ಮುಂಬೈ: ರಿಲಯನ್ಸ್ ಜಿಯೋ ಈಗ 336 ದಿನ ವ್ಯಾಲಿಡಿಟಿ ಹೊಂದಿರುವ ಪ್ರತಿ ದಿನ 1.5 ಜಿಬಿ ಡೇಟಾ ಪ್ಯಾಕ್ ಇರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ.
ಈ ಡೇಟಾ ಪ್ಯಾಕ್ ಸಿಗಬೇಕಾದರೆ 2,121 ರೂ. ರಿಚಾರ್ಜ್ ಮಾಡಬೇಕು. ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ ಜಿಯೋದಿಂದ ಜಿಯೋ., ಲ್ಯಾಂಡ್ ಲೈನಿಗೆ ಕಾಲ್ ಉಚಿತವಾಗಿರಲಿದೆ ಎಂದು ಜಿಯೋ ತಿಳಿಸಿದೆ. ಗ್ರಾಹಕರು ಈ ಪ್ಲ್ಯಾನ್ ನಲ್ಲಿ ಒಟ್ಟು 504 ಜಿಬಿ ಡೇಟಾ ಪಡೆಯಬಹುದು.
ಈ ಪ್ಲ್ಯಾನ್ ನಲ್ಲಿ ವರ್ಷಕ್ಕೆ 12 ಸಾವಿರ ನಿಮಿಷಗಳ ಕಾಲ ಬೇರೆ ಟೆಲಿಕಾ ಕಂಪನಿಯ ಸಿಮ್ ಗೆ ಕರೆ ಮಾಡಬಹುದಾಗಿದೆ. 100 ಉಚಿತ ಎಸ್‍ಎಂಎಸ್ ಜೊತೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಅಪ್ ಗಳು ಲಭ್ಯವಿದೆ.
ಈಗಾಗಲೇ ಜಿಯೋ ತನ್ನ ವೆಬ್‍ಸೈಟ್ ನಲ್ಲಿ ಈ ಪ್ಲ್ಯಾನ್ ಬಗ್ಗೆ ತಿಳಿಸಿದೆ. ಗ್ರಾಹಕರು ಗೂಗಲ್ ಪೇ, ಪೇಟಿಎಂ ಮೂಲಕವೂ ರಿಚಾರ್ಜ್ ಮಾಡಬಹುದಾಗಿದೆ.
1.5 ಜಿಬಿ ಡೇಟಾಗೆ ಎಷ್ಟು ದರವಿದೆ?
ಜಿಯೋ ಈಗಾಗಲೇ ವಿವಿಧ ವ್ಯಾಲಿಡಿಟಿ ಹೊಂದಿರುವ ಡೇಟಾ ಪ್ಯಾಕ್ ಬಿಡುಗಡೆ ಮಾಡಿದೆ. 555 ರೂ.(84 ದಿನ), 399 ರೂ.(56 ದಿನ), 199 ರೂ.(28 ದಿನ) ಪ್ಯಾಕ್ ಲಭ್ಯವಿದೆ.
ಮುಂಬೈ: ಸ್ಮಾರ್ಟ್ ಫೋನ್ ಆಲ್-ಇನ್-ಒನ್ ಪ್ಲಾನ್‍ಗಳ ಯಶಸ್ಸಿನ ನಂತರ, ಜಿಯೋದಿಂದ ಜಿಯೋಫೋನ್ ಆಲ್- ಇನ್-ಒನ್ ಪ್ಲಾನ್ ಘೋಷಣೆಯಾಗಿದೆ.
ಒಂದೇ ಪ್ಲಾನ್‍ನಲ್ಲಿ ಎಲ್ಲ ಸೇವೆಗಳೂ ಇರುವ ಅಪರಿಮಿತ ಪ್ಲಾನ್‍ಗಳು ಇದೀಗ ಜಿಯೋಫೋನ್‍ಗೂ ಲಭ್ಯವಾಗಿದ್ದು ಡೇಟಾ ಬಳಕೆದಾರರಿಗೆ ದೊಡ್ಡ ಕೊಡುಗೆ ಎಂಬಂತೆ ಕೇವಲ ರೂ. 30 ಪಾವತಿಸಿ, ಎರಡು ಪಟ್ಟು ಡೇಟಾವನ್ನು ಪಡೆಯಬಹುದಾಗಿದೆ.
ಅತಿ ಹೆಚ್ಚು ಪ್ರಮಾಣದ ಡೇಟಾ, ವಾಯ್ಸ್ ಹಾಗೂ ಮೌಲ್ಯವರ್ಧಿತ ಸೇವೆಗಳಿರುವ ಪ್ಲಾನ್‍ಗಳು ಈಗ ಇರುವ ಜಿಯೋಫೋನ್ ಪ್ಲಾನ್‍ಗಳೂ ಮುಂದುವರಿಯಲಿವೆ.
ಪ್ಲಾನ್‍ಗಳ ವೈಶಿಷ್ಟ್ಯವೇನು?
ಇವು ಸರಳ ಹಾಗೂ ಗೊಂದಲರಹಿತ ಪ್ಲಾನ್‍ಗಳಾಗಿದ್ದು, ಎಲ್ಲ ಸೇವೆಗಳೂ ಒಂದೇ ಪ್ಲಾನ್‍ನಲ್ಲಿ ಲಭ್ಯವಿರುವುದರ ಜೊತೆಗೆ ಅವುಗಳ ದರವನ್ನು ನೆನಪಿಟ್ಟುಕೊಳ್ಳುವುದೂ ಸುಲಭವಾಗಿದೆ. ಇವು ಕಡಿಮೆ ಬೆಲೆಯ ಪ್ಲಾನ್‍ಗಳಾಗಿದ್ದು ಅಪರಿಮಿತ ವಾಯ್ಸ್ ಹಾಗೂ ಡೇಟಾ ಒದಗಿಸುವ ರೂ. 75ರ ಪ್ಲಾನ್ ಭಾರತದಲ್ಲೇ ಅತಿ ಕಡಿಮೆ ಬೆಲೆಯದ್ದಾಗಿದೆ. ತಮ್ಮ ವರ್ಗದಲ್ಲೇ ಅತ್ಯುತ್ತಮವಾದ ಈ ಪ್ಲಾನ್‍ಗಳು ತಮ್ಮ ಸ್ಪರ್ಧೆಗಿಂತ 25 ಪಟ್ಟು ಹೆಚ್ಚಿನ ಮೌಲ್ಯ ನೀಡುತ್ತವೆ. ಈ ಅಪರಿಮಿತ ಪ್ಲಾನ್‍ಗಳು ಫೀಚರ್ ಫೋನ್ ವಿಭಾಗಕ್ಕೂ ಅಪರಿಮಿತ ಸೇವೆಗಳನ್ನು ನೀಡುತ್ತಿವೆ.
ನವದೆಹಲಿ: ಜಿಯೋ ಸೇವೆ ಆರಂಭಗೊಂಡ ಬಳಿಕ ಇಲ್ಲಿಯವರೆಗೂ ಬೇರೆ ಟೆಲಿಕಾಂ ಕಂಪನಿಗಳಿಗೆ ಉಚಿತವಾಗಿ ಲಭ್ಯವಿದ್ದ ಹೊರ ಹೋಗುವ ಕರೆಗಳಿಗೆ ದರ ಅನ್ವಯವಾಗಲಿದೆ.
ಹೌದು. ಅಚ್ಚರಿಯ ಬೆಳವಣಿಗೆಯಲ್ಲಿ ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿದೆ. ಇಲ್ಲಿಯವರೆಗೆ ಜಿಯೋ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ವಿಧಿಸುತ್ತಿರಲಿಲ್ಲ. ಆದರೆ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಜಿಯೋ ಮುಂದಾಗುತ್ತಿದೆ. ಬೇರೆ ಕಂಪನಿಗಳ ನಂಬರ್ ಗಳ ಕರೆಗಳಿಗೆ ಮಾತ್ರ ಶುಲ್ಕ ವಿಧಿಸಿದ್ದು ಜಿಯೋದಿಂದ ಜಿಯೋ ನಂಬರಿಗೆ ಹೋಗುವ ಕರೆಗಳು ಎಂದಿನಂತೆ ಉಚಿತವಾಗಿ ಇರಲಿದೆ.
ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವ ಸಾಧ್ಯತೆಯಿದೆ.
ಏನಿದು ಐಯುಸಿ?
ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.
2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಪ್ರಸ್ತುತ ಈಗ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿದೆ.
ಐಯುಸಿಯಿಂದಾಗಿ ಏರ್ ಟೆಲ್, ವೊಡಾಫೋನ್ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.
ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.
ಜಿಯೋ ವಿರೋಧ ಯಾಕೆ?
ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿದೆ.
