Tag: Reliance Communications

  • ರಿಲಯನ್ಸ್ ಕಮ್ಯೂನಿಕೇಷನ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

    ರಿಲಯನ್ಸ್ ಕಮ್ಯೂನಿಕೇಷನ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

    ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ.

    ಅಂಬಾನಿ ಜೊತೆಗೆ ಛಾಯಾ ವೀರಾನಿ, ರೈನಾ ಕರಣಿ, ಮಂಜರಿ ಕಾಕರ್ ಮತ್ತು ಸುರೇಶ್ ರಂಗಾಚಾರ್ ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮುಂಬೈ ಷೇರುಪೇಟೆ ರಿಲಯನ್ಸ್ ಕಮ್ಯೂನಿಕೇಷನ್ ಶುಕ್ರವಾರ ತಿಳಿಸಿದೆ.

    ಅಂಬಾನಿ, ಛಾಯಾ ವೀರಾನಿ, ಮಂಜರಿ ಕಾಕರ್ ನ.15ರಂದು, ರೈನಾ ಕರಣಿ ನ.14ರಂದು ಮತ್ತು ಸುರೇಶ್ ರಂಗಾಚಾರ್ ನ. 13ರಂದು ರಾಜೀನಾಮೆ ನೀಡಿದ್ದಾರೆ.

    ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅ. 4ರಂದೇ ರಾಜೀನಾಮೆ ನೀಡಿದ್ದರು. ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ರಿಲಯನ್ಸ್ ಕಮ್ಯೂನಿಕೇಷನ್ ಜುಲೈ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 30,142 ಕೋಟಿ ರೂ. ನಷ್ಟ ಅನುಭವಿಸಿದೆ.  ಇದನ್ನೂ ಓದಿ: ಹೃದಯ ತುಂಬಿ ಬಂತು – ಜೈಲು ಶಿಕ್ಷೆಯಿಂದ ಪಾರು ಮಾಡಿದ ಅಣ್ಣನಿಗೆ ಅನಿಲ್ ಅಂಬಾನಿ ಧನ್ಯವಾದ

    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಲಾಗಿದೆ.

    ಭಾರತಿ ಏರ್ ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2537 ಕೋಟಿ ರೂ. ಪಾವತಿಸಬೇಕಾಗಿದೆ. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • 4 ವಾರದಲ್ಲಿ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ

    4 ವಾರದಲ್ಲಿ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ

    ನವದೆಹಲಿ: ಎರಿಕ್ಸನ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ (ಆರ್‍ಕಾಂ) ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿಗೆ ಭಾರೀ ಹಿನ್ನಡೆಯಾಗಿದ್ದು, ದೋಷಿಯಾಗಿರುವ ಅನಿಲ್ ಅಂಬಾನಿ ಮತ್ತು ಇಬ್ಬರು ನಿರ್ದೇಶಕರು ದಂಡ ಪಾವತಿಸಬೇಕು, ಇಲ್ಲದೇ ಇದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

    ಎರಿಕ್ಸನ್ ಕಂಪನಿಗೆ ನಾಲ್ಕು ವಾರದ ಒಳಗಾಗಿ 453 ಕೋಟಿ ರೂ. ಪಾವತಿಸಬೇಕು. ಒಂದು ವೇಳೆ ಹಣ ಪಾವತಿಸದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ದ್ವಿಸದಸ್ಯ ಪೀಠ ಸೂಚಿಸಿದೆ.

    ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಆರ್.ಎಫ್.ನಾರಿಮನ್ ಮತ್ತು ವಿನೀತ್ ಸಹರಾನ್ ಅವರು ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಜೊತೆ ರಿಲಯನ್ಸ್ ಟೆಲಿಕಾಂ ಮುಖ್ಯಸ್ಥ ಸತೀಶ್ ಸೇಠ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಮುಖ್ಯಸ್ಥೆ ಛಾಯಾ ವೈರನಿ ಸಹ ದೋಷಿಯಾಗಿದ್ದಾರೆ ಎಂದು ಹೇಳಿ ಅವರಿಗೂ ದಂಡ ವಿಧಿಸಿದ್ದಾರೆ.

