Tag: religion

  • ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ: ದಿಗ್ವಿಜಯ ಸಿಂಗ್

    ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ: ದಿಗ್ವಿಜಯ ಸಿಂಗ್

    ನವದೆಹಲಿ: ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ. ಮುಸ್ಲಿಮರಲ್ಲಿ ಫಲವತ್ತತೆ ದರವು ಹಿಂದೂಗಳಿಗಿಂತ ಕಡಿಮೆಯಾಗಿದೆ. ಹೀಗಾಗಿ 2028ರ ವೇಳೆಗೆ ಮುಸ್ಲಿಮರಷ್ಟೇ ಹಿಂದೂಗಳ ಜನಸಂಖ್ಯೆ ಇರಲಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

    ಸೆಹೋರೆಯಲ್ಲಿ ನಡೆದ ಕಿಸಾನ್ ಕ್ರಾಂತಿ ಪಾದಯಾತ್ರೆಯಲ್ಲಿ ಮಾತನಾಡಿದ ದಿಗ್ವಿಜಯ ಸಿಂಗ್, ಅಧ್ಯಯನದ ಪ್ರಕಾರ 1951ರಿಂದ ಮುಸ್ಲಿಮರ ಸಂತಾನೋತ್ಪತ್ತಿ ದರವು ಕಡಿಮೆಯಾಗುತ್ತಾ ಬಂದಿದೆ. ಇದೆ ಸಮಯದಲ್ಲಿ ಹಿಂದೂಗಳ ಸಂತಾನೋತ್ಪತ್ತಿ ದರ ಕಡಿಮೆಯಾಗಿಲ್ಲ, ಏರಿಕೆ ಕಂಡಿದೆ. ಸದ್ಯ ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರವು 2.7% ಇದ್ದರೇ ಹಿಂದೂಗಳಲ್ಲಿ 2.3% ಇದೆ ಎಂದರು. ಇದನ್ನೂ ಓದಿ: ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ

    ಈ ಆಧಾರದ ಪ್ರಕಾರ 2028ರ ವೇಳೆಗೆ ಹಿಂದೂಗಳು, ಮುಸ್ಲಿಮರ ಜನಸಂಖ್ಯೆಗೆ ಸಮಾನವಾಗಿರುತ್ತದೆ. ಮೋದಿ ಹಿಂದೂಗಳಿಗೆ ಬೆಂಬಲ ನೀಡಿ ರಾಜಕೀಯ ಮಾಡಿದರೆ, ಒವೈಸಿ ಮುಸ್ಲಿಮರಿಗೆ ಆಪತ್ತು ಇದೆ ಎಂದು ರಾಜಕೀಯ ಮಾಡುತ್ತಿದ್ದಾರೆ. ಆದರೆ 2028ರಲ್ಲಿ ಜನಸಂಖ್ಯೆ ಹಿಂದೂಗಳದ್ದು ಮತ್ತು ಮುಸ್ಲಿಮರದ್ದು ಸ್ಥಿರವಾಗಲಿದೆ. ಬಿಜೆಪಿ ಸುಳ್ಳುಗಳನ್ನೇ ಹೇಳಿಕೊಂಡು ಸರ್ಕಾರ ನಡೆಸುತ್ತಿದೆ. ಬಿಜೆಪಿ ಮತ ಪಡೆಯಲು ಧರ್ಮಗಳನ್ನು ಒಡೆಯುವ ಕೆಲಸಕ್ಕೆ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

  • ಹಿಂದೂ ದೇವಾಲಯಕ್ಕೆ ನಿವೇಶನ ದಾನ – ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ

    ಹಿಂದೂ ದೇವಾಲಯಕ್ಕೆ ನಿವೇಶನ ದಾನ – ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ

    ಶಿವಮೊಗ್ಗ: ಇಂದು ಹಲವೆಡೆ ಹಿಂದೂ ಮುಸ್ಲಿಂ ನಡುವೆ ಕೋಮು ಗಲಭೆ ನಡೆಯುತ್ತಿವೆ. ಆದರೆ ಗ್ರಾಮದಲ್ಲಿ ಮಾತ್ರ ಆಗಿಲ್ಲ. ಎಲ್ಲ ಧರ್ಮೀಯರು ಸಹೋದರರ ರೀತಿ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಈ ಸಾಮರಸ್ಯ ಇರುವುದರಿಂದಲೇ ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯ ನಿರ್ಮಾಣಕ್ಕೆ ಲಕ್ಷಾಂತರ ಮೌಲ್ಯ ಬೆಲೆ ಬಾಳುವ ನಿವೇಶನವನ್ನು ದಾನವಾಗಿ ನೀಡಿದೆ.

    ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್‍ನ ತವಕ್ಕಲ್ ಕುಟುಂಬದ ಮೊಯಿದ್ದೀನ್ ಅವರಿಗೆ ಸೇರಿದ ಜಾಗದಲ್ಲಿ ಭೂತಪ್ಪ ದೇವರು ನೆಲೆಸಿದ್ದಾನೆ. ಈ ದೇವರನ್ನು ಗ್ರಾಮದ ರಾಮಣ್ಣನ ವಂಶಸ್ಥರು ಸೇರಿದಂತೆ ಗ್ರಾಮಸ್ಥರು ಸಹ ಪೂಜಿಸಿಕೊಂಡು ಬರುತ್ತಿದ್ದರು. ಆದರೆ ಈ ಭೂಮಿ ಮುಸ್ಲಿಂ ಧರ್ಮದ ಮೊಯಿದ್ದೀನ್ ಅವರದ್ದಾಗಿತ್ತು. ತಮ್ಮ ಜಾಗದಲ್ಲಿ ಹಿಂದೂ ಧರ್ಮದ ದೇವರು ಒಂದು ಇದೆ ಎಂದು ಗೊತ್ತಿದ್ದರೂ ಸಹ ಮೊಯಿದ್ದೀನ್ ಕುಟುಂಬದವರು ಇದುವರೆಗೂ ಯಾವುದೇ ತೊಂದರೆ ಕೊಡದೇ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    ಮೊಯಿದ್ದೀನ್ ಅವರಿಗೆ ನಾಲ್ವರು ಮಕ್ಕಳು. ಈ ನಾಲ್ವರು ಮಕ್ಕಳು ತಂದೆಯ ಆಸ್ತಿಗಳು ಇತ್ತೀಚೆಗೆ ಭಾಗ ಮಾಡಿಕೊಂಡಿದ್ದಾರೆ. ಆಸ್ತಿ ಭಾಗ ಮಾಡಿಕೊಳ್ಳುವ ವೇಳೆ ನಾಲ್ವರು ಒಟ್ಟಿಗೆ ಕುಳಿತು ಚರ್ಚಿಸಿ, ನಂತರ ಮುಸ್ಲಿಂ ಹಾಗೂ ಹಿಂದೂ ಮುಖಂಡರನ್ನು ಸೇರಿಸಿಕೊಂಡು ತಮ್ಮ ಸ್ಥಳದಲ್ಲಿ ದೇವರಿದ್ದ ಲಕ್ಷಾಂತರ ಬೆಲೆ ಬಾಳುವ ನಿವೇಶನವನ್ನು ಭೂತಪ್ಪ ದೇವರ ದೇವಾಲಯ ನಿರ್ಮಾಣಕ್ಕೆ ಉಚಿತವಾಗಿ ಜೊತೆಗೆ ಅದರ ಮಾಲೀಕತ್ವವನ್ನು ಸಹ ಹಿಂದೂಗಳಿಗೆ ಲಿಖಿತವಾಗಿ ಬರೆದುಕೊಡುವ ಮೂಲಕ ಪರಧರ್ಮ ಸಹಿಷ್ಣುತೆ ಮೆರೆದಿದ್ದಾರೆ.

  • ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    ಬೆಂಗಳೂರು: ಮಂಗಳವಾರ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ವಿಚಾರವಾಗಿ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

    ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ, ಆತನಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ ಎಂದು ಹೇಳಿದ್ದಾರೆ.

    ಕಾನೂನು ಪಾಲಕ ಪೊಲೀಸರು ಮತ್ತು ವರದಿಗಾಗಿ ತೆರಳಿದ್ದ ಪತ್ರಕರ್ತರ ಮೇಲೆ ಅಮಾನುಷ ದೌರ್ಜನ್ಯ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ವರ್ತಿಸಿರುವುದು ಅತ್ಯಂತ ಖಂಡನೀಯ. ಸವಾರಿ ಮಾಡುವ ಇಂತಹ ಘಟನೆಗಳಿಂದ ಸಾರ್ವತ್ರಿಕ ತಿರಸ್ಕಾರಕ್ಕೆ ಮತ್ತು ಅವಗಣನೆಗೆ ಸಮುದಾಯವೊಂದು ಪದೇ ಪದೇ ಗುರಿಯಾಗುತ್ತಿರುವುದು ಸ್ವಯಂಕೃತ ಅಪರಾಧವಲ್ಲದೆ ಬೇರೇನಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂ ಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ ಎಂದು ಟ್ವೀಟ್ ಮಾಡುವ ಮೂಲಕ ಕಿಡಿ ಕಾರಿದ್ದಾರೆ.

    ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಸೌಜನ್ಯದ ಆಜ್ಞೆ ನೀಡುತ್ತಾನೆ. ಮತ್ತು ಅಶ್ಲೀಲಕಾರ್ಯ, ದುಷ್ಕೃತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ. ನೀವು ಜಾಗೃತರಾಗಲಿಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಾನೆ. ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ ಎಂದು ಟ್ವೀಟ್ ಮಾಡಿದ್ದಾರೆ.

  • ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

    ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

    – ಪೋಷಕರಿಲ್ಲದೇ ಅನಾಥಳಾಗಿದ್ದಾಗ ದತ್ತು ಪಡೆದಿದ್ದ ದಂಪತಿ

    ತಿರುವನಂತಪುರಂ: ಮುಸ್ಲಿಂ ದಂಪತಿ ತಮ್ಮ ಸಾಕು ಮಗಳನ್ನು ಸ್ವಂತ ಮಗಳಂತೆ ಸಾಕಿ-ಸಲಹಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆಯಲ್ಲಿಯೇ ವಿವಾಹ ಮಾಡಿರುವ ಅಪರೂಪದ ಕೋಮು ಸೌಹಾರ್ದತೆಯ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

    ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ಭಾನುವಾರ ಈ ವಿವಾಹ ಸಮಾರಂಭ ನಡೆದಿದೆ. ಮುಸ್ಲಿಂ ದಂಪತಿಯ ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ್ ಜೊತೆ ಮದುವೆಯಾಗಿದ್ದಾಳೆ. ಇದನ್ನೂ ಓದಿ: ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

    ಈ ಅಪರೂಪದ ಮದುವೆಗೆ ಹಿಂದೂ ಮತ್ತು ಮುಸ್ಲಿಂ ಕುಟುಂಬದವರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ವಧು ರಾಜೇಶ್ವರಿ ತಂದೆ, ಅಬ್ದುಲ್ಲಾ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಆಕೆಯ ತಾಯಿಯೂ ಕೂಡ ರಾಜೇಶ್ವರಿ ಮಗುವಾಗಿದ್ದಾಗ ಸಾವನ್ನಪ್ಪಿದ್ದರು. ಕೊನೆಗೆ ರಾಜೇಶ್ವರಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಳು. ಕೊನೆಗೆ ಅಬ್ದುಲ್ಲಾ ಮತ್ತು ಖದೀಜಾ ರಾಜೇಶ್ವರಿಯನ್ನು ದತ್ತು ಪಡೆದರು.

