ನವದೆಹಲಿ: ಜಿಯೋ 4ಜಿ ಸೇವೆ ಆರಂಭವಾದ ಬಳಿಕ ಮೇ ತಿಂಗಳಿನಲ್ಲಿ ಡೌನ್‍ಲೋಡ್ ಸ್ಪೀಡ್ ಸಾರ್ವಕಾಲಿಕ ಏರಿಕೆ ಕಂಡಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ.
ಮೇ ತಿಂಗಳಿನಲ್ಲಿ 19.123 ಎಂಬಿಪಿಎಸ್(ಮೆಗಾಬೈಟ್ಸ್ ಪರ್ ಸೆಕೆಂಡ್) ವೇಗದ ಡೌನ್‍ಲೋಡ್ ಸ್ಪೀಡ್ ದಾಖಲಾಗಿದೆ ಎಂದು ಟ್ರಾಯ್‍ನ ಮೈಸ್ಪೀಡ್ ಆಪ್ ತಿಳಿಸಿದೆ. 2016ರ ಡಿಸೆಂಬರ್ ನಲ್ಲಿ 18.146 ಎಂಬಿಪಿಎಸ್ ಡೌನ್‍ಲೋಡ್ ಸ್ಪೀಡ್ ದಾಖಲಾಗಿತ್ತು. ಡಿಸೆಂಬರ್ ಬಳಿಕ ನಂತರ ತಿಂಗಳಿನಲ್ಲಿ ಡೌನ್‍ಲೋಡ್ ಸ್ಪೀಡ್ ಕಡಿಮೆಯಾಗಿತ್ತು, ಈಗ ಏರಿಕೆ ಕಂಡಿದೆ.
ಫೆಬ್ರವರಿಯಲ್ಲಿ 17.427 ಎಂಬಿಪಿಎಸ್, ಮಾರ್ಚ್ ನಲ್ಲಿ 16.487 ಎಂಬಿಪಿಎಸ್, ಏಪ್ರಿಲ್ ನಲ್ಲಿ 18.487 ಎಂಬಿಪಿಎಸ್ ಡೌನ್‍ಲೋಡ್ ಸ್ಪೀಡನ್ನು ಜಿಯೋ ದಾಖಲಿಸಿತ್ತು.
ಯಾವುದು ಎಷ್ಟು?
ಮೇ ತಿಂಗಳಿನಲ್ಲಿ ಜಿಯೋ 18.4 ಎಂಬಿಪಿಎಸ್, ಐಡಿಯಾ 11.8 ಎಂಬಿಪಿಎಸ್, ವೊಡಾಫೋನ್ 11.5 ಎಂಬಿಪಿಎಸ್, ಏರ್‍ಟೆಲ್ 9.9 ಎಂಬಿಪಿಎಸ್ ಸರಾಸರಿ ಡೌನ್‍ಲೋಡ್ ಸ್ಪೀಡ್ ದಾಖಲಿಸಿದೆ.
ಅಪ್ಲೋಡ್ ಸ್ಪೀಡ್:
ಐಡಿಯಾ 7.2 ಎಂಬಿಪಿಎಸ್,ವೊಡಾಫೋನ್ 6.8 ಎಂಬಿಪಿಎಸ್, ಏರ್‍ಟೆಲ್ 4.4 ಎಂಬಿಪಿಎಸ್, ಜಿಯೋ 4.3 ಎಂಬಿಪಿಎಸ್ ಸರಾಸರಿ ಅಪ್ಲೋಡ್ ಸ್ಪೀಡ್ ದಾಖಲಿಸಿದೆ ಎಂದು ಟ್ರಾಯ್ ಆಪ್ ತಿಳಿಸಿದೆ.
ನವದೆಹಲಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿರುವ ರಿಲಯನ್ಸ್ ಜಿಯೋ ಕಳೆದ ಆರು ತಿಂಗಳಿನಲ್ಲಿ 22.5 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.
ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‍ಇ) ಸೋಮವಾರ ಸಲ್ಲಿಸಿದ್ದ ಲೆಕ್ಕ ಪತ್ರದಲ್ಲಿ ಈ ವಿವರವನ್ನು ಜಿಯೋ ನೀಡಿದೆ.
ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 22.5 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 7.46 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿತ್ತು. ಜಿಯೋದ ಒಟ್ಟು ಆದಾಯ ಕಳೆದ 6 ತಿಂಗಳಿನಲ್ಲಿ 2.25 ಕೋಟಿ ರೂ.ಗಳಿಂದ 54 ಲಕ್ಷ ರೂ. ಇಳಿಕೆಯಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಜಿಯೋ ಮಾರ್ಚ್ 31ರ ವರೆಗೆ ಉಚಿತ ಸೇವೆಯನ್ನು ನೀಡಿತ್ತು. ಏಪ್ರಿಲ್ ಬಳಿಕ ಗ್ರಾಹಕರಿಂದ ತನ್ನ ಸೇವೆಗಳಿಗೆ ಶುಲ್ಕ ಪಡೆಯಲು ಆರಂಭಿಸಿತ್ತು.
ಜಿಯೋ ಪ್ರೈಮ್ ನೋಂದಣಿಗೆ 99 ರೂ., ಸಮ್ಮರ್ ಸರ್‍ಪ್ರೈಸ್ ಆಫರ್ ಗೆ 303 ರೂ. ಬಳಿಕ ಧನ್ ಧನಾ ಧನ್ ಆಫರ್‍ಗೆ 309 ರೂ. ಶುಲ್ಕ ವಿಧಿಸಿತ್ತು.
ಜಾಗತಿಕ ಹಣಕಾಸು ಸಂಸ್ಥೆ ಮೊರ್ಗಾನ್ ಸ್ಟಾನ್ಲಿ ಈ ಹಿಂದೆ ಜಿಯೋ 2020ರ ನಂತರ ಲಾಭ ಗಳಿಸಲಿದೆ ಎಂದು ಹೇಳಿತ್ತು. 2018ರಲ್ಲಿ 218 ಕೋಟಿ ರೂ., 2019 ರಲ್ಲಿ 209 ಕೋಟಿ ರೂ., 2020ರಲ್ಲಿ 233 ಕೋಟಿ ರೂ. ಆದಾಯಗಳಿಸಲಿದೆ ಎಂದು ಅದು ಅಂದಾಜಿಸಿದೆ.
12 ಕೋಟಿ ಬಳಕೆದಾರರಲ್ಲಿ ಈಗ 7.2 ಕೋಟಿ ಜನ ಪ್ರೈಮ್ ಸದಸ್ಯರಾಗಿದ್ದಾರೆ ಎಂದು ಜಿಯೋ ಹೇಳಿದೆ.
2010ರಲ್ಲಿ ಆರಂಭಗೊಂಡಿದ್ದ ಜಿಯೋ 6 ವರ್ಷಗಳ ಎಲ್‍ಟಿಇ ನೆಟ್‍ವರ್ಕ್ ವಿಸ್ತರಣೆ ಮಾಡಿ, 2016ರ ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿತ್ತು. ಈಗ ಕೇವಲ ಆಫರ್‍ಗಳಿಗೆ ಮಾತ್ರ ಜಿಯೋ ಶುಲ್ಕ ವಿಧಿಸಿದ್ದರೂ ಮಾರ್ಚ್ 31, 2018ರ ನಂತರ ಜಿಯೋ ಆಪ್ ಗುಚ್ಚಗಳಿಗೆ ಶುಲ್ಕ ವಿಧಿಸಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋಗೆ ಒಟ್ಟು 2.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಈ ಹಿಂದೆ ತಿಳಿಸಿದ್ದರು.
ಮುಂಬೈ: ಜಿಯೋದ ಸಮ್ಮರ್ ಸರ್‍ಪ್ರೈಸ್ ಆಫರ್ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಚೌಕಟ್ಟಿನಲ್ಲಿ ಇರದ ಕಾರಣ ಆ ಆಫರ್‍ನ್ನು ಹಿಂದಕ್ಕೆ ಪಡೆಯಲು ನಾವು ನಿರ್ದೇಶನ ನೀಡಿದ್ದೇವೆ ಎಂದು ಟ್ರಾಯ್ ಕಾರ್ಯದರ್ಶಿ ಸುಧೀರ್ ಗುಪ್ತಾ ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಏಪ್ರಿಲ್ 5ರಂದು ನಾವು ಜಿಯೋ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆವು. ಈ ವೇಳೆ ಸಮ್ಮರ್ ಸರ್‍ಪ್ರೈಸ್ ಆಫರ್ ಹೇಗೆ ಟ್ರಾಯ್ ನಿಯಮದ ಅಡಿಯಲ್ಲಿ ಬರುತ್ತದೆ ಎನ್ನುವ ಪ್ರಶ್ನೆ ಕೇಳಿದ್ದೆವು. ಈ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡುವುಲ್ಲಿ ವಿಫಲರಾದರು. ಈ ಕಾರಣಕ್ಕಾಗಿ ನಾವು ಆಫರ್‍ನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದೆವು ಎಂದು ತಿಳಿಸಿದ್ದಾರೆ.
ಇದೇ ವೇಳೆ ಗುಪ್ತಾ ಅವರು ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ಜಿಯೋ ಟ್ರಾಯ್ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಯಾರೆಲ್ಲ ಈಗಾಗಲೇ ಜಿಯೋ ಪ್ರೈಮ್ ಮೆಂಬರ್ ಆಗಿದ್ದಾರೋ ಅವರೆಲ್ಲರೂ ಜೂನ್‍ವರೆಗೆ ಡೇಟಾ ಮತ್ತು ಉಚಿತ ಕರೆಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು.
