Tag: Red Bus

  • ಚಾರ್ಮಾಡಿ ಸಂಚಾರಕ್ಕೆ ಬುಧವಾರ ಗ್ರೀನ್ ಸಿಗ್ನಲ್, ಗುರುವಾರ ರೆಡ್ ಸಿಗ್ನಲ್!

    ಚಾರ್ಮಾಡಿ ಸಂಚಾರಕ್ಕೆ ಬುಧವಾರ ಗ್ರೀನ್ ಸಿಗ್ನಲ್, ಗುರುವಾರ ರೆಡ್ ಸಿಗ್ನಲ್!

    ಚಿಕ್ಕಮಗಳೂರು: ಸುಮಾರು ಒಂದೂವರೆ ವರ್ಷದ ನಂತರ ಚಾರ್ಮಾಡಿ ಘಾಟ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಜಿಲ್ಲಾಡಳಿತ ಮರು ದಿನವೇ ರೆಡ್ ಸಿಗ್ನಲ್ ನೀಡಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಹಾಗೂ ಕಿರಿಕಿರಿ ಉಂಟಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಸಂಚಾರ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿತ್ತು. ಕಾರು, ಬೈಕು ಅಂಬುಲೆನ್ಸ್ ಸೇರಿದಂತೆ ಲಘು ವಾಹನಗಳಿಗೆ ಮಾತ್ರ ಅವಕಾಶವಿತ್ತು. ಬುಧವಾರ ಸಂಜೆ ಆದೇಶ ಹೊರಡಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಸೇರಿದಂತೆ ಆರು ಚಕ್ರದ ಲಾರಿಗಳ ಸಂಚಾರಕ್ಕೆ ಅನುಮತಿ ನೀಡಿದ್ದರು. ಇದರಿಂದ ಜನಸಾಮಾನ್ಯರು ಸಂತಸ ವ್ಯಕ್ತಪಡಿಸಿದರು. ಆದರೆ ಗುರುವಾರ ಸಂಜೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬುಧವಾರ ನೀಡಿದ್ದ ಆದೇಶವನ್ನು ಹಿಂಪಡೆದಿದ್ದಾರೆ. ಇದರಿಂದ ಜನಸಾಮಾನ್ಯರು ಮತ್ತೆ ಕಂಗಾಲಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಚಾರ್ಮಾಡಿ ಘಾಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಡುವ ಭಾಗದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು ಈ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ತೊಂದರೆಯಾಗುತ್ತದೆ. ಅಷ್ಟೆ ಅಲ್ಲದೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ ಎಂಬ ಮಂಗಳೂರು ಜಿಲ್ಲಾಧಿಕಾರಿ ಮನವಿ ಮೇರೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬುಧವಾರ ನೀಡಿದ ಆದೇಶವನ್ನು ಹಿಂಪಡೆದಿದ್ದಾರೆ. ಆರು ಚಕ್ರದ ಲಾರಿಗಳು ಸಂಚಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಈ ಭಾಗದಲ್ಲಿ ಸಂಚಾರ ಆರಂಭಿಸಿದ ಲಾರಿಗಳು ಕೊಟ್ಟಿಗೆಹಾರದ ಬಳಿ ಸಂಕಷ್ಟಕ್ಕೀಡಾಗಿವೆ.

    ಮತ್ತೆ ಕಂಗಾಲದ ಜನ:
    ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಗಳ ಸಂಚಾರ ಆರಂಭಗೊಂಡಿದ್ದ ರಿಂದ ಜನಸಾಮಾನ್ಯರು ಸಂತೋಷವಾಗಿದ್ದರು. ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಿ ಉಡುಪಿ ಹಾಗೂ ಮಂಗಳೂರಿಗೆ ಹೋಗುವ ರೋಗಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಸರ್ಕಾರ ನೀಡಿದ ಆದೇಶವನ್ನು ಒಂದೇ ದಿನದಲ್ಲಿ ಹಿಂಪಡೆದಿರುವುದು ಜನಸಾಮಾನ್ಯರು ಮತ್ತೆ ಸಂಕಷ್ಟಕ್ಕೀಡಾಗುವಂತೆ ಮಾಡಿದೆ.

    ಅಷ್ಟೇ ಅಲ್ಲದೆ ಕೆಂಪು ಬಸ್ ಗಳು ಹಾಗೂ ಲಾರಿಗಳ ಸಂಚಾರ ಆರಂಭಗೊಂಡಿದ್ದರಿಂದ ಕೊಟ್ಟಿಗೆಹಾರದಲ್ಲಿ ವ್ಯಾಪಾರವನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಸಣ್ಣಸಣ್ಣ ವ್ಯಾಪಾರಿಗಳು ವ್ಯಾಪಾರದ ದೃಷ್ಟಿಯಿಂದ ಸಂತಸ ವ್ಯಕ್ತಪಡಿಸಿದರು. ಆದರೆ, ಸರ್ಕಾರ 24ಗಂಟೆಯೊಳಗೆ ಆದೇಶವನ್ನು ಹಿಂಪಡೆದು ವ್ಯಾಪಾರಿಗಳಿಗೂ ಬೇಸರ ಮೂಡಿಸಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಚಾರ್ಮಾಡಿಯಲ್ಲಿ ಕೆಂಪು ಬಸ್ ಸಂಚಾರ ಆರಂಭ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಚಾರ್ಮಾಡಿಯಲ್ಲಿ ಕೆಂಪು ಬಸ್ ಸಂಚಾರ ಆರಂಭ

    – ಮೂರು ದಿನಗಳ ಹಿಂದೆ ವರದಿ ಮಾಡಿದ್ದ ಪಬ್ಲಿಕ್ ಟಿವಿ

    ಚಿಕ್ಕಮಗಳೂರು: ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕೆಂಪು ಬಸ್ ಸಂಚಾರ ಆರಂಭಗೊಂಡಿದ್ದು ಜನರಲ್ಲಿ ಸಂತೋಷ ಮನೆ ಮಾಡಿದೆ.

    2019ರ ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆ ಸುರಿದಿತ್ತು. ಇದರಿಂದ 22 ಕಿ.ಮೀ‌ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆ-ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಡೆ ರಸ್ತೆ ಕುಸಿದಿತ್ತು. ಬೆಟ್ಟಗುಡ್ಡಗಳು ಧರೆಗುರುಳಿದ್ದವು. ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸುಮಾರು ಮೂರು ತಿಂಗಳ ಕಾಲ ಈ ಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು  ನಿಷೇಧಿಸಲಾಗಿತ್ತು.

     

    ದುರಸ್ಥಿಯಾದ ಮೂರು ತಿಂಗಳ ಬಳಿಕ ಮಿನಿ ಬಸ್, ಕಾರು, ಬೈಕ್ಗಳ ಸಂಚಾರಕ್ಕೆ ಮಾತ್ರ ಅವಕಾಶವಿತ್ತು. ಕಳೆದ ಒಂದೂವರೆ ವರ್ಷದಿಂದ ಕೆಂಪು ಬಸ್ ಸಂಚಾರಕ್ಕೆ ಅವಕಾಶವಿರಲಿಲ್ಲ. ಈಗ ರಸ್ತೆ ದುರಸ್ಥಿ ಕಾರ್ಯ ಬಹುತೇಕ ಮುಗಿದಿದ್ದು ಜಿಲ್ಲಾಧಿಕಾರಿ ರಮೇಶ್ ಆರು ಚಕ್ರದ ಲಾರಿ ಹಾಗೂ ಕೆಂಪು ಬಸ್ಸಿನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನೂ ಓದಿ: ಮುಗಿಯದ ಚಾರ್ಮಾಡಿ ಕಾಮಗಾರಿ- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಈ ಮಾರ್ಗದಲ್ಲಿ ಅಗತ್ಯವಿರುವ ಕಡೆ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಚಾರ್ಮಾಡಿಯ ಬಹಳಷ್ಟು ಕಡೆ ಭೂಕುಸಿತದಿಂದ ರಸ್ತೆಗೆ ತೀವ್ರವಾದ ಧಕ್ಕೆಯಾಗಿದೆ. ಅತ್ಯಂತ ಜಾಗರೂಕತೆಯಿಂದ ನಿಗದಿತ ವೇಗದ ಮಿತಿಯೊಂದಿಗೆ ವಾಹನಗಳು ಸಂಚರಿಸುವಂತೆ ಸೂಚಿಸಲಾಗಿದೆ.

    ಜನರ ಬದುಕಿನ ದಾರಿ :
    ಜಿಲ್ಲೆ ಸೇರಿದಂತೆ ರಾಜ್ಯದ ಜನ ಚಾರ್ಮಾಡಿ ಘಾಟ್ ಮೇಲೆ ಅವಲಂಬಿತರಾಗಿದ್ದಾರೆ. ಆರೋಗ್ಯ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಮಂಗಳೂರು-ಉಡುಪಿ ಹೋಗಲು ಚಾರ್ಮಾಡಿ ಅತ್ಯಂತ ಸಹಾಯಕಾರಿ. ಆದರೆ ಈ ಬಹುಪಯೋಗಿ ರಸ್ತೆ ಸಂಚಾರ ಮುಕ್ತವಾಗದ ಕಾರಣ ಜನರ ಬದುಕಿಗೂ ತೊಂದರೆಯಾಗಿತ್ತು.

     

    ತುರ್ತು ಆರೋಗ್ಯದ ಸಂದರ್ಭದಲ್ಲಿ ಮಂಗಳೂರು, ಉಡುಪಿಗೆ ಹೋಗಲು ಜನ ತೀವ್ರ ತೊದರೆ ಅನುಭವಿಸುತ್ತಿದ್ದರು. ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಿ ಹೋಗಬೇಕಿತ್ತು. ಹಾಗಾಗಿ ಜನ ಕೆಂಪು ಬಸ್ ಗಳ ಸಂಚಾರವನ್ನ ಎದುರು ನೋಡುತ್ತಿದ್ದರು. ಈಗ ಜಿಲ್ಲಾಡಳಿತ ಕೆಂಪು ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಜನಸಾಮಾನ್ಯರಿಗೆ ಅನುಕೂಲವಾಗಿದೆ.