ಜಿಯೋ ಕರೆ ಪ್ಲಾನ್ ಹೀಗಿದೆ
ಐಯುಸಿ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಯೋ ಕರೆಯ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ಖರೀದಿಸಿದ ಗ್ರಾಹಕರಿಗೆ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಹೇಳಿದೆ. 10 ರೂ ಪ್ಲಾನ್ ಹಾಕಿದರೆ 124 ನಿಮಿಷ(1 ಜಿಬಿ ಉಚಿತ), 20 ರೂ. ಪ್ಲಾನಿಗೆ 249 ನಿಮಿಷ(2ಜಿಬಿ ಡೇಟಾ), 50 ರೂ. 656 ನಿಮಿಷ(5ಜಿಬಿ ಡೇಟಾ), 100 ರೂ. ಪ್ಲಾನ್ ಹಾಕಿದರೆ 1,362 ನಿಮಿಷ(10 ಜಿಬಿ) ಮಾತನಾಡಬಹುದಾಗಿದೆ.
ಮುಂಬೈ: ಭಾರತ ಮತ್ತು ಜಪಾನ್ ನಡುವೆ ವಾಯ್ಸ್ ಓವರ್ ಎಲ್‍ಟಿಇ(ವಿಓಎಲ್‍ಟಿಇ) ಆಧರಿತ ಒಳಬರುವ (ಇನ್‍ಬೌಂಡ್) ಅಂತರಾಷ್ಟ್ರೀಯ ರೋಮಿಂಗ್ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭಿಸಿದೆ.
ಈ ಸೇವೆಯನ್ನು ಆರಂಭಿಸುವ ಮೂಲಕ ಭಾರತದಲ್ಲಿ ವಿಓಎಲ್‍ಟಿಇ ಆಧರಿತ ಅಂತರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಒದಗಿಸಿದ ಮೊದಲ 4ಜಿ ಮೊಬೈಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಈ ಸೇವೆಯನ್ನು ಬಳಸುವ ಅಂತರಾಷ್ಟ್ರೀಯ ಪ್ರಯಾಣಿಕರು ಎಚ್‍ಡಿ ವಾಯ್ಸ್ ಹಾಗೂ ಎಲ್‍ಟಿಇ ಅತಿವೇಗದ ಡೇಟಾ ಸಂಪರ್ಕವನ್ನು ಪಡೆಯಲಿದ್ದಾರೆ.
ಜಿಯೋನ ಸಂಪೂರ್ಣ-ಐಪಿ ಮತ್ತು 4ಜಿ ಜಾಲದಲ್ಲಿ ಅತಿವೇಗದ ಡೇಟಾ ಹಾಗೂ ವಾಯ್ಸ್ ಸೇವೆಗಳನ್ನು ಅಂತರಾಷ್ಟ್ರೀಯ ಪ್ರಯಾಣಿಕರೂ ಪಡೆಯಲು ಜಿಯೋ ವಿಓಎಲ್‍ಟಿಇ ಕಾಲಿಂಗ್ ಹಾಗೂ ಎಲ್‍ಟಿಇ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ ನೆರವಾಗಲಿದ್ದು, ಇದನ್ನು ಬಳಸಲಿರುವ ಮೊದಲ ಅಂತರಾಷ್ಟ್ರೀಯ ಮೊಬೈಲ್ ಸೇವಾ ಸಂಸ್ಥೆ ಜಪಾನಿನ ಕೆಡಿಡಿಐ ಕಾರ್ಪೊರೇಶನ್ ಆಗಲಿದೆ.
“ಇಡೀ ಭಾರತ ಮತ್ತು ಹಾಗೂ ಜಪಾನಿಗೆ ಭೇಟಿ ನೀಡುವವರಿಗೆ ಅತ್ಯುತ್ತಮ ಡೇಟಾ ಮತ್ತು ವಾಯ್ಸ್ ಅನುಭವವನ್ನು ನೀಡುವುದು ರಿಲಯನ್ಸ್ ಜಿಯೋ ಗುರಿ. ಭಾರತದ ಮೊದಲ ಅಂತರಾಷ್ಟ್ರೀಯ ವಿಓಎಲ್‍ಟಿಇ ಹಾಗೂ ಎಚ್‍ಡಿ ರೋಮಿಂಗ್ ಬಳಕೆದಾರರಾಗಿ ಕೆಡಿಡಿಐ ಗ್ರಾಹಕರನ್ನು ನಾವು ಜಿಯೋಗೆ ಸ್ವಾಗತಿಸುತ್ತೇವೆ,” ಎಂದು ರಿಲಯನ್ಸ್ ಜಿಯೋದ ಮಾರ್ಕ್ ಯಾರ್ಕೋಸ್ಕಿ ಹೇಳಿದರು.
ಸೆಪ್ಟೆಂಬರ್ 2018ರಲ್ಲಿ 20.6 ಎಂಬಿಪಿಎಸ್ ಡೌನ್‍ಲೋಡ್ ವೇಗದೊಡನೆ, ಟ್ರಾಯ್‍ನ ಮೈಸ್ಪೀಡ್ ಅಪ್ಲಿಕೇಶನ್‍ನಿಂದ ಕಳೆದ ಇಪ್ಪತ್ತು ತಿಂಗಳ ಅವಧಿಯಲ್ಲಿ ಸತತವಾಗಿ ದೇಶದ ಅತ್ಯಂತ ವೇಗದ ಜಾಲವೆಂಬ ಹೆಗ್ಗಳಿಕೆಯನ್ನು ಜಿಯೋ ಪಡೆದುಕೊಂಡಿದೆ. ದೇಶದಲ್ಲೇ ಅತ್ಯಂತ ದೊಡ್ಡದಾದ ಎಲ್‍ಟಿಇ ವ್ಯಾಪ್ತಿ ಹೊಂದಿರುವ ಹೆಗ್ಗಳಿಕೆಯನ್ನೂ ಜಿಯೋ ಹೊಂದಿದೆ.
ಪ್ರಾರಂಭವಾದ ಎರಡೇ ವರ್ಷಗಳಲ್ಲಿ 25.2 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಪಡೆದು, ವಿಶ್ವದ 9ನೇ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಜಿಯೋ ಬೆಳೆದಿದೆ. ಕಡಿಮೆ ಬೆಲೆಯಲ್ಲಿ ಡೇಟಾ ಪ್ಯಾಕ್ ಗಳನ್ನು ಘೋಷಿಸುವುದರೊಂದಿಗೆ ಭಾರತವನ್ನು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ರಾಷ್ಟ್ರವಾಗಿ ಜಿಯೋ ಈಗ ಬದಲಿಸಿದೆ.
ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಮತ್ತೊಮ್ಮೆ ಡೇಟಾ ಸಮರ ಆರಂಭವಾಗುವ ಸಾಧ್ಯತೆಯಿದೆ. ರಿಲಯನ್ಸ್ ಜಿಯೋ ದೀಪಾವಳಿ ಹಿನ್ನೆಲೆಯಲ್ಲಿ ಪ್ರೈಮ್ ಗ್ರಾಹಕರಿಗೆ 399 ರೂ. ಕ್ಯಾಶ್ ಬ್ಯಾಕ್ ಆಫರನ್ನು ಪ್ರಕಟಿಸಿದೆ.
399 ರೂ. ರಿಚಾರ್ಜ್ ಮಾಡಿದರೆ 50 ರೂ. 8 ವೋಚರ್ ನೀಡಲಾಗುವುದು. ಈ ವೋಚರ್ ಮೂಲಕ ಮುಂದೆ 50 ರೂ. ನಿಂದ ಆರಂಭವಾಗಿ 399 ರೂ. ವರೆಗಿನ ಆಫರನ್ನು ರಿಚಾರ್ಜ್ ಮಾಡಬಹುದು ಎಂದು ಜಿಯೋ ತಿಳಿಸಿದೆ.
84 ದಿನಗಳ ವ್ಯಾಲಿಡಿಟಿ ಹೊಂದಿರುವ 399 ರೂ. ರಿಚಾರ್ಜ್ ಮಾಡಿದರೆ ಪ್ರತಿದಿನ ಗರಿಷ್ಠ 1 ಜಿಬಿ ಡೇಟಾ ಬಳಕೆ ಮಾಡಬಹುದು. ಅಲ್ಲದೇ ಹೊರ ಹೊಗುವ ಎಲ್ಲ ಕರೆಗಳು ಉಚಿತವಾಗಿರಲಿದೆ ಎಂದು ತಿಳಿಸಿದೆ.
ಅಕ್ಟೋಬರ್ 12 ರಿಂದ 18ರವರೆಗೆ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ. ವೋಚರನ್ನು ಗ್ರಾಹಕರು ನವೆಂಬರ್ 15ರ ನಂತರ ಬಳಸಬಹುದಾಗಿದೆ.
