಳೂರು: ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲೂ ಸಂಭ್ರಮ, ಸಡಗರದಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಗಣತಂತ್ರ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಕೋರಿದ್ದಾರೆ.

    ತಮ್ಮ ಎಕ್ಸ್‌ ಖಾತೆಯಲ್ಲಿ ವಿಶೇಷ ಸಂದೇಶ ಹಂಚಿಕೊಳ್ಳುವ ಮೂಲಕ ದೇಶದ ಹಾಗೂ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

    ಪ್ರಧಾನಿ ಮೋದಿ ಸಂದೇಶ ಏನು?
    ದೇಶದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು… ಈ ಸಂದರ್ಭದಲ್ಲಿ, ನಮ್ಮ ಸಂವಿಧಾನವನ್ನು ರಚಿಸುವ ಮೂಲಕ, ನಮ್ಮ ಅಭಿವೃದ್ಧಿ ಪಯಣವು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯ ಮೇಲೆ ಆಧಾರಿತವಾಗಿದೆ ಎಂದು ಖಚಿತಪಡಿಸಿದ ಎಲ್ಲ ಮಹಾನ್ ವ್ಯಕ್ತಿಗಳಿಗೆ ನಾವು ಗೌರವ ಸಲ್ಲಿಸುತ್ತೇವೆ. ಈ ರಾಷ್ಟ್ರೀಯ ಹಬ್ಬವು ನಮ್ಮ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುತ್ತದೆ. ಅಲ್ಲದೇ ಬಲಿಷ್ಠ ಮತ್ತು ಸಮೃದ್ಧ ಭಾರತ ರಚಿಸುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ಎಕ್ಸ್‌ ಖಾತೆ ಸಂದೇಶ:
    ನಾಡಿನ ಸಮಸ್ತ ಬಂಧುಗಳಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು… ಸಂವಿಧಾನ ಜಾರಿಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡ 75 ವರ್ಷಗಳ ನಂತರವೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ಇದು ಗತವೈಭವದಲ್ಲಿ ಮೈಮರೆಯದೆ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುವ ಕಾಲ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಸಂವಿಧಾನದ ಮೂರು ಮುಖ್ಯ ಆಧಾರ ಸ್ಥಂಭಗಳು ಭದ್ರವಾಗಿದ್ದು ಆರೋಗ್ಯಕರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂವಿಧಾನದ ಪಾಲನೆಯಾಗುತ್ತಿದೆ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ ಎಂದು ಅರ್ಥ.

    ಕಟುವಾದ ಸತ್ಯ ಏನೆಂದರೆ ಸರ್ವಾಧಿಕಾರದ ದಂಡದಡಿ ನಮ್ಮ ಕಾರ್ಯಾಂಗ ಕರ್ತವ್ಯಭ್ರಷ್ಟಗೊಳ್ಳುತ್ತಿದೆ, ಶಾಸಕಾಂಗವನ್ನು ಖರೀದಿಸಲಾಗುತ್ತಿದೆ ಮತ್ತು ನ್ಯಾಯಾಂಗಕ್ಕೆ ಬೆದರಿಕೆ ಒಡ್ಡಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಆಧಾರ ಸ್ಥಂಭಗಳು ದುರ್ಬಲಗೊಂಡು ಶಕ್ತಿಹೀನವಾದಾಗ ಸಂವಿಧಾನವೇ ಅಪ್ರಸ್ತುತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆಗಳಿವೆ. ಇಂತಹದ್ದೊಂದು ಅಪಾಯದ ಸ್ಥಿತಿಯಲ್ಲಿ ಭಾರತ ಇಂದು ನಿಂತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ.

    ಜಾತಿ, ಮತ, ಪಂಥ, ಪ್ರದೇಶದ ಭೇದಗಳನ್ನು ಮರೆತು ಇಡೀ ದೇಶ ಒಂದಾಗಿ ಹೊರಗಿನ ಶತ್ರುಗಳನ್ನು ಹೊಡೆದೋಡಿಸಲು ಹೇಗೆ ಸ್ವಾತಂತ್ರ್ಯಹೋರಾಟ ನಡೆಸಲಾಯಿತೋ, ಅಂತಹದ್ದೇ ಒಂದು ಹೋರಾಟವನ್ನು ದೇಶದೊಳಗಿನ ಸಂವಿಧಾನ ವಿರೋಧಿ ಶತ್ರುಗಳ ವಿರುದ್ಧ ನಡೆಸಬೇಕಾಗಿದೆ. ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯದೆ ಹೋದರೆ ಮುಂದಿನ ಪೀಳಿಗೆಗೆ ಬದುಕುಳಿಯಲು ಪ್ರಜಾಪ್ರಭುತ್ವ ಇರುವುದಿಲ್ಲ. ಇದೊಂದು ಜೀವನ್ಮರಣದ ಪ್ರಶ್ನೆಯಾಗಿದ್ದು, ಗಣರಾಜ್ಯೋತ್ಸವದ ದಿನವಾದ ಇಂದು ನಾವೆಲ್ಲರೂ ಒಗ್ಗೂಡಿ ದೃಢಚಿತ್ತದಿಂದ ಸಂವಿಧಾನವನ್ನು ಉಳಿಸುವ ಸಂಕಲ್ಪ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಮೂಲಕ ನಮ್ಮ ಭಾರತವನ್ನು ರಕ್ಷಿಸುವ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳು.

    ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ನಮ್ಮ ಕಾಂಗ್ರೆಸ್ ಪಕ್ಷ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ನಾಡ ಬಾಂಧವರೆಲ್ಲರೂ ಪಕ್ಷ, ಪಂಥ, ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಈ ಅಭಿಯಾನದಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ನಾಡಬಾಂಧವರಿಗೆಲ್ಲ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್.. ʻಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ʼ ಎಂದು ಬರೆದುಕೊಂಡಿದ್ದಾರೆ.

  • 76ನೇ ಗಣರಾಜೋತ್ಸವಕ್ಕೆ ಸಕಲ ಸಿದ್ಧತೆ – ಭದ್ರತೆ ಹೇಗಿದೆ?

    76ನೇ ಗಣರಾಜೋತ್ಸವಕ್ಕೆ ಸಕಲ ಸಿದ್ಧತೆ – ಭದ್ರತೆ ಹೇಗಿದೆ?

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆ ನಡೆಯಲಿರುವ ಗಣರಾಜೋತ್ಸವಕ್ಕೆ (Republic Day) ಸಕಲ ಸಿದ್ಧತೆ ನಡೆದಿದ್ದು, ಕರ್ತವ್ಯ ಪಥ್‌ನಲ್ಲಿ ಪರೇಡ್‌ಗೆ ತಯಾರಿ ಕೂಡ ಮಾಡಲಾಗುತ್ತಿದೆ.

    ಜನವರಿ 26 ಭಾನುವಾರದಂದು 76ನೇ ಗಣರಾಜೋತ್ಸವ ಆಚರಣೆ ಹಿನ್ನೆಲೆ ದೆಹಲಿಯ ಕೆಂಪುಕೋಟೆಯಲ್ಲಿ ಗಣರಾಜೋತ್ಸವ ಸಂಭ್ರಮಕ್ಕಾಗಿ ಸಕಲ ಸಿದ್ಧತೆ ನಡೆದಿದ್ದು, ಅಂತಿಮ ಹಂತದ ತಯಾರಿಯೂ ಪೂರ್ಣಗೊಂಡಿದೆ. ಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿ ಥೀಮ್‌ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಗುತ್ತಿದ್ದು, ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸಮ್ಮುಖದಲ್ಲಿ ಪರೇಡ್ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ.ಇದನ್ನೂ ಓದಿ: Republic Day | ನಾಳೆ ಬೆಳಗ್ಗೆ 6 ರಿಂದಲೇ ಮೆಟ್ರೋ ಸಂಚಾರ

    ಪರೇಡ್‌ನಲ್ಲಿ 15 ರಾಜ್ಯಗಳು, ಕೇಂದ್ರಾಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಂದ ಸ್ತಬ್ಧಚಿತ್ರ ಪ್ರದರ್ಶನ, ಹತ್ತು ಸಾವಿರಕ್ಕೂ ಅಧಿಕ ವಿಶೇಷ ಅತಿಥಿಗಳು, ಒಂದು ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗಲಿದ್ದಾರೆ.

    ಕಾರ್ಯಕ್ರಮದ ಹಿನ್ನೆಲೆ ಕರ್ತವ್ಯ ಪಥ್ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, 15,000ಕ್ಕೂ ಅಧಿಕ ಪೊಲೀಸರು, 70 ಪ್ಯಾರಾ ಮಿಲಿಟರಿ ಕಂಪನಿಗಳ ನಿಯೋಜನೆ ಮಾಡಲಾಗಿದೆ. ಒಟ್ಟು ಆರು ಹಂತಗಳಲ್ಲಿ ಭದ್ರತೆಯನ್ನು ಮಾಡಿಕೊಳ್ಳಲಾಗಿದ್ದು, ಎಲ್ಲ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ, 500 ಎಐ ಕ್ಯಾಮೆರಾಗಳ ಅಳವಡಿಸಲಾಗಿದೆ. 40 ಅಧಿಕ ಕಂಟ್ರೋಲ್ ರೂಂಗಳಿಂದ ಇಡೀ ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

  • ಗಣರಾಜ್ಯೋತ್ಸವ 2025 – ಈ ಬಾರಿಯ ವಿಶೇಷತೆಗಳೇನು?

    ಗಣರಾಜ್ಯೋತ್ಸವ 2025 – ಈ ಬಾರಿಯ ವಿಶೇಷತೆಗಳೇನು?

    .26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನ (Republic Day) ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮ, ದೇಶಭಕ್ತಿಗಳಿಂದ ಆಚರಿಸುತ್ತೇವೆಯೋ ಅಷ್ಟೇ ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನೂ ಆಚರಿಸುತ್ತೇವೆ.

    ಆ.15 ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯ ಪಡೆದುಕೊಂಡ ದಿನವಾದರೆ, ಜ.26 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ. ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ದಿನ. ಈ ಬಾರಿ ಭಾರತ 76ನೇ ಗಣರಾಜ್ಯೋತ್ಸವ ದಿನವನ್ನು ಜನವರಿ26ನೇ ಭಾನುವಾರ ಆಚರಿಸುತ್ತಿದೆ. ಈ ಬಾರಿಯ ವಿಶೇಷತೆಗಳೇನು? ಟಿಕೆಟ್‌ ಬುಕ್ಕಿಂಗ್‌ ಹೇಗೆ? ಯಾಕೆ ಗಣರಾಜ್ಯೋತ್ಸವವನ್ನು ಜ.26ರಂದೇ ಆಚರಿಸುತ್ತಾರೆ ಎಂಬ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಜ.26ರಂದೇ ಗಣರಾಜ್ಯೋತ್ಸವ ಆಚರಣೆ ಯಾಕೆ?
    1929 ರ ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಸೆಷನ್ ನಲ್ಲಿ ಜವಹಾರ್ ಲಾಲ್ ನೆಹರು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 26, 1930 ಕ್ಕೆ ದೇಶ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಅದನ್ನೇ ಪೂರ್ಣ ಸ್ವರಾಜ್ ದಿವಸ್ ಅಥವಾ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಘೋಷಣೆ ಮಾಡಲಾಗಿತು. ಆದರೆ ಇದು 1947 ವರೆಗೂ ಈಡೇರಲಿಲ್ಲ. ಆದ್ದರಿಂದ ನಿರ್ಣಯದಲ್ಲಿ ಕೈಗೊಂಡಂತೆ ಮೊದಲು ಆಚರಣೆ ಮಾಡಬೇಕೆಂದುಕೊಂಡಿದ್ದ ಸ್ವಾತಂತ್ರ್ಯ ದಿನದ ದಿನಾಂಕವಾದ ಜ.26 ರಂದೇ ಸಂವಿಧಾನವನ್ನು ಜಾರಿಗೊಳಿಸಲಾಯಿತು.

    ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶವು ಭಾರತವಾಗಿದೆ. 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಕೂಡ ನಮ್ಮ ದೇಶವು ಸಂವಿಧಾನವನ್ನು ಹೊಂದಿರಲಿಲ್ಲ. 26 ಜನವರಿ 1950 ರಂದು ಸಂವಿಧಾನವನ್ನು ಸ್ಥಾಪನೆ ಮಾಡಿದ ದಿನವಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

    ಗಣರಾಜ್ಯೋತ್ಸವ ದಿನದ ಮಹತ್ವ ಹಾಗೂ ಆಚರಣೆ:
    1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ ಗಣರಾಜ್ಯ ಎಂದು ಘೋಷಿಸಲ್ಪಟ್ಟ ದಿನವಾಗಿದೆ. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್‌ 9ರಂದು ತನ್ನ ಮೊದಲ ಅಧಿವೇಶನ ನಡೆಸಿತ್ತು. ಕೊನೆಯ ಅಧಿವೇಶನ 1949ರ ನವೆಂಬರ್‌ 26ರಂದು ನಡೆದಿತ್ತು. ಡಾ.ಬಿ.ಆರ್.‌ ಅಂಬೇಡ್ಕರ್‌ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಒಂದು ವರ್ಷದ ಬಳಿಕ ಅಂಗೀಕರಿಸಲಾಯಿತು. ಹೀಗಾಗಿ 26 ಜನವರಿ 1950 ರಂದು ಸಂವಿಧಾನ ಜಾರಿಗೆ ಬಂದಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್​​ ಭಾರತದ ಬಾವುಟವನ್ನು ಹಾರಿಸಿ ಸಂವಿಧಾನ ಜಾರಿಗೆ ಬಂದ ದಿನವನ್ನು ಘೋಷಿಸಿದ್ದರು.

    ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ, ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುತ್ತದೆ. ಭಾರತದ ರಾಷ್ಟ್ರೀಯ ಸೇನೆಯನ್ನು ಒಳಗೊಂಡ ಪರೇಡ್, ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳು ಈ ಮೆರವಣಿಗೆಯಲ್ಲಿ ಕಣ್ಮನ ಸೆಳೆಯುತ್ತವೆ. ಈ ದಿನ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ದೇಶದಾದಂತ್ಯ ಶಾಲೆ ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಹಲವೆಡೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

    ಈ ಬಾರಿಯ ವಿಶೇಷತೆಗಳೇನು?
    ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿ, ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿ ಈ ಮೆರವಣಿಗೆ ಪ್ರಾರಂಭವಾಗುತ್ತದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಮಿಲಿಟರಿ ನಿಯೋಗಗಳು ಸಿಂಕ್ರೊನೈಸ್ಡ್ ರಚನೆಗಳಲ್ಲಿ ಮೆರವಣಿಗೆ ನಡೆಸುತ್ತವೆ. ಇದರ ನಂತರ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಪ್ರಭಾವಶಾಲಿ ಫ್ಲೈಪಾಸ್ಟ್ ನಡೆಯುತ್ತದೆ. ಈ ಮೆರವಣಿಗೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ರಾಜ್ಯ ಸ್ತಬ್ಧಚಿತ್ರಗಳ ಪ್ರಸ್ತುತಿ. ಈ ಸ್ತಬ್ಧಚಿತ್ರಗಳು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಶಿಷ್ಟ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳನ್ನು ಪ್ರದರ್ಶಿಸುತ್ತವೆ.

    2025ರ ಗಣರಾಜ್ಯೋತ್ಸವ ಥೀಮ್‌:
    ಈ ವರ್ಷದ ಗಣರಾಜ್ಯೋತ್ಸವ ಆಚರಣೆಯು ‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿ ವರ್ಷ ಭಾರತ ಸರ್ಕಾರವು ಗಣರಾಜ್ಯೋತ್ಸವಕ್ಕಾಗಿ ಒಂದು ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡುತ್ತದೆ. ಈ ವರ್ಷದ ವಿಷಯವು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಯಾಣವನ್ನು ಎತ್ತಿ ತೋರಿಸುತ್ತದೆ.

