Tag: Red sandalwood

  • ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರು

    ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರು

    ಚಿಕ್ಕಬಳ್ಳಾಪುರ: ಅಕ್ರಮವಾಗಿ ರಕ್ತ ಚಂದನ (Red Sandalwood) ಸಾಗಿಸುತ್ತಿದ್ದ ಕಳ್ಳರ ಕಾರು ಭೀಕರ ಅಪಘಾತಕ್ಕೀಡಾಗಿ (Accident) ನಜ್ಜುಗುಜ್ಜಾಗಿದ್ದರೂ ಕಳ್ಳರು ಪವಾಡವೆಂಬಂತೆ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.

    ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಸಾದಲಿ ಕ್ರಾಸ್ ಬಳಿ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಕಾರು ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ಗುರುತೇ ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿ ಬಿದ್ದಿದೆ. ಕಾರಿನಲ್ಲಿದ್ದ ರಕ್ತಚಂದನ ಕಳ್ಳರಾದ ನಾಗರಾಜು, ನಾಗೇಂದ್ರ, ಶ್ರೀನಿವಾಸ್ ಮೂವರಿಗೂ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಋತುವಿನ ಸಮಸ್ಯೆ, 3 ದಿನ ಚಿಕಿತ್ಸೆ ಬಳಿಕ ಮಹಿಳೆ ಸಾವು – ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

    ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಅದೃಷ್ಟವಶಾತ್ ಎಂಬಂತೆ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ 24 ರಕ್ತಚಂದನದ ತುಂಡುಗಳನ್ನು ಸೀಟಿನ ಕೆಳಭಾಗದಲ್ಲಿ ಇಟ್ಟುಕೊಂಡು ಸಾಗಿಸಲಾಗುತ್ತಿತ್ತು. ನೆರೆಯ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ರಕ್ತಚಂದನದ ತುಂಡುಗಳನ್ನ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ರಕ್ತಚಂದನದ ತುಂಡುಗಳನ್ನ ಪೇರೇಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಸಿಪಿಐ ನಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 527 ಕೆ.ಜಿ ರಕ್ತ ಚಂದನ ಕಳ್ಳಸಾಗಾಣೆ – ಅರಣ್ಯಾಧಿಕಾರಿಗಳಿಂದ ವಶ

    527 ಕೆ.ಜಿ ರಕ್ತ ಚಂದನ ಕಳ್ಳಸಾಗಾಣೆ – ಅರಣ್ಯಾಧಿಕಾರಿಗಳಿಂದ ವಶ

    ರಾಮನಗರ: ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಸಮೀಪ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ರಕ್ತಚಂದನ(Red Sandalwood) ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ರಕ್ತಚಂದನದ ತುಂಡುಗಳನ್ನು ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದ ವಾಹನವನ್ನು ಅನುಮಾನದ ಮೇಲೆ ನಿಲ್ಲಿಸಿದ ಬೆಂಗಳೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ತಪಾಸಣೆ ಮಾಡಿದರು. ಈ ವೇಳೆ 13 ರಕ್ತಚಂದನದ ತುಂಡುಗಳು ಪತ್ತೆಯಾಗಿವೆ.  ಇದನ್ನೂ ಓದಿ: ‘ಕಾಂತಾರ’ ನೋಡಲು ಕಾಯುತ್ತಿದ್ದೇನೆ, ಕುತೂಹಲ ಹೆಚ್ಚಾಗಿದೆ: ಕಂಗನಾ ರಣಾವತ್

    ಸ್ಥಳದಲ್ಲೇ ನಾಲ್ವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು ಗೂಡ್ಸ್ ವಾಹನ ಹಾಗೂ 527 ಕೆ.ಜಿ. ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲ ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ಇದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.

    ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವ ಕಾರಣ ರಕ್ತಚಂದನವನ್ನ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೇಲುಗಡೆ ಟೊಮೆಟೊ ಬಾಕ್ಸ್‌ ಕೆಳಗಡೆ ರಕ್ತಚಂದನ ಸಾಗಾಟ – ಐವರು ಅರೆಸ್ಟ್‌

    ಮೇಲುಗಡೆ ಟೊಮೆಟೊ ಬಾಕ್ಸ್‌ ಕೆಳಗಡೆ ರಕ್ತಚಂದನ ಸಾಗಾಟ – ಐವರು ಅರೆಸ್ಟ್‌

    ಬೆಂಗಳೂರು: ರಕ್ತಚಂದನ(Red Sandalwood) ದಿಮ್ಮಿಗಳನ್ನು ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರೂಪಾಯಿ ಮೌಲ್ಯದ 1.5 ಟನ್ ರಕ್ತಚಂದನ ದಿಮ್ಮಿಯನ್ನು ವಶ ಪಡಿಸಲಾಗಿದೆ.

    ಸಿದ್ಧರಾಜು, ಪ್ರಜ್ವಲ್, ಲೋಕೇಶ್‌, ದೇವರಾಜ್, ಗೋವಿಂದ ಸ್ವಾಮಿ ಬಂಧಿತ ಆರೋಪಿಗಳು. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಕಣ್ತಪ್ಪಿಸಲು ಬೊಲೇರೋ ವಾಹನದಲ್ಲಿ ರಕ್ತಚಂದನ ದಿಮ್ಮಿಗಳ ಮೇಲೆ ಟೊಮೆಟೊ ಬಾಕ್ಸ್ ಹಾಕಿ ಸಾಗಾಟ ಮಾಡುತ್ತಿದ್ದರು.

    ಮಂಡ್ಯದ ದೇವಲಾಪುರ ಕಾಡಿನಿಂದ ರಕ್ತಚಂದನ ಮರಗಳನ್ನ ಕಳ್ಳತನ ಮಾಡಿದ್ದ ಗ್ಯಾಂಗ್‌ ತಮಿಳುನಾಡು ಭಾಗಕ್ಕೆ ಸಾಗಿಸುವ ವೇಳೆ ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಆರೋಪಿಗಳ ಪೈಕಿ ಗೋವಿಂದ ಸ್ವಾಮಿ ಮೇಲೆ ಆಂಧ್ರ ಪ್ರದೇಶ, ತಮಿಳುನಾಡು ಭಾಗದಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ ಮುಲ್ಕಿ ಬಳಿ 5 ಕೋಟಿಯ ರಕ್ತಚಂದನ ವಶ- ಆಂಧ್ರ ಲಾರಿಗೆ ತಮಿಳುನಾಡಿನ ಕಾರು ಎಸ್ಕಾರ್ಟ್

    ಮಂಗಳೂರಿನ ಮುಲ್ಕಿ ಬಳಿ 5 ಕೋಟಿಯ ರಕ್ತಚಂದನ ವಶ- ಆಂಧ್ರ ಲಾರಿಗೆ ತಮಿಳುನಾಡಿನ ಕಾರು ಎಸ್ಕಾರ್ಟ್

    ಮಂಗಳೂರು: ರಕ್ತ ಚಂದನ ಮಾರಾಟದ ಖತರ್ನಾಕ್ ಗ್ಯಾಂಗ್ ಒಂದು ಕಡಲ ನಗರಿ ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಲೆಗೆ ಬಿದ್ದಿದೆ.ಕೋಟಿ ಕೋಟಿ ಮೌಲ್ಯದ ರಕ್ತ ಚಂದನವನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಖದೀಮರು ಇದೀಗ ಕಂಬಿ ಎಣಿಸುತ್ತಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ಸೇಫಾಗಿ ಆಂಧ್ರದಿಂದ ಮಂಗಳೂರಿಗೆ ತಲುಪಿದ್ದ ಕಳ್ಳರ ಗ್ಯಾಂಗ್ ಮಂಗಳೂರಿನಲ್ಲಿ ಬಲೆಗೆ ಬಿದ್ದಿರೋದಾದ್ರು ಹೇಗೆ ಅನ್ನೋ ಡಿಟೈಲ್ ಸ್ಟೋರಿ ಇಲ್ಲಿದೆ.

    ಮಂಗಳೂರು ನಗರದ ಹೊರವಲಯದ ಮುಲ್ಕಿ ಗ್ರಾಮದ ಕಿಲ್ಪಾಡಿ ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ ರಕ್ತಚಂದನ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಉಡುಪಿ ಹಾಗೂ ಮಂಗಳೂರು ಅರಣ್ಯ ವಿಚಕ್ಷಣ ದಳಕ್ಕೆ ಮಾಹಿತಿ ಬಂದಿದ್ದು, ಈ ಬಗ್ಗೆ ಗೌಪ್ಯ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ ಟೀಂ ರಕ್ತ ಚಂದನ ವಶಕ್ಕೆ ಪಡೆದು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಆಂಧ್ರ ಪ್ರದೇಶ ದಟ್ಟ ಅರಣ್ಯದಿಂದ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ತಂದು ಕೇರಳಕ್ಕೆ ಮಾರಾಟ ನಡೆಸಲು ತರುತ್ತಿದ್ದರು. ಈ ಕಳ್ಳ ಸಾಗಾಟದ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಅರಣ್ಯ ಇಲಾಖೆಯ ತಂಡ ದೊಡ್ಡ ಕುಳಗಳನ್ನೇ ಬಲೆಗೆ ಹಾಕಿಕೊಂಡಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಆರೋಪಿಗಳು ಸಿನಿಮಾ ಸ್ಟೈಲ್ ನಲ್ಲೇ ರಕ್ತ ಚಂದನ ಸಾಗಾಟ ಮಾಡುತ್ತಿದ್ದು ಯಾರಿಗೂ ಅನುಮಾನ ಬರದಂತೆ ಪ್ಲಾನ್ ಮಾಡಿಕೊಂಡಿದ್ರು. ಆಂಧ್ರ ಪ್ರದೇಶ ನೋಂದಾಣಿಯ ಲಾರಿಯಲ್ಲಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದು, ಲಾರಿಗೆ ತಮಿಳುನಾಡು ನೋಂದಾಣಿ ಕಾರಿನಲ್ಲಿ ಎಸ್ಕಾರ್ಟ್ ಕೊಟ್ಟು ಸಾಗಾಟ ಮಾಡುತ್ತಿದ್ದರು. ಆದ್ರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಈ ಅಕ್ರಮ ದಂಧೆಯ ವಾಸನೆ ವಾರಗಳ ಹಿಂದೆಯೇ ಸಿಕ್ಕಿದ್ದು ಆರೋಪಿಗಳ ಬರುವಿಕೆಗಾಗಿ ಕಾಯುತ್ತಿದ್ದರು. ಯಾವಾಗ ಕರಾವಳಿಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತಿದ್ದಂತೆ ಲಾರಿಯನ್ನು ಅಡ್ಡಗಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

    ಅರಣ್ಯ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಬೃಹತ್ ಜಾಲವೊಂದನ್ನ ಭೇದಿಸಿದಂತಾಗಿದೆ.ಈ ಜಾಲ ಇನ್ನು ಯಾವ ಮಟ್ಟಕ್ಕೆ ಬೇರು ಬಿಟ್ಟಿದೆ ಅನ್ನೋ ಬಗ್ಗೆ ಅಧಿಕಾರಿಗಳು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ರಕ್ತ ಚಂದನ ಕದ್ದು ಮಾರಾಟ ಮಾಡಲೆತ್ನಿಸಿದ ಆರೋಪಿಗಳು ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

  • ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಖತರ್ನಾಕ್ ಗ್ಯಾಂಗ್ ರಕ್ತಚಂದನ ಸಾಗಾಟ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಶ್ವಾನವೊಂದು ಅವರ ಇಡೀ ಪ್ಲ್ಯಾನ್‍ನ್ನು ತಲೆಕೆಳಗೆ ಮಾಡಿಬಿಟ್ಟಿದೆ.

    ಪುಷ್ಪ ಸಿನಿಮಾದ ರಕ್ತಚಂದನದ ಕಳ್ಳತನದ ಸೀನ್ ಅನ್ನು ಈಗ ನಕಲು ಮಾಡಿಕೊಂಡು ಖತರ್ನಾಕ್ ಗ್ಯಾಂಗ್‍ಗಳು ಕಳ್ಳತನ ಮಾಡಲಾರಂಭಿಸಿದೆ. ಈಗ ಅಂಥದ್ದೇ ಗ್ಯಾಂಗ್‍ನಿಂದ 28 ಲಕ್ಷ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಂಗಳೂರು ಗ್ರಾಮಾಂತರದ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಕ್ರೇಟ್ ಹಾಕಿ ಕೆಳಭಾಗದಲ್ಲಿ ರಕ್ತಚಂದನ ಹಾಕಿ ಸಾಗಾಟ ಮಾಡುತ್ತಿದ್ದ ಗ್ಯಾಂಗ್‍ನ್ನು ಅರಣ್ಯ ಇಲಾಖೆಯ ಗಾರ್ಡ್ ಮಲ್ಲಿಕಾರ್ಜುನ್ ಚೇಸ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಅವರ ಜೊತೆ ಇದ್ದ ಇಲಾಖೆ ಶ್ವಾನ ಸೀಸರ್ ಅಲಿಯಾಸ್ ಸ್ವೀಟಿ ಕೂಡ ಈ ಕಳ್ಳರನ್ನು ಚೇಸ್ ಮಾಡಿದೆ. ಗಾಬರಿಯಾಗಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿದ ಕಳ್ಳರು, ಬಯಲಿನಲ್ಲಿ ಗಾಡಿ ನಿಲ್ಲಿಸಿ ಗಾಡಿ ಲಾಕ್ ಮಾಡಿ ಕೀ ಸಮೇತ ಪರಾರಿಯಾಗಿದ್ದಾರೆ. ಸದ್ಯ 28 ಲಕ್ಷ ಮೌಲ್ಯದ 497 ಕೆಜಿ ರಕ್ತಚಂದನ ಮರದ ತುಂಡು, 61 ಕೆಜಿ ಚಿಕ್ಕ ಚಕ್ಕೆಯನ್ನು ಜಪ್ತಿಮಾಡಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಡಿಸಿಎಫ್ ಗಂಗಾಧರ್, ಸಿಬ್ಬಂದಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ಸದ್ಯ ಕಮ್ಮಗೊಂಡನಹಳ್ಳಿಯಲ್ಲಿ ರಕ್ತಚಂದನ ಇಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆಬೀಸಲಾಗಿದೆ.

  • 4.5 ಕೋಟಿ ಮೌಲ್ಯದ 9 ಟನ್ ರಕ್ತ ಚಂದನ ಜಪ್ತಿ

    4.5 ಕೋಟಿ ಮೌಲ್ಯದ 9 ಟನ್ ರಕ್ತ ಚಂದನ ಜಪ್ತಿ

    ಬೆಂಗಳೂರು: ಲಾಕ್‍ಡೌನ್ ವೇಳೆ ವಿದೇಶಕ್ಕೆ ರಪ್ತು ಮಾಡಲು ರಕ್ತ ಚಂದನ ಶೇಖರಿಸಿಟ್ಟಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದೆ.

    ಹುಳಿಮಾವು ಬಳಿಯ ಗೋಡೌನ್ ಬಳಿ ಅಕ್ರಮವಾಗಿ ರಕ್ತ ಚಂದನವನ್ನು ಶೇಖರಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ದಾಳಿ ನಡೆಸಿತ್ತು.

     

    ದಾಳಿ ವೇಳೆ ಆರೋಪಿಗಳಾದ ಆನಂದ್ ಕುಮಾರ್, ಅನಿಲ್ ಎಂಬುವರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿದೇಶಕ್ಕೆ ಸರಬರಾಜು ಮಾಡಲು ಬನ್ನೇರುಘಟ್ಟ ಹೊಮ್ಮದೇವನಹಳ್ಳಿ ಗೋಡನ್ ನಲ್ಲಿ ಇಟ್ಟಿರುವುದಾಗಿ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಗೋವಾದಿಂದ ಕೊರೊನಾ ನೆಗೆಟಿವ್ ವರದಿ ಇಲ್ಲದೆ ರಾಜ್ಯಕ್ಕೆ ಬಂದ ವರ- ಪೊಲೀಸರಿಂದ ನಿಶ್ಚಿತಾರ್ಥಕ್ಕೆ ಅವಕಾಶ

    ವಿದೇಶದಲ್ಲಿ ಸರಬಾರಾಜು ಮಾಡಲು ಬೆಂಗಳೂರಿನಲ್ಲಿ ಡೀಲರ್ ಗಳನ್ನು ಹುಡುಕುತ್ತಿದ್ದಾಗಿ ಬಾಯಿಬಿಟ್ಟಿದ್ದಾರೆ. ವಿದೇಶದಲ್ಲಿ ರಕ್ತಚಂದನಕ್ಕೆ ಬಹು ಬೇಡಿಕೆ ಇದೆ. ಅದ್ದರಿಂದ ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆ ಅರಣ್ಯ ಪ್ರದೇಶದಿಂದ ಕಳ್ಳಸಾಗಣಿಕೆ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಶೇಖರಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

    ಚೀನಾದಲ್ಲಿ ಸುಗಂಧ ದ್ರವ್ಯ ವಸ್ತುಗಳು, ಗೃಹ ಬಳಕೆ ವಸ್ತುಗಳ ಬಳಕೆಗೆ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

  • ಪ್ಲಾಸ್ಟಿಕ್ ಪೈಪ್ ಸೋಗಿನಲ್ಲಿ ರಕ್ತಚಂದನ ಸಾಗಾಟ- ಏರ್‌ಪೋರ್ಟ್‌ನಲ್ಲಿ 6 ಕೋಟಿಯ ಮಾಲ್ ವಶಕ್ಕೆ

    ಪ್ಲಾಸ್ಟಿಕ್ ಪೈಪ್ ಸೋಗಿನಲ್ಲಿ ರಕ್ತಚಂದನ ಸಾಗಾಟ- ಏರ್‌ಪೋರ್ಟ್‌ನಲ್ಲಿ 6 ಕೋಟಿಯ ಮಾಲ್ ವಶಕ್ಕೆ

    – ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ

    ಬೆಂಗಳೂರು: ಪ್ಲಾಸ್ಟಿಕ್ ಪೈಪ್ ಗಳು ಎಂದು ಅಕ್ರಮ ಸರಕು ಸಾಗಾಣಿಕೆಯ ಮೂಲಕ ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ ರಕ್ತಚಂದನವನ್ನು ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

    ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕೋಟಿ ಕೋಟಿ ಬೆಲೆ ಬಾಳುವ ರಕ್ತಚಂದನವನ್ನು ಸಾಗಿಸಲು ಯತ್ನಿಸಿದ್ದಾರೆ. ಪ್ಲಾಸ್ಟಿಕ್ ಪೈಪ್ ಗಳು ಎಂದು ಪಾರ್ಸಲ್ ಮಾಡಿ, ಸಾಗಿಸುತ್ತಿದ್ದರು.

    ಪಾರ್ಸಲ್ ನೋಡಿ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು, ಒಪನ್ ಮಾಡಿ ನೋಡಿದಾಗ ಅದರಲ್ಲಿ ಆರು ಕೋಟಿಗೂ ಅಧಿಕ ಮೌಲ್ಯದ ರಕ್ತಚಂದನ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪಾರ್ಸಲ್ ನಲ್ಲಿದ್ದ ರಕ್ತ ಚಂದನದ ತುಂಡುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದವರು ಯಾರು ಎಂದು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

  • ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    – ಕಾರು ಬಿಟ್ಟು ಪರಾರಿಯಾದ ಖದೀಮರು

    ಚಿಕ್ಕಬಳ್ಳಾಪುರ: ತಮಿಳುನಾಡು ನೊಂದಣಿಯ ಸ್ಕಾರ್ಪಿಯೋ ಕಾರಿಗೆ ಕರ್ನಾಟಕ ನಂಬರ್ ಪ್ಲೇಟ್ ಬಳಸಿ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸುತ್ತಿದ್ದ ಕಾರನ್ನು ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೆ ಆಯಾ ರಾಜ್ಯಗಳಲ್ಲಿ ಆ ರಾಜ್ಯದ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಕಾರನ್ನು ಬೆನ್ನಟ್ಟಿದ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಬಳಿ ಸ್ಕಾರ್ಪಿಯೋ ಕಾರನ್ನು ತಡೆದು ಕಾರು ಸಮೇತ ರಕ್ತ ಚಂದನ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

    ಕಾರಿನಲ್ಲಿ 14 ರಕ್ತಚಂದನದ ತುಂಡುಗಳಿದ್ದು ಆರೋಪಿಗಳು ಅಧಿಕಾರಿಗಳನ್ನು ನೋಡುತ್ತಿದ್ದಂತೆ ಕಾರು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಕಾರಿನ ನಂಬರ್ ಟಿಎನ್ 49, ಎ.ಎಫ್ 0333 ಅಸಲಿ ಆಗಿದ್ದು, ಇದಕ್ಕೆ ಕೆಎ 34 ಎಂ 6866 ನಂಬರ್ ಪ್ಲೇಟನ್ನು ಅಳವಡಿಸಿದ್ದಾರೆ. ಕಾರಿನ ಪರಿಶೀಲನೆ ವೇಳೆ ಸರಿಸುಮಾರು 500 ಕೆಜಿಯ ಲಕ್ಷಾಂತರ ರೂಪಾಯಿ ಮೌಲ್ಯದ 14 ರಕ್ತ ಚಂದನದ ತುಂಡುಗಳು, ಎರಡು ಆಸಲಿ ತಮಿಳುನಾಡಿನ ನೊಂದಣಿಯ ನಂಬರ್ ಪ್ಲೇಟುಗಳು, ಕಾರಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • 2 ಕೋಟಿ ಮೌಲ್ಯದ ರಕ್ತಚಂದನ ವಶ

    2 ಕೋಟಿ ಮೌಲ್ಯದ ರಕ್ತಚಂದನ ವಶ

    – ಹಡಗಿನ ಮೂಲಕ ವಿದೇಶಕ್ಕೆ ಸಾಗಿಸುವ ಮಾಸ್ಟರ್ ಪ್ಲಾನ್ ವಿಫಲ

    ಮಂಗಳೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 2 ಕೋಟಿ ರೂ. ಮೌಲ್ಯದ ರಕ್ತಚಂದನವನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಎಸ್ಟೇಟ್‍ನ ಕಟ್ಟಡವೊಂದರಲ್ಲಿ ಅಕ್ರಮವಾಗಿ ರಕ್ತಚಂದನವನ್ನು ದಾಸ್ತಾನು ಇರಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪಣಂಬೂರು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 4 ಸಾವಿರ ಕೆಜಿ ರಕ್ತಚಂದನ ಪತ್ತೆಯಾಗಿದೆ.

    ರಕ್ತಚಂದನವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಶೇಖ್ ತಬ್ರೇಜ್ (35), ರಾಕೇಶ್ ಶೆಟ್ಟಿ (44), ಲೋಹಿತ್ (36), ಫಾರೂಕ್ (45), ಹುಸೇನ್ ಕುಂಞ (46) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಈ ರಕ್ತ ಚಂದನವನ್ನು ಮಂಗಳೂರಿನ ಎನ್‍ಎಂಪಿಟಿ ಬಂದರು ಮೂಲಕ ವಿದೇಶಕ್ಕೆ ಸಾಗಿಸಲು ತಯಾರಿ ನಡೆಸಿದ್ದು, ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಆರೋಪಿಗಳಿಂದ ರಕ್ತಚಂದನ, ಬ್ರೀಝಾ, ಮಾರುತಿ ಕಾರು ಸಹಿತ ಒಟ್ಟು 2.20 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಟ್ಯಂತರ ರೂ. ಮೌಲ್ಯದ ರಕ್ತಚಂದನ ವಶ- ಇಬ್ಬರು ಅರೆಸ್ಟ್

    ಕೋಟ್ಯಂತರ ರೂ. ಮೌಲ್ಯದ ರಕ್ತಚಂದನ ವಶ- ಇಬ್ಬರು ಅರೆಸ್ಟ್

    – ಮನೆಯಲ್ಲಿ ಸುರಂಗ ಮಾರ್ಗ ಮಾಡಿದ್ದ ಆರೋಪಿಗಳು

    ಬೆಂಗಳೂರು: ಮನೆಯಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನು ಪೊಲೀಸರು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಆಂಧ್ರ ಪ್ರದೇಶ ಮೂಲದ ಮಜೀದ್ ಹಾಗೂ ಬಷೀರ್ ಬಂಧಿತ ಆರೋಪಿಗಳು. ಆರೋಪಿಗಳು ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸುರಂಗ ಮಾರ್ಗ ನಿರ್ಮಿಸಿ, ಅದರಲ್ಲಿ ರಕ್ತಚಂದನವನ್ನು ಬಚ್ಚಿಟ್ಟಿದ್ದರು. ಬಂಧಿತರಿಂದ ಪೊಲೀಸರು 2 ಟನ್ ರಕ್ತಚಂದನ ವಶಕ್ಕೆ ಪಡೆದಿದ್ದಾರೆ.

    ಕಟ್ಟಿಗೇನಹಳ್ಳಿ ಗ್ರಾಮದ ಮನೆಯಲ್ಲಿ ರಕ್ತಚಂದನವನ್ನು ಬಚ್ಚಿಟ್ಟಿದ್ದ ಖಚಿತ ಮಾಹಿತಿ ಬೆಂಗಳೂರು ಗ್ರಾಮಾಂತರ ಪೋಲಿಸರಿಗೆ ಸಿಕ್ಕಿತ್ತು. ತಕ್ಷಣವೇ ವಿಶೇಷ ಕಾರ್ಯಚರಣೆ ನಡೆಸಿದ ಪೊಲೀಸರು ಮನೆಗೆ ಭೇಟಿ ನೀಡಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ರಕ್ತಚಂದನ ಪತ್ತೆಯಾಗಿರಲಿಲ್ಲ. ಹೀಗಾಗಿ ಮಜೀದ್ ಹಾಗೂ ಬಷೀರ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ರಕ್ತಚಂದನ ಬಚ್ಚಿಟ್ಟಿದ್ದ ಜಾಗವನ್ನು ಬಾಯಿಬಿಟ್ಟಿದ್ದಾರೆ.