Tag: Renukacharya

  • ಕುಮಟಳ್ಳಿ ಪರ ಬ್ಯಾಟಿಂಗ್ ಮಾಡಿ ರೇಣುಕಾಚಾರ್ಯ ವಿರುದ್ಧ ನಿರಾಣಿ ಗರಂ

    ಕುಮಟಳ್ಳಿ ಪರ ಬ್ಯಾಟಿಂಗ್ ಮಾಡಿ ರೇಣುಕಾಚಾರ್ಯ ವಿರುದ್ಧ ನಿರಾಣಿ ಗರಂ

    ಬೆಂಗಳೂರು: ಮಹೇಶ್ ಕುಮಟಳ್ಳಿ ಪರ ಮಾಜಿ ಸಚಿವ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಬ್ಯಾಟಿಂಗ್ ನಡೆಸಿ ರೇಣುಕಾಚಾರ್ಯ ವಿರುದ್ಧ ಗರಂ ಆಗಿದ್ದಾರೆ.

    ಕುಮಟಳ್ಳಿಗೆ ಸಚಿವ ಸ್ಥಾನ ನೀಡಬೇಕು. 11 ಜನ ನೂತನ ಶಾಸಕರಲ್ಲಿ ಅವರೊಬ್ಬರನ್ನು ಕೈ ಬಿಟ್ಟರೆ ತಪ್ಪಾಗುತ್ತದೆ. ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಕೈ ಬಿಡುವುದು ಒಳ್ಳೆಯದಲ್ಲ. ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು ಎಂದಿದ್ದಾರೆ.

    ಶಾಸಕರ ಭವನದಲ್ಲಿ ಮಾತನಾಡಿದ ನಿರಾಣಿ, ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈ ಬಿಡುವುದು ಸರಿಯಲ್ಲ. ಸಿಎಂಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ ಶಾಸಕನಾಗಿ ಹೀಗೆ ಮಾಡಿ ಎಂದು ಹೇಳಬಹುದಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿಎಂಗೆ 50 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇದೆ. ಎಲ್ಲವನ್ನೂ ಬಗೆಹರಿಸಿ ಸಿಎಂ ಸಚಿವರನ್ನಾಗಿ ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದ ಅವರು ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತ ಬಹಿರಂಗವಾಗಿ ಹೇಳಿದರು. ಇದನ್ನೂ ಓದಿ:ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

    ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ನಿರ್ಧಾರ. ಸಚಿವ ಸ್ಥಾನ ನೀಡಿದರೆ ಸಚಿವನಾಗಿ ಕೆಲಸ ಮಾಡುತ್ತೇನೆ. ಕೊಡದೇ ಇದ್ದರೆ ಶಾಸಕನಾಗಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಮಾಡಬೇಕು ಅಂತ ಜನತೆ ಒತ್ತಾಯ, ಶ್ರೀಗಳ ಒತ್ತಾಯ, ಸಮುದಾಯ ಒತ್ತಾಯವಿದೆ. ಆದರೆ ಸಿಎಂ ಅಂತಿಮ ನಿರ್ಧಾರ ಮಾಡಬೇಕು. ಸಿಎಂ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದು ತಿಳಿಸಿದರು.

    117 ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ಇರೋದು 16 ಮಂತ್ರಿಗಳ ಸ್ಥಾನ ಮಾತ್ರ. ಹೀಗಾಗಿ ಯಾರಿಗೆ ಕೊಡಬೇಕು ಅಂತ ಸಿಎಂ ನಿರ್ಧಾರವೇ ಅಂತಿಮ. ಎಲ್ಲರಿಗೂ ಸ್ಥಾನ ನೀಡುವುದು ಕಷ್ಟ. ನನಗೆ ಒಂದು ವೇಳೆ ಸಿಗಲಿಲ್ಲದಿದ್ದರೂ ಯಾವುದೇ ಅಸಮಾಧಾನ ಇಲ್ಲ ಎಂದರು.

    ಒಂದು ಕಡೆ ಸಚಿವ ಸ್ಥಾನ ಸಿಗೋದು ಡೌಟ್ ಅಂತ ಗೊತ್ತಾಗಿದ್ದೆ ತಡ ನಿರಾಣಿ ತಮ್ಮ ಅಸಮಾಧಾನವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೇಲೆ ತೀರಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೋದ ಬಂದ ಕಡೆ ಮಾತಾಡುತ್ತಿದ್ದಾರೆ. ಯಾರಿಗೆ ಸಚಿವ ಸ್ಥಾನ ಬೇಡ ಎಂದು ಹೇಳುತ್ತಿದ್ದಾರೆ. ಇದನ್ನು ಅರಿತಿರುವ ನಿರಾಣಿ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಮಾತನಾಡುತ್ತಾರೆ ಅವರನ್ನು ಕೇಳಿ ಅಂತ ಲೇವಡಿ ಮಾಡಿ ಆಕ್ರೋಶ ಹೊರ ಹಾಕಿದರು.

  • ನಾನು ಕಲ್ಲುಬಂಡೆ ಇದ್ದಂತೆ ಯಾವತ್ತು ಕರಗಲ್ಲ: ರೇಣುಕಾಚಾರ್ಯ

    ನಾನು ಕಲ್ಲುಬಂಡೆ ಇದ್ದಂತೆ ಯಾವತ್ತು ಕರಗಲ್ಲ: ರೇಣುಕಾಚಾರ್ಯ

    ದಾವಣಗೆರೆ: ನಾನು ಕಲ್ಲುಬಂಡೆ ಇದ್ದಂತೆ ನಾನ್ಯಾವತ್ತು ಕರಗಲ್ಲ. ಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ, ಈಗ ಎತ್ತಿನ ಬಂಡಿಯಲ್ಲಿ ಬಂದೆ. ಆ ಬಂಡಿ ಮುಂದೆ ಗೂಟದ ಕಾರು ಲೆಕ್ಕವೇ ಇಲ್ಲ ಎಂದು ದಾವಣಗೆರೆಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

    ಗೂಟದ ಕಾರು ಬೇಕು ಎನ್ನುವವರಿಗೆ ಮಂತ್ರಿ ಮಾಡಬೇಡಿ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ತಿರುಗೇಟು ನೀಡಿದ ರೇಣುಕಾಚಾರ್ಯ, ನಾನು ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿದ್ದು ನಿಜ. ಆದರೆ ನನಗೆ ಗೂಟದ ಕಾರು ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ.

    ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತ ಅಲ್ಲ ಯಾರೇ ಟೀಕೆ ಮಾಡಿದರು ಪರವಾಗಿಲ್ಲ. ನಾನು ಬಂಡೆಯಿದ್ದಂತೆ ಕರಗಲ್ಲ. ಸಚಿವ ಸಂಪುಟ ವಿಚಾರದಲ್ಲಿ ಸಿಎಂಗೆ ಪರಾಮಾಧಿಕಾರವಿದೆ. ಅವರು ಹಾಗೂ ಕೇಂದ್ರದ ವರಿಷ್ಠರು ಸೇರಿ ಸಚಿವ ಸ್ಥಾನ ತೀರ್ಮಾನ ಮಾಡುತ್ತಾರೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದರು.

    ಬಸ್ ನಿಲ್ದಾಣದಲ್ಲಿನ ಮಹಿಳೆ ಇದ್ದಾಗೆ ಎಂದು ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಸಿಎಂ ಇಬ್ರಾಹಿಂ ಅವರದ್ದು ಎಲುಬಿಲ್ಲದ ನಾಲಿಗೆ. ಆತ ಜೋಕರ್ ವಚನ ಹೇಳೋಕೆ ಅವರನ್ನು ಬಳಸಿಕೊಳ್ಳುತ್ತಾರೆ. ಸಿಎಂ ಇಬ್ರಾಹಿಂ ನೀಚ ಭದ್ರಾವತಿಯಲ್ಲಿ ಏನೇನೂ ಪ್ರಕರಣ ಮಾಡಿದ್ದಾರೆ ಎಲ್ಲ ಗೊತ್ತಿದೆ. ಇಡೀ ಭದ್ರಾವತಿಯನ್ನು ಕೋಮು ಗಲಭೆಗೆ ತಳ್ಳಿದವರು ಎಂದು ಆರೋಪಿಸಿದರು.

  • ಕುಮಾರಸ್ವಾಮಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ: ರೇಣುಕಾಚಾರ್ಯ ವ್ಯಂಗ್ಯ

    ಕುಮಾರಸ್ವಾಮಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ: ರೇಣುಕಾಚಾರ್ಯ ವ್ಯಂಗ್ಯ

    – ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸವಾಲು

    ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಜೀವ ಬೆದರಿಕೆ ಇದೆ ಎನ್ನುತ್ತಾ ಜನರ ವಿಶ್ವಾಸ ಗಿಟ್ಟಿಸುವ ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಕೆಆರ್ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಯಾರಿಂದ ಬೆದರಿಕೆ ಇದೆ ಅಂತ ಗೊತ್ತಿಲ್ಲ. ಅವರ ಜನಾಂಗ ಕೂಡ ಅವರಿಂದ ದೂರ ಸರಿಯುತ್ತಿದೆ. ಹೀಗಾಗಿ ಅನುಕಂಪದ ಮೂಲಕ ಹತ್ತಿರವಾಗಲು ಹೊರಟಿದ್ದಾರೆ. ಇದಕ್ಕಾಗಿ ಅವರು ಪದೇ ಪದೇ ಕಣ್ಣೀರು ಹಾಕುವುದನ್ನು ನಾವು ನೋಡಿದ್ದೇವೆ. ನೀವು ಮಾಜಿ ಮುಖ್ಯಮಂತ್ರಿ, ನಿಜವಾಗಲೂ ನಿಮಗೆ ಬೆದರಿಕೆ ಇದ್ದರೆ ದೂರು ಕೊಡಿ. ಯಾರಿಂದ ಬೆದರಿಕೆ ಪತ್ರ ಬಂದಿದೆ, ಯಾವಾಗ ಬೆದರಿಕೆ ಕರೆ ಬಂದಿದೆ ಎಂಬ ಮಾಹಿತಿ ಕೊಡಿ. ಗೃಹ ಇಲಾಖೆ ಅಥವಾ ಮುಖ್ಯಮಂತ್ರಿಗಳಿಗೆ ದಾಖಲೆ ತಲುಪಿಸಿ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ನನಗೆ ಬೆದರಿಕೆ ಇದೆ ಅಂದರೆ ಹೇಗೆ ಎಂದು ವ್ಯಂಗ್ಯವಾಡಿದರು.

    ಇದೇ ವೇಳೆ ಜಮೀರ್ ಅಹಮದ್ ವಿರುದ್ಧ ಆಕ್ರೋಶ್ ಹೊರಹಾಕಿದ್ದಾರೆ. ಜಮೀರ್ ಬೀದಿಯಲ್ಲಿ ನಿಂತಿದ್ದ, ಎಲ್ಲೆಲ್ಲೋ ಬಸ್ ಓಡಿಸಿಕೊಂಡಿದ್ದ. ಅವನನ್ನು ದೇವೇಗೌಡರ ಕುಟುಂಬದವರು ಕರೆದುಕೊಂಡು ಬಂದು ಎಂಎಲ್‍ಎ ಮಾಡಿದರು. ಆದರೆ ಅವರ ಕುಟುಂಬಕ್ಕೆ ಬೆನ್ನಿಗೆ ಚೂರಿ ಹಾಕಿದವನು ನನ್ನ ಬಗ್ಗೆ ಮಾತಾಡುತ್ತಾನೆ ಎಂದು ಗರಂ ಆದರು.

    ಸಿಎಎ ವಿಚಾರದಲ್ಲಿ ನಾನು ಪ್ರಚೋದನಕಾರಿ ಭಾಷಣ ಮಾಡಿಲ್ಲ. ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಕ್ರಿಮಿನಲ್ ಕೇಸ್ ದಾಖಲಿಸುವ ತಪ್ಪು ಮಾಡಿಲ್ಲ. ಸಿಎಎ ಜಾರಿಯಾದರೆ ಬೆಂಕಿ ಹಚ್ಚುತ್ತೇವೆ ಎಂದಿದ್ದು ಯು.ಟಿ.ಖಾದರ್. ನಿಮಗೆ ತಾಕತ್ತಿದ್ದರೆ ಪ್ರಚೋದನಾಕಾರಿ ಮಾತನಾಡಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.

    ಇದೇ ಸಂದರ್ಭದಲ್ಲಿ ವಿಶ್ವನಾಥ್‍ಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವನಾಥ್ ಮುಖ್ಯಮಂತ್ರಿಗಳ ಮಾತು ಕೇಳಬೇಕಿತ್ತು. ನನಗೆ ಸ್ಪರ್ಧೆ ಮಾಡಬೇಡಿ ಅಂತಾ ಸಿಎಂ ಹೇಳಿದ್ದರು ಎಂದು ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಹೇಳಿದ್ದಾರೆ. ಈಗ ಸೋತಿದ್ದಾರೆ, ಆ ನೋವಿನಲ್ಲಿ ಮಾತನಾಡಿದ್ದಾರೆ. ನೋವು ಹೇಳಿಕೊಳ್ಳುವುದು ತಪ್ಪೇ? ಅವರ ಮಾತಿಗೆ ಹೆಚ್ಚು ಒತ್ತುಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

  • ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿರುವ ಜೋಕರ್‌ನಂತೆ: ಜಮೀರ್ ವ್ಯಂಗ್ಯ

    ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿರುವ ಜೋಕರ್‌ನಂತೆ: ಜಮೀರ್ ವ್ಯಂಗ್ಯ

    ಬೆಂಗಳೂರು: ಶಾಸಕ ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿ ಇರುವ ಜೋಕರ್‌ನಂತೆ ಎಂದು ಹೇಳುವ ಮೂಲಕ ಮಾಜಿ ಸಚಿವ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.

    ನಗರದ ಗೋರಿಪಾಳ್ಯದ ಮೈದಾನದಲ್ಲಿ ಆಯೋಜನೆಗೊಂಡಿರುವ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೋಮಶೇಖರ್, ಅನಂತ್ ಕುಮಾರ್ ಹೆಗ್ಡೆಯಂತವರ ನಡುವೆ ಇರುವ ಜೋಕರ್‌ನಂತೆ ರೇಣುಕಾಚಾರ್ಯ. ಜೋಕರನ್ನು ಯಾರಾದ್ರೂ ಮಂತ್ರಿ ಮಾಡ್ತಾರಾ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋವಾದಲ್ಲಿ ಹೋಗಿ ಕುಳಿತುಕೊಂಡಿದ್ದು ಯಾರು ರೇಣುಕಾಚಾರ್ಯ ಅವರೇ ಎಂದು ಪ್ರಶ್ನಿಸಿದ್ದಾರೆ.

    ನಾನು ಖೋಟಾ ನೋಟು ಪ್ರಿಂಟ್ ಮಾಡಿದ್ದೀನಿ ಅಂತ ರೇಣುಕಾಚಾರ್ಯ ಹೇಳ್ತಾರೆ. ಗೋವಾದಲ್ಲಿ ಇದ್ದಾಗ ಅದೇ ಖೋಟಾ ನೋಟು ನಿಮಗೆ ನಾನು ಕೊಟ್ಟಿರಬಹುದು ಅಲ್ವಾ? ಈಗ ಯಡಿಯೂರಪ್ಪ ಚುನಾವಣೆ ಮಾಡಿದ್ರಲ್ಲ, ನಿಮಗೆ 30-40 ಕೋಟಿ ದುಡ್ಡು ಎಲ್ಲಿಂದ ಬಂತು? ನೀವು ಖೋಟಾ ನೋಟು ಪ್ರಿಂಟ್ ಮಾಡಿದ್ರಾ? ನಾವು ಅಣ್ಣ-ತಮ್ಮಂದಿರ ರೀತಿ ಬದುಕ್ತಾ ಇದ್ದೀವಿ. ರೇಣುಕಾಚಾರ್ಯ ಅದಕ್ಕೆಲ್ಲ ವಿಷ ಬಿತ್ತಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

    ನರ್ಸ್ ಜಯಲಕ್ಷ್ಮಿಗೆ ರೇಣುಕಾಚಾರ್ಯ ಬಗ್ಗೆ ಗೊತ್ತು!
    ರೇಣುಕಾಚಾರ್ಯ ಎಂಥವನು ಅಂತ ನರ್ಸ್ ಜಯಲಕ್ಷ್ಮಿಗೆ ಬಹಳ ಚೆನ್ನಾಗಿ ಗೊತ್ತಿದೆ. ಯಾಕೆಂದರೆ ಚುಮ್ಮಾ ಚುಮ್ಮಾ ಅಂತ ಬಹಳ ಹತ್ತಿರದಿಂದ ನೋಡಿದ್ದಾರೆ. ಇದನ್ನೆಲ್ಲ ರೇಣುಕಾಚಾರ್ಯ ಇಲ್ಲಿಗೇ ಬಿಟ್ಟು ಬಿಡಬೇಕು ಎಂದು ಕಿಡಿಕಾರಿದ್ದಾರೆ.

    ಇದಕ್ಕೂ ಮೊದಲು ಮೈದಾನಕ್ಕೆ ಆಗಮಿಸುತ್ತಿರೋ ಮಹಿಳೆಯನ್ನ ಸಾಲಿನಲ್ಲಿ ಬರುವಂತೆ ಶಾಸಕರು ನೋಡಿಕೊಂಡರು. ಕೈಯಲ್ಲಿ ಸಣ್ಣ ಪ್ಲಾಸ್ಟಿಕ್ ಪೈಪ್ ಹಿಡಿದು ಮಹಿಳೆಯರನ್ನ ಸಂಘಟಿಸಿದ್ದಾರೆ. ಆರ್ ಎಸ್‍ಎಸ್ ವಿರುದ್ಧ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದು, ಆರ್ ಎಸ್‍ಎಸ್‍ನವರನ್ನು ಚಕ್ಕಗಳು ಅಂತ ಕೂಗಿದ್ದಾರೆ. ಅಲ್ಲದೆ ಆರ್ ಎಸ್‍ಎಸ್, ಮೋದಿ, ಹಿಂದೂಗಳ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಮಾಡಿ ಕಿಡಿಕಾರಿದ್ದಾರೆ.

    ಸಾವಿರಾರು ಸಂಖ್ಯೆಯಲ್ಲಿ ಮೈದಾನದಲ್ಲಿ ಮಹಿಳೆಯರು ಜಮಾಯಿಸಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

  • ಆದಿತ್ಯ ರಾವ್ ಇಟ್ಟಿದ್ದಕ್ಕಿಂತ ರೇಣುಕಾಚಾರ್ಯ ಹಾಕಿದ ಬಾಂಬ್ ದೊಡ್ಡದು: ಎಸ್.ಜಿ ನಂಜಯ್ಯನಮಠ್

    ಆದಿತ್ಯ ರಾವ್ ಇಟ್ಟಿದ್ದಕ್ಕಿಂತ ರೇಣುಕಾಚಾರ್ಯ ಹಾಕಿದ ಬಾಂಬ್ ದೊಡ್ಡದು: ಎಸ್.ಜಿ ನಂಜಯ್ಯನಮಠ್

    ಬಾಗಲಕೋಟೆ: ಮಂಗಳೂರು ಏರ್ ಪೋರ್ಟಿನಲ್ಲಿ ಆದಿತ್ಯ ರಾವ್ ಇಟ್ಟಿದ್ದ ಬಾಂಬ್ ಗಿಂತ ರೇಣುಕಾಚಾರ್ಯ ಹಾಕಿದ ಬಾಂಬ್ ದೊಡ್ಡದೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ್ ಲೇವಡಿ ಮಾಡಿದರು.

    ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ನಂಜಯ್ಯನಮಠ್, ಸಮಾಜವನ್ನು ಕುಲುಷಿತಗೊಳಿಸುವ ಉಡಾಫೆ ಹಾಗೂ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ಅಧಿಕೃತ ಮಾಹಿತಿ ಇದ್ದರೆ ಗೃಹ ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿತ್ತು. ಮದ್ದುಗುಂಡು ನೋಡಿದ್ರೆ ಕಂಪ್ಲೆಂಟ್ ಕೊಡಿ. ರಾಜ್ಯ ಮತ್ತು ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳು ಇವೆ ಅಂತ ಸವಾಲು ಹಾಕಿದರು.

    ಹೇಳಿಕೆಗಳು ಸಮಾಜವನ್ನು ಬದುಕಲು ಬಿಡಬೇಕೇ ವಿನಃ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಬಿಜೆಪಿ, ಕಾಂಗ್ರೆಸ್, ಜನತಾದಳ ಎಲ್ಲ ಪಕ್ಷಗಳಿಗೆ ಇದು ಅನ್ವಯವಾಗುತ್ತೆ. ಯಾವ ಮಸೀದಿಯಲ್ಲಿ ಮದ್ದುಗುಂಡು ಇದೆ ಎಂದು ರೇಣುಕಾಚಾರ್ಯ ತೋರಿಸಬೇಕು. ಇಲ್ಲವೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಬಾಗಲಕೋಟೆ ಕಾಂಗ್ರೆಸ್ ಘಟಕದಿಂದ ಕಾನೂನು ಹೋರಾಟ ಮಾಡುತ್ತೇವೆ. ಅವರೊಬ್ಬ ಸಾರ್ವಜನಿಕರ ಎದುರು ವಿದೂಷಕನಂತೆ ಇದ್ದಾರೆ ಎಂದು ಗೇಲಿ ಮಾಡಿದ್ರು.

    ಇದೇ ವೇಳೆ ಮಹಾಸರ್ಕಾರ ಬೆಳಗಾವಿ ಸೇರಿ ರಾಜ್ಯದ ಗಡಿ ತಂಟೆಗೆ ಬಂದ್ರೆ ಬೆಂಬಲ ವಾಪಸ್ ಪಡೆಯಿರಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಒತ್ತಾಯ ಮಾಡಿದ್ರು. ಮುಗಿದು ಹೋದ ಗಡಿ ಅಧ್ಯಾಯ ಕೆದಕುವುದು ಸರಿಯಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಿಯಿಲ್ಲ. ಠಾಕ್ರೆ, ಸಂಜಯ್ ರಾವತ್ ಬೆಂಕಿ ಹಾಕುವ ಕೆಲಸ ಮಾಡ್ತಿದ್ದಾರೆ. ಮೊದಲೇ ಬೆಳಗಾವಿಯಲ್ಲಿ ಕನ್ನಡಿಗರ ಪರಿಸ್ಥಿತಿ ಗಂಭೀರ ಇದೆ. ಮಹಾಜನ ವರದಿ ಬಗ್ಗೆ ಉತ್ತಮ ಅಭಿಪ್ರಾಯ ಎರಡು ನಾಡಿನವರು ಕೊಟ್ಟಿದ್ದಾರೆ. ಇನ್ನೊಮ್ಮೆ ಈ ರೀತಿ ಕೆದಕಿದರೆ, ಉಡಾಫೆ ತಕರಾರು ಮಾಡಿದ್ರೆ, ಮಹಾರಾಷ್ಟ್ರ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆಯಲು ಆಗ್ರಹಿಸುವುದಾಗಿ ಎಚ್ಚರಿಕೆ ನೀಡಿದರು.