    ರಾಜೇಶ್ವರಿ, ಅಬ್ದುಲ್ಲಾ ಮತ್ತು ಖದೀಜಾ ಅವರ ಮೂವರು ಗಂಡು ಮಕ್ಕಳಾದ ಶಮೀಮ್, ನಜೀಬ್ ಮತ್ತು ಶೆರೀಫ್ ಅವರೊಂದಿಗೆ ಬೆಳೆದಿದ್ದಳು. ಮುಸ್ಲಿಂ ದಂಪತಿ ಸಾಕು ಮಗಳನ್ನು ಚೆನ್ನಾಗಿ ಸಾಕಿ, ಶಿಕ್ಷಣವನ್ನೂ ಕೊಡಿಸಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆ ವಿವಾಹ ಕೂಡ ಮಾಡಿಸಿದ್ದಾರೆ.

    ಜಾತಿ, ಧರ್ಮವನ್ನು ಮೀರಿ ಕೇರಳದ ಕಾಯಂಕುಲಂನ ಮಸೀದಿಯಲ್ಲಿ ರಾಜೇಶ್ವರಿ ಮತ್ತು ವಿಷ್ಣು ಪ್ರಸಾದ್ ಜೋಡಿಯ ಹಿಂದೂ ವಿವಾಹ ಸಮಾರಂಭವನ್ನು ಆಯೋಜಿಸಿತ್ತು.

  • ಶನಿ ಬಗ್ಗೆ ಜನರಿಗೆ ಭಯ ಜಾಸ್ತಿ: ಸಿದ್ದರಾಮಯ್ಯ

    ಶನಿ ಬಗ್ಗೆ ಜನರಿಗೆ ಭಯ ಜಾಸ್ತಿ: ಸಿದ್ದರಾಮಯ್ಯ

    ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶನೈಶ್ಚರ ಸ್ವಾಮಿ ದೇವಸ್ಥಾನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಕನಕದಾಸದ ಪುತ್ಥಳಿಯನ್ನು ಅನಾವರಣ ಮಾಡಿದರು.

    ಕಾರ್ಯಕ್ರಮದಲ್ಲಿ ದೇವರು ಹಾಗೂ ಧರ್ಮದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ದೇವರು ಒಬ್ಬನೇ ಇರೋದು, ಅನೇಕ ಇಲ್ಲ. ಆದರೆ ನಾವು ಬೇರೆ ಬೇರೆ ಹೆಸರಲ್ಲಿ ಕರೆದು ಪೂಜೆ ಮಾಡ್ತೀವಿ. ದೇವನೊಬ್ಬ ನಾಮ ಹಲವು, ದೇವರು ಸರ್ವವ್ಯಾಪಿ. ಗುಡಿಯಲ್ಲು ಇದ್ದಾನೆ, ಹೊರಗೂ ಇದ್ದಾನೆ. ಹಿರಣ್ಯ ಕಶ್ಯಪು ನಾಟಕ ನೋಡಿಲ್ವಾ? ಹಾಗೆಯೇ ಎಲ್ಲೆಲ್ಲೂ ಇದ್ದಾನೆ ಎಂದು ಹೇಳಿದರು.

    ದೇವರು, ಒಳ್ಳೆದು, ಕೆಟ್ಟದರ ಬಗ್ಗೆ ಪಾಠ ಮಾಡಿದ ಸಿದ್ದರಾಮಯ್ಯ ಅವರು, ವ್ಯಾಸರಾಯ-ಕನಕದಾಸರ ಕಥೆ ಪ್ರಸ್ತಾಪಿಸಿದರು. ನಿಜವಾದ ಜ್ಞಾನ ಬೆಳೆಸಿಕೊಂಡವನು ಜ್ಞಾನಿ. ಯಾರಿಗೂ ಮೋಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಅಲ್ಲದೇ ಇನ್ನೊಬ್ಬರಿಗೆ ಮೋಸ ಮಾಡದಿರೋದೆ ದೇವರು. ತಪ್ಪು ಮಾಡಿದರೆ ಶನಿ ಹೆಗಲೇರ್ತಾನೆ ಅನ್ನೋ ಭಯ. ಆದ್ದರಿಂದ ಎಲ್ಲರೂ ಶನೇಶ್ವರನಿಗೆ ಭಯ ಪಡುತ್ತಾರೆ ಎಂದರು.

    ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ಆರ್. ಧ್ರುವನಾರಾಯಣ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸಾಥ್ ನೀಡಿದರು. ಇದನ್ನು ಓದಿ: ಯಡಿಯೂರಪ್ಪನನ್ನು ನೋಡಿದ್ರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ: ಸಿದ್ದರಾಮಯ್ಯ

  • ಶನಿವಾರ ನಡೆಯಲಿದೆ ವಿಶೇಷ ರಥಸಪ್ತಮಿ- ಅಂದು ಏನು ಮಾಡಬೇಕು?

    ಶನಿವಾರ ನಡೆಯಲಿದೆ ವಿಶೇಷ ರಥಸಪ್ತಮಿ- ಅಂದು ಏನು ಮಾಡಬೇಕು?

