Tag: Registration Certificate

  • DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕೊರೊನಾ ಹಿನ್ನೆಲೆ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ವಾಹನ ಪರ್ಮಿಟ್‍ಗಳ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ದೇಶನ ನೀಡಿದ್ದು, ವಾಹನಗಳ ಫಿಟ್ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಹಾಗೂ ಇತರೆ ದಾಖಲೆಗಳ ಅವಧಿಯನ್ನು ಕೊರೊನಾ ಕಾರಣದಿಂದಾಗಿ ವಿಸ್ತರಿಸಲಾಗಿದೆ. ಫೆಬ್ರವರಿ 1, 2020 ರಿಂದ ಮಾರ್ಚ್ 21, 2021ರೊಳಗೆ ಅವಧಿ ಮುಗಿಯುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಅರ್ಜಿ ಸಲ್ಲಿಸಿದವರಿಗೆ ಕೊರೊನಾ ಕಾರಣದಿಂದಾಗಿ ದಾಖಲೆಗಳನ್ನು ನವೀಕರಿಸುವಲ್ಲಿ ವಿಳಂಬವಾಗಿದ್ದು, ಇವುಗಳಿಗೂ ಫೆಬ್ರವರಿ 1ಕ್ಕೆ ಮುಕ್ತಾಯಗೊಳ್ಳುವ ದಾಖಲೆಗಳ ಅವಧಿಯನ್ನು ಜೂನ್ 30ರ ವರೆಗೆ ಮಾನ್ಯವೆಂದು ಪರಿಗಣಿಸಬಹದು ಎಂದು ತಿಳಿಸಲಾಗಿದೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕರು, ವಾಹನ ಸವಾರರು, ಇತರ ಸಂಸ್ಥೆಗಳಿಗೆ ದಾಖಲೆಗಳ ಕುರಿತು ಕಿರುಕುಳ, ತೊಂದರೆ ನಿಡದೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಸಲಹಾ ಪತ್ರವನ್ನು ಜಾರಿಗೆ ತರಬೇಕೆಂದು ಸಚಿವಾಲಯ ಮನವಿ ಮಾಡಿದೆ.

  • ಇಂದಿನಿಂದ ಡಿಎಲ್‌, ಆರ್‌ಸಿ ಕಾರ್ಡ್‌ ಬದಲು ಇ- ಕಾಪಿ ತೋರಿಸಿ – 5 ಬದಲಾವಣೆ ಓದಿ

    ಇಂದಿನಿಂದ ಡಿಎಲ್‌, ಆರ್‌ಸಿ ಕಾರ್ಡ್‌ ಬದಲು ಇ- ಕಾಪಿ ತೋರಿಸಿ – 5 ಬದಲಾವಣೆ ಓದಿ

    ನವದೆಹಲಿ: ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಇನ್ನು ಮುಂದೆ ವಾಹನ ಸವಾರರು/ ಚಾಲಕರು ಚಾಲನಾ ಪರವಾನಗಿ (ಡಿಎಲ್‌) ಮತ್ತು ರಿಜಿಸ್ಟ್ರೇಷನ್‌ ಸರ್ಟಿಫಿಕೆಟ್‌ (ಆರ್‌ಸಿ) ಕಾರ್ಡ್‌ಗಳ ಬದಲು ಇ–ಕಾಪಿಗಳನ್ನು ತೋರಿಸಬಹುದು.

    1989 ರಿಂದ 2020ರವರೆಗಿನ ಮೋಟಾರು ವಾಹನ ನಿಯಮಾವಳಿಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು. ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೋಟಿಫಿಕೇಶನ್‌ ಹೊರಡಿಸಿದ್ದು ಇಂದಿನಿಂದ ಹೊಸ ಬದಲಾವಣೆ ಜಾರಿಗೆ ಬರಲಿದೆ.

    ಏನು ಬದಲಾವಣೆ?
    1. ಕಾರ್ಡ್‌ ತೋರಿಸುವ ಅಗತ್ಯವಿಲ್ಲ:
    ಇಲ್ಲಿಯವರೆಗೆ ಡಿಎಲ್‌ ಮತ್ತು ಆರ್‌ಸಿ ಕಾರ್ಡ್‌ಗಳನ್ನು ಸವಾರರು ಜೊತೆಯಲ್ಲೇ ಇಟ್ಟುಕೊಳ್ಳಬೇಕಿತ್ತು. ಸಂಚಾರಿ ಪೊಲೀಸರ ತಪಾಸಣೆಯ ವೇಳೆ ಇದನ್ನು ತೋರಿಸಬೇಕಿತ್ತು. ಆದರೆ ಇನ್ನು ಮುಂದೆ ತಪಾಸಣೆಯ ವೇಳೆ ಇ-ಕಾಪಿಗಳನ್ನು ತೋರಿಸಬಹುದಾಗಿದೆ.

    ಇಷ್ಟೇ ಅಲ್ಲದೇ ಒಂದು ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಕೇಸ್‌ ದಾಖಲಾದಾಗ ಇ -ದಾಖಲೆಗಳನ್ನು ಅಧಿಕಾರಿಗಳು ಸೀಜ್‌ ಮಾಡಬಹುದು. ಇದರ ಜೊತೆ ಇ-ಚಲನ್‌ ಮೂಲಕ ದಂಡವನ್ನು ಪಾವತಿಸಬಹುದು. ಸರ್ಕಾರದ ಡಿಜಿಟಲ್‌ ಪೋರ್ಟಲ್‌ನಲ್ಲಿ ಇ- ಚಲನ್‌ ಲಭ್ಯವಿದೆ.

    2. ಉಲ್ಲಂಘನೆ ಮಾಹಿತಿ ಅಪ್‌ಡೇಟ್‌:
    ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸವಾರನ ಮೇಲೆ ಕೇಸ್‌ ದಾಖಲಾದ ಅಂಶವೂ ಡಿಜಿಟಲ್‌ ಪೋರ್ಟಲ್‌ನಲ್ಲಿ ನಿರಂತರವಾಗಿ ಅಪ್‌ಡೇಟ್‌ ಆಗುತ್ತದೆ. ಪೋರ್ಟಲ್ ಅನ್ನು ಕಾಲಾನುಕ್ರಮದಲ್ಲಿ ನವೀಕರಿಸಲಾಗುತ್ತಿರುತ್ತದೆ.

    3. ಹೊಸ ವ್ಯವಸ್ಥೆಯಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ:
    ಸವಾರರ ಎಲ್ಲ ಉಲ್ಲಂಘನಾ ಪ್ರಕರಣಗಳು ಪೋರ್ಟಲ್‌ನಲ್ಲಿ ದಾಖಲಾಗುತ್ತಿರುತ್ತದೆ. ಇದರಿಂದಾಗಿ ಸವಾರನ ನಡತೆಯನ್ನು ಅಧಿಕಾರಿಗಳು ತಿಳಿಯಬಹುದು. ಅಷ್ಟೇ ಅಲ್ಲದೇ ಸಂಚಾರ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೋ ಇಲ್ಲವೋ ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ.

    4. ದಾಖಲೆಗಳನ್ನು ಎಲ್ಲಿ ಸಂಗ್ರಹಿಸಬಹುದು?
    ಕೇಂದ್ರ ಸರ್ಕಾರದ ಡಿಜಿ ಲಾಕರ್‌ ಅಥವಾ ಎಂ–ಪರಿವಾಹನ್‌‌ ರೀತಿಯ ಪೋರ್ಟಲ್‌ಗಳಿಗೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು. ತಪಾಸಣೆ ಸಮಯದಲ್ಲಿ ಕೇಳಿದಾಗ ಡಿಜಿಟಲ್‌ ಪ್ರತಿಯನ್ನು ತೋರಿಸಬಹುದು.

    5. ಮಾರ್ಗಸೂಚಿಗಾಗಿ ಮೊಬೈಲ್‌ ಬಳಕೆ
    ವಾಹನ ಚಾಲನೆ ಮಾಡುವ ಸಮಯದಲ್ಲಿ ಮಾರ್ಗ ತಿಳಿಯಲು (ಮ್ಯಾಪ್‌/ನ್ಯಾವಿಗೇಷನ್‌) ಮಾತ್ರ ಮೊಬೈಲ್‌ ಬಳಕೆ ಮಾಡಬಹುದಾಗಿದೆ. ಡ್ರೈವರ್‌ ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿ ಬಳಸಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ಚಾಲನೆಯ ಸಮಯದಲ್ಲಿ ಈ ಕಾರಣವನ್ನು ಹೊರತು ಪಡಿಸಿ ಮೊಬೈಲ್‌ ಬಳಕೆ ಮಾಡಿದ್ದು ಕಂಡು ಬಂದಲ್ಲಿ ಈಗ ಇರುವ ಸಂಚಾರ ನಿಯಮಗಳ ಪ್ರಕಾರ ದಂಡ ವಿಧಿಸಲಾಗುತ್ತದೆ.

    ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿದರೆ 1,000 ದಿಂದ 5 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ. ಈ ನಿಯಮವೂ ಅ. 1 ರಿಂದ ಜಾರಿಗೆ ಬಂದಿದೆ.

  • ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ಸಾಂದರ್ಭಿಕ ಚಿತ್ರ

    ನವದೆಹಲಿ: 2019ರ ಜುಲೈ ತಿಂಗಳಿನಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಿಸಲು ರಸ್ತೆ ಸಾರಿಗೆ ಸಚಿವಾಲಯ ನಿರ್ಧರಿಸಿದೆ.

    ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳನ್ನು ವಿತರಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ.

    ನೂತನ ಸ್ಮಾರ್ಟ್ ಡಿಎಲ್ ಹಾಗೂ ಆರ್‌ಸಿಗಳ ಬಣ್ಣ, ವಿನ್ಯಾಸಗಳು ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ಆಗಿರಲಿದೆ. ವಿಶೇಷವಾಗಿ ಈ ಕಾರ್ಡ್‍ಗಳಲ್ಲಿ ಮೈಕ್ರೋ ಚಿಪ್ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಯೂ ಇರಲಿದೆ. ಇದು ನಿಯರ್ ಫೀಲ್ಡ್ ಕಮ್ಯೂನಿಕೇಶನ್(ಎನ್‍ಎಫ್‍ಸಿ) ತಂತ್ರಜ್ಞಾನವನ್ನು ಹೊಂದಿದೆ. ಹೀಗಾಗಿ ಈ ಕಾರ್ಡ್‍ಗಳನ್ನು ಮೆಟ್ರೋ ಹಾಗೂ ಎಟಿಎಮ್ ಕಾರ್ಡ್‍ಗಳ ರೀತಿಯಲ್ಲೂ ಬಳಸಬಹುದಾಗಿದೆ. ಈ ಮೂಲಕ ಸಂಚಾರಿ ಪೊಲೀಸರು ಸ್ಕ್ಯಾನ್ ಮಾಡಿ ಸುಲಭವಾಗಿ ವಾಹನ ಸವಾರರ ಮಾಹಿತಿಗಳನ್ನು ಕಲೆಹಾಕಬಹುದು.

    ಇದಲ್ಲದೇ ವಿಶೇಷವಾಗಿ ವಾಹನ ಚಾಲಕರು ತಮ್ಮ ಅಂಗಾಂಗ ದಾನದ ಮಾಹಿತಿಯನ್ನೂ ಸಹ ಈ ಡಿಲ್‍ನಲ್ಲಿ ನಮೂದಿಸಬಹುದು. ಅಂಗವಿಕಲರಿಗಾಗಿ ಸಿದ್ಧಪಡಿಸಿರುವ ವಿಶೇಷ ವಾಹನಗಳ ಬಗ್ಗೆಯೂ ಸಹ ಈ ಕಾರ್ಡ್‍ಗಳಲ್ಲಿ ವಿವರ ನೀಡಲಾಗಿರುತ್ತದೆ. ನೂತನ ಆರ್‌ಸಿ ಕಾರ್ಡ್ ಮೂಲಕ ವಾಹನವು ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹಾಕುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿದೆ. ಇದರಿಂದಾಗಿ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.

    ನೂತನ ಡಿಎಲ್‍ನಲ್ಲಿ ಏನೇನು ಇರುತ್ತದೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಡಿಎಲ್ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವ್ಯಕ್ತಿಯ ಹೆಸರು, ರಕ್ತದ ಗುಂಪು ಹಾಗೂ ಅಂಗಾಂಗಳನ್ನು ದಾನ ಮಾಡುವ ಮಾಹಿತಿ, ವಾಹನಗಳ ವಿಧ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು ಮುದ್ರಿತವಾಗಿರುತ್ತದೆ.

    ಆರ್‌ಸಿ ಕಾರ್ಡ್‍ನಲ್ಲಿ ಏನೇನು ಇರುತ್ತೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಆರ್‍ಸಿ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನದ ವಿಧ, ವಾಣಿಜ್ಯೇತರ ಹಾಗೂ ವಾಣಿಜ್ಯ ಬಳಕೆಯ ವಿವರ, ವಾಹನಗಳ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಭಾರತ್ ಸ್ಟೇಜ್ 4 ಅಥವಾ 5 ಎಂಬುದರ ವಿವರ ಮುದ್ರಿತವಾಗಿರುತ್ತದೆ. ಇದನ್ನೂ ಓದಿ: ಏನಿದು ಭಾರತ್ ಸ್ಟೇಜ್?ಯಾವಾಗ ಜಾರಿಯಾಗಿದೆ? ಬಿಎಸ್4 ಕಾರಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?

    ಡಿಎಲ್ ಹಾಗೂ ಆರ್‌ಸಿಗಳಲ್ಲಿರುವ ಭದ್ರತಾ ಕ್ರಮಗಳು:
    ನೂತನ ಸ್ಮಾಟ್ ಡಿಎಲ್ ಹಾಗೂ ಆರ್‌ಸಿಗಳಲ್ಲಿ ಅಳಿಸಲಾರದಂತೆ ಗಿಲ್ಲೋಚ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಇದಕ್ಕೆ ಬಳಸಲಾದ ಬಣ್ಣಗಳು ನೇರಾಳಾತಿತಾ ಬಣ್ಣಗಳಿಂದ ಕೂಡಿದ್ದರಿಂದ ಯಾವುದೇ ರೀತಿಯಲ್ಲಿ ಬಣ್ಣ ಬದಲಾಗುವುದಿಲ್ಲ. ಸೂಕ್ಷ್ಮ ರೀತಿಯಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ನಿರ್ದಿಷ್ಟ ಗುರುತಿನ ಪುರಾವೆ(ಹೊಲೊಗ್ರಾಮ್) ಬಳಕೆ ಮಾಡಿರಲಾಗುತ್ತದೆ. ಹಿಂಬದಿ ಹಾಗೂ ಮುಂಭಾಗದಲ್ಲಿ ವಾಟರ್ ಮಾರ್ಕ್ ಮೂಲಕ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಅಧಿಕೃತ ಚಿಹ್ನೆಗಳನ್ನು ಮುದ್ರಿಸಲಾಗಿರುತ್ತದೆ.

    ಯಾಕೆ ವಿತರಣೆ? ದರ ಎಷ್ಟು?
    ಮಾಹಿತಿಗಳ ಪ್ರಕಾರ ಪ್ರತಿನಿತ್ಯ ಹೊಸ ಹಾಗೂ ಪರಿಷ್ಕೃತ 32,000 ಡಿಎಲ್‍ಗಳನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಹೊಸ ನೋಂದಣಿ ಹಾಗೂ ಮರು ನೋಂದಣಿಯ ಸುಮಾರು 43 ಸಾವಿರ ಕಾರ್ಡುಗಳನ್ನು ದೇಶದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೊಸ ಮಾದರಿಯ ವಿಶೇಷ ತಂತ್ರಜ್ಞಾನ ಹೊಂದಿರುವ ಕಾರ್ಡ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸಮಯದ ಉಳಿತಾಯ ಹಾಗೂ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಿಗುವಂತೆ ಮಾಡಲು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಮೂಲಗಳ ಪ್ರಕಾರ ಇಂದು ಮುದ್ರಿತವಾಗುತ್ತಿರುವ ಪ್ರತಿ ಕಾರ್ಡ್ ದರಕ್ಕಿಂತ 15 ರೂಪಾಯಿ ಮಾತ್ರ ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv