Tag: recipe

  • ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

    ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

    ಈಗಂತೂ ಪ್ರತಿದಿನ ಮಳೆ. ಇಂಥ ವೆದರ್‍ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ ವಿಧಾನ.

    ಬೇಕಾಗಿರುವ ಸಾಮಾಗ್ರಿಗಳು:
    1 ಮಂಡಕ್ಕಿ/ಕಡಲೆಪುರಿ – 3 ಕಪ್
    2 ಹುಣಸೆ ರಸ – 1/4 ಕಪ್
    3 ಟೊಮೇಟೊ – 1
    4 ಈರುಳ್ಳಿ – 2
    5 ಕೊತ್ತಂಬರಿ ಸೊಪ್ಪು – ಸ್ವಲ್ಪ
    6 ಹುರಿಗಡಲೆ ಪುಡಿ – 2 ಚಮಚ
    7 ಹಸಿರು ಮೆಣಸಿನಕಾಯಿ – 3
    8 ಎಣ್ಣೆ – 2 ಚಮಚ
    9 ಜೀರಿಗೆ – 2 ಚಮಚ
    10 ಸಾಸಿವೆ – 2 ಚಮಚ
    11 ಬೆಲ್ಲ- 2 ಚಮಚ
    12 ಉಪ್ಪು- ರುಚಿಗೆ ತಕ್ಕಷ್ಟು
    13 ಕರಿಬೇವು- ಸ್ವಲ್ಪ
    14 ಅರಿಶಿಣ ಪುಡಿ – 1/4 ಚಮಚ
    15 ಸೇವ್/ಖಾರ ಬೂಂದಿ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
    * ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
    * ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಫ್ರೈ ಮಾಡಿ.
    * ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಂತೆ ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲಾ ರೆಡಿ.
    * ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲಾ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಕೊನೆಯಲ್ಲಿ ಸ್ವಲ್ಪ ಸೇವ್/ ಖಾರ ಬೂಂದಿ ಉದುರಿಸಿ ಮಿರ್ಚಿ ಬಜ್ಜಿ ಜೊತೆಗೆ ಸವಿಯಲು ಕೊಡಿ.

     

  • ರುಚಿಯಾದ ಅಕ್ಕಿ ಪಾಯಸ ಮಾಡೋ ವಿಧಾನ

    ರುಚಿಯಾದ ಅಕ್ಕಿ ಪಾಯಸ ಮಾಡೋ ವಿಧಾನ

    ಪಾಯಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ ತುಂಬಾ ಫೇಮಸ್. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಅಕ್ಕಿ ಪಾಯಸವನ್ನು ಮಾಡ್ತಾರೆ. ಬಲು ಬೇಗನೆ ಅಕ್ಕಿ ಪಾಯಸ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    * ಕೆನೆಭರಿತ ಹಾಲು- 1 ಲೀಟರ್
    * ನೆನೆಸಿದ ಬಾಸುಮತಿ ಅಕ್ಕಿ- 1/4 ಬೌಲ್
    * ಸಕ್ಕರೆ- 7 ಚಮಚ
    * ಸಣ್ಣಗೆ ಕಟ್ ಮಾಡಿದ ಬಾದಾಮಿ- 2 ಚಮಚ
    * ಕೇಸರಿ ಎಳೆಗಳು- 6(ನೆನೆಸಿಟ್ಟುಕೊಳ್ಳಿ)
    * ಏಲಕ್ಕಿ ಪಡಿ- ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಹಾಲು ಹಾಕಿ ಸ್ಟೌವ್ ಮೇಲೆ ಕುದಿಯಲು ಬಿಡಿ.
    * ಹಾಲು ಕುದಿಯುತ್ತಿದ್ದಂತೆಯೇ ನೆನೆಸಿದ ಅಕ್ಕಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಯಿಸಿದ ಅನ್ನವಿದ್ದರೆ ಅದನ್ನು ಬಳಸಬಹುದು)
    * ಅಕ್ಕಿ ಬೇಯುತ್ತಾ ಬಂದಂತೆ ಬೆಂಕಿಯ ಉರಿಯನ್ನು ಕಡಿಮೆ ಮಾಡಿ. ಯಾಕಂದ್ರೆ ಇದರಿಂದ ಅಕ್ಕಿ ತಳ ಹಿಡಿಯುವುದು ತಪ್ಪುತ್ತೆ.
    * ಅಕ್ಕಿ ಬೆಯುತ್ತಿದ್ದಂತೆಯೇ ಹಾಲಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಈ ವೇಳೆ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಕುದಿಯಲು ಬಿಡಿ.
    * ಅಕ್ಕಿ ಚೆನ್ನಾಗಿ ಬೆಂದ ಬಳಿಕ ಏಲಕ್ಕಿ ಪುಡಿ, ಕಟ್ ಮಾಡಿಟ್ಟುಕೊಂಡ ಬಾದಾಮಿ ಹಾಗೂ ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.
    * ನಂತ್ರ ಸ್ಟೌವ್ ಆಫ್ ಮಾಡಿ ಪಾತ್ರೆಯನ್ನು ಕೆಳಗಿಳಿಟ್ಟು ಪಾಯಸವನ್ನು ಇನ್ನೊಂದು ಪಾತ್ರೆಗೆ ಹಾಕಿ ರುಚಿಯಾದ ಪಾಯಸವನ್ನು ಸವಿಯಿರಿ.

  • ರುಚಿ ರುಚಿಯಾದ ಆಲೂ ಬ್ರೆಡ್ ರೋಲ್ ಮಾಡೋ ವಿಧಾನ

    ರುಚಿ ರುಚಿಯಾದ ಆಲೂ ಬ್ರೆಡ್ ರೋಲ್ ಮಾಡೋ ವಿಧಾನ

    ಗಂತೂ ದಿನ ಬಿಟ್ಟು ದಿನ ಮಳೆಯೇ. ಇಂಥ ಟೈಮಲ್ಲಿ ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸೋದು ಸಹಜ. ಪಾನಿಪುರಿ, ಮಸಾಲಪುರಿ ತಿನ್ನೋಕೆ ಹೊರಗೆ ಹೋಗ್ಬೇಕು. ಮಳೇಲಿ ಹೋಗೋದಂದ್ರೆ ಇನ್ನೂ ಫಜೀತಿ. ಮನೆಯಲ್ಲೇ ಏನಾದ್ರೂ ಸುಲಭವಾಗಿ ಮಾಡುವಂತದ್ದಾದ್ರೆ ಚೆನ್ನಾಗಿರುತ್ತೆ ಅಂದ್ಕೊಂಡ್ರಾ? ಡೋಂಟ್ ವರಿ ಅದಕ್ಕಾಗಿ ಆಲೂ ಬ್ರೆಡ್ ರೋಲ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿ:
    * ಆಲೂಗಡ್ಡೆ- 3
    * ಬಟಾಣಿ- 1 ಕಪ್
    * ಈರುಳ್ಳಿ- ಅರ್ಧ ಕಪ್
    * ಬ್ರೆಡ್ ಸ್ಲೈಸ್- 8 ರಿಂದ 10
    * ಹಸಿಮೆಣಸಿನಕಾಯಿ- 3 ರಿಂದ 4
    * ಧನಿಯಾ ಪುಡಿ- ಅರ್ಧ ಚಮಚ
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ- ಸ್ವಲ್ಪ

    ಮಾಡುವ ವಿಧಾನ:

    * ಕುಕ್ಕರ್‍ಗೆ ಆಲೂಗಡ್ಡೆ, ಬಟಾಣಿ ಹಾಕಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಎರಡು ಅಥವಾ ಮೂರು ವಿಷಲ್ ಬರುವವರೆಗೆ ಬೇಯಿಸಿ.
    * ಕುಕ್ಕರ್ ತಣ್ಣಗಾದ ಬಳಿಕ ಆಲೂಗಡ್ಡೆಯನ್ನು ತೆಗೆದು ಸಿಪ್ಪೆ ಸುಲಿದು, ಚೆನ್ನಾಗಿ ಹಿಸುಕಿ. ಇನ್ನೊಂದು ಪಾತ್ರೆಯಲ್ಲಿ ಬಟಾಣಿಯನ್ನು ಹರಡಿ.
    * ಸ್ಟೌವ್ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.
    * ಈರುಳ್ಳಿ ಕೊಂಚ ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ, ಕೊತ್ತಂಬರಿ ಪುಡಿ ಹಾಕಿ ಮತ್ತೆ ಹುರಿಯಿರಿ.
    * ನಂತರ ಇದಕ್ಕೆ ಬೇಯಿಸಿದ ಬಟಾಣಿ ಹಾಕಿ ಫ್ರೈ ಮಾಡಿ. ಬಳಿಕ ಆಲೂಗಡ್ಡೆಯನ್ನು ಬೆರೆಸಿ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಲೆಯಿಂದ ಕೆಳಗಿಳಿಸಿ.
    * ಬ್ರೆಡ್ ಪೀಸ್‍ಗಳನ್ನು ತಣ್ಣೀರಿನಲ್ಲಿ ಮುಳುಗಿಸಿ ನೀರು ಹೀರಿಕೊಳ್ಳುವಂತೆ ಮಾಡಿ. ಈ ಪೀಸ್ ಗಳನ್ನು ಕೈಯಲ್ಲಿ ಮೆಲ್ಲಗೆ ಒತ್ತಿ ನೀರನ್ನು ತೆಗೆಯಿರಿ.
    * ಆಲೂಗಡ್ಡೆ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ.
    * ಈ ಉಂಡೆಗಳನ್ನು ಬ್ರೆಡ್‍ಪೀಸ್ ನ ಮಧ್ಯೆ ಇಟ್ಟು ಎರಡೂ ಕಡೆ ಬ್ರೆಡ್ ನಿಂದ ಉಂಡೆ ಆವರಿಸುವಂತೆ ಮಡಚಿಕೊಳ್ಳಿ.
    * ಇನ್ನೊಂದು ಬಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ರೆಡಿ ಮಾಡಿಟ್ಟಿದ್ದ ಬ್ರೆಡ್‍ಗಳನ್ನು ಸಣ್ಣ ಉರಿಯಲ್ಲಿ ಕರಿಯಿರಿ.
    * ಕಂದು ಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ
    * ಟೊಮೆಟೋ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಿರಿ.

