Tag: Reduction

  • ಮೆಟ್ರೋ ದರ ಕಡಿತಗೊಳಿಸಿದ ತಮಿಳುನಾಡು ಸಿಎಂ ಪಳನಿಸ್ವಾಮಿ

    ಮೆಟ್ರೋ ದರ ಕಡಿತಗೊಳಿಸಿದ ತಮಿಳುನಾಡು ಸಿಎಂ ಪಳನಿಸ್ವಾಮಿ

    ಚೆನ್ನೈ: 2021ರ ತಮಿಳುನಾಡು ವಿಧಾನ ಸಭಾ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎದುರಾಗಲಿದೆ. ಈ ಹೊತ್ತಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಚೆನ್ನೈ ಮೆಟ್ರೋ ದರದಲ್ಲಿ 20 ರೂ. ಕಡಿತಗೊಳಿಸಿದ್ದಾರೆ. ಅಲ್ಲದೆ ಈ ಹೊಸ ಪರಿಷ್ಕೃತ ದರಗಳು 2021 ರ ಫೆಬ್ರವರಿ 22 ರಿಂದ ಜಾರಿಗೆ ಬರಲಿದೆ. ಒಟ್ಟಾರೆ 50 ರಿಂದ 70 ರೂ. ವರೆಗೆ ಮೆಟ್ರೋ ದರವನ್ನು ಇಳಿಸಲಾಗಿದೆ.

    ಹೊಸ ಶುಲ್ಕಗಳ ಪಟ್ಟಿ:
    * 0-2 ಕಿ.ಮೀ ದೂರ ಪ್ರಯಾಣಿಸುವವರಿಗೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ 10ರೂ. ಪಾವತಿಸಬೇಕಾಗುತ್ತದೆ.
    * ಆರಂಭದಲ್ಲಿ 2-4 ಕಿ.ಮೀ ಪ್ರಯಾಣಿಸುತ್ತಿದ್ದವರು 20 ರೂ. ಪಾವತಿಸಬೇಕಾಗಿತ್ತು. ಆದರೆ ಇನ್ನು ಮುಂದೆ 2-5 ಕಿ.ಮೀ ವರೆಗೆ 20 ರೂ. ವಿಧಿಸಲಾಗುತ್ತದೆ.
    * 5-12 ಕಿ.ಮೀವರೆಗೂ ಪ್ರಯಾಣಿಸುವವರು 30 ರೂ. ಪಾವತಿಸಬೇಕಾಗುತ್ತದೆ.
    * 12-21 ಕಿ.ಮೀ ದೂರ ಪ್ರಯಾಣಿಸುವವರು 40 ರೂ. ಪಾವತಿಸಬೇಕಾಗುತ್ತದೆ.
    * 21 ಕಿ.ಮೀ ಗಿಂತ ಹೆಚ್ಚಿನ ದೂರ ಪ್ರಯಾಣಿಸುವವರು 50 ರೂ. ಪಾವತಿಸಬೇಕಾಗುತ್ತದೆ.

    ಕ್ಯೂ ಆರ್ ಕೋಡ್ ಅಥವಾ ಸಿಎಮ್‍ಆರ್‍ಎಲ್ ಸ್ಮಾರ್ಟ್ ಕಾರ್ಡ್‍ಗಳನ್ನು ಬಳಸಿಕೊಂಡು ಮೆಟ್ರೋ ಟಿಕೆಟ್ ಬುಕ್ ಮಾಡುವವರಿಗೆ ಶುಲ್ಕದಲ್ಲಿ ಶೇ.20 ರಿಯಾಯಿತಿ ನೀಡಲಾಗುತ್ತದೆ. ಹಾಗೂ ರಜಾದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ಪ್ರಯಾಣಿಸುವವರ ಟಿಕೆಟ್ ದರದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

  • ಹೊರ ರಾಜ್ಯದಲ್ಲಿ ಕುಗ್ಗಿದ ಭತ್ತದ ಬೇಡಿಕೆ- ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

    ಹೊರ ರಾಜ್ಯದಲ್ಲಿ ಕುಗ್ಗಿದ ಭತ್ತದ ಬೇಡಿಕೆ- ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

    ರಾಯಚೂರು: ಭತ್ತದ ಕಣಜವಾಗಿರುವ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯ ರೈತರು ಭತ್ತಕ್ಕೆ ಬೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಭತ್ತದ ದರ ಇಳಿಮುಖವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ಮಳೆ, ಪ್ರವಾಹ ಶಾಕ್ ನೀಡಿದರೆ ಬೆಲೆ ಇಳಿಕೆ ಬದುಕು ಮುಳುಗಿಸುತ್ತಿದೆ. ಹೀಗಾಗಿ ಭತ್ತ ಖರೀದಿ ಕೇಂದ್ರ ಆರಂಭದ ನಿರೀಕ್ಷೆಯಲ್ಲಿ ರೈತರು ಕುಳಿತಿದ್ದಾರೆ.

    ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಎಲ್ಲಾ ಜಲಾಶಯಗಳು ಭರ್ತಿಯಾಗಿ ಕಾಲುವೆಗೆ ಸಮರ್ಪಕ ನೀರು ಹರಿದಿದ್ದರಿಂದ ರೈತರು ಉತ್ಸಾಹದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಆದ್ರೆ ಈಗ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿನೇ ದಿನೇ ಕುಸಿಯುತ್ತಿರುವುದು ರೈತರನ್ನ ಕಂಗೆಡಿಸಿದೆ. ಅತೀ ಹೆಚ್ಚು ಭತ್ತ ಬೆಳೆಯುವ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳದ ಸಾವಿರಾರು ಜನ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಕ್ಕಿ ಉದ್ಯಮ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡುಕೊಂಡಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಸೋನಾಮಸೂರಿ ಹೊಸ ಭತ್ತ ಕ್ವಿಂಟಾಲ್‍ಗೆ 1,100 ರೂ.ನಿಂದ 1,250 ರೂ.ವರೆಗೆ ಮಾರಾಟವಾಗುತ್ತಿದೆ. ಹಳೆ ಭತ್ತ 1,500 ರೂ. ನಿಂದ 1,750ರೂ.ವರೆಗೆ ಮಾರಾಟವಾಗುತ್ತಿದೆ. ಆದರೆ ಕಳೆದ ವರ್ಷ ಭತ್ತ ಗರಿಷ್ಠ 2 ಸಾವಿರ ರೂ. ನಿಂದ 2400 ರೂ.ವರೆಗೆ ಮಾರಾಟವಾಗಿತ್ತು.

    ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಅಕ್ಕಿ ಉದ್ಯಮ ಸ್ಥಗಿತಗೊಂಡಿದ್ದು, ಲಾಕ್‍ಡೌನ್ ತೆರವುಗೊಂಡರೂ ಬೇಡಿಕೆಯಿಲ್ಲದೆ ತಮಿಳುನಾಡಿಗೆ ಮಾತ್ರ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ 1,868 ರೂ. ಉತ್ತಮ ಭತ್ತಕ್ಕೆ 1,888 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಹೀಗಾಗಿ ಖರೀದಿ ಆರಂಭಿಸಲು ರೈತರು ಒತ್ತಾಯಿಸಿದ್ದಾರೆ.

    ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 1.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‍ನಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಬೆಲೆ ಇಳಿಮುಖವಾಗುತ್ತಾ ಸಾಗಿದರೆ ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 130 ಅಕ್ಕಿ ಗಿರಣಿಗಳಿದ್ದು, ಶೇ.70 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರದಿಂದ ಆದೇಶ ಬಂದಿದ್ದು, ಶೀಘ್ರದಲ್ಲೇ ತೆರೆಯುವುದಾಗಿ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಹೊರರಾಜ್ಯಗಳಿಂದ ಅಕ್ಕಿಗೆ ಬೇಡಿಕೆ ಬಾರದ ಕಾರಣ ಡಿಸೆಂಬರ್ ಮತ್ತು ಏಪ್ರಿಲ್‍ನಲ್ಲಿ ಬಂದ ಭತ್ತವನ್ನು ಬಹುತೇಕ ರೈತರು ದಾಸ್ತಾನು ಮಾಡಿದ್ದು, ಈಗಾಗಲೇ ಮುಂಗಾರು ಹಂಗಾಮಿನ ಭತ್ತ ಕಟಾವು ನಡೆಯುತ್ತಿದ್ದು, ಹೊಸ ಭತ್ತ ಮಾರುಕಟ್ಟೆಗೆ ಬಂದಲ್ಲಿ ದರ ಮತ್ತಷ್ಟು ಇಳಿದು ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ. ಹೀಗಾಗಿ ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

  • ಆಂಧ್ರದಂತೆ ನಮ್ಮಲ್ಲೂ ಪೆಟ್ರೋಲ್, ಡೀಸೆಲ್ ಸೆಸ್ ಇಳಿಸಿ: ಸುಧಾಕರ್

    ಆಂಧ್ರದಂತೆ ನಮ್ಮಲ್ಲೂ ಪೆಟ್ರೋಲ್, ಡೀಸೆಲ್ ಸೆಸ್ ಇಳಿಸಿ: ಸುಧಾಕರ್

    ಬೆಂಗಳೂರು: ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ಕಡಿಮೆ ಮಾಡಿ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ ಸುಧಾಕರ್ ಸಿಎಂ ಕುಮಾರಸ್ವಾಮಿ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ದಯವಿಟ್ಟು ಅನುಸರಿಸಿ. ನಾಯ್ಡು ಅವರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ತೆರಿಗೆಯನ್ನು 3-4% ಕಡಿತಗೊಳಿಸಿದ್ದಾರೆ. ಕರ್ನಾಟಕದಲ್ಲಿ ಪೆಟ್ರೋಲ್, ಡಿಸೇಲ್ ದರ ಭಾರತದ ಇತರ ರಾಜ್ಯಗಳಿಗಿಂತ ಅಧಿಕವಾಗಿದೆ. ಇದರಿಂದಾಗಿ ಬಡಜನರು, ರೈತರು ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ತೈಲ ಬೆಲೆ ಏರಿಕೆ ವಿರೋಧಿಸಿ ಬಂದ್ ನಡೆಸುತ್ತಿರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ರಾಜಸ್ಥಾನ ಸರ್ಕಾರ 4%ರಷ್ಟು ಇಳಿಕೆ ಮಾಡಿತ್ತು. ಅದರ ಬೆನ್ನಲ್ಲೇ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‍ಗೆ 2 ರೂ ಕಡಿಮೆ ಮಾಡಿದ್ದರು.  ಇದನ್ನು ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆ!

    ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆ!

    ತಿರುವನಂತಪುರಂ: ಕೇರಳ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ರೂ. ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

    ಈ ಕುರಿತು ಮಾಹಿತಿ ನೀಡಿದ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್, ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 1 ರೂ. ಕಡಿತಗೊಳಿಸುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ. ಅಧಿಕ ಹೊರೆ ಆಗಲಿದೆ. ರಾಜ್ಯದ ಆದಾಯದಲ್ಲಿ ಇಂಧನ ಮಾರಾಟದಿಂದ ಬರುವ ತೆರಿಗೆ ಮೂರನೇ ಸ್ಥಾನದಲ್ಲಿದೆ. ಜೂನ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

    ಬುಧವಾರ ಕೇರಳ ರಾಜಧಾನಿ ತಿರುವನಂತಪುರಂ ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 82.61 ರೂ. ಇದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 75.10 ರೂ. ಇದೆ. ತೈಲ ಬೆಲೆ ಹೆಚ್ಚಳ ದಿಂದ ರಾಜ್ಯ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಹಲವರು ಬೆಲೆ ಕಡಿತಗೊಳಿಸುವಂತೆ ಸಲಹೆ ನೀಡಿದ್ದರು. ಅದ್ದರಿಂದ ತಕ್ಷಣದ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ 2014ರ ರಿಂದ ಇದುವರೆಗೂ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, 2016 ರಲ್ಲಿ ಎರಡು ಬಾರಿ ಮಾತ್ರ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್ ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್ ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್ ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್ ಗೆ)