    ಬೆಂಗಳೂರು: ದೀರ್ಘಕಾಲದ ಸೂರ್ಯ ಗ್ರಹಣದ ಬಳಿಕ ಬಂದಿರುವ ಶನಿವಾರದ ರಥಸಪ್ತಮಿ ಭಕ್ತರ ಪಾಲಿಗೆ ದೋಷವನ್ನು ಮುಕ್ತ ಮಾಡಿಕೊಳ್ಳುವ ದಿನವಾಗಲಿದೆ.

    ಗ್ರಹಣದ ಬಳಿಕ ಅಲ್ಪಸ್ವಲ್ಪ ದೋಷ ಎಲ್ಲರಿಗೂ ಇರಲಿದೆ. ಹಾಗಾಗಿ ನಾಳೆ ಗ್ರಹಣದ ದೋಷ ಪರಿಪೂರ್ಣ ನಿವಾರಣೆಗೆ ರಥಸಪ್ತಮಿಯನ್ನು ಆಚರಿಸಬೇಕಾಗುತ್ತದೆ. ರಥಸಪ್ತಮಿಯ ದಿನ ಸೂರ್ಯ ಏಕಚಕ್ರಾದಿಪತ್ಯ ಸಾಧಿಸುತ್ತಾನೆ. ಗ್ರಹಣ ಮುಕ್ತನಾದ ಸೂರ್ಯ ಶನಿವಾರದಿಂದ ಇನ್ನಷ್ಟು ಪ್ರಜ್ವಲಿಸುತ್ತಾನೆ.

    ರಥಸಪ್ತಮಿಯ ದಿನ ಏನು ಮಾಡಬೇಕು?
    ಶನಿವಾರದ ಸುದೀರ್ಘ ಸೂರ್ಯಗ್ರಹಣವನ್ನು ನೋಡಿದ್ದರಿಂದ ಈ ಬಾರಿ ರಥಸಪ್ತಮಿ ಬಹಳ ವಿಶೇಷವಾಗಲಿದೆ. ನಾಳೆ ಬೆಳಗ್ಗೆ ಸೂರ್ಯೋದಯದ ಬಳಿಕ ಅರ್ಕ ಪತ್ರವನ್ನು ಹಾಗೂ ಅಕ್ಷತೆಯ ಕಾಳನ್ನು ತಲೆಯ ಮೇಲಿಟ್ಟು ಸ್ನಾನ ಮಾಡಬೇಕು. ಸೂರ್ಯನ ಮುಂದೆ ಗೋಧಿಯನ್ನಿಟ್ಟು ಪೂಜೆ ಮಾಡಬೇಕು. ಬಳಿಕ ಸೂರ್ಯನಿಗೆ ನಮಸ್ಕರಿಸಬೇಕು. ಈ ರೀತಿ ಮಾಡುವುದಿಂದ ಗ್ರಹಣದ ದೋಷವೆಲ್ಲವೂ ನಿವಾರಣೆಯಾಗಲಿದೆ. ಅರ್ಕವನ್ನಿಟ್ಟು ಸ್ನಾನ ಮಾಡುವುದರಿಂದ ಆರೋಗ್ಯ ಭಾಗ್ಯವೂ ಲಭಿಸಲಿದೆ. ಇದಾದ ಬಳಿಕ ಶಿವದರ್ಶನ ಮಾಡಿದರೆ ರಥಸಪ್ತಮಿ ದಿನ ಒಳ್ಳೆಯದಾಗಲಿದೆ ಎಂದು ಅರ್ಚಕರು ಹೇಳಿದ್ದಾರೆ.

    ರಥಸಪ್ತಮಿ ವಿಶೇಷ:
    ಮಾಘ ಮಾಸದ ಶುಕ್ಲ ಪಕ್ಷದ ಉತ್ತರಾಯಣದ ಸಪ್ತಮಿಯಂದು ಬೆಳಕು ನೀಡುವ ಶ್ರೀ ಸೂರ್ಯದೇವರನ್ನು ವಿಶೇಷವಾಗಿ ಆರಾಧಿಸುವ ದಿನವಾಗಿದೆ. ರಥ ಸಪ್ತಮಿ ಅಂದ್ರೇ ಸೂರ್ಯದೇವರ ಜನ್ಮದಿನ. ಈ ದಿನ ಶುಭ ಕಾರ್ಯ ಮಾಡಿದರೆ ಒಳ್ಳೆಯದಾಗಲಿದೆ ಎನ್ನುವ ನಂಬಿಕೆ.

    ಸೂರ್ಯದೇವನು ನಾಳೆ ಉತ್ತರಾಯಣನಾಗಿ ಸಪ್ತ ಕುದುರೆಗಳನ್ನು ಹೊಂದಿದ ರಥವನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣಿಸುತ್ತಾನೆ ಎನ್ನುವ ನಂಬಿಕೆ. ಈ ರಥಸಪ್ತಮಿಯಂದು ಸೂರ್ಯೋದಯದ ಸಮಯದಲ್ಲಿ ಸಮುದ್ರ ಸ್ನಾನ ಉತ್ತಮ. ಎಕ್ಕೆ ಎಲೆಯನ್ನಿರಿಸಿಕೊಂಡು ಮಾಡುವ ಸ್ನಾನದಿಂದ ಏಳೇಳು ಜನ್ಮದ ಪಾಪ ನಾಶದ ಜತೆ ಮನುಷ್ಯನ ದೇಹದಲ್ಲಿರುವ ಚರ್ಮ ರೋಗವೂ ವಾಸಿಯಾಗಿ ಆರೋಗ್ಯ ವೃದ್ಧಿಸುತ್ತೆ ಎನ್ನುವ ನಂಬಿಕೆ ಇದೆ. ಸೂರ್ಯನಿಗೆ ಪ್ರಿಯವಾದ ಎಕ್ಕೆ ಗಿಡದಿಂದ ಏಳು ಎಕ್ಕೆ ಎಲೆಗಳನ್ನು ತೆಗೆದುಕೊಂಡು ಸೂರ್ಯ ಪಠಣೆ ಮಾಡಿ ಸ್ನಾನಮಾಡಿದರೆ ಇನ್ನು ಉತ್ತಮ.

  • ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನಿಗಳು: ಶಾರೂಖ್ ಖಾನ್

    ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನಿಗಳು: ಶಾರೂಖ್ ಖಾನ್

    ಮುಂಬೈ: ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ ಮತ್ತು ನನ್ನ ಮಕ್ಕಳು ಹಿಂದೂಸ್ತಾನಿಗಳು ಎಂದು ಹೇಳುವ ಮೂಲಕ ಬಾಲಿವುಡ್ ಕಿಂಗ್‍ಖಾನ್ ಶಾರೂಖ್ ಖಾನ್ ಧರ್ಮಗಳ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿರುವ ಅವರು, ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನಿಗಳು ಎಂದು ಹೇಳಿದ್ದಾರೆ.

    ನಮ್ಮ ಮನೆಯಲ್ಲಿ ಧರ್ಮಗಳ ಬಗ್ಗೆ ಚರ್ಚೆ ಅಗುವುದಿಲ್ಲ. ನಮ್ಮ ಮಕ್ಕಳು ಧರ್ಮವನ್ನು ಇಂಡಿಯನ್ ಎಂದು ಬಳಸುತ್ತಾರೆ. ನನ್ನ ಮಗಳು ಚಿಕ್ಕವಳಾಗಿದ್ದಾಗ ಅವರ ಶಾಲೆಯಲ್ಲಿ ನಿಮ್ಮ ಧರ್ಮ ಯಾವುದು ಎಂದು ಬರೆಯಬೇಕಿತ್ತು. ಆಗ ನನ್ನ ಮಗಳು ನನ್ನ ಬಳಿ ಬಂದು ನಮ್ಮ ಧರ್ಮ ಯಾವುದು ಎಂದು ಕೇಳಿದಳು. ನಾನು ಆಗ ನಾವು ಭಾರತೀಯರು ನಮಗೆ ಧರ್ಮವಿಲ್ಲ ಎಂದು ಬರೆಯಲು ಹೇಳಿದೆ ಎಂದು ತಿಳಿಸಿದ್ದಾರೆ.

    ನಾವು ಯಾವುತ್ತು ಹಿಂದೂ ಮುಸ್ಲಿಂ ಎಂದು ಮಾತನಾಡುವುದಿಲ್ಲ. ಮನೆಯಲ್ಲಿ ನಾವು ಎಲ್ಲಾ ಧರ್ಮಗಳ ಹಬ್ಬವನ್ನು ಆಚರಣೆ ಮಾಡುತ್ತೇವೆ. ಮಕ್ಕಳ ಮೇಲೆ ಧರ್ಮವನ್ನು ಹೇರುವುದಿಲ್ಲ. ಅದಕ್ಕಾಗಿಯೇ ನನ್ನ ಮಕ್ಕಳಿಗೆ ನಾನು ಆರ್ಯನ್ ಮತ್ತು ಸುಹಾನಾ ಎಂದು ಹೆರರಿಟ್ಟದ್ದೇನೆ. ಖಾನ್ ಎಂಬ ಹೆಸರು ನನ್ನಿಂದ ಬಂದಿರುವುದು, ಅವರು ಅದರಿಂದ ತಪ್ಪಿಸಿಕೊಳ್ಳಲು ಆಗಲ್ಲ ಎಂದು ಕಾರ್ಯಕ್ರಮದಲ್ಲಿ ಶಾರುಖ್ ಹೇಳಿದ್ದಾರೆ.

    ಇದೇ ಕಾರ್ಯಕ್ರಮದಲ್ಲಿ ಧರ್ಮದ ಬಗ್ಗೆ ಮಾತನಾಡಿರುವ ಶಾರುಖ್ ಖಾನ್ ಅವರು, ನಾನು ನಮಾಜ್ ಅನ್ನು ದಿನಕ್ಕೆ ಐದು ಬಾರಿ ಮಾಡಿದರೆ ನಾನು ಧಾರ್ಮಿಕನಲ್ಲ. ಆದರೆ ನಾನು ಇಸ್ಲಾಮಿಕ್. ನಾನು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ನಂಬುತ್ತೇನೆ. ನನ್ನ ಧರ್ಮ ಒಳ್ಳೆಯದು ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.

    ಶಾರುಖ್ ಖಾನ್ ಸದ್ಯ ಸಿನಿಮಾಗಳಿಂದ ಸ್ವಲ್ಪ ವಿರಾಮ ಪಡೆದಿದ್ದಾರೆ. ಝೀರೋ ಸಿನಿಮಾದ ನಂತರ ಶಾರುಖ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಶಾರುಖ್ ಖಾನ್ ಅವರ ಇತ್ತೀಚೆಗೆ ಬಿಡುಗಡೆ ಕಂಡ ಚಿತ್ರಗಳು ಅಷ್ಟೇನು ಯಶಸ್ವಿಯಾಗಿಲ್ಲ. ಅದ್ದರಿಂದ ಕಿಂಗ್ ಖಾನ್ ಸಿನಿಮಾದಿಂದ ದೂರ ಉಳಿದಿದ್ದು, ಶಾರುಖ್ ಅವರ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತದೆ.