  • ಕೃಷ್ಣ ಜನ್ಮಾಷ್ಠಮಿ ವಿಶೇಷ: ಅವಲಕ್ಕಿ ಪಾಯಸ ಮಾಡೋ ವಿಧಾನ

    ಕೃಷ್ಣ ಜನ್ಮಾಷ್ಠಮಿ ವಿಶೇಷ: ಅವಲಕ್ಕಿ ಪಾಯಸ ಮಾಡೋ ವಿಧಾನ

    ಕೃಷ್ಣಜನ್ಮಾಷ್ಠಮಿಗೆ ವಿಧವಿಧವಾದ ತಿಂಡಿಗಳನ್ನ ಮಾಡೇ ಮಾಡ್ತಾರೆ. ಹಾಗೇ ಕೃಷ್ಣನಿಗೆ ತುಂಬಾ ಇಷ್ಟ ಎಂದೇ ಹೇಳಲಾಗುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    ಅವಲಕ್ಕಿ- 1/2 ಕಪ್
    ಸಬ್ಬಕ್ಕಿ- 1/4 ಕಪ್
    ಬೆಲ್ಲ- 1/2 ಕಪ್
    ಹಾಲು- 1/2 ಕಪ್
    ನೀರು- 1 ಅಥವಾ 1/2 ಕಪ್
    ತುಪ್ಪ- 1 ಚಮಚ
    ಏಲಕ್ಕಿ ಪುಡಿ- ಸ್ವಲ್ಪ
    ಗೋಡಂಬಿ- 5

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿಳಿಯಾಗುವವರೆಗೆ ಬಿಡಿ. ನಂತ್ರ ಬೆಲ್ಲದ ನೀರನ್ನು ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿ.

    * ಮತ್ತೊಂದು ಪಾತ್ರೆಯಲ್ಲಿ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. ಬಳಿಕ ಅದಕ್ಕೆ ನೀರು ಬೆರೆಸಿ ಸ್ಟೌವ್ ಮೇಲಿಟ್ಟು ಮೃದು ಹಾಗೂ ಪಾರದರ್ಶಕವಾಗುವವರೆಗೆ ಬೇಯಲು ಬಿಡಿ.

    * ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ ಹಾಕಿ 10 ನಿಮಿಷ ನೆನೆಯಲು ಬಿಡಿ. ಅವಲಕ್ಕಿ ಮೃದುವಾದ ಬಳಿಕ ತೊಳೆದಿಡಿ.

    * ಸ್ಟವ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ನೆನೆದ ಅವಲಕ್ಕಿ ಹಾಕಿ, 1/2 ಚಮಚ ತುಪ್ಪ ಹಾಕಿ 2 ನಿಮಿಷ ಹುರಿಯಿರಿ. ನಂತ್ರ ಬೆಲ್ಲದ ಪಾಕವನ್ನ ಬೆರೆಸಿ. (ಒಂದು ವೇಳೆ ನೀವು ಬಳಸುವ ಬೆಲ್ಲದ ಪಾಕ ನೀರಿನಷ್ಟು ತೆಳುವಾಗಿದ್ದರೆ ಅದನ್ನು ಇನ್ನೊಂದು ಪ್ಯಾನ್ ಗೆ ಹಾಕಿ ಸ್ವಲ್ಪ ಕುದಿಸಿ ಬಳಿಕ ಬೆರೆಸಿ). ಪಾಕ ದಪ್ಪವಾಗಿದ್ದರೆ ನೇರವಾಗಿ ಬಳಸಿ.

    * ನಂತ್ರ ಬೆಂದ ಸಬ್ಬಕ್ಕಿಯನ್ನು ಬೆಲ್ಲದ ಪಾಕ ಮತ್ತು ಅವಲಕ್ಕಿ ಜೊತೆ ಬೆರೆಸಿ ಕೆಲ ನಿಮಿಷ ಬೇಯಿಸಿ. ಸಬ್ಬಕ್ಕಿ, ಬೆಲ್ಲದ ಪಾಕ ಹಾಗೂ ಅವಲಕ್ಕಿ ಚೆನ್ನಾಗಿ ಬೆಂದು ಗಟ್ಟಿಯಾದ ಬಳಿಕ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ.

    * ಸಣ್ಣ ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಇನ್ನೊಂದು ಪಾತ್ರೆಯಲ್ಲಿ ಹಾಲು ಹಾಕಿ ಅದನ್ನು 10 ನಿಮಿಷ ಕುದಿಸಿ ನಂತ್ರ ತಣ್ಣಗಾಗಲು ಬಿಡಿ.

    * ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನು ಬೇಯಿಸಿದ ಪಾತ್ರೆಗೆ ಹಾಲು, ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಅವಲಕ್ಕಿ ಪಾಯಸ ಸವಿಯಲು ಸಿದ್ಧ.

  • ಸಿಂಪಲ್ ಆಗಿ ಮಶ್ರೂಮ್ ಮಸಾಲಾ ಮಾಡೋ ವಿಧಾನ

    ಸಿಂಪಲ್ ಆಗಿ ಮಶ್ರೂಮ್ ಮಸಾಲಾ ಮಾಡೋ ವಿಧಾನ

    ಅಣಬೆ/ಮಶ್ರೂಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಹಳ್ಳಿ ಕಡೆ ಒಂದು ಗುಡುಗು ಬಂದ್ರೆ ಸಾಕು, ಮನೆ ಮಂದಿ ತೋಟ-ಗುಡ್ಡಗಳಲ್ಲಿ ಅಣಬೆ ಹುಡುಕಲು ಹೊರಡುತ್ತಾರೆ. ಆದ್ರೆ ಸಿಟಿಯಲ್ಲಿ ಯಾವಾಗ ಬೇಕಾದ್ರೂ ಮಶ್ರೂಮ್ ಖರೀದಿಸಬಹುದು. ಮಶ್ರೂಮ್ ಮಸಾಲಾ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    ಅಣಬೆ/ಮಶ್ರೂಮ್ – 250 ಗ್ರಾಂ
    ಆಲೂಗಡ್ಡೆ – 1
    ಈರುಳ್ಳಿ – 1
    ಟೊಮೆಟೋ – 1
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಎಣ್ಣೆ – ಸ್ವಲ್ಪ
    ಉಪ್ಪು – ಸ್ವಲ್ಪ
    ಅರಶಿನ ಪುಡಿ – 1 ಚಮಚ
    ಖಾರದ ಪುಡಿ – 1 ಚಮಚ
    ಗರಂ ಮಸಾಲ – 1/2 ಚಮಚ
    ಧನಿಯಾ ಪುಡಿ – 1 ಚಮಚ
    ಮೊಸರು – 1 ಚಮಚ
    ಕಸೂರಿ ಮೇಥಿ – 1 ಚಮಚ
    ನೀರು – 1 ಕಪ್
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಪಲಾವ್ ಎಲೆ – 3
    ಏಲಕ್ಕಿ – 3
    ದಾಲ್ಚಿನಿ – 3 ತುಂಡು
    ಲವಂಗ – 3

    ಮಾಡುವ ವಿಧಾನ:
    * ಮೊದಲು ಅಣಬೆ ಮತ್ತು ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಕಟ್ ಮಾಡಿಟ್ಟುಕೊಳ್ಳಬೇಕು.
    * ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಾದ ಬಳಿಕ ತುಂಡರಿಸಿದ ಮಶ್ರೂಮ್ ಹಾಕಿ ಅದರ ಮೇಲೆ ಸ್ವಲ್ಪ ಉಪ್ಪು ಹಾಕಿ ಸುಮಾರು 10 ನಿಮಿಷ ಚೆನ್ನಾಗಿ ಹುರಿಯಿರಿ.
    * ಹಾಗೆಯೇ ಇನ್ನೊಂದು ಬಾಣಲೆಯಲ್ಲಿ ಕಟ್ ಮಾಡಿದ ಆಲೂಗಡ್ಡೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ನಂತರ ಹುರಿದ ಮಶ್ರೂಮ್ ಮತ್ತು ಆಲೂಗಡ್ಡೆಯನ್ನು ಬಾಣಲೆಯಿಂದ ತೆಗೆದು ಒಂದು ಪ್ಲೇಟ್‍ನಲ್ಲಿ ಬೇರೆ ಬೇರೆಯಾಗಿ ಹಾಕಿಡಿ.
    * ನಂತ್ರ ಬಾಣಲೆಗೆ 1 ಚಮಚದಷ್ಟು ಎಣ್ಣೆ ಹಾಕಿ ಮತ್ತೆ ಒಲೆಯ ಮೇಲಿಟ್ಟು, ಎಣ್ಣೆ ಬಿಸಿಯಾದಾಗ 2 ಪಲಾವ್ ಎಲೆ, 1 ಸಣ್ಣ ದಾಲ್ಚಿನಿ ತುಂಡು, 3 ಏಲಕ್ಕಿ, 3 ಲವಂಗ ಹಾಗೂ ಸಣ್ಣಗೆ ಕಟ್ ಮಾಡಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಈರುಳ್ಳಿ ಕಂದು ಬಣ್ಣಕ್ಕೆ ಬಂದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ನಂತರ ಕಟ್ ಮಾಡಿದ ಟೊಮೆಟೋ ಹಾಕಿ ಮೃದುವಾಗುವವರೆಗೆ ಫ್ರೈ ಮಾಡಿ ಬಳಿಕ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಧನಿಯಾ ಪುಡಿ, ಖಾರದ ಪುಡಿ, ಅರಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ನಂತರ ಈ ಮಿಶ್ರಣಕ್ಕೆ 1 ಚಮಚ ಮೊಸರು ಹಾಕಿ ಮತ್ತೆ ಮಿಕ್ಸ್ ಮಾಡಿ.
    * ಬಳಿಕ ಹುರಿದಿಟ್ಟ ಆಲೂಗಡ್ಡೆ ಹಾಗೂ ಮಶ್ರೂಮ್ ಹಾಕಿ ಮತ್ತೆ ಫ್ರೈ ಮಾಡಿ.
    * ಇವೆಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ ಒಂದು ಲೋಟ ನೀರು ಬೆರೆಸಿ 10 ನಿಮಿಷ ಕುದಿಯಲು ಬಿಡಿ.
    * ಹೀಗೆ ಕುದಿಯುತ್ತಿರುವ ವೇಳೆ ಕಸೂರಿ ಮೇಥಿ ಹಾಗೂ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿದ ಬಳಿಕ ಒಲೆಯಿಂದ ಕೆಳಗಿಳಿಸಿ ಸರ್ವ್ ಮಾಡಿ.