    2025 ರ ಗಣರಾಜ್ಯೋತ್ಸವಕ್ಕೆ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಕರ್ತವ್ಯ ಪಥ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ. ಹೆಚ್ಚುವರಿಯಾಗಿ, 11 ಕೇಂದ್ರ ಸರ್ಕಾರಿ ತುಕಡಿಗಳು ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

    ಅತಿಥಿ ಯಾರು?
    ಜನವರಿ 26, 2025 ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಧ್ಯಕ್ಷ ಸುಬಿಯಾಂಟೊ ಅಕ್ಟೋಬರ್ 2024ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆ ಜನವರಿ 26ರಂದು ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ. ಇದಲ್ಲದೆ, ಸುಮಾರು 10,000 ರೂ. ವಿಶೇಷ ಅತಿಥಿಗಳನ್ನು ಸಹ ಭವ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.

    ಗಣರಾಜ್ಯೋತ್ಸವದ ಮೆರವಣಿಗೆ ಭಾರತದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿದೆ. ಈ ರಸ್ತೆ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿದೆ.

    ಕರ್ನಾಟಕದಿಂದ ಲಕ್ಕುಂಡಿಯ ಬ್ರಹ್ಮ ಜಿನಾಲಯ ಆಯ್ಕೆ:
    ಇತ್ತೀಚೆಗೆ ಪ್ರಾಚ್ಯವಸ್ತು ವಿಶೇಷ ಸಂಗ್ರಹಣೆಯಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಲಕ್ಕುಂಡಿ ಗ್ರಾಮದ ಬ್ರಹ್ಮ ಜಿನಾಲಯ ಜನವರಿ 26 ರಂದು ದೆಹಲಿ ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆ ಆಗಿದೆ. ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡಿಸುವ ಪ್ರಕ್ರಿಯೆಗೆ ಮತ್ತು ಪ್ರಾಚ್ಯವಸ್ತು ಸಂರಕ್ಷಣೆಗೆ ಪೂರಕವಾಗಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಎಚ್.ಕೆ. ಪಾಟೀಲ್‌ ಪ್ರವಾಸೋದ್ಯಮ ಇಲಾಖೆ ಸಚಿವರಾದ ನಂತರ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆ ನಡೆಯುತ್ತಿದ್ದು, ಜೈನ ದೇವಾಲಯ ದೆಹಲಿಯ ಪರೇಡ್ ಗೆ ಆಯ್ಕೆ ಆಗಿದ್ದು, ಈ ಭಾಗದ ಜನರಲ್ಲಿನ ಸಂತಸ ಇಮ್ಮಡಿಗೊಳಿಸಿದೆ.

    ಕಳೆದ ಎರಡು ವರ್ಷದಿಂದ ಕರ್ನಾಟಕದಿಂದ ಯಾವುದೇ ಟ್ಯಾಬ್ಲೋ ಆಯ್ಕೆ ಆಗಿರಲಿಲ್ಲ. ಈ ವರ್ಷ ಲಕ್ಕುಂಡಿ ಬ್ರಹ್ಮ ಜಿನಾಲಯ ಸ್ತಬ್ಧ ಚಿತ್ರಕ್ಕೆ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದೆಹಲಿಯಲ್ಲಿ ಟ್ಯಾಬ್ಲೋ ನಿರ್ಮಾಣ ಕಾರ್ಯ ಆರಂಭವಾಗಿದೆ. ನುರಿತ ಕಲಾವಿದರು ಫೈಬರ್‌ನಿಂದ ಬ್ರಹ್ಮ ಜಿನಾಲಯದ ಸ್ತಬ್ಧ ಚಿತ್ರ ತಯಾರಿಯಲ್ಲಿ ತೊಡಗಿದ್ದಾರೆ.

    ದೇವಾಲಯದ ವಿಶೇಷತೆ ಏನು?
    11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಪ್ಪು ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಮೇಲ್ಭಾಗದಲ್ಲಿ ದ್ರಾವಿಡ ಶೈಲಿ ಹೊಂದಿರುವ ಬ್ರಹ್ಮ ಜಿನಾಲಯವು ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿದೆ. ಗರ್ಭಗೃಹ, ಅಂತರಾಳ, ಗೂಢ ಮಂಟಪ, ಅಗಮ ಮಂಟಪದಂತಹ ತಲವಿನ್ಯಾಸದಿಂದ ಕೂಡಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ. ಇಕ್ಕೆಲದಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ. ಪೀಠದ ಸುತ್ತಲೂ ಮಕರ ತೋರಣದ ಅಲಂಕರಣೆಯಿದ್ದು, ಮೇಲ್ಬಾಗದಲ್ಲಿ ರತ್ನತ್ರಯರ ಪ್ರತೀಕವಾದ ಮುಕ್ಕೊಡೆಯಿದೆ.

    ತೀರ್ಥಂಕರನನ್ನು ಈಗ ನೇಮಿನಾಥ ಎಂದು ಕರೆಯಲಾಗುತ್ತಿದೆ. ಗರ್ಭ ಗೃಹಕ್ಕೆ ಹೊಂದಿಕೊಂಡು ಅಂತರಾಳವಿದ್ದು, ಮೂಲೆಗಳಲ್ಲಿ ಅರ್ಧಕಂಬಗಳಿವೆ. ಮುಂಭಾಗದಲ್ಲಿ ಎರಡು ಭದ್ರಕ ರೀತಿಯ ಸ್ತಂಭಗಳಿವೆ. ಅಂತರಾಳಕ್ಕೆ ಹೊಂದಿಕೊಂಡಂತೆ ಗೂಢಮಂಟಪವಿದೆ. ಮಧ್ಯದಲ್ಲಿ ನಾಲ್ಕು ಸ್ವತಂತ್ರ ಶ್ರೀಕಾರ ಸ್ತಂಭಗಳಿದ್ದು, ಪೀಠ, ಓಂ, ಕಾಂಡ ಮಾಲಾಸ್ಥಾನ, ಕುಂಭ, ಕಲಶ, ಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಇಕ್ಕೆಲದಲ್ಲಿ ಚತುಮುರ್ಖ ಬ್ರಹ್ಮ ಮತ್ತು ಪದ್ಮಾವತಿ ಶಿಲ್ಪಗಳಿವೆ. ಮಧ್ಯದಲ್ಲಿ ಪದ್ಮದ ಉಬ್ಬು ಅಲಂಕಾರವಿದೆ. ಸ್ತಂಭಗಳ ಪೀಠ ಭಾಗದಲ್ಲಿ ದರ್ಪಣ ಸುಂದರಿ, ನರ್ತಕಿ, ತಾಯಿ ಮತ್ತು ಮಗು, ಕೊಳಲು ನುಡಿಸುವ ಸ್ತ್ರೀಯ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ.

    ಬ್ರಹ್ಮ ಜಿನಾಲಯದ ಬಾಹ್ಯ ವಾಸ್ತು:
    ಜೈನ ದೇವಾಲಯವು ಕಪೋತಬಂಧ, ಅಧಿಷ್ಠಾನವನ್ನು ಹೊಂದಿದ್ದು, ಅದಕ್ಕೆ ಕ್ರಮವಾಗಿ ಖುರಕ, ಪದ್ಮ, ಅಂತರೀತ, ತ್ರಿಪಟ್ಟ ಕುಮುದ, ಅಂತರೀತ, ಕಪೋತ ಮತ್ತು ಮಕರಪಟ್ಟಿಕೆ ಭಾಗಗಳಿವೆ. ಮಕರ ಪಟ್ಟಿಕೆಯಲ್ಲಿ ಪ್ರಾಣಿಗಳ ಮತ್ತು ಕೀತಿರ್ಮುಖಗಳ ಅಲಂಕಾರವಿದೆ. ಕಪೋತದ ಮೇಲೆ ನಾಸಿಗಳ ಅಲಂಕಾರವಿದೆ. ಗರ್ಭಗೃಹದ ಮೇಲಿನ ಶಿಖರವು ಚತುಸ್ಥಲ ದ್ರಾವಿಡ ಮಾದರಿಯದ್ದಾಗಿದೆ. ಮೊದಲನೆಯ ಮಹಡಿಯಲ್ಲಿ ಹಾರವು ಕೂಟ, ಪಂಜರ, ಶಾಲಾಗಳಿಂದ ಕೂಡಿದೆ.

