Tag: Representatives

  • ಒಂದೇ ರಸ್ತೆಗೆ ಮೂರು ಬಾರಿ ಬಿಲ್ – ಅಧಿಕಾರಿಗಳಿಂದ ಹಣ ಗುಳುಂ

    ಒಂದೇ ರಸ್ತೆಗೆ ಮೂರು ಬಾರಿ ಬಿಲ್ – ಅಧಿಕಾರಿಗಳಿಂದ ಹಣ ಗುಳುಂ

    ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ ಅಂತ ಅದೇ ರಸ್ತೆಗೆ ಮೂರು ಬಾರಿ ಬಿಲ್ ಮಾಡಿರೋ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ದುಡ್ಡನ್ನು ತಿಂದು ತೇಗಿದ್ದಾರೆ. ಆದರೆ ಜನ ಮಾತ್ರ ಅದೇ ಕಲ್ಲು ಮಣ್ಣಿನ ಹಾದಿಯಲ್ಲಿ ಓಡಾಡುವಂತಾಗಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಲಿಗಲ್ ಗ್ರಾಮ ಪಂಚಾಯತಿಯಿಂದ ರಾಮನಪಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ 10-15 ವರ್ಷಗಳಿಂದ ಕಲ್ಲು ಮಣ್ಣನಿಂದ ನಿರ್ಮಾಣವಾದ ಈ ರಸ್ತೆ ಇಂದಿಗೂ ಅದೇ ಸ್ಥಿತಿಯಲ್ಲೇ ಇದೆ. ಆದರೆ ಈ ರಸ್ತೆ ಅಭಿವೃದ್ಧಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ತಿಂದು ತೇಗಿ ಅಭಿವೃದ್ಧಿಯಾಗಿದ್ದಾರೆ.

    ಅಂದಹಾಗೆ ಪುಲಿಗಲ್ ಕ್ರಾಸ್ ನಿಂದ ರಾಗಿಮಾಕಲಪಲ್ಲಿ ರಸ್ತೆ ಅಭಿವೃದ್ಧಿ ಎಂದು 2 ಲಕ್ಷ 38 ಸಾವಿರ ರೂ. ಬಿಲ್ ಮಾಡಲಾಗಿದೆ. ರಾಮನಪಡಿ ರಸ್ತೆಯಿಂದ ಊದವಾರಪಲ್ಲಿ ಕ್ರಾಸ್‍ವರೆಗೂ ರಸ್ತೆ ಅಭಿವೃದ್ಧಿ ಎಂದು 4 ಲಕ್ಷ 60 ಸಾವಿರ ರೂ. ಬಿಲ್ ಆಗಿದ್ದರೆ, ರಾಮನಪಡಿ ಹತ್ತಿರ ಶಿವಪುರಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಎಂದು 4 ಲಕ್ಷದ 90 ಸಾವಿರ ರೂಪಾಯಿ ಬಿಲ್ ಮಾಡಲಾಗಿದೆ. ಆಸಲಿಗೆ ಈ ಮೂರೂ ರಸ್ತೆಗಳು ಸಹ ಒಂದೇ ರಸ್ತೆಯಾಗಿದ್ದು ಬೇರೆ ಬೇರೆ ಗ್ರಾಮಗಳ ಹೆಸರು ನಮೂದಿಸಿ ಬಿಲ್ ಮಾಡಲಾಗಿದೆ.

    ಪುಲಿಗಲ್ ಕ್ರಾಸ್ ನಿಂದ ರಾಮನಪಡಿ ಗ್ರಾಮದವರೆಗೂ ಸರಿಸುಮಾರು 3 ಕಿಲೋಮೀಟರ್ ದೂರದ ಈ ಮಣ್ಣಿನ ರಸ್ತೆ ಅಭಿವೃದ್ಧಿ ಮಾಡಿದ್ದೀವಿ ಎಂದು ಮೂರು ಬಾರಿ ಲಕ್ಷ ಲಕ್ಷ ಬಿಲ್ ಮಾಡಲಾಗಿದೆ. ಆದರೆ ಪ್ರತ್ಯಕ್ಷವಾಗಿ ನೋಡಿದರೆ ರಸ್ತೆಯ ಅಭಿವೃದ್ಧಿ ಅನ್ನೋದು ಇಲ್ಲ. ಇನ್ನೂ ಇದೇ ರಸ್ತೆ ಕಥೆಯಾದರೆ ವೆಂಕಟರೆಡ್ಡಿಪಲ್ಲಿ ಗ್ರಾಮದ ಸೋಮ್ಲನಾಯಕ್ ಮನೆಯಿಂದ ನಾರಾಯಣ ನಾಯಕ್ ಮನೆಯವರೆಗೂ ಚರಂಡಿ ಮಾಡಿದ್ದೀವಿ ಎಂದು 4 ಲಕ್ಷ 91 ಸಾವಿರ ರೂಪಾಯಿ ಬಿಲ್ ಮಾಡಿಕೊಳ್ಳಲಾಗಿದೆ. ಆದರೆ ಪ್ರತ್ಯಕ್ಷವಾಗಿ ಪರಿಶೀಲನೆ ನಡೆಸಿದರೆ ಅಲ್ಲಿ ಚರಂಡಿಯೇ ಇಲ್ಲ.

    ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‍ನ ಸಿಎಂಜಿಎಸ್‍ವೈ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಗುತ್ತಿಗೆದಾರರ ಜೊತೆ ಶಾಮೀಲಾಗಿ ಜನರ ಲಕ್ಷ ಲಕ್ಷ ದುಡ್ಡನ್ನು ತಿಂದು ತೇಗಿದ್ದಾರೆ.

  • ಅವಸರದಲ್ಲಿ ಭರ್ಜರಿ ಅಭಿವೃದ್ಧಿ – ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ತಯಾರಿ ಜೋರು

    ಅವಸರದಲ್ಲಿ ಭರ್ಜರಿ ಅಭಿವೃದ್ಧಿ – ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ತಯಾರಿ ಜೋರು

    ರಾಯಚೂರು: ಸಿಎಂ ಗ್ರಾಮವಾಸ್ತವ್ಯ ಮಾಡಲಿರುವ ರಾಯಚೂರಿನ ಕರೇಗುಡ್ಡ ಈಗ ಅವಸರದ ಅಭಿವೃದ್ಧಿ ಕಾಣುತ್ತಿದೆ. ಗ್ರಾಮಕ್ಕೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

    ಜೂನ್ 26ರಂದು ರಾಯಚೂರಿನ ಮಾನ್ವಿಯ ಕರೇಗುಡ್ಡದಲ್ಲಿ ವ್ಯಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಭರ್ಜರಿ ಕಾಮಗಾರಿಗಳು ಆರಂಭವಾಗಿದೆ. ಜನರು ಗೋಳಾಡಿದರೂ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಕ್ಕೆ ಸಿಎಂ ಬರಲಿದ್ದಾರೆ ಎಂದು ಅವಸರದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ.

    ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಂತೂ ಇತಿಹಾಸದಲ್ಲೇ ಕಾಣದಷ್ಟು ಸುಂದರವಾಗಿದೆ. ಅಚ್ಚುಕಟ್ಟಾದ ಹೈಟೆಕ್ ಶೌಚಾಲಯವೂ ಅಂತಿಮ ಹಂತಕ್ಕೆ ಬಂದಿದೆ. ಯಾರೂ ಕಿವಿಗೆ ಹಾಕಿಕೊಳ್ಳದ ರಸ್ತೆಯ ಸಮಸ್ಯೆಯೂ ತೀರಿದೆ. ವಿದ್ಯುತ್ ಸಮಸ್ಯೆ ಸದ್ಯಕ್ಕೆ ನಿಂತಿದೆ. ಗ್ರಾಮಲ್ಲಿ ಎಂದೂ ಕಾಣದ ಚರಂಡಿ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

    ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಮೂರು ಬೋರ್‍ವೆಲ್ ಗಳನ್ನು ಕೊರೆಯಲಾಗಿದೆ. ಇದರಲ್ಲಿ ಎರಡು ಬೋರ್‍ವೆಲ್‍ನಲ್ಲಿ ಉತ್ತಮ ನೀರು ಸಿಕ್ಕಿದೆ. ಗ್ರಾಮದಲ್ಲಿ ಸಿಸಿ ರಸ್ತೆ, ಗ್ರಾಮದ ಹೊರಗಡೆ ಡಾಂಬರ್ ರಸ್ತೆಯ ಕಾಮಗಾರಿ ನಡೆದಿದೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಗ್ರಾಮದ ಚಿತ್ರಣವನ್ನೇ ಇಲ್ಲಿ ಜನಪ್ರತಿನಿಧಿಗಳು ಬದಲಿಸಿದ್ದಾರೆ.

    ಸುಮಾರು 22 ಎಕರೆ ಪ್ರದೇಶದಲ್ಲಿ ಮುಖ್ಯಮಂತ್ರಿ ಜನಸಂಪರ್ಕ ಸಭೆಗೆ ಹಾಗೂ ವೇದಿಕೆಗೆ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳಿಂದ ಅಹವಾಲುಗಳನ್ನ ಹಿಡಿದು ಬರುವ ಜನರಿಗಾಗಿ ಪ್ರತ್ಯೇಕ ವ್ಯವಸ್ಥೆಗಳನ್ನ ಮಾಡಲಾಗುತ್ತಿದೆ. ಸಿಎಂ ವಾಸ್ತವ್ಯ ಮಾಡಲಿರುವ ಗ್ರಾಮ ಶಾಲೆಯಂತೂ ಮಧುವಣಗಿತ್ತಿಯಂತೆ ಅಲಂಕಾರಗೊಳ್ಳುತ್ತಿದೆ. ಸಿಎಂ ಬರುವ ನೆಪದಲ್ಲಾದರೂ ಗ್ರಾಮ ಅವಸರದ ಅಭಿವೃದ್ಧಿ ಕಾಣುತ್ತಿದೆಯಲ್ಲ ಎಂದು ಗ್ರಾಮಸ್ಥರು ಖುಷಿಪಟ್ಟಿದ್ದಾರೆ.

    ಬಿಜೆಪಿ ಪಾದಯಾತ್ರೆ
    ಸಿಎಂ ವಾಸ್ತವ್ಯಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿರುವುದು ನಿಜ. ಆದರೆ ಜ್ವಲಂತ ಸಮಸ್ಯೆಗಳ ಗೂಡಾಗಿರುವ ರಾಯಚೂರಿನಲ್ಲಿ ಮುಖ್ಯಮಂತ್ರಿಗಳಿಗೆ ಹೋರಾಟ, ಪ್ರತಿಭಟನೆಗಳ ಬಿಸಿಯೂ ಜೋರಾಗಿ ತಟ್ಟುವ ಸಾಧ್ಯತೆಯಿದೆ. ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಆರಂಭಿಸಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ, ಕನಿಷ್ಠ ಈಗಲಾದರೂ ಸಿಎಂ ಜಿಲ್ಲೆಯ ಕಡಗೆ ನೋಡಲಿ ಅಂತ ಪಾದಯಾತ್ರೆ ಕೈಗೊಂಡಿದ್ದಾರೆ.

    ಸಿಎಂ ಮಲತಾಯಿ ಧೋರಣೆ ತೋರಿಸುತ್ತಿದ್ದು ಹೈಕ ಭಾಗಕ್ಕೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಅಂತ ಶಿವನಗೌಡ ನಾಯಕ್ ಆರೋಪಿಸಿದ್ದಾರೆ. ದೇವದುರ್ಗದ ಗೂಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 26 ರಂದು ಕರೇಗುಡ್ಡ ತಲುಪಲಿದ್ದಾರೆ.

    ನೂರಾರು ಜನರೊಂದಿಗೆ ಪಾದಯಾತ್ರೆಗೆ ಮುಂದಾಗಿರುವ ಶಿವನಗೌಡ ತಮ್ಮ ಕ್ಷೇತ್ರದ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಪುನರಾರಂಭವಾಗಬೇಕು, ಎನ್ ಆರ್ ಬಿಸಿ ಕಾಲುವೆ ಆಧುನಿಕರಣಗೊಳ್ಳಬೇಕು ಅನ್ನೋ ಬೇಡಿಕೆ ಸೇರಿ ನಾನಾ ಸಮಸ್ಯೆಗೆ ಸಿಎಂ ಪರಿಹಾರ ಒದಗಿಸಬೇಕು ಅಂತ ಆಗ್ರಹಿಸಿದ್ದಾರೆ. ಸುಮಾರು 86 ಕಿ.ಮೀ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

  • ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

    ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

    ಕೊಪ್ಪಳ: ರಾಜ್ಯದ ಉತ್ತರ ಭಾಗದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬರ ತಾಂಡವವಾಡುತ್ತಿದೆ. ಅಲ್ಲದೆ ನೀರಿಲ್ಲದೆ ಬರ ಒಂದು ಕಡೆಯಾದರೆ ಇನ್ನೊಂದೆಡೆ ಮೇವು ಇಲ್ಲದೆ ಜಾನುವಾರುಗಳೂ ಪರಿತಪಿಸುತ್ತಿವೆ.

    ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸಾಕಷ್ಟು ಕಡೆ ಬೋರ್ ವೇಲ್ ಕೊರೆಸಿದ್ದಾರೆ. ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ನಡೆಯುತ್ತಿದೆ. ಆದರೂ ಕೂಡ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

    ಈಗಾಗಲೇ ತುಂಗಭದ್ರಾ ಡ್ಯಾಂನಲ್ಲಿ ನೀರು ಇಲ್ಲದೆ ಬಣ ಗುಟ್ಟುತ್ತಿದೆ. ಮಳೆಗಾಲದಲ್ಲಿ ಡ್ಯಾಂ ತುಂಬಿ, 100 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿತ್ತು. ಹೆಚ್ಚಿಗೆ ನೀರು ಹರಿದು ಬಂದಿದ್ದರಿಂದ 50 ಟಿಎಂಸಿಗೂ ಹೆಚ್ಚು ನೀರನ್ನು ನದಿಗಳ ಮೂಲಕ ಹೊರಗೆ ಹರಿಬಿಡಲಾಗಿತ್ತು. ಆದರೆ ಆಗ ನೀರನ್ನು ಸಂಗ್ರಹಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಇಂದು ನೀರಿನ ಸಮಸ್ಯೆ ಬರುತ್ತಿಲ್ಲ. ಇವತ್ತು ಡ್ಯಾಂನಲ್ಲಿ ಕೇವಲ 3 ಟಿಎಂಸಿ ನೀರು ಇದೆ. ಇದು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಮೀಸಲಿಡಲಾಗಿದ್ದು, ಇನ್ನೂ ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್‍ಗೆ ಬಿಡಬೇಕಾಗಿದೆ.

    ಇಂದು ನೀರು ಸಿಗದೆ ಬೇರೆ ಬೇರೆ ಊರುಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ. ನೀರಿಲ್ಲದೆ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಹೀಗಾಗಿ ಗುಡ್ಡ ಕಾಡು ಎನ್ನದೆ ಜಾನುವಾರುಗಳನ್ನು ರಕ್ಷಣೆ ಮಾಡಲು ರೈತರು ಮುಂದಾಗುತ್ತಿದ್ದಾರೆ. ರೈತರು ನಮ್ಮ ಸಮಸ್ಯೆ ಯಾರಿಗೆ ಹೇಳೋಣ ಎಂದು ಚಡಪಡಿಸುತ್ತಿದ್ದಾರೆ. ಅಲ್ಲದೆ ನಮ್ಮ ಸಮಸ್ಯೆಯನ್ನ ಜನಪ್ರತಿನಿಧಿಗಳೊಂದಿಗೆ ಹೇಳಿಕೊಂಡರೆ ಅವರು ಕಾರೇ ಎನ್ನುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

  • ಗೈರಾದರೆ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗುವುದು – ಜನಪ್ರತಿನಿಧಿಗಳಿಗೆ ಕೋರ್ಟ್ ಎಚ್ಚರಿಕೆ

    ಗೈರಾದರೆ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗುವುದು – ಜನಪ್ರತಿನಿಧಿಗಳಿಗೆ ಕೋರ್ಟ್ ಎಚ್ಚರಿಕೆ

    ಬೆಂಗಳೂರು: ವಿಚಾರಣೆಗೆ ಒಂದು ದಿನ ಗೈರು ಹಾಜರಾದರೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಬಿಡುತ್ತೇನೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ.ರಾಮಚಂದ್ರ ಹುದ್ದಾರ್ ಅವರು ಜನ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ನ್ಯಾಯಾಲಯವು ಇಂದು ಶಾಸಕರು, ಸಚಿವರು, ಸಂಸದರ ಮೇಲಿದ್ದ ಆರೋಪಗಳ ಕುರಿತು ವಿಚಾರಣೆ ನಡೆಸಿತು. ಈ ವೇಳೆ ಪದೇ ಪದೇ ಕೋರ್ಟ್ ವಿಚಾರಣೆಗೆ ಹಾಜರಾಗುತ್ತಿದ್ದ ಜನಪ್ರತಿನಿಧಿಗಳಿಗೆ ನ್ಯಾ.ರಾಮಚಂದ್ರ ಅವರು ಫುಲ್ ಕ್ಲಾಸ್ ತೆಗೆದುಕೊಂಡರು.

    ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಅವರು ಕೋರ್ಟ್ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಅಷ್ಟೇ ಅಲ್ಲದೆ ಆರೋಪಿಗಳ ಪರ ವಕೀಲರಿಗೆ ಚಾಟಿ ಬೀಸಿದ ನ್ಯಾಯಾಧೀಶರು, ಕೋರ್ಟ್ ಅಂದ್ರೆ ನೀವು ಏನೆಂದು ತಿಳಿದುಕೊಂಡಿದ್ದೀರಿ ಎಂದು ತರಾಟೆ ತೆಗೆದುಕೊಂಡರು.

    ರಾಮನಗರ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಅವರಿಂದ ಆನಂದ್ ಸಿಂಗ್ ಹಲ್ಲೆಗೆ ಒಳಗಾಗಿದ್ದರು. ಹಲ್ಲೆಗೆ ಒಳಗಾಗಿದ್ದ ಆನಂದ್ ಸಿಂಗ್ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಇತ್ತ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಆರೋಪಿ ಶಾಸಕ ನಾಗೇಂದ್ರ, ಅಕ್ರಮ ಗಣಿಗಾರಿಕೆ ಪ್ರಕರಣ ಎದುರಿಸುತ್ತಿರುವ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅವರು ಇಂದು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು.

    ದೇಶದ ಹಲವು ಮಂದಿ ರಾಜಕಾರಣಿಗಳ ಮೇಲೆ ಕೊಲೆ, ಭ್ರಷ್ಟಾಚಾರ, ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಿದ್ದರೂ ಅವರು ಜನಪ್ರತಿನಿಧಿಗಳಾಗಿ ಮುಂದುವರಿಯುತ್ತಿದ್ದಾರೆ. ಪ್ರತಿ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ನಾಯಕರ ವಿರುದ್ಧ ಈ ಪ್ರಕರಣವನ್ನು ಕೆದಕಿ ಆರೋಪ ಪ್ರತ್ಯಾರೋಪ ಮಾಡುತ್ತಿರುತ್ತಾರೆ. ಈ ಸಂಬಂಧ 2017ರಲ್ಲಿ ಸುಪ್ರೀಂ ಕೋರ್ಟ್ ಶಾಸಕರು ಮತ್ತು ಸಂಸದರ ಮೇಲಿನ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು. ಸುಪ್ರೀಂ ಸಲಹೆಯ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಅಧ್ಯಕ್ಷೆಯಾಗಿದ್ದಾಗ ಕೊಟ್ಟಿದ್ದೀನಿ, ಈಗ ನಂಗೂ ಕಮೀಷನ್ ಕೊಡ್ಲೇಬೇಕು-ಕಾರಟಗಿ ಪುರಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ

    ನಾನು ಅಧ್ಯಕ್ಷೆಯಾಗಿದ್ದಾಗ ಕೊಟ್ಟಿದ್ದೀನಿ, ಈಗ ನಂಗೂ ಕಮೀಷನ್ ಕೊಡ್ಲೇಬೇಕು-ಕಾರಟಗಿ ಪುರಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ

    ಕೊಪ್ಪಳ: ಕಾಮಗಾರಿಗಳಲ್ಲಿ ತಮಗೆ ಪರ್ಸೆಂಟೇಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸದಸ್ಯೆಯೊಬ್ಬರು ಸಾಮಾನ್ಯ ಸಭೆಯಲ್ಲಿಯೇ ಗರಂ ಆದ ಘಟನೆ ಕೊಪ್ಪಳದ ಕಾರಟಗಿ ಪುರಸಭೆಯಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಕಾರಟಗಿ ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅನ್ನಪೂರ್ಣಮ್ಮ ತಮಗೆ ಪುರಸಭೆ ನಡೆಸಿದ ಕಾಮಗಾರಿಯಲ್ಲಿ ಕಮೀಷನ್ ನೀಡಿಲ್ಲ ಎಂದು ಸಾಮಾನ್ಯ ಸಭೆ ನಡೆಯದಂತೆ ತಡೆದು ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದ ಅನುದಾನದಲ್ಲಿ ತಮಗೆ ಪರ್ಸೆಂಟೇಜ್ ಕೊಟ್ಟಿಲ್ಲ ಅಂತಾ ಅನ್ನಪೂರ್ಣಮ್ಮ ಫುಲ್ ಗರಂ ಆಗಿದ್ದಾರೆ. ಹೀಗೆ ಕಾಮಗಾರಿಯೊಂದರಲ್ಲಿ ತಮಗೆ ಪರ್ಸೆಂಟೇಜ್ ಸಿಕ್ಕಿಲ್ಲ ಅಂತಾ ಸಾಮಾನ್ಯ ಸಭೆಯಲ್ಲೇ ಅಧ್ಯಕ್ಷರು ಹಾಗೂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾನು ಅಧ್ಯಕ್ಷೆ ಆಗಿದ್ದಾಗ ನಿಮ್ಮೆಲ್ಲರಿಗೂ ಪಾಲು ಕೊಟ್ಟಿಲ್ಲವೇನು? ನೀವೆಲ್ಲ ತೆಗೆದುಕೊಂಡಿಲ್ಲವೇನು? ನನ್ನ ಪತಿಯನ್ನು ಕರೆಸುತ್ತೇನೆ, ಅವರ ಜೊತೆಯೇ ಮೀಟಿಂಗ್ ಮಾಡ್ರಿ ಅಂತಾ ಗುಟ್ಟು ರಟ್ಟು ಮಾಡಿದ್ದಾರೆ. ಪುರಸಭೆಯ 22 ಸದಸ್ಯರೂ ನಿಮ್ಮ ಪಾಲು ತೆಗೆದುಕೊಂಡಿದ್ದೀರಿ. ನಾನೇನು ಜನತೆಯಿಂದ ಆರಿಸಿ ಬಂದಿಲ್ಲವೇ? ಹಾಗಾದರೆ ನನಗೆ ಅದರಲ್ಲಿ ಯಾಕೆ ಪಾಲಿಲ್ಲ? ಪುರಸಭೆ ಹಾಲಿ ಅಧ್ಯಕ್ಷೆ ಭುವನೇಶ್ವರಿ ಪತಿ ಶಿವರೆಡ್ಡಿ, ನನ್ನ ಕಡೆಯಿಂದ ಹಣ ತಿಂದಿಲ್ವಾ ಎಂದು ಸದಸ್ಯೆ ಅನ್ನಪೂರ್ಣ ಅವರು ಬಹಿರಂಗವಾಗಿಯೇ ಅವಾಜ್ ಹಾಕಿದ್ದಾರೆ.

    ಸರ್ಕಾರಿ ಅನುದಾನ ಬಳಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ಕೊಡೋದು ತಗೋಳೋದು ಈವರೆಗೆ ಕದ್ದುಮುಚ್ಚಿ ನಡೆಯುತ್ತಿತ್ತು. ಆದರೆ ಅನ್ನಪೂರ್ಣಮ್ಮನ ಕೃಪೆಯಿಂದ ಈಗ ಜಾಣರ ಜಗಳ ಬೀದಿಗೆ ಬಂದಿದೆ.

    ಸಾರ್ವಜನಿಕರ ಕುಂದುಕೊರತೆ ಆಲಿಸಲು ಸ್ಥಳೀಯ ಸಂಸ್ಥೆಗಳು ಸಾಮಾನ್ಯ ಸಭೆ ನಡೆಸುತ್ತವೆ. ಆದರೆ ಇಲ್ಲಿನ ಸಾಮಾನ್ಯಸಭೆಯಲ್ಲಿ ಬರೀ ಪರ್ಸೆಂಟೇಜ್ ಲೆಕ್ಕಾಚಾರಕ್ಕೇ ಪ್ರತಿನಿಧಿಗಳು ಬರುವಂತೆ ಮಾತನಾಡುತ್ತಿದ್ದಾರೆ. ಇಷ್ಟರಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವ ಅದೆಷ್ಟು ಯಶಸ್ವಿಯಾಗಿದೆ, ಸಾರ್ವಜನಿಕರ ಹಣ ಎಷ್ಟು ಸದ್ಬಳಕೆ ಆಗುತ್ತಿದೆ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    https://www.youtube.com/watch?v=DBWmTehUvSI