  • ಮಂಗಳೂರು ಬೋಂಡಾ/ಗೋಳಿಬಜೆ ಮಾಡೋ ವಿಧಾನ

    ಮಂಗಳೂರು ಬೋಂಡಾ/ಗೋಳಿಬಜೆ ಮಾಡೋ ವಿಧಾನ

    ಅಂತೂ ಮಳೆಗಾಲ ಆರಂಭವಾಗಿದೆ. ಸಂಜೆ ಹೊತ್ತಲ್ಲಿ ಏನಾದ್ರೂ ಬಿಸಿಬಿಸಿ ತಿನ್ಬೇಕು ಅನಿಸೋದು ಸಾಮಾನ್ಯ. ಬೋಂಡಾ, ಬಜ್ಜಿ ತಿಂದು ತಿಂದೂ ಬೋರಾಗಿದೆ ಅಂತಾದ್ರೆ ಮಂಗಳೂರು ಸ್ಪೆಷಲ್ ಗೋಳಿಬಜೆ (ಮಂಗಳೂರು ಬೋಂಡಾ) ಮಾಡೋ ಸಿಂಪಲ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೊಸರು- ಅರ್ಧ ಕಪ್
    2. ಹಸಿಮೆಣಸಿನಕಾಯಿ- 1 (ಕಟ್ ಮಾಡಿದ್ದು)
    3. ಶುಂಠಿ- 1 ಇಂಚು (ಕಟ್ ಮಾಡಿಕೊಳ್ಳಿ)
    4. ಕರಿಬೇವಿನ ಎಲೆ- ಸ್ವಲ್ಪ
    5. ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
    6. ಸಣ್ಣಗೆ ಕತ್ತರಿಸಿದ ತೆಂಗಿನಕಾಯಿ ಚೂರು- 1 ಚಮಚ
    7. ಸಣ್ಣಗೆ ಕಟ್ ಮಾಡಿದ ಈರುಳ್ಳಿ- ಅರ್ಧ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)
    8. ಉಪ್ಪು- ರುಚಿಗೆ ತಕ್ಕಷ್ಟು
    9. ಅಡುಗೆ ಸೋಡಾ – ಅರ್ಧ ಚಮಚ
    10. ಮೈದಾಹಿಟ್ಟು- 1 ಕಪ್
    11. ಅಕ್ಕಿ ಹಿಟ್ಟು- 1 ಚಮಚ
    12. ಜೀರಿಗೆ – 1/2 ಚಮಚ

    ಮಾಡುವ ವಿಧಾನ
    * ಒಂದು ಕಪ್‍ನಲ್ಲಿ ಮೊಸರು, ಸಣ್ಣಗೆ ಕಟ್ ಮಾಡಿಕೊಂಡ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ತೆಂಗಿನಕಾಯಿ ಚೂರು, ಈರುಳ್ಳಿ, ಜೀರಿಗೆ, ಉಪ್ಪು, ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿ.
    * ನಂತ್ರ ಅದರ ಮೇಲೆ 1 ಕಪ್ ಮೈದಾ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆಹಿಟ್ಟಿಗಿಂತ ಸ್ವಲ್ಪ ಗಟ್ಟಿಯಿರಬೇಕು. (ಅವಶ್ಯಕತೆ ಇದ್ದಲ್ಲಿ ಸ್ವಲ್ಪ ಮೊಸರು ಸೇರಿಸಿಕೊಳ್ಳಿ).
    * ಹಿಟ್ಟು ಹದವಾದ ಬಳಿಕ 3 ಗಂಟೆ ನೆನೆಯಲು ಬಿಡಿ.
    * 3 ಗಂಟೆಯ ಬಳಿಕ ಮತ್ತೊಮ್ಮೆ ಮಿಕ್ಸ್ ಮಾಡಿ.
    * ಸ್ಟೌವ್ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ಬಳಿಕ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಉಂಡೆಯಂತೆ ಎಣ್ಣೆಗೆ ಬಿಡಿ.
    * ಉಂಡೆಗಳು ಕಂದು ಬಣ್ಣ ಬರುವವರೆಗೆ ಕರಿದು, ಎಣ್ಣೆಯಿಂದ ತೆಗೆದು ಒಂದು ಪ್ಲೇಟ್ ಗೆ ಹಾಕಿ.
    * ತೆಂಗಿನಕಾಯಿ ಚಟ್ನಿ ಜೊತೆ ಬಿಸಿಬಿಸಿ ಗೋಳಿಬಜೆ ಸವಿಯಿರಿ.

  • ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ

    ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ

    ಹಾಲಿನ ಉತ್ಪನ್ನವಾದ ಪನ್ನೀರ್ ಉತ್ತರ ಭಾರತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು. ಪನ್ನೀರ್‍ನಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಪಂಜಾಬಿ ಡಾಬಾಗಳಲ್ಲಿ ಸಿಗುವ ರುಚಿಯಾದ ಮಟರ್ ಪನ್ನೀರ್ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡು, ಮನೆಯಲ್ಲಿ ನೀವೇ ಮಟರ್ ಪನ್ನೀರ್ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    1. ಪನ್ನೀರ್ – 250 ಗ್ರಾಂ
    2. ಹಸಿ ಬಟಾಣಿ- 2 ಕಪ್
    3. ತುಪ್ಪ- 4 ಚಮಚ
    4. ಶುಂಠಿ ಬೆಳ್ಳುಳ್ಳಿ ಪೇಸ್ಟ್- 3 ಚಮಚ
    5. ಈರುಳ್ಳಿ-1 ಕಪ್
    6. ಟಮೋಟೊ- 2 ಕಪ್
    7 ಅರಿಶಿಣ- 1 ಚಮಚ
    8. ಗರಂ ಮಸಾಲಾ- 1/2 ಚಮಚ
    9. ಖಾರದಪುಡಿ- 2 ಚಮಚ
    10. ಕೊತ್ತಂಬರಿ ಸೊಪ್ಪು- ಸ್ವಲ್ಪ
    11. ಉಪ್ಪು- ರುಚಿಗೆ ತಕ್ಕಷ್ಟು
    12. ಹಾಲಿನ ಕೆನೆ- 3 ಚಮಚ

    ಮಾಡುವ ವಿಧಾನ :
    * ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಚೌಕಾಕಾರದಲ್ಲಿ ಕತ್ತರಿಸಿದ ಪನ್ನೀರನ್ನು ಅದರಲ್ಲಿ ಹಾಕಿ ಹೊಂಬಣ್ಣ ಬರುವ ತನಕ ಫ್ರೈ ಮಾಡಿ ತೆಗೆದಿಡಿ.
    * ಅದೇ ಬಾಣಲೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ.
    * ನಂತರ ಅದಕ್ಕೆ ಅರಿಶಿಣ, ಖಾರದಪುಡಿ, ಗರಂಮಸಾಲಾ, ಟಮೋಟೊ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ.
    * ಅನಂತರ ಬಟಾಣಿಯನ್ನು ಹಾಕಿ 3 ನಿಮಿಷದವರೆಗೆ ಬೇಯಿಸಿ, ಕರಿದ ಪನೀರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ.
    * 10 ನಿಮಿಷದ ನಂತರ ಬಾಣಲೆಯನ್ನು ಕೆಳಗಿಳಿಸಿ ಹಾಲಿನ ಕೆನೆಯನ್ನು ಸೇರಿಸಿ ಚಪಾತಿ ಅಥವಾ ರೋಟಿಯೊಂದಿಗೆ ಸವಿಯಲು ಕೊಡಿ

  • ಬಾಯಲ್ಲಿ ನಿರೂರಿಸುವಂತಹ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ

    ಬಾಯಲ್ಲಿ ನಿರೂರಿಸುವಂತಹ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ

    ಮಾವಿನ ಹಣ್ಣು ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಈಗಂತೂ ಮಾವಿನ ಹಣ್ಣಿನ ಸೀಜನ್. ಮಾವಿನ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿದಿರುತ್ತೀರಿ. ಹೊಸದೇನಾದ್ರೂ ಮಾಡ್ಬೇಕು ಅಂತಿದ್ರೆ ಅದಕ್ಕಾಗಿ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮಾವಿನ ಹಣ್ಣು – 1
    2. ಬಾಸ್ಮತಿ ಅಕ್ಕಿ – 2 ಚಮಚ
    3. ಕೆನೆಭರಿತ ಹಾಲು – ಎರಡೂವರೆ ಕಪ್
    4. ಸಕ್ಕರೆ – 3 ಚಮಚ
    5. ಬಾದಾಮಿ – 5
    6. ಕೇಸರಿ – ಸ್ವಲ್ಪ
    7. ಪಿಸ್ತಾ – 1 ಚಮಚ (ಸಣ್ಣಗೆ ತುಂಡರಿಸಿದ್ದು)