  • ಧರ್ಮದ ಹೆಸರಲ್ಲಿ ದೇಶ ಒಡೆಯಲು ಬಿಡಲ್ಲ: ಸೌಮ್ಯ ರೆಡ್ಡಿ

    ಧರ್ಮದ ಹೆಸರಲ್ಲಿ ದೇಶ ಒಡೆಯಲು ಬಿಡಲ್ಲ: ಸೌಮ್ಯ ರೆಡ್ಡಿ

    ಬೆಂಗಳೂರು: ಧರ್ಮದ ಹೆಸರಲ್ಲಿ ದೇಶ ಒಡೆಯಲು ನಾವು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಶಾಸಕಿ ಸೌಮ್ಯ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಸಿಎಎ, ಎನ್‍ಆರ್ ಸಿ ಕಾಯ್ದೆ ಜಾರಿ ವಿರೋಧಿಸಿ ಜಯನಗರ ಈದ್ಗಾ ಮೈದಾನದ ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯ ರೆಡ್ಡಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ಭೀಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೌರತ್ವ ಕಾಯ್ದೆ ವಿರುದ್ಧ ದೇಶದೆಲ್ಲಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ ನೋಟು ಅಮಾನ್ಯಿಕರಣ, ಜಿಎಸ್ಟಿ ಜಾರಿಗೆ ತಂದಾಗ ದೇಶಕ್ಕೆ ಒಳ್ಳೆದು ಆಗಬಹುದೆಂದು ಜನರು ಸುಮ್ಮನಾಗಿದ್ದರು. ಆದರೆ ಸಿಎಎ ಹಾಗೂ ಎನ್‍ಆರ್ ಸಿ ಜಾರಿ ವಿಚಾರವಾಗಿ ಸುಮ್ಮನೆ ಕೈಕಟ್ಟಿಕೂರುವುದಿಲ್ಲ ಎಂದರು.

    ಧರ್ಮದ ಹೆಸರಲ್ಲಿ ದೇಶ ಹೊಡೆಯಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಸಲಿ ಹಿಂದೂ ಎಂದರೇ ಹಿಂದು, ಮುಸ್ಲಿಂ, ಸಿಖ್ ಧರ್ಮದವರನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗುವವರು ನಿಜವಾದ ಹಿಂದೂಗಳು. ರಾಜ್ಯದಲ್ಲಿ ಪೌರತ್ವ ಕಾಯ್ದೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಮಾಡಿ ನಮ್ಮ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ರಾಜ್ಯ ಸರ್ಕಾರದ ನಡೆಯ ವಿರುದ್ಧ ನಾನು ಸೇರಿದಂತೆ ನಾಲ್ಕು ಜನ ಹೈಕೋರ್ಟ್ ಮೇಟ್ಟಿಲೇರಿದ್ದೆವು. ಸಿಎಎ ಮತ್ತು ಎನ್‍ಆರ್‍ಸಿ ಜಾರಿ ವಾಪಾಸ್ ಪಡೆಯದೆ ಹೋದರೂ ನಾವು ಇಲ್ಲಿಗೆ ಸುಮ್ಮನಾಗುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಹಿಂದೂ ನಟಿಯರು ಝೈರಾಳಿಂದ ಸ್ಫೂರ್ತಿ ಪಡೆಯಬೇಕು: ಸ್ವಾಮಿ ಚಕ್ರಪಾಣಿ

    ಹಿಂದೂ ನಟಿಯರು ಝೈರಾಳಿಂದ ಸ್ಫೂರ್ತಿ ಪಡೆಯಬೇಕು: ಸ್ವಾಮಿ ಚಕ್ರಪಾಣಿ

    ಮುಂಬೈ: ಭಾನುವಾರವಷ್ಟೇ ಬಾಲಿವುಡ್ ದಂಗಲ್ ಬೆಡಗಿ ಝೈರಾ ವಾಸಿಂ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರು ಝೈರಾ ಪರವಾಗಿ ಬ್ಯಾಟ್ ಬೀಸಿದ್ದು, ಹಿಂದೂ ನಟಿಯರು ಆಕೆಯಿಂದ ಸ್ಫೂರ್ತಿ ಪಡೆಯಲಿ ಎಂದು ತಿಳಿಸಿದ್ದಾರೆ.

    ನಾನು ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದರೆ ಅದೂ ನನ್ನ ಧರ್ಮಕ್ಕೆ ಮತ್ತು ಆದರ ನಿಯಮಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಟಿ ಝೈರಾ ಚಿತ್ರರಂಗದಿಂದ ದೂರ ಸರಿಯುತ್ತಿದ್ದೇನೆ ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದರು. ಈ ವಿಚಾರವಾಗಿ ಝೈರಾ ಅವರಿಗೆ ಸಪೋರ್ಟ್ ಮಾಡಿ ಟ್ವೀಟ್ ಮಾಡಿರುವ ಸ್ವಾಮಿ ಅವರು ಝೈರಾ ಅವರನ್ನು ನೋಡಿ ಹಿಂದೂ ಧರ್ಮದ ನಟಿಯರು ಕೂಡ ಸ್ಫೂರ್ತಿ ಪಡೆಯಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸ್ವಾಮಿ ಅವರು, “ನಟಿ ಝೈರಾ ಅವರು ಧರ್ಮದ ವಿಚಾರವಾಗಿ ಚಿತ್ರರಂಗದಿಂದ ಹಿಂದೆ ಸರಿಯುವ ನಿರ್ಧಾರ ಶ್ಲಾಘನೀಯ. ಇವರನ್ನು ನೋಡಿ ಹಿಂದೂ ನಟಿಯರು ಕೂಡ ಸ್ಫೂರ್ತಿ ಪಡೆಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ನಟಿ ಝೈರಾ ಅವರು ತನ್ನ ಧಾರ್ಮಿಕ ನಂಬಿಕೆಗಳಿಗೆ ಚಿತ್ರರಂಗ ಅಡ್ಡಿಯಾಗುತ್ತಿದೆ ಎಂದು ನಟನಾ ಕ್ಷೇತ್ರ ತೊರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

