Tag: Renukacharya

  • ಪರಂ ಪಿಎ ರಮೇಶ್ ಸಾವು ಸಹಜವಲ್ಲ, ಆತನನ್ನು ಮುಗಿಸಲಾಗಿದೆ: ರೇಣುಕಾಚಾರ್ಯ

    ಪರಂ ಪಿಎ ರಮೇಶ್ ಸಾವು ಸಹಜವಲ್ಲ, ಆತನನ್ನು ಮುಗಿಸಲಾಗಿದೆ: ರೇಣುಕಾಚಾರ್ಯ

    ದಾವಣಗೆರೆ: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವು ಸಹಜ ಸಾವು ಅಲ್ಲ. ಆತನನ್ನು ಮುಗಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

    ನಗರದ ನಾಯಕರ ವಿಧ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಗೆ ಆಗಮಿಸಿ, ಶ್ರೀಗಳ ಫೋಟೋಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವು ಸಹಜ ಸಾವು ಅಲ್ಲ. ಆತನನ್ನು ಮುಗಿಸಲಾಗಿದೆ. ಆತನ ಸಾವಿಗೆ ಬೇರೆ ಬೇರೆ ಕಾರಣಗಳು ಇವೆ. ಇದಕ್ಕೆಲ್ಲ ಡಾ.ಜಿ.ಪರಮೇಶ್ವರ್ ಅವರೇ ಉತ್ತರಿಸಬೇಕು ಎಂದರು.

    ರಮೇಶ್ ಸಾವಿಗೆ ಐಟಿ ಅಥವಾ ಕೇಂದ್ರ ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಐಟಿ ಇಲಾಖೆಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮೇಲಾಗಿ ಪರಮೇಶ್ವರ್ ಅವರು ಬೆಂಗಳೂರಿನಲ್ಲಿಯೇ ಇದ್ದರು. ಆದರು ಸಹ ಅಧಿವೇಶನದಲ್ಲಿ ಏಕೆ ಭಾಗವಹಿಸಲಿಲ್ಲ. ಸದನದಲ್ಲಿ ಭಾಗವಹಿಸಿ ಈ ಬಗ್ಗೆ ಮಾತಾಡಬಹುದಿತ್ತು. ರಮೇಶ್ ಸಾವಿನ ಬಗ್ಗೆ ನಾನಾ ಸಂಶಯಗಳಿವೆ. ಇದು ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ಆರೋಪ ಮಾಡಿದರು.

    ರಮೇಶ್ ಆತ್ಮಹತ್ಯೆ:
    ಡಾ. ಜಿ ಪರಮೇಶ್ವರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ರಮೇಶ್ ಅವರ ಬಳಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು ಎನ್ನಲಾಗುತ್ತಿದೆ. ಇದರಿಂದ ನೊಂದಿದ್ದ ರಮೇಶ್ ನನ್ನ ಮರ್ಯಾದೆ ಹೋಯಿತು. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶನಿವಾರ ಬೆಳಗ್ಗೆ ತನ್ನ ಆಪ್ತರಿಬ್ಬರಿಗೆ ಕರೆ ಮಾಡಿ ತಿಳಿಸಿ, ತನ್ನ ಮೊಬೈಲನ್ನು ಸ್ವಿಚ್ಚ್ ಆಫ್ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರಮೇಶ್ ಅವರು ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್ ನಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

    ರಮೇಶ್ ಆತ್ಮಹತ್ಯೆ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಮನೆಯವರು ಸ್ಥಳಕ್ಕೆ ದೌಡಾಯಿಸಿದ್ದು, ಆಕ್ರಂದನ ಮುಗಿಲುಮುಟ್ಟಿತ್ತು. ಅಲ್ಲದೆ ಇದೇ ವೇಳೆ ಪರಮೇಶ್ವರ್, ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಕೂಡ ಘಟನಾ ಸ್ಥಳಕ್ಕೆ ಬಂದು ರಮೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದರು. ರಮೇಶ್ ಸ್ವಗೃಹ ರಾಮನಗರದ ಮೇಳಹಳ್ಳಿಯಲ್ಲಿ ಇಂದು ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

  • ಈಶ್ವರಪ್ಪ, ಯಡಿಯೂರಪ್ಪ ಲವ ಕುಶ ಇದ್ದಂತೆ: ರೇಣುಕಾಚಾರ್ಯ

    ಈಶ್ವರಪ್ಪ, ಯಡಿಯೂರಪ್ಪ ಲವ ಕುಶ ಇದ್ದಂತೆ: ರೇಣುಕಾಚಾರ್ಯ

    ದಾವಣಗೆರೆ: ಈಶ್ವರಪ್ಪ, ಯಡಿಯೂರಪ್ಪ ಲವ ಕುಶ ಇದ್ದಂತೆ. ಈಶ್ವರಪ್ಪ ನವರು ಯಡಿಯೂರಪ್ಪ ನವರ ವಿರುದ್ಧ ಟೀಕೆ ಮಾಡಿಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