    ಕಪೋತದ ಮೇಲೆ ವೇದಿಕೆ ಇದೆ. ಕೂಟ ಮತ್ತು ಪಂಜರಗಳಲ್ಲಿ ಕೀತಿರ್ಮುಖಗಳ ಅಲಂಕಾರವಿದೆ. ಶಾಲಾದಲ್ಲಿ ಜಿನಬಿಂಬಗಳನ್ನು ಮತ್ತು ಶಿವ, ಸೂರ್ಯನ ಶಿಲ್ಪಗಳನ್ನು ಕೆತ್ತಲಾಗಿದೆ. 2 ಮತ್ತು 3ನೇ ಮಹಡಿಗಳಲ್ಲಿಯೂ ಇದೇ ರೀತಿಯ ಹಾರದ ಅಲಂಕಾರವಿದೆ. ಅದರ ಮೇಲೆ ಕಪೋತವಿದೆ. ಮೇಲ್ಬಾಗದಲ್ಲಿ ಕಲಶವಿದೆ. ಶಿಖರದ ಮುಂಭಾಗದಲ್ಲಿಯ ಶುಕನಾಸಿಯು ಗವಾದ ಅಲಂಕಾರದಿಂದ ಕೂಡಿದ್ದು ಮಧ್ಯದಲ್ಲಿ ಶಿಲ್ಪವಿಲ್ಲ. ಅದರ ಮೇಲೆ ಕೀತಿರ್ ಮುಖವಿದೆ. ಲಕ್ಕುಂಡಿ ಗ್ರಾಮದಲ್ಲಿ 16 ಜೈನ ಬಸದಿಗಳು, 5 ವೈಷ್ಣವ ದೇವಾಲಯಗಳು, 1 ಬೌದ್ಧ ಮಂದಿರ, 101 ದೇವಸ್ಥಾನ, 101 ಈಶ್ವರ ಲಿಂಗಗಳು, 101 ಬಾವಿಗಳು ಹಾಗೂ 22 ವೀರಶೈವ ಲಿಂಗಾಯತ ಮಠಗಳಿದ್ದವು ಎಂಬುದಾಗಿ ಶಿಲಾಶಾಸನಗಳಿಂದ ತಿಳಿದು ಬಂದಿದೆ

    ಟಿಕೆಟ್‌ ಬುಕ್ಕಿಂಗ್‌ ಹೇಗೆ?
    ಆಫ್‌ಲೈನ್ ಟಿಕೆಟ್ ಖರೀದಿ:
    ಜನವರಿ 2ರಿಂದ ಜನವರಿ 11ರವರೆಗೆ ನವದೆಹಲಿಯಾದ್ಯಂತ ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಈಗಾಗಲೇ ಟಿಕೆಟ್ ಖರೀದಿಸುವ ಅವಧಿ ಮುಗಿದುಹೋಗಿದೆ.

    ಟಿಕೆಟ್ ಬೆಲೆ:
    – ಜನವರಿ 26ರಂದು ಗಣರಾಜ್ಯೋತ್ಸವ ಮೆರವಣಿಗೆಯ ಟಿಕೆಟ್‌ಗಳು 20 ರೂ.ನಿಂದ ಆರಂಭವಾಗಲಿದ್ದು, ಪ್ರೀಮಿಯಂ ಟಿಕೆಟ್‌ಗಳು 100 ರೂ.ಗೆ ಲಭ್ಯವಿದೆ.
    – ಬೀಟಿಂಗ್ ರಿಟ್ರೀಟ್ ಫುಲ್ ಡ್ರೆಸ್ ರಿಹರ್ಸಲ್ ಜನವರಿ 28ರಂದು ನಡೆಯಲಿದ್ದು, ಟಿಕೆಟ್ ಬೆಲೆ ರೂ. 20ರಿಂದ ಆರಂಭವಾಗಲಿದೆ.
    – ಬೀಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದ್ದು, ಟಿಕೆಟ್ ಬೆಲೆ 100 ರೂ. ಇರಲಿದೆ.

    ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಲು, aamantran.mod.gov.in/login ಅಥವಾ rashtraparv.mod.gov.in ಗೆ ಭೇಟಿ ನೀಡಿ ಮತ್ತು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

  • ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಕೋಲಾರದ ಯುವತಿ ಆಯ್ಕೆ

    ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಕೋಲಾರದ ಯುವತಿ ಆಯ್ಕೆ

    ಕೋಲಾರ: ದೆಹಲಿಯ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮದಲ್ಲಿ ಚಿನ್ನದ ನಾಡಿನ ಹುಡುಗಿ ಕೋಲಾರದ ಯುವತಿಯೊಬ್ಬಳು ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ.

