Tag: Relief Package

  • ಸೆ.9ಕ್ಕೆ ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ – ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ

    ಸೆ.9ಕ್ಕೆ ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ – ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ

    ಚಂಡೀಗಢ: ಸೆ.9ಕ್ಕೆ ಪ್ರಧಾನಿ ಮೋದಿ (PM Modi) ಪ್ರವಾಹ ಪೀಡಿತ ಪಂಜಾಬ್‌ಗೆ (Punjab) ಭೇಟಿ ನೀಡಲಿದ್ದು, ಈ ವೇಳೆ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ ಒಂದು ತಿಂಗಳ ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಪಂಜಾಬ್ ಸೇರಿದಂತೆ ಇತರ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಗುರುದಾಸ್ಪುರಕ್ಕೆ (Gurudaspur) ಭೇಟಿ ನೀಡುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಅಪಾಯಮಟ್ಟ ಮೀರಿದ ಯಮುನೆ – ಹಲವು ಪ್ರದೇಶಗಳು ಜಲಾವೃತ

    ಈ ಕುರಿತು ರಾಜ್ಯ ಬಿಜೆಪಿ (BJP Punjab) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗುರುದಾಸ್ಪುರ ಭೇಟಿ ವೇಳೆ ಮೋದಿಯವರು ಪ್ರವಾಹ ಪೀಡಿತರನ್ನು ನೇರವಾಗಿ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಜೊತೆಗೆ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಯಾವಾಗಲೂ ಪಂಜಾಬ್ ಜನರೊಂದಿಗಿದೆ ಹಾಗೂ ಕಷ್ಟದಲ್ಲಿ ಸಹಾಯ ಮಾಡುತ್ತದೆಂದು ಸಾಬೀತುಪಡಿಸುತ್ತದೆ ಎಂದು ಬರೆದುಕೊಂಡಿದೆ.

    ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಪಂಜಾಬ್ ರಾಜ್ಯಕ್ಕೆ ವಿಶೇಷ ಪರಿಹಾರ ಪ್ಯಾಕೇಜ್‌ನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರವಾಹವು ಪಂಜಾಬ್‌ನ 14 ಜಿಲ್ಲೆಗಳಲ್ಲಿ ತೀವ್ರಹಾನಿಯನ್ನುಂಟು ಮಾಡಿದೆ. ಈವರೆಗೂ 46 ಜನರು ಸಾವನ್ನಪ್ಪಿದ್ದು, ಸುಮಾರು 2,000 ಗ್ರಾಮಗಳು ಮುಳುಗಡೆಯಾಗಿವೆ. ಇನ್ನೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯದಲ್ಲಿ ನಿರಂತರ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.ಇದನ್ನೂ ಓದಿ: ರಾಜಸ್ಥಾನ, ಗುಜರಾತ್‌ ಸೇರಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

  • ಪ್ರಧಾನಿ ಬಳಿ ಪರಿಹಾರ ಕೇಳೋಕೆ ರಾಜ್ಯ ಸರ್ಕಾರಕ್ಕೆ ಭಯವೇ?

    ಪ್ರಧಾನಿ ಬಳಿ ಪರಿಹಾರ ಕೇಳೋಕೆ ರಾಜ್ಯ ಸರ್ಕಾರಕ್ಕೆ ಭಯವೇ?

    – ಕಳೆದ ವರ್ಷದ ಬಾಕಿ ಬದಲು ‘ಅಡ್ವಾನ್ಸ್’ ಕೇಳಿದ ಸರ್ಕಾರ
    – ತುರ್ತಾಗಿ 396 ಕೋಟಿಗಷ್ಟೇ ಮನವಿ

    ಬೆಂಗಳೂರು: ಆಗಸ್ಟ್ ಆರಂಭದಲ್ಲೇ ನಿರೀಕ್ಷೆಯಂತೆ ರಾಜ್ಯದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಆರ್ಭಟದಿಂದ ಸಾವಿರಾರು ಕೋಟಿ ಹಾನಿ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ರಾಜ್ಯ ಸರ್ಕಾರ ತಡವಾಗಿ ಎಚ್ಚೆತ್ತು ಪ್ರವಾಹ ನಿರ್ವಹಣೆಯಲ್ಲಿ ತೊಡಗಿದೆ. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ನಿರ್ವಹಣೆ ಆಗ್ತಿಲ್ಲ. ಕಾರಣ ಸರ್ಕಾರದ ಬೊಕ್ಕಸ ಖಾಲಿ ಆಗಿರೋದು. ಇಂತಹ ಸಂಕಷ್ಟದ ವೇಳೆಯಲ್ಲೂ ರಾಜ್ಯ ಸರ್ಕಾರ ಮತ್ತೆ ಹಳೆಯ ತಪ್ಪನ್ನೇ ಮಾಡಿದೆ.