    ಪಕ್ಷದಲ್ಲಿ ಏನೇ ಇದ್ದರು ಅದನ್ನು ಬಹಿರಂಗವಾಗಿ ಹೇಳಿಕೆ ನೀಡಬೇಡಿ. ಯಾವುದೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕುಳಿತು ಚರ್ಚೆ ಮಾಡೋಣಾ. ಬಹಿರಂಗ ಹೇಳಿಕೆ ಕೊಟ್ಟರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಭಿನ್ನಮತ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

    ಇಂದು ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿ, ವಾಪಸ್ಸು ಬಂದಿದ್ದು ಆಯ್ತು. ಪಕ್ಷ ಸಂಘಟನೆಯಲ್ಲಿದೆ, ಯಡಿಯೂರಪ್ಪನವರೇ ನಮ್ಮ ನಾಯಕರು. ನಾವೆಲ್ಲ ಯಡಿಯೂರಪ್ಪ ನವರ ಜೊತೆ ಇರುತ್ತೇವೆ. ಈ ಅರ್ಥದಲ್ಲಿ ಮಾತ್ರ ರಾಮದಾಸ್ ಹೇಳಿರೋದು, ಬೇರೆನು ಅಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಂ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್, ಯಡಿಯೂರಪ್ಪನವರು ಹೋರಾಟದ ಮುಖಾಂತರ ಪಕ್ಷ ಕಟ್ಟಿದ್ದಾರೆ. ಪ್ರಶ್ನಾತೀತ ವ್ಯಕ್ತಿಯಾಗಿ ಬೆಳೆದಿದ್ದಾರೆ. ಅವರ ಮೇಲೆ ಕಾಂಗ್ರೆಸ್‍ನವರು ಸುಖಾ ಸುಮ್ಮನೆ ಅಪಪ್ರಚಾರ ಮಾಡುತ್ತಾ ಇದ್ದಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಕಿಡಿಕಾರಿದರು.

    ಬಿಎಸ್‍ವೈ ತಂತಿ ಮೇಲೆ ನಡಿಗೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಎಲ್ಲಾ ಸಮಾಜಕ್ಕೆ ಸಮಾನ ರೀತಿ ಅನುದಾನ ಬಿಡುಗಡೆ ಮಾಡಲು ಈ ರೀತಿ ಹೇಳಿದ್ದಾರೆ. ವೀರಶೈವ ಮಠಗಳಿಗೆ ಅನುದಾನ ನೀಡಿ ಎಂದು ಹೇಳಿದಾಗ ಈ ರೀತಿ ಹೇಳಿಕೆ ನೀಡಿದ್ದಾರೆ. ಪಕ್ಷದಲ್ಲಿ ಯಾವುದೇ ಇರಿಸು ಮುರಿಸಿಲ್ಲ. ರಾಜ್ಯದಲ್ಲಿ ನೆರೆಹಾವಳಿಯಾಗಿದ್ದು ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರದ ನಾಯಕರ ಮೇಲೆ ವಿಶ್ವಾಸವಿದೆ. ಅನುದಾನ ಬೇಗ ಬಿಡುಗಡೆ ಮಾಡುತ್ತಾರೆ. 2 ಸಾವಿರ ದಿಂದ 3 ಸಾವಿರ ಕೋಟಿ ಹಣ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನು ಓದಿ: ಸಂಘಟನೆ ಬಿಟ್ಟು ಹೋದವ್ರು ಯಾರೂ ಯಶಸ್ವಿಯಾಗಿಲ್ಲ- ಕೆ.ಎಸ್ ಈಶ್ವರಪ್ಪ

    ಹೊಸಪೇಟೆಯಲ್ಲಿ ಹೊಸ ಜಿಲ್ಲೆಗೆ ಪಕ್ಷದ ಶಾಸಕರಿಂದಲೇ ವಿರೋಧ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಯಡಿಯೂರಪ್ಪನವರು ಸಚಿವ ಶ್ರೀರಾಮುಲು ಜೊತೆ ಮಾತನಾಡಿದ್ದಾರೆ. ಎಲ್ಲಾ ಶಾಸಕರು ಮತ್ತು ಸಂಸದರನ್ನು ಕರೆದು ಸಭೆ ನಡೆಸಲಾಗುತ್ತದೆ. ಬೆಳಗಾವಿ, ಬಳ್ಳಾರಿಯಲ್ಲಿ ಹೊಸ ಜಿಲ್ಲೆಗಳಾದರೆ ಒಳ್ಳೆಯದು. ಆಡಳಿತ ದೃಷ್ಟಿಯಿಂದ ಅಲ್ಲಿ ಹೆಚ್ಚು ಅನುದಾನ ನೀಡಿ ಅಭಿವೃದ್ಧಿ ಮಾಡಬಹುದು. ಅದಕ್ಕಾಗಿ ಹೊಸಪೇಟೆ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಲು ಹೊರಟಿದ್ದಾರೆ. ಇಲ್ಲಿ ಮುಖ್ಯಮಂತ್ರಿಗಳ ಸ್ವಾರ್ಥ ಇಲ್ಲ. ಶಾಸಕ ಕರುಣಾಕರ ರೆಡ್ಡಿಯವರಿಗೆ ಸಹ ನಮ್ಮವರು. ಅವರಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.

  • ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಸರ್ಕಾರ ಬಂದಿದೆ- ರೇಣುಕಾಚಾರ್ಯ

    ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಸರ್ಕಾರ ಬಂದಿದೆ- ರೇಣುಕಾಚಾರ್ಯ

    ದಾವಣಗೆರೆ: 17 ಮಂದಿ ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಸರ್ಕಾರ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ರೀತಿ ಅನರ್ಹ ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ಬಂದಿದೆ ಎಂದಿದ್ದಾರೆ.

    ಪಕ್ಷ ನನ್ನನ್ನು ಗುರುತಿಸಿ ಸ್ಥಾನಮಾನ ನೀಡಿದೆ. ಕೊಟ್ಟಂತಹ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಸಮಾಧಾ£ಪಡಿಸಲು ರಾಜಕೀಯ ಕಾರ್ಯದರ್ಶಿಯಾಗಿ ಮಾಡಿದ್ದಾರೆ ಎನ್ನುತ್ತಾರೆ. ಆದರೆ ನನಗೆ ಅಂತಹ ಯಾವುದೇ ಅಸಮಾಧಾನವಿಲ್ಲ. ನಮಗೆ ಪಕ್ಷ ಮೊದಲು ಅಧಿಕಾರ, ಸ್ಥಾನ ಮಾನ ನಂತರ ಎಂದು ಹೇಳಿದರು.

    ಇದೇ ವೇಳೆ ಅಬಕಾರಿ ಸಚಿವ ನಾಗೇಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಹುಚ್ಚು ಹುಚ್ಚಾದ ಹೇಳಿಕೆ ಕೊಡುವುದನ್ನ ನಿಲ್ಲಿಸಲಿ. ಮನೆಮನೆಗೆ, ಹಟ್ಟಿಗಳಿಗೆ ಮದ್ಯ ಸರಬರಾಜು ಮಾಡುವುದಾಗಿ ಹೇಳಿ ಸರ್ಕಾರಕ್ಕೆ ಡ್ಯಾಮೇಜ್ ಮಾಡಬೇಡಿ. ಸಿಎಂ ಸಲಹೆ ಪಡೆದು ಪ್ರಬುದ್ಧ ರಾಜಕಾರಣ ಮಾಡಿ ಎಂದು ಸಲಹೆ ನೀಡಿದರು.

    ನಾನು ಅಬಕಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ವಿಧಾನಸೌದದ ಮೂರನೇ ಮಹಡಿಯಲ್ಲಿ ಮಾತ್ರ ಅಧಿಕಾರ ಇತ್ತು. ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕಳ್ಳಭಟ್ಟಿ, ನಕಲಿ ಮದ್ಯ ತಡೆಗಟ್ಟಿ ಸರ್ಕಾರಕ್ಕೆ ಆದಾಯ ತಂದಿದ್ದೇನೆ. ಹೀಗಾಗಿ ನಾಗೇಶ್ ಅವರು ಆತುರದ ಹೇಳಿಕೆ ಕೊಡದೇ ಸರಿಯಾಗಿ ಜವಾಬ್ದಾರಿ ನಿರ್ವಹಿಸಲಿ ಎಂದರು.

    https://www.youtube.com/watch?v=-f8ZukxBbbY

  • ಹಿರೇಕಲ್ಮಠದ ಜಾತ್ರೆಯಲ್ಲಿ ಕೆಂಡ ಹಾರಿ ಭಕ್ತಿ ತೋರಿದ ರೇಣುಕಾಚಾರ್ಯ

    ಹಿರೇಕಲ್ಮಠದ ಜಾತ್ರೆಯಲ್ಲಿ ಕೆಂಡ ಹಾರಿ ಭಕ್ತಿ ತೋರಿದ ರೇಣುಕಾಚಾರ್ಯ

    ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದ ಹಿರೇಕಲ್ಮಠದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರೇಣುಕಾಚಾರ್ಯ ಕೆಂಡ ಹಾರಿ ಭಕ್ತಿ ತೋರಿಸಿದ್ದಾರೆ.

    ಹಿರೇಕಲ್ಮಠದ ಜಾತ್ರೋತ್ಸವವು ಶ್ರಾವಣ ಮಾಸದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು. ಶ್ರೀಗಳಾದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯಿತು.

    ಈ ಸಂಭ್ರಮದಲ್ಲಿ ಡೊಳ್ಳು ಕುಣಿತ ಮಂಗಳವಾದ್ಯ ವೀರಗಾಸೆ ಕೀಲುಕುದುರೆ ಹಾಗೂ ಇನ್ನೂ ಹಲವಾರು ಮಂಗಳಕರ ವಾದ್ಯಗಳನ್ನು ತರಿಸಿ ಆನೆಯ ಮೆರವಣಿಗೆ ಸಹ ನಡೆಸಲಾಯಿತು. ಅಲ್ಲದೇ ಪೂಜ್ಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ಸನ್ನಿಧಿಯಲ್ಲಿ ನಡೆದ ಕೆಂಡಾರ್ಚನೆ ಸೇವೆಯಲ್ಲಿ ಪಾಲ್ಗೊಂಡು ಸ್ವತಃ ಶಾಸಕ ರೇಣುಕಾಚಾರ್ಯ ಅವರು ಕೆಂಡದ ಹೊಂಡವನ್ನು ಹಾಯ್ದರು. ಪ್ರತಿ ವರ್ಷ ನಡೆಯುವ ಜಾತ್ರೆಗೆ ತಪ್ಪದೇ ಭಾಗಿಯಾಗುವ ಶಾಸಕ ರೇಣುಕಾಚಾರ್ಯ ಶ್ರೀಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಯನ್ನು ನೆರವೇರಿಸುತ್ತಾರೆ.

    ಹಿರೇಕಲ್ಮಠ ಶ್ರೀಗಳ ಜಾತ್ರಾಮಹೋತ್ಸವಕ್ಕೆ ಸಾವಿರಾರು ಭಕ್ತರು ಭಾಗಿಯಾಗಿ ರಥೋತ್ಸವವನ್ನು ನೆರವೇರಿಸಿ ನಂತರ ಹರಕೆ ಮಾಡಿಕೊಂಡ ಭಕ್ತರು ಕೆಂಡದ ಹೊಂಡವನ್ನು ಹಾದು ಹೋಗಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

  • ನಾನು ಹೊನ್ನಾಳಿ ಹುಲಿ, ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲ್ಲ: ರೇಣುಕಾಚಾರ್ಯ

    ನಾನು ಹೊನ್ನಾಳಿ ಹುಲಿ, ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲ್ಲ: ರೇಣುಕಾಚಾರ್ಯ

    ಚಿತ್ರದುರ್ಗ: ನಾನು ಹೊನ್ನಾಳಿ ಹುಲಿ, ಯಾವುದಕ್ಕೂ ಜಗ್ಗುವುದಿಲ್ಲ. ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ.

    ಇಂದು ಚಿತ್ರದುರ್ಗದ ಸಿರಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಬೇಕು ಎಂದರೆ ಸಿಎಂ ಬಿಎಸ್‍ವೈ ಬಳಿ ಪಟ್ಟು ಹಿಡಿಯುತ್ತಿದ್ದೆ. ಯಡಿಯೂರಪ್ಪ ಹಾಗು ವರಿಷ್ಠರ ಬಳಿ ನಾಲ್ಕು ಗೋಡೆ ಮಧ್ಯೆ ಕೇಳುತ್ತೇನೆ. ಬಿಜೆಪಿಗೆ ನಾನು ದ್ರೋಹ ಮಾಡುವುದಿಲ್ಲ. ನನಗೆ ಸದ್ಯ ಮಂತ್ರಿ ಸ್ಥಾನದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸೋತ ಶಾಸಕರು ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಸಾಥ್ ನೀಡಲಿಲ್ಲ. ಈಗ ಕೆಲವರು ಸಚಿವರಾಗಿ ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಅದರ ಅಗತ್ಯ ನಮಗೆ ಇಲ್ಲ. ಎಲ್ಲರೂ ತಿರಸ್ಕರಿಸಿದ ಅಬಕಾರಿ ಖಾತೆ ಪಡೆದು ರಾಜ್ಯ ಸುತ್ತಿದವನು ನಾನು. ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ತಂದುಕೊಟ್ಟಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

    ಈ ವೇಳೆ ಹೈಕಮಾಂಡ್ ಬಳಿ ಯಡಿಯೂರಪ್ಪ ಅಸಾಹಯಕರಾಗಿದ್ದಾರೆಂಬ ಮಾಜಿ ಸಚಿವ ಹೆಚ್. ಆಂಜನೇಯ ಅವರ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಆಂಜನೇಯ ಸಿದ್ದರಾಮಯ್ಯನವರ ಬಾಲವಾಗಿದ್ದವರು. ಆಂಜನೇಯನಿಗೇನು ಗೊತ್ತಿದೆ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದ ಅವರು ಭ್ರಷ್ಟಾಚಾರಿ ಆಂಜನೇಯಗೆ ಬಿ.ಎಸ್.ವೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ರಾಜ್ಯದಲ್ಲಿ ಮತ್ತೋರ್ವ ಯಡಿಯೂರಪ್ಪ ಹುಟ್ಟಲ್ಲ. ನಮಗೆ ಆಂಜನೇಯರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಗುಡುಗಿದರು.

  • ಭಂಡ ನಾನು, ಯಾವ ಸರ್ಕಾರ ಇರಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ರೇಣುಕಾಚಾರ್ಯ

    ಭಂಡ ನಾನು, ಯಾವ ಸರ್ಕಾರ ಇರಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ರೇಣುಕಾಚಾರ್ಯ

    ದಾವಣಗೆರೆ: ಭಂಡ ನಾನು, ಯಾವ ಸರ್ಕಾರ ಇರಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

    ಇಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಚಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ಸರ್ಕಾರವಿರಲಿ ಅಭಿವೃದ್ಧಿ ಮುಖ್ಯ. ಈಗ ನಮ್ಮ ಸರ್ಕಾರ ಬಂದಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.

    ಈ ಹಿಂದೆ 2012 ರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರು ಮುಖ್ಯಮಂತ್ರಿಯಾಗಿದ್ದಾಗ ಹೊನ್ನಾಳಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದೆ. ಈಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸರ್ಕಾರವಿದೆ. ಈ ಸರ್ಕಾರದಲ್ಲಿ ನ್ಯಾಮತಿಯನ್ನು ಅಭಿವೃದ್ಧಿ ಮಾಡುವ ಪಣ ತೊಟ್ಟಿದ್ದೇನೆ. ನ್ಯಾಮತಿ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಇದೇ ವೇಳೆ ತಾಲೂಕು ಅಡಳಿತ ನೆರೆ ಸಂತ್ರಸ್ತರಿಗಾಗಿ 8 ಲಕ್ಷ ರೂಪಾಯಿ ನಗದು, ಅಕ್ಕಿ ಹಾಗೂ ಸೀರೆ ಸಂಗ್ರಹಿಸಿತ್ತು. ಈ ಸಾಮಗ್ರಿಗಳನ್ನು ತುಂಬಿದ ಟ್ರ್ಯಾಕ್ಟರನ್ನು ತಾಲೂಕು ಕಚೇರಿ ಎದುರು ರೇಣುಕಾಚಾರ್ಯ ಚಲಾಯಿಸಿ ಚಾಲನೆ ನೀಡಿದರು.

  • ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬೇಸರ: ರೇಣುಕಾಚಾರ್ಯ

    ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬೇಸರ: ರೇಣುಕಾಚಾರ್ಯ

    -ನಾನು ಬಿಎಸ್‍ವೈ ಮನೆ ಮಗ
    -ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ರಾಜಕೀಯ ನಿವೃತ್ತಿ

    ಬೆಂಗಳೂರು: ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ನಿಜಕ್ಕೂ ನನಗೆ ಬೇಸರ ಇದೆ, ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ. ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ಹಾಗೇನಾದರೂ ಕಷ್ಟ ಎದುರಾದಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.

    ಈ ಕುರಿತು ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಹಂಚಿಕೆ ಕುರಿತು ನನಗೆ ಅಸಮಾಧಾನವಿದೆ. ಗೆದ್ದವರಿಗೆ ಸಚಿವ ಸ್ಥಾನ ಕೊಡುವುದನ್ನು ಬಿಟ್ಟು ಸೋತವರಿಗೇಕೆ ನೀಡಿದ್ದಾರೆ. ಈಗ ಬಂದು ನಾಟಕ ಮಾಡೋದು ನನಗೆ ಇಷ್ಟವಿಲ್ಲ. ಹಲವಾರು ಜನ ಗೆದ್ದವರಿದ್ದಾರೆ. ಬೆಳಗಾವಿ ಭಾಗದ ಹಿರಿಯ ನಾಯಕರಾಗಿರುವ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೆ, ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಸಾಕಷ್ಟು ಜನರಿಗೆ ಬೇಸರ ತಂದಿದೆ. ಗೆದ್ದವರಿಗೆ ಕೊಟ್ಟಿದ್ದರೆ ಗೌರವ ಇರುತಿತ್ತು. ನಾನು ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.