    ಜ.26 ರಂದು ಗಣರಾಜ್ಯೋತ್ಸವದ ದಿನ ದೇಶದ ಗಮನ ಸೆಳೆಯುವ ಗಣರಾಜ್ಯೋತ್ಸವ ಪರೇಡ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ವರ್ಷ ಚಿನ್ನದ ನಾಡಿನ ಗಾಯಕಿ ಎನ್‌ಸಿಸಿ ಕೆಡೆಟ್ ಕೋಲಾರದ ಕೆ.ಎಂ.ಶ್ರುತಿ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಶಿಬಿರದಲ್ಲಿ ಮುಖ್ಯ ಗಾಯಕಿ ಅಂದರೆ ಲೀಡ್ ಸಿಂಗರ್ ಆಗಿ ಶ್ರುತಿಗೆ ಅವಕಾಶ ಸಿಕ್ಕಿದೆ.

    ಶ್ರುತಿ ಎನ್‌ಸಿಸಿ ಬೆಂಗಳೂರು ಗ್ರೂಪ್ ಎ ನಿಂದ ಆಯ್ಕೆಯಾಗಿದ್ದು, ಇವರು ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ. ಕೆ.ಎಂ.ಶ್ರುತಿ ಕೋಲಾರದ ಎನ್.ಮಹದೇವ್ ಹಾಗೂ ಸಿ.ಎನ್.ಕಸ್ತೂರಿ ಅವರ ಮಗಳು. ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಕಸ್ತೂರಿ ಅವರ ಮೊದಲ ಪುತ್ರಿ. ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ. ಐದನೇ ಸೆಮಿಸ್ಟರ್ ಓದುತ್ತಿದ್ದಾರೆ. ಅದರ ಜೊತೆಗೆ ಎನ್‌ಸಿಸಿ ಕೆಡೆಟ್ ಕೂಡಾ ಆಗಿದ್ದಾರೆ.

    ಕಳೆದ ಆರು ತಿಂಗಳಿಂದ ವಿವಿಧೆಡೆ ಒಂಬತ್ತು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದ ನಂತರ ಈ ಅವಕಾಶ ಶ್ರುತಿ ಅವರ ಪಾಲಿಗೆ ಒಲಿದು ಬಂದಿದೆ. ರಾಜ್ಯದಲ್ಲಿ ಸುಮಾರು 80 ಸಾವಿರ ಎನ್‌ಸಿಸಿ ಕೆಡೆಟ್‌ಗಳಿದ್ದಾರೆ. ಅವರಲ್ಲಿ ಶ್ರುತಿ ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯ ಪ್ರತಿನಿಧಿಸಿಯಾಗಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯದಿಂದ ಶ್ರುತಿ ಸೇರಿದಂತೆ ಒಟ್ಟು 124 ಕೆಡೆಟ್‌ಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

    ಶ್ರುತಿ ಅವರಿಗೆ ತಾಯಿ ಕಸ್ತೂರಿ ಅವರೇ ಗುರು. ತಾಯಿ ಸಂಗೀತ ಶಿಕ್ಷಕಿಯಾಗಿದ್ದು, ತಾಯಿಯ ಪ್ರೇರಣೆಯಿಂದಲೇ ತಾನು ಸಂಗೀತದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಸಂಗೀತದಲ್ಲಿ ಜೂನಿಯರ್ ಹಾಗೂ ಸೀನಿಯರ್ ಮಾಡಿರುವ ಶ್ರುತಿ, ಸದ್ಯ ವಿದ್ವತ್ ಕಲಿಯುತ್ತಿದ್ದಾರೆ. ಸದ್ಯ ಕಾರ್ಯಕ್ರಮದ ನಿಮಿತ್ತ ಈಗಾಗಲೇ ಶ್ರುತಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ನಡೆಯುವ ಪೂರ್ವಬಾವಿ ತಾಲೀಮು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.