Tag: renukhacharya

  • ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್

    ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್

    ದಾವಣಗೆರೆ: ಬೆಣ್ಣೆ ನಗರಿಗೂ ಹಿಜಾಬ್ ವಿವಾದವು ಕಾಲಿಟ್ಟಿದ್ದು, ವಿದ್ಯಾರ್ಥಿಗಳು ಹೊನ್ನಾಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.

    ಮುಸ್ಲಿಂ ವಿದ್ಯಾರ್ಥಿಗಳು ಸರ್ಕಾರದ ಆದೇಶವಿದ್ದರೂ ಕೂಡ ಹಿಜಾಬ್ ಧರಿಸಿ ಬಂದಿದ್ದಾರೆ. ತರಗತಿಯಲ್ಲಿ ಬುರ್ಖಾ ಧರಿಸಿ ಬಂದ ಹಿನ್ನಲೆ ನಾವು ಕೂಡ ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದೇವೆ ಎಂದು ಹಿಂದೂ ವಿದ್ಯಾರ್ಥಿಗಳು ಹೇಳಿದ್ದಾರೆ.

    ಎಲ್ಲಿವರೆಗೆ ತರಗತಿಯಲ್ಲಿ ಹಿಜಾಬ್ ಇರುತ್ತದೆಯೋ ಅಲ್ಲಿಯವರೆಗೆ ಕೇಸರಿ ಶಾಲು ಧರಿಸಿಯೇ ಹಾಜರಾಗುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಹೇಳಿದರೆ ಹಿಜಬ್ ಧರಿಸಿದ ವಿದ್ಯಾರ್ಥಿನಿಯರು ನಾವು ಹಿಜಬ್ ಬುರ್ಕಾ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ನಾವು ಸರ್ಕಾರ ಎನೇ ಆದೇಶ ಹೊರಡಿಸಿದರು ಹಿಜಾಬ್ ತೆಗೆಯುವುದಿಲ್ಲ ಪಟ್ಟು ಹಿಡಿದಿದ್ದಾರೆ.

    ಎರಡು ಬಣದ ವಿದ್ಯಾರ್ಥಿಗಳು ಸಮವಸ್ತ್ರ ನೀತಿ ಸಂಹಿತೆಗೆ ಕ್ಯಾರೆ ಎನ್ನುತ್ತಿಲ್ಲ. ವಿದ್ಯಾರ್ಥಿಗಳು ಶಾಲಾ ತರಗತಿಯಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಹಾಕಿಕೊಂಡೇ ಕುಳಿತು ಪಾಠ ಕೇಳುತ್ತಿದ್ದು, ಪದವಿ ಕಾಲೇಜಿನಲ್ಲಿ ಯಾವುದೇ ಪ್ರತಿಭಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಕೊರೊನಾಗೆ ಗೆಳೆಯ ಮೃತ – ಸ್ನೇಹಿತನ ಮಡದಿಯನ್ನ ಮದುವೆಯಾದ ಯುವಕ 

    ಹಿಜಾಬ್- ಕೇಸರಿ ಶಾಲು ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕಾಲೇಜ್‍ಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಜಬ್ ತೆಗೆಯಲ್ಲ ಎಂದು ಶಾಸಕರಿಗೆ ಏರುಧ್ವನಿಯಲ್ಲೇ ವಿದ್ಯಾರ್ಥಿನಿಯರ ಉತ್ತರ ನೀಡಿದ್ದಾರೆ.

    ನೀವು ಈ ರೀತಿ ಹಿಜಬ್ ಧರಿಸಿ ಬಂದರೆ ಅವರು ಕೇಸರಿ ಶಾಲು ಧರಿಸುತ್ತಾರೆ. ಇದು ಮತ್ತೆ ಸಂಘರ್ಷಕ್ಕೆ ಕಾರಣವಾಗುತ್ತೆ ಎಂದು ಸಮಾಧಾನ ಮಾಡಲು ಮುಂದಾದಾಗ ಮುಸ್ಲಿಂ ವಿದ್ಯಾರ್ಥಿನಿಯರು ಏನೇ ಆಗಲಿ ನಾವು ಯಾವುದೇ ಕಾರಣಕ್ಕೂ ಹಿಜಬ್ ತೆಗೆಯಲ್ಲ. ಹಿಜಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

    ದಾವಣಗೆರೆಯಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕಾರಣವಾದ ಹಿಜಬ್ ವಿವಾದವು ನಗರದ ಜಯದೇವ ಸರ್ಕಲ್‍ನಲ್ಲಿ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳಿಂದ ಈ ಪ್ರತಿಭಟನೆ ನಡೆದಿದ್ದು, ನಾವು ಹಿಜಬ್ ನಿಯಮವನ್ನು ಪಾಲಿಸಿಯೇ ಪಾಲಿಸುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

    ಹಿಂದೂ ಜಾಗರಣಾ ವೇದಿಕೆಯು ತರಗತಿಗಳಲ್ಲಿ ಹಿಜಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಗರದ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ಸಂಘಟನೆಗಳ ಪ್ರತಿಭಟನೆ ನಡೆಸಿದ್ದಾರೆ. ಹಿಜಬ್ ವಿರೋಧಿಸಿ ಸಮವಸ್ತ್ರ ಧರಿಸಿ, ಹಿಂದೂಸ್ತಾನದಲ್ಲಿ ಇರುವುದಾದರೆ ಹಿಂದೂ ಧರ್ಮದವರು ಹೇಳಿದ ಹಾಗೇ ಕೇಳಬೇಕು ಅಂತ ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿನ್ನಲೆ ಜಯದೇವ ವೃತ್ತದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿವೈಎಸ್ಪಿ ನರಸಿಂಹ ತಾಮ್ರಧ್ಬಜ, ಸಿಪಿಐ ಗುರುಬಸವರಾಜ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಎರ್ಪಡಿಸಿದ್ದಾರೆ.

  • ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

    ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

    ಹಾವೇರಿ: ಮುಂದಿನ ಇಪ್ಪತ್ತೈದು ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ನಿಟ್ಟೂರು ಗ್ರಾಮದಲ್ಲಿ ಬಜೆಟ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ ಇಪ್ಪತ್ತೈದು ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಬಜೆಟ್ ಮಂಡನೆ ಆಗಿದೆ. ಬಜೆಟ್‍ನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮಾಡಿದ್ದಾರೆ. ಬೆಳೆ ಸಮೀಕ್ಷೆಗೆ ಡ್ರೋಣ್ ತಂತ್ರಜ್ಞಾನದ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಿದೆ. ಒಂಬತ್ತು ಲಕ್ಷ ಹೆಕ್ಟೇರ್ ಜಮೀನಿನ ನೀರಾವರಿಗೆ ಒತ್ತು ನೀಡಿದೆ. ನದಿಗಳ ಜೋಡಣೆ ಮೂಲಕ ನೀರಾವರಿ ಮಾಡುವ ವಿಚಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಮುಖಂಡರು ಪಕ್ಷ ಬಿಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ ಕಾಂಗ್ರೆಸ್ ತ್ಯಜಿಸಿದರೆ ಆಶ್ಚರ್ಯವಿಲ್ಲ. ಅಲ್ಲಿ ಆ ರೀತಿಯ ವಾತಾವರಣವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಬ್ಬರ ಮುಖವನ್ನೊಬ್ಬರು ನೋಡದ ಪರಿಸ್ಥಿತಿ ಅಲ್ಲಿದೆ. ಅವರ ಪಿಸುಮಾತು, ಇವರ ಪಿಸುಮಾತು ನೋಡಿದರೆ ಅಲ್ಲಿ ಆ ರೀತಿಯ ಪರಿಸ್ಥಿತಿ ಇದೆ. ಮುಂಬರುವ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅನ್ನುವುದಕ್ಕಿಂತ ನಾನು ಸಿಎಂ ಆಗುತ್ತೇನೆ, ನಾನು ಸಿಎಂ ಆಗುತ್ತೇನೆ ಅಂತ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ನಡೆದಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

    ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಜಿಗರಿ ದೋಸ್ತರು. ಇಬ್ರಾಹಿಂ ಸಾಹೇಬರು ಬಹಳ ಚೆನ್ನಾಗಿ ಪ್ರಾಸಬದ್ಧವಾಗಿ ಮಾತನಾಡ್ತಾರೆ. ಜಾತಿಯ ಅಧಾರದ ಮೇಲೆ ರಾಜಕೀಯ ಮಾಡುತ್ತೇವೆ ಅನ್ನುವುದು ಮೂರ್ಖತನದ ಪರಮಾವಧಿ ಎಂದರು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

    ನದಿ ಜೋಡಣೆಗೆ ರಾಜ್ಯದಲ್ಲಿ ಕೆಲವರ ವಿರೋಧದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಪಿಆರ್ ನೋಡಿಕೊಂಡು ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಮಾಡುತ್ತದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಪಿಆರ್‍ನಲ್ಲಿ ರಾಜ್ಯಕ್ಕೆ ಅನುಕೂಲ ಆಗುತ್ತದೆ ಇಲ್ಲವೋ ನೋಡುತ್ತಾರೆ. ಡಿಪಿಆರ್ ನಲ್ಲಿ ನಮ್ಮ ರಾಜ್ಯಕ್ಕೆ ಅನುಕೂಲ ಆಗುವುದಿಲ್ಲ ಅಂದರೆ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

    ಕೆಲವು ಸಚಿವರು ಕರೆ ಮಾಡಿದರು ಕರೆಯನ್ನು ಎತ್ತುತ್ತಿಲ್ಲ, ಬಹಳ ದುರಹಂಕಾರಿಗಳಿದ್ದಾರೆ ಅನ್ನುವ ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ರೇಣುಕಾಚಾರ್ಯ ಅವರು ಯಾರು ಅಂಥವರಿದ್ದಾರೆ ಅವರ ಹೆಸರು ಹೇಳಬೇಕು. ಸುಮ್ಮನೆ ಕಂಬಳಕ್ಕೆ ಕಲ್ಲು ಕಟ್ಟಿ ಹೊಡೆಯೋದು ಸರಿಯಲ್ಲ. ಯತ್ನಾಳರು ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಾರೆ ಅಂತಾರೆ. ಆದರೆ ರೇಣುಕಾಚಾರ್ಯರು ಹೀಗೆ ಹೇಳುತ್ತಾರೆ. ಹೀಗೆ ಹೇಳಿಕೊಂಡು ಹೋಗೋದು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.