    ನಾನು ಯಾರನ್ನೂ ಭೇಟಿಯಾಗಿಲ್ಲ, ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿಯಾಗಲ್ಲ. ಹೆಚ್‍ಡಿಕೆ ನಡೆ, ನಮ್ಮ ನಡೆ ಬೇರೆಯಾಗಿವೆ. ಸಿಎಂ ಯಡಿಯೂರಪ್ಪನವರು ರಾಜಕೀಯದಲ್ಲಿ ಇರುವವರೆಗೆ ನಾನೂ ಇರುತ್ತೇನೆ, ನಾನು ಯಡಿಯೂರಪ್ಪ ಮನೆಯ ಮಗ ಎಂದು ಶಾಸಕ ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

    ಕೊನೆಯ ಉಸಿರು ಇರುವವರೆಗೂ ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಸಚಿವ ಸ್ಥಾನ ಕೊಡಲಿ, ಕೊಡದಿರಲಿ ನಾನು ಯಡಿಯೂರಪ್ಪನವರ ಜೊತೆಗೆ ಇರುತ್ತೇನೆ. ಸಚಿವ ಸ್ಥಾನಕ್ಕೆ ನಾನು ಯಾವುದೇ ಲಾಬಿ ಮಾಡಿಲ್ಲ. ಕೆಲವರಿಗೆ ಅಸಮಾಧಾನ ಇರುವುದು ನಿಜ. ಆದರೆ ಯಾವುದೇ ಗುಪ್ತ ಸಭೆಗಳನ್ನು ಮಾಡಿಲ್ಲ, ಅದರ ಅವಶ್ಯಕತೆಯೂ ನನಗೆ ಇಲ್ಲ ಎಂದು ತಿಳಿಸಿದರು.

  • ಪ್ರವಾಹದಿಂದ ರಾಜ್ಯದ ಜನ ತತ್ತರ- ಇತ್ತ ಕಬಡ್ಡಿ ಆಡಿದ ಶ್ರೀರಾಮುಲು

    ಪ್ರವಾಹದಿಂದ ರಾಜ್ಯದ ಜನ ತತ್ತರ- ಇತ್ತ ಕಬಡ್ಡಿ ಆಡಿದ ಶ್ರೀರಾಮುಲು

    ಬಳ್ಳಾರಿ: ಒಂದೆಡೆ ಮುಖ್ಯಮಂತ್ರಿಗಳು ಏಕಾಂಗಿಯಾಗಿ ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಆದರೆ, ಕೆಲ ಶಾಸಕರು ರಾಜ್ಯದ ಜನರ ಸಂಕಷ್ಟಕ್ಕೆ  ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

    ಒಂದೆಡೆ ಪ್ರವಾಹ ಸಂತ್ರಸ್ತರನ್ನು ಕಾಪಾಡುವ ನೆಪದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ನೆಲದ ಮೇಲೆ ತೆಪ್ಪವನ್ನು ಓಡಿಸುತ್ತಾರೆ. ಇನ್ನೊಂದೆಡೆ ನನಗೆನೂ ಸಂಬಂಧವೇ ಇಲ್ಲ ಎನ್ನವಂತೆ ಮೊಳಕಾಲ್ಮೂರು ಶಾಸಕ ಶ್ರೀ ರಾಮುಲು ಅವರು ಕಬಡ್ಡಿ ಆಡುವುದರಲ್ಲಿ ನಿರತರಾಗಿದ್ದಾರೆ. ರಾಜ್ಯ ಸಂಕಷ್ಟದಲ್ಲಿ ಸಿಲುಕಿರುವಾಗ ಶಾಸಕರಿಗೆ ಅದರ ಅರಿವೇ ಇಲ್ಲದಂತಾಗಿದೆ. ರಾಜ್ಯವೇ ಕಂಬನಿ ಮಿಡಿಯುತ್ತಿದ್ದರೂ ಕೆಲ ಶಾಸಕರು ಮಾತ್ರ ಪರಿಹಾರ ಕಾರ್ಯದಲ್ಲಿ ಭಾಗಿಯಾಗುತ್ತಿಲ್ಲ.

    18 ಜಿಲ್ಲೆಗಳನ್ನು ಪ್ರವಾಹ ಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೂ ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಯೊಬ್ಬರೇ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪ್ರಯತ್ನ ಮೀರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಬೆನ್ನಿಗೆ ಯಾವ ಶಾಸಕರು ಹಾಗೂ ನಾಯಕರೂ ನಿಲ್ಲುತ್ತಿಲ್ಲ. ಶಾಸಕರು ಸಿಎಂ ಕಾರ್ಯವನ್ನು ಅರಿತು ತಾವು ಒಂದು ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡು ಸಮಸ್ಯೆ ಪರಿಹರಿಸಬೇಕಿತ್ತು. ಆದರೆ, ಶಾಸಕರು ಮಾತ್ರ ತಮ್ಮದೇ ಲೋಕದಲ್ಲಿದ್ದಾರೆ ಎಂದು ಜನ ಕಿಡಿಕಾರುತ್ತಿದ್ದಾರೆ.