ಸಮ್ಮರ್ ಸರ್‍ಪ್ರೈಸ್ ಆಫರ್ ಅನ್ನು ಹಿಂದಕ್ಕೆ ಪಡೆಯುವ ಮೊದಲೇ ಜಿಯೋ ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಜಾಹಿರಾತು ನೀಡಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಈ ರೀತಿಯ ಜಾಹಿರಾತು ನೀಡುವುದನ್ನು ಜಿಯೋ ನಿಲ್ಲಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಉತ್ತರಿಸಿದರು.
ಯಾವುದೇ ಟೆಲಿಕಾಂ ಕಂಪೆನಿ ಹೊಸ ಪ್ಲಾನ್ ಪ್ರಕಟಿಸಿದರೆ ಅದರ ವಿವರವನ್ನು ಒಂದು ವಾರದ ಒಳಗಡೆ ಟ್ರಾಯ್‍ಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಆದರೆ ಜಿಯೋ ಏಪ್ರಿಲ್ 7ರವರೆಗೂ ಸಮ್ಮರ್ ಸರ್‍ಪ್ರೈಸ್ ಆಫರ್ ಬಗ್ಗೆ ಯಾವುದೇ ವಿವರವನ್ನು ಸಲ್ಲಿಸಿಲ್ಲ ಎಂದು ಟ್ರಾಯ್ ತಿಳಿಸಿದೆ.
ಈ ಸಂಬಂಧ ಗುರುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಜಿಯೋ, ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‍ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಆದರೆ ಯಾರೆಲ್ಲ ಸಮ್ಮರ್ ಸರ್ ಪ್ರೈಸ್ ಆಫರ್ ರಿಚಾರ್ಜ್ ಮಾಡಿದ್ದಾರೋ ಅವರು ಈ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.
ಆರಂಭದಲ್ಲಿ ವೆಲಕಂ ಆಫರ್ ಪ್ರಕಟಿಸಿದಾಗಲೇ ಜಿಯೋದ ಮೇಲೆ ಟ್ರಾಯ್ ನಿಮಯ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಏರ್‍ಟೆಲ್, ಐಡಿಯಾ, ವೊಡಾಫೋನ್ ಕಂಪೆನಿಗಳು ಟ್ರಾಯ್‍ಗೆ ದೂರು ನೀಡಿದ್ದವು. ಆದರೆ 90 ದಿನಗಳ ಉಚಿತ ಸೇವೆ ತನ್ನ ನಿಮಯದ ಅಡಿಯಲ್ಲೇ ಇದೆ. ಕಂಪೆನಿ ತನ್ನ ಪ್ರಚಾರಕ್ಕಾಗಿ ಈ ರೀತಿಯ ಉಚಿತ ಸೇವೆಯನ್ನು ನೀಡಲು ಅವಕಾಶವಿದೆ ಎಂದು ಹೇಳಿ ಟ್ರಾಯ್ ಟೆಲಿಕಾಂ ಕಂಪೆನಿಗಳ ಆರೋಪವನ್ನು ತಿರಸ್ಕರಿಸಿತ್ತು. ಆದರೆ ಇದಾದ ಬಳಿಕ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ನೀಡಿತ್ತು. ಇದರಲ್ಲಿ ಒಂದು ದಿನ ಗರಿಷ್ಟ 1 ಜಿಬಿ ಡೇಟಾ ಬಳಕೆ ಮಾಡಬಹುದಾಗಿತ್ತು. ಮಾರ್ಚ್ 31ಕ್ಕೆ ಈ ಅವಧಿ ಮುಕ್ತಾಯವಾದ ಬಳಿಕ ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್ ಪ್ರಕಟಿಸಿತ್ತು.
ಏನಿದು ಸಮ್ಮರ್ ಸರ್‍ಪ್ರೈಸ್ ಆಫರ್?
ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.
ಈ ಆಫರ್ ಲಾಭ ಸಿಗಬೇಕಿದ್ದರೆ 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕಾಗಿತ್ತು. ಈ ರಿಚಾರ್ಜ್ ಮಾಡಿದ್ದರೆ ಯಾವ ಪ್ಯಾಕ್ ಹಾಕಿದ್ದೀರೋ ಆ ಪ್ಯಾಕ್‍ನ ಆಫರ್ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುತಿತ್ತು. ಇದರ ಅರ್ಥ ನೀವು 303 ರೂಪಾಯಿ ಪ್ಯಾಕ್ ಹಾಕಿದ್ರೆ ಅದರಲ್ಲಿ ಪ್ರತಿ ದಿನ ನಿಮಗೆ ಗರಿಷ್ಠ ಒಂದು ಜಿಬಿ ಡೇಟಾದ ಜೊತೆ ಹೊರ ಹೋಗುವ ಎಲ್ಲ ಕರೆಗಳು ಮತ್ತು ಮೆಸೇಜ್ ಉಚಿತವಾಗಿ ಸಿಗುತಿತ್ತು. ಆದರೆ ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ ಇತ್ತು. ಆದರೆ ಈ ಸಮ್ಮರ್ ಸರ್‍ಪೈಸ್ ಆಫರ್‍ನಲ್ಲಿ ಈ ವ್ಯಾಲಿಡಿಟಿ ಅವಧಿ ಜೂನ್ 30ರವರೆಗೆ ವಿಸ್ತರಣೆಯಾಗಿತ್ತು.
ಮುಂಬೈ: ಉಚಿತ ಕರೆಗಳನ್ನು ನೀಡಿ ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ದೇಶದಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ಡೇಟಾ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಸೆಟ್‍ಟಾಪ್ ಮಾರುಕಟ್ಟೆಯ ಕ್ಷೇತ್ರದತ್ತ ಗಮನ ಹರಿಸಿದ್ದು ಶೀಘ್ರವೇ ಈ ಸೇವೆ ಗ್ರಾಹಕರಿಗೆ ಸಿಗಲಿದೆ.
ಹೌದು. ಜಿಯೋ ಕಂಪೆನಿಯ ಸೆಟ್‍ಟಾಪ್ ಬಾಕ್ಸ್ ಗಳ ಫೋಟೋಗಳು ಈಗ ಆನ್‍ಲೈನ್ ನಲ್ಲಿ ಲೀಕ್ ಆಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಈ ಸೆಟ್‍ಟಾಪ್ ಮೇಲೆ ‘ನಾಟ್ ಫಾರ್ ರಿಟೇಲ್’ ಎಂಬ ಬರಹ ಇದ್ದು, ಪ್ರಸ್ತುತ ಪರೀಕ್ಷೆ ನಡೆಸುತ್ತಿದೆ.
ಸೆಟ್‍ಟಾಪ್ ಬಾಕ್ಸ್ ನಲ್ಲಿ ಏನಿದೆ?
ಸೆಟ್‍ಟಾಪ್ ಬಾಕ್ಸ್ ಅನ್ನು ಜಿಯೋ ಫೈಬರ್ ಅಥವಾ ಡಿಶ್‍ಗೆ ಕನಕ್ಟ್ ಮಾಡಬಹುದಾಗಿದೆ. ರಿಮೋಟ್ ಕಂಟ್ರೋಲ್ ನಲ್ಲಿ ಮೈಕ್ ಬಟನ್ ಇದ್ದು, ಧ್ವನಿ ಮೂಲಕ ಟಿವಿಯನ್ನು ನಿಯಂತ್ರಿಸುವ ವ್ಯವಸ್ಥೆ ಇರಲಿದೆ ಎಂದು ಹೇಳಲಾಗುತ್ತಿದೆ. ಬಾಕ್ಸ್ ಹಿಂದುಗಡೆ ಎಚ್‍ಡಿಎಂಐ ಪೋರ್ಟ್, ಯುಎಸ್‍ಬಿ ಪೋರ್ಟ್, ಆಡಿಯೋ, ವಿಡಿಯೋ ಔಟ್‍ಪುಟ್ ಪೋರ್ಟ್ ಗಳಿವೆ. ಇದರ ಜೊತೆಗೆ ಎಥರ್‍ನೆಟ್ ಪೋರ್ಟ್ ಇದ್ದು ಗ್ರಾಹಕರು ಬ್ರಾಡ್‍ಬ್ಯಾಂಡ್ ಕೇಬಲ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಮುಂದುಗಡೆ ಯುಎಸ್‍ಬಿ ಪೋರ್ಟ್ ಇದ್ದು, ಗ್ರಾಹಕರು ಯುಎಸ್‍ಬಿ ಡ್ರೈವ್‍ಗಳನ್ನು ಹಾಕಬಹುದಾಗಿದೆ.
ಬೇರೆ ವಿಶೇಷ ಏನಿದೆ?