    ಇವತ್ತು ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ್, ‘ಅಡ್ವಾನ್ಸ್’ ಪರಿಹಾರ ಕೇಳಿದ್ದಾರೆ. ಕಳೆದ ವರ್ಷದ ನೆರೆಯಿಂದ ಸರ್ಕಾರವೇ ಹೇಳುವಂತೆ 35,000 ಕೋಟಿ ರೂ. ನಷ್ಟವಾಗಿದೆ. ಆದ್ರೆ, ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ 1860 ಕೋಟಿ ರೂ. ಕಳೆದ ವರ್ಷದ ಬಾಕಿ ಹಣದ ಬಗ್ಗೆ ಮೋದಿ ಮುಂದೆ ಸಚಿವರ್ಯಾರು ತುಟಿಯೇ ಬಿಚ್ಚಿಲ್ಲ. ಆದ್ರೆ, ಈ ಬಾರಿ 4,000 ಕೋಟಿ ರೂ. ಅಂದಾಜು ನಷ್ಟವಾಗಿದ್ದು, ‘ಅಡ್ವಾನ್ಸ್’ ರೂಪದಲ್ಲಿ 395 ಕೋಟಿ ರೂ. ಕೊಡಿ ಅಂತಷ್ಟೇ ಸಚಿವರು ಮೋದಿಗೆ ಮನವಿ ಮಾಡಿದ್ದಾರೆ.

    ಕೇಂದ್ರ ಸರ್ಕಾರಕ್ಕೆ ದುಡ್ಡು ಕೇಳುವ ಬದಲು ಕೇಂದ್ರ ಸರ್ಕಾರವನ್ನೇ `ಅಡ್ವಾನ್ಸ್’ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಅಶೋಕ್, ಕಳೆದ ವರ್ಷದ ಬಾಕಿ ಹಣ ಕೇಳಿದ್ದೀವಿ. ಆದ್ರೆ ಕೇಂದ್ರ ಇಲ್ಲ ಅಂತಿದೆ ಏನ್ಮಾಡೋದು ಅಂದ್ರು. ಜೊತೆಗೆ ನಾವೇನು ಕೇಂದ್ರದಿಂದ ಹಣ ಬರಲಿ ಅಂತಾ ಕಾಯ್ತಾ ಕೂರಲ್ಲ. ಬೊಕ್ಕಸದಲ್ಲಿ ದುಡ್ಡಿಗೇನು ಕಮ್ಮಿಯಿಲ್ಲ. ಡಿಸಿಗಳ ಅಕೌಂಟಲ್ಲಿ 1120 ಕೋಟಿ ರೂ. ಇದೆ ಅಂತಾ ಸಮರ್ಥಿಸಿಕೊಂಡ್ರು. ಅಷ್ಟೇ ಅಲ್ಲ, ಕಳೆದ ವರ್ಷ ಪ್ರವಾಹದಿಂದ ಸಂತ್ರಸ್ತರಾದವರ ಪೈಕಿ ಶೇ.80ರಷ್ಟು ಮಂದಿ 1 ಲಕ್ಷ ರೂ. ಪರಿಹಾರ ಹಣ ಪಡೆದು ಕೆಲಸವನ್ನೇ ಆರಂಭಿಸಿಲ್ಲ ಎಂದು ದೂರಿದ್ರು.

    ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಕೇವಲ 15 ನಿಮಿಷದಲ್ಲೇ ಅಂತ್ಯಗೊಂಡಿತು.  ಕೇಂದ್ರದಿಂದ ಪ್ರವಾಹ ಅಧ್ಯಯನ ತಂಡ ಕಳುಹಿಸಿ ಕೊಡೋದಾಗಿ ಪ್ರಧಾನಿ ಭರವಸೆ ಕೊಟ್ಟಿದ್ದಾರೆ.

    ಕಳೆದ ವರ್ಷದ ‘ನಷ್ಟʼದ ಲೆಕ್ಕ:
    ಅತಿವೃಷ್ಟಿಯ ಅಂದಾಜು ನಷ್ಟ – 1,00,000 ಕೋಟಿ ರೂ.
    ರಾಜ್ಯ ಸರ್ಕಾರದ ವರದಿ ಪ್ರಕಾರ ನಷ್ಟ – 50,000 ಕೋಟಿ ರೂ.
    ರಾಜ್ಯ ಸರ್ಕಾರ ಕೇಳಿದ ಪರಿಹಾರ – 35,000 ಕೋಟಿ ರೂ.
    ಕೇಂದ್ರ ಸರ್ಕಾರ ಕೊಟ್ಟ ಪರಿಹಾರ – 1,860 ಕೋಟಿ ರೂ.

    ರಾಜ್ಯದಲ್ಲಿ ಮಳೆ ಹಾನಿ ಲೆಕ್ಕ
    56 ತಾಲೂಕುಗಳಲ್ಲಿ ಮಳೆ ಹಾನಿ
    885 ಗ್ರಾಮಗಳು ಪ್ರವಾಹ ಪೀಡಿತ
    3,500 ಕಿ.ಮೀ ರಸ್ತೆ ಹಾಳು
    85 ಸಾವಿರ ಹೆಕ್ಟೇರ್ ಬೆಳೆ ಹಾನಿ
    3 ಸಾವಿರ ಮನೆಗಳಿಗೆ ಹಾನಿ
    250 ಸೇತುವೆಗಳಿಗೆ ಹಾನಿ
    392 ಕಟ್ಟಡಗಳಿಗೆ ಹಾನಿ
    ಅಂದಾಜು ನಷ್ಟ – 4 ಸಾವಿರ ಕೋಟಿ

    ಪ್ರಧಾನಿಗೆ ರಾಜ್ಯದ ಬೇಡಿಕೆಗಳು
    – ಪ್ರವಾಹ ಪರಿಸ್ಥಿತಿ ನಿಭಾಯಿಸಲು 4,000 ಕೋಟಿ ವಿಶೇಷ ಪ್ಯಾಕೇಜ್ ಕೊಡಿ
    – ತುರ್ತಾಗಿ 395 ಕೋಟಿ ಮುಂಗಡ ಹಣ ನೀಡಿ
    – ರಾಜ್ಯಕ್ಕೆ 4 ಎನ್‍ಡಿಆರ್‍ಎಫ್ ತಂಡ ಕಳಿಸಿಕೊಡಿ
    – ನೆರೆ ಅಧ್ಯಯನಕ್ಕೆ ಅಧಿಕಾರಿಗಳ 2 ತಂಡ ಕಳಿಸಿ
    – ಭೂಕುಸಿತದ ಅಧ್ಯಯನಕ್ಕಾಗಿ 2 ಅಧ್ಯಯನ ತಂಡ ಕಳಿಸಿ
    – ಅಂತಾರಾಜ್ಯ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸಂಯೋಜಿತ ಪ್ರವಾಹ ಮುನ್ಸೂಚನೆ ವ್ಯವಸ್ಥೆಗೆ ಮನವಿ
    – ಕಡಲ್ಕೊರೆತ ನಿಯಂತ್ರಣಕ್ಕೆ ನ್ಯಾಷನಲ್ ಸೈಕ್ಲೋನ್ ಮಿಟಿಗೇಷನ್ ರಿಲೀಫ್ ಪ್ರಾಜೆಕ್ಟ್

  • ಬಿಎಸ್‍ವೈ ಸರ್ಕಾರ ಪಂಚೇಂದ್ರಿಯಗಳನ್ನ ಕಳೆದುಕೊಂಡಿದೆ- ಸಿದ್ದರಾಮಯ್ಯ

    ಬಿಎಸ್‍ವೈ ಸರ್ಕಾರ ಪಂಚೇಂದ್ರಿಯಗಳನ್ನ ಕಳೆದುಕೊಂಡಿದೆ- ಸಿದ್ದರಾಮಯ್ಯ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೊರೊನಾ ವೈರಸ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದೇನೆ. ಅಸಂಘಟಿತ ಕಾರ್ಮಿಕರು, ಕುಲ ಕಸಬು ಮಾಡುವ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವಂತೆ ತಿಳಿಸಿದ್ದೇನೆ. ಆದರೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

    ಸರ್ಕಾರವು ಸವಿತಾ ಸಮಾಜ, ನೇಕಾರರು, ಮಡಿವಾಳ ಸಮಾಜದ ಕುಟುಂಬಗಳಿಗೆ ತಲಾ 5 ಸಾವಿರ ರೂ. ನೀಡುವ ಭರವಸೆ ನೀಡಿದೆ. ಆದರೆ ಈವರೆಗೂ ಯಾರಿಗೂ ಹಣ ಪಾವತಿಯಾಗಿಲ್ಲ. ರೈತರು, ಹಣ್ಣು, ತರಕಾರಿ, ಹೂ ಬೆಳೆಗಾರರಿಗೆ ನೀಡಿದ ಸಹಾಯಧನದ ಭರವಸೆ ಹಾಗೆ ಉಳಿದಿದೆ ಎಂದು ಹೇಳಿದರು.

    ಕೊರೊನಾ ನಿಯಂತ್ರಣದಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಇತ್ತ ಬಡವ ಕಷ್ಟಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೇಲೆ ನನಗೆ ಯಾವುದೇ ನಂಬಿಕೆ, ವಿಶ್ವಾಸ ಉಳಿದಿಲ್ಲ ಎಂದರು.