    ಈ ಕುರಿತು ಶ್ರೀ ರಾಮುಲು ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಾನು ನಾಳೆಯಿಂದ ಪ್ರವಾಸಕ್ಕೆ ಹೊರಟಿದ್ದೇನೆ. ಹಗರಿಬೊಮ್ಮನಹಳ್ಳಿ, ಕೂಡ್ಲಗಿ, ರಾಯಚೂರು, ದೇವದುರ್ಗ, ಹರಪನಹಳ್ಳಿಗಳಲ್ಲಿ ಪರಿಹಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ. ನಾನು ಕಬ್ಬಡ್ಡಿ ಆಡಿರುವುದು ಬೇರೆ ಉದ್ದೇಶದಿಂದಲ್ಲ. ಮಕ್ಕಳು ಹಠ ಮಾಡಿದ್ದರಿಂದ ಕಬಡ್ಡಿ ಆಡಿದೆ. ಇದು ಪೂರ್ವನಿಯೋಜಿತ ಕಾರ್ಯಕ್ರಮವಾಗಿತ್ತು. ಹೀಗಾಗಿ ಭಾಗವಹಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈವರೆಗೆ ಯಾವ ಜಿಲ್ಲೆಯಲ್ಲೂ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ, ನನ್ನಿಂದ ತಪ್ಪಾಗಿದೆ. ಸುಷ್ಮಾ ಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಮೊನ್ನೆಯಷ್ಟೇ ಬಂದೆ. ಮಕ್ಕಳೆಲ್ಲ ಈ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲದೆ, ಮೂರು ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಇವರು ರಾಜ್ಯಮಟ್ಟದಲ್ಲಿ ಭಾಗವಹಿಸಲಿದ್ದಾರೆ, ಜಿಲ್ಲಾ ಮಟ್ಟದ ಕಾರ್ಯಕ್ರಮವಾದ್ದರಿಂದ ಭಾಗವಹಿಸಬೇಕಾಯಿತು. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿದರು.

  • ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ, ಡಿಕೆಶಿ ವರ್ಚಸ್ಸು ಹಾಳಾಗ್ತಿದೆ: ರೇಣುಕಾಚಾರ್ಯ

    ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ, ಡಿಕೆಶಿ ವರ್ಚಸ್ಸು ಹಾಳಾಗ್ತಿದೆ: ರೇಣುಕಾಚಾರ್ಯ

    ಬೆಂಗಳೂರು: ಬಹುಮತ ಇಲ್ಲ ಅಂದರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಆಟ ಆಡುತ್ತಿದ್ದಾರೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸು ಹಾಳಾಗುತ್ತಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಸ್ಪೀಕರ್ ಸಮಯವನ್ನು ನಿಗದಿ ಮಾಡಿದ್ದಾರೆ. ಸಂಜೆ 5 ರಿಂದ 6ಕ್ಕೆ ಬಹುಮತವನ್ನು ಕೇಳುತ್ತಾರೆ. ಮೈತ್ರಿಗೆ ಬಹುಮತ ಇಲ್ಲ ಅಂದರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಆಟ ಆಡುತ್ತಿದ್ದಾರೆ. ದೋಸ್ತಿ ಉಳಿಸಿಕೊಳ್ಳಲು ಹೋಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ ಎಂದರು.

    ಸಿಎಂ ಅಧಿಕಾರಕ್ಕೆ ಅಂಟಿಕೂರಲ್ಲ ಎನ್ನುತ್ತಾರೆ. ಆದರೂ ರಾಜೀನಾಮೆ ಕೊಡದೆ ಹಾಗೇ ಇದ್ದಾರೆ. ಈ ಹಿಂದೆ ದೇವೇಗೌಡ ಸಿದ್ದರಾಮಯ್ಯರನ್ನ ಉಚ್ಚಾಟನೆ ಮಾಡಿದ್ದರು. ಡಿಕೆ ಶಿವಕುಮಾರ್‍ರನ್ನ ಮಂತ್ರಿವರ್ಗಕ್ಕೆ ಸೇರಲು ದೇವೇಗೌಡರು ಬಿಟ್ಟಿರಲಿಲ್ಲ ಎಂದು ಆರೋಪಿಸಿದರು. ಬಳಿಕ ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿದೆ. ಸಿದ್ದರಾಮಯ್ಯರಿಗೆ ವೈಯಕ್ತಿಕ ವರ್ಚಸ್ಸಿದೆ. ಆದ್ದರಿಂದ ಅವರು ಸರ್ಕಾರದ ಪರವಾಗಿ ನಿಲ್ಲಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಕೈ ಕಟ್ಟಿಹಾಕಿದೆ. ಸರ್ಕಾರ ಇರೋದು ಸಿದ್ದರಾಮಯ್ಯರಿಗೂ ಇಷ್ಟವಿಲ್ಲ. ಸ್ಪೀಕರ್ ಕುಮಾರಸ್ವಾಮಿ ತರ ವಚನಭ್ರಷ್ಟರಾಗುವುದಿಲ್ಲ. ಇಂದು ಸಂಜೆ 6 ಗಂಟೆ ಒಳಗಡೆ ಈ ಸರ್ಕಾರ ಪತನವಾಗತ್ತೆ ಎಂದು ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.

  • ನಮ್ಮನ್ನ ಪ್ರಚೋದನೆ ಮಾಡೋದೆ ಮೈತ್ರಿ ಸರ್ಕಾರದ ಉದ್ದೇಶ : ರೇಣುಕಾಚಾರ್ಯ

    ನಮ್ಮನ್ನ ಪ್ರಚೋದನೆ ಮಾಡೋದೆ ಮೈತ್ರಿ ಸರ್ಕಾರದ ಉದ್ದೇಶ : ರೇಣುಕಾಚಾರ್ಯ

    – ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ
    – ಡಿಕೆಶಿ ನಾಟಕ ಆಡುತ್ತಿದ್ದಾರೆ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ, ಸಚಿವ ಡಿ.ಕೆ ಶಿವಕುಮಾರ್ ಅವರು ನಾಟಕ ಆಡುತ್ತಿದ್ದಾರೆ ಎಂದು ಬೆಳ್ಳಂಬೆಳಗ್ಗೆ ದೋಸ್ತಿ ನಾಯಕರ ವಿರುದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

    ರಮಡ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಈ ನಡುವೆ ರೇಣುಕಾಚಾರ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಸ್ವೀಕರ್ ರಮೇಶ್ ಕುಮಾರ್ ಅವರು ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಕೆಲಸ ಆಗಿಲ್ಲ. ಇದು ಹೀಗೆ ಮುಂದುವರಿದರೆ ಮತ್ತೊಮ್ಮೆ ಇವರು ವಚನ ಭ್ರಷ್ಟರಾಗುತ್ತಾರೆ. ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ಮೈತ್ರಿ ಉಳಿಸಲು ಡಿ.ಕೆ ಶಿವಕುಮಾರ್ ಅವರು ನಾಟಕ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ನಮ್ಮನ್ನ ಪ್ರಚೋದನೆ ಮಾಡುವುದೇ ಮೈತ್ರಿ ಸರ್ಕಾರದ ಉದ್ದೇಶವಾಗಿದೆ. ನಾವು ಶಿಸ್ತಿನಿಂದ ಇದ್ದೇವೆ. ನಾವು ಯಾವ ಅಧಿಕಾರಕ್ಕೂ ಅಂಟಿಕೊಂಡಿಲ್ಲ. ಸರ್ಕಾರ ನಮ್ಮ ಅಪ್ಪನ ಆಸ್ತಿಯೂ ಅಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ ವಿಶ್ವಾಸ ಮತ ಯಾಚನೆ ಮಾಡುತ್ತಿಲ್ಲ. ಗೂಟ ಹೊಡೆದುಕೊಂಡು ಕೂತ್ತಿದ್ದೀರಾ? ಎಂದು ಪ್ರಶ್ನಿಸಿದರು. ಬಳಿಕ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದೀರಾ, ರಾಜೀನಾಮೆ ಕೊಟ್ಟುಹೊಗಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂಬೈನಲ್ಲಿರೋ ಶಾಸಕರೆ ಸ್ವತಃ ಹೇಳಿದ್ದಾರೆ. ಆದ್ರೆ ಡಿಕೆಶಿ ನಾಟಕ ಆಡುತ್ತಿದ್ದಾರೆ. ನಮ್ಮ ಮೇಲೆ ಸುಮ್ಮನೆ ಅರೋಪ ಮಾಡುತ್ತಿದ್ದಾರೆ. ಅವರಿಗೆ ಸಂಖ್ಯೆ ಬಲ ಇಲ್ಲ ಎಂದು ಗೊತ್ತು. ಅದಕ್ಕಾಗಿ ಅವರು ಈ ರೀತಿ ಮಾತಾನಾಡಿ ಸದನವನ್ನು ಮುಂದೂಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.