ನೀವು ಸ್ಮಾರ್ಟ್ ಫೋನ್ ಮೂಲಕಜಿಯೋ ಟಿವಿ ಆ್ಯಪ್ ಬಳಸುತ್ತಿದ್ದರೆ ನೋಡಿರುತ್ತೀರಿ. ಅದರಲ್ಲಿ ಟಿವಿ ವಾಹಿನಿಯ ಕಾರ್ಯಕ್ರಮವನ್ನು ನೀವು ವೀಕ್ಷಿಸದೇ ಇದ್ದರೂ ನಂತರವೂ ಸ್ಟ್ರೀಮ್ ಮಾಡಬಹುದಾಗಿದೆ. ವಾಹಿನಿಗಳಲ್ಲಿ 7 ದಿನಗಳ ಕಾಲ ಯಾವ ಗಂಟೆಯಲ್ಲಿ ಏನು ಪ್ರಸಾರವಾಗಿದೆ ಅವೆಲ್ಲ ಕಾರ್ಯಕ್ರಮಗಳು ಜಿಯೋ ಟಿವಿ ಆ್ಯಪ್‍ನಲ್ಲಿ ಸಿಗುತ್ತದೆ. ಈ ವಿಶೇಷತೆಯೂ ಜಿಯೋ ಸೆಟ್ ಟಾಪ್ ಬಾಕ್ಸ್ ನಲ್ಲಿ ಇರಲಿದೆ ಎನ್ನುವ ವದಂತಿಯು ಇದೆ.
ಆರಂಭದಲ್ಲಿ 300 ಚಾನೆಲ್‍ಗಳು ಮತ್ತು 50ಕ್ಕೂ ಅಧಿಕ ಎಚ್‍ಡಿ ಚಾನೆಲ್‍ಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜೊತೆಯೂ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಜಿಯೋ ಹಾಟ್‍ಸ್ಟಾರ್ ಜೊತೆ ಪಾರ್ಟ್ ನರ್ ಆಗಿದ್ದು, ಗ್ರಾಹಕರಿಗೆ ಹಾಟ್ ಸ್ಟಾರ್ ವಿಡಿಯೋ ನೋಡುವ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಅಮೆರಿಕ ಪ್ರಮುಖ ಚಾನೆಲ್‍ಗಳು ಇದರಲ್ಲಿ ಸಿಗಲಿದೆ.
ಬಿಡುಗಡೆ ಯಾವಾಗ?
ಈ ಸೇವೆಯನ್ನು ಜಿಯೋ ಯಾವಾಗ ಬಿಡುಗಡೆ ಮಾಡಲಿದೆ ಎನ್ನುವುದನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೆ 2017ರ ಮೇ ವೇಳೆ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬೆಲೆ ಎಷ್ಟು? ಪ್ಲಾನ್ ಹೇಗಿದೆ?
ಸೆಟ್ ಟಾಪ್ ಬಾಕ್ಸ್ ಗೆ 1800 ರೂ. ಇದ್ದು, ಕಡಿಮೆ ಬೆಲೆಯ ಪ್ಲಾನ್‍ಗೆ 180 ರೂ. ಇರಲಿದೆ. ಈ ಪ್ಲಾನ್‍ನಲ್ಲೇ 300ಕ್ಕೂ ಅಧಿಕ ಚಾನೆಲ್‍ಗಳನ್ನು ವೀಕ್ಷಿಸಬಹುದಾಗಿದೆ. ಜಿಯೋ ಸೇವೆ ಆರಂಭಗೊಂಡಾಗ ಹೇಗೆ 3 ತಿಂಗಳ ಉಚಿತ ಆಫರ್ ನೀಡಿತ್ತೋ ಅದೇ ರೀತಿಯಾಗಿ ಈ ಸೆಟ್‍ಟಾಪ್ ಖರೀದಿಸಿದ ಗ್ರಾಹಕರಿಗೆ ಮೂರು ತಿಂಗಳು ಉಚಿತವಾಗಿ 300ಕ್ಕೂ ಅಧಿಕ ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯವನ್ನು ಜಿಯೋ ನೀಡಲಿದೆ.
ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಏರ್‍ಟೆಲ್ ಕಂಪೆನಿಗಳು ಡೇಟಾ ವಿಚಾರವಾಗಿ ಸ್ಪರ್ಧೆ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಈ ಸ್ಪರ್ಧೆ ಮತ್ತಷ್ಟು ಜೋರಾಗಿದ್ದು ತನ್ನ ವಿರುದ್ಧ ಏರ್‍ಟೆಲ್ ಜಾಹೀರಾತು ಪ್ರಕಟಿಸಿ ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿ ಜಿಯೋ ಈಗ ಭಾರತೀಯ ಜಾಹೀರಾತು ಗುಣಮಟ್ಟ ಮಾನದಂಡ ಮಂಡಳಿಗೆ(ಎಎಸ್‍ಸಿಐ) ದೂರು ನೀಡಿದೆ.
ತನ್ನ ದೂರಿನಲ್ಲಿ ಜಿಯೋ, ಏರ್‍ಟೆಲ್ ಓಕ್ಲಾ ಡೇಟಾ ಸ್ಪೀಡ್ ಆಪ್ ಟೆಸ್ಟ್ ನಲ್ಲಿ ಬಂದಿರುವ ಫಲಿತಾಂಶವನ್ನು ಆಧಾರಿಸಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ನಾವು ನೀಡುತ್ತಿದ್ದೇವೆ ಎಂದು ಜಾಹೀರಾತು ಪ್ರಕಟಿಸಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ. ಆದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ಮೈ ಸ್ಪೀಡ್ ಅಪ್ಲಿಕೇಶನ್ ನಲ್ಲಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ಜಿಯೋ ನೀಡುತ್ತಿದೆ ಎನ್ನುವ ಫಲಿತಾಂಶ ಬಂದಿದೆ. ಹೀಗಾಗಿ ಏರ್‍ಟೆಲ್ ನೀಡುತ್ತಿರುವ ಜಾಹೀರಾತು ಸುಳ್ಳಾಗಿದ್ದು, ಏರ್‍ಟೆಲ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಎಸ್‍ಸಿಐಯಲ್ಲಿ ಮನವಿ ಮಾಡಿದೆ.
ತಾನು ವೇಗದ ಇಂಟರ್‍ನೆಟ್ ಸೇವೆಯನ್ನು ನೀಡುತ್ತಿದ್ದೇನೆ ಎಂದು ದೃಢಪಡಿಸಲು ಜಿಯೋ ಎಎಸ್‍ಸಿಐಗೆ 12 ಯುಆರ್‍ಎಲ್‍ಗಳನ್ನು ನೀಡಿದೆ. ಅಷ್ಟೇ ಅಲ್ಲದೇ ಸುಳ್ಳು ಫಲಿತಾಂಶ ನೀಡಿದ್ದಕ್ಕೆ ಓಕ್ಲಾ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಜಿಯೋ ನೋಟಿಸ್ ಸಂಬಂಧ ಓಕ್ಲಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಏರ್‍ಟೆಲ್ ಪರ ನಿಂತುಕೊಂಡಿದೆ. ಭಾರತದಲ್ಲಿ ನಾವು ಡ್ಯುಯಲ್ ಸಿಮ್, ನೆಟ್‍ವರ್ಕ್ ಟೆಕ್ನಾಲಜಿ, ವಿವಿಧ ಮೊಬೈಲ್‍ಗಳನ್ನು ಪರಿಗಣಿಸಿ ಡೇಟಾ ಸ್ಪೀಡ್ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದೆ. ತನಗೆ ನೋಟಿಸ್ ನೀಡಿದ್ದಕ್ಕೆ ಓಕ್ಲಾ ಕಂಪೆನಿ ಈಗ ರಿಲಯನ್ಸ್ ಜಿಯೋಗೆ ನೋಟಿಸ್ ನೀಡಿದೆ.
ಜಿಯೋ ಸ್ಪೀಡ್ ಕಡಿಮೆ ಆಗುತ್ತಾ?
ಸಾಧಾರಣವಾಗಿ ಡ್ಯುಯಲ್ ಸಿಮ್ ಹೊಂದಿರುವ ಗ್ರಾಹಕರು ಜಿಯೋ ಸಿಮ್ ಅನ್ನು ಒಂದನೇ ಸ್ಲಾಟ್ ಮತ್ತು ಇನ್ನೊಂದು ಸಿಮ್ ಅನ್ನು ಎರಡನೇ ಸ್ಲಾಟ್‍ನಲ್ಲಿ ಹಾಕುತ್ತಾರೆ. ಒಂದು ವೇಳೆ ಎರಡನೇ ಸಿಮ್ ಸ್ಲಾಟ್‍ನಲ್ಲಿ ಜಿಯೋ ಸಿಮ್ ಹಾಕಿದ್ರೆ ಇಂಟರ್‍ನೆಟ್ ಸ್ಪೀಡ್ ಕಡಿಮೆ ಇರುತ್ತದೆ. ಹೀಗಾಗಿ ಯಾವುದೇ ಡೇಟಾ ಸ್ಪೀಡ್ ಟೆಸ್ಟ್ ಮಾಡುವ ಆಪ್‍ನಲ್ಲಿ ಚೆಕ್ ಮಾಡಿದ್ರೆ ಅದು ಮೊದಲ ಸ್ಲಾಟ್‍ನಲ್ಲಿರುವ ಕಂಪೆನಿ ನೀಡುವ ಇಂಟರ್‍ನೆಟ್ ಕಡಿಮೆ ಎಂದೇ ತೋರಿಸುತ್ತದೆ. ಈ ಕಾರಣಕ್ಕಾಗಿ ಜಿಯೋ ಸಿಮ್ ಖರೀದಿ ವೇಳೆ ವಿತರಕರು ಡ್ಯುಯಲ್ ಸಿಮ್ ಸೆಟ್ ಇದ್ದಲ್ಲಿ ಒಂದನೇ ಸ್ಲಾಟ್ ನಲ್ಲಿ ಜಿಯೋ ಸಿಮ್ ಹಾಕಿ ಎಂದು ಹೇಳುತ್ತಿದ್ದರು.
ಜಿಯೋ ಸೇವೆಯ ಆರಂಭಗೊಂಡ ದಿನಗಳಲ್ಲಿ ಡೇಟಾ ಸ್ಪೀಡ್ ಕಡಿಮೆ ಇತ್ತು. ಈ ವಿಚಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಒಪ್ಪಿಕೊಂಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳಷ್ಟು ಸಂಖ್ಯೆಯ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವೇಗದಲ್ಲಿ ಡೇಟಾ ನೀಡಲು ಸಾಧ್ಯವಾಗುತ್ತಿಲ್ಲ, ಶೀಘ್ರದಲ್ಲೇ ಟವರ್‍ಗಳನ್ನು ಮತ್ತು ವೈಫೈ ಹಾಟ್‍ಸ್ಪಾಟ್‍ಗಳನ್ನು ಸ್ಪಾಪಿಸುವ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದು 2016ರ ಡಿಸೆಂಬರ್ 2 ರಂದು ಹೇಳಿದ್ದರು.
ಆದರೆ ಇತ್ತಿಚಿಗೆ ಟ್ರಾಯ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ದೇಶದಲ್ಲಿ ವೇಗದ ಇಂಟರ್‍ನೆಟ್ ಸೇವೆ ನೀಡುವ ಕಂಪೆನಿಯಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜನರು http://www.myspeed.trai.gov.in/ಪೋರ್ಟಲ್ ಹೋಗಿ ಯಾವ ಟೆಲಿಕಾಂ ಕಂಪೆನಿ ಎಷ್ಟು ಎಂಬಿಪಿಎಸ್ ವೇಗದಲ್ಲಿ ಡೇಟಾ ನೀಡುತ್ತದೆ ಎನ್ನುವುದನ್ನು ಚೆಕ್ ಮಾಡಬಹುದು.
ಹೀಗಾಗಿ ಇಲ್ಲಿ ಟ್ರಾಯ್ ವೆಬ್‍ಸೈಟ್‍ನಲ್ಲಿ ಯಾವ ಕಂಪೆನಿಯ ಎಷ್ಟು ವೇಗದಲ್ಲಿ ಡೇಟಾ ನೀಡುತ್ತಿದೆ ಎನ್ನುವ ಮಾಹಿತಿ, ಜಿಯೋ ಎಎಸ್‍ಸಿಐ ನೀಡಿ ದ ಯುಆರ್‍ಎಲ್ ವಿಡಿಯೋ, ಜೊತೆಗೆ ಏರ್‍ಟೆಲ್ ಜಾಹೀರಾತಿನ ಫೋಟೋವನ್ನು ನೀಡಲಾಗಿದೆ.
ಜಿಯೋಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ
ಮುಂಬೈ: ರಿಲಯನ್ಸ್ ಜಿಯೋ ಮತ್ತೊಂದು ಮೈಲಿಗಲ್ಲನ್ನು ಬರೆದಿದೆ. ಬಿಡುಗಡೆಯಾದ 170 ದಿನದಲ್ಲಿ 10 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದಿಸಿದ ಮೊದಲ ಟೆಲಿಕಾಂ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಧ್ಯಮಗಳ ಜೊತೆ ನಡೆಸಿ ಈ ಸಾಧನೆಗೆ ಕಾರಣರಾದ ಎಲ್ಲ ಗ್ರಾಹಕರಿಗೆ ಧನ್ಯವಾದ ಹೇಳಿದರು.
ಜಿಯೋ ಸೇವೆ ಅಧಿಕೃತವಾಗಿ ಲೋಕಾರ್ಪಣೆಯಾದ ಒಂದು ತಿಂಗಳಿನಲ್ಲೇ 1.60 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಇದಾದ ಬಳಿಕ 83 ದಿನದಲ್ಲಿ 5 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿತ್ತು.
ಬೆಂಗಳೂರು: “ಪ್ರಿಯ ಗ್ರಾಹಕರೇ ನಿಮ್ಮ ಜಿಯೋ ಇಂಟರ್‍ನೆಟ್ ಮತ್ತು ಕಾಲ್ ಸೇವೆಯನ್ನು ರಾತ್ರಿ 12 ಗಂಟೆಯ ಒಳಗಡೆ ಅಪ್‍ಗ್ರೇಡ್ ಮಾಡಿಕೊಳ್ಳಿ, ಒಂದು ವೇಳೆ ನೀವು ಅಪ್‍ಗ್ರೇಡ್ ಮಾಡದೇ ಇದಲ್ಲಿ ನಿಮ್ಮ ಜಿಯೋ ಸೇವೆ ಡಿ ಆಕ್ವಿವೇಟ್ ಆಗುತ್ತದೆ”
ಈ ರೀತಿ ಇರುವ ವಾಟ್ಸಪ್ ಸಂದೇಶವನ್ನು ದಯವಿಟ್ಟು ಯಾರೂ ಶೇರ್ ಮಾಡಬೇಡಿ. ಜಿಯೋ ಯಾವುದೇ ಈ ರೀತಿಯ ಆಫರ್ ಬಿಡುಗಡೆ ಮಾಡಿಲ್ಲ. ನಿಮ್ಮನೆ ನಿಮ್ಮನ್ನು ವಂಚಿಸಲು ಯಾರೋ ಈ ಸಂದೇಶವನ್ನು ಬರೆದು ಮೆಸೆಂಜಿಗ್ ಅಪ್ಲಿಕೇಶನ್‍ನಲ್ಲಿ ಹರಿಯಬಿಟ್ಟಿದ್ದಾರೆ.
ಈಗ ನೀವು ಡೌನ್‍ಲೋಡ್ ಮಾಡುತ್ತಿರುವ ಜಿಯೋ ಹೆಸರಿನ ಆಂಡ್ರಾಯ್ಡ್ ಆಪ್ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಇಲ್ಲ. ಹೀಗಾಗಿ ಈ ಆಪನ್ನು ಡೌನ್‍ಲೋಡ್ ಮಾಡಬೇಡಿ. ಯಾರಾದರೂ ನಿಮಗೆ ಈ ಸಂದೇಶವನ್ನು ಕಳುಹಿಸಿದ್ದರೆ ಅವರಿಗೆ, ಇದು ನಮ್ಮನ್ನು ವಂಚಿಸಲು ಹರಿಯಬಿಟ್ಟಿರುವ ಮೆಸೇಜ್ ಎಂಬುದನ್ನು ತಿಳಿಸಿ ಬಿಡಿ.
ಜಿಯೋ ಬಿಡುಗಡೆ ಮಾಡಿರುವ ಹ್ಯಾಪಿ ನ್ಯೂ ಇಯರ್ ಸೇವೆ ಮಾರ್ಚ್ 31 ರವರೆಗೆ ಇರಲಿದ್ದು, ಪ್ರತಿನಿತ್ಯ ಗ್ರಾಹಕರು 1 ಜಿಬಿ ಡೇಟಾವನ್ನು ಉಚಿತವಾಗಿ ಬಳಕೆ ಮಾಡಬಹುದು. ಮಾರ್ಚ್ 31ರ ನಂತರ ಡೇಟಾ ಉಚಿತವಾಗಿ ನೀಡುತ್ತದೋ ಇಲ್ಲವೋ ಎನ್ನುವುದನ್ನು ಇದೂವರೆಗೂ ಜಿಯೋ ಅಧಿಕೃತವಾಗಿ ಎಲ್ಲಿಯೂ ಪ್ರಕಟಿಸಿಲ್ಲ. ಕೆಲ ಮಾಧ್ಯಮಗಳು ಈ ಸೇವೆ ಜೂನ್ ವರೆಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿ ಮಾಡಿವೆ.
ನಿಮಗಿದು ತಿಳಿದಿರಲಿ:
ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಹೇಗೆ ವ್ಯಕ್ತಿ/ ಕಂಪೆನಿಗೆ ಸಂಬಂಧಿಸಿದಂತೆ ಅಧಿಕೃತ ಖಾತೆಗಳನ್ನು ಜನರಿಗೆ ಗುರುತಿಸಲು ಒಂದು ಪ್ರತ್ಯೇಕ ‘ಟಿಕ್ ಮಾರ್ಕ್’ ಇರುತ್ತದೆ. ಅದೇ ರೀತಿಗಾಗಿ ಆಂಡ್ರಾಯ್ಡ್ ಪ್ಲೇ ಸ್ಟೋರ್‍ನಲ್ಲಿ ಟಿಕ್ ಮಾರ್ಕ್ ಇದೆ. ಈ ಟಿಕ್ ಮಾರ್ಕ್ ಇದ್ದಲ್ಲಿ ಮಾತ್ರ ಅದು ಕಂಪೆನಿಯ ಅಧಿಕೃತ ಆಪ್ ಆಗಿರುತ್ತದೆ. ಆಪ್ ಡೌನ್ ಲೋಡ್ ಮಾಡುವ ಮುನ್ನ ಆ ಆಪ್ ಎಷ್ಟು ಡೌನ್ ಲೋಡ್ ಆಗಿದೆ ಎನ್ನುವುದನ್ನು ಗಮನಿಸಿ. ಲಕ್ಷಕ್ಕೂ/ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಆಪ್‍ಗಳು ಡೌನ್‍ಲೋಡ್ ಆಗಿದ್ದಲ್ಲಿ ಈ ಆಪ್ ಅಧಿಕೃತ ಕಂಪೆನಿಯ ಆಪ್ ಎನ್ನುವ ನಿರ್ಧಾರಕ್ಕೆ ನೀವು ಬರಬಹುದು.