    https://www.instagram.com/p/BzUBXYrlsml/?utm_source=ig_embed

    ಝೈರಾ ಪೋಸ್ಟ್‍ನಲ್ಲಿ ಏನಿದೆ?
    5 ವರ್ಷದ ಮೊದಲು ನಾನು ಒಂದು ನಿರ್ಧಾರ ಮಾಡಿದೆ. ಆ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಬಾಲಿವುಡ್‍ಗೆ ಹೆಜ್ಜೆ ಇಟ್ಟಾಗ ನನಗೆ ಪಾಪುಲ್ಯಾರಿಟಿಯ ರಸ್ತೆಯನ್ನು ತೆರೆಯಿತು. ನಿಧಾನವಾಗಿ ನಾನು ಯುವ ಜನತೆಗೆ ರೋಲ್ ಮಾಡಲ್ ಆಗಿ ಕಾಣಲಾರಂಭಿಸಿದೆ. ಬಾಲಿವುಡ್‍ಗೆ ಬಂದು 5 ವರ್ಷ ಆಗಿದೆ. ಆದರೆ ನನ್ನ ಕೆಲಸದಲ್ಲಿ ನನಗೆ ಖುಷಿಯಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಇಲ್ಲಿ ಫಿಟ್ ಆಗಿದ್ದೇನೆ ಆದರೆ ನಾನು ಇಲ್ಲಿಯವಳಲ್ಲ. ನಟಿ ಆಗುವ ಕಾರಣದಿಂದ ನಾನು ನನ್ನ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದೇನೆ. ಹಾಗಾಗಿ ನಾನು ಚಿತ್ರರಂಗದಿಂದ ನನ್ನ ಸಂಬಂಧವನ್ನು ಮುರಿಯುತ್ತಿದ್ದೇನೆ. ನಾನು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

    ಝೈರಾ ಕೇವಲ ಎರಡೇ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಝೈರಾ ಮಿ. ಪರ್ಫೆಕ್ಟ್ ಎಂದೇ ಖ್ಯಾತರಾಗಿರುವ ನಟ ಅಮೀರ್ ಖಾನ್ ಜೊತೆ ದಂಗಲ್ ಎಂಬ ಚಿತ್ರದಲ್ಲಿ ಮಹಿಳಾ ಪೈಲ್ವಾನ್ ಗೀತಾ ಪೋಗಾಟ್‍ನ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ 2016ರಲ್ಲಿ ಬಿಡುಗಡೆ ಆಗಿತ್ತು. ಹಾಗೂ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿದ್ದವು.

  • ವೀರಶೈವ ಬಿಟ್ಟು ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ – ಮತ್ತೆ ಪ್ರತ್ಯೇಕ ಧರ್ಮದ ಕೂಗು

    ವೀರಶೈವ ಬಿಟ್ಟು ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ – ಮತ್ತೆ ಪ್ರತ್ಯೇಕ ಧರ್ಮದ ಕೂಗು

    ಬೆಂಗಳೂರು: ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಕೇಳಿಬಂದಿದೆ. ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿಸುತ್ತಿರುವ ಬೆನ್ನಲ್ಲೇ ನಿಗಮಕ್ಕೆ ಲಿಂಗಾಯತ ಎಂಬ ಹೆಸರನ್ನು ಮಾತ್ರ ಬಳಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

    ಬಸವ ಸಮಿತಿಯ ಅರಿವಿನ ಮನೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಲಿಂಗಾಯತ ಸ್ವಾಮೀಜಿಗಳು, ಸರ್ಕಾರದ ನಿರ್ಧಾರವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಸ್ವಾಗತಿಸುತ್ತದೆ. ಆದರೆ, ವೀರಶೈವ ಎನ್ನುವುದನ್ನು ಬಿಟ್ಟು ಲಿಂಗಾಯತ ಅಭಿವೃದ್ಧಿ ನಿಗಮ ಎಂದು ಸ್ಥಾಪಿಸಿ. ಅಲ್ಲದೆ, ಪ್ರತ್ಯೇಕ ಧರ್ಮ ಮತ್ತು ಹಿಂದುಳಿದ ವರ್ಗದ ವಿಚಾರ ಬೇರೆ. ಹೀಗಾಗಿ ಧರ್ಮದ ಹೋರಾಟ ನಿರಂತರವಾಗಿ ನಡೆಯುತ್ತದೆ. ಲಿಂಗಾಯತ ಅಸ್ಮಿತೆಗಾಗಿ ಹಾಗೂ ಸ್ವಾತಂತ್ರ್ಯ ಧರ್ಮಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಈ ವಿಚಾರವಾಗಿ ನಾವು ಸುಪ್ರೀಂ ಕೋರ್ಟ್‍ಗೆ ಹೋಗಲು ಸಿದ್ಧರಿದ್ದೇವೆ ಎಂದು ಒಕ್ಕೂರಲಿನಿಂದ ತಿಳಿಸಿದ್ದಾರೆ.


    ಸುದ್ದಿಗೋಷ್ಠಿಯಲ್ಲಿ ಗದಗನ ಡಂಬಳ ಮಠದ ಶ್ರೀ ಸಿದ್ದರಾಮ ಸಾಮೀಜಿ, ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ ದೇವರು, ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಮುಂಡರಗಿ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಮಾತೋಶ್ರಿ ಗಂಗಾಮಾತೆ, ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ ಸೇರಿದಂತೆ ಹಲವರು ಭಾಗಿಯಾಗಿ ಕಾಂಗ್ರಸ್‍ನ ಕೆಲ ಲಿಂಗಾಯತ ನಾಯಕರ ನಿಲುವನ್ನು ಖಂಡಿಸಿದ್ದಾರೆ.

    ಗದಗ ಡಂಬಳ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿರಶೈವ ಲಿಂಗಾಯತ ನಿಗಮ ಮಂಡಳಿ ಸ್ಥಾಪಿಸುವ ಕುರಿತು ಕಾಂಗ್ರೆಸ್ ನಾಯಕರು ಸಭೆ ಮಾಡಿದ್ದು, ಇದಕ್ಕೆ ನಮ್ಮ ತಕರಾರಿಲ್ಲ. ಅದರೆ, ವೀರಶೈವ ಲಿಂಗಾಯತ ಎಂದು ಎಲ್ಲೂ ಇಲ್ಲ ಹೀಗಾಗಿ ಹೆಸರನ್ನು ಲಿಂಗಾಯತ ಎಂದು ಬದಲಿಸಬೇಕು. ವೀರಶೈವ ಎನ್ನುವುದೇ ಇಲ್ಲದಿದ್ದಾಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಎಂಬ ಹೆಸರನ್ನೇಕೆ ಇಡಬೇಕು ಎಂದು ಪ್ರಶ್ನಿಸಿದ್ದಾರೆ.

    ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮುಗಿದ ಅಧ್ಯಾಯ ಎಂದು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಸುಳ್ಳು ಲಿಂಗಾಯತರ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಿಂಗಾಯತ ಹೋರಾಟ ಮುಗಿದ ಅಧ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ಹೇಳಿಕೆ ಅಗಿರಬಹುದು. ಅದರೆ, ಸ್ವತಂತ್ರ ಧರ್ಮದ ಹೋರಾಟ ನಮ್ಮ ಅಸ್ಮಿತೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸಿದ್ದರಾಮ ಸ್ವಾಮೀಜಿ ತಿಳಿಸಿದರು.

    ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಿಗಮ ಮಂಡಳಿ ಸ್ಥಾಪನೆ ಮಾಡಿ ಲಿಂಗಾಯತ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಮುಂದಾಗಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇದೆ. ಆದರೆ ಸ್ವತಂತ್ರ ಧರ್ಮದ ಹೋರಾಟಕ್ಕೂ ನಿಗಮ ಮಂಡಳಿ ಸ್ಥಾಪನೆಗೂ ಸಂಬಂಧವಿಲ್ಲ. ಕಾಂಗ್ರಸ್ ಪಕ್ಷದ ಕೆಲ ಲಿಂಗಾಯತ ನಾಯಕರು ಈ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಹೋರಾಟ ನಿರಂತರವಾಗಿರುತ್ತದೆ. ನಿಗಮ ಮಂಡಳಿಗೂ ಸಹ ವೀರಶೈವ ಎನ್ನುವುದನ್ನು ಬಿಟ್ಟು ಲಿಂಗಾಯತ ಅಭಿವೃದ್ಧಿ ನಿಗಮ ಎಂದು ಸ್ಥಾಪಿಸಿ ಎಂದು ಸಲಹೆ ನೀಡಿದ್ದಾರೆ.

    ಎಲ್ಲೂ ಉಲ್ಲೇಖವಾಗಿಲ್ಲ
    ಮಂಡಲ್ ವರದಿಯಲ್ಲಿ ಲಿಂಗಾಯತದ ಕುರಿತು ಪ್ರಸ್ತಾಪವಾಗಿಲ್ಲ. 30 ಪಂಗಡಗಳನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿತ್ತು. ಉಳಿದ 90 ಪಂಗಡಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂಬ ಒತ್ತಡ ನಮ್ಮದಾಗಿದೆ. ಲಿಂಗಾಯತ ಗಾಣಿಗ, ನೇಕಾರ ಲಿಂಗಾಯತ, ಬಡಿಗ ಲಿಂಗಾಯತ ಸೇರಿದಂತೆ 30 ಪಂಗಡಗಳಿಗೆ ಲಿಂಗಾಯತ ಎಂದೇ ಸೇರಿಸಿದ್ದಾರೆ. ಯಾವ ಜಾತಿಯಲ್ಲೂ ವೀರಶೈವ ಲಿಂಗಾಯತ ಎಂದು ಉಲ್ಲೇಖವಾಗಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಸ್ಪಷ್ಟಪಡಿಸಿದ್ದಾರೆ.

    ವೀರಶೈವವನ್ನು ಉಪಪಂಗಡವಾಗಿ ನಾವು ಗೌರವಿಸುತ್ತೇವೆ. ಆದರೆ, ತಾವೇ ಜಾತಿ ಹುಟ್ಟುಹಾಕಿದವರು, ಬಸವಣ್ಣ ಶಿಷ್ಯ ಎಂದರೆ ನಾವು ಒಪ್ಪುವುದಿಲ್ಲ. ಈ ಕುರಿತು ಬಹುತೇಕ ಜನರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಇದೀಗ ಮತ್ತೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ ಎಂದರೆ, ಅವರೇನು ಹುಚ್ಚರಾ? 2002ರ ಗೆಜೆಟ್ ನೋಟಿಫಿಕೇಷನ್ ಸರ್ಕಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಲೂ ಸಿದ್ಧ. ಈ ಕುರಿತು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬೇಡಿ ಎಂದು ಜಾಮದಾರ್ ಮನವಿ ಮಾಡಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]