ಬೆಂಗಳೂರು: 2016 ಸೆಪ್ಟೆಂಬರ್ ನಲ್ಲಿ ಆರಂಭಗೊಂಡ ರಿಲಿಯನ್ಸ್ ಜಿಯೋಗೆ ಈಗ ಒಂದು ವರ್ಷ ಪೂರ್ಣಗೊಂಡಿದೆ. ಜಿಯೋ ಆರಂಭವಾದ ಬಳಿಕ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಏನು ಬದಲಾವಣೆಯಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
1. ಮೊಬೈಲ್ ಡೇಟಾ ಬಳಕೆ:
ಆಗಸ್ಟ್ 2016 – 1 ತಿಂಗಳಿಗೆ 20 ಕೋಟಿ ಜಿಬಿ
ಆಗಸ್ಟ್, 2017 – 1 ತಿಂಗಳಿಗೆ 150 ಕೋಟಿ ಜಿಬಿ – ವಿಶ್ವದಲ್ಲೇ ಅತಿ ಹೆಚ್ಚು ಸಾಧ್ಯತೆ
2. ಡೇಟಾ ಶುಲ್ಕ
ಆಗಸ್ಟ್ 2016 – 1 ಜಿಬಿ ಡೇಟಾಗೆ 250 ರೂ.
ಆಗಸ್ಟ್ 2017 – 1 ಜಿಬಿಗೆ ಡೇಟಾ 50 ರೂ.ಗಿಂತ ಕಡಿಮೆ
3. ತಿಂಗಳ ಪೋಸ್ಟ್ ಪೇಯ್ಡ್ ಬಿಲ್
ಡಿಸೆಂಬರ್ 2016 – 349 ರೂ.
ಈಗ ರೂ.240 – 280 ರೂ.
4. ವಯರ್‍ಲೆಸ್ ಬ್ರಾಂಡ್‍ಬ್ಯಾಂಡ್ ಪಡೆದುಕೊಂಡ ಗ್ರಾಹಕರ ಸಂಖ್ಯೆ
ಆಗಸ್ಟ್ 2016 – 15.4 ಕೋಟಿ
ಜೂನ್ 2017 -28.2 ಕೋಟಿ
5. 4ಜಿ ಸ್ಮಾರ್ಟ್ ಫೋನ್ ಮಾರಾಟದ ಸಂಖ್ಯೆಯಲ್ಲಿ ಹೆಚ್ಚಳ
2016ರ ಪ್ರಥಮ ತ್ರೈಮಾಸಿಕ – ಶೇ.66
2017ರ ಪ್ರಥಮ ತ್ರೈಮಾಸಿಕ – ಶೇ.95
6. 4ಜಿ ಫೋನ್ ಫೋನ್ ಎಷ್ಟು ಮಾರಾಟ
ಮಾರ್ಚ್ 2016 – 47 ಲಕ್ಷ
ಮಾರ್ಚ್ 2017 -1.31 ಕೋಟಿ
7. ಎವರೇಜ್ ರೆವೆನ್ಯೂ ಪರ್ ಯೂಸರ್(ಎಆರ್‍ಪಿಯು)
ಡಿಸೆಂಬರ್‍ಗೆ ಅಂತ್ಯಗೊಂಡ ತ್ರೈಮಾಸಿಕ – 141 ರೂ.
ಮಾರ್ಚ್ ಗೆ ಅಂತ್ಯಗೊಂಡ ತ್ರೈಮಾಸಿಕ – 131 ರೂ.
8. ಸಿಮ್ ಆ್ಯಕ್ಟಿವೇಶನ್ ಅವಧಿ
ಆಗಸ್ಟ್ 2016 – ಕನಿಷ್ಟ 3 ದಿನ
ಆಗಸ್ಟ್ 2017 – ಕನಿಷ್ಟ 10 ನಿಮಿಷ
9. ಎವರೇಜ್ ರೆವೆನ್ಯೂ ಪರ್ ಯೂಸರ್(ವಾಯ್ಸ್)
ಆಗಸ್ಟ್ 2016 – 180 ರೂ.
ಆಗಸ್ಟ್ 2017 – 68 ರೂ.
ಮುಂಬೈ: 2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.
ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.
ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತು.
ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.
ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.
ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ 15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದಾರೆ.
The TV fee for every India's international match is around Rs. 43 crore, while for an IPL match it is now approximately Rs. 55 crore!🙄
2008ರಲ್ಲಿ ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಐಪಿಎಲ್ ಬಿಡ್ ಗೆದ್ದುಕೊಂಡಿತ್ತು. ಇದು 10 ವರ್ಷ ಅವಧಿಯದ್ದಾಗಿದ್ದು, ಒಟ್ಟು 8200 ಕೋಟಿ ರೂ. ನೀಡಿ ಬಿಡ್ ಗೆದ್ದಿತ್ತು. ಮೂರು ವರ್ಷ ಐಪಿಎಲ್ ಡಿಜಿಟಲ್ ಹಕ್ಕನ್ನು ನೋವಿ ಡಿಜಿಟಲ್ 2015 ರಲ್ಲಿ 302.2 ಕೋಟಿ ರೂ. ನೀಡಿ ಪಡೆದುಕೊಂಡಿತ್ತು.
ಬೇರೆ ದೇಶಗಳಿಗೆ ನಡೆಯುವ ಕೂಟಗಳಿಗೆ ಹೋಲಿಕೆ ಮಾಡಿದರೆ ಐಪಿಎಲ್ ಬಿಡ್ ಕಡಿಮೆ ಇದ್ದು, ಅಮೆರಿಕದಲ್ಲಿ ನಡೆಯುತ್ತಿರುವ ನ್ಯಾಷನಲ್ ಫುಟ್‍ಬಾಲ್ ಲೀಗ್(ಎನ್‍ಎಫ್‍ಎಲ್) ಒಂದು ವರ್ಷಕ್ಕೆ 6 ಶತಕೋಟಿ ಡಾಲರ್(ಅಂದಾಜು 38,442 ಸಾವಿರ ಕೋಟಿ ರೂ.) ಬಿಡ್ ಆಗುತ್ತಿದೆ.
ಮುಂಬೈ: ಎಲ್‍ಟಿಇ ಫೀಚರ್ ಫೋನ್ ಬಿಡುಗಡೆ ಮಾಡಿದ ಬಳಿಕ ಜಿಯೋ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಈಗ ದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ನೀಡಲು ಮುಂದಾಗಿದೆ.
ಹೌದು. ಉಚಿತ ವೈಫೈ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಜಿಯೋ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಸಚಿವಾಲಯ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೂ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಈ ರೀತಿಯ ಪ್ರಸ್ತಾವನೆಗಳನ್ನು ಪಾರದರ್ಶಕವಾಗಿ ಟೆಂಡರ್ ಕರೆದು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೇಶದ 38 ಸಾವಿರ ಕಾಲೇಜುಗಳಿಗೆ (ಟೆಕ್ನಿಕಲ್ ಮತ್ತು ಟೆಕ್ನಿಕಲ್ ಹೊರತಾದ) ವೈಫೈ ನೀಡುವ ಪ್ರಸ್ತಾವನೆಯನ್ನು ಜಿಯೋ ಕಳೆದ ತಿಂಗಳು ನೀಡಿದೆ. ಆನ್‍ಲೈನ್ ಮೂಲಕ ಮಾಹಿತಿಗಳನ್ನು ಹಂಚಲು ಕೇಂದ್ರ ಸರ್ಕಾರ ಎಲ್ಲ ಕಾಲೇಜುಗಳಿಗೆ ವೈಫೈ ನೀಡಲು ಮುಂದಾಗುತ್ತಿದೆ. ಆದರೆ ಈ ರೀತಿಯ ಪ್ರಸ್ತಾವನೆ ಇದೆ ಮೊದಲ ಬಾರಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಜಿಯೋ ಯಾವುದೇ ಹಣವನ್ನು ಪಡೆದುಕೊಳ್ಳುವುದಿಲ್ಲ. ಆದರೆ ಬೇರೆ ಕಂಪೆನಿಗಳಿಗೆ ಅವಕಾಶ ನೀಡದೇ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಪಾರದರ್ಶಕವಾಗಿ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು.
ಜಿಯೋ ಉಚಿತ ವೈಫೈ ನೀಡುವ ಸಂಬಂಧವಾಗಿ ಕಳೆದ ತಿಂಗಳು ಪವರ್ ಪಾಯಿಂಟ್ ಮೂಲಕ ವಿವರಣೆ ನೀಡಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಜಿಯೋ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಮಾನವ ಸಂಪನ್ಮೂಲ ಸಚಿವಾಲಯ ಕೇಂದ್ರಿಯ ವಿವಿಗಳಿಗೆ ಉಚಿತ ವೈಫೈ ನೀಡಲು ಪ್ರಸ್ತಾವನೆ ಸಲ್ಲಿಸಿದ್ದು ಈ ಯೋಜನೆ ಈ ವರ್ಷವೇ ಪೂರ್ಣವಾಗುವ ಸಾಧ್ಯತೆಯಿದೆ. ಸಚಿವ ಪ್ರಕಾಶ್ ಜಾವ್ಡೇಕರ್ ಕೆಲ ದಿನಗಳ ಹಿಂದೆ ಆಗಸ್ಟ್ 31ರ ಒಳಗಡೆ ದೇಶದ 38 ವಿವಿಗಳಿಗೆ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.
ಆರಂಭದಲ್ಲಿ ವೈಫೈ ಸಿಗೋ ವಿವಿಗಳು
ದೆಹಲಿ, ವಿಶ್ವವಿದ್ಯಾಲಯ
ಬನರಾಸ್, ಹಿಂದೂ ವಿಶ್ವವಿದ್ಯಾಲಯ
ಆಲಿಗಢ, ಮುಸ್ಲಿಂ ವಿಶ್ವವಿದ್ಯಾಲಯ
ಜಮಿಯಾ ಮಿಲಿಯಾ ಇಸ್ಲಾಮಿಯಾ , ವಿಶ್ವವಿದ್ಯಾಲಯ
ಕೇಂದ್ರಿಯ ವಿಶ್ವವಿದ್ಯಾಲಯ, ಹಿಮಾಚಲಪ್ರದೇಶ
ಕೇಂದ್ರಿಯ ವಿಶ್ವವಿದ್ಯಾಲಯ, ದಕ್ಷಿಣ ಬಿಹಾರ
ಕೇಂದ್ರಿಯ ವಿಶ್ವವಿದ್ಯಾಲಯ, ಜಮ್ಮು
ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರ ಡೇಟಾ ಲೀಕ್ ಆಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
magicapk.com ತಾಣ ಜಿಯೋ ಬಳಕೆದಾರರ ಮಾಹಿತಿಯನ್ನು ಪ್ರಕಟಿಸಿದೆ. ಆದರೆ ಜಿಯೋ ಈ ಸುದ್ದಿಯನ್ನು ತಿರಸ್ಕರಿಸಿದ್ದು, ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಆಗಿದ್ದು ಏನು?
ಭಾನುವಾರ ಸಂಜೆ ಕೆಲ ಜಿಯೋ ಬಳಕೆದಾರರು ನಮ್ಮ ಮಾಹಿತಿ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪ್ರಕಟಿಸಿದ್ದರು. ಈ ಪೋಸ್ಟ್, ಟ್ವೀಟ್ ಗಳು ಸಂಚಲನ ಮೂಡಿಸಿದ ಬಳಿಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು.
ಈ ವೆಬ್‍ಸೈಟ್ ನಲ್ಲಿರುವ ಮಾಹಿತಿಗಳು ನಿಜವಾಗಿಯೂ ಸೋರಿಕೆಯಾಗಿದ್ಯಾ ಎಂದು ಪರಿಶೀಲನೆ ನಡೆಸಿದ್ದು, ಈ ವೇಳೆ ನಮೂದಿಸಿದ ಮೊಬೈಲ್ ನಂಬರ್ ಮತ್ತು ಅದಕ್ಕೆ ಸಂಬಂಧಿಸಿದ ಗ್ರಾಹಕರ ಸಂಖ್ಯೆ ತಾಳೆ ಆಗುತ್ತಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಹಾಗಾದ್ರೆ ಸೋರಿಕೆಯಾಗಿದ್ದು ಹೇಗೆ?
ಥರ್ಡ್ ಪಾರ್ಟಿ ವೆಬ್‍ಸೈಟ್ ಮೂಲಕ ರಿಚಾರ್ಜ್ ಮಾಡಲು ಸಾಧ್ಯವಿದೆ. ಹೀಗಾಗಿ ಈ ವೆಬ್‍ಸೈಟ್ ಗಳಲ್ಲಿ ರಿಚಾರ್ಜ್ ಮಾಡಿದ ಗ್ರಾಹಕರ ಮೊಬೈಲ್ ಸಂಖ್ಯೆಗಳು ಲೀಕ್ ಆಗಿರಬಹುದು ಎಂದು ಕೆಲ ಮಾಧ್ಯಮಗಳು ವರದಿ ಪ್ರಕಟಿಸಿದೆ.
ಸಸ್ಪೆಂಡ್ ಆಗಿದೆ ವೆಬ್‍ಸೈಟ್:
ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಮಾಡಿದ್ದೇವೆ ಎಂದು ಪ್ರಕಟಿಸಿದ ಬಳಿಕ ಈಗ ಈ ವೆಬ್‍ಸೈಟ್ ಅಮಾನತು ಆಗಿದ್ದು, ಯಾವುದೇ ಪುಟ ಓಪನ್ ಆಗುತ್ತಿಲ್ಲ. ಐಪಿ ವಿಳಾಸ ಚೆಕ್ ಮಾಡಿದಾಗ ಮುಂಬೈ ಮೂಲದ ವೆಬ್‍ಸೈಟ್ ಇದಾಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಡೊಮೈನ್ ರಿಜಿಸ್ಟ್ರರ್ ಆಗಿದೆ. ವೆಬ್‍ಸೈಟ್ ಸಸ್ಪೆಂಡ್ ಆಗಿದ್ಯಾ ಅಥವಾ ಬಹಳಷ್ಟು ಜನ ಭೇಟಿ ನೀಡಿದ್ದರಿಂದ ಹೆವಿ ಟ್ರಾಫಿಕ್ ಆಗಿ ಪೇಜ್ ಓಪನ್ ಆಗುತ್ತಿಲ್ಲವೇ ಎನ್ನುವುದು ದೃಢಪಟ್ಟಿಲ್ಲ
ಸೋರಿಕೆಯಾಗಿಲ್ಲ:
ಗ್ರಾಹಕರ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಗ್ರಾಹಕರ ಮಾಹಿತಿ ನಾವು ಸುರಕ್ಷಿತವಾಗಿ ಇಟ್ಟಕೊಂಡಿದ್ದೇವೆ. ಈಗಾಗಲೇ ನಾವು ಈ ಸಂಬಂಧ ವೆಬ್‍ಸೈಟ್ ವಿರುದ್ಧ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಜಿಯೋದ ವಕ್ತಾರರು ತಿಳಿಸಿದ್ದಾರೆ.
ಮುಂಬೈ: ರಿಲಯನ್ಸ್ ಜಿಯೋ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೀಚರ್ ಫೋನ್ ತಯಾರಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಹೌದು. ಜಿಯೋ 500 ರೂ. ಬೆಲೆಯ ಫೀಚರ್ ಫೋನ್ ತಯಾರಿಸಿದೆ ಎಂದು ಮಾಧ್ಯಮವೊಂದು ಸುದ್ದಿಯನ್ನು ಪ್ರಕಟಿಸಿದೆ. ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರೀನ್ ವಾರ್ಷಿಕ ಸಭೆಯ ವೇಳೆ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಜಿಯೋ ಫೀಚರ್ ಫೋನಿನ ಬೆಲೆ ಅಂದಾಜು 500 ರೂ. ಇರಲಿದೆ. 2ಜಿ ಫೋನ್ ಹೊಂದಿರುವ ಗ್ರಾಹಕರು ನೇರವಾಗಿ 4ಜಿ ಫೋನ್ ಗಳನ್ನು ಸುಲಭವಾಗಿ ಪಡೆಯಲು ಕಡಿಮೆ ಬೆಲೆಯಲ್ಲಿ ಈ ಫೋನ್ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ ಎಂದು ಟೆಲಿಕಾಂ ವಲಯದ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾಧ್ಯಮಗಳು ಜಿಯೋ ಕಂಪೆನಿಯನ್ನು ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕಡಿಮೆ ಬೆಲೆಯಲ್ಲಿ ಯಾಕೆ?
ಜಿಯೋ ಈಗ ಹೊಸ ಗ್ರಾಹಕರನ್ನು ಸೆಳೆಯುಲು ಮಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಆರಂಭವಾದ ಬಳಿಕ ನಂತರದ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಯೋ ಈಗ 2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಆಕರ್ಷಿಸಲು ಫೀಚರ್ ಫೋನ್ ತಯಾರಿಸಿದೆ. ಅಷ್ಟೇ ಅಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ 4ಜಿ ಎಲ್‍ಟಿಇ ಬೆಂಬಲಿಸುವ ಫೋನ್ ಗಳಿದ್ದರೂ ಇವುಗಳ ಬೆಲೆ ಜಾಸ್ತಿ ಇರುವ ಕಾರಣ ಜಿಯೋ ಈಗ ಫೋನ್ ತಯಾರಿಸಿ ಬಿಡುಗಡೆ ಮಾಡಲು ಮುಂದಾಗಿದೆ.
ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಈ ವರ್ಷದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪೆನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಈ ಹಿಂದೆ ಮಾಧ್ಯಮವೊಂದು ವರದಿ ಮಾಡಿತ್ತು.
ಏನಿದು ವಾಯ್ಸ್ ಓವರ್ ಎಲ್‍ಟಿಇ?
ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್‍ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಹಲವು ಫೋನ್ ಗಳು ಎಲ್‍ಟಿಇ ಬೆಂಬಲಿಸದ ಕಾರಣ ಜಿಯೋ ಸಿಮ್ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಏರ್‍ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.