ನವದೆಹಲಿ: ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ದೆಹಲಿ ಹೊರ ವರ್ತುಲ ರಸ್ತೆಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು. ಹೀಗಾಗಿ ರಾಜಪಥದ ಪರೇಡ್ ಬಳಿಕ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಮೊದಲೇ ತಿಳಿಸಿದ್ದರು. ರೈತರ ಪ್ರತಿಭಟನೆ ಶಾಂತವಾಗಿ ನಡೆಯಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ ಶಾಂತವಾಗಿ ನಡೆಯಬೇಕಿದ್ದ ಪ್ರತಿಭಟನೆ ಇಂದು ದೆಹಲಿಯಲ್ಲಿ ದಾಂಧಲೆ ಎಬ್ಬಿಸಿ ಆಸ್ತಿ, ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.
ರಾಜಪಥ್ ಪರೇಡ್ ಅಂತ್ಯವಾಗದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಲು ರೈತರು ಪ್ರಯತ್ನ ನಡೆಸಿದರು. ಆದರೆ ಪೊಲೀಸರು ಅನುಮತಿ ನೀಡಿರಲಿಲ್ಲ. ಬೆಳಗ್ಗೆ 11:30ರ ವೇಳೆ ಉದ್ವಿಗ್ನಗೊಂಡ ರೈತರ ಕ್ರೇನ್ ಗಾಜೀಪುರ್ ಬಳಿ ಹಾಕಿದ ಬ್ಯಾರಿಕೇಡ್ ಒಡೆಯಿತು. ಇದಾದ ಬಳಿಕ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರು ಅನುಮತಿ ನೀಡಿದರು.

ಸಿಂಘು, ಟಿಕ್ರಿ, ಘಾಜಿಪುರ, ಬುರಾರಿ ಗಡಿಗಳಿಂದ ಏಕಕಾಲದಲ್ಲಿ ರೈತರು ದೆಹಲಿಯತ್ತ ಮುಖ ಮಾಡಿದರು. ಆದರೆ ಹೆದ್ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್, ಕಂಟೈನರ್, ಬಸ್‍ಗಳನ್ನು ಪಕ್ಕಕ್ಕೇ ತಳ್ಳಿದ ರೈತರು ಮುನ್ನುಗ್ಗಿದರು.
ಹಾಪುರ್ ಬಳಿಕ ಅಕ್ಷರಧಾಮನಿಂದ ಯೂಟರ್ನ್ ಪಡೆದು ಪ್ರತಿಭಟನೆ ಗಾಜೀಪುರಕ್ಕೆ ವಾಪಸ್ ತೆರಳಬೇಕಿತ್ತು. ಆದರೆ ಅಕ್ಷರಧಾಮ ಬಳಿ ಹಾಕಿ ಎಲ್ಲ ಅಡೆತಡೆಗಳನ್ನು ಕ್ರಾಸ್ ಮಾಡಿ ಹಳೆ ದೆಹಲಿಯತ್ತ ಟ್ರ್ಯಾಕ್ಟರ್‌ಗಳು ನುಗ್ಗಿತ್ತು. ರಾಷ್ಟ್ರೀಯ ಹೆದ್ದಾರಿ ಮೂಲಕ ದೆಹಲಿಯ ಐಟಿಓ ಪ್ರದೇಶವನ್ನು ಪ್ರತಿಭಟನಕಾರರು ಪ್ರವೇಶ ಮಾಡಿದರು. ಇದಾದ ಬಳಿಕ ನೇರ ಸುಮಾರು 3 ಕಿ.ಮೀ. ದೂರದಲ್ಲಿರುವ ಕೆಂಪು ಕೋಟೆಗೆ ಲಗ್ಗೆ ಇಟ್ಟರು. ಈ ವೇಳೆ ಪೊಲೀಸರ ಮೇಲೆ ಟ್ರ್ಯಾಕ್ಟರ್ ಗುದ್ದಿಸಲು ಮುಂದಾಗಿದ್ದಾರೆ. ಟ್ರ್ಯಾಕ್ಟರ್ ಮುಂದಕ್ಕೆ ಬರುತ್ತಿರುವುದನ್ನು ನೋಡಿ ಪೊಲೀಸರು ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಕೆಂಪು ಕೋಟೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ರೈತ ಸಂಘಟನೆ ಧ್ವಜ ಹಾರಿಸಿದರು. ಬಳಿಕ ಗುಮ್ಮಟದ ಮೇಲೆ ನುಗ್ಗಿ ಸಿಖ್ ಧ್ವಜ ಹಾರಿಸಿ ವಿಕೃತಿ ಮೆರೆದರು. ಮಧ್ಯಾಹ್ನ 2.30 ರ ವೇಳೆಗೆ ಮತ್ತೆ ಐಟಿಓ ಬಳಿ ಪ್ರತಿಭಟನಾಕಾರರು ಪೊಲೀಸರ ನಡುವೆ ಘರ್ಷಣೆ ಜೋರಾಯ್ತು. ಈ ಘರ್ಷಣೆಯಿಂದ ಇಡೀ ದೆಹಲಿ ತತ್ತರಿಸಿ ಹೋಯ್ತು.
ರೈತ ದಂಗೆಯಲ್ಲಿ ಪೊಲೀಸರು ಸೇರಿದಂತೆ ನೂರಾರು ಮಂದಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಕೇಂದ್ರ ಗೃಹ ಸಚಿವಾಲಯ ಬಂದ್ ಮಾಡಿದೆ.
ದೆಹಲಿ ಪೊಲೀಸರು ಪ್ರತಿಕ್ರಿಯಿಸಿ, ನಿಗದಿತ ಅವಧಿಗಿಂತ ಮೊದಲೇ ಮೆರವಣಿಗೆ ಆರಂಭಿಸಿದ್ದೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಪೊಲೀಸರು ಹತ್ತಾರು ಕಡೆ, ಹತ್ತಾರು ಬಾರಿ ಲಾಠಿ ಬೀಸಿ, ಟಿಯರ್ ಗ್ಯಾಸ್ ಸಿಡಿಸಿ, ಜಲ ಫಿರಂಗಿ ಪ್ರಯೋಗಿಸಿದರೂ ರೈತರ ಕಿಚ್ಚನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ನಿಗದಿತ ಮಾರ್ಗ ಬಿಟ್ಟು ಸಿಕ್ಕ ಸಿಕ್ಕ ಕಡೆ ಮುನ್ನುಗ್ಗಿದ ರೈತರು ಪೊಲೀಸ್ ಷರತ್ತು ಉಲ್ಲಂಘಿಸಿದ್ದೂ ಮಾತ್ರವಲ್ಲ ಕೆಲವು ಕಡೆ ಪೊಲೀಸರನ್ನೇ ಅಟ್ಟಾಡಿಸಿ ಕಲ್ಲು ತೂರಿದ್ದಾರೆ.
ಹೆಚ್ಚುವರಿ ಪಡೆಗಳನ್ನು ರಸ್ತೆಗಿಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆದಾಯ ತೆರಿಗೆ ಕಚೇರಿ ಇರುವ ಪ್ರದೇಶ, ಅಕ್ಷರಧಾಮ್ ಪ್ರಾಂತ್ಯಗಳು ರಣರಂಗವನ್ನು ನೆನಪಿಸುವಂತಿದ್ದವು.