    ರಿಲಯನ್ಸ್ ಕಮ್ಯುನಿಕೇಷನ್, ರಿಲಯನ್ಸ್ ಟೆಲಿಕಮ್ಯುನಿಕೇಶನ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್‍ಗೆ ತಲಾ 1 ಕೋಟಿ ರೂ. ಹಣವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ಗೆ ಪಾವತಿಸಬೇಕು. ಇಲ್ಲವಾದಲ್ಲಿ ಈ ಕಂಪೆನಿಗಳ ಅಧ್ಯಕ್ಷರು ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೀಠ ಬಿಸಿ ಮುಟ್ಟಿಸಿದೆ. ಇದರ ಜೊತೆಯಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಟ್ಟಿರುವ 118 ಕೋಟಿ ರೂ. ಹಣವನ್ನು ಎರಿಕ್ಸನ್ ಕಂಪನಿಗೆ ಒಂದು ವಾರದ ಒಳಗಡೆ ಪಾವತಿಸಬೇಕೆಂದು ಪೀಠ ಸೂಚಿಸಿದೆ.

    ಎರಿಕ್ಸನ್ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ. ಪಾವತಿಸಲು ಈ ಹಿಂದೆ 120 ದಿನಗಳ ಅವಕಾಶ ನೀಡಲಾಗಿತ್ತು. ಮತ್ತೆ 60 ದಿನಗಳ ಅವಕಾಶವನ್ನು ವಿಸ್ತರಿಸಿದರೂ ಹಣವನ್ನು ಪಾವತಿಸದೇ ತನ್ನ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಿಲಯನ್ಸ್ ಸಲ್ಲಿಸಿದ ಕ್ಷಮಾಯಾಚನೆಯನ್ನು ಕೋರ್ಟ್ ತಿರಸ್ಕರಿಸಿದೆ.

    ಏನಿದು ನ್ಯಾಯಾಂಗ ನಿಂದನೆ ಕೇಸ್?
    ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್‍ಗೆ ರಿಲಯನ್ಸ್ ಕಮ್ಯುನಿಕೇಷನ್ಸ್ 550 ಕೋಟಿ ರೂ. ಪಾವತಿಸಬೇಕಿತ್ತು. ಈ ಹಣವನ್ನು ಅಂಬಾನಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಈ ಹಿಂದೆ ಸುಪ್ರೀಂ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಬಾಕಿ ಹಣವನ್ನು 2018ರ ಸೆ.30ರ ಒಳಗಡೆ ಪಾವತಿಸುವಂತೆ ಆರ್‍ಕಾಂಗೆ ಸೂಚಿಸಿತ್ತು. ಈ ಗಡುವಿನ ಒಳಗಡೆ ಹಣವನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ಅಕ್ಟೋಬರ್ ನಲ್ಲಿ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಈ ವೇಳೆ ಕೋರ್ಟ್ ಡಿಸೆಂಬರ್ 15ರ ಒಳಗಡೆ ಹಣವನ್ನು ಪಾವತಿಸಬೇಕೆಂದು ಆದೇಶಿಸಿತ್ತು. ಈ ಆದೇಶವನ್ನೂ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ರಿಲಯನ್ಸ್ ಕಮ್ಯೂನಿಕೇಶನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲದ ಸುಳಿಯಲ್ಲಿರೋ ತಮ್ಮನ ರಕ್ಷಣೆಗೆ ಧಾವಿಸಿದ ಅಣ್ಣ ಮುಕೇಶ್: ಎಷ್ಟು ಕೋಟಿಗೆ ಆರ್‌ಕಾಂ ಖರೀದಿ?

    ಸಾಲದ ಸುಳಿಯಲ್ಲಿರೋ ತಮ್ಮನ ರಕ್ಷಣೆಗೆ ಧಾವಿಸಿದ ಅಣ್ಣ ಮುಕೇಶ್: ಎಷ್ಟು ಕೋಟಿಗೆ ಆರ್‌ಕಾಂ ಖರೀದಿ?

    ಮುಂಬೈ: ಸಾಲದ ಸುಳಿಗೆ ಸಿಲುಕಿರುವ ಅನಿಲ್ ಅಂಬಾನಿ ರಿಲಯನ್ಸ್ ಕಮ್ಯೂನಿಕೇಶನ್ಸ್(ಆರ್‌ಕಾಂ) ಸ್ಪೆಕ್ಟ್ರಂ ಟವರ್, ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಮತ್ತು ಇತರೆ ವೈರ್‌ಲೆಸ್‌ ಸಂಪತ್ತನ್ನು ಖರೀದಿಸಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯ ಜಿಯೋ ಇನ್ಫೋಕಾಂ ಲಿಮಿಟೆಡ್‍ಗೆ ತನ್ನ ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಿಲಯನ್ಸ್ ಕಮ್ಯೂನಿಕೇಷನ್ ಗುರುವಾರ ತಿಳಿಸಿದೆ.

