Tag: Rehabilitation Center

  • ತೌಕ್ತೆ ಚಂಡಮಾರುತಕ್ಕೆ ಕೃಷಿಕ ಸಾವು

    ತೌಕ್ತೆ ಚಂಡಮಾರುತಕ್ಕೆ ಕೃಷಿಕ ಸಾವು

    ಉಡುಪಿ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದಿಂದ ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಬಿದ್ದಿದೆ. ಹೀಗಾಗಿ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ.

    ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಕೆಳಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಗೆ, ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ, 5 ತಾತ್ಕಾಲಿಕ ಶೆಡ್‍ಗಳಿಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ.

    ಜಿಲ್ಲೆಯಾದ್ಯಂತ ಸುಮಾರು 50 ತೆಂಗಿನಮರಗಳಿಗೆ ಹಾನಿಯಾಗಿದ್ದು, ಮರಗಳು, ರೆಂಬೆ ಕೊಂಬೆ ಧರೆಗೆ ಉರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದದ ಆಗಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದ್ದು, ಕೂಡಲೇ ತೆರವುಗೊಳಿಸಲಾಯ್ತು. ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕುಂದಾಪುರ ತಾಲೂಕಿನ 7 ಕುಟುಂಬಗಳನ್ನು ಸಂಬಂಧಿಕರ ಮನೆಗೆ, ಕಾಪು ತಾಲೂಕಿನ ಒಂದು ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

    ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಮಾರು 50 ರಿಂದ 60 ಜನಗಳಿಗೆ ಪರಿಸ್ಥಿತಿ ಅವಲೋಕಿಸಿ ಕೋಡಿ ಶಾಲೆಯಲ್ಲಿ ಆರಂಭಿಸಿದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಉಡುಪಿ ಕಾಪುವಿನಲ್ಲಿ ಈಗಾಗಲೇ ಸಮುದ್ರ ತೀರದ ಜನಗಳಿಗೆ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

  • ಕುಡಿತ ಬಿಡಿಸಲು ಸೇರಿಸಿದ್ದ ಕೇಂದ್ರದಲ್ಲೇ ಯುವಕ ಸಾವು!

    ಕುಡಿತ ಬಿಡಿಸಲು ಸೇರಿಸಿದ್ದ ಕೇಂದ್ರದಲ್ಲೇ ಯುವಕ ಸಾವು!

    ಬೆಂಗಳೂರು: ಪುನರ್ವಸತಿ ಕೇಂದ್ರದಲ್ಲಿ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.

    ಪ್ರೇಮ್(20) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಪ್ರೇಮ್ ಪೋಷಕರು ಕುಡಿತ ಬಿಡಿಸಲು 25 ದಿನಗಳ ಹಿಂದೆ ಸುಂಕದಕಟ್ಟೆಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಆದರೆ ಶುಕ್ರವಾರ ಪ್ರೇಮ್ ಕೇಂದ್ರದಲ್ಲಿಯೇ ಸಾವನ್ನಪ್ಪಿದ್ದಾನೆ.

    ಮೃತ ಪ್ರೇಮ್ ಅಮೇಜಾನ್‍ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಪ್ರೇಮ್ ಕುಡಿತ ಹಾಗೂ ಗಾಂಜಾ ಚಟಕ್ಕೆ ಬಿದ್ದಿದ್ದನು. ಹೀಗಾಗಿ ಕುಡಿತ ಬಿಡಿಸಲು ಪೋಷಕರು ಸುಂಕದಕಟ್ಟೆಯಲ್ಲಿರುವ ಮದ್ಯಪಾನ, ಮಾದಕ ವ್ಯಸನಿಗಳ ಹಾಗೂ ಮನೋರೋಗ ಚಿಕಿತ್ಸಾ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

    ಚಿಕಿತ್ಸೆ ವೇಳೆ ಪುನರ್ವಸತಿ ಕೇಂದ್ರದವರೇ ವಯರ್ ನಿಂದ ಪ್ರೇಮ್ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ನಮ್ಮ ಮಗನ ಕತ್ತಿನ ಮೇಲೆ ಗಾಯದ ಗುರುತುಗಳಿವೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರೇಮ್ ಪೋಷಕರು ಪ್ರಕರಣ ದಾಖಲಿಸಿದ್ದಾರೆ.