Tag: religious ritual

  • ನೋವಿನಲ್ಲೇ ಸಾಂಪ್ರದಾಯಿಕ ಮಡಿಕೇರಿ ದಸರಾ ಆಚರಣೆಗೆ ಚಾಲನೆ

    ನೋವಿನಲ್ಲೇ ಸಾಂಪ್ರದಾಯಿಕ ಮಡಿಕೇರಿ ದಸರಾ ಆಚರಣೆಗೆ ಚಾಲನೆ

    ಮಡಿಕೇರಿ: ದಕ್ಷಿಣದ ಕಾಶ್ಮೀರ ಎಂದು ಹೆಸರುವಾಸಿಯಾಗಿದ್ದ ಕೊಡಗು ಇದೀಗ ಅಕ್ಷರಶಃ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಹಿಂದೆಂದೂ ಕಾಣದ ಜಲಪ್ರಳಯಕ್ಕೆ ಕೊಡಗು ತತ್ತರಿಸಿದೆ. ಆನೇಕರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆದೇ ರೀತಿ ಆನೇಕ ವರ್ಷಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದ ಮಡಿಕೇರಿ ದಸರಾ ಕೂಡ ಈ ಬಾರೀ ತನ್ನ ಅಂದ ಕಳೆದುಕೊಂಡು ನೋವಿನ ನಡುವೆ ನಾಡಹಬ್ಬ ಆಚರಿಸುವ ಪರಿಸ್ಥಿತಿಗೆ ತಲುಪಿದೆ.

    ಮಡಿಕೇರಿಯ ದಸರಾ ರಾಜ್ಯದ ಗಮನ ಸೆಳೆದಿತ್ತು. ಅದೆಷ್ಟೋ ವರ್ಷದಿಂದ ದಸರಾ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿತ್ತು. ಮಡಿಕೇರಿಯ 10 ಶಕ್ತಿ ದೇವಾಲಯ ಸಮಿತಿಗಳ ದಶಮಂಟಪಗಳು ರಾಜಬೀದಿಯಲ್ಲಿ ಸಾಗಿ ಅಕರ್ಷಿಸುತ್ತಿತ್ತು. ಐತಿಹಾಸಿಕ ಪುರಾಣ ಕಥೆಗಳನ್ನು ಸಾರುವ ಮಂಟಪಗಳು ಎಲ್ಲರ ಗಮನ ಸೆಳೆಯುತ್ತಿತ್ತು. ದಶಮಂಟಪಗಳನ್ನು ನೋಡಲೆಂದೇ ದೂರದೂರಿನಿಂದ ಜನರು ಬರುತ್ತಿದ್ದರು. ಆದರೆ ಈ ಬಾರಿ ದಸರಾ ಹೇಗೆ ನಡೆಸುವುದು ಎಂಬ ಥಳಮಳ ಇದೀಗ ಸಮಿತಿಗಳಲ್ಲಿ ಪ್ರಾರಂಭಗೊಂಡಿದೆ.

    ಇಂದಿನವರೆಗೂ ಜನರ ದೇಣಿಗೆಯ ಮೂಲಕವೇ ದಸರಾ ನಡೆಯುತ್ತಿತ್ತು. ಇದರ ಜೊತೆಗೆ ಸರ್ಕಾರ ನೀಡುವ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ಜಲಪ್ರಳಯದಲ್ಲಿ ನೊಂದಿರುವ ಜನರ ಬಳಿ ಹೇಗೆ ಹಣ ಕೇಳುವುದು ಎಂಬ ನೋವು ಕೂಡ ಸಮಿತಿ ಮುಂದಿದೆ. ಆದರೆ ನೋವಿನ ನಡುವೆಯೇ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ.

    ಮಡಿಕೇರಿಯ ಶ್ರೀರಾಮ ಮಂದಿರದಲ್ಲಿ ಸಕಲ ಪೂಜಾ ವಿಧಿವಿಧಾನದ ಮೂಲಕ ಇಂದು ದಶಮಂಟಪಗಳ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. 10 ಮಂಟಪಗಳ ಸಮಿತಿ ಅಧ್ಯಕ್ಷರು ದೇವರಿಗೆ ಪೂಜೆ ಸಲ್ಲಿಸಿದರು. ಇನ್ನೂ ನೋವಿನ ನಡುವೆ ನಡೆಯುತ್ತಿರುವ ದಸರೆಗೆ ಸರ್ಕಾರ ಅನುದಾನ ನೀಡಬೇಕು. ಜನರ ಬಳಿ ದೇಣಿಗೆ ಸಂಗ್ರಹ ಮಾಡಲು ಸಾಧ್ಯವಿಲ್ಲ. ಅದರಿಂದ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಶಾಸಕರು ಸರ್ಕಾರದೊಂದಿಗೆ ಚರ್ಚಿಸಿ ಸಮಿತಿಯ ಜತೆಗೆ ಕೈಜೋಡಿಸಬೇಕು. ದಸರಾ ಆಚರಣೆಯ ವೇಳೆ ವಿಜೃಂಭಣೆಗೆ ಬ್ರೇಕ್ ಹಾಕಿ ಕೇವಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿ ತಿಳಿಸಿದ್ದಾರೆ.

    ಇದೇ ವೇಳೆ ಯಾವುದೇ ಕಾರಣಕ್ಕೂ ಆಚರಣೆ ಕೈಬಿಡಲು ಸಾಧ್ಯವಾಗುವುದಿಲ್ಲ 4 ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಹೊರುವ ಮೂಲಕ ಆಚರಣೆಗೆ ಚಾಲನೆ ನೀಡಲಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಧಾರ್ಮಿಕ ಆಚರಣೆಗಳನ್ನು ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೂರ್ಯಗ್ರಹಣದ ದಿನದಂದೇ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನಕ್ಕೆ ಗ್ರಹಣ!

    ಸೂರ್ಯಗ್ರಹಣದ ದಿನದಂದೇ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನಕ್ಕೆ ಗ್ರಹಣ!

    ತಿರುಪತಿ/ಹೈದರಾಬಾದ್: ತಿಮ್ಮಪ್ಪನ ಸನ್ನಿಧಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ಇಂದಿನಿಂದ ಆರಂಭಗೊಳ್ಳಲಿದೆ.

    ಪೂಜೆಯ ಭಾಗವಾಗಿ ಇಂದು ರಾತ್ರಿ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ತಿಮ್ಮಪ್ಪನ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದ್ದು, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಆಗಮಶಾಸ್ತ್ರದ ಪ್ರಕಾರ ಧಾರ್ಮಿಕ ವಿಧಿವಿಧಾನ ಆರಂಭವಾಗಲಿದೆ. ವಿಶೇಷ ಮಹಾಸಂಪ್ರೋಕ್ಷಣೆ ಕಾರ್ಯವನ್ನು ಆಂಧ್ರ, ಕರ್ನಾಟಕ, ತೆಲಂಗಾಣದ 45 ಆಗಮ ಪಂಡಿತರು ನಡೆಸಲಿದ್ದಾರೆ. ಬಳಿಕ ಗುರುವಾರದವರೆಗೂ ತಿಮ್ಮಪ್ಪನ ಪದತಳದಲ್ಲಿ ಅಷ್ಟಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣೆ ಮಾಡಲಾಗುತ್ತದೆ.

    ಮಹಾ ಯಾಗಕ್ಕಾಗಿ ತಿರುಮಲದ ಯೋಗಶಾಲೆಯಲ್ಲಿ 28 ಹೋಮ ಗುಂಡಿ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತುಪ್ಪದ ದೀಪದ ಬೆಳಕಿನಲ್ಲೇ ಹೋಮ ಹವನ ನಡೆಸಲು ತೀರ್ಮಾನ ಮಾಡಲಾಗಿದೆ. ಈ ವೇಳೆ ಭಕ್ತರ ದರ್ಶನಕ್ಕೆ ದೇವಾಲಯದ ಟಿಟಿಡಿ ಸಮಿತಿ ನಿರ್ಬಂಧ ಹೇರಿದೆ. ಟಿಟಿಡಿ ಗುರುವಾರದಿಂದಲೇ ತಿಮ್ಮಪ್ಪನ ದಿವ್ಯ ದರ್ಶನ, ಸರ್ವದರ್ಶನ ಟೋಕನ್ ನೀಡುವುದನ್ನು ರದ್ದು ಮಾಡಿದ್ದು, ಸರತಿ ಸಾಲಿನಲ್ಲಿ ಬರುವ ಭಕ್ತರಿಗೂ ಮಿತಿ ಹೇರಿದೆ.

    ಏನಿದು ಬಾಲಾಲಯ ಮಹಾಸಂಪ್ರೋಕ್ಷಣೆ?: ತಿಮ್ಮಪ್ಪನ ಮೂಲವಿರಾಟ್ ಮತ್ತು ಇತರೆ ದೇವರ ವಿಗ್ರಹಗಳ ಶಕ್ತಿಯನ್ನು ಬಿಂಬದಿಂದ ಕುಂಭದೊಳಕ್ಕೆ ಆವಾಹನೆ ಮಾಡುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರಣೆಯನ್ನು 12 ವರ್ಷಗಳಿಗೆ ಒಮ್ಮೆ ಮಾತ್ರ ಮಾಡಲಾಗುತ್ತದೆ.

    ಅಷ್ಟಬಂಧನ: 8 ರೀತಿಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣ. ಈ ಚೂರ್ಣದ ಆಯಸ್ಸು 12 ವರ್ಷಗಳ ಕಾಲ ಇರುತ್ತದೆ. ಈ ಅಷ್ಟ ಬಂಧನವನ್ನು ತಿಮ್ಮಪ್ಪನ ಪಾದದಲ್ಲಿ ಇರಿಸುತ್ತಾರೆ. ವಿಶೇಷವಾಗಿ ಮಹಾಸಂಪ್ರೋಕ್ಷಣೆ ವೇಳೆ ದೇಗುಲದ ಸಿಬ್ಬಂದಿಗೂ ರಾಮುಲವಾರಿ ಮೇಡ ದಾಟಲು ಅವಕಾಶ ಇರಲ್ಲ.

    30 ಸಾವಿರ ಭಕ್ತಿಗೆ ಮಾತ್ರ ಅವಕಾಶ: ದೇವರಿಗೆ ನಡೆಯುವ ಪ್ರಕ್ರಿಯೆ ಬಾಲಾಲಯ ಮಹಾಸಂಪ್ರೋಕ್ಷಣೆ ವಿಶೇಷ ಪೂಜಾ ಕಾರ್ಯದ ದಿನಗಳಲ್ಲಿ ಟಿಟಿಡಿ ಸಮಿತಿ 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಿದೆ. ಆಗಸ್ಟ್ 16 ರ ವರೆಗೂ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಟಿಟಿಡಿ ಸಮಿತಿ ತಿಳಿಸಿದೆ. ಈ ಹಿಂದಿನ ವರ್ಷಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಪ್ರತಿನಿತ್ಯ ಸುಮಾರು 1 ಲಕ್ಷ ಮಂದಿ ದೇವರ ದರ್ಶನ ಪಡೆಯುತ್ತಿದ್ದರು.

    ಈ ಹಿಂದೆ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವ 6 ದಿನಗಳ ಅವಧಿಯಲ್ಲಿ ಭಕ್ತರಿಗೆ ದೇವರ ದರ್ಶನ ಕಾರ್ಯ ನೀಡದಿರಲು ಟಿಟಿಡಿ ನಿರ್ಧರಿಸಿತ್ತು. ಆದರೆ ಈ ಬಳಿಕ ನಡೆದ ಚರ್ಚೆಗಳಲ್ಲಿ ಭಕ್ತರಿಂದ ಒತ್ತಡ ಹೆಚ್ಚಾಗಿದ್ದರಿಂದ ಸದ್ಯ 30 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ತಿಮ್ಮಪ್ಪನಿಗೆ 9 ದಿನ ಅಷ್ಟ ಬಂಧನ – ಆಗಸ್ಟ್ 9 ರಿಂದ 17 ರವರೆಗೆ ತಿಮ್ಮಪ್ಪನ ದರ್ಶನ ಭಾಗ್ಯ ಇರಲ್ಲ

    ತಿಮ್ಮಪ್ಪನಿಗೆ 9 ದಿನ ಅಷ್ಟ ಬಂಧನ – ಆಗಸ್ಟ್ 9 ರಿಂದ 17 ರವರೆಗೆ ತಿಮ್ಮಪ್ಪನ ದರ್ಶನ ಭಾಗ್ಯ ಇರಲ್ಲ

    ತಿರುಪತಿ: ದೇಶದಲ್ಲಿ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ತಿರುಪತಿ ತಿರುಮಲ ದೇವಾಲಯ ಅಷ್ಟಬಂಧನ ಧಾರ್ಮಿಕ ಕಾರ್ಯಕ್ರಮದಿಂದ 7 ದಿನಗಳ ಕಾಲ ಭಕ್ತರಿಗೆ ದರ್ಶನ ಲಭ್ಯವಿಲ್ಲ ಎಂದು ಟಿಟಿಡಿ ಸಮಿತಿ ತಿಳಿಸಿದೆ.

    ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಸಮಿತಿಯ ಮುಖ್ಯಸ್ಥ ಪುಟ್ಟ ಸುಧಾಕರ್ ಯಾದವ್, ಆಗಸ್ಟ್ 9 ರಿಂದ 17 ರವೆಗೂ ಅಷ್ಟ ಬಂಧನ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವುದರಿಂದ ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಟಿಟಿಡಿ ಸಮಿತಿ ಶನಿವಾರ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಆಗಸ್ಟ್ 11 ರ ಮುಂಜಾನೆ 6 ರಿಂದ ದೇವರ ದರ್ಶನ ಕಾರ್ಯ ಸ್ಥಗಿತಗೊಳ್ಳಲಿದೆ. ಆದರೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.

    ಆಗಸ್ಟ್ 11 ರಂದು ದೇವರಿಗೆ ವಿಶೇಷ ಪೂಜೆ ಆರಂಭ ಮಾಡಲಾಗುತ್ತದೆ. ಈ ಪ್ರಕ್ರಿಯೇ 9 ತಿಂಗಳು ಕಾಲ ಮುಂದುವರೆಯಲಿದ್ದು, ಈ ಅವಧಿಯಲ್ಲಿ ದೇವರ ದರ್ಶನ ಭಾಗ್ಯ ಲಭ್ಯವಾಗುವುದಿಲ್ಲ. ಸದ್ಯ ಟಿಟಿಡಿ ಸಮಿತಿ ನಿರ್ಧಾರಕ್ಕೆ ಭಕ್ತ ಸಮೂಹದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಏನಿದು ಬಾಲಾಲಯ ಮಹಾಸಂಪ್ರೋಕ್ಷಣೆ? ತಿಮ್ಮಪ್ಪನ ಮೂಲವಿರಾಟ್ ಮತ್ತು ಇತರೆ ದೇವರ ವಿಗ್ರಹಗಳ ಶಕ್ತಿಯನ್ನು ಬಿಂಬದಿಂದ ಕುಂಭದೊಳಕ್ಕೆ ಆವಾಹನೆ ಮಾಡುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರಣೆಯನ್ನು 12 ವರ್ಷಗಳಿಗೆ ಒಮ್ಮೆ ಮಾತ್ರ ಮಾಡಲಾಗುತ್ತದೆ.

    ಅಷ್ಟಬಂಧನ: 8 ರೀತಿಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣ. ಈ ಚೂರ್ಣದ ಆಯಸ್ಸು 12 ವರ್ಷಗಳ ಕಾಲ ಇರುತ್ತದೆ. ಈ ಅಷ್ಟ ಬಂಧನವನ್ನು ತಿಮ್ಮಪ್ಪನ ಪಾದದಲ್ಲಿ ಇರಿಸುತ್ತಾರೆ. ವಿಶೇಷವಾಗಿ ಮಹಾಸಂಪ್ರೋಕ್ಷಣೆ ವೇಳೆ ದೇಗುಲದ ಸಿಬ್ಬಂದಿಗೂ ರಾಮುಲವಾರಿ ಮೇಡ ದಾಟಲು ಅವಕಾಶ ಇರಲ್ಲ.