    ಮಾಡುವ ವಿಧಾನ:
    * ಎರಡು ಪ್ರತ್ಯೇಕ ಕಪ್‍ಗಳಲ್ಲಿ ಬಾದಾಮಿ ಮತ್ತು ಅಕ್ಕಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೆಲ ನಿಮಿಷಗಳ ಕಾಲ ನೆನೆಸಿಡಿ.
    * ಒಂದು ಕಪ್ ನಲ್ಲಿ 4 ಚಮಚದಷ್ಟು ಬೆಚ್ಚಗಿನ ಹಾಲು ತೆಗೆದುಕೊಂಡಿ ಅದಕ್ಕೆ ಕೇಸರಿ ಎಲೆಗಳನ್ನು ಹಾಕಿಡಿ.
    * ಬಾದಾಮಿ ಮೇಲಿನ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಿ.
    * ಮಿಕ್ಸಿ ಜಾರಿಗೆ ಅಕ್ಕಿ, ಬಾದಾಮಿ ಮತ್ತು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.
    * ಒಂದು ಪಾತ್ರೆಯಲ್ಲಿ ಹಾಲನ್ನು ಕೆನೆ ಬರುವವರೆಗೆ ಕುದಿಸಿ ನಂತರ ಅದಕ್ಕೆ ಗ್ರೈಂಡ್ ಮಾಡಿರೋ ಅಕ್ಕಿ ಮತ್ತು ಬಾದಾಮಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ.
    * ಹಾಲು ಗಟ್ಟಿಯಾಗುವ ಹಂತಕ್ಕೆ ಬಂದಾಗ ಸಕ್ಕರೆ ಬೆರೆಸಿ.
    * ನಂತರ ಕೇಸರಿ ಹಾಕಿರೋ ಹಾಲನ್ನ ಅದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
    * ಕುದಿಯುತ್ತಿರುವ ಪಾಯಸಕ್ಕೆ ಮಾವಿನ ಹಣ್ಣಿನ ಪೇಸ್ಟ್ ಹಾಕಿ, ಮತ್ತೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಕೊನೆಗೆ ಪಾಯಸವನ್ನ ಒಲೆಯಿಂದ ಕೆಳಗಿಳಿಸಿ, ಸರ್ವಿಂಗ್ ಗ್ಲಾಸ್/ಕಪ್‍ಗೆ ಹಾಕಿ ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಬಾದಾಮಿ, ಪಿಸ್ತಾ ಹಾಕಿದ್ರೆ ಮಾವಿನ ಹಣ್ಣಿನ ಪಾಯಸ ಸವಿಯಲು ಸಿದ್ಧ.

  • ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

    ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

    – ಇವರು ಈಗ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್

    ಹೈದರಾಬಾದ್: ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇವರೆಲ್ಲರ ಮಧ್ಯೆ ತನ್ನ ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ 106 ವರ್ಷದ ವದ್ಧೆಯೊಬ್ಬರು ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

    ಆಂಧ್ರಪ್ರದೇಶದ ಮಸ್ತಾನಮ್ಮ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಮಸ್ತಾನಮ್ಮ ಅವರು ಕಂಟ್ರಿ ಫುಡ್ಸ್ ಎಂಬ ಸ್ವಂತ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಮಸ್ತಾನಮ್ಮ ಅವರ ಚಾನಲ್‍ಗೆ ಸದ್ಯಕ್ಕೆ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಸಬ್ಸ್‍ಸ್ಕ್ರೈಬರ್‍ಗಳಿದ್ದಾರೆ.

    ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ಮಸ್ತಾನಮ್ಮ ಅಡುಗೆ ಮಾಡ್ತಾರೆ. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ. ಅಜ್ಜಿಯ ಅಡುಗೆಗಳನ್ನ ತುಂಬಾ ಇಷ್ಟ ಪಡೋ ಮಸ್ತಾನಮ್ಮ ಅವರ ಮರಿಮೊಮ್ಮಗ ಕೆ. ಲಕ್ಷ್ಮಣ್ ಈ ಯೂಟ್ಯೂಬ್ ಚಾನಲ್‍ನ ನಿರ್ವಹಣೆ ಮಾಡ್ತಾರೆ.

    ಒಂದು ರಾತ್ರಿ ತುಂಬಾ ಹಸಿವಾಗಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಅಡುಗೆ ಮಾಡಿದೆವು. ಜನರು ಅಡುಗೆ ಮಾಡೋದನ್ನ ಕಲಿಯಲು ಸಹಾಯವಾಗವಂತೆ ಯೂಟ್ಯೂಬ್ ಚಾನಲ್ ಶುರು ಮಾಡಬೇಕು ಅಂದುಕೊಂಡೆವು. ಆಶ್ಚರ್ಯಕರ ರೀತಿಯಲ್ಲಿ ನಮ್ಮ ಮೊದಲ ವಿಡಿಯೋ ವೈರಲ್ ಆಯ್ತು. ಆಗಲೇ ಈ ಚಾನಲ್ ಶುರು ಮಾಡಿದ್ದು. ತಾಜಾ ಸಾಮಗ್ರಿಗಳನ್ನ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಅಡುಗೆ ಮಾಡಬಹುದು ಅನ್ನೋದನ್ನ ಜನರು ಅರ್ಥ ಮಾಡಿಕೊಂಡು ಕಲಿತುಕೊಳ್ಳಲು ನಮ್ಮ ಅಜ್ಜಿಯ ಸಹಾಯ ಪಡೆದು ಚಾನಲ್ ಆರಂಭಿಸಿದೆವು. ಮೊದಲಿಗೆ ನಾವು ವಿಡಿಯೋ ಮಾಡುವಾಗ ಅಜ್ಜಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದ್ರೆ ಅವರಿಗೆ ಇದರ ಬಗ್ಗೆ ಅರ್ಥವಾದ ನಂತರ ತುಂಬಾ ಖುಷಿಪಟ್ರು ಅಂತಾರೆ ಲಕ್ಷ್ಮಣ್.

                           

    ಗ್ರಾಮದಲ್ಲಿ ಮಸ್ತಾನಮ್ಮ ಅವರ ಅಡುಗೆ ಅಂದ್ರೆ ಎಲ್ಲರಿಗೂ ಪ್ರಿಯ. ವಿಡಿಯೋಗಳಲ್ಲಿ ಮಸ್ತಾನಮ್ಮ ಅವರು ಅಡುಗೆ ಮಾಡಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಬಡಿಸೋದನ್ನ ನೋಡಬಹುದು.

    https://www.youtube.com/watch?v=Y7zFZclLd14

  • ಸಮ್ಮರ್ ಸ್ಪೆಷಲ್: ಮಾವಿನಕಾಯಿ ಜಲ್‍ಜೀರಾ ಮಾಡೋ ವಿಧಾನ

    ಸಮ್ಮರ್ ಸ್ಪೆಷಲ್: ಮಾವಿನಕಾಯಿ ಜಲ್‍ಜೀರಾ ಮಾಡೋ ವಿಧಾನ

    ಬೇಸಿಗೆಯಲ್ಲಿ ಮಜ್ಜಿಗೆ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಲಸ್ಸಿ ಹೀಗೆ ಏನಾದ್ರೂ ತಂಪಾದ ಪಾನೀಯಗಳನ್ನ ಮಾಡಿ ಕುಡಿಯೋದು ಕಾಮನ್. ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಬಳಸಿ ಆರೋಗ್ಯಕರವಾದ ಜಲ್‍ಜೀರಾ ಮಾಡಬಹುದು. ಅದನ್ನು ಮಾಡೋ ವಿಧಾನ ಇಲ್ಲಿದೆ ನೋಡಿ.

    ಬೇಕಾಗುವ ಸಾಮಗ್ರಿಗಳು
    1. ಮಾವಿನ ಕಾಯಿ – 1
    2. ಜೀರಿಗೆ – 2 ಚಮಚ
    3. ಐಸ್‍ಕ್ಯೂಬ್ಸ್- 5-6
    4. ಉಪ್ಪು – ರುಚಿಗೆ ತಕ್ಕಷ್ಟು
    5. ಸಕ್ಕರೆ – 1/2 ಚಮಚ
    6. ನೀರು – 2 ಲೋಟ
    7. ಪುದೀನಾ- ಸ್ವಲ್ಪ
    8. ಬ್ಲ್ಯಾಕ್ ಸಾಲ್ಟ್- ಸ್ವಲ್ಪ
    9. ಕಾಳುಮೆಣಸಿನ ಪುಡಿ – 1/2 ಚಮಚ
    10. ಶುಂಠಿ- 1/4 ಇಂಚು

    ಮಾಡುವ ವಿಧಾನ
    * ಮಾವಿನ ಕಾಯಿಯ ಸಿಪ್ಪೆ ತೆಗೆದು ದೊಡ್ಡ ಗಾತ್ರಕ್ಕೆ ಕಟ್ ಮಾಡಿಕೊಳ್ಳಿ.
    * ಕುಕ್ಕರ್‍ಗೆ ಕಟ್ ಮಾಡಿದ ಮಾವಿನ ಕಾಯಿ, ನೀರು ಹಾಕಿ ಒಂದು ವಿಷಲ್ ಬರುವವರೆಗೆ ಬೇಯಿಸಿಕೊಳ್ಳಿ.
    * ನಂತರ ಒಂದು ಪ್ಯಾನ್‍ನಲ್ಲಿ ಜೀರಿಗೆ ಹಾಕಿ ಕಂದು ಬಣ್ಣಕ್ಕೆ ಬರುವಂತೆ ರೋಸ್ಟ್ ಮಾಡಿಕೊಂಡು ಪುಡಿ ಮಾಡಿಕೊಳ್ಳಿ.
    * ಬೆಂದ ಮಾವಿನಕಾಯಿಯನ್ನು ಮಿಕ್ಸಿ ಜಾರ್‍ಗೆ ಹಾಕಿ, ಇದಕ್ಕೆ ಪುಡಿ ಮಾಡಿದ ಜೀರಿಗೆ, ಸ್ವಲ್ಪ ಸಕ್ಕರೆ, ಕಾಳುಮೆಣಸಿನ ಪುಡಿ, ಉಪ್ಪು,ಬ್ಲ್ಯಾಕ್ ಸಾಲ್ಟ್, ಶುಂಠಿ, ಪುದೀನಾ ಮತ್ತು ಐಸ್‍ಕ್ಯೂಬ್ಸ್ ಹಾಕಿ ರುಬ್ಬಿಕೊಳ್ಳಿ.
    * ಇದನ್ನು ಸೋಸಿಕೊಂಡು ನಂತರ ಒಂದು ಗ್ಲಾಸ್‍ಗೆ ಹಾಕಿ ಸವಿಯಲು ಕೊಡಿ.