    ಎಷ್ಟು ಕೋಟಿ ರೂ.ಗಳ ಒಪ್ಪಂದ ನಡೆದಿದೆ ಎನ್ನುವುದನ್ನು ಎರಡೂ ಕಂಪೆನಿಗಳು ಬಹಿರಂಗ ಪಡಿಸಿಲ್ಲ. ಆದರೆ ಬ್ಯಾಂಕಿಂಗ್ ಮೂಲಗಳ ಪ್ರಕಾರ 24 ಸಾವಿರ ಕೋಟಿಗಳಿಂದ 25 ಸಾವಿರ ಕೋಟಿ ರೂ.ಗಳವರೆಗೆ ಈ ಒಪ್ಪಂದ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಒಪ್ಪಂದ 2018ರ ಮಾರ್ಚ್ ಒಳಗಡೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

    45 ಸಾವಿರ ಕೋಟಿ ರೂ. ಸಾಲ ಸುಳಿಗೆ ಆರ್‌ಕಾಂ ಸಿಲುಕಿದ್ದು, ರಿಲಯನ್ಸ್ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.  ಇದನ್ನೂ ಓದಿ: ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

    ಆರ್‌ಕಾಂಗೆ ಸೇರಿದ ಸಂಪತ್ತು ಮಾರಾಟ ಮಾಡಿ ಬ್ಯಾಂಕ್‍ಗಳ 40 ಸಾವಿರ ಕೋಟಿ ರೂ. ಸಾಲವನ್ನು ಪಾವತಿ ಮಾಡಲಾಗುವುದು ಎಂದು ಅನಿಲ್ ಅಂಬಾನಿ ಮೊನ್ನೆ ತಿಳಿಸಿದ್ದರು. ಆರ್‌ಕಾಂ ಸೇರಿದ ಸಂಪತ್ತು ಖರೀದಿಯಿಂದ ತನ್ನ ಮನೆ ಮನೆಗಳಿಗೆ ಫೈಬರ್, ವೈಯರ್‍ಲೆಸ್ ಸೇವೆ ಮತ್ತು ಉದ್ಯಮ ಸೇವೆ ವಿಸ್ತರಿಸಲು ಸಹಾಯವಾಗಲಿದೆ ಎಂದು ಜಿಯೋ ತಿಳಿಸಿದೆ.

    2016 ರ ಸೆಪ್ಟೆಂಬರ್ ನಲ್ಲಿ ಸೇವೆ ಆರಂಭಿಸಿದ ಜಿಯೋಗೆ ದೇಶದಲ್ಲಿ 16 ಕೋಟಿ ಗ್ರಾಹಕರಿದ್ದು, ನವೆಂಬರ್ ಮೊದಲ ವಾರದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿತ್ತು.

    ಇನ್ನು ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ತಿಳಿಸಿತ್ತು.

    ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇತರ ಕಂಪೆನಿಗಳಿಗೆ ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗ್ ಅರ್ಜಿ ಹಾಕಿದರೆ ಪೋರ್ಟಿಂಗ್ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿತ್ತು.

    ನಷ್ಟದಲ್ಲಿರುವ ಆರ್‌ಕಾಂ  ಇತ್ತೀಚೆಗೆ ಏರ್‍ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತಪ್ರದೇಶ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ. ಇದನ್ನೂ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

  • ಡಿಸೆಂಬರ್ 1ರಿಂದ ರಿಲಯನ್ಸ್ 2ಜಿ ಕರೆ ಸ್ಥಗಿತ

    ಡಿಸೆಂಬರ್ 1ರಿಂದ ರಿಲಯನ್ಸ್ 2ಜಿ ಕರೆ ಸ್ಥಗಿತ

    ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಇನ್ನು ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು ಎಂದು ಹೇಳಿದೆ. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ಹೇಳಿದೆ.

    ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇತರ ಕಂಪೆನಿಗಳಿಗೆ ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗ್ ಅರ್ಜಿ ಹಾಕಿದರೆ ಪೋರ್ಟಿಂಗ್ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿದೆ.

    2ಜಿ ಮತ್ತು 4ಜಿ ಸೇವೆಗಳನ್ನು ಒದಗಿಸುತ್ತಿರುವ ರಿಲಯನ್ಸ್ 46 ಸಾವಿರ ಕೋಟಿ ರೂ. ನಷ್ಟದಲ್ಲಿದೆ. ಇತ್ತೀಚೆಗೆ ಏರ್‍ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ.

    ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತಪ್ರದೇಶ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ.