ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಕಳೆದ 2 ವರ್ಷಗಳಲ್ಲಿ ಸುಮಾರೂ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ. ಕಳೆದ ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾವೇರಿ ಉಕ್ಕಿ ಹರಿದ ರಭಸಕ್ಕೆ ಮನೆ ಮಠಗಳನ್ನು ಕಳೆದುಕೊಂಡಿದ್ದ ಎಷ್ಟೋ ಜನರಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತ್ತಿಲ್ಲ. ನೂರಾರು ರೈತರಿಗೆ ಬೆಳೆ ಪರಿಹಾರವೂ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಮಾತ್ರ ಎನ್‍ಡಿಆರ್ ಎಫ್ ನಿಂದ ಬಂದಿದ್ದ ಹಣದಲ್ಲಿ ಒಂದು ಕೋಟಿ ರೂಪಾಯಿಯನ್ನು ಬಳಸದೆ ಜಿಲ್ಲಾಧಿಕಾರಿಗೆ ವಾಪಸ್ಸ್ ಕಳುಹಿಸಿದ್ದಾರೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನಾದ್ಯಂತ ಆಗಿದ್ದ ಪ್ರಾಕೃತಿಕ ನಷ್ಟದ ತುರ್ತು ಸೇವೆಗಳಿಗೆ ಮತ್ತು ಪರಿಹಾರಗಳಿಗೆ ಬಳಸಲು ಜಿಲ್ಲಾಧಿಕಾರಿ ಒಂದು ಕೋಟಿ ರೂ. ಹಣವನ್ನು ವಿರಾಜಪೇಟೆಗೆ ನೀಡಿದ್ದರು. ಆದರೆ ತಾಲೂಕು ಕಚೇರಿ ಶಿರಸ್ತೆದಾರ್ ಪೊನ್ನು ಮತ್ತು ಕೇಸ್ ವರ್ಕರ್ ಧನಂಜಯ್ ಡಿಸಿ ನೀಡಿದ್ದ ಚೆಕನ್ನು ತಹಶೀಲ್ದಾರ್ ಅವರ ಖಾತೆಗೆ ಜಮಾಮಾಡಿಲ್ಲ. ಹೀಗಾಗಿ ಚೆಕ್ ಸಮಯ ಮುಗಿದುಹೋಗಿ ಬಳಕೆ ಬಾರದಂತಾಗಿದೆ.
ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಮಹೇಶ್ ಅವರನ್ನು ಕೇಳಿದರೆ, ಕೆಲಸದ ಒತ್ತಡದಿಂದ ಚೆಕನ್ನು ಖಾತೆಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆಕ್ ಹಾಗೆ ಉಳಿದಿದ್ದು, ಜಿಲ್ಲಾಧಿಕಾರಿಯವರಿಗೆ ವಾಪಸ್ಸ್ ಕಳುಹಿಸಿದ್ದೇವೆ ಎನ್ನುತ್ತಾರೆ. ಆದರೆ ಯಾರಿಂದ ತಪ್ಪಾಯಿತು ಅವರ ವಿರುದ್ಧ ತುಟಿ ಬಿಚ್ಚುತ್ತಿಲ್ಲ.
ಪ್ರವಾಹ ಉಕ್ಕಿ ಹರಿದಾಗ ಸಂತ್ರಸ್ತ ಕೇಂದ್ರಗಳನ್ನು ನಡೆಸಲು ಇದೇ ತಾಲೂಕು ಆಡಳಿತ ಸ್ಥಳೀಯರಿಂದಲೇ ವಸ್ತುಗಳನ್ನು ಖರೀದಿಸಿತ್ತು. ಬಳಿಕ ಐದು ತಿಂಗಳಾದ್ರೂ ಬಡ ವ್ಯಾಪಾರಿಗಳಿಗೆ ಹಣವನ್ನು ಪಾವತಿಸದೆ ಇದ್ದ ಕಾರಣ ವ್ಯಾಪಾರಿಗಳು ಪರದಾಡುವಂತಾಗಿತ್ತು. ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆಗೂ ವ್ಯಾಪಾರಿಗಳು ಮುಂದಾಗಿದ್ದರು. ಎಷ್ಟೋ ಸಂತ್ರಸ್ತರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.
ತಕ್ಷಣಕ್ಕೆ ಸಿಕ್ಕಿದ್ದ 10 ಸಾವಿರ ಪರಿಹಾರ ಹಣ ಬಿಟ್ಟರೆ ಮತ್ತೆ ಯಾವುದೇ ಪರಿಹಾರ ಲಭಿಸಿಲ್ಲ. ಹೀಗಾಗಿ ಕೊಟ್ಟ ಹಣವನ್ನೂ ಬಳಸದೆ ಚೆಕನ್ನು ವಾಪಸ್ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆಯ ಶಿರಸ್ತೇದಾರ್ ಮತ್ತು ಕೇಸ್ ವರ್ಕರ್ ಧನಂಜಯ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಸರಿಯಾದ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಚೆಕ್ ವಾಪಸ್ ಆಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಸರ್ಕಾರ ನೀಡಿದ ಪರಿಹಾರದ ಹಣವನ್ನು ಅಧಿಕಾರಿಗಳು ದೋಚಿದ ಘಟನೆ ಕಲಘಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕಳೆದ 3 ತಿಂಗಳು ಹಿಂದೆ ಸುರಿದ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರದ ಹಣವನ್ನ ನೀಡಿದೆ. ಆದರೆ ಮಂಜೂರಾದ ಹಣದಲ್ಲಿ ಗ್ರಾಮ ಲೆಕ್ಕಾಧಿಕಾರಿ 50 ಸಾವಿರ ರೂಪಾಯಿ ಸಂತ್ರಸ್ತರಿಂದ ಮರಳಿ ಪಡೆದು ಮೋಸ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಬಸನಗೌಡ ಪಾಟೀಲ್ ಹಾಗೂ ಚನ್ನಬಸವ ದೇವಿಕೊಪ್ಪ ಅವರು ಮಳೆಯಿಂದ ಮನೆ ಕಳೆದುಕೊಂಡಿದ್ದರು. ಈ ಇಬ್ಬರು ಸಂತ್ರಸ್ತರಿಗೆ ಸರ್ಕಾರ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಹಣವನ್ನ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಹಣ ಬ್ಯಾಂಕ್‍ನಲ್ಲಿ ಜಮೆಯಾದ ನಂತರ ಗ್ರಾಮ ಲೆಕ್ಕಾಧಿಕಾರಿ ಆನಂದ್ ನಾಯ್ಕ್ ಸಂತ್ರಸ್ತರಿಂದ 50 ಸಾವಿರ ರೂಪಾಯಿ ಮರಳಿ ಪಡೆದು ಅನ್ಯಾಯ ಮಾಡಿದ್ದಾರೆ.
ಬಿಡುಗಡೆಯಾದ ಒಂದು ಲಕ್ಷ ರೂಪಾಯಿ ಪರಿಹಾರದ ಹಣದಲ್ಲಿ 50 ಸಾವಿರ ರೂಪಾಯಿ ಹಣವನ್ನ ಮರಳಿ ಕೊಡದಿದ್ದರೆ ನಿಮ್ಮ ಜಮೀನು, ಮನೆ ಮೇಲೆ ಸರ್ಕಾರಿ ಆಸ್ತಿ ಎಂದು ನಮೂದು ಮಾಡಲಾಗುತ್ತೆ ಎಂದು ಗ್ರಾಮ ಲೆಕ್ಕಾಧಿಕಾರಿ ಸಂತ್ರಸ್ತರಿಗೆ ಹೆದರಿಸಿ ಹಣವನ್ನ ಮರಳಿ ಪಡೆದಿದ್ದಾರೆ. ಅಲ್ಲದೆ ಡಾಟಾ ಎಂಟ್ರಿಯಲ್ಲಿ ಸಿ ಕೆಟಗರಿ ಎಂದು ನಮೂದಾಗಬೇಕಿತ್ತು. ಆದರೆ ಬಿ ಕೆಟಗರಿ ಎಂದು ನಮೂದಾಗಿದೆ ಎಂದು ಹೇಳಿ ಹಣ ಮರಳಿ ಪಡೆಯುವ ಮೂಲಕ ಸಂತ್ರಸ್ತರ ಹಣವನ್ನು ಅಧಿಕಾರಿ ಲೂಟಿ ಮಾಡಿದ್ದಾರೆ.
ಅತಿವೃಷ್ಠಿಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸರ್ಕಾರ ಹಣವನ್ನ ನೀಡಿದರೆ ಗ್ರಾಮ ಲೆಕ್ಕಾಧಿಕಾರಿಗಳು ಸಂತ್ರಸ್ತರಿಂದ ಹಣವನ್ನ ಮರಳಿ ಪಡೆದ ಪರಿಣಾಮ ಸಂತ್ರಸ್ತರು ಇದೀಗ ಸೂಕ್ತ ನ್ಯಾಯ ಕೊಡಿಸಬೇಕೆಂದು ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಧಾರವಾಡ: ಇದು ಲಜ್ಜೆಗೆಟ್ಟ ಸರ್ಕಾರ, ಪರಿಹಾರ ಹಣವನ್ನು ಪಕ್ಷ ಜಾತಿ ನೋಡಿ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿನಯ್ ಕುಲಕರ್ಣಿ, ಸರ್ಕಾರದ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ಇರಬೇಕು. ಮನೆಯಲ್ಲಿ ಕುಳಿತು ಅಧಿಕಾರ ನಡೆಸಲು ಆಗುವುದಿಲ್ಲ. ಕಷ್ಟದಲ್ಲಿ ಇರುವವರ ಸ್ಥಳಕ್ಕೆ ಭೇಟಿ ನೀಡಿದರೆ ಜನರ ಕಷ್ಟ ಅರ್ಥವಾಗುತ್ತೆ. ಇವರಿಗೆ ಯಾವ ಕಲ್ಪನೆ ಇಲ್ಲ ಎಂದು ಸರ್ಕಾರದ ಮೇಲೆ ಕಿಡಿಕಾರಿದರು.
ಪ್ರವಾಹದಲ್ಲಿ ಮನೆ ಕಳೆದುಕೊಂಡವರು ಪರಿಸ್ಥಿತಿ ಕೆಟ್ಟಿದೆ. ಇದು ಲಜ್ಜೆಗೆಟ್ಟ ಸರ್ಕಾರ ಇವರಿಗೆ ನಾಚಿಕೆಯಾಗಬೇಕು. ಬಡವರು ಬಗ್ಗೆ ಕಳಕಳಿ ಇಲ್ಲ. ರೈತರಿಗೆ ಪರಿಹಾರ ಸಿಕ್ಕಿಲ್ಲ. ಮಳೆಯಿಂದ ಹಾನಿಯಾದ ಪರಿಹಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಬೇಕಿದ್ದರೆ ಹಳ್ಳಿಗಳಿಗೆ ನೀವೇ ಹೋಗಿ ಮಾತನಾಡಿ ನೋಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ನಾವು ಯಾವ ಪಕ್ಷ ಜಾತಿ ನೋಡಿಲ್ಲ. ಆದರೆ ಇವರು ಮನುಷ್ಯತ್ವ ಇಲ್ಲದವರು ಜಾತಿ ಪಕ್ಷ ನೋಡಿ ಪರಿಹಾರ ಕೊಡುತ್ತಿದ್ದಾರೆ. ನಾನು ಕೂಡಾ ನಿಮಗೆ ಹೊರಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಮಾಧ್ಯಮ ಮಿತ್ರರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಜನರ ಪರಿಸ್ಥಿತಿ ತೋರಿಸಿ. ಅದನ್ನು ನೋಡಿಯಾದರೂ ಪ್ರಚಾರ ಪ್ರಿಯರು ಹೊರ ಬಂದು ನೋಡ್ತಾರೆ ಎಂದು ಸರ್ಕಾರದ ಮೇಲೆ ಹರಿಹಾಯ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಈಗಲಾದರೂ ಅವಘಡ ಆದ ಸ್ಥಳಕ್ಕೆ ಭೇಟಿ ನೀಡಲಿ. ನೀವು ಸಿಎಂ ಆಗಿದ್ದವರು, ಅಧಿಕಾರಿಗಳಿಗೆ ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ ವಿನಯ ಕುಲಕರ್ಣಿ, ಅಧಿಕಾರ ಇದ್ದಂತ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶಟ್ಟರ್‍ಗೆ ಕಿವಿಮಾತು ಹೇಳಿದರು.
ಮೈಸೂರು: ಕೇಂದ್ರದಿಂದ ಪರಿಹಾರ ಹಣ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಕೇಂದ್ರ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅವರು, ಪರಿಹಾರ ಹಣ ಬಂದೇ ಬರುತ್ತದೆ. ಏನೋ ತಾಂತ್ರಿಕ ಕಾರಣ ಉಂಟಾಗಿದೆ. ಹೀಗಾಗಿ ಪರಿಹಾರ ಹಣ ಬರುವುದು ತಡವಾಗಿದೆ. ಆದರೆ ಪರಿಹಾರ ಹಣ ಬರುತ್ತೆ ಎಂಬ ವಿಶ್ವಾಸ ನನಗಿದೆ. ಜನರು ಪ್ರಶ್ನೆ ಮಾಡುತ್ತಿರುವುದು ಒಳ್ಳೆಯದು. ನಾವು ಯಾರ ಬಳಿ ಮಾತನಾಡಬೇಕೋ ಅವರ ಬಳಿ ಮಾತನಾಡುತ್ತಿದ್ದೇವೆ. ಅವರು ಏನೋ ತಾಂತ್ರಿಕ ಕಾರಣ ಉಂಟಾಗಿದೆ ಎಂದು ಕಾರಣವನ್ನು ನೀಡುತ್ತಿದ್ದಾರೆ ಎಂದರು.
ಯಶ್ ಹಾಗೂ ದರ್ಶನ್ ಬರಬೇಕು ಎಂಬುದು ತುಂಬಾ ಚಿಕ್ಕ ವಿಷಯ. ಏಕೆಂದರೆ ಎಂಪಿಯಾಗಿ ಆಯ್ಕೆಯಾಗಿರುವುದು ನಾನು. ಯಶ್ ಅಥವಾ ದರ್ಶನ್ ಅಲ್ಲ. ಚುನಾವಣಾ ಪ್ರಚಾರದ ವೇಳೆ ನಮಗೆ ಬೆಂಬಲ ನೀಡಲು ಬರುತ್ತಾರೆ. ಸರ್ಕಾರದಲ್ಲಿ ಅವರಿಗೆ ಯಾವುದೇ ಅಧಿಕಾರ ಇಲ್ಲ. ಅವರು ಬಂದು ಏನೂ ಮಾಡುತ್ತಾರೆ. ನನ್ನ ಕೆಲಸ ನಾನು ಮಾಡಬೇಕು. ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಮೊದಲಿನಿಂದಲೂ ಅವರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಎಂಪಿ ಆಗಿರುವುದು ಜೆಡಿಎಸ್ ನಾಯಕರಿಗೆ ಉತ್ತರ ಕೊಡುವುದಕ್ಕೆ ಅಲ್ಲ. ನನ್ನ ಉತ್ತರ ಏನಿದ್ದರೂ ನನಗೆ ಮತ ನೀಡಿದ ಮಂಡ್ಯ ಜನತೆಗೆ ಮಾತ್ರ. ನಾನು ರಾಜಕೀಯವಾಗಿ ಮಾತನಾಡುವವರಿಗೆ ಉತ್ತರ ನೀಡಲ್ಲ. ಸುಮಕ್ಕ ಎಲ್ಲಿದ್ದಾರೆ ಎಂದು ಪ್ರಶ್ನೆ ಕೇಳುತ್ತಾರೆ. ನಾನು ಎಲ್ಲಿಯೂ ಹೋಗಿಲ್ಲ. ನಾನು ಇಲ್ಲಿಯೇ ಇದ್ದೀನಿ ಹಾಗೂ ನನ್ನ ಕೆಲಸ ಮಾಡುತ್ತಿದ್ದೇನೆ. ಯಾರಿಗೆ ಒತ್ತಡ ಹೇರಬೇಕೋ, ಯಾರ ಬಳಿ ಮನವಿ ಮಾಡಬೇಕೋ ಎಲ್ಲವನ್ನು ನಾನು ಮಾಡುತ್ತಿದ್ದೇನೆ ಎಂದು ಸುಮಲತಾ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದ ನೆರೆಗೆ ಪರಿಹಾರ ಕೊಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದರ ವಿರುದ್ಧ ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 25 ಸಂಸದರು ಆಯ್ಕೆ ಆಗಿದ್ದಾರೆ. ರಾಜ್ಯದ ಪರ ಧ್ವನಿ ಎತ್ತೋದು ಅವರ ಕರ್ತವ್ಯ. ನಾಡಿನ ಹಿತ ಕಾಪಾಡೋದು ಸಂಸದರ ಕೆಲಸ. ನಮ್ಮನ್ನ ಆಯ್ಕೆ ಮಾಡಿದ ಜನ ನಮಗೆ ಮೊದಲು. ಸಂಸದರು ಪ್ರಧಾನಿ ಬಳಿ ನಮ್ಮನ್ನ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಪ್ರಧಾನಿಗಳು ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಕೇಂದ್ರದ ಈ ವರ್ತನೆಯಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಪ್ರಧಾನಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಅಂತ ಮನವಿ ಮಾಡಿದರು. ಯಾವ ಮುಖ ಇಟ್ಟುಕೊಂಡು ಉತ್ತರ ಕರ್ನಾಟಕದ ಜನರಿಗೆ ಉತ್ತರ ಹೇಳಿಬೇಕು ನಾವು. ಉತ್ತರ ಕರ್ನಾಟಕ ಜನ ಈಗ ಬಿಜೆಪಿ ಶಾಸಕರು, ಸಂಸದರು ಅಂದರೆ ಹೊಡೆಯೋಕೆ ಬರುತ್ತಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನು ಓದಿ: ಉತ್ತರ ಕರ್ನಾಟಕದ ಕಣ್ಣೀರು ಕರ್ನಾಟಕದ ಸಂಸದರಿಗೆ ಯಾಕೆ ಕಾಣುತ್ತಿಲ್ಲ: ಸೂಲಿಬೆಲೆ ಪ್ರಶ್ನೆ
ಕರ್ನಾಟಕಜನರ ಭಾವನೆಗೆ ಪ್ರಧಾನಿಗಳು ಸ್ಪಂದಿಸಬೇಕು. ಇಷ್ಟೆಲ್ಲ ಆದರೂ ನಮಗೆ ಟ್ವೀಟ್ ಮಾಡದೇ ಬಿಹಾರದವರಿಗೆ ಟ್ವೀಟ್ ಮಾಡ್ತಾರೆ ಎಂದರೆ ಹೇಗೆ? ಜನಕ್ಕೆ ನಾವ್ ಏನ್ ಉತ್ತರ ಕೊಡೋಣ. ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇಲ್ಲ ಎಂದು ಮೋದಿ ಟ್ವೀಟ್ ಮಾಡಿಲ್ವಾ? ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ಥಿತ್ವ ಕಳೆದುಕೊಳ್ಳುತ್ತೆ ಅಂತ ಎಚ್ಚರಿಕೆ ಕೊಟ್ಟರು.
ನೆರೆಗೆ ರಾಜ್ಯ ಸರ್ಕಾರವೇ ಹಣ ಹೊಂದಿಸಬಹುದು ಅಂದಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅ ಸಂಸದರಿಗೆ ಕಷ್ಟವೇ ಗೊತ್ತಿಲ್ಲ. ಅವರು ಪಕ್ಷ ಕಟ್ಟಿದವರು ಅಲ್ಲ. ನಮ್ಮಂತವರು ಪಕ್ಷ ಕಟ್ಟಿದವರು. ನಾವು ಹಳ್ಳಿಯಲ್ಲಿ ಓಡಾಡಿ ಪಕ್ಷ ಕಟ್ಟಿದ್ದೇವೆ. ಯಡಿಯೂರಪ್ಪ, ಅನಂತ್ ಕುಮಾರ್ ಅಂತಹವರು ಓಡಾಡಿ ಪಕ್ಷ ಕಟ್ಟಿದರು. ಈಗ ಯಾರ್ಯಾರೋ ಬಂದು ಏನೇನೋ ಹೇಳಿಕೆ ಕೊಟ್ಟು ಮಜಾ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಳ್ಳಿ ಜನರ ಕಷ್ಟ ಅವರಿಗೆ ಗೊತ್ತಾ? ಸ್ವಲ್ಪ ಇಂಗ್ಲಿಷ್ ಬಂತು ಅಂತ ಅಂತಾರಾಷ್ಟ್ರೀಯ ನಾಯಕರು ಆದರೆ ಸಾಕಾ? ಜನರ ಕಷ್ಟ ಗೊತ್ತಿರಬೇಕು ಅಲ್ವಾ? ಹಳ್ಳಿ ಒಳಗೆ ಕೆಲಸ ಮಾಡೋರು ನಾವು. ಹಿಂದೆ ನಮ್ಮ ರಾಜ್ಯದ ವಿಚಾರಕ್ಕೆ ಧಕ್ಕೆ ಬಂದಾಗ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಅಂದೇ ಇದನ್ನು ಪಕ್ಷದ ವಿರೋಧಿ ಚಟುವಟಿಕೆ ಎಂದರು. ನಾನು ನನ್ನ ಕ್ಷೇತ್ರದ ಜನರ ಪರ ಅಂತ ಅವತ್ತೇ ನಮ್ಮ ನಾಯಕರಿಗೆ ಹೇಳಿದ್ದೆ. ಇಂತಹ ಸ್ವಭಾವ ಸಂಸದರು ಬಳಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟಿರೋದು ಕರ್ನಾಟಕ. ಆಂಧ್ರ, ಕೇರಳ, ಪಾಂಡಿಚೇರಿಯಲ್ಲಿ ಎಷ್ಟು ಸ್ಥಾನ ಬಂದಿದೆ. ಕರ್ನಾಟಕದ ಜನ ಇಷ್ಟು ಸ್ಥಾನ ಕೊಟ್ಟಿದ್ದಕ್ಕೆ ಇದು ಬಳುವಳಿನಾ? ನಿಮ್ಮ ಅವರ ಜಗಳ ಏನಿದೆಯೋ ಗೊತ್ತಿಲ್ಲ. ಇದಕ್ಕೆ ಕರ್ನಾಟಕದ ಜನರನ್ನ ಯಾಕೆ ಬಲಿ ಕೊಡ್ತೀರಾ. ಕರ್ನಾಟಕದ ಜನರ ಮೇಲೆ ನೀವು ದ್ವೇಷ ಸಾಧಿಸುತ್ತಿದ್ದೀರಾ. ಯಾವುದೋ ಮುಖ್ಯಮಂತ್ರಿ ವಿರುದ್ಧ ದ್ವೇಷ ಅಲ್ಲ ಇದು. ರಾಜ್ಯದ ಜನರ ವಿರುದ್ಧ ದ್ವೇಷ ಸಾಧಿಸುತ್ತಿದ್ದೀರಾ. ಇದು ಕರ್ನಾಟಕದ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಅಂತ ಸಂಸದರು ಹಾಗೂ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಿಜೆಪಿಯಲ್ಲಿ ಎರಡು ಶಕ್ತಿ ಕೇಂದ್ರ ಇವೆ. ಇದೇ ಯಡಿಯೂರಪ್ಪ ವಿರುದ್ಧ ಟಾರ್ಗೆಟ್ ಮಾಡುತ್ತಿದೆ. ಪಕ್ಷದಲ್ಲಿ ಏನ್ ಆಗುತ್ತಿದೆ ನಮಗೆ ಗೊತ್ತಾಗುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾದು ನೋಡ್ತೀವಿ. ಸರಿ ಹೋಗಿಲ್ಲ ಎಂದರೆ ಏನ್ ಮಾಡೋದು ಅಂತ ತೀರ್ಮಾನ ಮಾಡುತ್ತೇವೆ. ಬಿಜೆಪಿಯಲ್ಲಿ ಈಗ ಎರಡು ಶಕ್ತಿ ಕೇಂದ್ರಗಳಾಗಿವೆ. ಒಂದು ದೆಹಲಿಯಲ್ಲಿ ಕುಳಿತಿದೆ, ಇನ್ನೊಂದು ಬೆಂಗಳೂರಿನಲ್ಲಿ ಕುಳಿತಿದೆ. ಇವರಿಬ್ಬರ ಜಗಳದಲ್ಲಿ ನಾವು ಸಾಯ್ತಿದ್ದೇವೆ ಅಸಮಾಧಾನ ಹೊರ ಹಾಕಿದರು.
ಸಿಎಂ ಯಡಿಯೂರಪ್ಪ ಸೈಡ್ ಲೈನ್ ಮಾಡೋಕೆ ಅನುದಾನ ನೀಡುತ್ತಿಲ್ಲ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಇಡೀ ಕರ್ನಾಟಕ ಹೇಳುತ್ತಿದೆ. ಇದು ಟಾರ್ಗೆಟ್ ಬೇಸ್ ರಾಜಕೀಯ. ಒಬ್ಬ ವ್ಯಕ್ತಿಯನ್ನ ಮುಗಿಸುವ ಸಲುವಾಗಿ ಕರ್ನಾಟಕ ಮುಗಿಸಲು ಸಾಧ್ಯವಿಲ್ಲ. ಕರ್ನಾಟಕದ ಭವಿಷ್ಯ ಒಬ್ಬ ವ್ಯಕ್ತಿ ಕೈಯಲ್ಲಿ ಇಲ್ಲ. ಅವರನ್ನು ಮುಗಿಸೋಕೆ ಅನುದಾನ ಕೊಡೊಲ್ಲ, ಭೇಟಿ ಆಗುವುದಿಲ್ಲ ಎನ್ನುವುದು ಸರಿಯಲ್ಲ. ಜನರು ಹುಚ್ಚರಲ್ಲ. ನಮ್ಮ ಜೀವನದ ಕುಂಡಲಿಯನ್ನ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ತಂತಿ ಮೇಲೆ ನಡಿಗೆ ಅನ್ನೋ ಹೇಳಿಕೆ ವಿಚಾರ ಮಾತನಾಡಿದ ಅವರು ಅಲ್ಪಮತ ಸರ್ಕಾರ ಬಂದ ಮೇಲೆ ಎಲ್ಲರೂ ತಂತಿ ಮೇಲೆಯೇ ನಡೆಯೋದು. ಗೋಡೆ ಮೇಲೆ ಯಾರು ನಡೆಯೋಕೆ ಆಗುವುದಿಲ್ಲ. ಅದಕ್ಕೆ ಬಹುಮತ ಬೇಕು ಅಂತ ಹೇಳೋದು. ಯಡಿಯೂರಪ್ಪರನ್ನ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಇವತ್ತಿನ ವಿದ್ಯಾಮಾನ ನೋಡುತ್ತಿದ್ದರೆ ಇದು ಸತ್ಯ ಅನ್ನಿಸುತ್ತಿದೆ. ಇದು ಯಾವ ದಿಕ್ಕು ಪಡೆಯುತ್ತೋ ಗೊತ್ತಿಲ್ಲ. ಇವತ್ತಿನ ಬೆಳವಣಿಗೆಗಳು ಸಮಾಧಾನವಾಗಿ ಇಲ್ಲ ಅಂತ ತಿಳಿಸಿದರು.
ಅನರ್ಹ ಶಾಸಕರ ವಿರುದ್ಧ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಮತ್ತು ಸಿಟಿ ರವಿ ಸೇರಿದಂತೆ ಕೆಲ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಚಿವರು ಹೀಗೆ ಮಾತುಗಳನ್ನ ಆಡೋದಿದರೆ ಯಾಕೆ ಸಚಿವರಾಗಬೇಕಿತ್ತು 17 ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ಇಂದು ಸರ್ಕಾರ ರಚನೆ ಆಗಿದೆ. ಅವರ ರಾಜೀನಾಮೆ ಕೊಡದೇ ಇದ್ದಿದ್ದರೆ ಬಿಜೆಪಿ ಸರ್ಕಾರ ಬರುತ್ತಿತ್ತಾ? ನಾವು ವಿರೋಧ ಪಕ್ಷದಲ್ಲಿ ಕೂರಬೇಕಿತ್ತು ಅಷ್ಟೇ ಅಂತ ಸಚಿವರಿಗೆ ತಿರುಗೇಟು ಕೊಟ್ಟರು.
ಆ 17 ಶಾಸಕರಿಂದಲೇ ಮಂತ್ರಿಯಾಗಿ ಗೂಟದ ಕಾರಲ್ಲಿ ಓಡಾಡುತ್ತಿದ್ದಾರೆ. ಆದರೆ ಇದನ್ನು ಮರೆತು ಬೇಜವಾಬ್ದಾರಿಯಿಂದ ಕೆಲ ಸಚಿವರು ಮಾತನಾಡುತ್ತಿದ್ದಾರೆ. ಯಾವುದೋ ದೊಡ್ಡ ಶಕ್ತಿ ಅ ಸಚಿವರ ಹಿಂದೆ ಇದೆ. ಹೀಗಾಗಿ ಅವರ ಹೀಗೆಲ್ಲ ಮಾತನಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಸಂತೋಷ್ ವಿರುದ್ಧ ಕಿಡಿಕಾರಿದರು.
ಇಂತಹ ಶಕ್ತಿ ಕೇಂದ್ರಗಳನ್ನು ಜನರೇ ಒಡೆಯುತ್ತಾರೆ. ಜನರು ಎಂತೆಂತವರನ್ನೆ ಒಡೆದಿದ್ದಾರೆ. ಇವೆರೆಲ್ಲ ಜನರಿಗೆ ಯಾವ ಲೆಕ್ಕ. ಇವರೆಲ್ಲ ಯಾವ ಗಿಡದ ತಪ್ಪಲು. ಇವರೆಲ್ಲ ಹೋರಾಟ ಮಾಡಿ ಬಂದವರಾ? ಉಪವಾಸ, ಲಾಠಿ ಏಟು ತಿಂದು ನಾವು ಪಕ್ಷ ಕಟ್ಟಿದವರು. ನಮ್ಮನ್ನು ಉರುಳಿಸಲು ಹೋದರೆ ಜನ ಇವರನ್ನೇ ಉರುಳಿಸುತ್ತಾರೆ. ಎಸಿ ಕೊಠಡಿಯಲ್ಲಿ ಕುಳಿತು ಪಕ್ಷ ಕಟ್ಟಿದರೆ ಉಳಿಯುತ್ತಾ? ಯಾವ ಪಕ್ಷವೂ ಉಳಿಯುವುದಿಲ್ಲ. ಏನೋ ಅವಕಾಶ ಸಿಕ್ಕಿದೆ ಅಂತ ಹೊರಟಿದ್ದಾರೆ ಅಷ್ಟೇ ಎಂದು ಪರೋಕ್ಷವಾಗಿ ಸಂತೋಷ್, ಕಟೀಲ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಗದಗ: ಪ್ರವಾಹ ಬಂದು ಮುಗಿದು ಹೋದ ಮೇಲೆ ಇನ್ನೂ ಯಾವುದೇ ಅನುದಾನ ಪ್ರಕಟಿಸಿದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಎಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದ ಜನರ ಸಂಕಷ್ಟಕ್ಕೆ ಸಹಾಯ ಮಾಡದಿರೋದು ದುರ್ದೈವ ಸ್ಥಿತಿ. ಇದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕಿತ್ತು. ಭಾರೀ ಪ್ರಮಾಣದ ಪ್ರವಾಹವಾದರೂ ಕೇಂದ್ರ ಸರ್ಕಾರ ನಯಾಪೈಸೆ ನೀಡದೇ ತೆಪ್ಪಗಿರೋದು ಅತ್ಯಂತ ದುರ್ದೈವ ಪ್ರಸಂಗ ಎಂದು ಆಕ್ರೋಶ ಹೊರ ಹಾಕಿದರು.
2009 ರಲ್ಲಿ ನೆರೆ ಬಂದಾಗ ಮನಮೋಹನ್ ಸಿಂಗ್ ಅವರು 1600 ಕೋಟಿ ರೂ. ನೀಡಿದ್ದರು. ಆದರೆ ಈ ಭಾರಿ ಪ್ರವಾಹ ಬಂದು ತಿಂಗಳ ಮೇಲಾಯಿತು. ಕವಡೆಕಾಸಿನ ಹಣ ಮೋದಿ ನೀಡಿಲ್ಲ. ಇದೆನಾ ಮೋದಿ ಜನರಿಗೆ ಕೊಡುವ ಗೌರವ? ಇದೆನಾ ಜನರ ನೋವು, ಸಂಕಷ್ಟಕ್ಕೆ ಸ್ಪಂದಿಸುವ ರೀತಿ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಸರ್ವಪಕ್ಷ ನಿಯೋಗ ಒಯ್ಯದೇ ಲೋಪ ಮಾಡಿದ್ದಾರೆ. ಕೂಡಲೇ ಸರ್ವಪಕ್ಷ ನಿಯೋಗ ಕೊಂಡೊಯ್ಯಿರಿ ಎಂದು ಹೆಚ್.ಕೆ ಪಾಟೀಲ್ ಸಿಎಂಗೆ ಒತ್ತಾಯಮಾಡಿದರು.
ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾಡು ಪ್ರಾಣಿಗಳ ದಾಳಿಯಿಂದ ಮೃತ ಪಟ್ಟವರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಮೊದಲು ಎರಡು ಲಕ್ಷ, ಮರಣೋತ್ತರ ಪರೀಕ್ಷೆ ಬಳಿಕ ಮೂರು ಲಕ್ಷ ಅಂದರೆ ಹೇಗೆ? ಒಂದೇ ಬಾರಿ ಪೂರ್ತಿ ಹಣ ಬಿಡುಗಡೆ ಮಾಡಬೇಕು. ಜನರೇ ನಿಮ್ಮ ಹತ್ತಿರ ಬರಬೇಕೇ? ಸ್ಥಳ ಪರೀಶಿಲನೆಗೆ ನೀವೇ ಹೋಗಬೇಕು. ನೀವೇ ಘಟನಾ ಸ್ಥಳಕ್ಕೆ ಹೋಗಿ ಪರಿಹಾರ ವಿತರಣೆ ಮಾಡಬೇಕು. 5 ಲಕ್ಷ ಮೃತರ ಕುಟುಂಬಕ್ಕೆ ನೀಡಬೇಕು ಎಂದು ಸೂಚಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಐದು ವರ್ಷಗಳಲ್ಲಿ ಎಷ್ಟು ಸಸಿ ನೆಡಲಾಗಿದೆ. ಈಗಿನ ಪರಿಸ್ಥಿತಿ ಹೇಗಿದೆ? ನೀವೂ ಹಳೇ ಫೋಟೋಗಳನ್ನು ಈಗ ನೀಡೋದಲ್ಲ. ನಾನು ಸ್ಪಾಟ್‍ಗೆ ಭೇಟಿ ನೀಡುತ್ತೇನೆ. ಈಗ ಪರಿಸ್ಥಿತಿ ಹೇಗಿದೆ? ನೀವು ನೆಟ್ಟಿರುವ ಸಸಿಗಳು ಹೇಗಿವೆ ಎಂದು ಪರಿಶೀಲನೆ ನಡೆಸುತ್ತೇನೆ. ಸುಮ್ಮನೆ ಕಾಲ ಕಳೆಯೋದಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು.
ನವದೆಹಲಿ: ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮನವರಿಕೆಯಾಗಿದೆ. ಚರ್ಚೆ ಮಾಡಿದ ನಂತರ ಹಣವನ್ನು ಬಿಡುಗಡೆ ಮಾಡುತ್ತೇನೆ ಎಂದು ಮೋದಿ ತಿಳಿಸಿದ್ದಾರೆ ಎಂಬುದಾಗಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ಲೋಕ ಕಲ್ಯಾಣ ಮಾರ್ಗ್‍ನಲ್ಲಿರುವ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಪ್ರಧಾನಿ ಮೋದಿ ಅವರ ಬಳಿ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ವರ್ಷದಲ್ಲಿ ಹಿಂದೆ ಎಂದು ನೋಡದ ಪ್ರವಾಹ ಪರಿಸ್ಥಿತಿ ಇಂದು ರಾಜ್ಯದಲ್ಲಿ ಎದುರಾಗಿದೆ. 15 ದಿನದ ಹಿಂದೆ ರಾಜ್ಯದಲ್ಲಿ ಬರ ಇತ್ತು. ಆದರೆ ಇಂದು ರಾಜ್ಯದ ಎಲ್ಲಾ ಡ್ಯಾಂಗಳು ತುಂಬಿವೆ. ಇದರ ಬಗ್ಗೆ ಮೋದಿ ಅವರು 40 ನಿಮಿಷಗಳ ಕಾಲ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಾಧ್ಯಮದವರು ರಾಜ್ಯಕ್ಕೆ 3 ಸಾವಿರ ಕೋಟಿ ಮೊದಲ ಹಂತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಕೇಳಿದಾಗ, ನಾನು ಅಂಕಿಅಂಶಗಳ ಬಗ್ಗೆ ಇಲ್ಲಿ ಚರ್ಚೆ ಮಾಡಲ್ಲ. ಪ್ರವಾಹದಿಂದ ರಾಜ್ಯಕ್ಕೆ ಸುಮಾರು 40 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ನರೇಂದ್ರ ಮೋದಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದರು ಎಂದು ಉತ್ತರಿಸಿದರು.
ಈಗ ರಾಜ್ಯಕ್ಕೆ ಪ್ರವಾಹ ಅಧ್ಯಯನ ತಂಡ ಕಳುಹಿಸುತ್ತಾರೆ. ನಂತರ ಪರಿಹಾರ ಬಿಡುಗಡೆ ಮಾಡುತ್ತಾರೆ. ತಕ್ಷಣ ಹಣ ಬಿಡುಗಡೆ ಮಾಡುವಂತೆ ನಾವು ಮನವಿ ಮಾಡಿದ್ದೇವೆ. ಅವರು ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ ಎಂದು ಬಿಎಸ್‍ವೈ ಹೇಳಿದರು.
ಗದಗ: ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಅನಾರೋಗ್ಯಕ್ಕಿಡಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.
66 ವರ್ಷದ ಹನುಮಂತಪ್ಪ ಚಲವಾದಿ ಮೃತಪಟ್ಟಿದ್ದಾರೆ. ಮಲಪ್ರಭಾ, ಬೆಣ್ಣೆಹಳ್ಳ ಪ್ರವಾಹದ ವೇಳೆ ಮನೆಯಲ್ಲಿ ಸಿಲುಕಿಕೊಂಡಿದ್ದರು, ನಂತರ ಸಂಬಂಧಿಕರು ಹಾಗೂ ಸ್ಥಳೀಯರು ಹನುಮಂತಪ್ಪ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ಪ್ರವಾಹದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ಯಾರೆ ಅಂತಿಲ್ಲ ಎಂಬುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರೋಸಿಹೋದ ಕುಟುಂಬದವರು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅಂತ್ಯಕ್ರಿಯೇಗಾದರು ಪ್ರವಾಹ ಪರಿಹಾರ ನೀಡಬೇಕು ಎಂಬುದು ಮೃತನ ಕುಟುಂಬದವರ ಆಗ್ರಹಿಸಿದ್ದಾರೆ.
ಚಾಮರಾಜನಗರ/ ಮೈಸೂರು: ಮಾರಮ್ಮ ದೇವಸ್ಥಾನ ಪ್ರಸಾದ ಸೇವಿಸಿ ಮೃತಪಟ್ಟ ಸದಸ್ಯರ ಕುಟುಂಬಸ್ಥರನ್ನು ತನ್ನ ಬಳಿ ಕರೆಯಿಸಿ ಪರಿಹಾರ ಧನ ನೀಡಲು ಮುಂದಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತುಕೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಬಿದರಹಳ್ಳಿಯಿಂದ 50 ಕಿಮೀ ದೂರವಿರುವ ಹನೂರಿನಲ್ಲಿ ಪರಿಹಾರ ಧನ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಂದೇ ಗ್ರಾಮದ 8 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ಪರಿಹಾರ ಧನ ನೀಡುವ ಬದಲು 50 ಕಿ.ಮೀ ದೂರದಲ್ಲಿ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬಳಿಕ ಸಚಿವ ಪುಟ್ಟರಂಗಶೆಟ್ಟಿ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಬಿದರಹಳ್ಳಿಗೆ ಶಿಫ್ಟ್ ಮಾಡಿದ್ದಾರೆ.
ಮೈಸೂರಿನ ಕೆ.ಆರ್ ಆಸ್ಪತ್ರೆ ಬಳಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಮೃತರ ಮನೆಗಳಿಗೆ ತೆರಳಿ ಪರಿಹಾರ ವಿತರಿಸುವುದಾಗಿ ಹೇಳಿದ್ದಾರೆ. ಎಲ್ಲರಿಗೂ 5 ಲಕ್ಷ ಪರಿಹಾರ ನೀಡುತ್ತೇವೆ. ಜೊತೆಗೆ ವೈಯಕ್ತಿಕವಾಗಿಯೂ ನಾನು, ನರೇಂದ್ರರವರು ಪರಿಹಾರ ನೀಡುತ್ತೇವೆ ಎಂದರು. ಇದನ್ನೂ ಓದಿ: “ಮೃತರ ಮನೆಗೆ ಸಚಿವರು ಹೋಗಬೇಕೋ? ಮೃತರ ಮನೆಯವರು ಸಚಿವರ ಬಳಿ ಹೋಗಬೇಕೋ?”
ವಿಷ ಪ್ರಸಾದ ಸೇವಿಸಿ ಒಂದೇ ಗ್ರಾಮ ಬಿದರಹಳ್ಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗ ಗ್ರಾಮಕ್ಕೆ ಸಚಿವರು ಬರುವ ಬದಲು ಜನರನ್ನೇ ತಮ್ಮ ಬಳಿ ಕರೆಸಿಕೊಳ್ಳುತ್ತಿದ್ದಾರೆ. ಕುಟುಂಬದವರು ಮೊದಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖಿತರಾಗಿದ್ದು, ಹಣ ಪಡೆಯಲು ಈಗ 50 ಕಿ.ಮೀ ಪ್ರಯಾಣಿಸಬೇಕೇ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಮೃತರ ಮನೆಗೆ ಸಚಿರು ಹೋಗಬೇಕೋ? ಸತ್ತವರ ಮನೆಯವರು ಸಚಿವರ ಬಳಿ ಹೋಗಬೇಕೋ? ಮತ ಹಾಕಿಸಿಕೊಳ್ಳಲು ಮನೆ ಮುಂದೆ ಬರುತ್ತಾರೆ. ಈಗ ಜನರೇ ಅವರ ಬಳಿ ಹೋಗಬೇಕೇ? ಯಾವ ಸಮಯದಲ್ಲಿ ಯಾವ ರೀತಿ ವ್ಯವಹರಿಸಬೇಕು ಎನ್ನುವ ಕನಿಷ್ಟ ಜ್ಞಾನ ಸಚಿವರಿಗಿಲ್ಲವೇ ಎಂದು ಪ್ರಶ್ನಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.