    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಳಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೋನಿಯಾಗಾಂಧಿ ತೆಗೆದುಕೊಳ್ಳುವ ನಿರ್ಣಯಕ್ಕೆ ನಮ್ಮ ಒಲವು ಇದೆ. ಯಾರಾದ್ರೂ ಬೇಗ ಆಗಿಬರಲಿ. ಬಹಳ ದಿನ ಜಾಗ ಖಾಲಿ ಇಡಬಾರದು. ಈಗಾಗಲೇ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಒಂದು ಅಧ್ಯಕ್ಷರನ್ನೂ ಮಾಡಲು ಆಗಿಲ್ಲ ನಿಮಗೆ, ಹೋಗಿ ಎಂದು ಜನ ಮಾತಾಡುವಂತೆ ಆಗಬಾರದು. ಅದೆಷ್ಟು ಬೇಗವೋ ಅಷ್ಟು ಬೇಗ ಆಯ್ಕೆ ಆಗಲಿ. ಇಲ್ಲಾಂದ್ರೆ ಏನೋ ಒಂದು ಗ್ರಹಣ ಹಿಡಿದಂತೆ ಆಗುತ್ತದೆ ಎಂದರು.

  • ಪೌರತ್ವ ಕಾಯ್ದೆ ವಿರೋಧಿಸುವವರೆಲ್ಲಾ ದೇಶದ್ರೋಹಿಗಳು: ರೇಣುಕಾಚಾರ್ಯ

    ಪೌರತ್ವ ಕಾಯ್ದೆ ವಿರೋಧಿಸುವವರೆಲ್ಲಾ ದೇಶದ್ರೋಹಿಗಳು: ರೇಣುಕಾಚಾರ್ಯ

    – ಅಲ್ಪಸಂಖ್ಯಾತರ ಕುರಿತ ತಮ್ಮ ಹೇಳಿಕೆ ಸಮರ್ಥಿಸಿದ ರೇಣುಕಾಚಾರ್ಯ

    ಮೈಸೂರು: ಯಾರು ಪೌರತ್ವ ಕಾಯ್ದೆ ವಿರೋಧಿಸುತ್ತಾರೋ ಅವರು ದೇಶದ್ರೋಹಿಗಳು. ಕಾಂಗ್ರೆಸ್ ಇರಬಹುದು, ಜೆಡಿಎಸ್ ಇರಬಹುದು. ಪೌರತ್ವ ಕಾಯ್ದೆ ವಿರೋಧಿಸುವವರು ದೇಶ ದ್ರೋಹಿಗಳು ಎಂದು ಶಾಸಕ ರೇಣುಕಾಚಾರ್ಯ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ಹೇಳಿದ್ದಾರೆ.

    ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಬುದ್ಧಿ ಸ್ಥಿಮಿತವಾಗಿಲ್ಲ. ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ನಡೆಯೇ ಅರ್ಥವಾಗುತ್ತಿಲ್ಲ. ರಕ್ಷಣಾ ಇಲಾಖೆಯ ಮಾನಸಿಕ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾದವರು ಈ ರೀತಿ ಮಾತನಾಡಿದರೆ ಹೇಗೆ? ಈ ರೀತಿ ಹೇಳಿಕೆ ನೀಡಿದರೆ ಜನ ಅದನ್ನು ಸ್ವಾಗತ ಮಾಡ್ತಾರಾ? ಎಂದು ಕಟುವಾಗಿ ಪ್ರಶ್ನಿಸಿದರು.

    ಎಲ್ಲೋ ಒಂದು ಕಡೆ ಅಲ್ಪಸಂಖ್ಯಾತರಲ್ಲಿ ವಿಷ ಬೀಜ, ಜಾತಿ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ಜಾತಿ ಜನಗಣತಿ ಮಾಡಿಸಿದ್ರು ಹಾಗಾದರೆ ಯಾವ ಕಾರಣಕ್ಕೆ ಮಾಡಿಸಿದ್ದರು. ಧರ್ಮ ಒಡೆಯುವ ಕೆಲಸವನ್ನು ಅವರು ಮಾಡಿದರು ಎಂದು ಕಿಡಕಾರಿದರು. ಪೌರತ್ವ ಕಾಯ್ದೆಯನ್ನು ಯಾರು ವಿರೋಧ ಮಾಡುತ್ತಾರೋ ಅವರನ್ನು ನಾನು ದೇಶದ್ರೋಹಿಗಳು ಎಂದು ಕರೆದಿದ್ದೀನಿ. ಇದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದರು.

    ಯು.ಟಿ ಖಾದರ್ ಹಾಗೂ ಜಮೀರ್ ಅಹ್ಮದ್ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಇಬ್ಬರೂ ಸ್ಥಿಮಿತ ಕಳೆದುಕೊಂಡಿದ್ದಾರೆ. ಜಮೀರ್ ಅಹ್ಮದ್ ನಾನೇ ಅಲ್ಪಸಂಖ್ಯಾತರ ಮುಖಂಡ ಅಂದುಕೊಂಡಿದ್ದಾರೆ. ಮೊದಲು ಅವರೇ ಮತಾಂಧರು. ಎಲುಬಿಲ್ಲದ ನಾಲಿಗೆ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಾರೆ ಎಂದ ಸುತ್ತೂರಿನಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

    ಹೇಳಿಕೆ ಸಮರ್ಥಿಸಿಕೊಂಡ ರೇಣುಕಾಚಾರ್ಯ:
    ವೋಟ್ ಹಾಕೋದು ಬೇರೆಯವರಿಗೆ ಆದರೆ ಸವಲತ್ತುಗಳನ್ನು ಕೊಡಲು ನಾವು ಬೇಕಾ? ಅಲ್ಪ ಸಂಖ್ಯಾತರಿಗೆ ಎಂ.ಪಿ ರೇಣುಕಾಚಾರ್ಯ ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಅಲ್ಪ ಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂದು ಇತ್ತೀಚೆಗೆ ತಾವು ನೀಡಿರುವ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ನಮ್ಮ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಿಗೆ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತೇವೆ. ಆದರೆ ಇತರೆ ಯಾವುದೇ ಪ್ಯಾಕೇಜ್‍ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ನಮಗೆ ಮತ ಹಾಕದಿದ್ದರೂ ಸಹ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಹೂವಿನ ಹಾರದೊಂದಿಗೆ ಬಂದು ನಿಮಗೇ ಮತಹಾಕಿದ್ದೇವೆ ಎಂದು ಹೇಳುತ್ತಾರೆ. ಮತ ಯಾರಿಗೋ ಹಾಕಿ ನಮ್ಮ ಬಳಿಗೆ ಬಂದು ಸವಲತ್ತುಗಳನ್ನು ಕೇಳುತ್ತಾರೆ. ವೋಟ್ ಹಾಕೋದು ಯಾರಿಗೋ, ಸವಲತ್ತುಗಳನ್ನು ನೀಡಲು ನಾವು ಬೇಕೇ ಎಂದು ಪ್ರಶ್ನಿಸಿದರು.

  • ರೇಣುಕಾಚಾರ್ಯರನ್ನ ಸಸ್ಪೆಂಡ್ ಮಾಡಿ- ದಿನೇಶ್ ಗುಂಡೂರಾವ್

    ರೇಣುಕಾಚಾರ್ಯರನ್ನ ಸಸ್ಪೆಂಡ್ ಮಾಡಿ- ದಿನೇಶ್ ಗುಂಡೂರಾವ್

    ಬೆಂಗಳೂರು: ಮುಸ್ಲಿಂರಿಗೆ ಬಂದಿರುವ ಅನುದಾನವನ್ನು ನಾನು ಖರ್ಚು ಮಾಡಲ್ಲ ಎಂಬ ವಿವಾದಿತ ಹೇಳಿಕೆ ನೀಡಿದ್ದ ಶಾಸಕ ರೇಣುಕಾಚಾರ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ರೇಣುಕಾಚಾರ್ಯರನ್ನು ಈ ಕೂಡಲೇ ಸಸ್ಪಂಡ್ ಮಾಡಬೇಕು. ವೋಟ್ ಹಾಕಿದವರಿಗೆ ಮಾತ್ರ ಕೆಲಸ ಮಾಡಬೇಕಾ? ಅವರು ಎಷ್ಟು ಸಾರಿ ಸೋತಿದ್ದಾರೆ ಅದಕ್ಕೆ ಅಲ್ಪ ಅಸಂಖ್ಯಾತರೇ ಕಾರಣನಾ? ವೋಟ್ ಹಾಕಿದವರಿಗೆ ಮಾತ್ರ ಕೆಲಸ ಅನ್ನೋ ಮಾತು ಖಂಡನೀಯ ಎಂದು ಗರಂ ಆದರು. ಇದನ್ನೂ ಓದಿ: ‘ಮುಸ್ಲಿಂರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ’- ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

    ಸಿಎಂ ಯಡಿಯೂರಪ್ಪ ಅವರನ್ನು ರಾಜಕೀಯ ಕಾರ್ಯದರ್ಶಿ ಆಗಿ ನೇಮಕ ಮಾಡಿಕೊಂಡಿದ್ದಾರೆ. ಇದೇನಾ ಸಿಎಂ ಯಡಿಯೂರಪ್ಪರಿಗೆ ಶಾಸಕ ರೇಣುಕಾಚಾರ್ಯ ಕಾರ್ಯದರ್ಶಿಯಾಗಿ ಹೇಳಿ ಕೊಡುತ್ತಿರುವುದು. ಬಿಜೆಪಿಯವರು ಮೊದಲು ರೇಣುಕಾಚಾರ್ಯ ಅವರ ಬಾಯಿ ಮುಚ್ಚಿಸೋ ಕೆಲಸ ಮಾಡಬೇಕು ಎಂದು ಬಿಜೆಪಿ ಮತ್ತು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೇಣುಕಾಚಾರ್ಯ ವಿರುದ್ಧ ಪ್ರಗತಿಪರರ ಆಕ್ರೋಶ – ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ

    ಹೊನ್ನಾಳಿ ಶಾಸಕ ರೇಣುಕಾಚಾರ್ಯ, ನಾನು ಮುಸ್ಲಿಂರಿಗೆ ಬಂದಿರುವ ಅನುದಾನವನ್ನು ಖರ್ಚು ಮಾಡಲ್ಲ. ಅದನ್ನು ಹಿಂದೂ ಧರ್ಮದವರಿಗೆ ಖರ್ಚು ಮಾಡುತ್ತೀನಿ. ಮುಸ್ಲಿಂರ ವೋಟು ನಂಗೆ ಬೇಕಾಗಿಲ್ಲ ಎಂಬ ಹೇಳಿಕೆ ನೀಡಿದ್ದರು.

    ಇದೇ ವೇಳೆ ಸ್ಫೋಟದಿಂದ ಗಾಯಗೊಂಡಿದ್ದ ಶಾಸಕ ಹ್ಯಾರಿಸ್ ಆರೋಗ್ಯ ವಿಚಾರಿಸಿದ ದಿನೇಶ್ ಗುಂಡೂರಾವ್, ರಾಜಕೀಯ ನಾಯಕರಿಗೆ ಈ ರೀತಿ ಅಭದ್ರತೆ ಕಾಡುವಂತ ಪರಿಸ್ಥಿತಿ ಉಂಟಾಗಿದೆ. ಯಾವ ಉದ್ದೇಶಕ್ಕೆ ಸ್ಫೋಟ ಆಗಿದೆ, ಅದರ ಹಿನ್ನೆಲೆ ಏನು ಅನ್ನೋದನ್ನು ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

  • ‘ಮುಸ್ಲಿಂರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ’- ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

    ‘ಮುಸ್ಲಿಂರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ’- ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

    – ಮುಸ್ಲಿಂ ಕೇರಿಗಳ ಹಣವನ್ನು ಹಿಂದೂಗಳ ಕೇರಿ ಅಭಿವೃದ್ಧಿಗೆ ಬಳಸ್ತೇವೆ

    ದಾವಣಗೆರೆ: ಮುಸ್ಲಿಂ ಕೇರಿಗಳಿಗೆ ಬಂದಿರುವ ಹಣವನ್ನು ಹಿಂದೂಗಳ ಕೇರಿ ಅಭಿವೃದ್ಧಿಗೆ ಬಳಸುವ ಮೂಲಕ ಅವರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ ಎಂದು ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಪೌರತ್ವ ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡುತ್ತಿದ್ದು, ಇದಕ್ಕೆ ಮಸೀದಿಗಳು ಬೇಕಾ, ಮಸೀದಿಗಳು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿವೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ, ಹೊನ್ನಾಳಿ, ನ್ಯಾಮತಿ ತಾಲೂಕನ್ನು ಸಂಪೂರ್ಣ ಕೇಸರಿಮಯ ಮಾಡುತ್ತೇವೆ. ಮುಸ್ಲಿಂ ಕೇರಿಗಳಿಗೆ ಬಂದಿರುವ ಹಣವನ್ನು ಹಿಂದೂಗಳ ಕೇರಿಗಳ ಅಭಿವೃದ್ಧಿಗೆ ಬಳಸುವ ಮೂಲಕ ಅವರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

    ಯು.ಟಿ.ಖಾದರ್ ಮಂಗಳೂರು ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಅಂತಾರೆ. ಭಾರತ ಏನು ಭಯೋತ್ಪಾದಕರ ಮಾವನ ಮನೆನಾ, ನಿಮಗೆ ಪಾಕಿಸ್ತಾನದಿಂದ ಹಣ ಬಂದಿದ್ದರೆ ಮೃತರ ಕುಟುಂಬಕ್ಕೆ ಹಣ ನೀಡಿ ಎಂದು ಕಿಡಿಕಾರಿದರು. ಅಲ್ಲದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಿಜೆಪಿಯನ್ನು ಕೋಮುವಾದಿ ಎನ್ನುತ್ತಾರೆ. ಜಾತಿಗಣತಿ ವಿಚಾರವಾಗಿ ವೀರಶೈವ-ಲಿಂಗಾಯತರನ್ನು ಹೊಡೆದಿದ್ದೀರಲ್ಲ ನೀವು ಕೋಮುವಾದಿಗಳು. ಸಿದ್ದರಾಮಯ್ಯನವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್ಸಿನಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಖಾಲಿ ಇದೆ. ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಓಡಿ ಹೋಗಿದ್ದಾರೆ, ಅಧ್ಯಕ್ಷ ಸ್ಥಾನ ಖಾಲಿಯಾಗಿ ಮೂರು ತಿಂಗಳಾಯಿತು. ಇನ್ನು ಯಾರನ್ನೂ ನೇಮಕ ಮಾಡಿಲ್ಲ ಎಂದು ಲೇವಡಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಇಡೀ ಹೊನ್ನಾಳಿ ನಗರವನ್ನೇ ಕೇಸರಿ ಬಣ್ಣದಿಂದ ಸಿಂಗರಿಸಲಾಗಿತ್ತು.

  • ಬಸ್ ಓಡ್ಸಿ ತಗ್ಲಾಕ್ಕೊಂಡ್ರಾ ರೇಣುಕಾಚಾರ್ಯ – ಶಾಸಕರ ವಿರುದ್ಧ ಸಾರಿಗೆ ಸಿಬ್ಬಂದಿ ದೂರು

    ಬಸ್ ಓಡ್ಸಿ ತಗ್ಲಾಕ್ಕೊಂಡ್ರಾ ರೇಣುಕಾಚಾರ್ಯ – ಶಾಸಕರ ವಿರುದ್ಧ ಸಾರಿಗೆ ಸಿಬ್ಬಂದಿ ದೂರು

    ಬೆಂಗಳೂರು: ಸಾರಿಗೆ ಸಿಬ್ಬಂದಿ ಬಿಟ್ಟರೆ ಬೇರೆಯವರಿಗೆ ಸಾರಿಗೆ ಬಸ್ ಒಡಿಸಲು ಅವಕಾಶವಿಲ್ಲ. ಆದರೆ ಶಾಸಕ ರೇಣುಕಾಚಾರ್ಯ ಅವರು ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸಿದ್ದಾರೆ, ಇದು ತಪ್ಪು ಎಂದು ಸಾರಿಗೆ ಸಿಬ್ಬಂದಿ ಶಾಸಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

    ಹೊನ್ನಾಳಿ ಶಾಸಕ ರೇಣುಕಾಚಾರ್ಯಗೂ ವಿವಾದಗಳಿಗೂ ಬಿಡಲಾರದ ನಂಟು. ಸದಾ ಒಂದಿಲ್ಲೊಂದು ಗಾಸಿಪ್ ಗಳಿಂದಲೇ ಸುದ್ದಿಯಾಗೋರು ರೇಣುಕಾಚಾರ್ಯ ಅವರು ಪ್ರವಾಹದ ವೇಳೆಯಲ್ಲಿ ಅಂಬಿಗನಾಗಲು ಹೋಗಿ ಭಾರೀ ಟೀಕೆಗೆ ಒಳಗಾಗಿದ್ದರು. ತದನಂತರ ಜನವರಿ 5ರಂದು ಹೊನ್ನಾಳಿಯಲ್ಲಿ ಬಸ್ ಉದ್ಘಾಟನೆ ವೇಳೆ ಕೆಎಸ್‌ಆರ್‌ಟಿಸಿ ಡ್ರೈವರ್ ಡ್ರೆಸ್ ಹಾಕ್ಕೊಂಡು ಸುಮಾರು 60 ಕಿ.ಮೀ ಬಸ್ ಓಡಿಸಿದ್ದು ಎಲ್ಲೆಡೆ ಭಾರೀ ವಿವಾದವಾಗಿತ್ತು. ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ಈ ವಿಷಯಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ವಿರುದ್ಧ ಕೇಸ್ ಹಾಕಲು ಸಾರಿಗೆ ಸಿಬ್ಬಂದಿ ನಿರ್ಧರಿಸಿದ್ದಾರೆ. ಶಾಸಕರು ಅನ್ಯ ವ್ಯಕ್ತಿಗಳು ಬಸ್ ಓಡಿಸಬಹುದೇ ಎಂದು ಬಸ್ ಕಂಡೆಕ್ಟರ್ ಆಗಿರೋ ಯೋಗೇಶ್ ಗೌಡ ಆರ್‌ಟಿಐ ಮೂಲಕ ಮಾಹಿತಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದರು. ಆರ್‌ಟಿಐ ನಿಯಮದ ಮಾಹಿತಿ ಪ್ರಕಾರ ಸರ್ಕಾರಿ ಬಸ್ಸನ್ನು ಈ ರೀತಿ ಶಾಸಕರು ಬಸ್ ಓಡಿಸುವಂತಿಲ್ಲ. ಸಾರಿಗೆಯ ನುರಿತ ಸಿಬ್ಬಂದಿಗಷ್ಟೇ ಬಸ್ ಓಡಿಸಲು ಅವಕಾಶವಿದೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ದಡ ಸೇರಿದ್ದ ತೆಪ್ಪಕ್ಕೆ ಹುಟ್ಟು ಹಾಕಿ ಪೋಸ್- ರೇಣುಕಾಚಾರ್ಯ ಟ್ರೋಲ್

    ಇದನ್ನೇ ಆಧರಿಸಿ ಯೋಗೇಶ್ ಅವರು ರೇಣುಕಾಚಾರ್ಯ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಹೀಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಹೊಸ ಅವತಾರಗಳು ಅವರ ಪಾಲಿಗೆ ಮುಳುವಾಗಿತ್ತಿರೋದಂತೂ ಸತ್ಯ.

  • 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ದಾವಣಗೆರೆ: ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭದ ವೇಳೆ ಶಾಸಕ ಎಂ.ಪಿ. ರೇಣುಕಾಚಾರ್ಯ ಕೆಎಸ್ಆರ್‌ಟಿಸಿ ಬಸ್ ಚಾಲನೆ ಮಾಡಿದ ಹಿನ್ನಲೆ ಹೊನ್ನಾಳಿ ಡಿಪೋ ಮ್ಯಾನೇಜರ್ ಅವರಿಗೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಡಿಸಿ ವಿವರಣೆ ಕೇಳಿ ನೋಟಿಸ್ ನೀಡಿದ್ದಾರೆ.

    ಸೋಮವಾರ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳ ಮಾರ್ಗವಾಗಿ ಹೊಸದಾಗಿ ಕೆಎಸ್ಆರ್‌ಟಿಸಿ ಬಸ್ ಚಾಲನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಪಿ ರೇಣುಕಾಚಾರ್ಯ ಸ್ವತಃ ತಾವೇ ಚಾಲಕನ ಯೂನಿಫಾರಂ ಹಾಕಿಕೊಂಡು ಗ್ರಾಮಗಳಿಗೆ ಬಸ್ ಚಲಾಯಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಡಿಸಿ ಟಿ ಆರ್ ನವೀನ್ ಕುಮಾರ್ ಘಟನೆಯ ಬಗ್ಗೆ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ.

    ರೇಣುಕಾಚಾರ್ಯ ಬಸ್ ಚಲಾಯಿಸಿದ್ದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲಕನ ಸಮವಸ್ತ್ರ ಧರಿಸಿ ಸುಮಾರು 60 ಕಿ.ಮೀ ಬಸ್ ಓಡಿಸಿದ್ದರು. ಕೆಎಸ್ಆರ್‌ಟಿಸಿ ಬಸ್ ಗಳನ್ನು ಕೇವಲ ನಿಗಮದ ಚಾಲಕರು ಹಾಗೂ ಇಲಾಖೆಯ ಪರವಾನಿಗೆ ಪಡೆದವರು ಮಾತ್ರ ಚಲಾಯಿಸಬೇಕು. ಈ ನಿಯಮವನ್ನು ಉಲ್ಲಂಘಿಸಿ  ಶಾಸಕರು ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಚಲಾಯಿಸಿರುವುದಕ್ಕೆ ವಿವರಣೆ ನೀಡುವಂತೆ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ನೋಟಿಸ್ ನೀಡಿದ್ದಾರೆ.